

ಭಾರತೀಯ ಸನಾತನ ಸಂಸ್ಕೃತಿಯ ಆಧಾರಸ್ತಂಭಗಳು ವೇದಗಳು, ಉಪವೇದಗಳು, ವೇದಾಂಗಗಳು, ದರ್ಶನಗಳು, ಸ್ಮೃತಿಗಳು, ಪುರಾಣೇತಿಹಾಸಗಳು. ಅವುಗಳಲ್ಲೆಲ್ಲ ಮುಖ್ಯವೆನಿಸಿರುವುದು ಸ್ಮೃತಿಗಳು. ನಮ್ಮ ಜೀವನದಲ್ಲಿನ ರೀತಿ, ನೀತಿ ಆಗುಹೋಗುಗಳಿಗೆ ಸ್ಮೃತಿಗಳೇ ಮಾರ್ಗದರ್ಶಕ ಸೂತ್ರಗಳು. ವೇದೋಕ್ತ ಜೀವನದ ಪದ್ಧತಿಯನ್ನು ಪುಷ್ಟೀಕರಿಸಿ ಸರಳವಾದ ಸಂಸ್ಕೃತದ ಶ್ಲೋಕಗಳ ರೂಪದಲ್ಲಿ ಜೀವನದ ಮಾರ್ಗದರ್ಶಕ ಸೂತ್ರಗಳನ್ನು ಬೋಧಿಸಿರುವುದು ಸ್ಮೃತಿಗಳ ವೈಶಿಷ್ಟ್ಯ.
ಸ್ಮೃತಿ ಎಂದರೆ ಈ ಹಿಂದೆಯೇ ತಿಳಿದಿರುವ ವಿಚಾರಗಳನ್ನು ಮತ್ತೆ ಸ್ಮರಣೆ ಮಾಡಿಕೊಳ್ಳುವುದು ಎಂದರ್ಥ. ವೇದಗಳನ್ನು ಆಳವಾಗಿ ಅಭ್ಯಾಸಮಾಡಿ ಸರಿಯಾದ ರೀತಿಯಲ್ಲಿ ವೇದಗಳ ಅರ್ಥಾನುಸಂಧಾನ ಮಾಡಿ ಅವುಗಳಲ್ಲಿ ಪ್ರತಿಪಾದಿಸಿರುವ ವಿಧಿನಿಷೇಧಗಳನ್ನು ಯಥಾರ್ಥ ರೀತಿಯಲ್ಲಿ ಸರಳ ಶ್ಲೋಕಗಳ ಮೂಲಕ ಪ್ರತಿಪಾದಿಸಿರುವುದೇ ಸ್ಮೃತಿಗಳ ವೈಶಿಷ್ಟ್ಯ. ದೇಶದ ಆಂತರಿಕ ಹಾಗೂ ಬಾಹ್ಯ ವ್ಯವಹಾರಗಳಿಗೆ ಸಂಬಂಧಿಸಿದ ಕರ್ತವ್ಯ ಕರ್ಮಗಳ ವಿವರಣೆ ಸ್ಮೃತಿಯಲ್ಲಿದೆ.
ಅಪೌರುಷೇಯವಾದ ವೇದಗಳು ಸ್ವತಃ ಪ್ರಮಾಣಗ್ರಂಥಗಳು. ಅವುಗಳಿಗೆ ಬಾಹ್ಯ ಶಾಸ್ತ್ರಗ್ರಂಥಗಳ ಪ್ರಮಾಣಗಳು ಬೇಕಾಗಿಲ್ಲ. ಆದರೆ ಸ್ಮೃತಿಗ್ರಂಥಗಳು ಹಾಗಲ್ಲ, ಅವು ಪುರುಷಕೃತಗ್ರಂಥಗಳು. ಆದರೂ ಅವು ಕೂಡ ಪ್ರಮಾಣಗ್ರಂಥಗಳೇ, ಯಾಕೆಂದರೆ ಅವುಗಳನ್ನು ರಚಿಸಿದವರು ಸ್ವತಃ ವೇದಮಂತ್ರಗಳ ಅಗಾಧಜ್ಞಾನವನ್ನು ಹೊಂದಿರುವ ಋಷಿಗಳೇ. ಸ್ಮೃತಿಗಳು ಶಾಸ್ತ್ರಗ್ರಂಥಗಳು ಮಾತ್ರವಲ್ಲ, ಅವುಗಳಲ್ಲಿ ಲೌಕಿಕ ವ್ಯವಹಾರ, ದಂಡನೀತಿ, ನಿಯಮಗಳು, ಉತ್ತರಾಧಿಕಾರನಿಯಮಗಳು, ವಿವಾದ ಹಾಗೂ ಕುಟುಂಬ ನಿಯಮಗಳು, ಹೀಗೆ ಸಾವಿರಾರು ವಿಚಾರಗಳು ಸ್ಮೃತಿಯಲ್ಲಿ ಉಲ್ಲೇಖಿತವಾಗಿವೆ.
