

ತ್ವಯಾ, ಹಿಂದುಭೂಮೇ ಸುಖಂ ವರ್ಧಿತೋಹಮ್
ಈ ಸಾಲುಗಳನ್ನು ಹೇಳುವಾಗ, ಕೇಳುವಾಗ ಆಗುವ ಅವ್ಯಕ್ತ ಹೆಮ್ಮೆ ವರ್ಣಿಸಲಸಾಧ್ಯ. 1925ರ ವಿಜಯದಶಮಿಯಂದು (ಸೆಪ್ಟೆಂಬರ್ 27) ಡಾ.ಕೇಶವ್ ಬಲಿರಾಮ್ ಹೆಡ್ಗೆವಾರ್ರಿಂದ ಹುಟ್ಟುಹಾಕಲ್ಪಟ್ಟ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಸಕ್ತ ಜಗತ್ತಿನಲ್ಲೇ ಬಲಿಷ್ಠ ಸಂಘಟನೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಸಂಘದ ಮೂಲಉದ್ದೇಶವನ್ನು ಅನುಷ್ಠಾನಕ್ಕೆ ತರಲು ಸ್ವಯಂಪ್ರೇರಣೆ, ಸಮರ್ಪಣಾ ಮನೋಭಾವದಿಂದ ದುಡಿಯುವ ಸ್ವಯಂಸೇವಕರಿಂದ ಇಂದು ನೂರಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳಲ್ಲಿ ಪರಿವಾರವು ದುಡಿಯುತ್ತಿದೆ.
ಕಳೆದ 96 ವರ್ಷಗಳಿಂದ ಸಂಘದ ಶಾಖೆಗಳಲ್ಲಿ ದೇಶಭಕ್ತಿಯ ಸಂಸ್ಕಾರ ಕೊಡಲಾಗುತ್ತಿದೆ. ಆ ಮೂಲಕ ವ್ಯಕ್ತಿನಿರ್ವಣ, ಸಮಾಜನಿರ್ವಣದ ಸಾರ್ಥಕ ಕೆಲಸ ನಡೆಯುತ್ತಿದೆ. ದೇಶದಾದ್ಯಂತ ಪ್ರಸಕ್ತ 39,454 ಶಾಖೆಗಳು ನಡೆಯುತ್ತಿವೆ. ಇವುಗಳ ಪೈಕಿ 27,166 ಶಾಖೆಗಳು ಮೈದಾನಗಳಲ್ಲಿ ನಡೆಯುತ್ತಿದ್ದರೆ, 12,288 ಇ-ಶಾಖೆಗಳು. ಸಂಘಸಂಸ್ಕಾರ, ಶಾಖೆಗಳ ಪರಿಣಾಮ ಕೋಟ್ಯಂತರ ದೇಶಭಕ್ತರು ತಯಾರಾಗಿ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ, ಸಮಾಜ ಸುಧಾರಣೆ, ರಾಜನೀತಿ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಕೇವಲ ದೇಶಭಕ್ತರೇ ತಯಾರಾಗುತ್ತಿದ್ದಾರೆಯೇ ಹೊರತು ಭಯೋತ್ಪಾದಕರಲ್ಲ. ಸಂಘ ಎಂದಿಗೂ ಹಿಂಸೆಯನ್ನು ಬೆಂಬಲಿಸಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿ ವರ್ತಿಸಿಲ್ಲ.
ದೇಶಭಕ್ತಿ ಮತ್ತು ಭಯೋತ್ಪಾದನೆಗೆ ವ್ಯತ್ಯಾಸ ತಿಳಿಯದ ಕೆಲವರು ಸಂಘವನ್ನು ತಾಲಿಬಾನಿಗಳಿಗೆ ಹೋಲಿಸುತ್ತಿರುವುದು ಖಂಡನೀಯ. ಆರೆಸ್ಸೆಸ್ ಕಾರ್ಯ, ಧ್ಯೇಯಗಳನ್ನು ಟೀಕಿಸುವ ನಿಂದಕರಿಗೆ ಸೇವಕರು ಯಾರು? ಸೈತಾನರು ಯಾರು? ಎಂಬುದು ತಿಳಿಯದಂತಾಗಿದೆ. ಹಿಂದುವಿಗೆ ಧಾರ್ವಿುಕ ಸಂಸ್ಕಾರ ಸಿಕ್ಕಿದರೆ ಆತ ಶ್ರೇಷ್ಠ ಹಿಂದುವಾಗುತ್ತಾನೆ. ಅಪ್ಪಟ ದೇಶಭಕ್ತನಾಗುತ್ತಾನೆ. ಬುದ್ಧ, ಮಹಾವೀರ, ಗುರುನಾನಕನಾಗುತ್ತಾನೆ ಹೊರತು ಎಂದಿಗೂ ಭಯೋತ್ಪಾದಕನಾಗಲಾರ.
