

ತಳುಕಿನ ಸುಬ್ಬಣ್ಣ ವೆಂಕಣ್ಣಯ್ಯನವರ ಬಗೆಗೆ ಇಂತಹ ಅನೇಕ ಪ್ರಸಂಗಗಳು ಪ್ರಚಲಿತದಲ್ಲಿವೆ. ಭೌತಿಕವಾಗಿ ಮಾತ್ರವಲ್ಲ, ವ್ಯಕ್ತಿತ್ವದಲ್ಲಿಯೂ ಅವರು ಎತ್ತರದ ಸ್ಥಾನದಲ್ಲಿದ್ದವರು. ಕಲುಷಿತಗೊಂಡಿರುವ ವರ್ತಮಾನದಲ್ಲಿ ಉದಾತ್ತ ವ್ಯಕ್ತಿತ್ವದ ಉನ್ನತ ಚೇತನ ವೆಂಕಣ್ಣಯ್ಯನವರಂತಹವರ ವಿವರಗಳು ನಮಗೆ ವಿಸ್ಮಯವನ್ನುಂಟುಮಾಡುವುದು ಸಹಜ. ಆದರೆ ಒಂದು ಉದಾತ್ತ ಪರಂಪರೆಯ ಪ್ರತೀಕವಾಗಿ ಅವರ ಬದುಕು ನಮ್ಮೆದುರಿಗಿದೆ. ಅವರ ಸಹೋದರ ಮತ್ತೊಬ್ಬ ವಾತ್ಸಲ್ಯಮೂರ್ತಿ ತ.ಸು.ಶಾಮರಾಯರ ‘ಮೂರು ತಲೆಮಾರು’ ಕೃತಿಯಲ್ಲಿ ವೆಂಕಣ್ಣಯ್ಯನವರ ಇಂತಹ ಅನೇಕ ವಿವರಗಳನ್ನು ನಾವು ಕಾಣಬಹುದು. ಒಮ್ಮೆ ಯಾವುದೋ ಇಕ್ಕಟ್ಟಿನ ಪ್ರಸಂಗ. ತುರ್ತಾಗಿ ಹಣ ಬೇಕಿತ್ತು. ಹದಿನೈದು ದಿನಗಳ ಕಾಲ ಸುತ್ತಾಡಿ ಕಷ್ಟಪಟ್ಟು ಕೋ ಆಪರೇಟಿವ್ ಬ್ಯಾಂಕಿನಿಂದ ಸಾಲ ಪಡೆದು ಹಣವನ್ನು ಹೊಂದಿಸಿದರು. ಅದೇ ಸಮಯಕ್ಕೆ ಮನೆಗೆ ಪರಿಚಿತರೊಬ್ಬರು ಬಂದರು. ಅವರ ತಾಯಿ ತೀರಿಕೊಂಡಿದ್ದು ಮುಂದಿನ ವ್ಯವಸ್ಥೆಗೆ ಹಣವಿಲ್ಲದೆ ನೆರವು ಅಪೇಕ್ಷಿಸಿ ಬಂದಿದ್ದರು. ವೆಂಕಣ್ಣಯ್ಯನವರು ಕಿಂಚಿತ್ತೂ ಯೋಚಿಸದೆ ಸಾಲವಾಗಿ ತಂದಿದ್ದ ಮೊತ್ತವನ್ನು ಅವರ ಕೈಗಿತ್ತು ಸಾಂತ್ವನ ಹೇಳಿ ಕಳುಹಿಸಿಕೊಟ್ಟರು. ತಮ್ಮ ಕಷ್ಟ ಹೇಗೆ ಪರಿಹರಿಸಿಕೊಂಡರೋ!
