

((ಶಿಲ್ಪಕಲೆ ಎಂದ ಕೂಡಲೆ ನೆನಪಿಗೆ ಬರುವುದು ಹೊಯ್ಸಳರ ಆಡಳಿತ. ಮುಖ್ಯವಾಗಿ ಹಾಸನ ಜಿಲ್ಲೆಯ ಬೇಲೂರು, ಹಳೆಬೀಡುಗಳಿಗೆ ಭೇಟಿ ನೀಡಿ ಅನೇಕರು ಅಲ್ಲಿನ ಸುಂದರ, ಸೂಕ್ಷ್ಮ, ಅಷ್ಟೇ ಸಂಕೀರ್ಣ ಕಲ್ಲಿನ ಕೆತ್ತನೆಗಳನ್ನು ಕಣ್ಣಿಗೆ ತುಂಬಿಕೊಂಡಿರುತ್ತಾರೆ. ಈಗಿನ ಅತ್ಯಾಧುನಿಕ ಯಂತ್ರೋಪ ಕರಣ, ಸೂಕ್ಷಾ್ಮತಿಸೂಕ್ಷ್ಮ ಉಪಕರಣಗಳು ಇದ್ದಾಗಲೂ ಅಷ್ಟು ಸ್ಪಷ್ಟ, ಅಳತೆಯಲ್ಲಿ ನಿಖರ ಕೆತ್ತನೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸುವಷ್ಟು ಬೆರಗು ಹುಟ್ಟಿಸುತ್ತವೆ.))
| ರಮೇಶ ದೊಡ್ಡಪುರ
ಹಾಸನ ಜಿಲ್ಲೆಯಲ್ಲಿ ಹೊಯ್ಸಳರು ಅಂದಾಜು 900 ದೇವಾಲಯಗಳನ್ನು ನಿರ್ವಿುಸಿದ್ದಾರೆ. ಕೆಲವು ದೇವಾಲಯಗಳಲ್ಲಿ ಹೆಚ್ಚು, ಕೆಲವು ದೇವಾಲಯಗಳಲ್ಲಿ ಕಡಿಮೆ ಇದ್ದರೂ ಎಲ್ಲ ಕಡೆಯೂ ಶಿಲ್ಪಕಲೆಯ ಸೌಂದರ್ಯ ಇದ್ದೇ ಇದೆ. ಅದು ಗೋಪುರದಲ್ಲಿರಬಹುದು, ಗೋಡೆಯಲ್ಲಿರಬಹುದು ಅಥವಾ ಗರ್ಭಗುಡಿಯಲ್ಲಿರಬಹುದು, ಕೆತ್ತನೆಗಳ ವಿಶೇಷತೆ ಮನಸೂರೆಗೊಳ್ಳುತ್ತದೆ.
ಅಂತಹ ವಿಶಿಷ್ಟ ದೇವಾಲಯಗಳಲ್ಲಿ ಹಾಸನ ಜಿಲ್ಲೆ, ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿಯ ಹರಿಹರಪುರ ಗ್ರಾಮದಲ್ಲಿರುವ ಹರಿಹರೇಶ್ವರ ದೇವಾಲಯವೂ ಒಂದು. ರಾಜ್ಯ ಹಾಗೂ ದೇಶದ ಬಹುತೇಕ ಪ್ರಾಚೀನ ದೇವಾಲಯಗಳಂತೆ ಈ ದೇವಾಲಯಕ್ಕೂ ಯಾವುದೇ ನಿರ್ವಹಣೆಯಿಲ್ಲ. ಆದರೂ ಕುಸಿದು ಬೀಳುವಂತಿರುವ ಕಲ್ಲಿನ ಕಂಬಗಳು, ವಾಲಿಕೊಂಡಿರುವ ಗೋಡೆಗಳ ನಡುವೆಯೇ ತನ್ನ ಗತವೈಭವವನ್ನು ಸಾರುತ್ತಿದೆ ಈ ದೇವಾಲಯ.