‘ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯ’
ಎಂಬ ಶ್ಲೋಕದಂತೆ ಪ್ರತಿ ಭಾರತೀಯ ಸುಖೀ ಜೀವನ ಅನುಭವಿಸಲಿ ಎಂಬ ಧ್ಯೇಯ ಆರೆಸ್ಸೆಸ್ನದ್ದು. ದೇಶದ ಶಿಸ್ತುಬದ್ಧ ರಾಷ್ಟ್ರಭಕ್ತ ಸಂಘಟನೆ ಇದು. ಇಲ್ಲಿನ ಕಾರ್ಯಕರ್ತರು ಸ್ವಾರ್ಥ ಮರೆತು ನೆರೆ-ಬರ ಮೊದಲಾದ ಸಂದರ್ಭಗಳಲ್ಲಿ ಜನತೆಯ ರಕ್ಷಣೆಗೆ, ಸಹಾಯಕ್ಕೆ ಧಾವಿಸಿ ನೆರವಾಗಿದ್ದಾರೆ. ವ್ಯವಸ್ಥಿತವಾಗಿ ಕಟ್ಟಲ್ಪಟ್ಟಿರುವ ಈ ಸಂಸ್ಥೆಯ ಒಳರಚನೆ ಹಾಗೂ ಹರವುಗಳು ಇತರರಿಗೂ ಮಾದರಿ. ಮನೆ-ಮಠ, ಸ್ವಂತ ಬದುಕು ಬಿಟ್ಟು ಸಂಘ ಬಯಸುತ್ತಿರುವ ರಾಷ್ಟ್ರನಿರ್ವಣಕ್ಕಾಗಿ ಶ್ರಮಿಸುತ್ತಿರುವ ತ್ಯಾಗಿಗಳ ದೊಡ್ಡಪಡೆಯೇ ಇಲ್ಲಿದೆ. ಸಂಘದ ಅನೇಕ ಕಾರ್ಯಕರ್ತರು ಅಕ್ಷರಶಃ ಸಂತರಂತೆ ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ದೇಶದಲ್ಲಿ ನೈಸರ್ಗಿಕ ಅಥವಾ ಮಾನವ ನಿರ್ವಿುತ ವಿಪತ್ತುಗಳು ಸಂಭವಿಸಿದಾಗ ಸಂಘ ಮಾಡಿದ ಸೇವೆಗಳು ಅನನ್ಯ. ಲಾತೂರ್ ಭೂಕಂಪ, ಗುಜರಾತಿನ ಭೂಕಂಪ, ಸುನಾಮಿಯ ಹೊಡೆತ, ಉತ್ತರಾಖಂಡ, ತಮಿಳುನಾಡಿನ ನೆರೆಯೇ ಆಗಿರಲಿ ಅಲ್ಲಿ ಆರೆಸ್ಸೆಸ್ ನಿಸ್ವಾರ್ಥ ಸೇವೆ ಮೂಲಕ ಮಾನವೀಯತೆ ಮೆರೆದಿದೆ.
ಸೇವಾಕಾರ್ಯಗಳಿಂದ ಸಮಾಜ ನಿರ್ವಣ: ಅಸ್ಸಾಂನ ಗುಡ್ಡಗಾಡು ಪ್ರದೇಶದ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೇವೆ ಕೊಡುವಲ್ಲಿಂದ ಹಿಡಿದು ಅವರನ್ನು ನಾಗರಿಕತೆ ಕಡೆ ಹೆಜ್ಜೆಹಾಕುವಂತೆ ಮಾಡುವಲ್ಲಿ ಸಂಘದ ಕಾರ್ಯ ಅನನ್ಯ. ಕರ್ನಾಟಕದ ಮಲೆನಾಡಿನ ನಕ್ಸಲ್ಪೀಡಿತ ಪ್ರದೇಶಗಳಲ್ಲಿ ಸೇವೆ ಮೂಲಕವೇ ನಕ್ಸಲ್ ನೀತಿಗಳನ್ನು ನಿಮೂಲನೆ ಮಾಡಿದ ಕಾರ್ಯವನ್ನು ಯಾರಾದರೂ ಮರೆಯಲು ಸಾಧ್ಯವೇ? ಕೋವಿಡ್ ಲಾಕ್ಡೌನ್ನಿಂದ ಸಮಾಜ ಸಂಕಷ್ಟದಲ್ಲಿದ್ದಾಗ ಸ್ವಯಂಸೇವಕರು ಮನೆಯಲ್ಲಿದ್ದ ಅಕ್ಕಿ-ಬೇಳೆ ಮತ್ತಿತರ ಪಡಿತರಗಳನ್ನು ನಿರ್ಗತಿಕರಿಗೆ ಹಂಚುವ ಉದಾರತೆಯನ್ನು ಮೆರೆದರು.
