ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ

Column F
Published on
ಜೀವನದುದ್ದಕ್ಕೂ ಅಧರ್ಮದ ವಿರುದ್ಧ ಹೋರಾಡುತ್ತ, ಧರ್ಮದ ರಕ್ಷಣೆಗಾಗಿಯೇ ಹೋರಾಟ ನಡೆಸಿದ ಶ್ರೀಕೃಷ್ಣನ ಬದುಕು ನಮಗೆಲ್ಲ ಪ್ರೇರಕ ಹಾಗೂ ಮಾರ್ಗದರ್ಶಕ. ಜಗತ್ತಿಗೇ ಜೀವನಧರ್ಮ ಸಾರಿದ ಶ್ರೀಕೃಷ್ಣನ ಬಾಲ್ಯ ವರ್ಣನಾತೀತ ಹಾಗೂ ಆನಂದಮಯವಾಗಿತ್ತು. ಅವನ ಬಾಲಲೀಲೆ, ತುಂಟಾಟಗಳನ್ನು ಎಲ್ಲರೂ ಆನಂದಿಸುತ್ತಾರೆ, ಕೊಂಡಾಡುತ್ತಾರೆ. ಕೃಷ್ಣನು ಸಣ್ಣವನಿದ್ದಾಗಲೇ ಪವಾಡಗಳನ್ನು ತೋರಿಸಿದ. ಪೂತನಿ ಸಹಿತವಾಗಿ ಅನೇಕ ರಾಕ್ಷಸರನ್ನು ಚಾಕಚಕ್ಯತೆ ಮತ್ತು ಬುದ್ಧಿವಂತಿಕೆಯಿಂದ ಸದೆಬಡಿದ. ಕಾಳಿಂಗಮರ್ದನ ಮಾಡಿದ್ದು, ಗೋವರ್ಧನಗಿರಿಯನ್ನು ಎತ್ತಿದ್ದು... ಇವನ್ನೆಲ್ಲ ಕಥೆಗಳ ಮೂಲಕ ಕೇಳಿದ್ದೇವೆ.

‘ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ... ರಂಗನ ಎಲ್ಲಿ ನೋಡಿದಿರಿ...

ನಂದಗೋಪನ ಮಂದಿರಂಗಳ ಸಂದುಗೊಂದಿನಲಿ ಚಂದ ಚಂದದ ಗೋಪಬಾಲರ ವೃಂದವೃಂದದಲಿ.

ಸುಂದರಾಂಗದ ಸುಂದರೀಯರ ಹಿಂದುಮುಂದಿನಲಿ, ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ’

ಎಂದು ಪುರಂದರ ದಾಸರು ಅನೇಕ ಹಾಡುಗಳಲ್ಲಿ ಕೃಷ್ಣನ ಬಾಲ್ಯದ ತುಂಟಾಟಗಳನ್ನು ವಿವಿಧ ರೀತಿಯಲ್ಲಿ ವರ್ಣಿಸಿದ್ದಾರೆ. ಅವರ ವರ್ಣನೆಯಲ್ಲಿ ಕೃಷ್ಣ ವೃಂದಾವನದಲ್ಲಿ ಬಾಲ್ಯವನ್ನು ಹೇಗೆ ಕಳೆದಿದ್ದ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಬೆಣ್ಣೆ ಕದಿಯುವ ನವನೀತ ಚೋರ ಕೃಷ್ಣ, ಗೋಪಿಕೆಯರೊಂದಿಗಿನ ಚೇಷ್ಟೆಗಳು, ತಾಯಿಯ ಏಟು ತಪ್ಪಿಸಿಕೊಳ್ಳಲು ಸಂದುಗೊಂದಿನಲಿ ಅಡಗಿ ಕುಳಿತುಕೊಳ್ಳುತ್ತಿದ್ದ ರೀತಿ, ಆಕಳು, ಕರುಗಳ ಜೊತೆಗಿದ್ದ ಅವನ ಸಂಬಂಧ... ಹೀಗೆ ಕೃಷ್ಣನ ಬಾಲ್ಯದ ಜೀವನವೇ ಒಂದು ವೈಭವ. ಸೆರೆಮನೆಯಲ್ಲಿ ಹುಟ್ಟಿದ ಕೃಷ್ಣ ಬೆಳೆದದ್ದೆಲ್ಲ ಪ್ರಕೃತಿಯ ನಡುವೆ, ವೃಂದಾವನದಲ್ಲಿ ಗೆಳೆಯರೊಂದಿಗೆ. ಪ್ರಕೃತಿ ಜೊತೆಗಿನ ಆತನ ಸಂಬಂಧ ಮತ್ತು ಬಾಲ್ಯ ಜೀವನವನ್ನು ಅನುಭವಿಸಿದ ರೀತಿ ಭಾರತೀಯರನ್ನು ಮುದಗೊಳಿಸುತ್ತದೆ. ಇಂದು ವಿದೇಶಿಯರೂ ಬಾಲಗೋಪಾಲನ ಪ್ರತಿರೂಪವನ್ನು ತಮ್ಮ ಮಕ್ಕಳಲ್ಲಿ ಕಾಣುತ್ತಾರೆ. ಹೆತ್ತವರು ಮಕ್ಕಳ ಮೇಲೆ ತೋರಿಸಬೇಕಾದ ಪ್ರೀತಿ ಮತ್ತು ಕಾಳಜಿಗೆ ಕೃಷ್ಣ ಆದರ್ಶವಾಗಿದ್ದಾನೆೆ. ಕೃಷ್ಣ ಬಾಲ್ಯದ ತುಂಟತನದ ಮೂಲಕ ಕಾಡಿಸಿ-ಪೀಡಿಸಿದರೂ ಕೋಪಿಸಿಕೊಳ್ಳದ ತಾಯಿ ಯಶೋದೆಯ ನಡೆ ಇಂದಿನ ಸಮಾಜಕ್ಕೆ ವಿಶೇಷವಾಗಿ ಹೆತ್ತವರಿಗೆ ಮಾದರಿಯಾಗಿದೆ.

