ದೇಶವಾಸಿಗಳ ಸ್ಫೂರ್ತಿ, ಭರವಸೆ ಹಾಗೂ ನಂಬಿಕೆಗಳ ಸಾಕಾರ

Samvidhana
Published on
ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್​ರಿಂದ ರಚಿಸಲ್ಪಟ್ಟ ಸಂವಿಧಾನವು ಸಂಪೂರ್ಣ ಯಶಸ್ವಿಯಾಗಿದೆ ಹಾಗೂ ದೇಶವಾಸಿಗಳೆಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೆ ಬಂದ ನಂತರ 2015ರಿಂದ ನವೆಂಬರ್ 26ನ್ನು ಸಂವಿಧಾನ ದಿವಸವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸಂವಿಧಾನ ದಿನವನ್ನು ವಿಶೇಷವಾಗಿ ಆಚರಿಸಲು ತೀರ್ವನಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಈ ದಿನದ ಮಹತ್ವವನ್ನು ತಿಳಿಸುತ್ತ ಇದರ ಆಚರಣೆಯಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಲೋಕಸಭಾ ಸ್ಪೀಕರ್ ಭಾಗವಹಿಸುತ್ತಿದ್ದು, ರಾಷ್ಟ್ರಪತಿಗಳು ಸಂವಿಧಾನದ ಪೀಠಿಕೆಯನ್ನು ಓದುವುದಾಗಿ ತಿಳಿಸಿದ್ದಾರೆ. ಆ ಮೂಲಕ ಭಾರತ ಸಂವಿಧಾನದ ಪೀಠಿಕೆಯನ್ನು ದೇಶವಾಸಿಗಳೆಲ್ಲರೂ ಓದುವ ಹಾಗೂ ಕ್ವಿಜ್​ನಲ್ಲಿ ಭಾಗವಹಿಸುವ ಮೂಲಕ ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.

ಸಂವಿಧಾನ ಕರಡು ಸಮಿತಿಯ ದಣಿವರಿಯದ ಪ್ರಯತ್ನದ ಫಲವಾಗಿ ರೂಪಿತವಾದ ಸಂವಿಧಾನ ವನ್ನು ಡಾ.ಬಾಬು ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯ ಸಂವಿಧಾನ ರಚನಾ ಸಭೆ 1949 ನವೆಂಬರ್ 26 ರಂದು ಅಂಗೀಕರಿಸಿತು. ಭಾರತದ ಸಂವಿಧಾನವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಶ್ರೇಷ್ಠ ಗ್ರಂಥವೆಂದು ಪರಿಗಣಿಸಲಾಗುತ್ತದೆ. ವಿವಿಧ ಭಾಷೆ, ಆಚರಣೆ, ಸಂಸ್ಕೃತಿ ಮತ್ತು ಭೌಗೊಳಿಕ ವೈವಿಧ್ಯತೆಗಳನ್ನು ಹೊಂದಿರುವ, ಪ್ರಸ್ತುತ 130 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸಂವಿಧಾನ ಆಚರಣೆಗೆ ಬಂದು ಎಪ್ಪತ್ತು ವರ್ಷ ಪೂರೈಸಿದ್ದರೂ ಯಾವುದೇ ಅರಾಜಕತೆ ಹಾಗೂ ನೆರೆರಾಷ್ಟ್ರಗಳಲ್ಲಿ ಕಂಡು ಬರುವ ಸೈನಿಕ ದಂಗೆಗಳಂಥ ಘಟನೆಗಳು ಸಂಭವಿಸಿಲ್ಲವೆಂದರೆ ಸಂವಿಧಾನದ ಗಟ್ಟಿತನವನ್ನು ಅರ್ಥೈಸಿಕೊಳ್ಳಬಹುದಾಗಿದೆ.

