ನಾಲ್ಕನೆಯ ಕಣ್ಣು ನೀಡಿದ ಜ್ಞಾನಸೂರ್ಯ ಲೂಯಿ ಬ್ರೖೆಲ್

Brail
Published on
ಕೇವಲ 200 ವರ್ಷಗಳಲ್ಲಿ ಅಂಧರ ಬದುಕಿನಲ್ಲಿ ಊಹಿಸಲಸಾಧ್ಯವಾದ ಪರಿವರ್ತನೆಯಾಗಿದೆ. ಇಂದು ರಕ್ಷಣಾ ಕ್ಷೇತ್ರವೊಂದನ್ನು ಹೊರತುಪಡಿಸಿದರೆ ಎಲ್ಲ ಕ್ಷೇತ್ರಗಳಲ್ಲಿ ಪ್ರತಿಭೆ ಮೆರೆಯುತ್ತಿದ್ದಾರೆ. ವಕೀಲ, ಐಎಎಸ್ ಅಧಿಕಾರಿಗಳಾಗಿದ್ದಾರೆ. ಕಂಪ್ಯೂಟರ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.

ಭಾರತೀಯರನ್ನು ಬಿಟ್ಟು ವಿಶ್ವದ ಬೇರೆ ಜನರಿಗೆ ಗೊತ್ತಿರುವುದು ಕೇವಲ ಎರಡೇ ಕಣ್ಣುಗಳು. ನಮಗೆ ಮೂರು ಕಣ್ಣುಗಳು ಗೊತ್ತು. ಅದು ಎಲ್ಲರಿಗೂ ಇರುವುದಿಲ್ಲ. ಮೂರನೆಯ ಕಣ್ಣು ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಮುಕ್ಕಣ್ಣ. ಅಂದರೆ ಶಿವ. ಹನ್ನೆರಡನೆಯ ಶತಮಾನದ ಶರಣರ ಪೈಕಿ ಶಿವಯೋಗಿ ಸಿದ್ಧರಾಮೇಶ್ವರರಿಗೆ ಹಣೆಗಣ್ಣು ಜಾಗೃತವಾಗಿತ್ತೆಂದು ಪುರಾಣಗಳು ಉಲ್ಲೇಖಿಸಿವೆ. ಮಹಾಭಾರತದ ಅರ್ಜುನನಿಗೂ ಮೂರನೆಯ ಕಣ್ಣು ಇತ್ತಂತೆ. ಆದರೆ ಅದು ಇದ್ದದ್ದು ಅವನ ಬೆನ್ನಿನಲ್ಲಿ. ಅದನ್ನು ನೋಡಲು ಕುತೂಹಲಿತಳಾದ ಪಾರ್ವತಿಗೆ ತೋರಿಸಲೋಸುಗ ಶಿವನೇ ಕೆಳಗೆ ಬಿದ್ದು ಅರ್ಜುನನಿಂದ ಸೋಲುವ ನಾಟಕವಾಡಬೇಕಾಯಿತಂತೆ. ಇನ್ನು ನಾಲ್ಕನೆಯ ಕಣ್ಣಿನ ವಿಷಯವೇನು ಎಂಬುದು ನಿಮ್ಮೆಲ್ಲರ ಕುತೂಹಲ ಅಲ್ಲವೇ?