ಊರವರೆಲ್ಲ ಕೃಷ್ಣನ ಕಳ್ಳಾಟ, ತುಂಟಾಟಗಳ ಬಗ್ಗೆ ದೂರು ನೀಡುತ್ತಿದ್ದರೂ ಆತನ ತಾಯಿ ಮಾತ್ರ ಆತ ಇನ್ನೂ ಚಿಕ್ಕವನು, ಮುಗ್ಧ ಬಾಲಕ ಎಂದು ಹೇಳುತ್ತಾಳೆ. ಆಗ ಊರಿನವರು ‘ಹೌದೌದು. ನೀನು ತಿಳಿದುಕೊಂಡಷ್ಟು ಚಿಕ್ಕವನೇನಲ್ಲ. ಆತ ಎಲ್ಲ ರೀತಿಯ ತುಂಟಾಟ ಮಾಡುತ್ತಾನೆ’ ಎಂದರೂ ತಾಯಿ ಯಶೋದೆ ಮಗನನ್ನು ಸಮರ್ಥಿಸಿಕೊಳ್ಳುತ್ತಾಳೆ. ‘ಚಿಕ್ಕವನಿವನೇನಮ್ಮ’ ಎಂಬ ಹಾಡಿನ ಮೂಲಕ ಪುರಂದರದಾಸರು ಈ ಸನ್ನಿವೇಶವನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಕೃಷ್ಣನ ತುಂಟಾಟ ತಡೆಯಲಾರದೆ ತಾಯಿ ಇನ್ನೆಷ್ಟು ಬಾರಿ ಸಹಿಸಿಕೊಳ್ಳಲು ಸಾಧ್ಯ ಎಂದು, ಅವನನ್ನು ಹೊಡೆಯಲು ಕೈ ಎತ್ತಿದಾಗ ಬಾಯಿ ತೆರೆದ ಕೃಷ್ಣನ ಬಾಯಲ್ಲಿ ಬ್ರಹ್ಮಾಂಡವೇ ಕಾಣುತ್ತದೆ ಎಂಬ ಉಲ್ಲೇಖ ಬರುತ್ತದೆ. ಇದರರ್ಥ ಊರಿಗೆ ಅರಸನಾದರೂ ತಾಯಿಗೆ ಮಗ ಎಂದು.

ಶ್ರೀಕ್ಷೇತ್ರಕ್ಕೆ ಬರುವ ಭಕ್ತರಲ್ಲಿ ಕೆಲವರು ನನ್ನ ಬಳಿ ಬಂದು ಹೇಳುವುದಿದೆ- ‘ಸ್ವಾಮಿ ನನಗೆ ಮೂರು ವರ್ಷದ ಮಗ/ಮಗಳು ಇದ್ದಾರೆ. ಅವನು ಬಹಳ ತುಂಟ, ಹೇಳಿದ ಮಾತೇ ಕೇಳುವುದಿಲ್ಲ’. ಆಗ ನಾನು ಅವರಿಗೆ ಒಂದೇ ಉತ್ತರ ಕೊಡುತ್ತೇನೆ- ‘ನೋಡಿ ಸಾಕ್ಷಾತ್ ಶ್ರೀಕೃಷ್ಣನ ಪ್ರತಿರೂಪವಾಗಿರುವ ಈ ಮಕ್ಕಳನ್ನು ನೀವು ಮುದ್ದು ಕೃಷ್ಣನಂತೆಯೇ ಕಾಣಬೇಕು. ಭಗವಂತನ ಸ್ವರೂಪವನ್ನು ಅವರಲ್ಲಿ ನೋಡಬೇಕು’.

ಕೃಷ್ಣನ ಲೀಲೆಗಳನ್ನು ನಮ್ಮ ಮಕ್ಕಳಲ್ಲಿ ಕಂಡಾಗ ಭಗವಂತನನ್ನು ಅವರಲ್ಲಿ ಕಾಣಬಹುದು. ಕೆಲವು ಬಾರಿ ತುಂಟಾಟ ಅಸಹನೀಯವಾಗಬಹುದು, ಆಗ ಅವರ ಮನಸ್ಸನ್ನು ತಿದ್ದಿ-ತೀಡಿ ಪರಿವರ್ತನೆ ಮಾಡುವಂಥದ್ದು ಹಿರಿಯರ ಕಾರ್ಯ. ಅದಕ್ಕೆ ಮೃದುವಾದ ಧೋರಣೆ ಅನುಸರಿಸಬೇಕು. ಶಿಕ್ಷೆ ಕೊಡಬಾರದು. ಮಕ್ಕಳಿಗೆ ಹೆದರಿಕೆಯಾಗುವಂತೆ ಗದರಬಾರದು. ಮಕ್ಕಳು ದೇವರಿಗೆ ಸಮಾನ ಎಂದು ಹೇಳಿದಾಗ ಅವರಿಗೂ ನಮ್ಮ ಮಾತು ಹಿತವೆನಿಸುವಂತಿರಬೇಕು. ಮಕ್ಕಳು ಮುಗ್ಧ ಮನಸ್ಸುಳ್ಳವರು. ಸ್ವಾರ್ಥದ ಅರಿವೇ ಇಲ್ಲದ ದೇವರಸಮಾನರು.

ಉಡುಪಿಯಲ್ಲಿದ್ದ ಗಣ್ಯರೊಬ್ಬರು ಅನೇಕ ಬಾರಿ ಭಾಷಣದಲ್ಲಿ ಒಂದು ವಿಚಾರ ಉಲ್ಲೇಖಿಸುತ್ತಿದ್ದರು- ‘ವಿಶ್ವದಲ್ಲಿ ಅತಿ ಸುಲಭವಾಗಿ ಒಲಿಸಿಕೊಳ್ಳುವ ಭಗವಂತನೆಂದರೆ ಅದು ಉಡುಪಿಯ ಕೃಷ್ಣ. ಆತನನ್ನು ಒಲಿಸಿಕೊಳ್ಳಲು ಬಹಳ ಸುಲಭವಾದ ದಾರಿ ಇದೆ. ಸಿಹಿತಿಂಡಿಗಳನ್ನು ತೆಗೆದುಕೊಂಡು ಹೋಗಿ ಒಪ್ಪಿಸಿ. ಆತ ತೃಪ್ತಿಯಿಂದ ಅದನ್ನು ಸ್ವೀಕರಿಸಿ, ಸಂತೋಷದಿಂದ ಪ್ರಸನ್ನನಾಗುತ್ತಾನೆ’ ಎಂದು. ತಾತ್ಪರ್ಯವೆಂದರೆ ಅವರು ಶ್ರೀಕೃಷ್ಣನನ್ನು ಭಗವಂತನಿಗಿಂತ ಹೆಚ್ಚು ಬಾಲಕೃಷ್ಣನಾಗಿ, ಮುಗ್ಧ ಬಾಲಕನನ್ನಾಗಿ ಕಂಡವರು. ಆದ್ದರಿಂದಲೇ ‘ಮುಗ್ಧ ಬಾಲಕ ಕೃಷ್ಣನನ್ನು ಒಲಿಸಿಕೊಳ್ಳಲು ಪ್ರೀತಿ ಮತ್ತು ಆತ್ಮೀಯತೆಯನ್ನು ಪ್ರಕಟಿಸಿ’ ಎನ್ನುತ್ತಿದ್ದರು. ಹೌದು, ಆಗಲೇ, ನಮಗೆ ಉಡುಪಿ ಶ್ರೀಕೃಷ್ಣ ಆತ್ಮೀಯನಾಗುತ್ತ ಹೋಗುತ್ತಾನೆ. ಕಡೆಗೋಲು ಹಿಡಿದಿರುವ ಬಾಲಕ ಕೃಷ್ಣ ಪೂಜನೀಯ ಭಗವಂತನಂತೆ ಕಂಡರೂ ಮತ್ತೊಂದು ಬಾರಿ ಗೆಳೆಯನಂತೆ ಆತ್ಮೀಯನಾಗುತ್ತಾನೆ. ಹೀಗೆ ಭಗವಂತನನ್ನು ಆತ್ಮೀಯನನ್ನಾಗಿ ಮಾಡಿಕೊಳ್ಳುವಂಥ ಸಂದರ್ಭಗಳು ಬಹಳ ಕಡಿಮೆ. ಆದರೆ ಮಾಡಬೇಕಾದ ಅನಿವಾರ್ಯತೆ ಬಹಳ ಇದೆ.