ಭಾರತ ಬ್ರಿಟಿಷರ ಆಳ್ವಿಕೆಗೊಳಪಟ್ಟು ಹಲವು ದಶಕಗಳೇ ಪೂರ್ಣಗೊಂಡಿದ್ದವು. ಈ ದೇಶದ ಸಂಪತ್ತನ್ನು ಲೂಟಿ ಮಾಡುವುದರೊಂದಿಗೆ ಬ್ರಿಟಿಷ್ ಸರ್ಕಾರವು ಮೂಲ ದೇಶವಾಸಿಗಳನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿತ್ತು. ಇದರ ವಿರುದ್ಧ ಸ್ವಾತಂತ್ರ್ಯದ ದೊಡ್ಡ ಚಳವಳಿ ಪ್ರಾರಂಭವಾಯಿತು. ಒಂದೆಡೆ ಶಾಂತಿಯುತ ಹೋರಾಟ ನಡೆದರೆ ಈ ನೆಲದ ಸ್ವಾತಂತ್ರ್ಯಕ್ಕಾಗಿ ನೆತ್ತರ ಕಾಲುವೆಯನ್ನೇ ಹರಿಸಿದ ಕ್ರಾಂತಿಕಾರಿಗಳ ಹೋರಾಟಗಳು ನಡೆದವು. ಅನ್ಯಮಾರ್ಗವಿಲ್ಲದ ಬ್ರಿಟಿಷರು ಭಾರತದಿಂದ ಕಾಲ್ಕೀಳಬೇಕಾಯಿತು. ಆಗ ಸ್ವಾತಂತ್ರೋತ್ತರದ ಭಾರತ ಹೇಗಿರಬೇಕು, ಸರ್ಕಾರದ ಆಡಳಿತ ವೈಖರಿ, ನ್ಯಾಯಾಂಗ ವ್ಯವಸ್ಥೆ ಹಾಗೂ ಜನಸಾಮಾನ್ಯರ ಹಕ್ಕುಗಳು ಹೇಗೆ ರಕ್ಷಿಸಲ್ಪಡಬೇಕು ಎಂಬ ನಿಯಮಗಳನ್ನು ರೂಪಿಸಲಾಯಿತು ಹಾಗೂ ಭಾರತವು ತನ್ನ ಗಡಿ ಹಾಗೂ ಗಡಿಯೊಳಗಿನ ಎಲ್ಲ ಆಗುಹೋಗುಗಳಿಗೆ ಯಾರಿಗೂ ಮಣಿಯದೇ ಸಾರ್ವಭೌಮತ್ವದಿಂದಿರಬೇಕು ಎಂಬ ಮಾರ್ಗದರ್ಶನದ ರೂಪುರೇಷೆ ಸಿದ್ಧವಾಯಿತು. ಇದನ್ನೇ ಭಾರತದ ಸಂವಿಧಾನ ಎನ್ನಲಾಗುತ್ತದೆ. ಈ ಸಂವಿಧಾನವನ್ನು ರಚಿಸುವ ಜವಾಬ್ದಾರಿ ಹೊತ್ತವರೇ ಸಂವಿಧಾನ ರಚನಾ ಸಭೆಯ ಸದಸ್ಯರು.

