ಕುಸುಮಾಕರರ ಕಾವ್ಯಸಲ್ಲಾಪದ ನೆನಪಿನ ಯಾನ

Kusumakara
Published on
ನಾನು ಎಂಬ ಒಂಟಿ ಭಾವ ಹೋಗಿ ನಾವು ಎಂಬ ಜಂಟಿ ಜವಾಬ್ದಾರಿ ಬರುವ ಮದುವೆ ಜೀವನದಲ್ಲಿ ಅತಿ ಮಹತ್ವದ ಘಟ್ಟ. ‘ಸಪ್ಪೆ ಬಾಳುವೆಗಿಂತ ಉಪ್ಪು ನೀರೂ ಲೇಸು’ ಎಂದು ವರಕವಿ ಬೇಂದ್ರೆಯವರು ಹೇಳಿದಂತೆ ಬದುಕಿಗೊಂದು ಜೊತೆ ಬೇಕು. ಸಿರಿತನವೋ ಬಡತನವೋ ಏನೇ ಇದ್ದರೂ ಪ್ರೀತಿಯೆಂಬ ಅಂತರಗಂಗೆಯ ಚಿಲುಮೆ ಬತ್ತದಂತೆ ನೋಡಿಕೊಳ್ಳುವ ಜೀವದ ಗೆಳತಿ ಜೊತೆಯಲ್ಲಿದ್ದರಷ್ಟೇ ಬದುಕಿಗೊಂದು ಅರ್ಥ.

ಕನ್ನಡ ಸಾಹಿತ್ಯದಲ್ಲಿ ದಾಂಪತ್ಯ ಗೀತೆಗಳೆಂದಾಗ ಬೇಂದ್ರೆ, ಕುವೆಂಪು, ವಿನಾಯಕ ಕೃಷ್ಣ ಗೋಕಾಕ್, ಕೆ.ಎಸ್. ನರಸಿಂಹ ಸ್ವಾಮಿಯವರ ಮೇರುಕಾವ್ಯಗಳನ್ನು ನೆನೆಯದೆ ಮುಂದೆ ಸಾಗಲಾಗದು. ಇವರಿಗಿಂತ ಮುಂಚಿತವಾಗಿ ‘ರಾಮಾಶ್ವಮೇಧ’ದಲ್ಲಿ ಮುದ್ದಣ ಮನೋರಮೆಯರ ಸಾಹಿತ್ಯ ಸಲ್ಲಾಪದ ರೂಪದಲ್ಲಿ ಅಜರಾಮರವಾದ ಪ್ರಸಂಗವನ್ನೂ ನೆನೆಯಲೇಬೇಕು. ಬೇಂದ್ರೆಯವರು ‘ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ’ ಎಂದು ಸುಖದುಃಖದಲ್ಲಿ ಹೆಗಲುಗೊಟ್ಟ ಪತ್ನಿಯನ್ನು ಕಾವ್ಯಸ್ಪೂರ್ತಿಯಾಗಿ ಸ್ಮರಿಸಿದರೆ, ‘ಚೆಲುವಿಗಿರಲು ಒಡಲ ಮನೆ | ಒಲವು ಕಡಲಿಗಿಹುದೆ ಕೊನೆ | ನಾನೇ ಪಯಿರು ನೀನೇ ತೆನೆ | ಬಾಳ ಬಾಳಗಿನಿಯೆ ಕೊನೆ | ನೆನೆ ನೆನೆ ತೂಗಿ ತೆನೆ..’ ಎಂದು ರಾಷ್ಟ್ರಕವಿ ಕುವೆಂಪು ದಾಂಪತ್ಯದ ಅನುಬಂಧಕ್ಕೆ ಹೊಸ ಹೊಳಹು ನೀಡಿದರು. ನರಸಿಂಹಸ್ವಾಮಿಯವರು ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ..’, ‘ಒಲುಮೆಯೊಳಗೊಂದು ನಾವು, ನಮಗಿಲ್ಲ ನೋವು ಸಾವು’ ಎಂದು ಹೆಮ್ಮೆಯಿಂದ ಸಾರಿದರು. ‘ಸಖಿಗೀತ’ದಂತೆಯೇ ‘ದಾಂಪತ್ಯಗೀತೆ’ ಬರೆದ ಡಾ. ಸುಮತೀಂದ್ರ ನಾಡಿಗರು ‘ನಿನ್ನ ಕೊರೆಯುವ ನೋಟ ಹಿಮವಾಗಿಸಲು ನನ್ನ | ಹಿಮಪುರುಷ ನೀರ್ಗಲ್ಲು ನಿಂತೆ ನಾನು | ನಿನ್ನೊಲವು ಬಿಸಿಲಲ್ಲಿ ಕರಗಿ ನೀರಾಗಿದ್ದೆ | ನಿನ್ನ ಸುತ್ತೀ ಬಳಸಿ ಹರಿದೆ ನಾನು..’ ಎಂದು ಹೊಸ ವ್ಯಾಖ್ಯಾನ ಬರೆದರು. ಕನ್ನಡ ಕಾವ್ಯಲೋಕದಲ್ಲಿ ಇಂಥ ದಾಂಪತ್ಯದ ರಸಗಂಗೆಯನ್ನು ಹರಿಸಿದ ಕವಿಗಳು ಅನೇಕರು. ಕೆಲವರಿಗೆ ಹೆಚ್ಚಿನ ಪ್ರಚಾರ ದೊರೆತು ಪ್ರಸಿದ್ಧರಾದರೆ, ಅನೇಕರ ಕಾವ್ಯಗಳು ಬೆಳಕಿಗೆ ಬರಲಿಲ್ಲ. ವಿಜಾಪುರದ ಮಣ್ಣಿನ ಹೆಮ್ಮೆಯ ಕವಿ ಕುಸುಮಾಕರ ದೇವರಗೆಣ್ಣೂರು ಅವರ ದಾಂಪತ್ಯ ಗೀತೆ ಸಹ ಹೆಚ್ಚಿನ ಪ್ರಚಾರಕ್ಕೆ ಬರದಿದ್ದರೂ, ಸತ್ವ- ಸರಸ- ಸ್ವಾರಸ್ಯದಲ್ಲಿ ಮಹತ್ವದ್ದಾಗಿದೆ.