ಉತ್ತರ ಮತ್ತು ದಕ್ಷಿಣ ಭಾರತದ ಅನೇಕ ಮನೆಗಳಲ್ಲಿ ಕೃಷ್ಣನನ್ನು ಮೂರ್ತಿಯಾಗಿ, ಭಗವಂತನಾಗಿ ಪೂಜಿಸುವುದಕ್ಕಿಂತ ಹೆಚ್ಚು ಮುಗ್ಧ ಬಾಲಕನಾಗಿ, ಮನೆಯ ಮಗುವಾಗಿ ಪ್ರೀತಿಸುವ ಸಂದರ್ಭಗಳು ಜಾಸ್ತಿ. ಉತ್ತರ ಭಾರತದಲ್ಲಿ ಕೃಷ್ಣನ ಹೆಸರು ಹೇಳಿದರೆ ಬಹುತೇಕರ ಮುಖ ಅರಳುತ್ತದೆ. ಪ್ರಸನ್ನತೆಯ ಭಾವ ಮೂಡುತ್ತದೆ. ನಿತ್ಯವೂ ಕೃಷ್ಣನ ಲೀಲೆಗಳನ್ನು ಕೇಳಿ ಆನಂದಿಸಿ ಆತ್ಮೀಯರನ್ನಾಗಿಸಿಕೊಂಡಿದ್ದಾರೆ.

