ಕೊರಗಜ್ಜನ ಆರಾಧನೆಯ ಆಯಾಮಗಳ ಸುತ್ತ-ಮುತ್ತ

Koragajja
Published on
ಈಶ್ವರನನ್ನು ಉತ್ತರದಲ್ಲಿ ಭೋಲೇನಾಥನಾಗಿ, ದಕ್ಷಿಣದಲ್ಲಿ ಮಂಜುನಾಥನಾಗಿ, ಮತ್ತೊಂದು ಕಡೆ ಶಂಕರನಾಗಿ, ಮಗದೊಂದು ಕಡೆ ಕಾಲಭೈರವನಾಗಿ, ಮತ್ತೆ ಹಲವು ಕಡೆ ಉಮಾಮಹೇಶ್ವರನಾಗಿ... ವಿವಿಧ ಜನಾಂಗದವರು ಪೂಜಿಸುವುದಿಲ್ಲವೇ? ಕೊರಗಜ್ಜ ದೈವವನ್ನು ಅವರವರ ಭಕ್ತಿಗನುಗುಣವಾಗಿ ಪೂಜಿಸುವುದರಲ್ಲಿ ತಪ್ಪೇನು?

ಕರ್ನಾಟಕದ ಕರಾವಳಿ ಭಾಗದಲ್ಲಿ ಕಾರ್ಣಿಕದ ದೈವ ಎಂದು ಜನಜನಿತ ವಾಗಿರುವ ‘ಕೊರಗಜ್ಜ’ನ ಸುತ್ತ ಭಕ್ತರು ಮತ್ತು ಭಕ್ತರಲ್ಲದವರು ಒಂದಲ್ಲ ಒಂದು ರೀತಿಯಲ್ಲಿ ತಮ್ಮದೇ ರೀತಿಯಲ್ಲಿ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಒಮ್ಮೊಮ್ಮೆ ಕೊರಗಜ್ಜನಿಗೆ ಪೂರಕವಾಗಿ, ಮತ್ತೆ ಕೆಲವೊಮ್ಮೆ ಅಸಂಬದ್ಧ ಎನಿಸುವ ರೀತಿಯಲ್ಲಿ ಸುದ್ದಿಗಳಾಗುತ್ತಿವೆ. ಆ ಭಾಗದ ಮೂಲನಿವಾಸಿಗಳಾದ ಕೊರಗ ಜನಾಂಗದ ದೈವವನ್ನು ಹಿಂದೂಗಳ ಜೊತೆ ಕೆಲ ಮುಸಲ್ಮಾನರು ಮತ್ತು ಕ್ರೖೆಸ್ತರು ಕೂಡ ನಂಬಿಕೆಯಿಂದ ಒಪ್ಪಿಕೊಂಡಿದ್ದಾರೆ. ಪ್ರಪಂಚದ ನಾನಾ ಭಾಗದ ಮೂಲನಿವಾಸಿಗಳಂತೆ ಅವಿಭಜಿತ ಉಡುಪಿ-ದಕ್ಷಿಣಕನ್ನಡ ಜಿಲ್ಲೆಗಳ ಕೊರಗರು ಮತ್ತು ಮಲೆಕುಡಿಯರ ಜನಾಂಗದವರ ಜೀವನಶೈಲಿ ಕೂಡ ವಿಶಿಷ್ಟತೆಯಿಂದ ಕೂಡಿದೆ. ಇವರು ತಮ್ಮದೇ ರೀತಿ ರಿವಾಜುಗಳ ಜೀವನಶೈಲಿಯನ್ನು ಹೊಂದಿದ್ದಾರೆ.

ಕೊರಗರು ನಾಗರಿಕ ಜೀವನದಿಂದ ಸ್ವಲ್ಪ ಹೆಚ್ಚೇ ಎನಿಸುವ ರೀತಿಯಲ್ಲಿ ಅಂತರ ಕಾಯ್ದುಕೊಂಡಿದ್ದಾರೆ. ಅವರಾಡುವ ಕೊರಗ ಭಾಷೆ ಕೂಡ ತುಸು ನಿಗೂಢತೆಯಿಂದ ಕೂಡಿದೆ. ಬಹುಷಃ ಕೊರಗ ಭಾಷೆಯಲ್ಲಿ ಯಾವುದೇ ಸಾಹಿತ್ಯ ಪ್ರಕಾರಗಳು ಹೊರಬಂದಿಲ್ಲ. ಅವರು ಬೇರೆಯವರಿಗೆ ಕೇಳಿಸದ ರೀತಿಯಲ್ಲಿ ಗುಟ್ಟಾಗಿ ತಮ್ಮ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಾರೆ ಮತ್ತು ಭಾಷೆಯಲ್ಲೂ ಒಂದು ರೀತಿಯ ನಿಗೂಢತೆಯನ್ನು ಅವರು ಬೆಳೆಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರಪಂಚದ ಬಹುತೇಕ ಬುಡಕಟ್ಟು ಜನಾಂಗ ನಾಗರಿಕತೆಯತ್ತ ಹೊರಳುತ್ತಿದೆ ಎಂದೇ ಹೇಳಬಹುದು. ಆದರೆ ಶ್ರೇಣೀಕೃತ ಸಾಮಾಜಿಕ ಜಾತಿಪದ್ಧತಿ ಮತ್ತು ಸಾಮಾಜಿಕ ಆರ್ಥಿಕ ಅಸಮಾನತೆಯನ್ನು ಮೆಟ್ಟಿ ನಿಂತು ಸಮಾನತೆಯತ್ತ ಮುನ್ನುಗ್ಗುವುದು ಅಷ್ಟೊಂದು ಸುಲಭದ ವಿಚಾರವೇನಲ್ಲ.