ಹೊಸ ಹುರುಪು ಸಂಸಾರ | ಹೊಸದಾಗಿ ಹೂಡಿದ್ದೆ | ನಾನು ಪ್ರತಿಭಾ ಮನೆಯೊಳಿಬ್ಬರೇನೆ | ನಿತ್ಯವೂ ನೂತನವು | ಬಾಳುವೆಯ ಸೊಗಸೆಲ್ಲ | ಬಾಳುವೆಯು ನಮಗಾಗ ಮಧುರ ಜೇನೆ |

‘ಅವಳ ಕಾಗದ’ ಎಂಬ ಕವಿತೆಯಲ್ಲಿ ಕವಿ ಕುಸುಮಾಕರ ತಮ್ಮ ನವದಾಂಪತ್ಯದ ದಿನಗಳ ಸೊಗಸನ್ನು ಬಣ್ಣಿಸುತ್ತಾರೆ. ಹೊಸ ಹುರುಪಿನ ಸಂಸಾರ, ಮನೆಯಲ್ಲಿ ನವದಂಪತಿ ಮಾತ್ರ, ಮತ್ಯಾರ ಹಂಗಿಲ್ಲ. ಹೊಸ ಬಾಳಿನ ಪ್ರತೀ ಕ್ಷಣವೂ ಸೊಗಸಿನ ಸೋಪಾನ, ಉನ್ಮಾದ, ಉಲ್ಲಾಸದ ಒಂದೊಂದು ಕ್ಷಣವೂ ಮಧುರ ಜೇನು. ಹೀಗಿರುವಾಗ ಒಂದು ದಿನ ಕವಿ ಮಧ್ಯಾಹ್ನದ ಹುಸಿ ನಿದ್ರೆಯ ನಾಟಕ ಮಾಡುತ್ತಿರುವಾಗ ನಡೆದ ರಸಮಯ ಪ್ರಸಂಗವನ್ನು ಕಾವ್ಯವಾಗಿಸುತ್ತಾರೆ.

