

| ಮಂಡಗದ್ದೆ ಪ್ರಕಾಶಬಾಬು ಕೆ.ಆರ್.
ಅಮರನಾಥಕ್ಕೆ ಹೋಗಿಬರುವುದು ಸಾಹಸದ ಕೆಲಸ. ಕೊರೆಯುವ ಹಿಮಚಳಿಯಲ್ಲಿ ಪ್ರಯಾಣಿಸುವುದು ರೋಚಕ ಅನುಭವ ನೀಡುತ್ತದೆ. ಸರ್ಕಾರದ ವತಿಯಿಂದ ಸೇನಾ ಸುರಕ್ಷತೆ ವ್ಯವಸ್ಥೆ ಸೇರಿದಂತೆ ದಾರಿಯುದ್ದಕ್ಕೂ ಉಚಿತ ಊಟೋಪಚಾರ ಮತ್ತು ವೈದ್ಯಕೀಯ ನೆರವು ಒದಗುತ್ತದೆ. ಪ್ರಯಾಣದುದ್ದಕ್ಕೂ ಕಂಡುಬರುವ ಹಿಮಪರ್ವತಗಳು, ದಟ್ಟ ಅರಣ್ಯ, ಸರೋವರ, ನದಿಗಳು ಕಣ್ಮನ ತಣಿಸುತ್ತವೆ.
ಈ ಯಾತ್ರೆಯ ಚಾರಣ ಮಾಡುವ ಒಂದೊಂದು ಹೆಜ್ಜೆಯೂ ಕಷ್ಟಕರ. ಶ್ರೀ ರಾಮಕೃಷ್ಣ ಪರಮಹಂಸರು ಒಂದೆಡೆ, ‘ನಾವು ಭಗವಂತನೆಡೆಗೆ ಒಂದು ಹೆಜ್ಜೆ ಇರಿಸಿದರೆ, ಮುಂದೆ ಹತ್ತು ಹೆಜ್ಜೆ ಇಡುವ ಶಕ್ತಿಯನ್ನು ಅವನೇ ತುಂಬಿಕೊಡುತ್ತಾನೆ’ ಎಂದು ಹೇಳಿದ್ದಾರೆ. ಈ ಮಾತಿನ ನಿಜ ಅನುಭವ ಇಲ್ಲಾಗುತ್ತದೆ.
ಪ್ರಯಾಣದ ಆರಂಭ: ಬೆಂಗಳೂರಿನಿಂದ ಮೊದಲು ದೆಹಲಿಗೆ ಹೋಗಿ ಅಲ್ಲಿಂದ ಜಮ್ಮುವಿಗೆ ತೆರಳಬಹುದು. ವಿಮಾನ ಮತ್ತು ರೈಲಿನ ಮೂಲಕ ಪ್ರಯಾಣಿಸಬಹುದು. ಮೊದಲನೇ ಮಾರ್ಗವಾದ ಜಮ್ಮು ಪೆಹಲ್ಗಾಂವ್ ಮೂಲಕ ಹೋದರೆ ಜಮ್ಮುವಿನಲ್ಲಿ ತಂಗಲು ಸರಸ್ವತಿಧಾಮ ಮತ್ತು ವೈಷ್ಣವಧಾಮ ಎಂಬ ಯಾತ್ರಿ ನಿವಾಸಗಳಿವೆ. ಅನೇಕ ಹೋಟೆಲ್ಗಳೂ ಇವೆ. ಜಮ್ಮುವಿನಲ್ಲಿ ಅನೇಕ ಮಂದಿರಗಳನ್ನು ನೋಡಬಹುದು.
