

ಯಕ್ಷಗಾನಕ್ಕೆ ನಾಡಿನ ಕಲೆಯಾಗುವ ಅರ್ಹತೆ ನಿಜಕ್ಕೂ ಇದೆಯೇ? ಖಂಡಿತವಾಗಿಯೂ ಇದೆ. ಏಕೆಂದರೆ ಕಲಾ ಸಮೂಹವೇ ಯಕ್ಷಗಾನದಲ್ಲಿದೆ. ಸಂಗೀತ, ನೃತ್ಯ, ವೇಷಭೂಷಣ, ಮಾತು, ವಾದನದಂಥ ಕಲೆಗಳನ್ನೂ ಒಳಗೊಂಡ ಸಮಗ್ರ ಕಲೆಯಾಗಿದೆ. ಸರ್ವಸ್ವವಾಗಿದೆ. ಸಮಾಜದ ಎಲ್ಲರನ್ನೂ ಒಳಗೊಂಡು ಜಾತ್ಯತೀತವಾಗಿದೆ. ಕನ್ನಡ ಭಾಷೆಗೆ ಅದರಲ್ಲೂ ಶಾಸ್ತ್ರೀಯ ಕನ್ನಡಕ್ಕೆ ಅದು ನೀಡಿದ, ನೀಡುತ್ತಿರುವ ಕೊಡುಗೆಯೂ ಗಮನಾರ್ಹ. ಯಕ್ಷಗಾನ ಪಾತ್ರಧಾರಿಯಾಗಲಿ, ಕಾವ್ಯವಾಗಲೀ ಬೇರಾವುದೇ ಭಾಷೆಯ ಪದಗಳನ್ನು ಬಳಸುವುದಿಲ್ಲ. ಸಂಸ್ಕೃತ ಭಾಷೆ ಕನ್ನಡದಲ್ಲಿ ಹಾಸುಹೊಕ್ಕಾಗಿರುವುದರಿಂದ ಅದು ಪರಭಾಷೆ ಎನ್ನಲಾಗದು. ಕುಳಿತಲ್ಲೇ ಅಯೋಧ್ಯೆ, ಮಥುರೆ... ಹೀಗೆ ನಮ್ಮ ರಾಮಾಯಣ, ಮಹಾಭಾರತಗಳ ಸ್ಥಳಗಳಿಗೆ ಮಾತುಗಳ ಮೂಲಕವೇ ಕರೆದೊಯ್ಯಬಲ್ಲ ಹಾಗೂ ಆ ಕಾಲವನ್ನು ಆಶುರೂಪದಲ್ಲೇ ವಿಮಶಿಸಬಲ್ಲ ತಾಳಮದ್ದಲೆ ಪ್ರಕಾರವನ್ನು ಹೋಲುವ ಮತ್ತೊಂದು ಕಲೆ ಜಗತ್ತಿನ ಎಲ್ಲೂ ಇದ್ದಂತಿಲ್ಲ. ಹೀಗಾಗಿ ಕಲೆಯ ವಿಸ್ತ್ತಾರ ಹಾಗೂ ಕನ್ನಡನಾಡಿನ ಪ್ರತಿಷ್ಠೆಯ ದೃಷ್ಟಿಯಿಂದ ಯಕ್ಷಗಾನವನ್ನು ಕನ್ನಡನಾಡಿನ ಕಲೆ ಎಂದು ಸ್ವೀಕರಿಸಬಹುದಾಗಿದೆ. ಇದಕ್ಕೆ ಪೂರಕವಾಗಿ ಇನ್ನಷ್ಟು ಸಂಗತಿಗಳಿವೆ.