ಭಾರತದ ಈ ಪುಣ್ಯಭೂಮಿಯಲ್ಲಿ ಅನೇಕ ಸ್ಮೃತಿಕಾರರು ಆಗಿ ಹೋಗಿದ್ದಾರೆ. ಮನು, ಅತ್ರಿ, ಹಾರೀತ, ಯಾಜ್ಞವಲ್ಕ್ಯ ಉಶನಾ, ಅಂಗಿರಾ, ಯಮ, ಆಪಸ್ತಂಭ, ಸಂವರ್ತ, ಕಾತ್ಯಾಯನ, ಬೃಹಸ್ಪತಿ, ಪರಾಶರ, ವ್ಯಾಸ, ಗೌತಮ, ಶತಾತಪ ಮುಂತಾದ ಸ್ಮೃತಿಕಾರರು ಪ್ರಸಿದ್ಧರು. ಇವರಲ್ಲಿ ಯಾಜ್ಞವಲ್ಕ್ಯು ಒಬ್ಬ ಪ್ರಸಿದ್ಧ ಸ್ಮೃತಿಕಾರಮುನಿ. ಮಿಥಿಲೆಯ ದೇವರಾತ ಹಾಗೂ ಮಾಹೇಶ್ವರೀದೇವಿಯರ ಪುತ್ರರಾದ ಯಾಜ್ಞವಲ್ಕರು ವೈಶಂಪಾಯನ ಶಿಷ್ಯರಾಗಿ ಸಂಪೂರ್ಣ ಯಜುರ್ವೆದವನ್ನು ಅಧ್ಯಯನ ಮಾಡಿದ್ದರು ಎಂಬುದು ಕಥೆ. ಒಮ್ಮೆ ವೈಶಂಪಾಯನರು ಕೋಪಪ್ರಸಂಗವಶಾತ್ ತಾನು ಕೊಟ್ಟ ವೇದಜ್ಞಾನವನ್ನು ತನಗೆ ಪ್ರತ್ಯರ್ಪಿಸಲು ಯಾಜ್ಞವಲ್ಕ್ಯರಿಗೆ ಹೇಳಿದಾಗ ಯಜುರ್ವೆದದ ಮಂತ್ರಗಳನ್ನು ವಮನಮಾಡಿದರು. ಆಶ್ರಮದಲ್ಲಿದ್ದ ಯಜುರ್ವೆದದ ಶಾಖಾಧಿದೇವತೆಗಳು, ಇತರ ಋಷಿಗಳು ತಿತ್ತಿರಿ ಪಕ್ಷಿಗಳ ರೂಪದಲ್ಲಿ ಬಂದು ಈ ವಮನ ಮಾಡಿದ್ದನ್ನು ತಿಂದರು. ಅದೇ ಮುಂದೆ ತೈತ್ತಿರೀಯ ಉಪನಿಷತ್ತಾಗಿ ಪ್ರಸಿದ್ಧವಾಯಿತು. ಮುಂದೆ ಇವರಿಗೆ ಸೂರ್ಯನಿಂದ ವಿದ್ಯಾಭ್ಯಾಸ ಪ್ರಾಪ್ತವಾಯಿತು. ಇವರಿಗೆ ಕಾತ್ಯಾಯನೀ ಮತ್ತು ಮೈತ್ರೇಯೀ ಇಬ್ಬರು ಪತ್ನಿಯರು. ವೇದವ್ಯಾಸರು ವೇದಗಳನ್ನು ನಾಲ್ಕು ಭಾಗಗಳನ್ನಾಗಿ ಮಾಡಿ ಯಜುರ್ವೆದವನ್ನು ಶಿಷ್ಯರಾದ ಯಾಜ್ಞವಲ್ಕ್ಯಗೆ ಉಪದೇಶಿಸಿದರು. ಮಹಾವಿದ್ವಾಂಸರಾಗಿದ್ದ ಯಾಜ್ಞವಲ್ಕ್ಯರು ವಾದದಲ್ಲಿ ನಿಷ್ಣಾತರಾಗಿದ್ದರು. ಇವರು ತಪೋಬಲದ ಮೂಲಕ ಶುಕ್ಲಯಜುರ್ವೆದವನ್ನು ಸಾಕ್ಷಾತ್ಕರಿಸಿಕೊಂಡಿದ್ದರು ಎಂಬುದಾಗಿ ಯಾಜ್ಞವಲ್ಕ್ಯ ಬಗ್ಗೆ ಹಲವಾರು ಉದಂತಗಳು ಕಂಡುಬರುತ್ತವೆ.
ಯಾಜ್ಞವಲ್ಕ್ಯರು ರಚಿಸಿದ ಸ್ಮೃತಿಗ್ರಂಥದಲ್ಲಿ ಮೂರು ಅಧ್ಯಾಯಗಳಿವೆ. ಮೊದಲನೆಯದು ಆಚಾರಾಧ್ಯಾಯ. ಎರಡನೆಯದು ವ್ಯವಹಾರಾಧ್ಯಾಯ ಮತ್ತು ಮೂರನೆಯದು ಪ್ರಾಯಶ್ಚಿತ್ತಾಧ್ಯಾಯ. ಮೂರು ಅಧ್ಯಾಯಗಳಲ್ಲಿ ಸಾವಿರಕ್ಕೂ ಹೆಚ್ಚು ಶ್ಲೋಕಗಳು ಕಂಡುಬರುತ್ತವೆ. ಇವರ ಸ್ಮೃತಿಗ್ರಂಥಕ್ಕೆ ವಿಶ್ವರೂಪಾಚಾರ್ಯ, ಅಪರಾದಿತ್ಯ, ವಿಜ್ಞಾನೇಶ್ವರ, ಭಟ್ಟಶೂಲಪಾಣಿ, ಮಿತ್ರಮಿಶ್ರ, ನಂದಪಂಡಿತ ಹೀಗೆ ಹಲವಾರು ವಿದ್ವಾಂಸರು ವ್ಯಾಖ್ಯಾನಗಳನ್ನು ರಚಿಸಿದ್ದಾರೆ.
(ಲೇಖಕರು ಸಂಸ್ಕೃತ ಉಪನ್ಯಾಸಕರು)