ಪೆಹಲ್ಗಾಂವ್: ಜಮ್ಮುವಿನಿಂದ ಬಸ್ ಇಲ್ಲವೇ ವ್ಯಾನ್ ಮೂಲಕ 315 ಕಿ.ಮೀ. ಪ್ರಯಾಣ ಮಾಡಿದರೆ ಪೆಹಲ್ಗಾಂವ್ ಸಿಗುತ್ತದೆ. ಇಲ್ಲಿ ಯಾತ್ರಿಕರು ತಂಗಲು ಟೆಂಟ್ಗಳ ವ್ಯವಸ್ಥೆ ಇರುತ್ತದೆ. ಒಂದು ರಾತ್ರಿ ಅಂದಾಜು 200-300 ರೂಪಾಯಿ ಶುಲ್ಕ ಇದಕ್ಕಿರುತ್ತದೆ.
ಚಂದನವಾಡಿ: ಯಾತ್ರಿಕರು ಪೆಹಲ್ಗಾಂವ್ನಿಂದ ಟ್ರಕ್ ಅಥವಾ ಸಣ್ಣ ವಾಹನಗಳ ಮೂಲಕ 16 ಕಿ.ಮೀ. ಕ್ರಮಿಸಿದರೆ ಚಂದನವಾಡಿ ಸಿಗುವುದು. ಇಲ್ಲಿಂದ ಯಾತ್ರಿಕರು ಚಾರಣ, ಕುದುರೆ, ಡೋಲಿ ಮೂಲಕ ಪ್ರಯಾಣ ಮುಂದುವರಿಸಬಹುದು.
ಶೇಷನಾಗ: ಚಂದನವಾಡಿಯಿಂದ ಪ್ರಯಾಣ ಬೆಳೆಸಿದಾಗ ಅವರವರ ಶಕ್ತಿ, ಧೈರ್ಯ, ಸಾಹಸದ ಪರೀಕ್ಷೆ ಆರಂಭವಾಗುವುದು. ಯಾತ್ರಿಕರು ಸಣ್ಣ ಲಗೇಜನ್ನು ಕೂಡ ಹೊತ್ತುಕೊಂಡು ಹೋಗುವುದು ಕಷ್ಟಕರ. ಲಗೇಜನ್ನು ಒಯ್ಯಲು ಕೂಲಿಯವರು ದೊರೆಯುತ್ತಾರೆ. ಇವರನ್ನು ‘ಪಿಟ್ಟೋ’ ಎಂದು ಕರೆಯುತ್ತಾರೆ. ನಾಲ್ಕು ಜನರ ಲಗೇಜನ್ನು ಒಬ್ಬ ಪಿಟ್ಟೋ ಒಯ್ಯುತ್ತಾನೆ. ಒಬ್ಬರ ಲಗೇಜ್ಗೆ 300-400 ರೂಪಾಯಿ ಪಡೆದುಕೊಳ್ಳುತ್ತಾರೆ.
ಪಿಸ್ಸು ಟಾಪ್: ಶೇಷನಾಗಗೆ ಹೋಗುವ ದಾರಿಯಲ್ಲಿ ಪಿಸ್ಸು ಟಾಪ್ ಎಂಬ ಎತ್ತರವಾದ ಬೆಟ್ಟ ಸಿಗುತ್ತದೆ. ಸಮುದ್ರಮಟ್ಟದಿಂದ 14,125 ಅಡಿ ಎತ್ತರದಲ್ಲಿರುವ ಈ ಬೆಟ್ಟ ಹತ್ತುವುದು ಸಾಹಸದ ಸಂಗತಿ. ಬೆಟ್ಟ ಏರುವಾಗ ಒಂದೊಂದು ಹೆಜ್ಜೆಯಲ್ಲೂ, ಬಂ ಬಂ ಬೋಲೆ, ಓಂ ನಮಃ ಶಿವಾಯ ಎಂದು ಭಗವಂತನ ಸ್ಮರಣೆಯನ್ನು ಭಕ್ತರು ಮಾಡುವುದು ಕಂಡುಬರುತ್ತದೆ. ಶೇಷನಾಗ್ನಲ್ಲಿ ತಂಗಲು ಬೋಲೆ ಭಂಡಾರಿ ಟ್ರಸ್ಟ್ನವರು ವ್ಯವಸ್ಥೆ ಮಾಡಿದ್ದು, ತಲಾ 350-400 ರೂಪಾಯಿ ತೆಗೆದುಕೊಳ್ಳುತ್ತಾರೆ. ಚಂದನವಾಡಿಯಿಂದ ಶೇಷನಾಗ್ಗೆ 12 ಕಿ.ಮೀ. ಅಂತರವಿದೆ.