ಇದು ಸಂಘ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾ ಭಾರತಿ, ವಿದ್ಯಾರ್ಥಿಗಳ ಸಂಘಟನೆಗಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಚಿಂತಕರಿಗೆ ಭಾರತೀಯ ವಿಚಾರ ಕೇಂದ್ರ, ಕಲಾರಂಗದಲ್ಲಿ ಸಂಸ್ಕಾರ ಭಾರತಿ, ಸಾಹಿತ್ಯ, ಶಿಕ್ಷಣ ಮತ್ತು ಪುಸ್ತಕ ಮುದ್ರಣ ವಿಭಾಗದಲ್ಲಿ ರಾಷ್ಟ್ರೋತ್ಥಾನ ಪರಿಷತ್, ಹೋರಾಟ, ಧರ್ಮಜಾಗೃತಿಗಾಗಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ, ಸ್ವದೇಶಿ ಉತ್ಪನ್ನಗಳ ಬಳಕೆ ಬಗ್ಗೆ ಜಾಗೃತಿಗಾಗಿ ಸ್ವದೇಶಿ ಜಾಗರಣ್ ಮಂಚ್, ರೈತಪರ ಹೋರಾಟಕ್ಕೆ ಭಾರತೀಯ ಕಿಸಾನ್ ಸಂಘ, ಕಾರ್ವಿುಕರ ಪರ ನೀತಿಗಳಿಗಾಗಿ ಭಾರತೀಯ ಮಜ್ದೂರ್ ಸಂಘ, ವನವಾಸಿಗಳ ಹಿತದೃಷ್ಟಿಯಿಂದ ವನ್ಯವಾಸಿ ಕಲ್ಯಾಣ ಆಶ್ರಮಗಳಿದ್ದು ಎಲ್ಲವನ್ನೂ ಸೇರಿ ‘ಸಂಘಪರಿವಾರ’ ಎಂದು ಕರೆಯಲಾಗುತ್ತದೆ. ಇಂತಹ ಸಂಘಟನಾತ್ಮಕ ಶಕ್ತಿಯಾಗಿ, ಭಾರತದ ಐಕ್ಯತೆಗಾಗಿ ಶ್ರಮಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕೆಲ ಆಷಾಢಭೂತಿಗಳು ಬಾಯಿಗೆ ಬಂದಂತೆ ಟೀಕಿಸುತ್ತಿರುವುದು, ಅವರ ಕೊಳಕು ಮನಸ್ಥಿತಿಯ ಪ್ರದರ್ಶನ.
‘ಆತ್ಮ ದೀಪೋ ಭವ’ ಅಂದರೆ ಆತ್ಮದೊಳಗಿನ ಬೆಳಕು ದೀಪವಾಗಿ ಪ್ರಜ್ವಲಿಸಲಿ ಎಂದು ಹೇಳಿದ ಗೌತಮ ಬುದ್ಧನು ಶಾಂತಿ ಬೋಧಿಸಿದ ಅಫ್ಘಾನಿಸ್ತಾನ ಈಗ ರಕ್ತಪಿಪಾಸುಗಳ ಸುಳಿಗೆ ಸಿಲುಕಿ ಕ್ರೌರ್ಯದಲ್ಲಿ ನರಳುತ್ತಿದೆ. 1947ರಲ್ಲಿ ದೇಶವಿಭಜನೆ, ಅದರಿಂದಾದ ರಕ್ತಪಾತಕ್ಕೆ ಯಾರು ಕಾರಣ? ಭಾರತದ ಮೇಲೆ ಭಯೋತ್ಪಾದನೆಯ ಕರಿನೆರಳು ಬಿದ್ದಿದ್ದು ಐತಿಹಾಸಿಕ ತಪು್ಪ ಮಾಡಿದ ಕಾಂಗ್ರೆಸ್ ನಾಯಕರಿಂದ. ತಾಲಿಬಾನ್ಗೆ ನೆರವು ಕೊಡುತ್ತ, ಭಯೋತ್ಪಾದನೆಯನ್ನು ಪೋಷಿಸುತ್ತ ಭಾರತಕ್ಕೆ ಮಗ್ಗುಲು ಮುಳ್ಳಾಗಿರುವ ಪಾಕಿಸ್ತಾನ ಜಮ್ಮು-ಕಾಶ್ಮೀರದಲ್ಲಿ ಮಾಡಿದ ಭಯೋತ್ಪಾದಕ ಕೃತ್ಯಗಳಿಗೆ ಕೊನೆ ಮೊದಲಿಲ್ಲ. ಇಂದಿಗೂ ಪಾಕಿಸ್ತಾನದ ಉಗ್ರರು ಡ್ರೋನ್ ಮೂಲಕ, ಅಕ್ರಮವಾಗಿ ನುಸುಳುವ ಮೂಲಕ ಕ್ರೌರ್ಯ ಮೆರೆಯುತ್ತಿದ್ದಾರೆ.
