ಪರೀಕ್ಷೆ ಇಲ್ದೇ ಪಾಸ್.. ಕಲಿಕೆ ಹೇಗೆ ಬಾಸ್?; ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಏನು ದಾರಿ?

Putani Lead
Published on

ಕರೊನಾ ಸಂಕಷ್ಟ ಶಿಕ್ಷಣ ಕ್ಷೇತ್ರದಲ್ಲಿಯೂ ಅನೇಕಾನೇಕ ಧನಾತ್ಮಕ ಬದಲಾವಣೆಗಳಿಗೆ ಕಾರಣವಾಗಿದೆ. ಹೊಸ ಸನ್ನಿವೇಶದಿಂದಾಗಿ ಸಹಜ ತರಗತಿಗಳನ್ನೂ ವಿದ್ಯಾರ್ಥಿಗಳು ಮಿಸ್ ಮಾಡಿಕೊಂಡರು. ಕಳೆದ ವರ್ಷದಂತೆ ಈ ವರ್ಷವೂ ಬಹುತೇಕ ಮಕ್ಕಳು ವಾರ್ಷಿಕ ಪರೀಕ್ಷೆ ಬರೆಯದೆಯೇ ಮುಂದಿನ ತರಗತಿಗೆ ತೇರ್ಗಡೆ ಹೊಂದಿದ ಖುಷಿಯಲ್ಲಿದ್ದಾರೆ. ಇವುಗಳ ನಡುವೆ, ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಣೆಗೆ ಪಾಲಕರೇ ದಾರಿ ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

| ಉಮೇಶ್ ಕುಮಾರ್ ಶಿಮ್ಲಡ್ಕ

ಕರೊನಾ ಸಂಕಷ್ಟ ಕಾಲ ಶಿಕ್ಷಣ ವ್ಯವಸ್ಥೆಯನ್ನು ಆನ್​ಲೈನ್​ಗೆ ಜೋಡಿಸಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಹೊಸ ಹೊಸ ಆಪ್​ಗಳು, ಆನ್​ಲೈನ್ ವೇದಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ತರಗತಿಗಳು ನಡೆದವು. ಸರ್ಕಾರದ ಬಹುತೇಕ ಆದೇಶಗಳು ಒಂದೆಡೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಅನ್ವಯವಾದರೆ, ಖಾಸಗಿ ಶಾಲೆಗಳು ತಮ್ಮದೇ ದಾರಿಯಲ್ಲಿ ಮುನ್ನಡೆದವು. ವಿದ್ಯಾರ್ಥಿಗಳು ನೇರ ತರಗತಿಯಿಂದ ವಂಚಿತರಾದರು. ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ನೇರ ಸಂಪರ್ಕ ತಪ್ಪಿಹೋಯಿತು. ಆನ್​ಲೈನ್ ಶಿಕ್ಷಣ ಜಾರಿಗೆ ಬಂತಾದರೂ, ಅದು ನೇರ ತರಗತಿಗಳಷ್ಟು ಪರಿಣಾಮಕಾರಿಯಲ್ಲ. ಒಂದು ತರಗತಿಯಲ್ಲಿ 40 ಮಕ್ಕಳಿದ್ದರೆ ಪ್ರತಿ ಮಗುವಿನ ಮೇಲೆ ನಿಗಾ ಇರಿಸುವುದು ಆನ್​ಲೈನ್ ತರಗತಿಯಲ್ಲಿ ಸಾಧ್ಯವಾಗುತ್ತಿಲ್ಲ. ಕಲಿಕೆಯ ಗುಣಮಟ್ಟವೂ ಕುಸಿಯುತ್ತಿದೆ ಎಂಬುದು ಎಲ್ಲರಿಗೂ ಮನವರಿಕೆಯಾಗಿರುವ ಸತ್ಯ. ಈಗ ಸರ್ಕಾರ ಒಂದನೇ ತರಗತಿಯಿಂದ ಒಂಬತ್ತನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಖುಷಿ ಪಟ್ಟಿದ್ದಾರೆ. 

