ಬದುಕಿನಲ್ಲಿ ಧರ್ಮ-ಕರ್ಮ ಸಾಮರಸ್ಯದ ಅವಶ್ಯಕತೆ

Column F
Published on
ಭಗವಂತನ ಸಾಕ್ಷಾತ್ಕಾರ ಪಡೆಯಬೇಕು ಎಂಬ ಅಭೀಪ್ಸೆಯ ಜೊತೆಗೆ ಜಗತ್ ಹಿತವನ್ನು ಕೂಡ ಸಾಧಿಸಬಹುದು. ಆಗ ಜಪ, ಧ್ಯಾನ, ಪ್ರಾರ್ಥನೆ ಮಾತ್ರವಲ; ಸಮಸ್ತ ಜೀವನದ ಕೆಲಸಗಳನ್ನು- ‘ಭಗವಂತನ ಪ್ರೀತ್ಯರ್ಥವಾಗಿ ಮಾಡಬೇಕಾದ ಸಾಧನೆ’ ಎಂಬ ದೃಢಬುದ್ಧಿ ಪ್ರಾಪ್ತವಾಗುವುದು. ಇದನ್ನೇ ‘ವ್ಯವಸಾಯಾತ್ಮಿಕಾ ಬುದ್ಧಿ’ ಎಂದು ಗೀತೆಯಲ್ಲಿ ಹೇಳಿದ್ದಾರೆ.

ಮನುಷ್ಯ ಸ್ವಭಾವತಃ ಕರ್ಮಜೀವಿ. ಹುಟ್ಟಿದಾಗಿನಿಂದ ಸಾಯುವವರೆಗೆ ಅನಿವಾರ್ಯವಾಗಿ ಒಂದಲ್ಲ ಒಂದು ಕೆಲಸವನ್ನು ಸತತವಾಗಿ ಮಾಡುತ್ತಲೇ ಇರಬೇಕಾಗುತ್ತದೆ. ಕೆಲವು ಕೆಲಸಗಳನ್ನು ಬುದ್ಧಿಪೂರ್ವಕವಾಗಿ, ಇನ್ನು ಹಲವು ಕ್ರಿಯೆಗಳನ್ನು ಪ್ರಜ್ಞಾವಿಹೀನರಾಗಿ ಅರಿವಿಲ್ಲದೆ ಮಾಡುತ್ತೇವೆ. ಆದರೆ ಬದುಕಿನ ಕರ್ಮಪಾಶದಿಂದ ಮುಕ್ತರಾಗುವುದು ಅಷ್ಟು ಸುಲಭವಲ್ಲ. ಆದ್ದರಿಂದಲೇ ನಾವು ನೆಲೆಸಿ ಬಾಳುವ ಈ ಭೂಮಿಯನ್ನು ‘ಕರ್ಮಭೂಮಿ’ ಎಂದು ಕರೆದಿದ್ದಾರೆ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಕೂಡ ಅದನ್ನೇ ಹೇಳಿದ್ದಾನೆ

ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ |

ಕಾರ್ಯತೆ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗಣೈಃ || 3.5 ||

ಅಂದರೆ ಒಂದು ಕ್ಷಣ ಕೂಡ ನಾವು ಕೆಲಸ ಮಾಡದೆ ಇರುವುದಕ್ಕೆ ಆಗುವುದಿಲ್ಲ. ಏಕೆಂದರೆ ಪ್ರಕೃತಿಜನ್ಯ ತ್ರಿಗುಣಗಳಿಂದ ವಶರಾಗಿರುವ ನಾವು ಕರ್ಮ ಮಾಡುತ್ತಲೇ ಇರಬೇಕು. ಒಂದು ಯೋಗ್ಯ ರೀತಿಯಲ್ಲಿ ಕರ್ಮ ಜೀವನವನ್ನು ನಡೆಸಿ, ಈ ಕರ್ಮಭೂಮಿಯನ್ನು ‘ಯೋಗಭೂಮಿ’ಯನ್ನಾಗಿ ಪರಿವರ್ತಿಸಲು ಅಥವಾ ಧರ್ಮಕ್ಷೇತ್ರವನ್ನಾಗಿ ಮಾರ್ಪಡಿಸಲು ಸಾಧ್ಯವೇ? ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ. ಶ್ರೀಕೃಷ್ಣ, ಶ್ರೀರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಮಹರ್ಷಿ ಅರವಿಂದರು ಮುಂತಾದ ಮಹಾಸಂತರು, ಋಷಿಮುನಿಗಳ ಬೋಧನೆಯ ಸಾರ ಮತ್ತು ಅವತಾರ ಪುರುಷರು ಅವತರಣ ಮಾಡಿರುವ ಉದ್ದೇಶವೇ ಇದು ಎನ್ನಬಹುದು. ಅಂದರೆ ನಮ್ಮಲ್ಲಿರುವ ನೈತಿಕ, ಧಾರ್ವಿುಕ, ಆಧ್ಯಾತ್ಮಿಕ, ಗುಣ-ಕರ್ಮಗಳ ವರ್ಧನೆ ಮತ್ತು ನಮ್ಮಲ್ಲಿರುವ ದುರ್ಗಣ, ದುಶ್ಚಟಗಳ ನಿಮೂಲನೆ ಇವು ಜೀವನದಲ್ಲಿ ಪ್ರಮುಖವಾದ ಸಂಗತಿಗಳಾಗಿವೆ. ಒಬ್ಬ ಶ್ರೀರಾಮ ಒಬ್ಬ ವಿಭೀಷಣನ ರಕ್ಷಣೆ ಮಾಡುವುದು, ರಾವಣನ ವಧೆ ಮಾಡುವುದು ಅಥವಾ ಒಬ್ಬ ಶ್ರೀಕೃಷ್ಣ, ಕಂಸನ ವಧೆ ಮಾಡುವುದು ಎಂಬ ಸೀಮಿತ ಅರ್ಥದಲ್ಲಿ ಇದನ್ನು ಗ್ರಹಿಸಬಾರದು. ನಮ್ಮ ಪ್ರಕೃತಿಯಲ್ಲಿ ಪಾಂಡವ-ಕೌರವ ಗುಣಗಳು ಮನೆ ಮಾಡಿವೆ. ಅವನ್ನು ಶ್ರೀರಾಮ ಮತ್ತು ಶ್ರೀಕೃಷ್ಣರ ಆದರ್ಶದಂತೆ, ಇತರ ಸಂತರು ಮತ್ತು ತತ್ತ್ವಜ್ಞಾನಿಗಳು ತೋರಿಸಿಕೊಟ್ಟ ಜೀವನದರ್ಶನದಂತೆ, ಭಗವಂತನ ದಿವ್ಯನಾಮ ರೂಪಗಳನ್ನು ನೆನೆಯುತ್ತ, ಧ್ಯಾನಿಸುತ್ತ, ಸತ್ಕರ್ಮಗಳನ್ನು ಮಾಡುತ್ತ, ಶ್ರದ್ಧಾಭಕ್ತಿಗೋಸ್ಕರ ಪ್ರಾರ್ಥಿಸುತ್ತ ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಮತ್ತು ಪಾಪ ಪ್ರವೃತ್ತಿಯಿಂದ ಮುಕ್ತರಾಗಬಹುದು.

ಕರ್ಮಜೀವಿಗಳಾದ ನಾವು ಕರ್ಮ ಮತ್ತು ಕರ್ತವ್ಯಗಳನ್ನು ಮಹಾಸಂತರ ಮಾರ್ಗ-ದರ್ಶನದಂತೆ ಅಂದರೆ ಅವರು ತೋರಿಸಿಕೊಟ್ಟ ನೈತಿಕ, ಧಾರ್ವಿುಕ ಮತ್ತು ಆಧ್ಯಾತ್ಮಿಕ ಸೂತ್ರಕ್ಕೆ ಅನುಸಾರವಾಗಿ, ಯೋಗಮಾರ್ಗದ ನಿಯಮಗಳೊಡನೆ ನಿರ್ವಹಿಸುತ್ತ ಬಾಳಿದರೆ ಬದುಕು ಶಾಂತಿ, ನಿಸ್ವಾರ್ಥ ಸೇವೆ, ಜ್ಞಾನಭಕ್ತಿಯಿಂದ ಕೂಡಿದ ‘ಕರ್ಮಯೋಗ’ವಾಗಬಲ್ಲದು. ಆಗ ಧರ್ಮ-ಕರ್ಮಗಳ ಸಮನ್ವಯದ ಭೂಮಿಕೆಯಾಗುತ್ತದೆ ಮಾನವ ಜೀವನ.

