ಬೆಟ್ಟದ ಮೇಲೆ ಭೈರವ ವೈಭವ; ಶ್ರೀ ಕಾಲಭೈರವೇಶ್ವರಸ್ವಾಮಿಯ ಬೃಹತ್ ದೇವಾಲಯ ನಿರ್ಮಾಣ

ADI CHUNCHANA GIRIm
Published on

ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಕಾಲಭೈರವೇಶ್ವರಸ್ವಾಮಿ ದೇವಾಲಯದ ದ್ವಾದಶಾಬ್ದ ಮಹಾ ಕುಂಭಾಭಿಷೇಕ ಮಹೋತ್ಸವ ಮಾರ್ಚ್ 2, 3, 4ರಂದು ನಡೆಯಲಿದೆ. ತನ್ನಿಮಿತ್ತ ಈ ಲೇಖನ.

ಆದಿಚುಂಚನಗಿರಿಯನ್ನು 40 ವರ್ಷಗಳ ಹಿಂದೆ ನೋಡಿದವರ್ಯಾರೂ ಈ ಕ್ಷೇತ್ರ ಇಷ್ಟು ಅಭಿವೃದ್ಧಿ ಹೊಂದಬಹುದೆಂಬ ಕಲ್ಪನೆಯನ್ನೂ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. 15 ವರ್ಷಗಳ ಹಿಂದೆ ನೋಡಿದ್ದವರು ಬೆಟ್ಟದ ಮೇಲಿನ ಇಳಿಜಾರು ಬಂಡೆಯ ಮೇಲೆ ಶ್ರೀ ಕಾಲಭೈರವೇಶ್ವರಸ್ವಾಮಿಯ ಬೃಹತ್ ದೇವಾಲಯ ನಿರ್ಮಾಣವಾಗಬಹುದು ಎಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಇಂಥ ಊಹಾತೀತ ಸಾಧನೆಯನ್ನು ಸಾಧ್ಯವಾಗಿಸಿದವರು ಪದ್ಮಭೂಷಣ ಡಾ. ಬಾಲಗಂಗಾಧರನಾಥ ಸ್ವಾಮೀಜಿ.

ಪೀಠಾಧ್ಯಕ್ಷರಾದ ಹೊಸತರಲ್ಲಿ ಅವರು ಎಲ್ಲಿಯೂ ದೇವಾಲಯಗಳನ್ನು ನಿರ್ವಿುಸಲಿಲ್ಲ. ಜನರನ್ನು ಮೊದಲು ಸುಶಿಕ್ಷಿತರನ್ನಾಗಿ ಮಾಡಬೇಕೆಂಬುದು ಅವರ ದೃಢ ಸಂಕಲ್ಪವಾಗಿತ್ತು. ಹಳ್ಳಿ ಹಳ್ಳಿಗಳಲ್ಲಿ ಶಾಲಾ ಕಾಲೇಜುಗಳನ್ನು, ಉಚಿತ ವಿದ್ಯಾರ್ಥಿ ನಿಲಯಗಳನ್ನು ತೆರೆದು ಸಾಕ್ಷರತೆಯ ಕ್ರಾಂತಿ ಮಾಡಿದರು. ತತ್ಪಲವಾಗಿ ಅವರ ಅವಧಿಯಲ್ಲಿಯೇ ಆದಿಚುಂಚನಗಿರಿ ಶಿಕ್ಷಣ ಟ್ಟಸ್ಟ್​ನ ಅಡಿಯಲ್ಲಿ 475 ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದವು! ಅವುಗಳಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು!

ನಂತರದ ಆದ್ಯತೆ ಆರೋಗ್ಯ. ಮೊದಲು ಬಡವರಿಗಾಗಿ ಗ್ರಾಮೀಣ ಪ್ರದೇಶದಲ್ಲೇ ಬೃಹತ್ ಆಸ್ಪತ್ರೆ ತೆರೆದರು. ನಂತರ ಬಿಜಿ ನಗರ, ಮೈಸೂರು, ರಾಮನಗರ, ಮಂಡ್ಯ, ಬೆಂಗಳೂರಿನಲ್ಲಿ ಅತ್ಯಾಧುನಿಕ ಆಸ್ಪತ್ರೆಗಳನ್ನು ಆರಂಭಿಸಿದರು. ಭಾರತೀಯ ವೈದ್ಯಪದ್ಧತಿಯತ್ತಲೂ ಗಮನ ಹರಿಸಿದರು. ಬೆಂಗಳೂರಿನಲ್ಲಿ ಆಯುರ್ವೆದ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯವನ್ನು ತೆರೆದರು. ಹೀಗೆ ಅನ್ನ, ಅಕ್ಷರ, ಅನುಕಂಪ, ಆಶ್ರಯ, ಆರೋಗ್ಯ, ಆಧ್ಯಾತ್ಮ ಮುಂತಾದ ಕ್ಷೇತ್ರಗಳಲ್ಲಿ ಅಪರಿಮಿತ ಸೇವೆ ಸಲ್ಲಿಸಿದ ಶ್ರೀಗಳು, ಮಠದ ವರ್ಚಸ್ಸನ್ನು ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಬೆಳೆಸಿದರು.

ನಾಡಿನಾದ್ಯಂತ ಶಿಥಿಲಾವಸ್ಥೆಯಲ್ಲಿದ್ದ ನೂರಾರು ದೇವಾಲಯಗಳನ್ನು ಜೀಣೋದ್ಧಾರ ಮಾಡಿದರು. ಚಿಕ್ಕಬಳ್ಳಾಪುರದ ಕೋಲಲಪ್ಪನ ದಿಣ್ಣೆಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಆಂಜನೇಯಸ್ವಾಮಿ ದೇವಾಲಯ ನಿರ್ವಿುಸಿದರು. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಾಲಭೈರವ ದೇವಾಲಯವನ್ನು ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಿಸಿದರು. ಹಲವಾರು ದೇವಾಲಯಗಳಿಗೆ ಹೊಸ ರಥಗಳನ್ನು ನಿರ್ವಿುಸಿಕೊಟ್ಟರು.

ಇಷ್ಟೆಲ್ಲ ಮಾಡಿದರೂ, ಆದಿಚುಂಚನಗಿರಿಯಲ್ಲೇ ಕಾಲಭೈರವೇಶ್ವರಸ್ವಾಮಿಗೆ ಸುಂದರ ದೇವಾಲಯ ಇಲ್ಲ ಎಂಬ ಭಾವನೆ ಶ್ರೀಗಳನ್ನು ಕಾಡುತ್ತಿತ್ತು. ದೇಶದ ಹೆಸರಾಂತ ದೇವಾಲಯಗಳನ್ನು ಸಂದರ್ಶಿಸಿ ಅವುಗಳ ವಾಸ್ತುಶಿಲ್ಪದ ಬಗ್ಗೆ ಅಧ್ಯಯನ ಮಾಡಿದರು. ಪರಿಣಿತ ಶಿಲ್ಪಿಗಳೊಂದಿಗೆ ಸಮಾಲೋಚಿಸಿ, ಭವ್ಯವೂ ಸುಂದರವೂ ಆದ ಕಾಲಭೈರವೇಶ್ವರಸ್ವಾಮಿ ದೇವಾಲಯ ನಿರ್ವಣಕ್ಕೆ 1993ರ ಆ. 22ರಂದು ಶಂಕುಸ್ಥಾಪನೆ ನೆರವೇರಿಸಿದರು.

ಎಂಟು ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಬೇಕು ಎಂದುಕೊಂಡಿದ್ದ ದೇವಾಲಯಕ್ಕೆ ಅಂತಿಮವಾಗಿ ಖರ್ಚಾಗಿದ್ದು 85 ಕೋಟಿ ರೂ.! ಶ್ರೀಗಳ ಸತ್ಸಂಕಲ್ಪಗಳು ಸಾಕಾರಗೊಳ್ಳುತ್ತಿದ್ದುದೇ ಹೀಗೆ. ಸಾವಿರ ಬಡ ಮಕ್ಕಳಿಗಾಗಿ ಉಚಿತ ಹಾಸ್ಟೆಲ್ ನಿರ್ವಿುಸಲು ಸಂಕಲ್ಪ ಮಾಡಿ ಕೆಲಸ ಪ್ರಾರಂಭಿಸಿದರೆ ಅದು ಪೂರ್ಣಗೊಂಡಾಗ 5 ಸಾವಿರ ವಿದ್ಯಾರ್ಥಿಗಳು ವಾಸ್ತವ್ಯ ಮಾಡಬಹುದಾದಷ್ಟು ದೊಡ್ಡದಾಗಿರುತ್ತಿತ್ತು. ಹೀಗೆ ಅವರ ಕಾರ್ಯಗಳೆಲ್ಲವೂ ವಿಸ್ಮಯಕರವಾಗಿರುತ್ತಿದ್ದವು.