ಕರಾವಳಿ ಭಾಗದ ಜನರು ಒಂದು ಕಾಲದ ವೀರಪುರುಷರನ್ನು ಅಥವಾ ರಾಮಾಯಣ, ಮಹಾಭಾರತ ಕಾಲದ ಮಹಾನ್ ಪುರುಷರುಗಳನ್ನು ದೈವದ ರೂಪದಲ್ಲಿ ಆರಾಧಿಸುತ್ತಿರುವುದು ಹೆಚ್ಚು. ಆಂಜನೇಯ ಕೂಡ ಭೂತಾರಾಧನೆಯ ರೀತಿಯಲ್ಲಿ ಆರಾಧಿಸಲ್ಪಡುತ್ತಿದ್ದಾನೆ. ಹಿರಣ್ಯಾಕ್ಷನನ್ನು ಕೊಂದ ವಿಷ್ಣುವಿನ ವರಹಾವತಾರವನ್ನು ಈ ಭಾಗದಲ್ಲಿ ‘ಪಂಜುರ್ಲಿ’ ದೈವದ ಜೊತೆ ಸಮೀಕರಿಸಲಾಗಿದೆ. ‘ಪಂಜಿ’ ಅಂದರೆ ತುಳುಭಾಷೆಯಲ್ಲಿ ಹಂದಿ. ‘ಉರ್ಲಿ’ ಎಂದರೆ ‘ಮರಿ’. ಇದೇ ಪಂಜುರ್ಲಿ ದೈವ ಮಲಾರ್ ಎಂಬ ಪ್ರದೇಶದಲ್ಲಿ ಕಾಣಿಸಿಕೊಂಡು, ‘ಮಲರಾಯ’ ಎನ್ನುವ ರೂಪದಲ್ಲಿ ಹಂದಿ ಮೊಗದೊಂದಿಗೆ ಆರಾಧನೆಗೆ ಒಳಪಡುತ್ತಿದೆ. ಅನೇಕ ಬಸದಿಗಳ ಜೊತೆಗೆ ಶ್ರವಣಬೆಳಗೊಳದ ಗೊಮ್ಮ ಟೇಶ್ವರನನ್ನು ಕೆತ್ತಿದ ಜಕಣಾಚಾರಿ ಮತ್ತು ಅವನ ಮಗ ಡಂಕಣಾಚಾರಿಯನ್ನು ಮೂಡಬಿದರೆಯ ಶಂಬುಕಲ್ಕುಡ ಮತ್ತು ಅವನ ಮಗ ಬೀರಕಲ್ಕುಡನಿಗೆ ಹೋಲಿಸಿ ‘ಕಲ್ಕುಡ’ ದೈವವಾಗಿ ಆರಾಧಿಸಲ್ಪಡುತ್ತಿದ್ದಾರೆ. ಶಿವನ ‘ಕಾಲಭೈರವ’ ರೂಪವು ‘ಮುಡತ್ತಾಯ’ ಎನ್ನುವ ಹೆಸರಿನಲ್ಲಿ ಆರಾಧಿಸಲ್ಪಡುತ್ತಿದೆ. ವೀರರಾಗಿ ಬಾಳಿ ಪೌರುಷ ಪ್ರದರ್ಶಿಸಿದ್ದ ಸಹೋದರರಾದ ಕೋಟಿ-ಚೆನ್ನಯ ಮತ್ತು ಕಾಂತಬಾರೆ-ಬುಧಬಾರೆ ಕೂಡ ಕಾಲಾನಂತರ ದೈವಾರಾಧನೆಗೆ ಒಳಪಟ್ಟಿರುತ್ತಾರೆ. ಅತ್ಯಂತ ಪ್ರಸಿದ್ಧಿ ಪಡೆದ ಬೊಬ್ಬರ್ಯ ದೈವದ ಹೆತ್ತವರು ಮುಸ್ಲಿಮರು ಎಂಬ ವಿಷಯ ಕುತೂಹಲ ಮೂಡಿಸುತ್ತದೆ. ಬೊಬ್ಬರ್ಯನ ತಾಯಿ ಬೆಲಿಯ ಬೇಬಿ ಪಾತುಮ್ಮ ಮತ್ತು ತಂದೆ ಸುಲಿಕಲ್ಲ ಮುರವೆ ಬ್ಯಾರಿ. ಹೀಗೆ ದೈವತ್ವ ಪಡೆದ ಅತಿಮಾನುಷ ಶಕ್ತಿಯ ಮಾನವರ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಅದೇ ರೀತಿ ಕೊರಗಜ್ಜ ದೈವ ಕೂಡ! ಕೊರಗಜ್ಜನ ನಿಜ ನಾಮಧೇಯ ತನಿಯ. ಅವನ ತಂದೆ ವರವನ ಓಡಿ ಮತ್ತು ತಾಯಿ ಮೈರೆ. ಕೊರಗರ ಭಾಷೆಯಲ್ಲಿ ಮತ್ತು ಕೊರಗ ಜನಾಂಗದವರು ತನಿಯನ ತಂದೆಯ ಹೆಸರನ್ನು ಕೋಡು ಕುರುವ ಮತ್ತು ತಾಯಿ ಕೊರಪೊಳು ಎಂದು ಹೇಳುತ್ತಾರೆ (ಆದರೆ ಹೆಚ್ಚು ಪ್ರಚಲಿತದಲ್ಲಿಲ್ಲ).