ಪಂಚತಾರಿಣಿ: ಶೇಷನಾಗದಿಂದ ಪಂಚತಾರಿಣಿಗೆ 14 ಕಿ.ಮೀ. ಅಂತರವಿದೆ. ಮಹಾ ಗುಣವಾನ್ ಎಂಬ ಬೆಟ್ಟಗುಡ್ಡಗಳ ಸುಂದರ ಶ್ರೇಣಿ, ಕಣಿವೆ ಪ್ರಪಾತದ ಮೂಲಕ ಸಾಗಬೇಕಾಗುತ್ತದೆ. ಇಲ್ಲಿ 5 ನದಿಗಳು ಹರಿಯುತ್ತವೆ. ಇಲ್ಲಿ ವಿಪರೀತ ಚಳಿ. ಕೈಕಾಲು, ಮುಖ ಮರಗಟ್ಟುವ ಸಂಭವ ಇರುವುದರಿಂದ ಆರೋಗ್ಯದತ್ತ ಹೆಚ್ಚು ಗಮನ ಅಗತ್ಯ. ಇಲ್ಲಿಯೂ ತಂಗಲು ಟೆಂಟ್ ಸೌಲಭ್ಯವಿದೆ. ಸಮುದ್ರ ಮಟ್ಟಕ್ಕಿಂತ 12,070 ಅಡಿ ಎತ್ತರದಲ್ಲಿದೆ.
ಅಮರನಾಥ: ಪಂಚತಾರಿಣಿಯಿಂದ ಅಮರನಾಥಕ್ಕೆ 6 ಕಿ.ಮೀ. ಅಂತರ. ಇಲ್ಲಿ 2 ಅಥವಾ 3 ಕಿ.ಮೀ.ನಷ್ಟು ಹಿಮದಲ್ಲಿಯೇ ಚಾರಣ ಮಾಡಬೇಕಾಗಿ ಬರಬಹುದು. ಈ ಸಂದರ್ಭದಲ್ಲಿ ಜಾರುವುದು, ಬೀಳುವುದು ಸಾಮಾನ್ಯ. ಇಲ್ಲಿ ನಡೆಯುವಾಗ ಊರುಗೋಲು ನೆರವಾಗುವುದು. ಇಲ್ಲಿ ಅಮರ ಗಂಗಾ ಎಂಬ ನದಿ ಹರಿಯುತ್ತದೆ. ಧೈಯರ್åವಂತರು ಮಾತ್ರ ಇಲ್ಲಿ ಸ್ನಾನ ಮಾಡಬಹುದು. ಕೊರೆಯುವ ನೀರಿನಲ್ಲಿ ಸ್ನಾನ ಮಾಡಿದರೆ ಹೃದಯಾಘಾತ ಆಗುವ ಸಂಭವ ಇರುತ್ತದೆ.