ಜನವರಿ 4 ಲೂಯಿ ಬ್ರೖೆಲ್ ಅವರು ಹುಟ್ಟಿದ ದಿನ. ಭಾರತೀಯರ ಭಕ್ತಿಯ ಹೃದಯದಲ್ಲಿ 213ನೇ ಜಯಂತಿ. ಲೂಯಿ ಬ್ರೖೆಲ್​ರೇ ನಾಲ್ಕನೆಯ ಕಣ್ಣನ್ನು ನೀಡಿದ ಜ್ಞಾನಸೂರ್ಯ. 200 ವರ್ಷಗಳ ಹಿಂದೆ ಅಂಧರ ಬದುಕು ದುರ್ಧರವಾಗಿತ್ತು. ಅಂಧತ್ವ ಪಾಪದ ಫಲ; ಶಾಪದ ಪ್ರತೀಕವಾಗಿತ್ತು. ಶ್ರೀಮಂತ ತಾಯಿ-ತಂದೆಗಳಿಗೆ ಅಂಧ ಶಿಶು ಜನಿಸಿದರೆ ಸಂಗೀತ ಕಲಿಸಿ ಜೀವನೋಪಾಯ ನಡೆಸಲು ಅನುವು ಮಾಡಿಕೊಡುತ್ತಿದ್ದರು. ಬಡವರಾದರೆ ಅಂಧತ್ವದ ಜನ್ಮ ಶಾಶ್ವತ ನರಕ. ನೀಡಿದಾಗ ಉಣ್ಣಬೇಕು. ಸ್ವತಂತ್ರವಾಗಿ ಅಡ್ಡಾಡಲು ಸಾಧ್ಯವಿಲ್ಲ. ಪ್ರಾತರ್ವಿಧಿಗಳನ್ನು ಪೂರೈಸುವುದಕ್ಕೂ ಇನ್ನೊಬ್ಬರ ಮೇಲೆ ಅವಲಂಬಿತವಾಗಬೇಕು. ಇಂತಹ ಕಠಿಣ ಮತ್ತು ಕತ್ತಲಿನಿಂದ ಕೂಡಿದ ಜೀವನವೇ ಅಂಧರ ಬದುಕಾಗಿತ್ತು. ಕೆಲವು ಜನಾಂಗಗಳಲ್ಲಿ ಅಂಧರನ್ನು ಭಾರ ಹೊರಲು ಬಳಸುತ್ತಿದ್ದರಂತೆ. ಇನ್ನೂ ಕೆಲ ಕುಹಕ ಮನಸ್ಸುಗಳು ಕೋಳಿ ಕಾಳಗದಂತೆ, ಗೂಳಿ ಕಾಳಗದಂತೆ ಅಂಧರನ್ನು ಹೊಡೆದಾಡಲು ಹಚ್ಚಿ ವಿಕೃತ ಸಂತೋಷಪಡುತ್ತಿದ್ದರಂತೆ. ಕೇವಲ 200 ವರ್ಷಗಳಲ್ಲಿ ಅಂಧರ ಬದುಕಿನಲ್ಲಿ ಊಹಿಸಲಸಾಧ್ಯವಾದ ಪರಿವರ್ತನೆಯಾಗಿದೆ. ಇಂದು ರಕ್ಷಣಾ ಕ್ಷೇತ್ರವೊಂದನ್ನು ಹೊರತುಪಡಿಸಿದರೆ ಅಂಧರು ಎಲ್ಲ ಕ್ಷೇತ್ರಗಳಲ್ಲಿ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ. ವಕೀಲ, ಐಎಎಸ್ ಅಧಿಕಾರಿಗಳಾಗಿದ್ದಾರೆ. ಕಂಪ್ಯೂಟರ್ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಸಹಾಯಕರಿಲ್ಲದೆ ಕಂಪ್ಯೂಟರ್ ಮೂಲಕ ಪರೀಕ್ಷೆ ಬರೆದು ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋದಲ್ಲೂ ಉದ್ಯೋಗ ಪಡೆದುಕೊಂಡು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲ ಸಾಧನೆಗೆ ಮೂಲಕಾರಣ ವಿದ್ಯಾರ್ಜನೆ.

