ಸೂರ್ಯೋಪಾಸಕನಲ್ಲಿರಬೇಕಾದ ನಾಲ್ಕು ಗುಣಗಳು

Ratha Sapthami
Published on
ಯೋಗಾಸನಗಳಲ್ಲಿ ಸೂರ್ಯ ನಮಸ್ಕಾರಕ್ಕೆ ವಿಶೇಷ ಪ್ರಾಶಸ್ಱವಿದೆ. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿವೆ. ಸೂರ್ಯನಿಲ್ಲದೆ ಏನೂ ನಡೆಯದು. ಇಂಥ ಸೂರ್ಯ ಮಾರ್ಗಶಿರ ಮಾಸದ ಶುಕ್ಲಪಕ್ಷದ ಸಪ್ತಮಿಯಂದು ಸಿಂಹರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ದಿನವನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸೂರ್ಯೋಪಾಸನೆಯ ಕುರಿತು ಈ ಬರಹ.

ಮಹರ್ಷಿ ಅಗಸ್ಱರು ಶ್ರೀರಾಮಚಂದ್ರನಿಗೆ ಬೋಧಿಸಿದ ಸೂರ್ಯೋಪಾಸನಾ ‘ಆದಿತ್ಯ ಹೃದಯ’ ಸ್ತೋತ್ರದಲ್ಲಿ ಸೂರ್ಯಮಂಡಲದ ಸ್ವರೂಪ ಮತ್ತು ಮಹಿಮೆಗಳು ಅತ್ಯಂತ ಸುಂದರವಾಗಿ ವರ್ಣಿತವಾಗಿವೆ.

‘ಯನ್ಮಂಡಲಂ ವ್ಯಾಧಿವಿನಾಶದಕ್ಷಂ,

ಯದೃಗ್ಯಜುಸ್ಸಾಮ ಸುಸಂಪ್ರಗೀತಮ್ |

ಪ್ರಕಾಶಿತಂ ಯೇನಚ ಭೂರ್ಭವ ಸ್ವಃ

ಪುನಾತುಮಾಂ ತತ್ಸವಿತುರ್ವರೇಣ್ಯಮ್ ||

ಸೂರ್ಯ ಮಂಡಲವು ರೋಗಗಳನ್ನು ನಾಶಮಾಡುವುದರಲ್ಲಿ ಅತ್ಯಂತ ಸಮರ್ಥವಾಗಿದೆ. ಋಕ್, ಯಜುಸ್, ಸಾಮ ಎಂಬ ಮೂರು ವೇದಗಳಲ್ಲೂ ಸೂರ್ಯ ಮಂಡಲವು ಅತ್ಯಂತ ಶ್ರೇಷ್ಠವಾಗಿ ಗಾನ ಮಾಡಲ್ಪಟ್ಟಿದೆ. ಸೂರ್ಯಮಂಡಲವು ಭೂಃ ಭುವಃ ಸ್ವ ಎಂಬ ಮೂರು ಲೋಕಗಳನ್ನೂ ಬೆಳಗುತ್ತಿದೆ. ಅತ್ಯಂತ ಪವಿತ್ರವೂ ಪ್ರಾರ್ಥನೀಯವೂ ಆದ ಆ ಸೂರ್ಯ ಮಂಡಲವು ನನ್ನನ್ನು ಪವಿತ್ರಗೊಳಿಸಲಿ ಎಂದು ಈ ಶ್ಲೋಕದ ಅರ್ಥವಾಗಿದೆ.

ಪ್ರತಿದಿನದ ಸಂಧ್ಯೋಪಾಸನೆಯೂ ಸೂರ್ಯೋಪಾಸನೆಯೇ ಆಗಿದೆ. ಇದು ಗಾಯತ್ರಿಯ ಉಪಾಸನೆಯೂ ಆಗಿದೆ. ದೀರ್ಘಾಯಸ್ಸು. ಶುದ್ಧ ವಾದ ಪ್ರಜ್ಞೆ, ಕೀರ್ತಿ, ಬ್ರಹ್ಮವರ್ಚಸ್ಸುಗಳನ್ನು ಪಡೆಯಲು ಗಾಯತ್ರಿಯ ಉಪಾಸ ನೆಯು ಏಕಮಾತ್ರ ಕಾರಣವಾಗಿದೆ. ಮೂರು ಸಂಧ್ಯಾ ಕಾಲಗಳಲ್ಲೂ ಪ್ರಾಣಾಯಾಮ ಮತ್ತು ಸಮಾಧಿಯ ಮೂಲಕವಾಗಿ ಸವಿತೃಭಗವಂತನ ವರೇಣ್ಯವಾದ ತೇಜ ಸ್ಸನ್ನು ಧ್ಯಾನಮಾಡುತ್ತಾ ಗಾಯತ್ರೀ ಮಂತ್ರ ಜಪವನ್ನು ಮಾಡಬೇಕು. ಹೀಗೆ ಗಾಯತ್ರೀ ಜಪದ ಮೂಲಕವಾಗಿ ಸೂರ್ಯ ಭಗವಂತನ ಉಪಾಸನೆ ನಡೆಯುತ್ತದೆ.