ಒಂದು ದಿನ ಕಣ್ಮುಚ್ಚಿ | ಮಲಗಿದವರೊಳು ಇದ್ದೆ| ಪ್ರತಿಭೆ ಬರೆಯುತಳಿದ್ದಳೇನೊ ಏನೊ| ಮಲಗಿರುವೆನೆಂದವಳು | ಗುಣುಗುಡುತ ಬರೆಯುತಿರೆ| ನಗೆಯ ತಡೆ ಹಿಡಿದೆ ನಾನೆಂತೊ ಏನೊ|

ಶಾಲೆಯಲ್ಲಿ ಕೊಟ್ಟ ಮನೆಗೆಲಸ ಬರೆಯುವುದಿರಲಿ, ಯಾರಿಗಾದರೂ ಪತ್ರ ಬರೆಯುವುದಿರಲಿ, ವಿಷಯವನ್ನು ಬಾಯಲ್ಲಿ ಗುನುಗಿಕೊಂಡು ಬರೆಯುವುದು ಹೆಚ್ಚಿನವರ ಅಭ್ಯಾಸ. ಗಂಡ ಹೇಗೂ ಮಲಗಿದ್ದಾನೆ ಎಂಬ ಭಾವನೆಯಲ್ಲಿ ಪ್ರತಿಭಾ ಕೂಡ ಅದನ್ನೇ ಮಾಡುತ್ತಿದ್ದಾಳೆ.

ಕವನಿಸಿದ್ದಳು ತನ್ನ | ತಾಯಿಗೊಂದೋಲೆಯನು | ನಮ್ಮ ಜೀವನವನ್ನು ಚಿತ್ರಿಸುತ್ತ | ನನ್ನ ಹೃದಯವು ಅದನು | ಅವಳಿಗರಿಯದ ಹಾಗೆ | ಜೊಂಪಿನಲಿ ಮಿಂದಿತ್ತು ಮೆಲಕಿಸುತ್ತ | ಗಂಡನ ಮನೆ, ಗಂಡನ ಮನ, ಹೊಸ ಬದುಕಿನ ಸಂಭ್ರಮವನ್ನು ಕವಿತೆಯ ರೂಪದಲ್ಲಿ ಪ್ರತಿಭಾ ಅಮ್ಮನಿಗೆ ಪತ್ರ ಬರೆಯುತ್ತಿದ್ದರೆ, ನಿದ್ರಾನಾಟಕ ಮಾಡುತ್ತಿರುವ ಗಂಡ ಉಕ್ಕಿಬರುತ್ತಿರುವ ನಗು ತಡೆಹಿಡಿದು, ಪತ್ನಿಯ ಮನದಾಳದ ಮಾತುಗಳ ಜೇನುತುಪ್ಪ ಸವಿಯುತ್ತಿದ್ದಾನೆ.

ತಾಯಿ ಬರೆಯುವುದೇನು | ಎಂಥವರು ನನ್ನವರು | ಒಲವವರ ಹೃದಯಗಂಗೋತ್ರಿಯಲ್ಲಿ | ಹುಟ್ಟಿಹುದು, ಕೊಳೆಯಿಲ್ಲ | ಕೊರಗಿಲ್ಲ, ತುಂಬಿಯೇ | ಹರಿಯುವುದು ಹನ್ನೆರಡು ತಿಂಗಳಲ್ಲಿ | ಅವರ ಮೈಕಟ್ಟಿನಲಿ | ದಣಿವು ಎಂಬುದೆ ಇಲ್ಲ | ಎಷ್ಟು ದುಡಿದರು ಏನು ನಗುವರವರು | ಆದರಮ್ಮ ಅವರ | ಕರುಳು ಹುರಿಗೊಳ್ಳುವುದು | ನನ್ನ ಹಣೆಯಲಿ ತೋರೆನಸುವೆ ಬೆವರು|

