

| ಆರ್.ತುಳಸಿಕುಮಾರ್ ಬೆಂಗಳೂರು
ಭೂಮಿ ತಾಯಿಯನ್ನು ನಂಬಿ ಕೆಟ್ಟವರಿಲ್ಲ ಎಂದು ಹೇಳುತ್ತಾರೆ. ಆದರೆ ಭೂಮಿತಾಯಿಯೇ ಮನುಷ್ಯನನ್ನು ನಂಬಿ ಕೆಡುತ್ತಿದ್ದಾಳೆ! ಇದು ಅತಿಶಯೋಕ್ತಿ ಎನಿಸಿದರೂ ಸತ್ಯ. ಅತಿಯಾದ ರಾಸಾಯನಿಕಗಳು, ಕ್ರಿಮಿನಾಶಕಗಳ ಬಳಕೆ ಇಂದು ಮಣ್ಣಿನ ಫಲವತ್ತತೆ ಹಾಳು ಮಾಡುತ್ತಿದ್ದು, ಮಣ್ಣಿನ ಸಂರಕ್ಷಣೆ ಮರೆತ ಕಾರಣ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಇಳುವರಿ ಕುಸಿತವಾಗಿ ಕೃಷಿ ಆದಾಯ ಕಡಿಮೆಯಾಗುತ್ತಿದೆ. ವಿಷಮುಕ್ತ ಆಹಾರ ಕನಸಾಗುತ್ತಿದ್ದು, ಮಣ್ಣಿನ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ.
ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಹೇಗೆ?: ಕಡಿಮೆ ಭೂಮಿಯಲ್ಲಿ ಅಧಿಕ ಲಾಭ ಮಾಡುವ ಆಸೆಗೆ ಬಿದ್ದ ರೈತರು ಹೆಚ್ಚೆಚ್ಚು ರಾಸಾಯನಿಕಗಳನ್ನು ಭೂಮಿಗೆ ಸುರಿಯುತ್ತಿದ್ದು, ಭೂಮಿ ಸಾರ ಕಳೆದುಕೊಳ್ಳುತ್ತಿದೆ. ಅದಕ್ಕೆ ಪರಿಹಾರವಾಗಿ ಮಣ್ಣಿನಲ್ಲಿ ಸಾವಯವ ಪದಾರ್ಥಗಳಾದ ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ಇತರ ಸಾವಯವ ಗೊಬ್ಬರಗಳನ್ನು ಸೇರಿಸುವುದು ಮತ್ತು ಬಹು ಬೆಳೆ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿಸಬಹುದು. ಕೇವಲ ವಾಣಿಜ್ಯ ಬೆಳೆಗಳಿಗೆ ಆದ್ಯತೆ ನೀಡದೆ, ಬೆಳೆ ಪರಿವರ್ತನೆ ಮೂಲಕ ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆ ಮೂಲಕವೂ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ಇದು ಸುಧಾರಿತ ಮಣ್ಣಿನ ರಚನೆಗೆ ಕಾರಣವಾಗುತ್ತದೆ. ಜೈವಿಕ ಸಾರಜನಕ ಸ್ಥಿರೀಕರಣ ಪ್ರಕ್ರಿಯೆ ಮೂಲಕ ಗಾಳಿಯಿಂದ ಸಾರಜನಕವನ್ನು ಸ್ಥಿರೀಕರಿಸುವ ಜೈವಿಕ ಗೊಬ್ಬರಗಳನ್ನು ಬಳಸುವುದು ಮಣ್ಣಿನ ಫಲವತ್ತತೆ ಉತ್ತೇಜಿಸುತ್ತದೆ ಎಂಬುದು ಕೃಷಿ ವಿಜ್ಞಾನಿಗಳ ಸಲಹೆ.