ಹಿಮಲಿಂಗ ದರ್ಶನ: ಅಮರನಾಥಕ್ಕಿಂತ ಒಂದು ಕಿ.ಮೀ. ಮುಂಚಿತವಾಗಿಯೇ ಪ್ರಕೃತಿ ನಿರ್ವಿುತ ಬೃಹತ್ ಗುಹೆಯ ದರ್ಶನವಾಗುತ್ತದೆ. ಈ ಗುಹೆ ಅಂದಾಜು 150 ಅಡಿ ಉದ್ದ, 100 ಅಡಿ ಅಗಲ ಇರಬಹುದು. ಈ ಗುಹೆಗೆ ಭಕ್ತರು ಸರದಿ ಮೂಲಕ ಹೋಗಬೇಕು. ಇಲ್ಲಿ ಅನುಮತಿ ಪತ್ರ ತೋರಿಸಬೇಕಾಗುತ್ತದೆ. ಗುಹೆಯ ಮುಂದೆ ಹೋದರೆ ಸಾಕ್ಷಾತ್ ಹಿಮಲಿಂಗದ ದರ್ಶನ ಆಗುವುದು. ಲಿಂಗವನ್ನು ರ್ಸ³ಸಲು ಅವಕಾಶವಿಲ್ಲ. 5-6 ಅಡಿ ದೂರದಿಂದಲೇ ಪೂಜೆ ಮಾಡಬೇಕು. ಇದರ ಪಕ್ಕದಲ್ಲಿಯೇ ತೀರ್ಥ ಉದ್ಭವ ಆಗುವುದು. ಭಕ್ತರು ಈ ತೀರ್ಥ ತೆಗೆದುಕೊಂಡು ಬರಬಹುದು. ಅಮರನಾಥವು ಸಮುದ್ರ ಮಟ್ಟಕ್ಕಿಂತ 13,420 ಅಡಿ ಎತ್ತರದಲ್ಲಿದೆ. ಚಳಿ ವಿಪರೀತ ಇರುವುದರಿಂದ ಇಲ್ಲಿ ತಂಗಲು ಅವಕಾಶ ಕಡಿಮೆ. ಅಗತ್ಯ ಸಂದರ್ಭ ಬಂದರೆ ತಂಗಲು ಟೆಂಟ್ಗಳಿವೆ.
ಅನುಮತಿ ಪತ್ರ: ಅಮರನಾಥ ಯಾತ್ರೆ ಕೈಗೊಳ್ಳಲು ಯಾತ್ರಿಕರು ಅನುಮತಿ ಪತ್ರ ಪಡೆಯಲೇಬೇಕು. ಈ ಅನುಮತಿ ಪತ್ರವನ್ನು ಕರ್ನಾಟಕದ ಬೆಂಗಳೂರು ಹಾಗೂ ಮೈಸೂರಿನಲ್ಲಿರುವ ಜಮ್ಮು ಕಾಶ್ಮೀರ ಬ್ಯಾಂಕಿನಿಂದ ಪಡೆಯಲು ವ್ಯವಸ್ಥೆ ಇದೆ. ಅಮರನಾಥ ಶ್ರೈನ್ ಬೋರ್ಡ್ನಿಂದ ಆನ್ಲೈನ್ ಮೂಲಕವೂ ಪಡೆಯಬಹುದಾಗಿದೆ. ಈ ಅನುಮತಿ ಪತ್ರ ಇಲ್ಲದಿದ್ದರೆ ಎರಡೂ ಮಾರ್ಗದಲ್ಲಿನ ಪ್ರವೇಶ ದ್ವಾರದಿಂದ ಮುಂದೆ ಹೋಗಲು ಅವಕಾಶ ನೀಡುವುದಿಲ್ಲ.
ಆರೋಗ್ಯ ಪ್ರಮಾಣಪತ್ರ: ಹಿಮಾಚ್ಛಾದಿತ ದಾರಿಯಲ್ಲಿ ಶೀತಗಾಳಿಯ ನಡುವೆ ಸಾಗಬೇಕಾಗಿರುವುದರಿಂದ ಪ್ರಯಾಣಿಕರಿಗೆ ಆರೋಗ್ಯ ಉತ್ತಮವಾಗಿರುವುದು ಮಹತ್ವದ್ದಾಗಿದೆ. ಹೀಗಾಗಿ, ಯಾತ್ರಿಕರು ಆರೋಗ್ಯ ಪ್ರಮಾಣಪತ್ರವನ್ನು ವೈದ್ಯರಿಂದ ಪಡೆದು ತೆಗೆದುಕೊಂಡು ಹೋಗಬೇಕು. ಯಾತ್ರೆಯಲ್ಲಿ ಬೆಟ್ಟ ಹತ್ತಿಳಿಯಬೇಕಾಗುವುದರಿಂದ ಉಸಿರಾಟದ ತೊಂದರೆ ಆಗಬಹುದು. ಆದ್ದರಿಂದ ನಿತ್ಯವೂ 6-8 ಕಿ.ಮೀ. ನಡೆಯುವ ಅಭ್ಯಾಸ ಮಾಡಿಕೊಂಡರೆ ಉತ್ತಮ. ಪ್ರಾಣಾಯಾಮ ಅಭ್ಯಾಸವಿದ್ದರೆ ಯಾತ್ರೆಯು ಸುಗಮವಾಗುವುದು.