ನಿತ್ಯವೂ ಸಂಕಷ್ಟ ಅನುಭವಿಸುತ್ತಿರುವ ಜಮ್ಮು-ಕಾಶ್ಮೀರದ ಜನರಿಗೆ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಆಶಯಗಳಿಗೆ ಬದ್ಧವಾಗಿ ಶಾಶ್ವತ ನೆಲೆ ಕಲ್ಪಿಸಲು ಕಂಕಣಬದ್ಧವಾಗಿದೆ. ನಮ್ಮ ಪಕ್ಷದ ನಾಯಕರ ಚಿಂತನೆಗಳಿಗೆ ಶಕ್ತಿಯಾಗಿ ನಿಂತಿರುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿಗಳೇ. ಅಫ್ಘಾನಿಸ್ತಾನ, ಪಾಕಿಸ್ತಾನ ಅಥವಾ ವಿಶ್ವದ ಯಾವುದೇ ದೇಶದಲ್ಲಿ ಉಗ್ರರು ಅಟ್ಟಹಾಸ ಮೆರೆದರೆ ಅದನ್ನು ಖಂಡಿಸುವ ಮನಸ್ಥಿತಿ ಇರುವವನೇ ನಿಜವಾದ ಮನುಷ್ಯ. ಅದರ ಬದಲು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಭಯೋತ್ಪಾದಕ ಸಂಘಟನೆಗೆ ಹೋಲಿಸುವ ವಿಕೃತ ಮನಸ್ಸುಗಳಿಗೆ ಇದೆಲ್ಲವೂ ಅರ್ಥವಾಗುವುದಿಲ್ಲ.
ಭಯೋತ್ಪಾದನೆ ಎಂಬುದು ಪ್ರಸ್ತುತ ಜಾಗತಿಕ ಸಮಸ್ಯೆಯಾಗಿ ಕಾಡುತ್ತಿದೆ. ಮುಕ್ತವಾಗಿ ಜೀವಿಸಲು ಬಿಡದೇ ಇರುವವರು ಯಾರೇ ಆಗಿರಲಿ, ಯಾವ ಹಿನ್ನೆಲೆಯಿಂದಲೇ ಬಂದಿರಲಿ, ಯಾವುದೇ ಧರ್ಮ, ಮತದ ನಂಬಿಕಸ್ಥರೇ ಇರಲಿ- ಅವರನ್ನು, ಅವರ ಕೃತ್ಯವನ್ನು ಎಲ್ಲರೂ ಖಂಡಿಸಲೇ ಬೇಕು. ಭಯೋತ್ಪಾದನೆ ವಿರುದ್ಧ ನಾವೆಲ್ಲ ಒಟ್ಟಾಗಬೇಕಿದೆ. ಭಯೋತ್ಪಾದಕರು ಎಂದರೆ ಬಂದೂಕು ಹಿಡಿದವರಷ್ಟೇ ಅಲ್ಲ. ಅವರನ್ನು ಪೋಷಿಸುವ, ಪಾಲನೆ ಮಾಡುವ ವ್ಯಕ್ತಿಗಳು ರಕ್ತಬೀಜಾಸುರರಿಗೆ ಸಮ. ಭಯೋತ್ಪಾದಕರಿಗೆ ವೈಚಾರಿಕ ಬೆಂಬಲ ನೀಡುವವರ ಬಗ್ಗೆ ಎಲ್ಲರೂ ಎಚ್ಚರದಿಂದ ಇರಬೇಕು.