ಗಂಡನ ಹೃದಯವೊಂದು ಗಂಗೋತ್ರಿ. ಅಲ್ಲಿ ಉಗಮವಾಗಿರುವುದು ಒಲುಮೆಯೆಂಬ ಪಾವನಗಂಗೆ. ಒಂದು ಸಣ್ಣ ಕಲ್ಮಷವಿಲ್ಲ, ಅದಿಲ್ಲ ಇದಿಲ್ಲ ಎಂಬ ಕೊರಗಿಲ್ಲ, ಎಷ್ಟು ದುಡಿದರೂ ಅವರಿಗೆ ದಣಿವೆಂಬುದಿಲ್ಲ. ಆದರೆ, ನನ್ನ ಹಣೆಯಲ್ಲಿ ಒಂದು ಬೆವರಿನ ಹನಿ ಕಂಡರೂ ಅವರು ಚಡಪಡಿಸುತ್ತಾರೆ. ಕಣ್ಣುಗಳನ್ನು ಕಾಯುವ ರೆಪ್ಪೆಗಳಂತೆ ಸದಾ ನನ್ನ ಬಗ್ಗೆ ಚಿಂತಿಸುತ್ತಾರೆ ಎಂದು ಪ್ರತಿಭಾ ವರ್ಣಿಸುತ್ತಾಳೆ.

ನಿನ್ನ ಮನೆಯೊಲು ನನ್ನ | ಮನೆಯು ಹರವಾಗಿಲ್ಲ | ಆದರೂ ನನಗಿಲ್ಲ ತುಸುವು ಕೊರಗು | ಅವರ ಮನ ಅಗಲಕ್ಕೆ | ಏನು ಸರಿಯಿಹುದಮ್ಮ! | ತೊಳೆದ ಮುತ್ತಿನಹಾಗೆ ಒಳಗು ಹೊರಗು | ವಿಶ್ವವಿದ್ಯಾಲಯದ | ಹಾಗೆ ಇದೆ ನಮ್ಮ ಮನೆ | ಅಳಿಯ ಬಡವನು ಎಂದು ಚಿಂತೆ ಬೇಡ | ಅಪ್ಪನಿಗೆ ಹೇಳಮ್ಮ | ನಾನು ಋಣಿಯಾಗಿರುವೆ | ನಿಮಗೆಲ್ಲವೂ ಸಾಯುವನಕ ನೋಡಾ| ತವರು ಮನೆಯಷ್ಟು ನನ್ನ ಗಂಡನ ಮನೆ ದೊಡ್ಡದಿಲ್ಲ. ಆದರೆ, ಅದರ ಬಗ್ಗೆ ನನಗೆ ಯಾವ ಕೊರಗೂ ಇಲ್ಲ. ಗಂಡದ ಹೃದಯವೈಶಾಲ್ಯಕ್ಕೆ ಸರಿಸಾಟಿಯಿಲ್ಲ. ಅವರ ಮನಸ್ಸು ತೊಳೆದ ಮುತ್ತಿನ ಹಾಗೆ ಶುಭ್ರ. ಅಮ್ಮ ನೀನೊಮ್ಮೆ ನಮ್ಮಮನೆಗೆ ಬಂದು ನೋಡಬೇಕು, ನನ್ನ ಮನೆ ವಿಶ್ವವಿದ್ಯಾಲಯದಂತಿದೆ. ಮನೆಯ ತುಂಬಾ ಪುಸ್ತಕಗಳು. ಅಳಿಯ ಬಡವ ಎಂಬ ಚಿಂತೆ ಬೇಡ. ಹೃದಯಶ್ರೀಮಂತನಿಗೆ ಕೊಟ್ಟಿದ್ದಕ್ಕೆ ನಿಮಗೆ ಸದಾ ಋಣಿಯಾಗಿರುತ್ತೇನೆ ಎಂದು ಪ್ರತಿಭಾ ಒಂದೊಂದು ಪದವನ್ನೂ ಬಿಡಿಸಿಬಿಡಿಸಿ ಹೇಳಿಕೊಂಡು ಬರೆಯುತ್ತಿರುವಾಗ ಗಂಡನ ತೋರಿಕೆಯ ನಿದ್ರೆ ಹಾರಿ ನಗುವಿನ ಕಟ್ಟೆ ಒಡೆಯುತ್ತದೆ. ತಡೆದು ಹಿಡಿದಿಹ ನಗೆಯು | ಕಟ್ಟೊಡೆದು ಹೊರಬಿತ್ತು| ಖಿಕ್ಕೆಂದೆ ತುಟಿಕಚ್ಚಿ ಕಣ್ಣಬಿಚ್ಚಿ | ಬೆಚ್ಚಿ ಹುಸಿ ಕೋಪದಲಿ | ನುಂಗುವಲು ನೋಡಿದಳು | ಲಜ್ಜೆಯಿಂದಲಿ ಕೆನ್ನೆ ಕೆಂಪು ಹೆಚ್ಚಿ| ಸಿಕ್ಕಿಬಿದ್ದ ಕಳ್ಳಬೆಕ್ಕಿನಂತೆ ಪ್ರತಿಭಾ ಲಜ್ಜೆಯಿಂದ ಕೆನ್ನೆ ಕೆಂಪೇರಿಸಿಕೊಂಡು, ಹುಸಿಮುನಿಸು ತೋರುತ್ತಾಳೆ. ಪತ್ರದ ಗುಟ್ಟು ರಟ್ಟಾದರೂ, ದಾಂಪತ್ಯದ ಸವಿ ಹಾಲು-ಜೇನು ಎನ್ನುವುದನ್ನು ಕವಿ ಈ ರೀತಿ ಸೊಗಸಾಗಿ ವರ್ಣಿಸುತ್ತಾರೆ. ದಾಂಪತ್ಯದ ಮೊದಲ ಏಳು ಹೆಜ್ಜೆಗಳು ಎರಡು ದೇಹಗಳು ಒಂದು ಜೀವವಾಗಿ ಬದುಕಿನ ಹಾದಿಯಲ್ಲಿ ಜತೆಯಾಗಿ ಹಿತವಾಗಿ ಹೆಜ್ಜೆ ಹಾಕುವುದನ್ನು ಕಲಿಸುತ್ತವೆ. ಇದನ್ನೇ ಕುಸುಮಾಕರ ಕವಿ ತಮ್ಮ ಮತ್ತೊಂದು ಕವಿತೆಯಲ್ಲಿ ಹೀಗೆ ಹೇಳುತ್ತಾರೆ..