ಮಣ್ಣು ಸವಕಳಿ ತಡೆಯಿರಿ: ಇತ್ತೀಚಿನ ದಿನಗಳಲ್ಲಿ ಅತಿವೃಷ್ಟಿಯಿಂದ ಮಣ್ಣಿನ ಸವಕಳಿ ಉಂಟಾ ಗುತ್ತಿದ್ದು, ಇದನ್ನು ಮೊದಲು ತಡೆಯಬೇಕು. ರೈತರು ತಮ್ಮ ಭೂಮಿಯಲ್ಲಿ ಹೊದಿಕೆ ಬೆಳೆ ಬೆಳೆಯು ವುದು, ಆಳವಾಗಿ ಉಳುಮೆ ಮಾಡುವುದನ್ನು ಕಡಿಮೆಗೊಳಿಸುವುದು, ಹೆಚ್ಚಾಗಿ ಸಾವಯವ ಅಂಶ ಭೂಮಿಗೆ ಸೇರಿಸಬೇಕು. ಹೊಲದ ಸುತ್ತಲೂ ಬದುಗಳನ್ನು ನಿರ್ವಿುಸುವುದು ಮತ್ತು ಬದು ಸುತ್ತಲೂ ಗಿಡಗಳನ್ನು ಬೆಳೆಸುವುದರಿಂದ ಮಣ್ಣಿನ ಸಂರಕ್ಷಣೆ ಮಾಡಬಹುದಾಗಿದೆ. ಇಂತಹ ಉಪಕ್ರಮಗಳ ಮೂಲಕ ಮಣ್ಣಿನ ಸಂರಕ್ಷಣೆ ಜತೆಗೆ ಕೃಷಿಯೋಗ್ಯ ಭೂಮಿಯಾಗಿ ಪರಿವರ್ತಿಸಲು ಸಾಧ್ಯವಿದೆ.
ಕೃಷಿಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬ ರೈತನೂ ಮಣ್ಣಿನ ಸಂರಕ್ಷಣೆಗೆ ಹೆಚ್ಚಿನ ಗಮನ ಹರಿಸಬೇಕು. ನಮ್ಮಂತೆಯೇ ಮಣ್ಣು ಆರೋಗ್ಯಕರವಾಗಿರಲು ಸೂಕ್ತ ಪ್ರಮಾಣದಲ್ಲಿ ಪೋಷಕಾಂಶಗಳ ಸಮತೋಲಿತ ಮತ್ತು ವೈವಿಧ್ಯಮಯ ಪೂರೈಕೆಯ ಅಗತ್ಯವಿದೆ. ಇದನ್ನು ನಿರಂತರವಾಗಿ ಮಾಡಿದ್ದೇ ಆದಲ್ಲಿ ಬೆಳೆಗಳಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಕೃಷಿ ವಿಜ್ಞಾನಿಗಳ ಸಹಕಾರ ಪಡೆಯಲು ರೈತರು ಹಿಂದೇಟು ಹಾಕುವುದು ಬೇಡ. | ಡಾ. ಎನ್.ಬಿ. ಪ್ರಕಾಶ್ ಪ್ರಾಧ್ಯಾಪಕರು, ಬೆಂ. ಕೃಷಿ ವಿವಿ
ಮಣ್ಣಿನಲ್ಲಿರುವ ವಿಧ, ಕೃಷಿಗೆ ಪೂರಕ?: ಮಣ್ಣಿನಲ್ಲಿ ಪ್ರಮುಖವಾಗಿ ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. ಮರಳು ಮಣ್ಣು, ಸಿಲ್ಟ್ ಮಣ್ಣು, ಜೇಡಿ ಮಿಶ್ರಿತ ಮಣ್ಣು ಮತ್ತು ಲೋಮಿ ಮಣ್ಣು. ಇವುಗಳನ್ನು ಬೆಳೆಗಳಿಗೆ ಅನುಗುಣವಾಗಿ ಮಣ್ಣಿನ ಪೂರಕತೆ ನಿರ್ಧರಿಸಬಹುದು. ತೋಟಗಾರಿಕಾ ಬೆಳೆಗಳಿಗೆ ಜೇಡಿ ಮಿಶ್ರಿತ ಮರಳು ಮಣ್ಣು ಸೂಕ್ತ. ಕರ್ನಾಟಕದ ಮಣ್ಣನ್ನು ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಕೆಂಪು ಮಣ್ಣು, ಉತ್ತರ ಕರ್ನಾಟಕದಲ್ಲಿ ಕಪ್ಪು ಮಣ್ಣು, ಕರಾವಳಿ ಪ್ರದೇಶದಲ್ಲಿ ಮೆಕ್ಕಲು ಮಣ್ಣು ಮತ್ತು ಮಲೆನಾಡು ಪ್ರದೇಶದಲ್ಲಿ ಜಂಬಿಟ್ಟಿಗೆ ಮಣ್ಣನ್ನು ಕಾಣಬಹುದಾಗಿದೆ.