ಅಂಧರು ಪ್ರಾರಂಭದಲ್ಲಿ ಓದು-ಬರಹ ಕಲಿಯುವುದು ಬ್ರೖೆಲ್ ಲಿಪಿಯ ಮೂಲಕ. ದೃಷ್ಟಿಯುಳ್ಳವರು ಇನ್ನೊಬ್ಬರ ತಪು್ಪ ತೋರಿಸಲು ಬಳಸುವ ತೋರ್ಬೆರಳಿನ ತುದಿಯೇ ಅಂಧರ ಪಾಲಿನ ಕಣ್ಣು. ಎಡಗೈ ಮತ್ತು ಬಲಗೈನ ತೋರ್ಬೆರಳುಗಳನ್ನು ಬಳಸಿಕೊಂಡು ಬ್ರೖೆಲ್ ಲಿಪಿಯನ್ನು ಓದಲಾಗುತ್ತದೆ. ಈ ಲಿಪಿಯನ್ನು ಕಂಡುಹಿಡಿದವರು ಲೂಯಿ ಬ್ರೖೆಲ್. 1809ರ ಜನವರಿ 4ರಂದು ಫ್ರಾನ್ಸ್ ದೇಶದ ಪ್ಯಾರಿಸ್ ಬಳಿಯಿರುವ ಕೂಪವರೆ ಎಂಬ ಹಳ್ಳಿಯಲ್ಲಿ ಬ್ರೖೆಲ್ ಜನನವಾಯಿತು. ತಂದೆ ಸೈಮನ್ ರೆನಿಬ್ರೖೆಲ್, ತಾಯಿ ಮೋನಿಕ್ ಬ್ಯಾರನ್. ಲೂಯಿಗೆ ಹುಟ್ಟುತ್ತಲೇ ಅಂಧತ್ವ ಬಂದಿರಲಿಲ್ಲ. ಮುದ್ದಾದ ಮಗು ಸಕಲಾಂಗ ಪರಿಪೂರ್ಣ, ಸಾಮಾನ್ಯ ಮಕ್ಕಳಂತೆ ಕಂಡಲ್ಲೆಲ್ಲ ಕೈಲಾಸ ಕಾಣುವ ಸ್ವಭಾವ. ಎಲ್ಲ ಮಕ್ಕಳು ತಂದೆ-ತಾಯಿಗಳನ್ನು, ನೆರೆಹೊರೆಯವರನ್ನು ಅನುಕರಿಸುವುದು ಸಹಜ. ತಂದೆ ಸೈಮನ್ ಕುದುರೆಯ ಜೀನುಗಳನ್ನು ತಯಾರು ಮಾಡುವ ಕೆಲಸ ಮಾಡುತ್ತಿದ್ದರು. ಮನೆಯ ಒಂದು ಭಾಗದಲ್ಲಿ ಕೆಲವು ಉಪಕರಣಗಳನ್ನು ಇಟ್ಟುಕೊಂಡು ಕಾಯಕ ನಿರ್ವಹಿಸುತ್ತಿದ್ದರು. 5 ವರ್ಷದ ಬಾಲಕ ಲೂಯಿ ಆಡುತ್ತ ಆಡುತ್ತ ಹೋಗಿ ಚೂಪಾದ ಒಂದು ಉಪಕರಣವನ್ನು ತೆಗೆದುಕೊಂಡು ಚರ್ಮದ ಒಂದು ತುಂಡಿನ ಮೇಲೆ ತೂತು ಮಾಡಲು ಪ್ರಯತ್ನಿಸುತ್ತಿದ್ದ. ಅದು ಜಾರಿ ಕಣ್ಣಿಗೆ ತಾಗಿ ಕಣ್ಣಿನಿಂದ ರಕ್ತ ಹರಿಯಿತು. ಆ ಪೆಟ್ಟಿನಿಂದ ಕಣ್ಣಿನ ದೃಷ್ಟಿ ಹೋಯಿತು. ಕ್ರಮೇಣ ಸೋಂಕಿಗೆ ಒಳಗಾಗಿ ಮತ್ತೊಂದು ಕಣ್ಣಿನ ದೃಷ್ಟಿಯೂ ಹೋಯಿತು. ಸಂವೇದನಾಶೀಲನಾದ ತಂದೆ ಮಗನ ಈ ದುರಂತದಿಂದ ದುಃಖಿತನಾದರೂ ಎದೆಗುಂದಲಿಲ್ಲ. ಮಗನನ್ನು ವಿದ್ಯಾವಂತನನ್ನಾಗಿ ಮಾಡಲು ಪ್ರಯತ್ನಿಸಿದ. ಆಗಿನ ಕಾಲದಲ್ಲಿ ಆ ಭಾಗದಲ್ಲಿ ಕಣ್ಣಿದ್ದವರ ಅಕ್ಷರಗಳನ್ನೇ ಉಬ್ಬುವಂತೆ ರಚಿಸಿ ಆ ಮೂಲಕ ವಿದ್ಯೆ ಕಲಿಸುತ್ತಿದ್ದರು. ಇದಕ್ಕೆ ‘ಮೂನ್ ಲಿಪಿ’ ಎನ್ನಲಾಗುತ್ತಿತ್ತು. ಆ ಸೌಲಭ್ಯ ಎಲ್ಲರಿಗೂ ಸಿಗುತ್ತಿರಲಿಲ್ಲ. ಆ ವೇಳೆಯಲ್ಲಿ ಪ್ಯಾರಿಸ್ ನಗರದಲ್ಲಿ ವ್ಯಾಲೆಂಟೆನ್ ಹಾಯ್ ಎಂಬುವವರು The Royal Institute for Blind Youths ಎಂಬ ಶಾಲೆಯನ್ನು ತೆರೆದಿದ್ದರು.