ಮತಾಂಧರಿಗೆ ಕರುಣೆ, ಮಾನವೀಯತೆ, ಮಾತೃತ್ವ ಪದದ ಅರ್ಥ ಗೊತ್ತಿರುವುದಿಲ್ಲ. ವಿಶ್ವವನ್ನು ಇಸ್ಲಾಮಿಕರಣಗೊಳಿಸುವ ನಿಟ್ಟಿನಲ್ಲಿ ಹಿಂಸೆ ಹರಡುತ್ತಿರುವ ಭಯೋತ್ಪಾದಕರಿಗೆ ನಾಳೆಗಳ ಬಗ್ಗೆ ಅರಿವಿಲ್ಲ. ಸಮ ಸಮಾಜದ ಕಲ್ಪನೆಗಳಿಲ್ಲ. ಅವರ ಚಿಂತನೆಗಳೇನಿದ್ದರೂ ಮತೀಯ ಕಟ್ಟುಪಾಡುಗಳೇ. ಅಪ್ಘಾನಿಸ್ತಾನದಲ್ಲಿ ಇಂದು ಬಂದೂಕು ಹಿಡಿದವನು ಅದೇ ದೇವರನ್ನು ಕೂಗುತ್ತಿದ್ದಾನೆ. ಪ್ರಾಣಭಿಕ್ಷೆಯಿಂದ ಓಡುವವ ಸಹ ಅದೇ ದೇವರನ್ನು ಕರೆಯುತ್ತಿದ್ದಾನೆ. ಒಂದೇ ದೇವರನ್ನು ಆರಾಧಿಸುವವರು ಅಫ್ಘನ್ನಲ್ಲಿ ಪರಸ್ಪರ ಎದುರುಬದರಾಗಿದ್ದಾರೆ. ಯಾಕಾಗಿ? ಅವರಲ್ಲಿರುವ ಕುರುಡು ನಂಬಿಕೆ ಮತ್ತು ಆರಾಧನೆಗಳಿಂದ.
ವ್ಯಕ್ತಿ ಸ್ವಚ್ಛಂದವಾಗಿ ಜೀವಿಸಬೇಕು. ಉದ್ಯೋಗ, ಜೀವನ, ಮನೆ-ಮಕ್ಕಳು, ಸಂಸ್ಕೃತಿ, ಆಚಾರ-ವಿಚಾರಗಳಿಂದ ಜೀವಿಸುವುದೇ ನಿಜವಾದ ಸ್ವಾತಂತ್ರ್ಯ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ ಆಶಯಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಬಲ ತುಂಬುತ್ತಿದೆ. ಸಂಪತ್ತು, ಆರ್ಥಿಕತೆ, ಸ್ವಾತಂತ್ರ್ಯ ಕೆಲವೇ ವರ್ಗಕ್ಕೆ ಸೀಮಿತವಾಗದೆ ಅಥವಾ ವ್ಯಕ್ತಿಕೇಂದ್ರಿತವಾಗದೆ ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೆ ಸಲ್ಲಬೇಕು. ಇದನ್ನೇ ದೀನದಯಾಳ ಉಪಾಧ್ಯಾಯ ‘ಅಂತ್ಯೋದಯ’ ಎಂದು ಕರೆದರು. ಇದೇ ಧಾಟಿಯಲ್ಲಿ ಗಾಂಧೀಜಿ ಭಾರತ ‘ರಾಮರಾಜ್ಯ’ವಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ನಿಟ್ಟಿನಲ್ಲಿ ಸಮಾಜದ ಏಳಿಗೆಗೆ ಸಂಘದ ಕಾರ್ಯಕರ್ತರು ಕ್ರಿಯಾಶೀಲರಾಗಿ ದುಡಿಯುತ್ತಿದ್ದಾರೆ. ವ್ಯಕ್ತಿನಿರ್ವಣದ ಕೆಲಸವನ್ನು ಮಾಡುತ್ತಿದ್ದಾರೆ. ಇದೊಂದು ದೀರ್ಘಕಾಲೀನ ಪ್ರಕ್ರಿಯೆ. ಸಂಘ ಸ್ಥಾಪನೆಯಾಗಿ 96 ವರ್ಷಗಳು ತುಂಬುತ್ತಿವೆ. ಆರೆಸ್ಸೆಸ್ ಅಂಗಳದಲ್ಲಿ ಬೆಳೆದು, ರಾಷ್ಟ್ರಕಾರ್ಯದ ಪ್ರೇರಣೆ ಪಡೆದವರು ದೊಡ್ಡ ನಾಯಕರಾಗಿ ಈ ದೇಶಕ್ಕೆ ಕೊಡುಗೆಗಳನ್ನು ಕೊಟ್ಟಿದ್ದಾರೆ. ನಾನಾಜಿ ದೇಶಮುಖ್, ಪಂಡಿತ್ ದೀನದಯಾಳ ಉಪಾಧ್ಯಾಯ, ಏಕನಾಥ ರಾನಡೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹಾದಿಯಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿ ಹೆಜ್ಜೆ ಹಾಕುತ್ತಿದ್ದಾರೆ.