ಥಾಯ್ಲೆಂಡ್ ರಾಜನ ಸ್ಮರಣೆ: ಮಣ್ಣಿನ ಸಂರಕ್ಷಣೆಯನ್ನು ಹೇಗೆ ಕೈಗೊಳ್ಳಬೇಕು ಎಂಬುದರ ಕುರಿತು ಅರಿವು ಮೂಡಿಸಲು ಪ್ರತಿ ವರ್ಷ ಡಿ.5ರಂದು ‘ವಿಶ್ವ ಮಣ್ಣಿನ ದಿನ’ವನ್ನು ಥಾಯ್ಲೆಂಡ್ ರಾಜ ಕಿಂಗ್ ಭೂಮಿ ಬೋಲ್ ಕೊಡುಗೆಯನ್ನು ಪರಿಗಣಿಸಿ ಅವರ ಜನ್ಮದಿನವನ್ನು ವಿಶ್ವ ಮಣ್ಣಿನ ದಿನ ಎಂದು ಆಚರಿಸಲಾಗುತ್ತಿದೆ. ಈ ರಾಜ ತನ್ನ ದೇಶದಲ್ಲಿ ಕೃಷಿ ಕೈಗೊಳ್ಳುವ ರೈತರಿಗೆ ಮೊದಲು ಭೂಮಿ ಫಲವತ್ತತೆ ಕಾಪಾಡುವತ್ತ ಹೆಚ್ಚಿನ ಕಾಳಜಿ ವಹಿಸಬೇಕು ಎಂಬ ಸಂದೇಶ ಸಾರಿದ್ದು ಅಲ್ಲಿನ ಕೃಷಿಕರಿಗೆ ವೇದವಾಕ್ಯವಾಗಿತ್ತು.
ಮಣ್ಣಿನಲ್ಲಿ ಏನೇನು ಇರಬೇಕು?: ಕೃಷಿ ಬೆಳೆಯುವ ಜಮೀನಿನಲ್ಲಿ ಸಾರಜನಕ, ರಂಜಕ, ಸತು, ಕಬ್ಬಿಣ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಬೋರಾನ್ ಸೇರಿದಂತೆ 17 ಪೋಷಕಾಂಶಗಳು ಇರಬೇಕು. ಆಯಾ ಜಮೀನಿನಲ್ಲಿ ಬೆಳೆಯುವ ಬೆಳೆ ಆಧರಿಸಿ ಪೋಷಕಾಂಶಗಳನ್ನು ಸರಿಪ್ರಮಾಣದಲ್ಲಿ ವೃದ್ಧಿಸಿಕೊಳ್ಳಬೇಕು. ಹೀಗೆ ಮಾಡಿದರೆ ಬೆಳೆ ಇಳುವರಿ ಹಾಗೂ ಆದಾಯದಲ್ಲಿ ಗಣನೀಯ ಏರಿಕೆ ಕಂಡುಬರುತ್ತದೆ. ಇದಕ್ಕಾಗಿ ಮಣ್ಣು ಪರೀಕ್ಷೆ ಮಾಡಿಸಿದರೆ ಕೃಷಿ ತಜ್ಞರಿಂದ ವೈಜ್ಞಾನಿಕವಾಗಿ ಮಣ್ಣಿನಲ್ಲಿರುವ ಸಾರ ತಿಳಿದು ಮುಂದುವರಿಯಬಹುದು.
