

| ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅರಮನೆಯಲ್ಲಿ ಕಾಲ ಕಳೆದದ್ದಕ್ಕಿಂತ ಜನರೊಂದಿಗಿದ್ದುದೇ ಹೆಚ್ಚು. ಅವರು ಸಮಾಜಮುಖಿ ಆಲೋಚನೆ ಹೊಂದಿದ್ದರು. ಸಮಾಜಕೋಸ್ಕರ ಏನಾದರೂ ಮಾಡಬೇಕು ಎಂಬ ಅವರ ತುಡಿತವೇ ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಕಾರಣವಾಯಿತು. ಜನಪರವಾದ, ಮಾದರಿ ಆಡಳಿತ ಹೇಗಿರಬೇಕು ಎಂಬುದಕ್ಕೆ ಅವರೇ ಮಾದರಿ.
ಒಂದು ಬಾರಿ ಅವರು ಚಾಮುಂಡಿಬೆಟ್ಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ, ಮಾರ್ಗದ ಮಧ್ಯೆ ಮಹಿಳೆಯೊಬ್ಬಳು ‘ಕೊಲೆ ಅಪರಾಧಿಯಾಗಿರುವ ನನ್ನ ಮಗನಿಗೆ ಮರಣದಂಡನೆಯಾಗಿದ್ದು, ದಯವಿಟ್ಟು ತಾವು ದಯೆ ತೋರಿ ಮರಣದಂಡನೆಯನ್ನು ರದ್ದುಪಡಿಸಬೇಕು’ ಎಂದು ಮನವಿ ಮಾಡಿಕೊಳ್ಳುತ್ತಾಳೆ. ಆ ಮಹಿಳೆಗೆ ನಾಲ್ವಡಿಯವರು ಸಾಂತ್ವನ ಹೇಳಿ, ‘ನಿನ್ನ ಮಗನನ್ನು ನಾನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಬಹುದು. ಆದರೆ, ಮಗನನ್ನು ಕಳೆದುಕೊಂಡ ತಾಯಿಗೆ ನಾನು ಏನು ಉತ್ತರ ಹೇಳಲಿ?’ ಎಂದು ಪ್ರಶ್ನಿಸಿ ಮರಣದಂಡನೆ ಆದೇಶ ಹಿಂಪಡೆಯಲು ನಿರಾಕರಿಸಿ ಮುನ್ನಡೆಯುತ್ತಾರೆ.
ನಾಲ್ವಡಿಯವರು ಒಮ್ಮೆ ಕಾರಿನಲ್ಲಿ ತೆರಳುತ್ತಿದ್ದರು. ಬಿಡದಿಯ ಬಳಿ ರೈಲ್ವೆ ಲೆವಲ್ ಕ್ರಾಸಿಂಗ್ನಲ್ಲಿ ಗೇಟ್ ಬಂದ್ ಆಗಿರುತ್ತದೆ. ಕಾರಿನಲ್ಲಿ ಮಹಾರಾಜರು ಇರುವ ವಿಷಯವನ್ನು ಸಿಬ್ಬಂದಿಗೆ ತಿಳಿಸಿದರೂ ಆತ ಗೇಟ್ ತೆರೆಯಲು ಮುಂದಾಗಲಿಲ್ಲ. ರೈಲು ಹಾದು ಹೋದ ನಂತರವಷ್ಟೇ ಆತ ಗೇಟ್ ತೆರೆದು ಮಹಾರಾಜರ ಕಾರು ಮುಂದೆ ಸಾಗಲು ಅನುವು ಮಾಡಿಕೊಟ್ಟ. ಆದರೆ, ಇದರಿಂದ ನಾಲ್ವಡಿಯವರು ಕೋಪಗೊಳ್ಳಲಿಲ್ಲ. ಬದಲಾಗಿ ಆತನ ಕಾರ್ಯದಕ್ಷತೆ ಮೆಚ್ಚಿ ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಎಷ್ಟೊಂದು ಸರಳ, ಜನಪರ ಹಾಗೂ ನ್ಯಾಯಪರವಾಗಿದ್ದರು ಎಂಬುದಕ್ಕೆ ಈ ಎರಡು ಘಟನೆಗಳು ಸಾಕ್ಷಿ.
ಅಭಿವೃದ್ಧಿಯ ಕಲ್ಪನೆ ಮೈಸೂರು ಸಂಸ್ಥಾನದಲ್ಲಿ ಮೊದಲಿನಿಂದಲೂ ಇತ್ತು. ನಾಲ್ವಡಿ ಕಾಲದಲ್ಲಿ ಅದಕ್ಕೆ ವೇಗ ದೊರೆಯಿತು. ನಾಲ್ವಡಿ ಅವರ ಜತೆಗೆ ದಿವಾನರು ಸೇರಿದಂತೆ ಪ್ರತಿಯೊಬ್ಬರಲ್ಲೂ ಅಭಿವೃದ್ಧಿಯ ಮುನ್ನೋಟ ಇತ್ತು. ಮೈಸೂರು ಸಂಸ್ಥಾನದ ಜನರು ನಾಲ್ವಡಿಯವರ ಕನಸುಗಳನ್ನು ಸಾಕಾರಗೊಳಿಸಲು ದುಡಿದರು. ಈ ಎಲ್ಲ ಕಾರಣಕ್ಕಾಗಿ ಮೈಸೂರು ಸಂಸ್ಥಾನ ಇಷ್ಟೊಂದು ಅಭಿವೃದ್ಧಿ ಕಾಣಲು ಸಾಧ್ಯವಾಯಿತು. ಸಣ್ಣ ವಯಸ್ಸಿನಲ್ಲಿಯೇ ಅವರು ಇಹಲೋಕ ತ್ಯಜಿಸಿದರು. ಅವರು ಬಹುದೊಡ್ಡ ಅಭಿವೃದ್ಧಿಯ ಕನಸುಗಾರ. ಅವರು ಕೈಹಾಕದ ಕ್ಷೇತ್ರವೇ ಇಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಅವರ ಕೊಡುಗೆ ಇದೆ. ಹಾಗಾಗಿ ಅವರ ಎಲ್ಲ ಕನಸುಗಳು ಸಾಕಾರಗೊಂಡಿವೆ ಎಂಬ ಅಭಿಪ್ರಾಯ ಮೇಲ್ನೋಟಕ್ಕೆ ಮೂಡುವುದು ಸಹಜ. ಆದರೆ, ಅವರಲ್ಲಿ ಮತ್ತಷ್ಟು ಕನಸುಗಳು ಇದ್ದಿರಲೂಬಹುದು. ಅವರಿಗೆ ದೇವರು ಮತ್ತಷ್ಟು ಆಯಸ್ಸು ನೀಡಿದ್ದರೆ ಮೈಸೂರು ಸಂಸ್ಥಾನ ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ಕಾಣುತ್ತಿತ್ತು.
ಆಡಳಿತದಲ್ಲಿ ಜನರ ಸಹಭಾಗಿತ್ವ ಇರಬೇಕು ಎಂಬ ಉದ್ದೇಶದಿಂದ ಮೈಸೂರು ಸಂಸ್ಥಾನದಲ್ಲಿ ಚಾಮರಾಜ ಒಡೆಯರ್ ಕಾಲದಲ್ಲಿ ಪ್ರಜಾಪ್ರತಿನಿಧಿ ಸಭೆ ಪ್ರಾರಂಭಗೊಂಡಿತು. ನಾಲ್ವಡಿ ಕಾಲದಲ್ಲಿ ಇದು ವಿಸ್ತಾರವಾಗಿ ಬೆಳೆಯಿತು. ಆಗ ಈ ಸಭೆಯಲ್ಲಿ 240 ಸದಸ್ಯರು ಹಾಗೂ 5 ಸಚಿವರು ಇದ್ದರು. ಈ ಸಭೆಯ ಮೂಲಕ ನಾಲ್ವಡಿ ಅವರು ಸಂಸ್ಥಾನದ ಅಭಿವೃದ್ಧಿಗೆ ಸಲಹೆಗಳನ್ನು ಪಡೆದು ಕಾರ್ಯಗತಗೊಳಿಸುತ್ತಿದ್ದರು.