ಜಾತಿ ಪದ್ಧತಿಯಿಂದ ಕಂಗೆಟ್ಟ ಇತರ ಜಾತಿಗಳಂತೆ ಕೊರಗರು ಕೂಡ ಉಪೇಕ್ಷೆಗೊಳಪಟ್ಟಿದ್ದರು ಮತ್ತು ಈಗಲೂ ಉಪೇಕ್ಷೆಗೆ ಒಳಪಡುತ್ತಿದ್ದಾರೆ. ಆದರೆ ಕೊರಗರ ‘ಹಿಬಾಶಿಕ’ ಪೌರುಷವಂತ ರಾಜನಾಗಿ ಆಳ್ವಿಕೆ ನಡೆಸುತ್ತಿದ್ದುದು, ಪ್ರಾಯಷಃ ಕಾಡಿನ ರಾಜ ಏಕಲವ್ಯನ ಅಪ್ರತಿಮ ಬಿಲ್ಗಾರಿಕೆ ಮತ್ತು ಚಾಣಾಕ್ಷತ ನವನ್ನು ನೆನಪಿಸುತ್ತದೆ. ಇದೇ ಮಟ್ಟದಲ್ಲಿ ಕೊರಗ ತನಿಯ ಕೂಡ ಜೀವಿತಾವಧಿಯಲ್ಲಿ ಪೌರುಷದ ಮತ್ತು ಅಮಿತ ಜೀವನೋತ್ಸಾಹದ ಕಷ್ಟಜೀವಿ ಆಗಿದ್ದ. ನಿಜಜೀವನದಲ್ಲಿ ಅತಿ ಪರಾಕ್ರಮಿ ಎಂಬುದನ್ನು ಸಾಧಿಸಿದ್ದ. ಅತಿಮಾನುಷ ಶಕ್ತಿಹೊಂದಿದ್ದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ. ಈ ವಿಚಾರಗಳೇ ಕಾಯ ಬಿಟ್ಟು ಮಾಯ ಸೇರಿದ್ದ ಕೊರಗ ತನಿಯನನ್ನು ಆ ಭಾಗದ ಪಂಜಂದಾಯಿ, ಮಲರಾಯ ಮೊದಲಾದ ದೈವಗಳು ಮಾಯಾಶಕ್ತಿಯಾಗಿ ಕಥೆಗಳಲ್ಲಿ ಒಪ್ಪಿಕೊಂಡಂತೆ ನಮಗೆ ಭಾಸವಾಗುತ್ತದೆ.