ಯಕ್ಷಗಾನ ಸಂಗೀತ: ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತವನ್ನು ಭಾರತೀಯ ಪ್ರಮುಖ ಸಂಗೀತಪ್ರಕಾರಗಳೆಂದು ಕರೆಯುತ್ತೇವೆ. ಕೆಲವು ವಿದ್ವಾಂಸರ ಪ್ರಕಾರ ಯಕ್ಷಗಾನದಲ್ಲಿ ಅವೆರಡೂ ಸಂಗೀತದಲ್ಲಿ ಇಲ್ಲದಿರುವ ರಾಗಗಳೂ ತಾಳಗಳೂ ಇವೆ. ಯಕ್ಷಗಾನ ಸಂಗೀತ ಸ್ವತಂತ್ರ ಹಾಗೂ ಸ್ವಂತಿಕೆ ಇರುವಂಥದ್ದು. ಹಿಂದೂಸ್ತಾನಿ, ಕರ್ನಾಟಕಿ ಸಂಗೀತದ ರೀತಿಯಲ್ಲೇ ಪ್ರತ್ಯೇಕವಾಗಿ ನಿಲ್ಲಬಲ್ಲ ಸಾಮರ್ಥ್ಯ ಈ ಸಂಗೀತಕ್ಕೂ ಇದೆ. ಕನ್ನಡದ ರಂಗಸಂಗೀತವೆಂದರೆ ಅದು ಯಕ್ಷಗಾನ ಸಂಗೀತ ಎನ್ನಬಹುದು. ಯಕ್ಷಗಾನದ ಮದ್ದಳೆ ವಾದಕ ಸಂಗೀತಪ್ರಕಾರದ ತಬಲಾ, ಮದ್ದಳೆಗಳ ಕೈಚಳಕವನ್ನು ಯಕ್ಷಗಾನೀಯವಾಗಿ ತೋರಿಸಬಲ್ಲ. ಈ ನಿಟ್ಟಿನಲ್ಲಿ ಒಂದಷ್ಟು ಚಿಂತನೆಗಳು ಸಮ್ಮೇಳನದಲ್ಲಿ ಆಗಲಿ.
ಸಾಹಿತ್ಯ: ಯಕ್ಷಗಾನ ಸಾಹಿತ್ಯವನ್ನು ಕನ್ನಡ ಸಾರಸ್ವತ ಲೋಕ ಒಳಗೊಳ್ಳುವುದೂ ತೀರ ಅಗತ್ಯವಾಗಿದೆ. ಯಕ್ಷಗಾನ ವಿದ್ವಾಂಸರು ಈಗಾಗಲೇ ಪ್ರತಿಪಾದಿಸಿದಂತೆ ಕನ್ನಡ ಸಾಹಿತ್ಯದಲ್ಲಿ ಛಂದಸ್ಸಿನ ಬಳಕೆಯಲ್ಲಿ ಈವರೆಗೆ ಏನೇನು ಪ್ರಯೋಗಗಳಾಗಿವೆಯೋ ಆ ಎಲ್ಲವೂ ಯಕ್ಷಗಾನದಲ್ಲೂ ಆಗಿವೆ. ಯಕ್ಷಗಾನ ಕಾವ್ಯದಲ್ಲಿ ಎಲ್ಲ ರೀತಿಯ ವೃತ್ತಗಳಿವೆ, ಷಟ್ಪದಿಗಳಿವೆ, ವಚನಗಳಿವೆ. ಛಂದೋಬದ್ಧವಾಗಿ ರಚನೆ ಮಾಡುವ ಸಂದರ್ಭದಲ್ಲಿ ನವೋದಯ ಕಾಲದಲ್ಲಿ ಆಧುನಿಕರು ಮಾಡಿರುವ ಪ್ರಯೋಗಗಳನ್ನು ಯಕ್ಷಗಾನ ಕವಿಗಳೂ ಮಾಡಿದ್ದಾರೆ. ಮಾತ್ರಾಗಣಗಳು- ಅಂಶ ಗಣಗಳ ಮಿಶ್ರಣದಿಂದ ವಿಶಿಷ್ಟವಾದ ಛಂದೋಬಂಧ ಸೃಷ್ಟಿಯಾಗುವ ಪ್ರಯೋಗವನ್ನು ಯಕ್ಷಗಾನ ಕವಿಗಳು ಮಾತ್ರ ಮಾಡಿದ್ದು, ಸಾಹಿತ್ಯದಲ್ಲಿ ಆ ಪ್ರಯೋಗ ಆದಂತಿಲ್ಲ. ಯಕ್ಷಗಾನ ವಿದ್ವಾಂಸರು ಹೇಳುವ ಮಾತೊಂದಿದೆ: ‘ಕನ್ನಡ ಸಾಹಿತ್ಯದ ಯಾವುದೋ ಒಂದು ವಿಭಾಗವಾಗಿ ಯಕ್ಷಗಾನವನ್ನು ಸೇರಿಸಿಕೊಳ್ಳುವುದಲ್ಲ, ನಿಜವಾಗಿ ಆಗಬೇಕಾಗಿರುವುದು ಕನ್ನಡ ಸಾಹಿತ್ಯದೊಂದಿಗೆ ಯಕ್ಷಗಾನಕ್ಕಿರುವ ಸಮಾನತೆಯ ಸ್ವೀಕಾರ. ಸಾಹಿತ್ಯದ ಶ್ರೀಮಂತಿಕೆಗೆ ಅದು ಅಗತ್ಯ’.