ಪುರಾಣಗಳನ್ನು ಗಮನಿಸಿದಾಗ ಶ್ರೀರಾಮನ ಬಾಲ್ಯದ ಲೀಲೆಗಳ ಬಗ್ಗೆ ಹೆಚ್ಚಿನ ಮಾಹಿತಿ ಕಂಡುಬರುವುದಿಲ್ಲ. ಸಾಮಾನ್ಯವಾಗಿ ಕಂಡುಬರುವ ಮಾಹಿತಿ ಎಂದರೆ ಅದು ಚಂದ್ರನನ್ನು ತಂದುಕೊಟ್ಟರೆ ಮಾತ್ರ ಊಟ ಮಾಡುತ್ತೇನೆ ಎಂದು ರಾಮ ಹಠ ಹಿಡಿದ ಸಂದರ್ಭ. ತಾಯಿಗೆ ಆತನನ್ನು ಸಮಾಧಾನಪಡಿಸಲು ಆಗದೆ ತಟ್ಟೆಯಲ್ಲಿ ಚಂದ್ರನ ಬಿಂಬ ತೋರಿಸಿ ರಾಮನನ್ನು ತೃಪ್ತಿಪಡಿಸಿದಳು ಎಂಬ ಉಲ್ಲೇಖವಿದೆ. ಮನೆಯಲ್ಲಿ ನಾನು ಹೇಮಾವತಿ ಅವರಲ್ಲಿ ಮಾತನಾಡುತ್ತ, ‘ಕೃಷ್ಣ ಮತ್ತು ಅವನ ಬಾಲ್ಯದ ಬಗ್ಗೆ ಸಾಕಷ್ಟು ವಿಚಾರಗಳು ಬರುತ್ತವೆ. ಆದರೆ ರಾಮನ ಬಗ್ಗೆ ಯಾಕೆ ಬರುವುದಿಲ್ಲ?’ ಎಂದು ಕೇಳಿದೆ. ಆಗ ಅವರು ಹೇಳಿದ ಮಾತು ನನಗೆ ತುಂಬ ಒಪ್ಪಿಗೆಯಾಯಿತು. ‘ಶ್ರೀರಾಮಚಂದ್ರ ಅರಮನೆಯಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದಿದ್ದ. ಆತನಿಗೆ ಯಾವುದೇ ಕೊರತೆಯಾಗದಂತೆ ಪಾಲಕರು ಮತ್ತು ಅರಮನೆಯ ಸೇವಕರು ಎಚ್ಚರಿಕೆ ವಹಿಸಿರಬಹುದು. ಆದರೆ ಕೃಷ್ಣ ಬಾಲ್ಯದ ಜೀವನವನ್ನು ಗ್ರಾಮೀಣ ಪ್ರದೇಶದಲ್ಲಿ ಸಂಗಡಿಗರೊಂದಿಗೆ ಕಳೆದಿದ್ದರಿಂದ ಆತನ ಬಗ್ಗೆ ಅನೇಕ ಸ್ವಾರಸ್ಯಕರ ಕಥೆಗಳಿವೆ. ಗೆಳೆಯರೊಂದಿಗೆ, ಪ್ರಕೃತಿಯೊಂದಿಗೆ ಬೆರೆತು ಬದುಕಿದ. ತನ್ನ ಆಟೋಟಗಳಿಗೆ ಪ್ರಕೃತಿಯಲ್ಲಿ ಸಿಗುವ ಎಲ್ಲ ವಸ್ತುಗಳನ್ನು ಬಳಸಿದ ಅಂದರೆ ಗೋವುಗಳು, ಪ್ರಾಣಿಗಳು, ಪಕ್ಷಿಗಳು ಹಾಗೂ ಪ್ರಕೃತಿ ಜೊತೆಗೆ ಕಾಲಕಳೆದು, ನೀರಿನಲ್ಲಿ ಆಟವಾಡಿ, ಈಜಿ, ಮಣ್ಣಿನಲ್ಲಿ ಆಡಿದ. ಜನಜೀವನದ ಸುತ್ತಮುತ್ತ ಕೃಷ್ಣನ ಜೀವನ ಬೆಸೆದುಕೊಂಡಿದ್ದರಿಂದ ಬಾಲ್ಯ ಅದ್ಭುತವಾಗಿತ್ತು, ಅದರ ಬಗೆಗಿನ ವಿವರಗಳೂ ಲಭ್ಯವಾದವು’ ಎಂದರು.

ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಪರಿಸರದೊಂದಿಗೆ ಬೆರೆತು ತುಂಟತನ ಪ್ರದರ್ಶಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳನ್ನು ಅವರಷ್ಟಕ್ಕೆ ಆಡಲು ಬಿಡುವುದೇ ಹೆಚ್ಚು. ಮಣ್ಣಿನೊಂದಿಗೆ ಬೆರೆವ ಮಕ್ಕಳಿಗೆ ಶಿಕ್ಷಿಸುವುದು, ಗದರುವುದು ವಿರಳ. ವಿದೇಶದಲ್ಲೂ ಮಕ್ಕಳಿಗೆ ಶಿಕ್ಷೆ ಕೊಡುವುದು ವಿರಳ. ಒಮ್ಮೆನಾನು ಇಂಗ್ಲೆಂಡಿಗೆ ಹೋಗಿದ್ದಾಗ ಮಂಗಳೂರಿನವರೊಬ್ಬರು ಮೂರು ವರ್ಷದ ಮಗುವನ್ನು ಕರೆದುಕೊಂಡು ಬಂದಿದ್ದರು. ಮಗು ತುಂಟಾಟ ಮಾಡುತ್ತಿತ್ತು. ಇವರು ಗಟ್ಟಿಯಾಗಿ, ‘ಏ ಸುಮ್ಮನಿರು’ ಎಂದರು. ನಾನು ಕೇಳಿದೆ, ‘ಮಗುವಿಗೆ ಇಂಗ್ಲೆಂಡಿನಲ್ಲಿ ಬೈಯಬಾರದು, ಎಚ್ಚರಿಕೆ ಕೊಡಬಾರದು ಎಂಬ ಮಾತಿದೆಯಲ್ಲವೇ? ನೀವಿಷ್ಟು ಗಟ್ಟಿಯಾಗಿ ಎಚ್ಚರಿಕೆ ಕೊಟ್ಟಿರಲ್ಲ...’ ಎಂದೆ. ‘ಹೌದು, ಇಲ್ಲಿ ಮಕ್ಕಳಿಗೆ ನೋವಾದರೆ, ಶಿಕ್ಷೆ ಕೊಟ್ಟರೆ ಅಥವಾ ಅವರಿಗೆ ಹಿಂಸೆಯಾದರೆ, ಅವರಿಗೆ ಒಗ್ಗದ ರೀತಿಯಲ್ಲಿ ಹಿರಿಯರು ವರ್ತನೆ ಮಾಡಿದರೆ, ಮಕ್ಕಳನ್ನು ರಕ್ಷಿಸಲು ಸಹಾಯವಾಣಿ ಇದೆ. ಅವರು ಅಲ್ಲಿಗೆ ಕರೆ ಮಾಡಿದರೆ ತಕ್ಷಣ ಇಲಾಖೆಯವರು ಬಂದು ನಮ್ಮನ್ನು ವಿಚಾರಿಸಿಕೊಳ್ಳುತ್ತಾರೆ. ನಾನು ಭಾರತೀಯ ಶೈಲಿಯಲ್ಲಿ ಹತೋಟಿಯಲ್ಲಿ ಇಟ್ಟುಕೊಳ್ಳುತ್ತೇನೆ. ಕೆಲವು ಬಾರಿ ನನಗೆ ಇಲ್ಲಿ ಅವನಿಗೆ ಶಿಕ್ಷೆ ಕೊಡಲಾಗುವುದಿಲ್ಲ. ಹಾಗಾಗಿ ಭಾರತಕ್ಕೆ ಹೋದಾಗ ಅಗತ್ಯವೆಂದು ಎನಿಸಿದರೆ ಒಂದೆರಡು ಪೆಟ್ಟು ಕೊಡುವುದುಂಟು ಮತ್ತು ಎಚ್ಚರಿಕೆ ನೀಡುವುದುಂಟು’ ಎಂದು ಹೇಳಿದರು. ಸಂದರ್ಭೇಚಿತ ಹಾಸ್ಯವೆಂದು ಸ್ವೀಕರಿಸಿದರೂ ಇದು ಸತ್ಯವಾಗಿತ್ತು. ಭಾರತೀಯರಾದ ನಮಗೆ ಓಲೈಸಿಕೊಳ್ಳುವುದು ಮಾತ್ರವಲ್ಲ, ಅದರ ಜೊತೆಗೆ ಎಚ್ಚರಿಕೆ ನೀಡಿ ತಿದ್ದಿ, ತೀಡುವುದನ್ನೂ ರೂಢಿಸಿಕೊಂಡಿದ್ದೇವೆ.