ತ್ರಿಕೂಟಾಚಲ ಶೈಲಿಯ ದೇವಾಲಯ: ಹೊಯ್ಸಳರು ಮುಖ್ಯವಾಗಿ ಐದು ರೀತಿಯ ದೇವಾಲಯಗಳನ್ನು ನಿರ್ವಿುಸಿದ್ದಾರೆ. ದೇವಾಲಯಗಳ ನಡುವಿನ ವಿಭಿನ್ನತೆಯನ್ನು ಅವುಗಳ ಗೋಪುರಗಳ ಮೂಲಕ ಗುರುತಿಸಲಾಗುತ್ತದೆ. ಏಕಕೂಟ, ದ್ವಿಕೂಟ, ತ್ರಿಕೂಟ, ಚತುಷ್ಕೂಟ ಹಾಗೂ ಪಂಚಕೂಟ ಹೀಗೆ. ಗೋಪುರಗಳ ಸಂಖ್ಯೆಗೆ ಅನುಗುಣವಾಗಿ ಈ ಹೆಸರು ಸ್ಥಿರಗೊಳ್ಳುತ್ತದೆ. ಬೇಲೂರಿನಲ್ಲಿರುವ ಪ್ರಸಿದ್ಧ ಚನ್ನಕೇಶವ ದೇವಾಲಯ ಏಕಕೂಟ ದೇವಾಲಯ. ಅದೇ ರೀತಿ ಹಳೇಬೀಡಿನಲ್ಲಿರುವ ಹೊಯ್ಸಳೇಶ್ವರ ದೇವಾಲಯ ದ್ವಿಕೂಟ, ಸೋಮನಾಥಪುರದಲ್ಲಿ ತ್ರಿಕೂಟ, ಹಾಸನದ ದೊಡ್ಡಗದವಳ್ಳಿಯಲ್ಲಿರುವ ದೇವಾಲಯ ಚತುಷ್ಕೂಟ ಹಾಗೂ ಮಂಡ್ಯ ಜಿಲ್ಲೆಯ ಗೋವಿಂದನಹಳ್ಳಿಯಲ್ಲಿ ಪಂಚಕೂಟ ದೇವಾಲಯ ಇವೆ. ಇವು ಈ ಶೈಲಿಗೆ ಉದಾಹರಣೆಗಳು. ಅದರಂತೆ ಹರಿಹರಪುರದ ಹರಿಹರೇಶ್ವರ ದೇವಾಲಯ ಸುಂದರವಾದ ತ್ರಿಕೂಟ ಶೈಲಿಯನ್ನು ಹೊಂದಿದೆ. ದೇವಾಲಯದ ಬಾಗಿಲುಗಳು ಸುಂದರ ಕೆತ್ತನೆ ಒಳಗೊಂಡಿವೆ. ಸುತ್ತಲಿನ ಗೋಡೆಯಲ್ಲಿ ರಾಮಾಯಣ, ಮಹಾಭಾರತ ಹಾಗೂ ಭಾಗವತದ ಸಾರವನ್ನು ಚಿತ್ರಿಸಲಾಗಿದೆ. ಕರ್ನಾಟಕ ಶಾಸನ ಸಂಪುಟ 8ರ ಸಂಖ್ಯೆ 156ರಲ್ಲಿ ನಮೂದಾಗಿರುವ ದಾಖಲೆಯ ಪ್ರಕಾರ ಹರಿಹರೇಶ್ವರ ದೇವಾಲಯ 13ನೇ ಶತಮಾನದ ಆದಿಭಾಗದಲ್ಲಿ ನಿರ್ವಣವಾಗಿದೆ. ‘ಶಿವಾಯ ವಿಷ್ಣು ರೂಪಾಯ ಶಿವರೂಪಾಯ ವಿಷ್ಣವೇ’ ಎಂಬುದು ಪ್ರಸಿದ್ಧವಿದ್ದರೂ ಆಗಿನ ಕಾಲದಿಂದ ಈಗಿನವರೆಗೂ ಶಿವ ಹಾಗೂ ವಿಷ್ಣುವಿನಲ್ಲಿ ಭೇದ ಎಣಿಸುವವರಿಗೆ ಲೆಕ್ಕವಿಲ್ಲ. ಬಹುಶಃ ಅಂದಿನ ಇಂತಹವರ ಭೇದಗಳಿಗೆ ಉತ್ತರವೆಂಬಂತೆ ಹರಿಹರೇಶ್ವರ ದೇವಾಲಯ ನಿರ್ವಣವಾಗಿದೆ. ಇಬ್ಬರೂ ಅಭೇದ ಸ್ವರೂಪರು ಎಂಬುದನ್ನು ಈ ದೇವಾಲಯ ಸಾರಿ ಹೇಳುತ್ತದೆ.