ಸುಮಾರು 500 ವರ್ಷಗಳ ಪ್ರಯೋಗಪರಂಪರೆ ಯಕ್ಷಗಾನದಲ್ಲಿದೆ, ಯಕ್ಷಗಾನ ಪ್ರಸಂಗಗಳ ರೀತಿಯಲ್ಲಿ ಸುದೀರ್ಘ ಕಾಲದಿಂದ ಪ್ರದರ್ಶಿತವಾಗುತ್ತಿರುವ ಸಾಹಿತ್ಯ ಕೃತಿ ಜಗತ್ತಿನಲ್ಲಿ ಮತ್ತೊಂದಿಲ್ಲ ಇತ್ಯಾದಿ ಅಂಶಗಳ ಕುರಿತು ಸಾಹಿತ್ಯ ಲೋಕ ಮತ್ತು ಯಕ್ಷಗಾನ ವಿದ್ವಾಂಸರ ನಡುವೆ ಸೌಹಾರ್ದ ಸಂವಾದ ನಡೆಯಬೇಕಿದೆ. ಸಾಹಿತ್ಯದಲ್ಲಾದರೆ ಭಾಷೆಯಲ್ಲಿ ಎಷ್ಟೋ ಸ್ಥಿತ್ಯಂತರ ಆಗಿದೆ. ಹಳಗನ್ನಡ ಕಾವ್ಯಗಳನ್ನು ಅನುವಾದಿಸಿ ಹೇಳುವ ಸ್ಥಿತಿ ಇದೆ. ಆದರೆ ಯಕ್ಷಗಾನ ಪ್ರಸಂಗ ಅದೇ ಕಾಲದಲ್ಲಿ ರಚಿತವಾಗಿದ್ದರೂ ಅದಕ್ಕೆ ಅನುವಾದ ಬೇಕಾಗುವುದಿಲ್ಲ, ನಿತ್ಯವೂ ರಂಗಭೂಮಿಯಲ್ಲಿ ಅದರ ವ್ಯಾಖ್ಯಾನ ಪುನರ್ ವ್ಯಾಖ್ಯಾನ ನಡೆಯುತ್ತಲೇ ಇರುತ್ತದೆ. ಇಂಥ ಇನ್ನಷ್ಟು ವಿಶೇಷತೆಗಳು ಯಕ್ಷಗಾನದಲ್ಲಿವೆ. ಹೀಗಾಗಿ ಯಕ್ಷಗಾನವನ್ನು ಕನ್ನಡ ನಾಡಿನ ಪ್ರಾತಿನಿಧಿಕ ಕಲೆ ಎಂದು ಅಂಗೀಕರಿಸಲು ರಾಜ್ಯ ಸರ್ಕಾರ ಮನಸ್ಸು ಮಾಡಬೇಕಿದೆ.