ಇವತ್ತಿನ ಸಾಮಾಜಿಕ ಸ್ಥಿತಿ ಮತ್ತು ಕರ್ಮ-ಧರ್ಮಗಳ ಸಾಮರಸ್ಯ: ವರ್ತಮಾನ ಪರಿಸ್ಥಿತಿಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ, ಬದುಕಿನ ವಿಕಾಸದ ಬೇರೆ ಬೇರೆ ಹಂತಗಳಲ್ಲಿ, ಹೋರಾಡುವ ನಮ್ಮೆಲ್ಲರಿಗೂ ಕರ್ತವ್ಯಪಾಲನೆಗೆ ಧರ್ಮ ಮತ್ತು ಅಧ್ಯಾತ್ಮ ಒಂದು ಪೂರಕ ಶಕ್ತಿಯೇ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇದನ್ನು ಇಂದಿನ ಸ್ಥಿತಿಗತಿ, ಆಗುಹೋಗುಗಳನ್ನು ಪರಿಗಣಿಸಿ ಸ್ವಲ್ಪ ವಿಶ್ಲೇಷಿಸಿ ನೋಡುವುದು ಅಗತ್ಯ.

ಇಂದಿನ ಸಮಾಜದಲ್ಲಿ ಕರ್ತವ್ಯಲೋಪ, ಕರ್ಮಗಳ ವಿಕೃತಿ, ಧರ್ಮ-ಕರ್ಮಗಳ ತಿಕ್ಕಾಟ ಚಿಂತಾಜನಕ ಮಟ್ಟ ತಲುಪಿದೆ. ಯುವಕರಲ್ಲಿ, ಮುಖಂಡರಲ್ಲಿ, ವಿದ್ಯಾವಂತರಲ್ಲಿ ಕಂಡುಬರುವ ಕರ್ತವ್ಯಪ್ರಜ್ಞೆಯ ಅಭಾವ ನೋಡಿದರೆ ‘ಯೋಗಃ ಕರ್ಮಸು ಕೌಶಲಂ’ ಮತ್ತು ‘ಕರ್ಮಣ್ಯೇವಾದಿಕಾರಸ್ತೆ ಮಾ ಫಲೇಶು ಕದಾಚನ’, (ಯೋಗವೆಂದರೆ ಕರ್ಮದಲ್ಲಿ ಕುಶಲತೆ; ಕರ್ಮಮಾಡಲು ನಿನಗೆ ಅಧಿಕಾರವಿದೆ, ಆದರೆ ಕರ್ಮಫಲವನ್ನು ಅಪೇಕ್ಷಿಸಲು ಅಲ್ಲ!) ಎಂದು ಸಾರಿದ ನಮ್ಮ ಈ ದೇಶ ಮತ್ತು ಭಾರತೀಯ ಸಂಸ್ಕೃತಿಗೆ ಸೇರಿದ ನಾವು ಆತ್ಮವಿಸ್ಮೃತಿ ಎಂಬ ವ್ಯಾಧಿಯಿಂದ ಬಳಲುತ್ತಿದ್ದೇವೆ ಎಂಬಂತೆ ಕಾಣುತ್ತದೆ. ಸಂಸ್ಕೃತಿಯ ವಿಕೃತಿಗೆ ಮೂಲಕಾರಣ ಕರ್ಮ ಮತ್ತು ಧರ್ಮದಲ್ಲಿರುವ ಅಸಾಧಾರಣ ಅಂತರ! ಕರ್ತವ್ಯ ಮತ್ತು ಆಧ್ಯಾತ್ಮಿಕ ನೀತಿಗಳ ನಡುವೆ ಇರುವ ಅಡ್ಡಗೋಡೆ! ಭಕ್ತಿ ಮತ್ತು ಧರ್ಮಪ್ರಜ್ಞೆ, ದೇವಸ್ಥಾನ, ಪೂಜಾಗೃಹ, ಪುಸ್ತಕ ಮತ್ತು ಭಾಷಣಗಳಿಗೆ ಸೀಮಿತವಾಗಿದ್ದು, ನಿತ್ಯಜೀವನದ, ಕಾರ್ಯಕ್ಷೇತ್ರಗಳಲ್ಲಿ ಅವುಗಳನ್ನು ಬಿಂಬಿಸುತ್ತಿಲ್ಲ ಮತ್ತು ಕಾರ್ಯಗತಗೊಳಿಸುತ್ತಿಲ್ಲ; ಮಾತ್ರವಲ್ಲ, ಅವುಗಳನ್ನು ಅರ್ಥಮಾಡಿಕೊಳ್ಳದೆ, ನಿರ್ಲಕ್ಷಿಸುತ್ತಿದ್ದೇವೆ.