ಸೂರ್ಯೋಪಾಸಕನ ಮುಖ್ಯಗುಣಗಳು: ಸಾತ್ವಿಕ ಆಹಾರ, ಸತ್ಯಭಾಷಣ, ಸಂಯಮ, ಸತ್ಸಂಗ. ಈ ಗುಣಗಳಿಂದ ಕೂಡಿದ ಉಪಾಸಕನು ಉಪಾಸನೆ ಯಲ್ಲಿ ಸಿದ್ಧಿಯನ್ನು ಹೊಂದುತ್ತಾನೆ. ಸಾತ್ವಿಕ ಆಹಾರದ ಮಹಿಮೆ ಯಂತೂ ಯೋಗಶಾಸ್ತ್ರ, ಧರ್ಮಶಾಸ್ತ್ರ ಆಯುರ್ವೆದ ಶಾಸ್ತ್ರಗಳಲ್ಲಿ ವಿಫುಲವಾಗಿ ವರ್ಣಿತವಾಗಿದೆ. ಆಹಾರ ಶುದ್ಧಿಯಿಂದ ಚಿತ್ತಶುದ್ಧಿ ಯುಂಟಾಗುತ್ತದೆ. ಚಿತ್ತಶುದ್ಧಿಯಿಂದ ಅಪರೋಕ್ಷಜ್ಞಾನ, ತತ್ತ್ವಸಾಕ್ಷಾತ್ಕಾರವನ್ನು ಪಡೆಯಬಹುದು.

ಹಿತವೂ ಮಿತವೂ ಪ್ರಿಯವೂ ಸತ್ಯವೂ ಆದ ವಚನದಿಂದ ವಾಕ್ ಸಿದ್ದಿಯು ಉಂಟಾಗುವುದರ ಮೂಲಕ ತತ್ತ್ವಸಾಕ್ಷಾತ್ಕಾರಕ್ಕೆ ಬೇಕಾದ ಚಿತ್ತಪ್ರಸಾದವು ಲಭಿಸುತ್ತದೆ. ಮನಸ್ಸನ್ನು ಮತ್ತು ಇಂದ್ರಿಯಗಳನ್ನು ವಶದಲ್ಲಿ ಇಟ್ಟುಕೊಳ್ಳುವುದು ಸಂಯಮ. ಸಂಯಮಶೀಲನಾದ ಉಪಾಸಕನು ಮಾತ್ರ ಸಿದ್ದಿಯನ್ನು ಹೊಂದಬಲ್ಲನು. ನಾನಾವಿಧವಾದ ವಿಘ್ನಗಳನ್ನು ಪರಿಹರಿಸಿ ಕೊಳ್ಳಬಹುದು. ಸತ್ಸಂಗದಿಂದ ಉಪಾಸನೆಯಲ್ಲಿ ಉತ್ಸಾಹವು ವೃದ್ಧಿಗೊಂಡು ಸಾಧನಾ ಮಾರ್ಗವು ಸುಗಮವಾಗಿ ಶೀಘ್ರವಾಗಿ ಸಿದ್ದಿಯು ದೊರೆಯುವುದು. ಈ ನಾಲ್ಕು ಗುಣಗಳು ಉಪಾಸಕನಲ್ಲಿದ್ದರೆ ಇತರ ಅವಶ್ಯವಾದ ಸದ್ಗುಣಗಳು ತಾವಾಗಿಯೇ ಬೆಳೆಯುತ್ತವೆ.

ಸೂರ್ಯೋಪಾಸನೆಯಲ್ಲಿ ಸೂರ್ಯ ನಮಸ್ಕಾರವು ಅತ್ಯಂತ ಪ್ರಮುಖವಾದ ಒಂದು ಅಂಶವಾಗಿದೆ. ಯೋಗ ಮಾರ್ಗದ ಸಿದ್ದಿ ಮತ್ತು ವ್ಯಾಧಿ ನಿವಾರಣೆಯ ಮೂಲಕ ಶರೀರದ ಆರೋಗ್ಯ ಸಂರಕ್ಷಣೆಗಳಿಗಾಗಿ ಸೂರ್ಯನಮಸ್ಕಾರವು ಅತ್ಯಂತ ಆವಶ್ಯಕವಾಗಿದೆ. ಸೂರ್ಯನ ಪ್ರಕಾಶ ಮತ್ತು ತೇಜಸ್ಸುಗಳಿಂದ ಶರೀರದ ಆರೋಗ್ಯದ ಮೇಲೆ ಬಹಳ ಉತ್ತಮವಾದ ಪರಿಣಾಮ ಉಂಟಾಗುತ್ತದೆ. ಸೂರ್ಯನಮಸ್ಕಾರದಿಂದ ಬುದ್ಧಿಯ ಬೆಳವಣಿಗೆ ಉತ್ತಮ ಆಗುತ್ತದೆ. ‘ಶರೀರಮಾದ್ಯಂ ಖಲು ಧರ್ಮಸಾಧನಮ್ ಎಂಬಂತೆ ಮಾನವ ಶರೀರವು ಧರ್ಮಸಾಧನೆಗೆ ಉತ್ತಮ ಸಾಧನವಾಗಿದೆ. ‘ಧರ್ವರ್ಥ ಕಾಮಮೋಕ್ಷಾಣಾಂ ಆರೋಗ್ಯಂ ಮೂಲ ಮುತ್ತಮಮ್ ಎಂದು ಹೇಳಿರುವುದರಿಂದ ನಾಲ್ಕು ಪುರುಷಾರ್ಥಗಳ ಸಿದ್ದಿಗೆ ಶರೀರದ ಆರೋಗ್ಯವೇ ಮೂಲ ಕಾರಣವಾಗಿದೆ. ಸೂರ್ಯ ನಮಸ್ಕಾರದಿಂದ ಶರೀರ ಇಂದ್ರಿಯ ಮನಸ್ಸು ಬುದ್ಧಿಗಳ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net