

| ಮಂಡಗದ್ದೆ ಪ್ರಕಾಶ್ಬಾಬು ಕೆ.ಆರ್.
ಕೃತ, ತ್ರೇತಾ ಹಾಗೂ ದ್ವಾಪರ ಯುಗಗಳಲ್ಲಿ ಧರ್ಮಸ್ಥಾಪನೆಗೆ, ಧರ್ಮರಕ್ಷಣೆಗೆ ಭಗವಂತ ತಾನೇ ಅವತರಿಸಿ ಬಂದಿದ್ದರೆ, ಕಲಿಯುಗದಲ್ಲಿ ತನ್ನ ಅಂಶಗಳಿಂದ ಮಹಾಮಹಿಮರನ್ನು ಸೃಷ್ಟಿ ಮಾಡಿ ಅವರ ಮೂಲಕ ಲೋಕಕಲ್ಯಾಣ ಮಾಡಿಸಿದ್ದಾನೆ. ವಾಯುದೇವರು ಭಗವಂತನ ಆಜ್ಞೆಯಂತೆ ಯುಗಯುಗಗಳಲ್ಲೂ ಅವತರಿಸಿದ್ದಾರೆ. ಉದಾಹರಣೆಗೆ, ತ್ರೇತಾಯುಗದಲ್ಲಿ ಹನುಮಂತ, ದ್ವಾಪರಯುಗದಲ್ಲಿ ಭೀಮಸೇನ, ಕಲಿಯುಗದಲ್ಲಿ ಮಧ್ವಾಚಾರ್ಯರು. ಆಚಾರ್ಯರಲ್ಲಿ ಮಾರುತಿ ಹಾಗೂ ಭೀಮಸೇನರ ಹೋಲಿಕೆ ಇತ್ತು. ಅಂದರೆ, ಹನುಮಂತನ ಹಾಗೆ ಬುದ್ಧಿವಂತಿಕೆ ಮತ್ತು ಭೀಮಸೇನನ ಹಾಗೆ ಬಲ ಈ ಆಚಾರ್ಯರಿಗೆ ಇತ್ತು ಎಂಬುದು ಅವರ ಬದುಕನ್ನೊಮ್ಮೆ ಅವಲೋಕಿಸಿದರೆ ತಿಳಿಯುತ್ತದೆ.
ಉಡುಪಿಯಿಂದ 12 ಕಿ.ಮೀ. ದೂರದಲ್ಲಿರುವ ‘ಪಾಜಕ’ ಎಂಬ ಊರಿನ ಮಧ್ಯಗೇಹಭಟ್ಟರು ಮತ್ತು ವೇದವತಿ ದಂಪತಿಯ ಮಗನಾಗಿ ಕ್ರಿ.ಶ. 1238ರಲ್ಲಿ ಆಚಾರ್ಯರು ಜನಿಸಿದರು. ಇವರ ಬಾಲ್ಯದ ಹೆಸರು ವಾಸುದೇವ. ಬಾಲ್ಯದಲ್ಲಿಯೇ ವೇದಗಳ ಸಾರವನ್ನು ಗ್ರಹಿಸಿದ್ದರು. ವ್ಯಾಯಾಮ, ಗರಡಿ ಮನೆ ಕಸರತ್ತು, ಕುಸ್ತಿ ಎಂದರೆ ಬಲು ಆಸಕ್ತಿ. ಒಮ್ಮೆ ಭಗವಂತನು ಈ ಬಾಲಕನ ತಂದೆಯ ಕನಸಿನಲ್ಲಿ ಬಂದು ‘ಜಗತ್ತಿನಲ್ಲಿ ಅಜ್ಞಾನದ ಕತ್ತಲು ತುಂಬಿದೆ. ಅದನ್ನು ಹೋಗಲಾಡಿಸಲು ನಿನ್ನ ಮಗನೇ ಸರಿ. ಸಂನ್ಯಾಸತ್ವ ಸ್ವೀಕರಿಸಲು ಅವನಿಗೆ ಅನುಮತಿ ನೀಡು’ ಎಂದು ನುಡಿದನು. ನಂತರ ಬಾಲಕನು ಹಿರಿಯ ಆಚಾರ್ಯರಿಂದ ಸಂನ್ಯಾಸವನ್ನು ಸ್ವೀಕರಿಸಿದನು. ಆಗ ಮಧ್ವಾಚಾರ್ಯ ಎಂಬ ಅಭಿದಾನ ಪ್ರಾಪ್ತವಾಯಿತು.