ಆರೆಸ್ಸೆಸ್ ಎಂದಿಗೂ ಮೀಸಲಾತಿಯನ್ನು ವಿರೋಧಿಸಿಲ್ಲ. ಬದಲಾಗಿ ಅದು ಹಕ್ಕು ಎಂದೇ ಸ್ಪಷ್ಟಪಡಿಸಿದೆ. ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಇರುವ ಮುಸಲ್ಮಾನರಿಗಿಂತ ಭಾರತದಲ್ಲಿ ನೆಲೆಸಿರುವ ಮುಸಲ್ಮಾನರು ಸುರಕ್ಷಿತ ಮತ್ತು ಸುಶಿಕ್ಷಿತರಾಗಿದ್ದಾರೆ. ಈ ದೇಶದಲ್ಲಿ ಇನ್ನೂ ಜೀವಂತವಾಗಿರುವ ಅನಿಷ್ಠ ಪದ್ಧತಿಗಳಾದ ಜಾತಿ ಪದ್ಧತಿ,
ಅಸ್ಪಶ್ಯತೆ ತೊಲಗಿಸಲು ಸಂಘದ ಸೇವಾಕರ್ತರು ಪ್ರಚಾರ ಬಯಸದೆ ಸ್ವಾರ್ಥರಹಿತವಾಗಿ ಶ್ರಮಿಸುತ್ತಿದ್ದಾರೆ. ಜಾತಿ, ಧರ್ಮ, ಮತ-ಪಂಥಗಳನ್ನು ಲೆಕ್ಕಿಸದೆ ಎಲ್ಲರೂ ಭಾರತೀಯರೇ ಎನ್ನುವ ದೃಷ್ಟಿಕೋನದೊಂದಿಗೆ ನಿರಂತರ ಸೇವೆಸಲ್ಲಿಸುತ್ತ ಬಂದಿದ್ದಾರೆ. ನೊಂದವರಿಗೆ ನೆರವಾಗಿ, ಬೆಂದವರಿಗೆ ಆಸರೆಯಾಗಿ, ದೀನ ದಲಿತರಿಗೆ ದಾರಿದೀಪವಾಗಿ ಎಲ್ಲರನ್ನೂ ಮೇಲೆತ್ತಿ ದೇಶರಕ್ಷಣೆ ಜೊತೆಗೆ ಭಾರತದ ಕೀರ್ತಿಯನ್ನು ಉತ್ತುಂಗಕ್ಕೇರುವಂತೆ ಮಾಡುತ್ತಿದ್ದಾರೆ.
ಇಂಥ ನಿಸ್ವಾರ್ಥ ಸೇವಾ ಮನೋಭಾವ, ಬದ್ಧತೆ ಹೊಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅರ್ಥಮಾಡಿಕೊಳ್ಳಬೇಕಾದರೆ ಸರಿಯಾದ ಅಧ್ಯಯನ, ಸರಿಯಾದ ದೃಷ್ಟಿ ಅಗತ್ಯ. ಪೂರ್ವಗ್ರಹದಿಂದ ಟೀಕಿಸುವ ವ್ಯಕ್ತಿಗಳಿಗೆ ವಾಸ್ತವ ಗೋಚರಿಸುವುದೇ ಇಲ್ಲ. ಅದಕ್ಕಾಗಿ ಒಮ್ಮೆ ಆರೆಸ್ಸೆಸ್ ಶಾಖೆಗೆ ಬಂದು ವಾಸ್ತವ ಅರ್ಥಮಾಡಿಕೊಳ್ಳಿ.
(ಲೇಖಕರು ಶಾಸಕರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ)