ನಾಗರ ಪಂಚಮಿ ನಾಡಿಗೆ ದೊಡ್ಡದು..

Panchami
Published on

| ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ನಾಡಿನ ಹಬ್ಬಗಳಲ್ಲಿ ಅತಿ ದೊಡ್ಡ ಹಬ್ಬ ಎಂದೇ ಖ್ಯಾತಿ ಪಡೆದಿರುವ ಹಬ್ಬ ನಾಗರಪಂಚಮಿ. ಇದನ್ನು ಶ್ರಾವಣದ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಇದು ವಾಸುಕಿಶಯನನೆನಿಸಿದ ಸಾಕ್ಷಾತ್ ಶ್ರೀವಿಷ್ಣುವಿನ ಶಯ್ಯೆಯಾದ ಶೇಷದೇವರ ಪೂಜೆ. ನಾಗಚೌತಿಯಂದು ಮನೆ ಹೊರಗೆ ಹೋಗಿ ಕಲ್ಲಿನ ನಾಗನಿಗೆ ಪೂಜಿಸಿ ಹಾಲನ್ನು ಎರೆಯುತ್ತಾರೆ. ತಾಯಂದಿರು ಮಕ್ಕಳ ಆರೋಗ್ಯಕ್ಕಾಗಿ ಮತ್ತು ಅಕ್ಕ-ತಂಗಿಯರು ಅಣ್ಣ-ತಮ್ಮಂದಿರ ದೀರ್ಘಾಯುಷ್ಯಕ್ಕಾಗಿ ನಾಗದೇವತೆಯನ್ನು ಪ್ರಾರ್ಥಿಸಿ ಉಪವಾಸ ಮಾಡುತ್ತಾರೆ.

ನಾಗಪಂಚಮಿಯಂದು ಸ್ತ್ರೀಯರು ಮತ್ತು ಪುರುಷರು ಮನೆಯಲ್ಲೇ ಮಣ್ಣಿನ ನಾಗನಿಗೆ ಪೂಜಿಸಿ ಹಸಿ ಹಾಲಿನಿಂದ ಅಭಿಷೇಕ ಮಾಡುತ್ತಾರೆ. ಮನೆಯ ಹೊರಗೂ ನಾಗನ ಚಿತ್ರ ಬರೆದು, ಸರ್ಪಗಳಿಂದ ಎಂದಿಗೂ ತೊಂದರೆ ಬಾರದಿರಲಿ ಎಂದು ಪ್ರಾರ್ಥಿಸಿ ಪೂಜಿಸುತ್ತಾರೆ. ಹುರಿದ ಅರಳು, ಹುರಿದ ಕಡಲೆ, ಎಳ್ಳಿನ ಚಿಗಳೆ, ತಂಬಿಟ್ಟು, ಕೊಬ್ಬರಿ, ಬೆಲ್ಲ ಇವುಗಳನ್ನೆಲ್ಲ ಸಮರ್ಪಿಸುತ್ತಾರೆ. ಚರ್ಮ ರೋಗಗಳ ಪರಿಹಾರಕ್ಕಾಗಿ ವಿಶೇಷವಾಗಿ ಹರಳುಪ್ಪು ಮತ್ತು ಹುಣಿಸೆಕಾಯಿಯನ್ನು ನಾಗನಿಗೆ ಸಮರ್ಪಿಸುತ್ತಾರೆ. ಈ ದಿನದಂದು ಕೆಲವು ನಿರ್ದಿಷ್ಟ ಕೆಲಸಗಳನ್ನು ನಮ್ಮ ಪೂರ್ವಿಕರು ನಿಷೇಧಿಸಿದ್ದಾರೆ. ಕರಿದ ಮತ್ತು ಹುರಿದ ಪದಾರ್ಥ ಅಂದು ಮಾಡಬಾರದು. ಬೇಯಿಸಿದ ಪದಾರ್ಥ ಮಾತ್ರ ಮಾಡಬೇಕು. ಭೂಮಿಯನ್ನು ಕೂಡ ಅಗೆಯಬಾರದು. ಮಳೆಗಾಲವಾದ ಶ್ರಾವಣದಲ್ಲಿ ಹಾವುಗಳು ಬಹಿರಂಗವಾಗಿ ಓಡಾಡುವ ಸಾಧ್ಯತೆ ಬಹಳ. ಆದ್ದರಿಂದ ಹಾವುಗಳಿಂದ ಜನರಿಗೆ ಮತ್ತು ಜನರಿಂದ ಹಾವುಗಳಿಗೆ ಯಾವ ತೊಂದರೆಯೂ ಆಗಬಾರದೆಂದು ಈ ಪೂಜೆ.

ಮನೆಯಲ್ಲಿ ಯಾರಿಗಾದರೂ ನಾಗದೋಷವಿದ್ದರೆ, ಸಂತಾನದ ತೊಂದರೆ ಇದ್ದರೆ ಅದೆಲ್ಲದರ ಪರಿಹಾರಕ್ಕಾಗಿ ಶೇಷಾಂಶನೆನಿಸಿದ ಸುಬ್ರಹ್ಮಣ್ಯ ಪೂಜೆಯನ್ನೂ ವಿಶೇಷವಾಗಿ ಮಾಡುತ್ತಾರೆ. ಆಶ್ಲೇಷಾ ನಕ್ಷತ್ರದಲ್ಲಿ ಆಶ್ಲೇಷಾ ಬಲಿ ಎಂದು ಮಾಡುತ್ತಾರೆ. ಪರೀಕ್ಷಿತ ಮಹಾರಾಜ ಸರ್ಪ ಕಚ್ಚಿ ಮರಣ ಹೊಂದಿದ. ಆಗ ಅವನ ಮಗ ಜನಮೇಜಯ ತನ್ನ ತಂದೆಯ ಮರಣಕ್ಕೆ ಕಾರಣವಾದ ಸರ್ಪಕುಲವನ್ನೇ ನಾಶ ಮಾಡುವೆ ಎಂದು ಸರ್ಪಯಾಗ ಮಾಡುತ್ತಾನೆ. ಆಗ ಆಸ್ತೀಕರೆಂಬ ಋಷಿಗಳು ಪ್ರಾಣಿಹಿಂಸೆ ಮಹಾಪಾಪ ಎಂದು ತಡೆಯುತ್ತಾರೆ. ಆ ಸಂದರ್ಭದಲ್ಲಿ ಸರ್ಪಕುಲದ ರಕ್ಷಣೆ ಆಯಿತೆಂದು ದೇವತೆಗಳು ಶೇಷದೇವರನ್ನು ಪೂಜಿಸುತ್ತಾರೆ. ಆದ್ದರಿಂದ ನಾಗರಾಜ ಪೂಜನೀಯ. ಎಷ್ಟೋ ಪ್ರದೇಶ ಗಳಲ್ಲಿ ಇವತ್ತಿಗೂ ಮನೆಯ ಮುಂಬಾಗಿಲ ಮೇಲೆ ಆಸ್ತೀಕ ಆಸ್ತೀಕ ಎಂದು ಬರೆಯುವ ಪದ್ಧತಿ ಇದೆ.

ಭಗವಂತನ ಸೇವೆಗಾಗಿ ಸದಾ ಶಯ್ಯೆಯಾದ ಶೇಷದೇವರು ಕೃಷ್ಣಾವತಾರದಲ್ಲಿ ಬಲರಾಮನಾಗಿ ಮತ್ತು ರಾಮಾವತಾರದಲ್ಲಿ ಲಕ್ಷ್ಮಣನಾಗಿ ಅವತರಿಸಿ ದೇವರ ಸೇವೆಗೈದನಾದ್ದರಿಂದ ಅವರ ಮೂಲರೂಪವಾದ ನಾಗರಾಜನನ್ನು ಪೂಜಿಸಲಾಗುತ್ತದೆ.

ಶೇಷ ದೇವರು, ಬ್ರಹ್ಮಾಂಡಕ್ಕೆ ಆಧಾರ

ಪುರಾಣಗಳಲ್ಲಿ ನಾಗರಾಜನನ್ನು ಅನಂತ, ಶೇಷ, ವಾಸುಕಿ ಎಂದು ಅನೇಕ ಹೆಸರುಗಳಿಂದ ಕರೆದಿದ್ದಾರೆ. ಪುರಾಣಗಳ ಪ್ರಕಾರ ಗರುಡ, ಶೇಷ, ರುದ್ರ ಮೂವರೂ ಸಮಾನರು. ಪರಮಾತ್ಮನ ಶಯ್ಯಾ ಶೇಷದೇವರು. ಶ್ರೀರಂಗಂ, ತ್ರಿವೇಂದ್ರಂ ಮೊದಲಾದ ಕ್ಷೇತ್ರಗಳಲ್ಲಿ ಶ್ರೀವಿಷ್ಣು ಶೇಷಶಯನನಾಗಿ ಪವಡಿಸಿದ್ದನ್ನು ಕಾಣುತ್ತೇವೆ. ಶೇಷ ದೇವರು ಸಮಸ್ತ ಬ್ರಹ್ಮಾಂಡವನ್ನು ತಮ್ಮ ಹೆಡೆಯ ಮೇಲೆ ಹೊತ್ತು ಬ್ರಹ್ಮಾಂಡಕ್ಕೆ ಆಧಾರರಾಗಿದ್ದಾರೆ.

ಅನಂತಂ ವಾಸುಕಿಂ ಶೇಷಂ

ಪದ್ಮನಾಭಂ ಚಿ ಕಂಬಲಮ್ |

ಶಂಖಪಾಲಂ ಧೃತರಾಷ್ಟ್ರಂ

ತಕ್ಷಕಂ ಕಾಲಿಯಂ ತಥಾ||

ಹೀಗೆ ಅನೇಕ ರೂಪಗಳಿಂದ ಕೂಡಿದ ನಾಗನನ್ನು ಪೂಜಿಸಿದರೆ ಎಲ್ಲ ರೀತಿಯ ಭಯಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net