ಬೇರೆ ಸಿಂಗಾರಗಳು ಬೇಕು ನಮಗೇತಕ್ಕೆ? | ಬಾಳಿನಲಿ ನಮಗೇನು ಕೊರತೆಯುಂಟು? | ಪ್ರೇಮ ನಂದಾದೀಪ ಸವಿಮಾತೆ ಪಕ್ವಾನ್ನ | ಪ್ರೀತಿದಶೆ ಇಹ ಬಾಳ್ಗೆ ಭಾಗ್ಯವುಂಟು|

ಕನ್ನಡದ ಮಹತ್ವದ ಸಾಹಿತಿಗಳಲ್ಲೊಬ್ಬರಾದ ಕುಸುಮಾಕರ ದೇವರಗೆಣ್ಣೂರು ಅವರ ನಿಜನಾಮ ವಸಂತ ಅನಂತ ದಿವಾಣಜಿ. ವಿಜಯಪುರ ಜಿಲ್ಲೆಯ ದೇವರಗೆಣ್ಣೂರಿನಲ್ಲಿ 1930ರಲ್ಲಿ ಜನಿಸಿದ ಕುಸುಮಾಕರ ಮಹಾರಾಷ್ಟ್ರದ ಸೊಲ್ಲಾಪುರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಜೀವನೋತ್ಸಾಹದ ಚಿಲುಮೆಯಾಗಿದ್ದ ಕುಸುಮಾಕರ ತಮ್ಮ ವ್ಯಕ್ತಿತ್ವದ ವಿಕಾಸದಲ್ಲಿ ಬೇಂದ್ರೆ ಮತ್ತು ಸತ್ಯಕಾಮ ಅವರ ನೆರವು ದೊಡ್ಡದು ಎಂದು ನೆನೆಯುತ್ತಿದ್ದರು. ಅದೇ ರೀತಿ, ಕಾರ್ಲ್ ಮಾರ್ಕ್ಸ್, ವಿಕ್ಟರ್ ಫ್ರಾಂಕೆಲ್, ಜಿಡ್ಡು ಕೃಷ್ಣಮೂರ್ತಿ, ಮಹರ್ಷಿ ಅರವಿಂದರು, ರವೀಂದ್ರನಾಥ ಟಾಗೋರ್, ಕಾಫ್ಕಾ, ಕಾಮೂ, ಎಮರ್ಸನ್, ಥೋರೋ ಮೊದಲಾದವರನ್ನು ಆಳವಾಗಿ ಓದಿಕೊಂಡಿದ್ದ ಅವರು ವೈಚಾರಿಕ ನೆಲೆಗಟ್ಟಿನಲ್ಲಿ ಯೋಚಿಸುತ್ತಿದ್ದರು. ರಂ.ಶ್ರೀ. ಮುಗಳಿಯವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಅಧ್ಯಯನ ಮಾಡಿದ ಕುಸುಮಾಕರ, ಪುರಂದರದಾಸರ ಬಗ್ಗೆ ‘ಪ್ರಸಾದ ಯೋಗ’ ಮಹಾಪ್ರಬಂಧವನ್ನು 1962ರಲ್ಲಿ ಮಂಡಿಸಿದರು. ತಾಂತ್ರಿಕ ಕಾರಣಗಳಿಂದ ಅವರಿಗೆ ಡಾಕ್ಟರೇಟ್ ಸಿಗುವುದು ವಿಳಂಬವಾಗಿ ಕೊನೆಗೂ 1965ರಲ್ಲಿ ಪಿಎಚ್.ಡಿ ಪ್ರದಾನ ಮಾಡಲಾಯಿತು.