ವೆಂಕಣ್ಣಯ್ಯನವರು ಕನ್ನಡದ ಮೊದಲ ಪ್ರಾಧ್ಯಾಪಕರೆಂಬುದು ಚಾರಿತ್ರಿಕವಾಗಿ ಗಮನಿಸಬೇಕಾದ ಸಂಗತಿ. ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ 1926 ಮಹತ್ವದ ವರ್ಷ. ಆಗ ಅಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕುಲಪತಿಯಾಗಿದ್ದರು; ವಿವೇಕಾನಂದರ ಸಹಪಾಠಿಯಾಗಿದ್ದ ಬಂಗಾಳದ ಬ್ರಜೇಂದ್ರನಾಥಸೀಲರು ಉಪಕುಲಪತಿ; ಕನ್ನಡದ ಕಣ್ವರೆಂಬ ಖ್ಯಾತಿಯ ಬಿ ಎಂ ಶ್ರೀಕಂಠಯ್ಯ ರಿಜಿಸ್ಟ್ರಾರ್ ಆಗಿದ್ದರು. ಆಗ ಅಲ್ಲಿ ಇತರ ಎಲ್ಲ ವಿಷಯಗಳಿಗೂ ಪ್ರಾಧ್ಯಾಪಕರಿದ್ದರು, ಎಂ ಎ ತರಗತಿಗಳಿದ್ದುವು, ಅವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿದ್ದರು. ಆದರೆ ಕನ್ನಡಕ್ಕೆ ಆ ಸೌಲಭ್ಯವಿರಲಿಲ್ಲ. ಕನ್ನಡ ನಾಡಿನಲ್ಲಿ ಕನ್ನಡಕ್ಕೇ ಆದ್ಯತೆಯಿರಲಿಲ್ಲ. ಶ್ರೀ ಅವರ ಪ್ರಯತ್ನ, ಬ್ರಜೇಂದ್ರನಾಥಸೀಲರ ಒತ್ತಾಸೆ ಹಾಗೂ ನಾಲ್ವಡಿಯವರ ಬೆಂಬಲದಿಂದ ಕನ್ನಡ ಆನರ್ಸ್ ಹಾಗೂ ಎಂಎ ತರಗತಿಗಳು ಆರಂಭವಾದವು. ಅದರ ಮೊದಲ ಪ್ರಾಧ್ಯಾಪಕರಾಗಿ ಟಿ.ಎಸ್. ವೆಂಕಣ್ಣಯ್ಯ ನೇಮಕಗೊಂಡರು. ಇಲ್ಲಿಯೂ ಒಂದು ಸಂಗತಿ ಗಮನಿಸಬೇಕು. ವೆಂಕಣ್ಣಯ್ಯನವರು ಈ ಹುದ್ದೆ ತಮ್ಮ ಆಪ್ತ ಗೆಳೆಯ ಎ.ಆರ್.ಕೃಷ್ಣಶಾಸ್ತ್ರಿಗಳಿಗೆ ನ್ಯಾಯವಾಗಿ ಸಲ್ಲಬೇಕೆಂದು ಅರ್ಜಿ ಸಲ್ಲಿಸದೆ ಸುಮ್ಮನಿದ್ದರು. ಬಿಎಂಶ್ರೀ ಮಧ್ಯಪ್ರವೇಶದಿಂದಾಗಿ ವೆಂಕಣ್ಣಯ್ಯ ಕನ್ನಡದ ಮೊದಲ ಪ್ರಾಧ್ಯಾಪಕರಾದರು.
ವೆಂಕಣ್ಣಯ್ಯನವರು ನಾಡು ಕಂಡ ಅತ್ಯುತ್ತಮ ಪ್ರಾಧ್ಯಾಪಕ. ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕೃತ ಸಾಹಿತ್ಯದಲ್ಲಿ ಅವರಿಗೆ ಪ್ರವೇಶವಿತ್ತು. ಮೀಮಾಂಸೆ, ತತ್ವಶಾಸ್ತ್ರ ಅವರ ಆಸಕ್ತಿಯ ವಿಷಯಗಳಾಗಿದ್ದವು. ಅವರ ಶಿಷ್ಯವಾತ್ಸಲ್ಯವಂತೂ ಅನನ್ಯವಾದುದು. ಅವರ ಪ್ರೀತಿಯ ಶಿಷ್ಯವೃಂದದಲ್ಲಿ ಕುವೆಂಪುಗೆ ವಿಶೇಷ ಸ್ಥಾನವಿತ್ತು. ಕುವೆಂಪು ಅವರಿಗೂ ಗುರುಗಳಾದ ವೆಂಕಣ್ಣಯ್ಯನವರೆಂದರೆ ಅಪರಿಮಿತ ಗೌರವ. ಶ್ರೀರಾಮಾಯಣದರ್ಶನಂ ಮಹಾಕಾವ್ಯವನ್ನು ಅವರಿಗೇ ಅರ್ಪಿಸುತ್ತ ‘ಇದೊ ಮುಗಿಸಿ ತಂದಿಹೆನ್ ಈ ಬೃಹದ್ಗಾನಮಂ/ನಿಮ್ಮ ಸಿರಿಯಡಿಗೊಪ್ಪಿಸಲ್ಕೆ, ಓ ಪ್ರಿಯಗುರುವೆ/ಕರುಣಿಸಿಂ ನಿಮ್ಮ ಹರಕೆಯ ಬಲದ ಶಿಷ್ಯನಂ...’ ಎಂದು ತುಂಬು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಹಾಗೆ ನೋಡಿದರೆ ಕುವೆಂಪು ‘ಕಾನೂರು ಹೆಗ್ಗಡಿತಿ’ ಬರೆಯಲೂ ವೆಂಕಣ್ಣಯ್ಯನವರೇ ಪ್ರೇರಕಶಕ್ತಿ. ಕುವೆಂಪು ಪ್ರಕಾರ ವೆಂಕಣ್ಣಯ್ಯ ವ್ಯಕ್ತಿತ್ವ ಪ್ರಖರವಾದುದಲ್ಲ, ಸೌಮ್ಯವಾದುದು. ಸೂರ್ಯಕಾಂತಿಯಂತೆ ಕಣ್ಣು ಕೋರೈಸುತ್ತಿರಲಿಲ್ಲ; ಚಂದ್ರಕಾಂತಿಯಂತೆ ಸಂಮೋಹಕವಾಗಿತ್ತು. ಇತರ ಅನೇಕ ಅಧ್ಯಾಪಕರಂತೆ ಗೌನು ತೊಟ್ಟು ಠೀವಿಯಿಂದ ಉಪನ್ಯಾಸ ಮಾಡುತ್ತಿರಲಿಲ್ಲ; ಕುರ್ಚಿ ಮೇಲೆ ಕುಳಿತು ಮಾತನಾಡುತ್ತಿದ್ದರು. ಅವರು ಎಲ್ಲ ವಿದ್ಯಾರ್ಥಿಗಳನ್ನು ಕುರಿತು ಸಾಮೂಹಿಕವಾಗಿ ಮಾತನಾಡುತ್ತಿದ್ದರೂ ಪ್ರತಿಯೊಬ್ಬನಿಗೂ ಅವರು ತನ್ನನ್ನೇ ಗಮನಿಸಿ ಸಂಭಾಷಿಸುತ್ತಿದ್ದಾರೆ ಎಂಬ ವೈಯಕ್ತಿಕ ಭಾವ ಮೂಡುತ್ತಿತ್ತು. ಅದುವರೆಗೆ ಇಂಗ್ಲಿಷ್ ತರಗತಿಗಳಲ್ಲಿ ಮಾತ್ರವೇ ಕೇಳುತ್ತಿದ್ದ ಪಠ್ಯವಿಷಯ ಪ್ರತಿಪಾದನಾ ವಿಧಾನವನ್ನು ಮತ್ತು ಕಾವ್ಯಮೀಮಾಂಸಾತ್ಮಕವಾದ ವಿಮರ್ಶಾತ್ಮಕ ರೀತಿಯನ್ನು ಕನ್ನಡದ ತರಗತಿಗಳಲ್ಲೂ ಕೇಳುವಂತಾಗಿ ನಮ್ಮ ಭಾಷಾಭಿಮಾನಕ್ಕೆ ಕೋಡು ಮೂಡಿದಂತಾಯಿತು. ನಮ್ಮ ಕವಿಗಳು, ಕಾವ್ಯಗಳು ಇಂಗ್ಲಿಷ್ ಕವಿಗಳಿಗೂ, ಕಾವ್ಯಗಳಿಗೂ ಬಿಟ್ಟು ಕೊಡುವುದಿಲ್ಲ ಎಂಬ ಹೆಮ್ಮೆಯಿಂದ ಹಿಗ್ಗುವಂತಾಯಿತು.
