

| ಭಾರತಿ ಎ. ಕೊಪ್ಪ
ಓಲೆಯ ಹಂಚಲು ಹೊರಡುವೆ ನಾನು / ತೋರಲು ಆಗಸದಲಿ ಬಿಳಿ ಬಾನು
ಮನೆಯಲಿ ನೀವು ಬಿಸಿಲಲಿ ನಾನು / ಕಾಗದ ಬಂತು ಕಾಗದವು
ಈ ಶಿಶುಗೀತೆ ಪರಿಚಿತ. ಆದರೆ ಈಗ ಕಾಲ ಬದಲಾಗಿದೆ. ಈಗ ಸಂದೇಶ ರವಾನೆಗೆ ಪತ್ರಗಳ ಜಾಗವನ್ನು ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಇತ್ಯಾದಿ ಗಳು ಆವರಿಸಿವೆ. ಆದರೂ ಅಂಚೆ ಕಚೇರಿಗಳ ಪ್ರಸ್ತುತತೆ ಇದ್ದೇ ಇದೆ.
ಏನಿದು ವಿಶ್ವ ಅಂಚೆ ದಿನ?: ಅಂಚೆ ವ್ಯವಸ್ಥೆ ಎಂಬುದು ಇಡೀ ಜಗತ್ತನ್ನು ಬೆಸೆಯುವ ಕೊಂಡಿಯಾಗಿದೆ. ಪ್ರತಿವರ್ಷ ಅಕ್ಟೋಬರ್ 9 ನ್ನು ವಿಶ್ವ ಅಂಚೆ ದಿನವನ್ನಾಗಿ ಆಚರಿಸಲಾಗುತ್ತದೆ.1874ರಲ್ಲಿ ಸ್ವಿಜರ್ಲೆಂಡ್ನ ಬರ್ನ್ನಲ್ಲಿ ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು) ಸ್ಥಾಪನೆಯ ನೆನಪಿಗಾಗಿ, 1969ರ ಅ.9 ರಂದು ವಿಶ್ವ ಅಂಚೆ ಒಕ್ಕೂಟವು ಜಪಾನ್ನ ಟೋಕಿಯೋದಲ್ಲಿ ಈ ದಿನಾಚರಣೆಯನ್ನು ಘೊಷಿಸಿತು. ಅಂದಾಜು 150 ರಾಷ್ಟ್ರಗಳಲ್ಲಿ ಈ ಆಚರಣೆಯಿದೆ.
ಪತ್ರ ಬರೆಯುವುದನ್ನು ರೂಢಿಸಿಕೊಳ್ಳಿ: ಪತ್ರ ಬರೆಯುವುದು ಒಂದು ಉತ್ತಮ ಅಭ್ಯಾಸ. ಆತ್ಮೀಯರಿಗೆ ಪತ್ರ ಮುಖೇನ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಾಗ ಸಿಗುವ ಸಂತೋಷ ಅಪಾರ. ಕುವೆಂಪುರವರು ಮಗ ತೇಜಸ್ವಿಗೆ ಬರೆದ ಪತ್ರ, ನೆಹರು ಜೈಲಿನಲ್ಲಿದ್ದಾಗ ಮಗಳು ಇಂದಿರಾ ಗಾಂಧಿಗೆ ಬರೆದ ಪತ್ರ, ಅಬ್ರಹಾಂ ಲಿಂಕನ್ ತನ್ನ ಮಗನನ್ನು ಶಾಲೆಗೆ ಸೇರಿಸುವಾಗ ಶಿಕ್ಷಕರಿಗೆ ಮಾಡಿಕೊಂಡ ಕಳಕಳಿಯ ವಿನಂತಿ ಪತ್ರ, ಇತ್ಯಾದಿ ಪತ್ರ ಬರೆಯುವ ಅಭ್ಯಾಸದ ನಿದರ್ಶನಗಳಾಗಿ ಇಂದಿಗೂ ನಮ್ಮೊಂದಿಗೆ ಇವೆ.
ಪಿನ್ಕೋಡ್: ಭಾರತೀಯ ಅಂಚೆ ವ್ಯವಸ್ಥೆಯಲ್ಲಿ 15 ಆಗಸ್ಟ್,1972ರಂದು ಪಿನ್ಕೋಡ್ ಎಂಬ 6 ಅಂಕಿಗಳ ಸಂಖ್ಯೆಯನ್ನು ಜಾರಿಗೆ ತರಲಾಯಿತು.