ಜೀವನದ ಸಂಧ್ಯಾಕಾಲದಲ್ಲಿ ಅನಾರೋಗ್ಯದಿಂದ ಸಾಕಷ್ಟು ಬಳಲಿದ ಕುಸುಮಾಕರರು 2012 ಏಪ್ರಿಲ್ 17ರಂದು ಬೆಂಗಳೂರಿನಲ್ಲಿ ನಿಧನರಾದರು. ಅಗಲಿದ ಲೇಖಕರ ನೆನಪುಗಳ ಸಂಗ್ರಹ ‘ಅನುದಿನವಿದ್ದು’ ಕೃತಿಯಲ್ಲಿ ಹಿರಿಯ ಲೇಖಕ ಡಿ.ವಿ. ಪ್ರಹ್ಲಾದ್, ಕುಸುಮಾಕರ ದೇವರಗೆಣ್ಣೂರರ ಮೇರು ವ್ಯಕ್ತಿತ್ವವನ್ನು ಆಪ್ತ ಅಕ್ಷರಗಳಲ್ಲಿ ಕಟ್ಟಿಕೊಡುತ್ತಾರೆ. ‘ಕನ್ನಡ ಸಾಹಿತ್ಯದಲ್ಲಿ ಕುಸುಮಾಕರರಿಗೆ ಸಲ್ಲಬೇಕಾದ ಗೌರವ ಸಂದಿಲ್ಲ. ಆದರೆ, ಈ ರೀತಿ ಯಾರಾದರೂ ಹೇಳಿದರೆ, ಕುಸುಮಾಕರರು ಅದನ್ನು ತಲೆಗೆ ಹಾಕಿಕೊಳ್ಳುತ್ತಿರಲಿಲ್ಲ. ಆಗಸದಲ್ಲಿ ಕೋಟಿಗಟ್ಟಲೆ ನಕ್ಷತ್ರಗಳಿವೆ.. ಎಲ್ಲ ನಕ್ಷತ್ರಗಳನ್ನೂ ನೋಡಬೇಕಂತ ಏನಿದೆ? ಎಂದು ಅವರು ಮರುಪ್ರಶ್ನಿಸುತ್ತಿದ್ದರು. ಕನ್ನಡದ ಹೆಚ್ಚಿನ ಲೇಖಕರಿಗೆ ಈ ಮಾತುಗಳು ರುಚಿಸುವುದಿಲ್ಲ. ದಿವಾಣಜಿ (ಕುಸುಮಾಕರರು) ಆಡದೆ ಉಳಿಸಿದ ಅನೇಕ ಮಾತುಗಳಲ್ಲಿ ನಮ್ಮ ಸಾಹಿತ್ಯ ಜಗತ್ತು ಕಟ್ಟಿರುವ ಅನೇಕ ಮಿಥ್ಯೆಯ ಕೋಟೆಗಳನ್ನು ಪುಡಿ ಮಾಡುವ ಶಕ್ತಿ ಇತ್ತು’ ಎಂದು ಪ್ರಹ್ಲಾದ್ ಬರೆಯುತ್ತಾರೆ.