ಮಾತೃವಾತ್ಸಲ್ಯದ ವೆಂಕಣ್ಣಯ್ಯನವರು ತಾವು ಬರೆದುದಕ್ಕಿಂತ ಬರೆಯುವವರಿಗೆ ಪೋ›ತ್ಸಾಹ ನೀಡಿ ಪೋಷಿಸುವುದರಲ್ಲೇ ಹೆಚ್ಚು ತೊಡಗಿಸಿಕೊಂಡಂತೆ ತೋರುತ್ತದೆ. ‘ಕನ್ನಡದ ಅಶ್ವಿನಿ ದೇವತೆ’ಗಳೆಂದು ಖ್ಯಾತರಾಗಿದ್ದ ಎ.ಆರ್.ಕೃಷ್ಣಶಾಸ್ತ್ರಿ ಮತ್ತು ವೆಂಕಣ್ಣಯ್ಯ ಹೊಸ ಜನಾಂಗದ ಆಶೋತ್ತರಗಳಿಗೆ ಪೂರಕವಾಗುವಂತೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸ್ಥಾಪಿಸಿದ ಕರ್ನಾಟಕ ಸಂಘ ಹಾಗೂ ಆರಂಭಿಸಿದ ‘ಪ್ರಬುದ್ಧ ಕರ್ನಾಟಕ’ ಸಾಹಿತ್ಯಕ ಪತ್ರಿಕೆ ಅನೇಕ ಪ್ರತಿಭಾವಂತ ಪ್ರತಿಭೆಗಳಿಗೆ ಪ್ರೇರಣೆ ಒದಗಿಸಿದ್ದು ಇತಿಹಾಸ. ಹೊಸ ಪೀಳಿಗೆಯ ಬಗ್ಗೆ ಅವರಿಗೆ ಅಪರಿಮಿತ ವಿಶ್ವಾಸವಿತ್ತು. ಈ ಸಂದರ್ಭದಲ್ಲಿ ಒಂದು ಪ್ರಸಂಗವನ್ನು ಹೇಳಲೇಬೇಕು. ಇದನ್ನು ಕುವೆಂಪು ದಾಖಲಿಸುತ್ತಾರೆ: ‘ಒಮ್ಮೆ ಶ್ರೀರಂಗಪಟ್ಟಣದಲ್ಲಿ ಯುವಜನ ಸಮ್ಮೇಳನದ ಸಂದರ್ಭದಲ್ಲಿ ಬಿಎಂ ಶ್ರೀಕಂಠಯ್ಯನವರ ಅಧ್ಯಕ್ಷತೆಯಲ್ಲಿ ‘ನಾವು ಯುವಕರು ನಿರಂಕುಶಮತಿಗಳಾಗಬೇಕು’ ಎಂಬ ಭಾಷಣ ಮಾಡಿದೆ. ಪತ್ರಿಕೆಗಳಲ್ಲಿ ಕ್ರೋಧಯುಕ್ತವಾದ ಅನೇಕ ಟೀಕೆಗಳು ಬಂದು ಕೋಲಾಹಲವೆದ್ದುವು. ದೂರು ವಿಶ್ವವಿದ್ಯಾನಿಲಯಕ್ಕೂ ಹೋಯಿತು. ವಿಶ್ವವಿದ್ಯಾನಿಲಯ ತನಿಖೆ ನಡೆಸಲು ವಿಭಾಗದ ಮುಖ್ಯಸ್ಥರೂ, ಪ್ರಾಧ್ಯಾಪಕರೂ ಆಗಿದ್ದ ವೆಂಕಣ್ಣಯ್ಯನವರನ್ನು ನೇಮಿಸಿತು. ಅವರು ಆ ಭಾಷಣದ ಪ್ರತಿ ತರಿಸಿಕೊಂಡು ಓದಿ ವಿಶ್ವವಿದ್ಯಾಲಯಕ್ಕೆ ಬರೆದರಂತೆ - ನನ್ನ ಮಗನಿಗೆ ನಾನು ಬುದ್ಧಿ ಹೇಳಬೇಕೆಂದರೆ ಇದಕ್ಕಿಂತಲೂ ಉತ್ತಮವಾಗಿ ಏನನ್ನೂ ಹೇಳಲಾರೆ.’ ಹೊಸದನ್ನು ಹೀಗೆ ಸ್ವೀಕರಿಸುವ ಹಿರಿಯರಿದ್ದರೆ ಪ್ರಗತಿಪರ ಬದಲಾವಣೆ ಸಹಜವಾಗಿ ಸಂಭವಿಸುತ್ತದೆ. ವೆಂಕಣ್ಣಯ್ಯನವರಿಗೆ ಬಂಗಾಳಿ ಭಾಷೆಯಲ್ಲಿ ಪರಿಣತಿ ಇದ್ದುದರಿಂದ ಆ ಭಾಷೆಯ ಗ್ರಂಥಗಳ ಆಧಾರದ ಮೇಲೆ ರಾಮಕೃಷ್ಣ ಪರಮಹಂಸರ ಜೀವನಚರಿತ್ರೆಯನ್ನು ಎ ಆರ್ ಕೃ ಜೊತೆ ಸೇರಿ ಬರೆದರು. ಇದು ಪರಮಹಂಸರ ಬಗ್ಗೆ ಕನ್ನಡದಲ್ಲಿ ಬಂದ ಮೊದಲ ಪುಸ್ತಕ. ಹಾಗೆಯೇ ಶ್ರೀ ರಾಮಕೃಷ್ಣ ಲೀಲಾ ಪ್ರಸಂಗದ ಮೊದಲ ಭಾಗವನ್ನು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದರು. ರವೀಂದ್ರನಾಥ ಠಾಗೂರರ ಹಲವು ಸಾಹಿತ್ಯಕ ಪ್ರಬಂಧಗಳನ್ನು ಕನ್ನಡಕ್ಕೆ ಅನುವಾದಿಸಿ ‘ಪ್ರಾಚೀನ ಸಾಹಿತ್ಯ’ ಎಂಬ ಗ್ರಂಥ ಪ್ರಕಟಿಸಿದರು. ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ ಸಂಗ್ರಹವನ್ನು ಎ ಆರ್ ಕೃ ಅವರೊಡನೆ ಹಾಗೂ ಅವನ ‘ಸಿದ್ಧರಾಮ ಚರಿತೆ’ಯನ್ನು ಡಿಎಲ್ಎನ್ ಅವರೊಡನೆ ಸಂಪಾದಿಸಿದರು. ನಾಗವರ್ಮನ ಕಾದಂಬರಿ ಸಂಗ್ರಹವನ್ನು ಅವರೇ ಸಂಪಾದಿಸಿ ಪ್ರಕಟಿಸಿದರು. ಇದು ಒಂದು ರೀತಿಯಲ್ಲಿ ಗ್ರಂಥಸಂಪಾದನೆಗೆ ಮಾದರಿಯಂತಿದೆ. ಹರಿಹರನ ಬಸವರಾಜದೇವರ ರಗಳೆ ಇವರು ಸಂಪಾದಿಸಿ ಪ್ರಕಟಿಸಿದ ಮತ್ತೊಂದು ಮಹತ್ವದ ಕೃತಿ. ‘ಕನ್ನಡ ಕೈಪಿಡಿ’ಯ ನಾಲ್ಕನೆಯ ಭಾಗವಾಗಿ ಬಂದಿರುವ ‘ಭಾಷಾಚರಿತ್ರೆ’ಯನ್ನು ಬಿಎಂಶ್ರೀ ಅವರೊಡನೆ ಸೇರಿ ರಚಿಸಿದರು. ಆ ಕಾಲಕ್ಕೆ ಅದು ಹೊಸ ಬಗೆಯ ಬರವಣಿಗೆಯಾಗಿತ್ತು. ‘ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಇತರ ಲೇಖನಗಳು’ ಅವರ ಮತ್ತೊಂದು ಮಹತ್ವದ ಕೃತಿ.
ಬರಹ ಹಾಗೂ ಬದುಕಿನ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಪೋಷಿಸಿದ, ಸೃಜನಶೀಲತೆಯನ್ನು ಮುಕ್ತಮನಸ್ಸಿನಿಂದ ಪೋ›ತ್ಸಾಹಿಸಿದ ವೆಂಕಣ್ಣಯ್ಯನವರ ಬಗೆಗಿನ ಮರುಚಿಂತನೆ ನಿಸ್ಸಂದೇಹವಾಗಿ ಸಂಧಿಕಾಲದಲ್ಲಿರುವ ನಮ್ಮ ಈ ಸಂದರ್ಭದ ಅನಿವಾರ್ಯ ಅಗತ್ಯವಾಗಿದೆ.
(ಲೇಖಕರು ಖ್ಯಾತ ವಿಮರ್ಶಕರು)