ಮಕ್ಕಳಲ್ಲಿರುವ ಭಾವನೆ: ಕಲಿಕೆಯ ವಾತಾವರಣ ಇಲ್ಲದೆ ಮನೆಯಲ್ಲಿದ್ದುಕೊಂಡೇ ಶಾಲಾ ಪಠ್ಯ ಓದಿ ಬರೆದು ಮಾಡಬೇಕು ಎಂದರೆ ಮಕ್ಕಳಿಗೂ ಕಿರಿಕಿರಿ. ತರಗತಿಯ ಇತರ ಮಕ್ಕಳೊಡನೆ ಸಂಪರ್ಕ ಇಲ್ಲ. ಶಿಕ್ಷಕರೊಂದಿಗೂ ಸರಿಯಾದ ಮಾತುಕತೆ ಇಲ್ಲ. ಇವೆಲ್ಲದರ ನಡುವೆ, ‘ಹೇಗಿದ್ದರೂ ಮುಂದಿನ ತರಗತಿಗೆ ತೇರ್ಗಡೆಯಾಗಿಯೇ ಆಗುತ್ತೇವೆ. ಪಠ್ಯವನ್ನು ಮನನ ಮತ್ತು ಪುನರ್​ವುನನ ಮಾಡುವ ಅಗತ್ಯವೇ ಇಲ್ಲ. ಮುಂದಿನ ತರಗತಿಗೆ ಹೋದ ನಂತರ ಹಿಂದಿನ ತರಗತಿಯ ಪಠ್ಯ ಯಾಕೆ ಬೇಕು? ಕ್ಲಾಸ್ ಟೀಚರ್​ಗಳು ಯಾರೆಂದೇ ಗೊತ್ತಿಲ್ಲ. ವಿಡಿಯೋ, ಪ್ರಶ್ನೆಪತ್ರಿಕೆ, ವರ್ಕ್​ಶೀಟ್ ಬರುತ್ತೆ. ನೋಡಿ ಬರೆದು ಸಬ್​ವಿುಟ್ ಮಾಡಿದರೆ ಆಯಿತು. ಶಿಕ್ಷಕರು ಪ್ರತಿಯೊಬ್ಬರಿಗೂ ಫೋನ್ ಮಾಡಿ ಕೇಳ್ತಾರಾ? ಇಲ್ಲವಲ್ಲ (ಕೆಲವು ಶಾಲೆಗಳು ಇದಕ್ಕೆ ಹೊರತಾಗಿರಬಹುದು)’ ಎಂಬ ಭಾವನೆ ಬಹುತೇಕ ಮಕ್ಕಳಲ್ಲಿದೆ.

ಶಿಕ್ಷಕರ ಗೋಳು: ಆಫ್​ಲೈನ್ ತರಗತಿಯಾದರೆ ಮಕ್ಕಳ ಮುಖ ನೋಡದೆ ಪಾಠ ಮಾಡುತ್ತ ಹೋಗಬೇಕು. ರೆಕಾರ್ಡೆಡ್ ವಿಡಿಯೋವನ್ನು ವಾಟ್ಸ್​ಆಪ್ ಅಥವಾ ಸ್ಕೂಲ್ ಆಪ್​ನಲ್ಲಿ ಅಪ್ಲೋಡ್ ಮಾಡಬೇಕು. ಆನ್​ಲೈನ್ ತರಗತಿಯಾದರೆ ಚಿಕ್ಕ ಚಿಕ್ಕ ವಿಂಡೋದಲ್ಲಿ ಮಕ್ಕಳ ಮುಖ ನೋಡಿಕೊಂಡು ಪಾಠ ಮಾಡಬೇಕು. ಅದಕ್ಕೆ ಹೊಂದಾಣಿಕೆ ಮಾಡಿಕೊಂಡು ತರಗತಿಯ ಎಲ್ಲ ಮಕ್ಕಳ ಜತೆಗೆ ಸಂಪರ್ಕದಲ್ಲಿರಬೇಕು. ಒಂದೇ ತರಗತಿಗೆ ಪಾಠ ಮಾಡುವುದಾದರೆ ತೊಂದರೆ ಇರಲಿಲ್ಲ. ನಾಲ್ಕಾರು ತರಗತಿಯ ಮಕ್ಕಳಿಗೆ ಫೋನ್ ಮಾಡಿ ಅವರನ್ನು ಹುರಿದುಂಬಿಸಿ ಕಲಿಸುವ ಉತ್ಸಾಹ ವನ್ನು ತಂದುಕೊಳ್ಳುವುದಾದರೂ ಹೇಗೆ? ವೇತನ ಕಡಿತ, ಇತರ ಸಮಸ್ಯೆ ಎದುರಿಸುತ್ತಿರುವ ಶಿಕ್ಷಕರು ನೋವು ನುಂಗಿಕೊಂಡು ಮಾಡುವುದು ಸಾಧ್ಯವೇ?