ರೈತರಿಗೆ ಮಣ್ಣಿನ ಕಾರ್ಡ್ವಿತರಣೆ: ಇತ್ತೀಚಿಗೆ ಕೇಂದ್ರ ಸರ್ಕಾರ ಮಣ್ಣು ಪರೀಕ್ಷೆ ಕಿಟ್ ವಿತರಿಸುವ ಯೋಜನೆಯನ್ನು ಪ್ರಕಟಿಸಿದೆ. ಇದರಿಂದ ಭೂಮಿಯ ಆರೋಗ್ಯ ಮತ್ತು ಮಣ್ಣಿನ ಸಂಪೂರ್ಣ ಮಾಹಿತಿ ದೊರೆತು ರೈತರು ತಮ್ಮ ಜಮೀನಿನಲ್ಲಿ ಯಾವ ಬೆಳೆಯನ್ನು ಬೆಳೆಯಬಹುದು ಮತ್ತು ಯಾವ ಬಗೆಯ ರಸಗೊಬ್ಬರವನ್ನು ಬಳಸಬಹುದು ಎಂಬ ಮಾಹಿತಿ ದೊರೆತು ಬೆಳೆ ಹಾಗೂ ಗೊಬ್ಬರ ಬಳಕೆ ನಿರ್ಧರಿಸಲು ಸಹಾಯವಾಗಿದೆ. ರಾಜ್ಯ ಸರ್ಕಾರ ಕೂಡ ಮಣ್ಣು ಸಂರಕ್ಷಣೆ ಹಾಗೂ ಸುಧಾರಣೆ ಮಾಡುವ ಹಿನ್ನೆಲೆಯಲ್ಲಿ ‘ಮಣ್ಣು ಆರೋಗ್ಯ ಅಭಿಯಾನ’ ಜಾರಿಗಾಗಿ ಈಗಾಗಲೇ 8.49 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಪ್ರತಿ ರೈತನಿಗೂ ಪ್ರತ್ಯೇಕ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸುವ ಕಾರ್ಯಕ್ರಮವೂ ಪ್ರಗತಿಯಲ್ಲಿದೆ. ಪ್ರತಿ ಜಿಲ್ಲೆಗಳಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯಗಳಿದ್ದು, ತಾಲೂಕು ಮಟ್ಟಕ್ಕೂ ವಿಸ್ತರಿಸಲಾಗುತ್ತಿದೆ. ಇದೀಗ ರೈತರೇ ತಮ್ಮ ಹೊಲಗಳಲ್ಲಿ ಮಣ್ಣಿನಲ್ಲಿರಬಹುದಾದ ಪೋಷಕಾಂಶಗಳ ಮಟ್ಟ ಪರೀಕ್ಷಿಸಲು ಸಾಧ್ಯವಾಗುವಂತೆ ‘ಮಣ್ಣು ಪರೀಕ್ಷಾ ಕಿಟ್’ ಯಶಸ್ವಿಯತ್ತ ಹೆಜ್ಜೆ ಇಟ್ಟಿದೆ.
ಮಣ್ಣು ಸಂರಕ್ಷಣೆಗೆ ಸಂಶೋಧನೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಮಣ್ಣು ಸಂರಕ್ಷಣೆಗೆ ಸಂಬಂಧಿಸಿದಂತೆ ಹಲವು ಸಂಶೋಧನೆಗಳನ್ನು ಕೈಗೊಂಡಿದೆ. ಪ್ರಮುಖವಾಗಿ ಭತ್ತ ಹಾಗೂ ಕಬ್ಬಿನ ಇಳುವರಿ ಹೆಚ್ಚಿಸಲು ಸಿಲಿಕಾನ್ ಬಳಕೆ, ಮಣ್ಣಿನಲ್ಲಿ ಚವಳಿನ ಅಂಶವನ್ನು ಸುಧಾರಿಸಲು ಮತ್ತು ಗಂಧಕದ ಪೋಷಕಾಂಶದ ಮೂಲವಾಗಿ ಸ್ಲಾಗಾ ಆಧಾರಿತ ಜಿಪ್ಸಮ್ ಬಳಕೆ, ಕ್ಷಾರೀಯ ಮಣ್ಣಿನ ನಿರ್ವಹಣೆಗೆ ಸಬ್-ಸರ್ಫೆಸ್ ಸಾಯಿಲ್ ಅಪ್ಲಿಕೇಶನ್, ಆಮ್ಲಿಯ ಮಣ್ಣಿಗೆ ಸುಣ್ಣದ ಬಳಕೆ, ಕ್ಷಾರ ಮಣ್ಣಿಗೆ ಜಿಪ್ಸಮ್ ಅಪ್ಲಿಕೇಶನ್. ಮಣ್ಣಿನ ಪರೀಕ್ಷೆ ಆಧಾರಿತ ರಸಗೊಬ್ಬರ ಶಿಫಾರಸು ಯೋಜನೆ, ಅಖಿಲ ಭಾರತೀಯ ಪ್ರಾಯೋಜಿತ ದಿರ್ಘವಧಿಯ ರಸಗೊಬ್ಬರಗಳ ಬಳಕೆಯಿಂದ ಮಣ್ಣಿನ ಮೇಲಾಗುವ ಪರಿಣಾಮವನ್ನು ತಿಳಿಯಲು ಸಂಶೋಧನಾ ತಾಕು, ಕೃಷಿ-ಅರಣ್ಯ ಯೋಜನೆಯ ಮೂಲಕವೂ ಹಲವು ಪ್ರಯೋಗಗಳು ಚಾಲ್ತಿಯಲ್ಲಿದೆ.