ಸೋತಿದ್ದೆಲ್ಲಿ?: ಮಾನ್ಯತೆ ಸಿಗುವುದು ಬಿಡುವುದು ಬೇರೆ ಮಾತು. ಅದಕ್ಕೆ ಹಲವು ಕಾರಣಗಳಿರಬಹುದು, ಆಡಳಿತಾತ್ಮಕ ತೊಡಕುಗಳಿರಬಹುದು. ಆದರೆ ಎಲ್ಲರೂ ಒಪ್ಪುವ ರೀತಿಯಲ್ಲಿ ಯಕ್ಷಗಾನವನ್ನು ಬಿಂಬಿಸುವಲ್ಲಿ ಯಕ್ಷಗಾನ ವಲಯ ಸೋತಿದೆ ಎನ್ನುವದನ್ನು ಬದಿಗಿರಿಸಲಾಗದು. ಹಾಗಾದರೆ ಸೋತಿದ್ದೆಲ್ಲಿ? ವಿಶಾಲವಾಗಿ ಚಿಂತಿಸುವಲ್ಲಿ ಸೋತಿದ್ದು ಒಂದು ಕಾರಣ. ಕರಾವಳಿಯ ಕಲೆ, ಮಲೆನಾಡಿನ ಕಲೆ ಎಂಬ ಪ್ರಾದೇಶಿಕ ಅಭಿಮಾನದ ಅತಿರೇಕ ಅಥವಾ ಅಭಿಮಾನದ ವ್ಯಸನವೂ ‘ಕನ್ನಡನಾಡಿನ ಕಲೆ’ ಎಂಬ ಗೌರವ ಸಿಗಲು ಅಡ್ಡಿಯಾಗಿರಬಹುದಾದ ಮತ್ತೊಂದು ಕಾರಣ. ಇನ್ನೊಂದು ಅಂಶವೆಂದರೆ ಯಕ್ಷಗಾನದ ಕ್ಷೇತ್ರವ್ಯಾಪ್ತಿಯನ್ನು ಹೆಚ್ಚಿಸುವ ಪ್ರಯತ್ನಗಳು ಸಾಕಷ್ಟು ಪ್ರಮಾಣದಲ್ಲಿ ನಡೆಯದಿರುವುದು. ಬೇರೆ ಬೇರೆ ಪ್ರದೇಶಗಳಲ್ಲಿ ಯಕ್ಷಗಾನ ಪ್ರದರ್ಶನಗಳೇನೋ ನಡೆಯುತ್ತವೆ. ಆದರೆ ಅಲ್ಲಿ ಪ್ರೇಕ್ಷಕರಾಗಿ ಬರುವವರು ಮತ್ತೆ ಅದೇ ಯಕ್ಷಗಾನ ವಲಯದವರು. ಯಕ್ಷಗಾನೇತರ ವಲಯದವರು ತೀರ ಕಡಿಮೆ.
ಪ್ರಾದೇಶಿಕ-ಭಾಷಾ ವೈವಿಧ್ಯವಿರುವ ಕನ್ನಡನಾಡಿನಲ್ಲಿ ಆಯಾ ಪ್ರದೇಶದ ಜನರನ್ನು ತಲುಪುವಾಗ ಕಲೆಯ ಮೂಲಸತ್ವಕ್ಕೆ ಕುಂದುಬಾರದಂತೆ ಕೆಲವು ಬದಲಾವಣೆ ಅನಿವಾರ್ಯ. ಪ್ರಮುಖವಾಗಿ ಭಾಷೆ. ಯಕ್ಷಗಾನ ಪಾತ್ರಧಾರಿಗಳು ಬಳಸುವುದು ಗ್ರಾಂಥಿಕ ಕನ್ನಡ ಭಾಷೆ ಎನ್ನುವುದು ನಿಜವಾದರೂ ಅದರಲ್ಲಿ ಪ್ರಾದೇಶಿಕತೆ, ಗ್ರಾಮ್ಯಪದಗಳು ತೂರಿಕೊಳ್ಳುತ್ತವೆ. ಹೀಗಾಗಿ ಉತ್ತರ ಕರ್ನಾಟಕದ ಪ್ರೇಕ್ಷಕನಿಗೆ ಕರಾವಳಿ ಭಾಷೆ ಎಲ್ಲವೂ ಅರ್ಥವಾಗುವುದಿಲ್ಲ. ಹಾಗೆಯೇ ದಕ್ಷಿಣ ಕರ್ನಾಟಕದಲ್ಲಿಯೂ ಅದು ಸಮಸ್ಯೆಯಾದೀತು. ಮಾತುಗಳೇ ಅರ್ಥವಾಗದಿದ್ದರೆ ಪ್ರೇಕ್ಷಕರನ್ನು ತಲುಪುವುದು ಹೇಗೆ? ಹೀಗಾಗಿ ಅಂಥ ಪ್ರದರ್ಶನದಲ್ಲಿ ಬಳಸುವ ಭಾಷೆಯಲ್ಲಿ ಪರಿಷ್ಕರಣೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಗಾಗ ಕೆಲವರ ಕಾಳಜಿಯಿಂದ ಪ್ರಯತ್ನಗಳು ನಡೆದಿವೆ. ಅದು ವ್ಯಾಪಕವಾಗಬೇಕಾಗಿದೆ. ಮತ್ತೊಂದೆಡೆ ಪ್ರದರ್ಶನಗಳು ಜಾಳು ಜಾಳಾಗತೊಡಗಿವೆ. ನಟಕೇಂದ್ರಿತವಾಗುತ್ತಿವೆ, ವೇಷಧಾರಿಗಳಾಗಿ ಚಪ್ಪಾಳೆ ಗಿಟ್ಟಿಸುವ ಆತುರದಲ್ಲಿ ಪಾತ್ರದ ಔಚಿತ್ಯ ಮರೆಯಾಗುತ್ತಿದೆೆ. ಹಾಗೆಯೇ ಭಾಗವತ ಕೇಂದ್ರಿತವಾಗುತ್ತಿರುವ ಪರಿಸ್ಥಿತಿಯೂ ಇದೆ. ಎಲ್ಲದರ ಹದವಾದ ಪಾಕದಿಂದ ಮೂಡಿಬರುವ ಪ್ರದರ್ಶನಗಳು ಯಕ್ಷಗಾನದ ಭವಿಷ್ಯಕ್ಕೂ ಒಳ್ಳೆಯದು. ಈ ನಿಟ್ಟಿನಲ್ಲಿ ಶ್ಲಾಘನೀಯ ಪ್ರಯತ್ನ ಮಾಡುತ್ತಿರುವ ಕೆಲವು ಹವ್ಯಾಸಿ ಮೇಳಗಳು ಇತರರಿಗೆ ಮಾದರಿಯಾಗಬೇಕಿದೆ. ಯಕ್ಷಗಾನಕ್ಕೆ ಮಾತ್ರವಲ್ಲ, ಬಹುತೇಕ ಇಂಥ ಕಲೆಗಳಿಗೆ ಇರುವ ಸಾಮಾನ್ಯ ತೊಡಕು ಒಂದಿದೆ. ಅದು ಚಿಂತಕರು, ವಿದ್ವಾಂಸರ ವಿಚಾರ ಸಂಕಿರಣದ ದಿಕ್ಕು ಹಾಗೂ ಕಲಾವಿದರ ದಿಕ್ಕು ಬೇರೆಯಾಗಿರುವುದು. ಆದ್ದರಿಂದ ಯಕ್ಷಗಾನದ ಕಲಾಚಿಂತನೆಗಳು ಕಲಾವಿದರನ್ನೂ ಒಳಗೊಳ್ಳುವ ಕಾಲ ಬರಬೇಕಾಗಿದೆ. ರಾಜಧಾನಿಯಲ್ಲೇ ಇರಬೇಕಾದ ಯಕ್ಷಗಾನ ಅಕಾಡೆಮಿ ಕಚೇರಿಯನ್ನು ಬೇರೆ ಕಡೆಗೆ ಒಯ್ಯಬೇಕು ಎಂಬಂಥ ಪ್ರಯತ್ನಗಳಿಗೆ ನೀಡುವ ಸಮಯವನ್ನು ಯಕ್ಷಗಾನವು ಕನ್ನಡ ನಾಡಿನ ಶಾಸ್ತ್ರೀಯ ಕಲೆ ಎಂಬುದನ್ನು ನಿರೂಪಿಸುವ ಪ್ರಯತ್ನಗಳಿಗಾಗಿ ನೀಡಬೇಕಿದೆ.