- ಅಷ್ಟದಿಕ್ಪಾಲಕರು ಹಾಗೂ ಕೃಷ್ಣ
1920ರಲ್ಲಿ ಮೈಸೂರ್ ಗೆಜೆಟಿಯರ್ನಲ್ಲಿ ಹಯವದನರಾವ್ ಅವರು ಹರಿಹರಪುರ ದೇವಾಲಯದ ವಿಷಯವನ್ನು ದಾಖಲಿಸಿದ್ದಾರೆ. ಪೂರ್ವಕ್ಕೆ ಮುಖ ಮಾಡಿರುವ ದೇವಾಲಯ ಒಂದು ಸುಖನಾಸಿ, ಒಂದು ನವರಂಗ ಹಾಗೂ ಮುಖಮಂಟಪವನ್ನು ಹೊಂದಿದೆ. ನವರಂಗದಲ್ಲಿ ಎರಡು ಸೂಕ್ಷ್ಮ ಕೆತ್ತನೆಗಳಿವೆ, ಮುಖಮಂಟಪಕ್ಕೆ ಕರೆದೊಯ್ಯುವ ಮೆಟ್ಟಿಲುಗಳ ಎರಡೂ ಭಾಗದಲ್ಲಿ ಆನೆಗಳ ವಿಗ್ರಹಗಳಿವೆ. ನವರಂಗದ ಮೇಲ್ಭಾಗದ ಸುತ್ತ ಅಷ್ಟದಿಕ್ಪಾಲಕರ ವಿಗ್ರಹಗಳು ಹಾಗೂ ಕೇಂದ್ರದಲ್ಲಿ ಕೃಷ್ಣನ ಸುಂದರ ಕಲಾಕೃತಿಯಿದೆ. ಸುಖನಾಸಿಯ ಎರಡೂ ಬದಿಯಲ್ಲಿ ರತಿ ಮತ್ತು ಮನ್ಮಥರ ವಿಗ್ರಹಗಳಿವೆ. ಹರಿಹರ, ಸರಸ್ವತಿ ಹಾಗೂ ರಂಗನಾಥ ವಿಗ್ರಹಗಳಿದ್ದ ಮೂರು ಗರ್ಭಗೃಹಗಳಿವೆ. ಮುಖ್ಯ ದೇವತೆ ಹರಿಹರನಾದ್ದರಿಂದ ಗ್ರಾಮಕ್ಕೆ ಅದೇ ಹೆಸರು ಬಂದಿದೆ. ನವರಂಗದಲ್ಲಿ ಇಲಿಯ ಕೆತ್ತನೆ ಮಾತ್ರವೇ ಇದ್ದು, ಜತೆಯಲ್ಲಿ ಗಣಪತಿ ವಿಗ್ರಹ ಇತ್ತು ಎಂಬುದನ್ನು ನಿರೂಪಿಸುತ್ತದೆ. ಉತ್ತರ ಭಾಗದಲ್ಲಿದ್ದ ಸುಂದರ ಲಕ್ಷ್ಮೀನರಸಿಂಹ ದೇವಾಲಯ ಹಾನಿಗೀಡಾಗಿದೆ ಎಂದೂ ಉಲ್ಲೇಖಿಸಿದ್ದಾರೆ. ಆದರೆ ಕಳೆದ ಶತಮಾನದ ಐವತ್ತರ ದಶಕದಲ್ಲಿ ಆ ವಿಗ್ರಹ ನಾಪತ್ತೆಯಾಗಿದೆ.
- ದೇವಾಲಯಕ್ಕೆ ಸಾಗುವ ಮಾರ್ಗ
ಹಾಸನದಿಂದ ಅರಸೀಕೆರೆ ರಸ್ತೆಯಲ್ಲಿ 7 ಕಿ.ಮೀ. ದೂರ ಸಾಗಿದರೆ ದೊಡ್ಡಪುರ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಕ್ಕೆ ಹೊರಳಿ 14 ಕಿ.ಮೀ. ಸಾಗಿದರೆ ಹೆರಗು ಎಂಬ ಗ್ರಾಮ ಇದೆ. ಅಲ್ಲಿಂದ 4 ಕಿ.ಮೀ. ದೂರದಲ್ಲಿ ಹರಿಹರಪುರ ಗ್ರಾಮ ಇದೆ. ಹೆರಗುವರೆಗೆ ಸಾಕಷ್ಟು ಬಸ್ ಸೌಕರ್ಯವಿದೆ. ಸ್ವಂತ ವಾಹನದಲ್ಲಿ ತೆರಳಲು ಉತ್ತಮ ರಸ್ತೆ ಇದೆ.