ಭಾರತ ಸರ್ಕಾರದ ಸಾರ್ವಜನಿಕ ಅಂಚೆ: ಬ್ರಿಟಿಷ್ ಕಾಲದಲ್ಲಿಯೇ ಆರಂಭವಾದ ಭಾರತೀಯ ಅಂಚೆ ವ್ಯವಸ್ಥೆ,1964ರಲ್ಲಿ ಭಾರತ ಸರ್ಕಾರದ ಸಾರ್ವಜನಿಕ ಅಂಚೆ ವ್ಯವಸ್ಥೆಯಾಗಿ ಇಂದು ಅನೇಕ ಬದಲಾವಣೆಗಳನ್ನು ಕಂಡಿದೆ. ಪತ್ರ ವ್ಯವಹಾರ, ಶೀಘ್ರ ಅಂಚೆ, ಪಾರ್ಸೆಲ್ ಸೇವೆ, ಇ-ಅಂಚೆ, ಮನಿ ಆರ್ಡರ್, ಮ್ಯೂಚುವಲ್ ಫಂಡ್, ಹಣ ವರ್ಗಾವಣೆ, ರಾಷ್ಟ್ರೀಯ ಉಳಿತಾಯ ಪತ್ರ, ಕಿಸಾನ್ ವಿಕಾಸ್ ಪತ್ರ, ಆವರ್ತಿತ ಠೇವಣಿ, ನಿಶ್ಚಿತ ಠೇವಣಿ ಇತ್ಯಾದಿಗಳೆಲ್ಲವೂ ಅಂಚೆ ಕಚೇರಿ ಎಂಬ ಒಂದೇ ಸೂರಿನಡಿ ಪಡೆಯಬಹುದಾದ ಸೇವೆಗಳಾಗಿವೆ. ಅಂಚೆ ವಿಮೆ, ಆಧಾರ್, ಪಾಸ್ಪೋರ್ಟ್ ಇತ್ಯಾದಿ ಸೇವೆ ಮೂಲಕ ಅಂಚೆ ವ್ಯವಸ್ಥೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ಮಕ್ಕಳೂ ಹಣ ಉಳಿತಾಯ ಮಾಡಬಹುದು: ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಮಕ್ಕಳೂ ತೆರೆಯಬಹುದು. 5 ವರ್ಷದ ಅವಧಿಗೆ ಮರುಕಳಿಸುವ ಠೇವಣಿ ಖಾತೆ( ್ಕ)ಯನ್ನು 10 ವರ್ಷ ಮತ್ತು ಮೇಲ್ಪಟ್ಟ ಅಪ್ರಾಪ್ತ ವಯಸ್ಸಿನವರು ತೆರೆಯಬಹುದು ಮತ್ತು ತಾವೇ ನಿರ್ವಹಿಸಬಹುದು.
ಸುಕನ್ಯಾ ಸಮೃದ್ಧಿ ಯೋಜನೆ: 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿಗೆ ಈ ಖಾತೆಯನ್ನು ತೆರೆಯಬಹುದು. ಈ ಯೋಜನೆಯನ್ನು ಪೋಷಕರು ಇಬ್ಬರು ಪುತ್ರಿಯರಿಗೆ ಮಾತ್ರ ತೆರೆಯಬಹುದು. ವಾರ್ಷಿಕ ಕನಿಷ್ಠ 250 ರೂಪಾಯಿ ಪಾವತಿಸುವ ಮೂಲಕ ಖಾತೆಯನ್ನು ಚಾಲ್ತಿಯಲ್ಲಿಡಬಹುದು. ಈ ಯೋಜನೆ ಪ್ರಾರಂಭವಾದ ದಿನಾಂಕದಿಂದ 21 ವರ್ಷಗಳವರೆಗೆ ಕಾರ್ಯ ನಿರ್ವಹಿಸುತ್ತದೆ. ಖಾತೆಯ ಬಾಕಿ ಮೊತ್ತದ 50 ಪ್ರತಿಶತದವರೆಗೆ ಭಾಗಶಃ ಹಿಂಪಡೆಯುವಿಕೆಯನ್ನು ಹೆಣ್ಣು ಮಗುವಿನ ಶಿಕ್ಷಣದ ವೆಚ್ಚಕ್ಕೆ 18 ವರ್ಷ ಪೂರೈಸಿದ ನಂತರ ಪಡೆದುಕೊಳ್ಳಬಹುದಾಗಿದೆ.