ಸ್ವಾಮಿ ವಿವೇಕಾನಂದರು ಒಂದು ಶತಮಾನದ ಹಿಂದೆಯೇ ದೇಶದ ಉದ್ದಗಲಕ್ಕೂ ಸಂಚರಿಸಿ ಕರ್ತವ್ಯಭ್ರಷ್ಟರಾದ, ಅಧೋಗತಿಗಿಳಿದ, ಭಾರತದ ಜನಜೀವನವನ್ನು ಪ್ರತ್ಯಕ್ಷವಾಗಿ ಕಂಡು ಮರುಗಿದರು. ನಮ್ಮ ಧರ್ಮ ಒಂದು ಕಡೆ, ಕರ್ಮ ಇನ್ನೊಂದು ಕಡೆ, ಅರ್ನ್ಯಘ ಅಧ್ಯಾತ್ಮ ಮೂಲ ಮತ್ತೊಂದು ಕಡೆ ನಮ್ಮನ್ನು ಎಳೆದುಕೊಂಡು ಹೋಗುತ್ತಿದೆ. ಜನರು ಉನ್ನತ ನೈತಿಕತೆಯ ಮಾತು ಆಡುವುದನ್ನು ಕಾಣುತ್ತೇವೆ. ಆದರೆ ಅವರ ನಡತೆ ಅದಕ್ಕೆ ತದ್ವಿರುದ್ಧವಾಗಿರುತ್ತದೆ. ಆದ್ದರಿಂದ ಸ್ವಾಮಿ ವಿವೇಕಾನಂದರು ಪರಿಕಲ್ಪಿಸಿದ ನಮ್ಮ ದೇಶದ ಪುನರುಜ್ಜೀವನಕ್ಕಾಗಿ ಅವರು ಕೊಟ್ಟ ಕಾರ್ಯಪ್ರಣಾಳಿಕೆಯಲ್ಲಿ ಕರ್ಮ-ಧರ್ಮ-ಸಮನ್ವಯಕ್ಕೆ ಹೆಚ್ಚಿನ ಪ್ರಾಧಾನ್ಯ ಕೊಟ್ಟರು. ಸ್ವಾಮಿ ವಿವೇಕಾನಂದರ ಮತ್ತು ಇತರ ಅನೇಕ ಸಂತರ ಜೀವನದಲ್ಲಿ ಆಧ್ಯಾತ್ಮಿಕ ಸಾಧನೆ ಮತ್ತು ಲೋಕಕಲ್ಯಾಣದ ಕರ್ಮಯೋಗ ಸಮನ್ವಯಗೊಂಡಿದೆ. ಇದನ್ನೇ ಸ್ವಾಮೀಜಿ ‘ಅನುಷ್ಠಾನ ವೇದಾಂತ’ ಎಂದು ಘೊಷಿಸಿದರು. ಇದನ್ನು ಕಾರ್ಯರೂಪಕ್ಕೆ ತರಲು ರಾಮಕೃಷ್ಣ ಸಂಘವನ್ನು ಸ್ಥಾಪಿಸಿ ಈ ಸಂಘದ ಧ್ಯೇಯವನ್ನು ‘ಆತ್ಮನೋ ಮೋಕ್ಷಾರ್ಥಂ ಜಗದ್ದಿತಾಯ ಚ’ ಎಂದು ಸಾರಿ ಧರ್ಮಕರ್ಮಗಳ ಸಮನ್ವಯಕ್ಕೆ ಹೊಸ ಪ್ರೇರಣೆಯನ್ನು ಕೊಟ್ಟರು. ಒಂದು ಇನ್ನೊಂದಕ್ಕೆ ಪೂರಕ ಅಂದರೆ ‘ಆತ್ಮನೋ ಮೋಕ್ಷಾರ್ಥಂ’ ಎಂದು ಮೋಕ್ಷಕ್ಕಾಗಿ ಮಾಡುವ ಸಾಧನೆಯಾದ ಅಧ್ಯಾತ್ಮವನ್ನು, ‘ಜಗತ್​ಹಿತ’ವನ್ನು ಸಾಧಿಸುವ ಕರ್ಮದೊಂದಿಗೆ ಜೋಡಿಸಿ, ಇವು ಒಂದಕ್ಕೊಂದು ಪೂರಕ ಮಾತ್ರವಲ್ಲ, ಅದು ವರ್ತಮಾನದ ಅಗತ್ಯ ಕೂಡ ಎಂದು ಸ್ಪಷ್ಟಪಡಿಸಿದರು. ‘ಶಿವಭಾವದಲ್ಲಿ ಜೀವಸೇವೆ’ ಮಾಡುತ್ತ ಆಧ್ಯಾತ್ಮಿಕ ಪ್ರಗತಿ ಮತ್ತು ಜಗತ್​ಹಿತ ಎರಡನ್ನೂ ಸಾಧಿಸಬಹುದು ಎಂದು ಸಾರಿದರು.