ದೇವಾಲಯದ ನಿರ್ಮಾಣ 14 ವರ್ಷ ನಡೆದು, 2008ರ ಫೆ. 17ರಂದು ಲೋಕಾರ್ಪಣೆ ಗೊಂಡಿತು. ಇದೀಗ 12 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಹಾಕುಂಭಾಭಿಷೇಕ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಹಲವು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿವೆ.

ದೇವಾಲಯದ ವಿಶೇಷಗಳು

ಬೆಟ್ಟದ ಮೇಲೆ ಜಾರುಬಂಡೆಯಂತಹ ಆವರಣವನ್ನು ಸಮತಟ್ಟುಗೊಳಿಸಿ ನಿರ್ವಿುಸಿದ ದೇವಾಲಯವಿದು. ಪೂರ್ವ-ಪಶ್ಚಿಮಕ್ಕೆ 275 ಅಡಿ, ಉತ್ತರ-ದಕ್ಷಿಣಕ್ಕೆ 175 ಅಡಿ ವಿಸ್ತೀರ್ಣದಲ್ಲಿ ನಿರ್ವಣವಾಗಿರುವ ದೇವಾಲಯ 4 ಗೋಪುರಗಳನ್ನು ಹೊಂದಿದೆ.

3 ಗೋಪುರಗಳು 57 ಅಡಿ ಎತ್ತರವಿದ್ದರೆ, ಪೂರ್ವ ದಿಕ್ಕಿನಲ್ಲಿರುವ ರಾಜಗೋಪುರ 100 ಅಡಿ ಎತ್ತರವಿದೆ. ವಿಮಾನ ಗೋಪುರಗಳು ಚೋಳರ ಶೈಲಿಯಲ್ಲಿವೆ. 10.5 ಅಡಿ ಎತ್ತರದ ಕೃಷ್ಣ ಶಿಲೆಯ ಆಕರ್ಷಕ ಅಷ್ಟ ಭೈರವ ವಿಗ್ರಹಗಳನ್ನು ಗರ್ಭಗುಡಿಯ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ. 4.5 ಅಡಿ ಎತ್ತರದ 64 ಅಷ್ಟಾಷ್ಟ ಭೈರವ ವಿಗ್ರಹಗಳಿವೆ. ಗಿರಿಯ ಮೇಲೆ ಬಿಂದು ಸರೋವರ, ಪುಷ್ಕರಣಿ, ತಾವರೆ ಕೊಳ ನಿರ್ವಿುಸಲಾಗಿದೆ. ಇಡೀ ದೇವಾಲಯ 172 ಸುಂದರ ಕಲ್ಲಿನ ಕೆತ್ತನೆಯ ಕಂಬಗಳಿಂದ ಕೂಡಿದ್ದು ದ್ರಾವಿಡ ಶೈಲಿಯಲ್ಲಿದೆ.

ದೇವಾಲಯಗಳು ಶ್ರದ್ಧಾಭಕ್ತಿಯ ಕೇಂದ್ರಗಳಷ್ಟೇ ಅಲ್ಲ, ಆತ್ಮೋನ್ನತಿಯ ಸನ್ಮಾರ್ಗದೀವಿಗೆಗಳು. ನಮ್ಮ ಪರಮಪೂಜ್ಯ ಗುರುಗಳಾದ ಜಗದ್ಗುರು ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರು ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಶ್ರೀಕಾಲಬೈರವೇಶ್ವರಸ್ವಾಮಿಯ ಮಹತ್ತಿಗೆ ಅನುಗುಣವಾಗಿ ಭವ್ಯ, ಸುಂದರ ದೇವಾಲಯ ನಿರ್ವಿುಸಿ 12 ಸಂವತ್ಸರ ಪೂರೈಸಿರುವ ಸಂದರ್ಭದಲ್ಲಿ ದ್ವಾದಶಾಬ್ದ ಮಹಾಕುಂಭಾಭಿಷೇಕ ಹಮ್ಮಿಕೊಳ್ಳಲಾಗಿದೆ. ಭಕ್ತಜನತೆ ಈ ಮಹೋತ್ಸವದಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕು. | ಡಾ. ನಿರ್ಮಲಾನಂದನಾಥ ಸ್ವಾಮೀಜಿ ಪೀಠಾಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net