ಕುಸುಮಾಕರರು ತಮಗೆ ಅನಿಸಿದಂತೆ ಬರೆದರು. ಯಾರೋ ಮೆಚ್ಚಲಿ, ಹೊಗಳಲಿ ಎಂದು ಬಯಸಲಿಲ್ಲ. ತಮ್ಮ ಬಗ್ಗೆ ಹೇಳಿಕೊಳ್ಳಲಿಲ್ಲ. ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಲಿ ಎಂದು ಪತ್ನಿ ಆಸೆ ಪಟ್ಟಿದ್ದರು. ಆದರೆ, ಕನ್ನಡ ಅಧ್ಯಾಪಕನಾದ ನನ್ನ ಮಕ್ಕಳು ಮೊದಲ ಹತ್ತು ತರಗತಿ ಕನ್ನಡ ಮಾಧ್ಯಮದಲ್ಲೇ ಕಲಿಯಬೇಕು ಎನ್ನುವುದು ಕುಸುಮಾಕರರ ನಿರ್ಧಾರವಾಗಿತ್ತು. ಮಕ್ಕಳನ್ನು ಇಂಗ್ಲಿಷ್ ಶಾಲೆಗೇ ಸೇರಿಸುವುದಾದರೆ, ನಾನು ಕನ್ನಡ ಅಧ್ಯಾಪಕನ ನೌಕರಿ ಬಿಟ್ಟುಬಿಡುತ್ತೇನೆ ಎಂದು ಅವರು ಖಡಾಖಂಡಿತವಾಗಿ ಹೇಳಿದ್ದರಂತೆ.

ಕಾವ್ಯ, ಕಾದಂಬರಿ, ವಿಮರ್ಶೆ ಹಾಗೂ ಅನುವಾದ ಸಾಹಿತ್ಯ ಕ್ಷೇತ್ರದಲ್ಲಿ ಮೌಲಿಕ ಕೃತಿ - ಕೊಡುಗೆಗಳನ್ನು ನೀಡಿರುವ ಕುಸುಮಾಕರ ದೇವರಗೆಣ್ಣೂರು ಯಾವತ್ತೂ ಪ್ರಸಿದ್ಧಿ, ಪ್ರಶಸ್ತಿಗಳ ಹಿಂದೆ ಓಡಲಿಲ್ಲ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೌರವ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ ಮತ್ತಿತರ ಗೌರವಗಳು ಅರಸಿಬಂದಾಗ ಹಿಗ್ಗದೆ, ಯಾವುದೇ ನಿರೀಕ್ಷೆಗಳಿಲ್ಲದೆ ಆತ್ಮತೃಪ್ತಿಯ ಬದುಕು ಸಾಗಿಸಿದರು. ಅವರ ಸಾಹಿತ್ಯ ಅಧ್ಯಯನಶೀಲರಿಗೆ ಬೆಳಕಿಂಡಿ..

ಪಾರಿಜಾತಕೆ ಮತ್ತೆ ಬೇರೆ ಬಣ್ಣವು ಬೇಕೆ? | ಸಂಪಗೆಗೆ ಸೌರಭದ ಸಾಲ ಬೇಕೇ? | ಒಲವು ಮಲ್ಲಿಗೆ ಮುಡಿದ ಬಾಳ ಹೆಣ್ಣಿನ ಮುಡಿಗೆ | ಇನ್ನುಳಿದ ಹೂವುಗಳ ಆಸೆಯೇಕೆ |

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net