ಹೀಗಿತ್ತು ಸಂವಿಧಾನ ರಚನಾ ಸಭೆಯ ಆಯ್ಕೆ ಪ್ರಕ್ರಿಯೆ. ಆ ಸಂದರ್ಭದಲ್ಲಿ 93 ರಾಜಸಂಸ್ಥಾನಗಳು ಹಾಗೂ ಗವರ್ನರ್ ಆಡಳಿತದ 11 ಪ್ರದೇಶಗಳಿದ್ದವು. ಈ ಎಲ್ಲ ಪ್ರದೇಶಗಳಿಂದ ಸರಾಸರಿ 10 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಒಬ್ಬರಂತೆ ಒಟ್ಟು 389 ಸದಸ್ಯರನ್ನು ಆಯ್ಕೆಮಾಡಿ, ಅದನ್ನು ‘ಸಂವಿಧಾನ ರಚನಾ ಸಭೆ’ ಎನ್ನಲಾಯಿತು. 1946 ಡಿಸೆಂಬರ್ 9ರಂದು ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್​ನಲ್ಲಿ ಸಂವಿಧಾನ ರಚನಾ ಸಭೆಯ ಮೊದಲ ಸಭೆ ಜರುಗಿತು. ಮುಸ್ಲಿಂ ಲೀಗ್ ಹಾಗೂ ಕೆಲ ರಾಜಸಂಸ್ಥಾನದ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳದಿರುವುದರಿಂದ ಅಂದು ಜಮಾವಣೆಗೊಂಡ ಸದಸ್ಯರ ಸಂಖ್ಯೆ 211 ಆಗಿತ್ತು. ಇದರ ಹಂಗಾಮಿ ಅಧ್ಯಕ್ಷರಾಗಿ ಸಚ್ಚಿದಾನಂದ ಸಿನ್ಹಾ ಆಯ್ಕೆಯಾದರೆ, ಪೂರ್ಣ ಅಧ್ಯಕ್ಷರಾಗಿ ಡಾ.ಬಾಬು ರಾಜೇಂದ್ರ ಪ್ರಸಾದ್ ಕಾರ್ಯನಿರ್ವಹಿಸಿದರು.

ರಚನೆಯಾಗಲಿರುವ ಭಾರತ ಸಂವಿಧಾನದ ಆಶೋತ್ತರಗಳು ಹೇಗಿರಬೇಕು, ಸರ್ಕಾರದ ಮಾದರಿ ಯುರೋಪ್ ಅಥವಾ ಅಮೆರಿಕ ದೇಶದಂತಿರಬೇಕೆ, ನ್ಯಾಯಾಂಗ ವ್ಯವಸ್ಥೆಯ ಹಂತಗಳು ಯಾವವು? ಚುನಾವಣಾ ಪದ್ಧತಿ, ಆಡಳಿತ ವ್ಯವಸ್ಥೆ, ಜನಸಾಮಾನ್ಯರ ಹಕ್ಕುಗಳ ರಕ್ಷಣೆ, ವಿದೇಶಾಂಗ ನೀತಿ, ತುರ್ತು ಪರಿಸ್ಥಿತಿಗಳ ನಿರ್ವಹಣೆ ಹೇಗೆ? ಮುಂತಾದವುಗಳ ಬಗ್ಗೆ ವಿಸõತವಾದ ಚರ್ಚೆ ಸಂವಿಧಾನ ರಚನಾ ಸಭೆಯಲ್ಲಿ ನಡೆಯುತ್ತಿತ್ತು. ಅಂಬೇಡ್ಕರ್ ಅವುಗಳನ್ನೆಲ್ಲ ಕ್ರೋಡೀಕರಿಸಿ ಭವಿಷ್ಯಕ್ಕೆ ದಿಕ್ಸೂಚಿಯಾಗಬಲ್ಲ ಸಂವಿಧಾನದ ಕರಡನ್ನು ರಚಿಸುವ ಜವಾಬ್ದಾರಿ ಹೊತ್ತರು ಮತ್ತು ಅದನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಸಂವಿಧಾನದ ಮೂಲ ಸ್ವರೂಪ ಮೂರು ಭಾಗಗಳನ್ನೊಳಗೊಂಡಿದೆ. 1. ಪೀಠಿಕೆ (Preamble) 2. ಭಾಗಗಳು(Parts) 3. ಪರಿಚ್ಛೇದಗಳು (Schedules) ಪೀಠಿಕೆಯು ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಆತ್ಮಗೌರವದೊಂದಿಗೆ ಈ ದೇಶದಲ್ಲಿ ಜನಿಸಿದ ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದುವ ಹಾಗೂ ದೇಶದ ಸಾರ್ವಭೌಮತ್ವ ಎತ್ತಿ ಹಿಡಿಯುವ ಬದ್ಧತೆಯನ್ನು ನಮಗೇ ನಾವೇ ನೀಡಿಕೊಳ್ಳುತ್ತಿದ್ದೇವೆ ಎಂಬ ಸದಾಶಯ ವ್ಯಕ್ತಪಡಿಸುತ್ತದೆ. ಸಂವಿಧಾನದ ಎರಡನೇ ಭಾಗದಲ್ಲಿ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ಒಪ್ಪಿಕೊಂಡು ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ, ನ್ಯಾಯಾಧೀಶರು ಮುಂತಾದ ಸಂವಿಧಾನಾತ್ಮಕ ಹುದ್ದೆಗಳ ಆಯ್ಕೆಯ ವಿಧಾನವನ್ನು ತಿಳಿಸುವುದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ತಿಳಿಸುತ್ತದೆ. ಇದೇ ಭಾಗದಲ್ಲಿ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ವಾಗ್ದಾನ ನೀಡಲಾಗಿದೆ. ಇವುಗಳ ಉಲ್ಲಂಘನೆಯಾದಲ್ಲಿ ಸಾಮಾನ್ಯ ವ್ಯಕ್ತಿಯೂ ಸುಪ್ರೀಂ ಕೋರ್ಟಿನಲ್ಲಿ ನ್ಯಾಯ ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಾಂಧವ್ಯ ಹಾಗೂ ಮಿತಿಗಳನ್ನು ಅರ್ಥೈಸಲಾಗಿದೆ. ಮೂರನೇ ಭಾಗವಾದ ಪರಿಚ್ಛೇದಗಳಲ್ಲಿ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ವಿವರಣೆ ನಿಡಲಾಗಿದೆ.