ಕರ್ಮವನ್ನು ಆಧ್ಯಾತ್ಮೀಕರಣಗೊಳಿಸಿ ಯೋಗವನ್ನಾಗಿ ಮಾಡಬೇಕಾದರೆ ಮತ್ತು ನಮ್ಮ ಕರ್ತವ್ಯಗಳನ್ನು ದಕ್ಷತೆಯಿಂದ ಮಾಡಬೇಕಾದರೆ ಕೆಲವು ಅರ್ಹತೆಗಳನ್ನು ನಾವು ಪಡೆದಿರಬೇಕು.

1. ಬಾಳಿಗೊಂದು ಉನ್ನತ ಗುರಿ: ಜೀವನದಲ್ಲಿ ಒಂದು ಧ್ಯೇಯ ಇಲ್ಲದಿದ್ದರೆ ಮಹತ್ತರವಾದದ್ದನ್ನು ಸಾಧಿಸಲು ಆಗುವುದಿಲ್ಲ ಎಂಬುದು ಸರ್ವವಿದಿತ. ಸ್ವಾಮಿ ವಿವೇಕಾನಂದರು ಇದನ್ನು ಒತ್ತು ಕೊಟ್ಟು ಹೇಳಿದ್ದಾರೆ. ಗುರಿ ಇದ್ದವನು ನೂರು ತಪ್ಪು ಮಾಡಿದರೆ, ಗುರಿ ಇಲ್ಲದವನು ಸಾವಿರ ಬಾರಿ ತಪ್ಪು ಮಾಡುತ್ತಾನೆ ಎಂದು.

ಈ ಜೀವನದಲ್ಲಿ ಏನನ್ನು ಸಾಧಿಸಬೇಕು, ಏನು ಮಾಡಿದರೆ ಶ್ರೇಯಸ್ಸಾಗುತ್ತದೆ, ಜೀವನ ಸಾರ್ಥಕವಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಇರುವುದು ಅತ್ಯವಶ್ಯ. ಶ್ರೀರಾಮಕೃಷ್ಣರು, ಸ್ವಾಮಿ ವಿವೇಕಾನಂದರು ಎಲ್ಲ ಮಹಾತ್ಮರು ‘ಭಗವಂತನ ಸಾಕ್ಷಾತ್ಕಾರ’ ‘ಸತ್ಯಾನ್ವೇಷಣೆ’ಯೇ ಜೀವನದ ಮಹೋನ್ನತ ಧ್ಯೇಯ ಎಂಬುದನ್ನು ಪದೇಪದೆ ಹೇಳಿದ್ದಾರೆ. ಆದರೆ ಅದರ ಜೊತೆಗೆ ಸೇವಾಭಾವ ಕೂಡ ಸೇರಿರಬೇಕು ಎಂದು ನುಡಿದಿದ್ದಾರೆ.