- ಡೆನ್ಮಾರ್ಕ್ನಲ್ಲಿವೆ 3 ವಿಗ್ರಹಗಳು
ಶಿಲ್ಪಕಲಾ ಸೌಂದರ್ಯ ಮೈವೆತ್ತಿ ನಿಂತಿರುವ ದೇವಾಲಯದ ಗರ್ಭಗುಡಿ ಪ್ರವೇಶಿಸಿದರೆ ಕಾಣುವುದು ನಿರಾಸೆ! ಕಾರಣವೇನೆಂದರೆ ಮೂರೂ ಗೋಪುರಗಳಡಿಯ ಗರ್ಭಗುಡಿಗಳಲ್ಲಿ ವಿಗ್ರಹಗಳೇ ಇಲ್ಲ. ಹಲವು ದೇವಾಲಯಗಳಲ್ಲಿ ಇಂತಹ ಪರಿಸ್ಥಿತಿ ಇದೆ. ಕಿಡಿಗೇಡಿಗಳ ಕೃತ್ಯದಿಂದಲೋ, ನಿಧಿಯಿದೆಯೆಂಬ ಊಹೆಯ ಕಾರಣಕ್ಕೊ ವಿಗ್ರಹ ಕಳವು, ಹಾನಿ ನಡೆಯುತ್ತದೆ. ಆದರೆ ಹರಿಹರಪುರದ ದೇವಾಲಯದ ಪೂರ್ವದ ಬಾಗಿಲ ಎದುರಿನ ಗರ್ಭಗುಡಿಯಲ್ಲಿದ್ದ ಹರಿಹರೇಶ್ವರ, ಬಲಭಾಗದ ಗರ್ಭಗುಡಿಯಲ್ಲಿದ್ದ ಸರಸ್ವತಿ ಹಾಗೂ ಎಡಭಾಗದ ಗರ್ಭಗುಡಿಯಲ್ಲಿದ್ದ ರಂಗನಾಥ ವಿಗ್ರಹಗಳು ವಿದೇಶದಲ್ಲಿವೆ. 1920ರಲ್ಲಿ ಪ್ರಕಟವಾದ ಹಯವದನರಾವ್ ಅವರು ರಚಿಸಿದ ಮೈಸೂರು ಗೆಜೆಟಿಯರ್ನಲ್ಲಿ ಉಲ್ಲೇಖಿಸಿರುವಂತೆ ಆಗ್ಗೆ 20 ವರ್ಷ ಮೊದಲು ಹಾಸನದ ಕನ್ನಡಿಗ ಜಿಲ್ಲಾಧಿಕಾರಿಯೊಬ್ಬರು ಇಲ್ಲಿನ ವಿಗ್ರಹಗಳನ್ನು ತೆರವುಗೊಳಿಸಿ, ಡೆನ್ಮಾರ್ಕ್ನಲ್ಲಿ ನಡೆಯುವ ವಸ್ತುಪ್ರದರ್ಶನಕ್ಕೆ ಕಳಿಸಿಕೊಟ್ಟರು ಎನ್ನಲಾಗಿದೆ. ಈ ಘಟನೆಗೆ ಕಾರಣವಾಗಿದ್ದು ಲೆವೆಂಥಾಲ್ ಎಂಬ ಬ್ರಿಟಿಷ್ ಅಧಿಕಾರಿ. ಅವರ ಒತ್ತಾಸೆ ಮೇರೆಗೆ ವಿಗ್ರಹಗಳನ್ನು ಡೆನ್ಮಾರ್ಕ್ಗೆ ಕಳಿಸಿಕೊಡಲಾಯಿತು.