ತರಗತಿಯಲ್ಲಿ ಮಕ್ಕಳು ಒಟ್ಟಾಗಿ ಕುಳಿತು ಕಲಿಯುವಾಗ ಉಂಟಾಗುವ ಪರಿಣಾಮ ಮತ್ತು ಫಲಿತಾಂಶ ಒಂಟಿಯಾಗಿ ಕುಳಿತು ಕಲಿಯುವಾಗ ಸಿಗದು. ಕಳೆದ ವರ್ಷ ಶಾಲೆ ಶುರುವಾದಾಗಲೇ ತಡವಾಗಿತ್ತು. ಹಲವು ಗೊಂದಲಗಳಿದ್ದವು. ಮಕ್ಕಳ ಕಲಿಕೆಯ ಗುಣಮಟ್ಟ ಹೆಚ್ಚಿಸಲು ನಾನಾ ರೀತಿಯ ಪ್ರಯತ್ನಗಳ ಅವಶ್ಯಕತೆ ಇದೆ. ಕಲಿಕೆಯ ಗುಣಮಟ್ಟ ಸುಧಾರಣೆಗೆ ಸಂಬಂಧಿಸಿ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರ ಅಭಿಪ್ರಾಯಗಳನ್ನು ಸಂಗ್ರಹಿಸಿ, ರ್ಚಚಿಸಿ ವಿಶ್ಲೇಷಿಸಿ ಸರ್ಕಾರದ ಪ್ರತಿನಿಧಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವುದು ಅವಶ್ಯ.

| ತಿಮ್ಮೇಗೌಡ ಕೆ. ಸಹಾಯಕ ಶಿಕ್ಷಕ, ಬೆಂಗಳೂರು

ಮಕ್ಕಳು ಏನು ಮಾಡಬೇಕು?

  • ಕರೊನಾ ಸಂಕಷ್ಟದ ಸಮಯವಾದ ಕಾರಣ ಪಾಲಕರ ಮಾತನ್ನು ಕೇಳುತ್ತಾ ಹಟ ಮಾಡದೆ ವಿದ್ಯಾಭ್ಯಾಸ ಮುಂದುವರಿಸಬೇಕು.
  • ಪ್ರತಿವರ್ಷವೂ ಪರೀಕ್ಷೆ ಇಲ್ಲದೆ ಪಾಸ್ ಆಗುತ್ತೇವೆ ಎಂಬ ಭ್ರಮೆಯೊಂದಿಗೆ ಮುನ್ನಡೆದರೆ 10ನೇ ತರಗತಿ ಪಾಸ್ ಆಗುವುದು ಕಷ್ಟವಾದೀತು.
  • ಕಲಿಕೆಯನ್ನ ನಿರ್ಲಕ್ಷಿಸಿದಲ್ಲಿ ಅಕ್ಷರಜ್ಞಾನ, ತಿಳಿವಳಿಕೆ ಇಲ್ಲದೆ ಭವಿಷ್ಯದ ಬದುಕು ತ್ರಾಸವಾದೀತು. ಆದ್ದರಿಂದ ಪರೀಕ್ಷೆ ಬರೆಯುತ್ತೀರೋ ಇಲ್ಲವೋ, ಮೂಲ ವಿಷಯ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಮನನ, ಪುನರ್​ವುನನ ಮಾಡಿಕೊಂಡು ಇರುವುದು ಒಳಿತು.
  • ಭವಿಷ್ಯದಲ್ಲಿ ಏನಾಗಬೇಕು ಎಂಬ ಗುರಿ ಸ್ಪಷ್ಟ ಮಾಡಿಕೊಳ್ಳಿ. ಪಾಲಕರು, ಶಿಕ್ಷಕರ ನೆರವು ಪಡೆದು ಅದಕ್ಕೆ ತಕ್ಕಂತೆ ಪರಿಶ್ರಮದೊಂದಿಗೆ ವಿದ್ಯಾಭ್ಯಾಸ ಮುಂದುವರಿಸಿ.