ಶಿಕ್ಷಣ ಇಲ್ಲದೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನಾಲ್ವಡಿ ಕಂಡುಕೊಂಡಿದ್ದರು. ಈ ಕಾರಣಕ್ಕಾಗಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅವರು ಹೆಚ್ಚಿನ ಒತ್ತು ನೀಡಿದರು. ಮಾತ್ರವಲ್ಲ, ಪ್ರತಿಯೊಬ್ಬರಿಗೂ ಶಿಕ್ಷಣ ಉಚಿತವಾಗಿ ದೊರೆಯುವಂತೆ ಮಾಡಿದರು. ‘ಶಿಕ್ಷಣದಿಂದ ನನಗೆ ಇಷ್ಟೊಂದು ಶ್ರೇಯಸ್ಸು ದೊರೆತಿದೆ. ಈ ಶ್ರೇಯಸ್ಸು ಸಮಾಜಕ್ಕೂ ದೊರೆಯಬೇಕು’ ಎಂಬ ಉದ್ದೇಶ ಅವರದಾಗಿತ್ತು. ಕೃಷಿ, ಕೈಗಾರಿಕೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಿದರು. ಇದರಿಂದ ಮೈಸೂರು ಸಂಸ್ಥಾನ ಮಾದರಿ ಸಂಸ್ಥಾನವಾಗಿ ರೂಪುಗೊಂಡಿತು. ಈ ಮಾದರಿ ಆಡಳಿತವನ್ನು ಕಂಡು ಮಹಾತ್ಮಾ ಗಾಂಧೀಜಿಯವರು ನಾಲ್ವಡಿಯವರಿಗೆ ‘ರಾಜರ್ಷಿ’ ಬಿರುದು ನೀಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆ ಕೊಡುಗೆಗಳನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಸರ್ಕಾರ ಹಾಗೂ ಜನರು ಮಾಡಬೇಕು. ಅವರು ಕಟ್ಟಿದ ಅನೇಕ ಸಂಸ್ಥೆಗಳಿದ್ದು, ಅವುಗಳ ಉನ್ನತಿಗೆ ಯೋಜನೆಗಳನ್ನು ರೂಪಿಸಬೇಕು. ಇದುವೇ ನಾವು ನಾಲ್ವಡಿಯವರಿಗೆ ಕೊಡಬಹುದಾದ ಬಹುದೊಡ್ಡ ಕೊಡುಗೆ.
ಮೈಸೂರು ನಗರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬೃಹತ್ ಪ್ರತಿಮೆ ನಿರ್ಮಾಣ ಮಾಡಬೇಕು ಎಂಬ ಒತ್ತಾಯ ಜನರಿಂದ ಈಗ ಕೇಳಿಬರುತ್ತಿದೆ. ಪ್ರತಿಮೆ ನಿರ್ಮಾಣ ಸ್ವಾಗತಾರ್ಹ, ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ. ಹಲವಾರು ಜನರು ಅದರಿಂದ ಉತ್ತಮ ಬದುಕು ರೂಪಿಸಿಕೊಳ್ಳಬಹುದು. ಆದರೆ ಇದಕ್ಕಿಂತ ಮುಖ್ಯವಾಗಿ ನಾಲ್ವಡಿಯವರು ಕಟ್ಟಿದ ಸಂಸ್ಥೆಗಳು, ಪಾರಂಪರಿಕ ಕಟ್ಟಡಗಳನ್ನು ರಕ್ಷಿಸುವ ತುರ್ತು ಅನಿವಾರ್ಯತೆ ಇದೆ. ಅವರು ಪ್ರತಿಮೆ ನಿರ್ವಣಕ್ಕೆ ಆದ್ಯತೆ ನೀಡಿದವರಲ್ಲ. ಅವರು ಇದ್ದ ಹಣವನ್ನೆಲ್ಲ ಅಭಿವೃದ್ಧಿಗೆ ವಿನಿಯೋಗಿಸಿದರು. ಹಾಗಾಗಿ ಪ್ರತಿಮೆ ನಿರ್ಮಾಣ ಮಾಡುವ ಹಣದಲ್ಲಿ ನಾಲ್ವಡಿ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ ನಿರ್ಮಾಣ ಮಾಡುವುದು ಸೂಕ್ತ.