ಉಚಿತ ಊಟೋಪಚಾರ: ದಾರಿಯುದ್ದಕ್ಕೂ ಊಟೋಪಚಾರ, ರಾಜಾತಿಥ್ಯವು ಪೆಹಲ್ಗಾಂವ್ನಿಂದಲೇ ಆರಂಭವಾಗಿ ಅಮರನಾಥದವರೆಗೂ ಇರುತ್ತದೆ. ಇಲ್ಲಿ ಬಗೆಬಗೆಯ ಭಕ್ಷ್ಯ, ಸಿಹಿತಿಂಡಿ, ಕಾಫಿ, ಟೀ, ಮಸಾಲೆ ದೋಸೆ ಲಭ್ಯ. ಇಲ್ಲಿ ಕ್ಯಾಂಟೀನ್ಗೆ ಲಂಗರ್ ಎನ್ನುತ್ತಾರೆ. ಕ್ಯಾಂಟೀನ್ನವರು ಗ್ಯಾಸ್ ಸಿಲಿಂಡರ್ಗಳನ್ನು ಚಂದನವಾಡಿಯಿಂದ ಹೆಗಲ ಮೇಲೆ ಹೊತ್ತುಕೊಂಡು ತಂದು ಭಕ್ತರಿಗೆ ಬಿಸಿ ಬಿಸಿ ಕಾಫಿ, ಟೀ ಒದಗಿಸುತ್ತಾರೆ. ಈ ಸೇವೆಗೆ ಅವರು ಹಣ ಪಡೆಯುವುದಿಲ್ಲ. ಒತ್ತಾಯಪೂರ್ವಕವಾಗಿ ನೀಡಲು ಹೋದರೆ, ‘ನಾವು ಭಕ್ತರಲ್ಲಿ ಭಗವಂತನನ್ನು ಕಾಣುತ್ತೇವೆ. ಭಕ್ತರ ಸೇವೆಯೇ ಭಗವಂತನ ಸೇವೆ’ ಎನ್ನುತ್ತಾರೆ. ಈ ರೀತಿ ಉಚಿತ ಊಟೋಪಚಾರದ ಸೇವೆ ಎರಡೂ ಮಾರ್ಗಗಳಲ್ಲಿದೆ.