ಮತ್ತೊಂದು ಸಂಗತಿ ಕಲಾವಿದ ಮತ್ತು ಪ್ರೇಕ್ಷಕರ ಮನಸ್ಥಿತಿಯದು. ಪ್ರೇಕ್ಷಕರು ಏನನ್ನು ನೀಡಿದರೂ ಸ್ವೀಕರಿಸುತ್ತಾರೆ ಎನ್ನುವ ಭ್ರಮೆಯ ಕಲಾವಿದರಿಂದ ಹಾಗೂ ತಮ್ಮ ನೆಚ್ಚಿನ ಕಲಾವಿದ ಏನು ಮಾಡಿದರೂ ಚೆಂದ ಎನ್ನುವ ಅಭಿಮಾನಿಗಳಿಂದ ಸಮಗ್ರ ಯಕ್ಷಗಾನ ರಂಗ ಸೋಲುತ್ತಿದೆ. ಸಂಭಾಷಣೆಗಳು ದ್ವಂದ್ವಾರ್ಥಗಳಿಂದ ಅಂದ ಕಳೆದುಕೊಳ್ಳುತ್ತಿವೆ. ಆದ್ದರಿಂದ ಕಲಾವಿದರು, ಯಜಮಾನರು ಮತ್ತು ಪ್ರೇಕ್ಷಕರು, ಕಲಾ ಚಿಂತಕರೆಲ್ಲ ಸೇರಿ ಕಲೆಯ ಒಟ್ಟಂದ ಹಾಗೂ ಮೂಲಸತ್ವದ ಕುರಿತು ಒಮ್ಮತದಿಂದ ಚಿಂತಿಸಲು ಇಂಥ ಎಲ್ಲದರ ಆಳ ಅಗಲ ಬಲ್ಲ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅಧ್ಯಕ್ಷತೆಯ ಈ ಸಮ್ಮೇಳನ ನಾಂದಿಯಾಗಲಿ. ಸಮ್ಮೇಳನದ ನಾಳೆಗಳಲ್ಲಿ ಯಕ್ಷಗಾನವೇ ಗೆಲ್ಲಲಿ.
ಉಡುಪಿಯಲ್ಲಿ ಇಂದು-ನಾಳೆ ಸಮಗ್ರ ಯಕ್ಷಗಾನ ಸಮ್ಮೇಳನ: ಉಡುಪಿಯಲ್ಲಿ ಫೆ.11 ಮತ್ತು 12 ರಂದು ಸಮಗ್ರ ಯಕ್ಷಗಾನ ರಾಜ್ಯ ಸಮ್ಮೇಳನ ನಡೆಯಲಿದೆ. ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯಕ್ರಮಕ್ಕೆ 2 ಕೋಟಿ ರೂ. ಬಿಡುಗಡೆ ಮಾಡಿದ್ದು, ಎಂಜಿಎಂ ಕಾಲೇಜಿನ ಮೈದಾನದಲ್ಲಿ ಶನಿವಾರ ಬೆಳಗ್ಗೆ ಉದ್ಘಾಟನೆ ನಡೆಯಲಿದೆ. ಎರಡು ದಿನಗಳ ಕಾಲ ವಿಚಾರ ಸಂಕಿರಣ, ಸಂವಾದ, ಯಕ್ಷಗಾನ ಪ್ರದರ್ಶನ ಇತ್ಯಾದಿ ನಡೆಯಲಿವೆ. ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ.
(ಲೇಖಕರು ವಿಜಯವಾಣಿ ಸುದ್ದಿ ಸಂಪಾದಕರು)