ಮಕ್ಕಳಿಗೆ ಹೆಚ್ಚಾಗಿ ಯಾರು ಕೂಡ ಶಿಕ್ಷೆ ಕೊಡುವುದಿಲ್ಲ. ಇದರಿಂದ ಮಕ್ಕಳಲ್ಲಿ ಬುದ್ಧಿ ಸಂಕುಚಿತಗೊಳ್ಳದೆ ವಿಕಾಸವಾಗುತ್ತದೆ. ವಿಶೇಷವಾಗಿ ಗ್ರಾಮೀಣ ಮಕ್ಕಳು ಪ್ರತಿಭೆಯನ್ನು ವಿಸ್ತರಿಸಿಕೊಂಡು ವೈದ್ಯಕೀಯ, ಇಂಜಿನಿಯರಿಂಗ್ ಮುಂತಾದ ಉನ್ನತ ಹುದ್ದೆಗಳಿಗೆ ಹೋಗುವ ನಿಟ್ಟಿನಲ್ಲಿ ಸಾಧನೆ ಮಾಡುವುದನ್ನು ಕಂಡಿದ್ದೇವೆ. ಬಾಲ್ಯದಲ್ಲಿದ್ದಾಗ ಮಾತ್ರ ತುಂಟಾಟ ಮಾಡಲು ಸಾಧ್ಯ. ವಯೋಸಹಜ ಬೆಳವಣಿಗೆಯಾದಾಗ ತುಂಟಾಟ ಕಡಿಮೆಯಾಗುತ್ತದೆ. ನಂತರ ಓದು, ಮನೆಯ ಬಗ್ಗೆ ಜವಾಬ್ದಾರಿಯ ಅರಿವಾಗುತ್ತದೆ. ಬಾಲ್ಯ ಕಾಲದ ಆಟ-ಪಾಠ ತುಂಟಾಟ ಅವಿಸ್ಮರಣೀಯ. ನಾವು ಮಾತನಾಡುವಾಗಲೂ ‘ನಾನು ಸಣ್ಣವನಿದ್ದಾಗ...’ ಎಂದು ಬಾಲ್ಯದ ಅನುಭವ ಹಂಚಿಕೊಳ್ಳಲು ಇಷ್ಟಪಡುತ್ತೇವೆ. ಹಾಗಾಗಿ ಇಂದಿನ ಮಕ್ಕಳಿಗೆ ಬಾಲ್ಯದ ಆ ಅನುಭವವನ್ನು ಸವಿಯಲು ಹೆತ್ತವರು ಅವಕಾಶ ಮಾಡಿಕೊಡಬೇಕು. ಅದು ಜೀವನದಲ್ಲಿ ದೊರೆಯುವ ಅಮೂಲ್ಯ ಸಂಪತ್ತೇ ಸರಿ.

ಶಿಕ್ಷಣದ ಸ್ಪರ್ಧೆಯಲ್ಲಿ ಮಕ್ಕಳನ್ನು ಬಲಿಪಶುವನ್ನಾಗಿ ಮಾಡಬಾರದು. ಅನೇಕ ಸಲ ಸೋತವರೇ ಗೆದ್ದವರಿಗಿಂತ ಹೆಚ್ಚು ಪ್ರೀತಿಪಾತ್ರರು, ನೆಮ್ಮದಿಯ ಬದುಕನ್ನು ನಡೆಸುವವರೂ ಆಗಿರುತ್ತಾರೆ. ಒತ್ತಡದಲ್ಲಿ ಕಲಿಯುವಂತೆ ಮಾಡಿ ಅವರ ಬಾಲ್ಯ ಕಸಿದುಕೊಳ್ಳಬಾರದು. ಮಕ್ಕಳು ನಮ್ಮ ಹೆಜ್ಜೆಗುರುತನ್ನು ಅನುಸರಿಸುತ್ತಾರೆ. ಹಿರಿಯರ ಆದರ್ಶಗಳನ್ನು ಅನುಕರಿಸುತ್ತಾರೆ. ನಮ್ಮ ವರ್ತನೆ, ಮಾತನ್ನು ಕಲಿಯುತ್ತಾರೆ. ಆದ್ದರಿಂದ ನಮ್ಮ ನಡೆ-ನುಡಿ ಸುಸಂಸ್ಕೃತವಾಗಿರಲಿ. ಜೀವನದ ಓಟದಲ್ಲಿ ಮಕ್ಕಳಿಗೆ ಕೊಡಬೇಕಾದ ಪ್ರೀತಿಯನ್ನು ಮರೆಯಬಾರದು. ಬಾಲ್ಯದಲ್ಲಿ ಅವರಿಗೆ ಒದಗಿಸಬೇಕಾದ ವಾತ್ಸಲ್ಯವನ್ನು ನೀಡಬೇಕು. ಆಗ ಪ್ರತಿ ಮಗುವೂ ಬಾಲ್ಯದಲ್ಲಿ ಕೃಷ್ಣನಂತೆ ತುಂಟಾಟ ಪ್ರದರ್ಶಿಸಿ, ಬೆಳೆದು ದೊಡ್ಡವನಾದಾಗ ಪರಮಾತ್ಮನಂತೆ ಸಮಾಜೋದ್ಧಾರಕನಾಗುತ್ತಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂಥ ಬಾಲ್ಯವನ್ನು ಮಕ್ಕಳ ಪಾಲಿಗೆ ಒದಗಿಸುವುದು ಪಾಲಕರ, ಸಮಾಜದ ಜವಾಬ್ದಾರಿ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net