ಇಂದು ರಾಜ್ಯ ಇಷ್ಟೊಂದು ಅಭಿವೃದ್ಧಿ ಹೊಂದಲು ನಾಲ್ವಡಿ ಕೃಷ್ಣರಾಜ ಒಡೆಯರ್ ನೆಟ್ಟಿರುವ ಬೀಜವೇ ಕಾರಣ ಎಂದು ಜನರೇ ಹೇಳುತ್ತಾರೆ. ನಾನು ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ ಅಲ್ಲಿನ ಜನರು ತುಂಬಾ ಪ್ರೀತಿ ತೋರುತ್ತಾರೆ. ನಮ್ಮ ಉತ್ತರ ಕರ್ನಾಟಕ ಮೈಸೂರು ಸಂಸ್ಥಾನಕ್ಕೆ ಸೇರಿದ್ದಿದ್ದರೆ ಒಳ್ಳೆಯದಾಗುತ್ತಿತ್ತು ಎಂದು ಜನರು ಮಾತನಾಡಿಕೊಳ್ಳುತ್ತಾರೆ. ಜನರು ನಮ್ಮ ಮೇಲೆ ತೋರುವ ಈ ಪ್ರೀತಿಗೆ ನಾಲ್ವಡಿಯವರ ಕೊಡುಗೆ ಅಪಾರವಾದದ್ದು.
ಇತಿಹಾಸದ ಪುಟಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಿಗಬೇಕಾದಷ್ಟು ಮಹತ್ವ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಜನರ ಹೃದಯದಲ್ಲಿ ಅವರಿಗೆ ಬಹುದೊಡ್ಡ ಸ್ಥಾನವೇ ಸಿಕ್ಕಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಅವರ ಹೆಸರು ಇಡಬೇಕು ಎಂದು ನಾವು ಒತ್ತಾಯ ಮಾಡಲಿಲ್ಲ. ಆದರೆ, ನಾಲ್ವಡಿ ಹೆಸರು ಇಡಬೇಕು ಎಂದು ಜನರೇ ಒತ್ತಾಯಿಸಿದರು. ಇದು ಜನರ ಮನದಲ್ಲಿ ಅವರು ಚಿರಸ್ಥಾಯಿ ಆಗಿರುವುದಕ್ಕೆ ಸಾಕ್ಷಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ನಮ್ಮ ಮೈಸೂರು ಸಂಸ್ಥಾನ ಹಾಗೂ ರಾಜಮನೆತನದ ಗೌರವ ಮತ್ತಷ್ಟು ಹೆಚ್ಚಾಯಿತು. ಹೀಗಾಗಿ ಪ್ರತಿಯೊಂದು ಸಂದರ್ಭದಲ್ಲೂ ನಾವು ಅವರನ್ನು ನೆನಸಿಕೊಂಡೇ ಮುಂದಿನ ಹೆಜ್ಜೆ ಇಡುತ್ತೇವೆ.
(ನಿರೂಪಣೆ: ಸದೇಶ್ ಕಾರ್ಮಾಡ್, ಚಿತ್ರಗಳು: ಕೆ.ಎಚ್. ಚಂದ್ರು)