ಪಾಲಕರ ಹೊಣೆಗಾರಿಕೆ

  • ಎಷ್ಟೇ ಕಷ್ಟ ನಷ್ಟಗಳಿದ್ದರೂ ಮಗುವಿನ ಶಿಕ್ಷಣಕ್ಕಾಗಿ ಸಮಯ ಮೀಸಲಿಡುವುದು
  • 5ನೇ ತರಗತಿಯೊಳಗಿನ ಮಗುವಾದರೆ ಅಕ್ಷರಾಭ್ಯಾಸ, ಟೇಬಲ್ಸ್ ಮುಂತಾದ ಮೂಲಶಿಕ್ಷಣವನ್ನು ಗಟ್ಟಿಗೊಳಿಸಬೇಕು. ಉಳಿದ ಮಕ್ಕಳಿಗೆ ಅವರ ತರಗತಿಯ ಪಠ್ಯಕ್ಕೆ ಅನುಗುಣವಾಗಿ ಕಲಿಕೆಗೆ ನೆರವಾಗಬೇಕು.
  • ಮಗುವಿನ ಆಸಕ್ತಿ, ಏಕಾಗ್ರತೆ, ಗಮನವನ್ನು ಮನಸ್ಸಿನಲ್ಲಿಟ್ಟುಕೊಂಡು ಆಟದ ರೀತಿಯಲ್ಲೇ ಹೇಳಿಕೊಡಬೇಕು.
  • ಮಗುವಿಗೆ/ಮಕ್ಕಳಿಗೆ ಹೇಳಿಕೊಡುವಾಗ ಹೇಗೆ ಹೇಳಿಕೊಡಬೇಕು ಎಂಬ ಬಗ್ಗೆ ಶಿಕ್ಷಕರಿಂದ ಟಿಪ್ಸ್ ಪಡೆಯಬಹುದು.
  • ಶಾಲೆಯಲ್ಲಿ ತರಗತಿಗಳ ಅವಧಿಯಂತೆ ಒಂದು ಟೈಮ್ ಟೇಬಲ್ ರಚಿಸಿಕೊಳ್ಳುವುದಕ್ಕೆ ಮಕ್ಕಳಿಗೆ ನೆರವಾಗಿ ಅದನ್ನು ಅನುಸರಿಸುವುದಕ್ಕೆ ಅವರನ್ನು ಪ್ರೇರೇಪಿಸಬೇಕು. ಉತ್ತೇಜಿಸಬೇಕು. ಈ ವಿಷಯದಲ್ಲೂ ಶಿಕ್ಷಕರ ನೆರವು ಪಡೆಯಬಹುದು.

ಶಿಕ್ಷಕರ ನೆರವು

  • ವಿದ್ಯಾರ್ಥಿಗಳ ಪಾಲಕರಿಗೆ ಮಕ್ಕಳ ಕಲಿಕೆ ವಿಚಾರದಲ್ಲಿ ನೆರವಿನ ಹಸ್ತಚಾಚಿದರೆ ಒಳಿತು.
  • ಕನಿಷ್ಠ ವಾರಕ್ಕೆ ಒಮ್ಮೆ ಆಯಾ ವಿಷಯ ಶಿಕ್ಷಕರು ವಿದ್ಯಾರ್ಥಿ/ವಿದ್ಯಾರ್ಥಿನಿಯನ್ನು ಫೋನ್​ನಲ್ಲಿ ಸಂರ್ಪಸಿ ಅನುಸರಣೆ ಮಾಡಿದರೆ ವಿದ್ಯಾಭ್ಯಾಸದ ಗಾಂಭೀರ್ಯತೆ ಉಳಿಯುತ್ತದೆ.
  • ವಿದ್ಯಾಭ್ಯಾಸದ ವಿಚಾರದಲ್ಲಿ ನೆರವಿಗಾಗಿ ಯಾವುದೇ ಹಿಂಜರಿಕೆ ಇಲ್ಲದೆ ತಮ್ಮನ್ನು ಸಂರ್ಪಸುವಂತೆ ಮಕ್ಕಳು ಮತ್ತು ಅವರ ಪಾಲಕರನ್ನು ಉತ್ತೇಜಿಸಬೇಕು, ಪ್ರೋತ್ಸಾಹಿಸಬೇಕು.
  • ಕಲಿಕೆಯ ಗುಣಮಟ್ಟ ಹೆಚ್ಚಿಸಲು ಪಾಲಕರಿಗೆ ಟಿಪ್ಸ್ ಕೊಟ್ಟು, ಟೈಮ್ ಟೇಬಲ್ ರೂಪಿಸಲು ನೆರವಾಗಬೇಕು.