- ಕೋಪನ್ಹೇಗನ್ನಲ್ಲೂ ಇವೆ ವಿಗ್ರಹಗಳು
ನಾಡಿನ ಮುಖ್ಯ ಸಂಶೋಧಕರಲ್ಲೊಬ್ಬರಾಗಿದ್ದ ಪ್ರೊ. ಷ. ಷಟ್ಟರ್ ಅವರು ಹರಿಹರಪುರ ದೇವಾಲಯದ ವಿಗ್ರಹಗಳ ಕುರಿತು ತಮ್ಮ ಸಂಶೋಧನಾ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಕೋಪನ್ಹೇಗನ್ನ ರಾಷ್ಟ್ರೀಯ ಮ್ಯೂಸಿಯಂನಲ್ಲಿ ಹೊಯ್ಸಳ ವಿಗ್ರಹಗಳು (ಹೊಯ್ಸಳ ಸ್ಕಲ್ಪ್ಚರ್ಸ್ ಇನ್ ದಿ ನ್ಯಾಷನಲ್ ಮ್ಯೂಸಿಯಂ, ಕೋಪನ್ಹೇಗನ್) ಎಂಬ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಅದನ್ನು ನ್ಯಾಷನಲ್ ಮ್ಯೂಸಿಯಮ್್ಸ ಪ್ರಕಟಿಸಿದೆ. ಹರಿಹರೇಶ್ವರ, ರಂಗನಾಥ ಹಾಗೂ ಸರಸ್ವತಿ ವಿಗ್ರಹಗಳ ಭಾವಚಿತ್ರವನ್ನೂ ಅದರಲ್ಲಿ ಪ್ರಕಟಿಸಿದ್ದಾರೆ.
- ಮತ್ತೆ ದೇವಾಲಯ ಆಗಿಸುವ ಪ್ರಯತ್ನ
ಹರಿಹರೇಶ್ವರ ದೇವಾಲಯಗಳನ್ನು ಪುರಾತತ್ವ ಸರ್ವೆಕ್ಷಣಾ ಇಲಾಖೆ ಜೀಣೋದ್ಧಾರ ಮಾಡಬೇಕು ಎಂಬ ಬೇಡಿಕೆ ಅನೇಕರಿಂದ ಬಂದಿದೆ. ಅದಕ್ಕೂ ಮಿಗಿಲಾಗಿ ದೇವಾಲಯವನ್ನು ಮ್ಯೂಸಿಯಂ ಮಾಡದೆ ದೇವಾಲಯವಾಗಿಸುವತ್ತ ಹರಿಹರಪುರ ಗ್ರಾಮಸ್ಥರು, ಆಸರೆ ಟ್ರಸ್ಟ್ ಪದಾಧಿಕಾರಿಗಳು ಸೇರಿ ಅನೇಕರು ಆಸಕ್ತಿ ತೋರಿದ್ದಾರೆ. ಸದ್ಯ ವಿದೇಶದಲ್ಲಿರುವ ವಿಗ್ರಹಗಳನ್ನು ತರುವ ಪ್ರಯತ್ನ ನಡೆಸುತ್ತಿಲ್ಲ. ತಂದರೂ ಅವು ಹಾನಿಯಾಗಿರುವ ಕಾರಣ ಪ್ರದರ್ಶನಕ್ಕಿಡಬೇಕೆ ವಿನಃ ಪೂಜಿಸಲು ಆಗುವುದಿಲ್ಲ. ಹೀಗಾಗಿ, ಈ ಹಿಂದಿದ್ದಂತೆಯೇ ವಿಗ್ರಹಗಳನ್ನು ಕೆತ್ತನೆ ಮಾಡಿಸಿ, ದೇವಾಲಯವನ್ನು ಜೀಣೋದ್ಧಾರಗೊಳಿಸಿ ನಿತ್ಯ ಪೂಜಾ ವಿಧಿವಿಧಾನ ನಡೆಯುವಂತೆ ಮಾಡುವುದು ಉತ್ತಮ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಸರ್ಕಾರದ ಜತೆಗೆ ಸಾರ್ವಜನಿಕರ ಸಹಭಾಗಿತ್ವವನ್ನೂ ಪಡೆಯಲಾಗುವುದು. ಬಲಭಾಗದ ಗೂಡಿನಲ್ಲಿ ಈಗಾಗಲೇ ಗಣೇಶನ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಸದ್ಯ ದೇವಾಲಯ ಪುರಾತತ್ವ ಇಲಾಖೆಗೆ ಸೇರಿಲ್ಲ ಎನ್ನುತ್ತಾರೆ ಈ ಕುರಿತು ಕಾಳಜಿ ವಹಿಸಿರುವ ಹೆರಗು ದೇಶಿಕಾಚಾರ್ (9482507120). ನಮ್ಮ ಸಂಸ್ಕೃತಿಯ ಭಾಗವಾಗಿರುವ ದೇವಾಲಯಗಳನ್ನು ಜೀವಂತವಾಗಿರಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎನ್ನುತ್ತಾರೆ ಪುರಾತತ್ವ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ನಟರಾಜ ಪಂಡಿತ್ (9964536150).