ಅಗತ್ಯ ವಸ್ತುಗಳು: ಪ್ರಯಾಣ ಮಾರ್ಗದಲ್ಲಿ ವಾತಾವರಣ ಒಂದೇ ರೀತಿ ಇರುವುದಿಲ್ಲ. ಒಂದೇ ದಿನ ಮಳೆ, ಬಿಸಿಲು, ಚಳಿ ಎಲ್ಲವೂ ಉಂಟಾಗಬಹುದಾಗಿದೆ. ಹೀಗಾಗಿ, ಇದಕ್ಕನುಗುಣವಾದ ವಸ್ತುಗಳು ಪ್ರಯಾಣಿಕರ ಬಳಿ ಇದ್ದರೆ ಉತ್ತಮ. ಸ್ವೆಟರ್, ಮಂಕಿ ಕ್ಯಾಪ್, ಜಾಕೆಟ್, ವಾಕಿಂಗ್ ಸ್ಟಿಕ್, ವ್ಯಾಸಲಿನ್, ನಿತ್ಯ ಉಪಯೋಗಿಸುವ ಔಷಧಿ, ಡ್ರೖೆ ಫ್ರೂಟ್, ಬಿಸ್ಕತ್, ಕೈಚೀಲ ಇಟ್ಟುಕೊಳ್ಳುವುದು ಉತ್ತಮ. ದೂರವಾಣಿ ಸಂಖ್ಯೆ, ಮನೆ ವಿಳಾಸ, ಗುರುತಿನ ಚೀಟಿ, ಯಾತ್ರೆಯ ಅನುಮತಿ ಪತ್ರ, ಹಣ, ಎಟಿಎಂ ಕಾರ್ಡ್ ಅವಶ್ಯಕ.
ಅಮರನಾಥ ಯಾತ್ರೆಗೆ ಎರಡು ಮಾರ್ಗಗಳಿವೆ. ಜಮ್ಮು -ಪಹಲ್ಗಾಂವ್-ಚಂದನವಾಡಿ ಮೂಲಕ ಒಂದು ಮಾರ್ಗ. ಇಲ್ಲಿಂದ ಅಮರನಾಥಕ್ಕೆ 32 ಕಿ.ಮೀ. ಅಂತರವಿದೆ. ಇನ್ನೊಂದು ಮಾರ್ಗ, ಶ್ರೀನಗರ- ಬಲ್ಟಾಲ್ ಮೂಲಕ. ಇದರ ಅಂತರ 17 ಕಿ.ಮೀ. ಮಾತ್ರ. ಆದರೆ, ಈ ಮಾರ್ಗ ತುಂಬಾ ಕಡಿದಾಗಿದ್ದು, ಇಳಿಜಾರಿನಿಂದ ಕೂಡಿದೆ. ಹೀಗಾಗಿ, ಪ್ರಯಾಣ ಪ್ರಯಾಸಕರ. ಹೆಚ್ಚು ಮಳೆ ಸುರಿದರೆ ಈ ಮಾರ್ಗದಲ್ಲಿ ಪ್ರಯಾಣಿಸಲು ಅವಕಾಶ ನೀಡುವುದಿಲ್ಲ. ಇದಲ್ಲದೆ ಶ್ರೀನಗರದಿಂದ ನೇರವಾಗಿ ಅಮರನಾಥಕ್ಕೆ ಹೆಲಿಕಾಪ್ಟರ್ ವ್ಯವಸ್ಥೆ ಇದೆ. ಈ ಎರಡೂ ಮಾರ್ಗಗಳಲ್ಲಿ ಯಾತ್ರಿಕರ ಅನುಕೂಲಕ್ಕಾಗಿ ಕುದುರೆ, ಡೋಲಿ ವ್ಯವಸ್ಥೆ ಇದೆ. ಶ್ರೀನಗರ- ಬಲ್ವಾಲ್ ಮಾರ್ಗ ಕಿರಿದಾಗಿರುವುದರಿಂದ ಡೋಲಿ ಹೊರುವವರು, ಕುದುರೆ ಸವಾರರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಹೊಂದಾಣಿಕೆ ತಪ್ಪಿದರೆ ಪಾತಾಳ ಸೇರಬೇಕಾಗುತ್ತದೆ. ‘ಎಚ್ಚರವಾಗಿ ನಡೆದರೆ ಅಮರನಾಥ, ಎಚ್ಚರ ತಪ್ಪಿದರೆ ಅಮರತ್ವ’ ಎಂಬ ಮಾತು ಇಲ್ಲಿ ಸಲ್ಲುತ್ತದೆ.
(ಲೇಖಕರು ಆಧ್ಯಾತ್ಮಿಕ ಚಿಂತಕ, ಹವ್ಯಾಸಿ ಬರಹಗಾರ)