

| ಮಧುರಾ ಎಲ್. ಭಟ್ಟ
ಸೊಲ್ಲಾಪುರ ಜಿಲ್ಲೆಯ ಬಾಶಿಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಂಗಲ್ ಅರುಣ್ ಷಾ 16 ವರ್ಷಕ್ಕೇ ವಿವಾಹವೆಂಬ ಬಂಧನಕ್ಕೆ ಒಳಗಾದರು. ಸ್ವಾಮಿ ವಿವೇಕಾನಂದ, ಬಾಬಾ ಆಮ್ಟೆ, ಮದರ್ ತೆರೇಸಾ ಮುಂತಾದವರಿಂದ ಪ್ರಭಾವಿತರಾಗಿ ಸಮಾಜಸೇವೆಯಲ್ಲಿ ತೊಡಗಿದರು. ಸೊಲ್ಲಾಪುರ ಜಿಲ್ಲೆಯ ವಿವಿಧ ಅನಾಥಾ ಶ್ರಮಗಳಲ್ಲಿ ಸ್ವಯಂಸೇವಕರಾಗಿ, ಕುಷ್ಠ ರೋಗಿಗಳಿಗೆ, ನಿರ್ಗತಿಕ ಮಹಿಳೆಯರಿಗೆ ಮತ್ತು ಲೈಂಗಿಕ ಕಾರ್ಯಕರ್ತೆಯರಿಗೆ ಸಹಾಯ ಮಾಡಲು ಮಗಳನ್ನು ಕರೆದುಕೊಂಡು ಹೋಗುತ್ತಿದ್ದರು. ನಿರ್ಗತಿಕ ಮಹಿಳೆಯರಿಗೆ ಅಡುಗೆ ಮಾಡಿ ಬಡಿಸುವುದು, ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಕುಷ್ಠರೋಗ ಮತ್ತು ಎಚ್ಐವಿ ಸೋಂಕಿತ ರೋಗಿಗಳ ಸೇವೆ ಮಾಡುವುದು ಇವರಿಗೆ ಖುಷಿ ನೀಡುತ್ತಿತ್ತು. ಪಂಡರಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಯಂಸೇವಕರಾಗಿ ಎಚ್ಐವಿ/ಏಡ್ಸ್ (ಪಿಎಲ್ಡಬ್ಲು್ಯಎಚ್ಎ) ನೊಂದಿಗೆ ವಾಸಿಸುವ ಜನರು ಅನುಭವಿಸುತ್ತಿರುವ ಕ್ರೌರ್ಯವನ್ನು ಅವರು ನೋಡಿದರು. ಮಾರ್ಚ್ 2001ರಲ್ಲಿ ಮಂಗಲ್ ಅರುಣ್ ಷಾ ಮತ್ತು ಅವರ ಮಗಳು ಡಿಂಪಲ್, ಮಹಾರಾಷ್ಟ್ರದ ಪಂಡರಪುರ ಪಟ್ಟಣದಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಎಚ್ಐವಿ ಅಥವಾ ಏಡ್ಸ್ ಜಾಗೃತಿ ಮೂಡಿಸುತ್ತಿದ್ದರು. ಈ ಸಂದರ್ಭದಲ್ಲಿ ಎರಡು ಮತ್ತು ಮೂರು ವರ್ಷ ವಯಸ್ಸಿನ ಇಬ್ಬರು ಬಾಲಕಿಯರನ್ನು ಹತ್ತಿರದ ಹಳ್ಳಿಯ ದನದ ಕೊಟ್ಟಿಗೆಯಲ್ಲಿ ಬಿಡಲಾಗಿದೆ ಎಂಬ ಮಾಹಿತಿ ತಿಳಿದ ಷಾ ಅಲ್ಲಿಗೆ ತೆರಳಿ ಮಕ್ಕಳನ್ನು ಸಾಕುವಂತೆ ಕುಟುಂಬದವರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಯಾರೂ ಒಪ್ಪದಿದ್ದಾಗ ಮಕ್ಕಳನ್ನು ತಮ್ಮೊಂದಿಗೇ ಮನೆಗೆ ಕರೆದೊಯ್ಯಲು ನಿರ್ಧರಿಸಿದರು.
ಕಳೆದ ಮೂರು ವರ್ಷಗಳಲ್ಲಿ 12ಕ್ಕೂ ಹೆಚ್ಚು ಹುಡುಗರು ಇಲ್ಲಿ ಶಿಕ್ಷಣ ಪಡೆದು ಸ್ವತಂತ್ರ ಜೀವನ ಕಟ್ಟಿಕೊಂಡಿದ್ದಾರೆ. ಇಲ್ಲಿಗೆ ದಾಖಲಾಗುವ ಪ್ರತಿ ಮಗುವನ್ನು ಸಬಲೀಕರಣಗೊಳಿಸುವುದು ಸಂಸ್ಥೆಯ ಉದ್ದೇಶ. ಅದನ್ನೇ ಮುಂಚಿನಿಂದ ಮಾಡಿಕೊಂಡು ಬಂದಿದ್ದೇವೆ. ಇದನ್ನೇ ಮುಂದುವರಿಸಿಕೊಂಡು ಹೋಗುತ್ತೇವೆ. ನನ್ನ ಮಗಳೂ ನನ್ನೊಂದಿಗೆ ಕೈಜೋಡಿಸಿದ್ದಾಳೆ. | ಮಂಗಲ್ ಅರುಣ್ ಷಾ
ಪೋಷಣೆಗೆ ಸಿದ್ಧವಾಯಿತು ಪಲಾವಿ: ಎಚ್ಐವಿ ಪೀಡಿತ ಮಕ್ಕಳಿಗೆ ಆಶ್ರಯ ನೀಡಲೆಂದೇ ಪಲಾವಿ ಎಂಬ ಸಂಸ್ಥೆ ಕಟ್ಟಿದರು. ಪ್ರತಿ ಮಗುವೂ ಸಂತೋಷ, ಸುರಕ್ಷಿತ, ಆರೋಗ್ಯಕರವಾಗಿ ಹಾಗೂ ವಿದ್ಯಾವಂತರಾಗಿ ಸಮಾಜದಲ್ಲಿ ಬದುಕಬೇಕು ಎಂಬ ಮೂಲ ಉದ್ದೇಶವೇ ಈ ಸಂಸ್ಥೆ ತೆರೆಯುವ ಉದ್ದೇಶವಾಗಿತ್ತು. ಇಂತಹ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ವಿವಿಧ ಕೌಶಲ, ಕರಕುಶಲ ಕಲೆ, ಹೊಲಿಗೆಯನ್ನು ಹೇಳಿಕೊಡತೊಡಗಿದರು. ಹೀಗೆ ಇಬ್ಬರು ಮಕ್ಕಳಿಂದ ಆರಂಭವಾದ ಸಂಸ್ಥೆ ಇಂದು 125 ಅನಾಥ ಮಕ್ಕಳಿಗೆ ಆಶ್ರಯ ನೀಡಿದೆ. ಹೀಗೆ ಮಂಗಲ್ ಷಾ ಮತ್ತು ಅವರ ಮಗಳು ಡಿಂಪಲ್ ಎಚ್ಐವಿ ಮಕ್ಕಳಿಗೆ ದಾರಿದೀಪವಾಗಿ ಅವರ ಭವಿಷ್ಯ ಉಜ್ವಲ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.