ಆ ಶಾಲೆಗೆ ಲೂಯಿನನ್ನು ಸೇರಿಸಲಾಯಿತು. ಚುರುಕಾದ ಹುಡುಗ, ಅಗಾಧವಾದ ನೆನಪಿನ ಶಕ್ತಿ. ಆಗ ಕಲಿಸುತ್ತಿದ್ದ ಮೂನ್ ಎಂಬ ಉಬ್ಬು ಲಿಪಿಯ ಮೂಲಕ ವಿದ್ಯಾಭ್ಯಾಸ ಮಾಡಿದ. ಪಿಯಾನೋ ನುಡಿಸುವುದನ್ನು ಕಲಿತುಕೊಂಡ. ಆದರೂ ಅವನ ಮನಸ್ಸಿಗೆ ಸಮಾಧಾನವಿರಲಿಲ್ಲ. ಚಿತ್ತದ ಆಳದಲ್ಲಿ ಏನನ್ನೋ ಹುಡುಕುತ್ತಿದ್ದ. ಒಂದು ದಿನ ಹೋಟೆಲ್​ನಲ್ಲಿ ಸ್ನೇಹಿತ ಡ್ಯಾನಿಯಲ್​ನೊಂದಿಗೆ ಕುಳಿತಿರುವಾಗ ಪತ್ರಿಕೆ ಮೂಲಕ ಒಂದು ವಿಶೇಷ ಸಂಗತಿ ತಿಳಿಯಿತು. ಮಿಲಿಟರಿ ಅಧಿಕಾರಿ ಚಾರ್ಲ್ಸ್ ಬಾರ್​ಬೀಯರ್ ಎಂಬುವವರು ಸೈನಿಕರಿಗೆ ಗುಪ್ತಸಂದೇಶ ಕಳಿಸಲು ಸ್ಪರ್ಶದ ಮೂಲಕ ಓದಬಹುದಾದ ಲಿಪಿಯನ್ನು ಕಂಡುಹಿಡಿದಿದ್ದರು. ಇದರಿಂದ ಹರ್ಷಿತನಾದ ಯುವಕ ಲೂಯಿ ಚಾರ್ಲ್ಸ್ ಬಾರ್​ಬೀಯರ್ ಅವರನ್ನು ಭೇಟಿಯಾಗಿ ಆ ಲಿಪಿ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡ. ಅವರು ಹನ್ನೆರಡು ಚುಕ್ಕೆಗಳನ್ನು ಉಪಯೋಗಿಸಿ ಆ ಲಿಪಿಯನ್ನು ರೂಪಿಸಿದ್ದರು. ಅದು ಓದಲು ಕಠಿಣವಾಗಿತ್ತು. ಲೂಯಿ ಬ್ರೖೆಲ್ ಅದನ್ನು ಆರು ಚುಕ್ಕೆಗೆ ಇಳಿಸಿ 63 ರೀತಿಯ ವಿನ್ಯಾಸಗಳಲ್ಲಿ ರಚಿಸಿದ. ಒಂದರಿಂದ ಆರು ಚುಕ್ಕೆಗಳೊಳಗೆ ರೂಪಿಸಲ್ಪಟ್ಟ ಅಕ್ಷರ ಬೆರಳಿನ ತುದಿಗೆ ಸುಲಭವಾಗಿ ಸಿಗುತ್ತದೆ. ಇದನ್ನು ತನ್ನ ವಿದ್ಯಾರ್ಥಿಗಳಿಗೆ ಕಲಿಸಲು ಆರಂಭಿಸಿದ. ಇದು ದಿನೇದಿನೇ ಪ್ರಚಾರ ಪಡೆಯಿತು. ಈ ಲಿಪಿಯ ಕೀರ್ತಿ ಬೇರೆ ದೇಶಗಳಿಗೂ ಹಬ್ಬಿ ಇಂಗ್ಲೆಂಡ್ ಸೇರಿ ನಾಲ್ಕಾರು ದೇಶಗಳು