ಭಗವದ್ಗೀತೆ ನಾವು ಜೀವನದಲ್ಲಿ ಕಂಡುಕೊಳ್ಳಬೇಕಾದ ಧ್ಯೇಯದ ಬಗ್ಗೆ ಹೀಗೆ ಹೇಳುತ್ತದೆ:

ಯಂ ಲಬ್ಧಾ್ವ ಚಾಪರಂ ಲಾಭಂ ಮನ್ಯತೆ ನಾದಿಕಂ ತತಃ |

ಯಸ್ಮಿನ್ ಸ್ಥಿತೋ ನ ದುಃಖೇನ ಗುರುಣಾಪಿ ವಿಚಾಲ್ಯತೇ || 6.22 ||

ಯಾವುದನ್ನು ಹೊಂದಿ, ಅದಕ್ಕಿಂತ ಮಿಗಿಲಾದ, ಅದಕ್ಕಿಂತ ಅಧಿಕವೆಂದು ಯಾವುದನ್ನೂ ಎಣಿಸುವುದಿಲ್ಲವೋ, ಯಾವ ಸ್ಥಿತಿಯಲ್ಲಿ ಇದ್ದುಕೊಂಡು ಮಹತ್ತರವಾದ ದುಃಖ-ಕಷ್ಟ ಬಂದರೂ ವಿಚಲಿತನಾಗದೇ ಇರುತ್ತಾನೆಯೋ ಅದೇ ‘ಯೋಗ’! ಅದೇ ಜೀವನದ ಉದ್ದೇಶ.

2. ಸಮಗ್ರ ಜೀವನದೃಷ್ಟಿ: ವ್ಯಕ್ತಿತ್ವದ ವಿವಿಧ ಆಯಾಮಗಳಾದ ಭೌತಿಕ-ಶಾರೀರಿಕ, ಮಾನಸಿಕ ಆಯಾಮ, ಆಧ್ಯಾತ್ಮಿಕ ತಿರುಳು ಇವುಗಳ ಬಗ್ಗೆ ತಿಳಿದುಕೊಳ್ಳಬೇಕು. ನಮಗೆ ಮತ್ತು ಸಮಾಜಕ್ಕಿರುವ ಸಂಬಂಧಗಳ ಅರಿವನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವದ ಹಿಂದೆ ಆಧಾರವಾಗಿರುವ ಸೂಕ್ಷ್ಮವಾದ ದೈವಶಕ್ತಿಯನ್ನು ತಿಳಿಯುವ ಹಂಬಲ ಬೆಳೆಸಿಕೊಳ್ಳಬೇಕು. ಇದನ್ನೇ ‘ಅಧ್ಯಾತ್ಮ’ ಎನ್ನಲಾಗಿದೆ.