ಮಧ್ವಾಚಾರ್ಯರು ದ್ವೈತಮತ ಸಿದ್ಧಾಂತವನ್ನು ಪ್ರತಿಪಾದಿಸುತ್ತ, ವಾದದಲ್ಲಿ ಹಲವು ಪಂಡಿತರನ್ನು ಸೋಲಿಸಿದರು. ಜನರಲ್ಲಿದ್ದ ಮೂಢನಂಬಿಕೆಗಳನ್ನು ಹೋಗಲಾಡಿಸಿ ಭಗವಂತನ ಇರುವಿಕೆಯನ್ನು ತೋರಿಸಿಕೊಟ್ಟರು. ಅಲ್ಲದೆ, ಜಗತ್ತನ್ನು ಸೃಷ್ಟಿ ಮಾಡಿದ ಹರಿಯೇ ಪರಿಪೂರ್ಣ ಹಾಗೂ ಅಣು ಅಣುವಿನಲ್ಲಿ ಭಗವಂತ ವ್ಯಾಪಿಸಿದ್ದಾನೆ ಎಂದು ತಿಳಿಯಪಡಿಸಿದರು. ಮೂಲದೇವರಾದ ಶ್ರೀಕೃಷ್ಣನನ್ನು ಪೂಜಿಸಿ ಅನೇಕ ಮಠಮಂದಿರಗಳನ್ನು ಸ್ಥಾಪಿಸಿದರು. ಅದರಲ್ಲಿ ಮುಖ್ಯವಾದವು ಅಷ್ಟಮಠಗಳು. ಈ ಮಠಗಳಿಗೆ ಅವರೇ ಪೀಠಾಧಿಪತಿಗಳನ್ನು ಸಹ ನೇಮಿಸಿ ಒಬ್ಬೊಬ್ಬರು ಎರಡು ವರ್ಷಗಳ ಕಾಲ ಕೃಷ್ಣನ ಪೂಜೆ ಹಾಗೂ ಧರ್ಮಪ್ರಚಾರ ಮಾಡುವ ಪದ್ಧತಿಯನ್ನು ಜಾರಿಗೆ ತಂದರು. ದ್ವೈತ ಸಿದ್ಧಾಂತಕ್ಕೆ ಸಂಬಂಧಪಟ್ಟ ಅನೇಕ ಪುಸ್ತಕಗಳನ್ನು ಬರೆದರು. ಮಧ್ವಾಚಾರ್ಯರಿಗೆ ಒಮ್ಮೆ ಗೋಪಿಚಂದನದಲ್ಲಿ ಸಾಲಿಗ್ರಾಮ ಶಿಲೆಯ ಕೃಷ್ಣನ ವಿಗ್ರಹ ಗೋಚರಿಸಿತು. ಅದನ್ನು ಮಧ್ವ ಸರೋವರದಲ್ಲಿ ಶುಚಿಗೊಳಿಸಿ ದ್ವಾದಶ ಸ್ತೋತ್ರಗಳ ಪಠಿಸಿ ಪ್ರತಿಷ್ಠಾಪಿಸಿದರು (ಮೂಲವಿಗ್ರಹ). ಈ ವಿಗ್ರಹಕ್ಕೆ ಪೂಜಾವಿಧಿಗಳನ್ನು ಮಧ್ವಾಚಾರ್ಯರ ಪರಂಪರೆಯಲ್ಲಿ ಬಂದ ಅಷ್ಟಮಠಗಳ ಯತಿಗಳೇ ನಡೆಸುವ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ. ಮಧ್ವಾಚಾರ್ಯರು ಜೀವಿತ ಅವಧಿಪೂರ್ತಿ ಭಗವಂತನ ಸೇವೆ ಮಾಡಿ ಅನೇಕ ಸುಭಾಷಿತಗಳನ್ನು ನೀಡಿ, ಅವುಗಳನ್ನು ಸ್ವತಃ ಜೀವನದಲ್ಲಿ ಪಾಲಿಸಿದರು. ಕ್ರಿ.ಶ. 1318 ಮಾಘಮಾಸದ ಶುಕ್ಲಪಕ್ಷದ ನವಮಿಯಂದು ದೇಹತ್ಯಾಗ ಮಾಡಿದರು. ಪ್ರತಿ ವರ್ಷ ‘ಮಧ್ವನವಮಿ’ ಎಂದು ಎಲ್ಲ ದ್ವೈತ ಮಠಗಳಲ್ಲಿ ಆಚರಿಸಿ ಅಂದು ವಿಶೇಷವಾಗಿ ಮಧ್ವಾಚಾರ್ಯರಿಗೆ ಪೂಜೆಯನ್ನು ಸಲ್ಲಿಸುತ್ತಾರೆ.
ಶ್ರದ್ಧೆ: ಅನುಭವ ಉತ್ತಮ ಪಾಠವಾದರೂ ಅನುಭವ ಬಂದ ಮೇಲೆಯೇ ಅದು ಸತ್ಯ ಎಂದು ಒಪ್ಪಿಕೊಳ್ಳುವ ಹಠ ಬೇಡ. ಜ್ಞಾನಿಗಳ ಅನುಭವ ಮತ್ತು ಹೇಳಿಕೆಗಳಲ್ಲಿ ನಂಬಿಕೆ, ಶ್ರದ್ಧೆ ಇರಲಿ. ಶ್ರದ್ಧೆಯೇ ಮುಕ್ತಿಗೆ ದಾರಿ. ಶಾಸ್ತ್ರಗಳು ಏನನ್ನು ಪ್ರತಿಪಾದಿಸುತ್ತವೆ ಎಂದು ಹೇಳುವುದಕ್ಕಿಂತ ಅವು ಎಷ್ಟು ಅನುಭವವನ್ನು ಕೊಡುತ್ತವೆ ಹಾಗೂ ಅವುಗಳನ್ನು ನಮ್ಮ ಜೀವನದಲ್ಲಿ ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುದು ಮುಖ್ಯ.
ತಪಸ್ಸು: ಶುಷ್ಕ ತರ್ಕದಿಂದ ಪರಮಾತ್ಮನನ್ನು ಅರಿಯಲು ಆಗುವುದಿಲ್ಲ. ಏಕೆಂದರೆ ತರ್ಕದಿಂದ ಒಂದನ್ನು ಸಾಧಿಸಬಹುದಾದಂತೆ, ನಿರಾಕರಿಸಲೂಬಹುದು. ಆದ್ದರಿಂದ ತರ್ಕಕ್ಕೆ ನಿಲುಕದ ಈ ಪರಾಶಕ್ತಿಯ ಸಾಕ್ಷಾತ್ಕಾರಕ್ಕೆ ಸತತ ಪ್ರಯತ್ನ ಅತಿ ಮುಖ್ಯ.
(ಲೇಖಕರು ಅಧ್ಯಾತ್ಮ ಚಿಂತಕರು, ಹವ್ಯಾಸಿ ಬರಹಗಾರರು)