ಪಾಲಕರ ಸಂಕಷ್ಟ

ಕೆಲವು ಖಾಸಗಿ ಶಾಲೆಗಳವರು ಕಟ್ಟುನಿಟ್ಟಾಗಿ ಆನ್​ಲೈನ್ ಪರೀಕ್ಷೆ ನಡೆಸಿದ್ದು ಬಿಟ್ಟರೆ ಉಳಿದ ಶಾಲೆಗಳಲ್ಲಿ ಇಂತಹ ಪರೀಕ್ಷೆಯನ್ನು ವಿದ್ಯಾರ್ಥಿಗಳು ಎದುರಿಸಿಲ್ಲ. ಬಹುತೇಕ ಓಪನ್ ಬುಕ್ ಎಕ್ಸಾಂ ಮಾದರಿಯೇ ಅನುಸರಣೆಯಾಗಿದೆ. ಶಾಲೆಗೆ ಹೋಗಿ ನೇರ ತರಗತಿಯಲ್ಲಿ ಕುಳಿತು ಪರೀಕ್ಷೆ ಬರೆಯಬೇಕಾದ ಸಂದರ್ಭ ಬಂದರೆ ಈ ಮಕ್ಕಳಿಗೆ ಓದಲು, ಬರೆಯಲು ಕಷ್ಟವಾದೀತು. ವಿಷಯದ ತಿಳಿವಳಿಕೆ ಕೊರತೆ ಕಾಡೀತು ಎಂಬ ಆತಂಕ ಪಾಲಕರಲ್ಲಿ ಮನೆ ಮಾಡಿದೆ. ಶಾಲೆ ಶುರುವಾಗಿದ್ದರೆ ಮಕ್ಕಳು ಶಾಲೆಗೆ ಹೋಗಿ ಅಲ್ಲಿನ ವಾತಾವರಣದಲ್ಲಿ ಕಲಿತು ಬಿಡುತ್ತಿದ್ದರು. ಈಗ ಎಲ್ಲವನ್ನೂ ಪಾಲಕರೇ ತಮಗೆ ಗೊತ್ತಿದ್ದರೂ, ಗೊತ್ತಿಲ್ಲದೇ ಇದ್ದರೂ ಕಲಿತು ಮಕ್ಕಳಿಗೆ ಕಲಿಸಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಅದೂ ಅಲ್ಲದೆ, ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಹಲವರಿಗೆ ತಮ್ಮ ಮಗು ತಮಗಿಂತ ಹೆಚ್ಚು ಕಲಿಯಲಿ ಎಂದು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿರುವ ಕಾರಣ, ಅಲ್ಲಿನ ಪಠ್ಯಕ್ರಮಗಳನ್ನು ಹೇಳಿಕೊಡಲಾಗದೆ ಒದ್ದಾಡುತ್ತಿದ್ದಾರೆ. ಹೀಗಾಗಿ, ಮಗುವಿನ ಶಿಕ್ಷಣದ ಗುಣಮಟ್ಟದ ವಿಚಾರದಲ್ಲಿ ಪಾಲಕರ ಮೇಲೆ ಹೆಚ್ಚಿನ ಒತ್ತಡ ಬಿದ್ದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net