3. ನಾವು ಸಮಾಜದ ಅವಿಭಾಜ್ಯ ಅಂಗ: ಪ್ರತಿಯೊಂದು ಆಲೋಚನೆ ಮತ್ತು ಕೆಲಸ ನಮ್ಮ ವ್ಯಕ್ತಿತ್ವ ಮತ್ತು ಸಮಾಜದ ಮೇಲೆ ಒಂದಲ್ಲ ಒಂದು ರೀತಿಯ ಪರಿಣಾಮ ಬೀರುತ್ತ ಇರುತ್ತದೆ ಎಂಬುದನ್ನು ಗಮನಿಸಬೇಕು. ಅದೇ ರೀತಿ ಸಮಾಜವೂ ನಮ್ಮ ಮೇಲೆ, ನಮ್ಮ ಆಲೋಚನೆಗಳ ಮತ್ತು ನಮ್ಮ ನಡೆನುಡಿಗಳ ಮೇಲೆ ಪರಿಣಾವನ್ನು ಸತತವಾಗಿ ಬೀರುತ್ತದೆ ಎಂಬುದರ ಅರಿವು ಇರಬೇಕು. ಕೆಲವು ಪ್ರಭಾವಗಳು ಸ್ಥೂಲವಾಗಿದ್ದು, ಇಂದ್ರಿಯ ಗೋಚರವಾಗಿರುತ್ತವೆ ಮತ್ತು ಹಲವು ಸೂಕ್ಷ್ಮವಾಗಿದ್ದು, ಇಂದ್ರಿಯ ಗೋಚರವಾಗಿರುವುದಿಲ್ಲ. ಇವುಗಳ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳ ತಿಳಿವಳಿಕೆಯನ್ನು ನಿಜವಾದ ಸಂತರ ಮಾರ್ಗದರ್ಶನದಿಂದ, ಶಾಸ್ತ್ರಾಧ್ಯಯನದಿಂದ, ಆಳವಾದ ಚಿಂತನೆಯಿಂದ ಮಾತ್ರ ತಿಳಿಯಬಹುದು. ಗಾಂಧೀಜಿಯವರು ‘ಕೆಟ್ಟದ್ದನ್ನು ನೋಡಬಾರದು, ಕೇಳಬಾರದು ಮತ್ತು ಆಡಬಾರದು’ ಎಂದು ನೀಡಿರುವ ಸಂದೇಶವನ್ನು ವಿವೇಚಿಸಬೇಕು.

4. ನಾವು ಮತ್ತು ವಿಶ್ವ: ವ್ಯಷ್ಟಿ-ಸಮಷ್ಟಿಗಳ ಹಿಂದೆ ಇರುವ ಪ್ರಕೃತಿ ಮತ್ತು ದೈವಿಕಶಕ್ತಿಯ ಅರಿವು ಮತ್ತು ಅದರ ನಿಯಮಗಳ ಸಂಬಂಧದ ಅರಿವು ನಮಗಿರಬೇಕು. ನಮ್ಮ ಹುಟ್ಟು, ಬಾಲ್ಯ, ಯೌವ್ವನ, ಗೃಹಸ್ಥಜೀವನ, ವೃದ್ಧಾಪ್ಯ ಮತ್ತು ಸಾವು ಎಂಬ ಜೀವನಚಕ್ರದ ನಿಯಮ ಹಾಗೂ ಪಂಚಭೂತಗಳ ಮತ್ತು ಇತರ ಸೂಕ್ಷ್ಮತತ್ತ್ವಗಳ ಚಲನವಲನಕ್ಕೂ ಒಂದು ನಿಕಟ ಸಂಬಂಧವಿದೆ ಎಂಬ ಅರಿವನ್ನು ಬೆಳೆಸಿಕೊಳ್ಳುವುದು ಅವಶ್ಯಕ.

5. ಅಧ್ಯಾತ್ಮ ಸಾಧನೆಯಲ್ಲಿ ಶ್ರದ್ಧೆ, ಧರ್ಮದ ಅನುಷ್ಠಾನದಲ್ಲಿ ನಿಷ್ಠೆ: ಆಧ್ಯಾತ್ಮಿಕ ಸಾಧನೆ, ಧಾರ್ವಿುಕ ಅನುಷ್ಠಾನಾದಿಗಳು ವ್ಯಕ್ತಿತ್ವದ ವಿಕಸನಕ್ಕೆ ಮತ್ತು ನಮ್ಮ ಗುರಿಯನ್ನು ತಲುಪುವುದಕ್ಕೆ, ಕರ್ತವ್ಯ ನಿರ್ವಹಣೆಗೆ ಪೂರಕವೂ, ಸಹಾಯಕವೂ ಆದ ಶಕ್ತಿ ಎಂಬುದನ್ನು ಮಹಾತ್ಮರ ಜೀವನ, ಗುರುವಾಕ್ಯ ಮತ್ತು ಶಾಸ್ತ್ರವಾಕ್ಯದಿಂದ ತಿಳಿದುಕೊಂಡು ಅದರ ಅನುಷ್ಠಾನದಲ್ಲಿ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು.