ಲಿಪಿಗೆ ಮಾನ್ಯತೆ ಕೊಟ್ಟವು. ದುರ್ದೈವದ ಸಂಗತಿಯೆಂದರೆ ಲೂಯಿ ಬ್ರೖೆಲ್ ಬದುಕಿರುವವರೆಗೂ ಫ್ರಾನ್ಸ್ ದೇಶದಲ್ಲಿ ಅವನ ಲಿಪಿಗೆ ಮಾನ್ಯತೆ ಸಿಗಲಿಲ್ಲ. ಆದರೂ ಅವನು ಅನೇಕ ಶಿಷ್ಯರಿಗೆ ಈ ಲಿಪಿ ಮೂಲಕವೇ ಬೋಧಿಸಿದ. ಅಂತಹವರ ಪೈಕಿ ಮೇರಿ ಎಂಬ ಸಂಗೀತ ಕಲಾವಿದೆ ಲೂಯಿ ಬ್ರೖೆಲ್ ಮರಣದ ನಂತರ ಫ್ರಾನ್ಸ್ ಅವರ ಲಿಪಿಗೆ ಮಾನ್ಯತೆ ನೀಡುವಂತೆ ಪ್ರಯತ್ನಪಟ್ಟಳು. ಅದು ಯಶಸ್ವಿಯಾಗಿ ಈಗ ವಿಶ್ವದಾದ್ಯಂತ ಈ ಲಿಪಿಗೆ ‘ಬ್ರೖೆಲ್ ಲಿಪಿ’ ಎಂದು ಹೆಸರಿಸಿ ಬ್ರೖೆಲ್ ಲಿಪಿಯ ಪುಸ್ತಕಗಳಿಗೆ ವಿಶ್ವದಾದ್ಯಂತ ಉಚಿತ ಅಂಚೆಸೇವೆಯನ್ನು ಒದಗಿಸಲಾಗಿದೆ. 2009ರಲ್ಲಿ ಭಾರತ ಸರ್ಕಾರ ಲೂಯಿ ಬ್ರೖೆಲ್ ಸ್ಮರಣಾರ್ಥ 2 ರೂಪಾಯಿ ಬೆಲೆಯ ನಾಣ್ಯವನ್ನು ಚಲಾವಣೆಗೆ ತರುವುದರ ಮೂಲಕ ಗೌರವ ವ್ಯಕ್ತಪಡಿಸಿದೆ. ಕೆಲವು ದೇಶಗಳು ಬ್ರೖೆಲ್ ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿವೆ. ನಿರಂತರ ಕ್ರಿಯಾಶೀಲರೂ, ಕಠಿಣ ಪರಿಶ್ರಮ ಜೀವಿಯೂ ಆಗಿದ್ದ ಲೂಯಿ ಬ್ರೖೆಲ್ 43ನೇ ವಯಸ್ಸಿನಲ್ಲಿ ಕ್ಷಯ ರೋಗಪೀಡಿತರಾಗಿ 1852 ಜನವರಿ 6ರಂದು ಇಹಲೋಕ ಯಾತ್ರೆ ಮುಗಿಸಿದರು. ಆದರೆ ಅವರು ಕಂಡುಹಿಡಿದ ಬ್ರೖೆಲ್ ಲಿಪಿ ಭೂಮಿಯಿರುವವರೆಗೂ ಅಂಧರ ಬಾಳಿನ ಬೆಳಕಾಗಿ ಚಿರನೂತನವಾಗಿರುತ್ತದೆ.

(ಲೇಖಕರು ಧಾರವಾಡದ ಶ್ರೀ ಗುರು ಬಸವ ಮಹಾಮನೆ ಮುಖ್ಯಸ್ಥರು, ಅಧ್ಯಾತ್ಮ ಸಾಧಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net