ಅನುಚ್ಛೇದ 368 ಸಂವಿಧಾನ ತಿದ್ದುಪಡಿ ಕುರಿತು ವಿವರಿಸುತ್ತದೆ. ಸಂವಿಧಾನದ ಮೂಲ ಆಶೋತ್ತರ ಹಾಗೂ ಸ್ವರೂಪವನ್ನು ತಿದ್ದುಪಡಿ ಮಾಡಲು ಅವಕಾಶವಿಲ್ಲ. ಆದರೆ ಮೂಲ ಆಶೋತ್ತರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕಾಗಿ ಯಾವುದೇ ಹೊಸ ವಿಷಯಗಳ ಸೇರ್ಪಡೆ ಅಥವಾ ಕುಂದುಕೊರತೆ ನಿವಾರಣೆಗಾಗಿ ಜಾರಿಗೊಳಿಸಲಾಗುವ ಕ್ರಮವನ್ನು ತಿದ್ದುಪಡಿ ಎನ್ನಲಾಗುತ್ತದೆ. ಇಲ್ಲಿಯವರೆಗೆ ಸುಮಾರು 105 ತಿದ್ದುಪಡಿಗಳನ್ನು ಮಾಡಲಾಗಿದೆ.

ಇಂತಹ ಅದ್ಭುತ ಸಂವಿಧಾನ ರಚಿಸುವುದಕ್ಕಾಗಿ ಸಂವಿಧಾನ ರಚನಾ ಸಭೆ ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನಗಳ ಕಾಲ ಪರಿಶ್ರಮ ಮಾಡಿದೆ. ರಾಷ್ಟ್ರೀಯತೆಯ ಬದ್ಧತೆಗಾಗಿ ನವೆಂಬರ್ 26ನ್ನು ಸಂವಿಧಾನ ರಚನಾ ದಿನವನ್ನಾಗಿ ಗೌರವಿಸುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ. 1949 ನವೆಂಬರ್ 26ರಂದು ಅಂಗೀಕರಿಸಲಾದ ಸಂವಿಧಾನ 1950 ಜನವರಿ 26ರಿಂದ ಜಾರಿಗೆ ಬಂತು.

(ಲೇಖಕರು ಕುಡಚಿ ಮತಕ್ಷೇತ್ರದ ಶಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net