6. ಮಾನಸಿಕ ಅರ್ಹತೆಗಳು: ಮನಸ್ಸನ್ನು ಸತ್ಸಂಗ ಮತ್ತು ಸದಂಥಗಳ ಅಧ್ಯಯನದಿಂದ ಜಾಗೃತಗೊಳಿಸಿ, ಅದರ ವಿವೇಚನಾ ಶಕ್ತಿಯನ್ನು ವರ್ಧಿಸಿಕೊಳ್ಳುವುದು ಮುಖ್ಯ. ಶಾಸ್ತ್ರದಲ್ಲಿ ತಿಳಿಸಿದಂತೆ ‘ಮನಯೇವ ಮನುಷ್ಯಾನಾಂ ಕಾರಣಂ ಬಂಧಮೋಕ್ಷಯೋಃ’ ಅಂದರೆ, ಮನಸ್ಸೇ ನಮ್ಮ ಬಂಧನ ಮತ್ತು ಮುಕ್ತಿಗೆ ಕಾರಣ. ಆದ್ದರಿಂದ ನಿತ್ಯಾನಿತ್ಯ ವಸ್ತುವಿವೇಕ, ತಾತ್ಕಾಲಿಕ ಸುಖ ಮತ್ತು ನಿಜವಾದ ಶ್ರೇಯಸ್ಸಿಗೆ ಇರುವ ವ್ಯತ್ಯಾಸ ಗುರುತಿಸಬೇಕು. ನಿಮೋಹ, ನಿಸ್ವಾರ್ಥ ಭಾವದಿಂದ ಮತ್ತು ಪೂರ್ಣ ಅರಿವಿನಿಂದ ಕರ್ಮವನ್ನು ಮಾಡುವುದು, ಇವುಗಳನ್ನೆಲ್ಲ ಆಂತರ್ಯದಲ್ಲಿ ಬೆಳೆಸಿಕೊಂಡರೆ, ನಿಜಜೀವನದಲ್ಲಿ ಸಂತೃಪ್ತಿ ಪಡೆಯಬಹುದು.

ಕರ್ಮಗಳನ್ನು ದೈವಪ್ರಜ್ಞೆ, ನಿಷ್ಕಾಮಭಾವದಿಂದ ಭಗವತ್​ಪ್ರೀತ್ಯರ್ಥವಾಗಿ ಮಾಡಲು ಪ್ರಯತ್ನಿಸಿದಾಗ ಅದು ಜಪ, ಧ್ಯಾನ, ಉಪಾಸನೆಗಳಂತೆ ನಮ್ಮ ಚಿತ್ತವನ್ನು ಶುದ್ಧಗೊಳಿಸಿ ಕರ್ಮಯೋಗ (ಕರ್ಮಯಜ್ಞ) ವನ್ನಾಗಿ ಪರಿವರ್ತಿಸುತ್ತದೆ. ಯಾವ ರೀತಿ ಸಾಂಪ್ರದಾಯಿಕ ಆಧ್ಯಾತ್ಮಿಕ ಉಪಾಸನೆಗಳೂ ಮನಸ್ಸಿನ ಮೇಲೆ ಪ್ರಭಾವ ಬೀರಿ ನಮ್ಮ ಪ್ರಜ್ಞೆಯನ್ನು ಪರಿವರ್ತಿಸಲು ಸಹಾಯ ಮಾಡುತ್ತದೆಯೋ ಅದೇ ರೀತಿ ಕರ್ಮಗಳನ್ನು ಭಗವದ್ಗೀತೆಯಲ್ಲಿ ಹೇಳಿದಂತೆ ಕರ್ಮಯಜ್ಞವನ್ನಾಗಿ ಪರಿವರ್ತಿಸಿದರೆ ಮನಸ್ಸು ಶುದ್ಧವಾಗಿ, ಆಧ್ಯಾತ್ಮಿಕ ಅನುಭೂತಿ ಸಾಧ್ಯವಾಗುತ್ತದೆ. ಹೀಗೆ ಧರ್ಮ-ಕರ್ಮಗಳ ಸಂಯೋಗ ಮತ್ತು ಸಾಮರಸ್ಯ ಒಂದು ವ್ಯಕ್ತಿಯಲ್ಲಿ, ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ನಿಜವಾದ ಸಂತೃಪ್ತಿಯನ್ನೂ, ಪರಿಪೂರ್ಣತೆಯನ್ನೂ ಸಾಧಿಸಬಲ್ಲದು.

(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net