ಕೊರಗಜ್ಜನ ಕೋಲ ಸೇವೆಯಲ್ಲಿ ಅವನ ಅಲಂಕಾರ, ವೇಷಭೂಷಣ, ಭೋಗಕ್ಕೆ ನೀಡುವ ತಿಂಡಿತೀರ್ಥಗಳ ಬಗ್ಗೆ ನಾನಾ ರೀತಿಯ ತರ್ಕಗಳಿವೆ. ಅವನು ಅಡಿಕೆ ಮರದ ಹಾಳೆಯಿಂದಲೇ ಮಾಡಿದ ಶಿರಸ್ತ್ರಾಣ (ಮುಟ್ಟಾಳೆ)ವನ್ನೇ ಧರಿಸಬೇಕು, ಅವನಿಗೆ ಕಳ್ಳನ್ನೇ ಪಾನೀಯವಾಗಿ ಇಡಬೇಕು, ಭಕ್ಷ್ಯದಲ್ಲಿ ‘ಆಮೆ’ಯ ಮಾಂಸದ ಅಡುಗೆಯನ್ನೇ ಇಡಬೇಕು ಎಂಬಿತ್ಯಾದಿ ವಾದಗಳಿವೆ. ಆದರೆ ಭಕ್ತಿಯಿಂದ ಶಬರಿ ಕೊಟ್ಟ ಎಂಜಲು ಬುಗರಿ ಹಣ್ಣನ್ನು ಶ್ರೀರಾಮಚಂದ್ರ ಸ್ವೀಕರಿಸಲಿಲ್ಲವೇ? ಕುಚೇಲ ಕಂಕುಳಡಿಯಲ್ಲಿ ಇಟ್ಟುಕೊಂಡಿದ್ದ ಹುಡಿ-ಹಿಡಿ ಅವಲಕ್ಕಿಯನ್ನು ಕೃಷ್ಣ ಪರಮಾತ್ಮ ಸ್ವೀಕರಿಸಲಿಲ್ಲವೇ? ಎಲ್ಲವೂ ಭಕ್ತಿಯಿಂದ ನೀಡುವ ಕಾಣಿಕೆಯಾಗಬೇಕೇ ಹೊರತು, ಒಂದು ರೀತಿಯ ಫೋರ್ಸ್- ಒತ್ತಾಯ ಎನಿಸಬಾರದು. ಆಮೆ ತಿನ್ನುವವರು ಆಮೆಮಾಂಸದ ಭಕ್ಷ್ಯ ನೀಡಬಹುದು. ದೇವಸ್ಥಾನಗಳಲ್ಲಿ ನಡೆಸುವ ಭೂತ ಕೋಲಗಳಲ್ಲಿ ಹಸಿರು-ತರಕಾರಿಯ ಬಲಿ ಮತ್ತು ಭಕ್ಷ್ಯವನ್ನೇ ಬ್ರಾಹ್ಮಣರು ನೀಡುತ್ತಾರೆ. ಎಲ್ಲವೂ ಅವರವರ ಭಕುತಿ ಮತ್ತು ಭಾವಕ್ಕೆ ತಕ್ಕುದಾಗಿ ದೈವಗಳಿಗೆ ಭಕ್ತಿಯಿಂದ ಅರ್ಪಣೆಯಾಗಬೇಕೇ ಹೊರತು ದಬ್ಬಾಳಿಕೆಯ ರೀತಿಯಲ್ಲಿ ಇರಬಾರದು.

ಇಂದು ಕೊರಗ ತನಿಯ ಬರೀ ಬುಡಕಟ್ಟು ಜನಾಂಗದ ದೈವವಾಗಿ ಉಳಿದಿಲ್ಲ, ಬದಲಾಗಿ ತನಿಯನನ್ನು ಕರಾವಳಿ ಭಾಗದ ಆರಾಧ್ಯದೈವವಾಗಿ, ಇತರ ಜಾತಿ ಮತ್ತು ಧರ್ಮದ ಜನರು ಕೂಡ ಭಯ-ಭಕ್ತಿಯಿಂದ ನಂಬಿಕೊಂಡು ಬರುತ್ತಿದ್ದಾರೆ. ಮಾಯಾರೂಪಿಯಾಗಿರುವ ದೈವ-ದೇವರುಗಳೆಲ್ಲವೂ ನಿರಾಕಾರ. ಭಕ್ತರು ಭಕ್ತಿಯಿಂದ ಮನಸ್ಸಿನಲ್ಲಿ ಮೂರ್ತಗೊಂಡ ರೂಪದಲ್ಲೇ ಪೂಜಿಸುತ್ತಾರೆ. ಕರಾವಳಿ ಭಾಗದ ದೈವಗಳನ್ನು ಈಶ್ವರನೊಂದಿಗೆ ಸಮೀಕರಿಸುವುದು ಸಾಮಾನ್ಯ. ದೈವಗಳು ಶಿವನ ಗಣ ಎಂಬ ಪ್ರತೀತಿಯೂ ಇದೆ. ದೈವಗಳಿಗೆ ಹೇಳುವ ನುಡಿಗಟ್ಟು ಮತ್ತು ಪಾಡ್ದನಗಳಲ್ಲೂ ಈಶ್ವರ, ಮಹಾವಿಷ್ಣು ಮೊದಲಾದ ದೇವರ ಹೆಸರುಗಳು ಮತ್ತು ಪುರಾಣದ ಉಲ್ಲೇಖಗಳಿವೆ. ಹಾಗಾಗಿಯೇ ಬಹುಶಃ ಕೊರಗ ತನಿಯನನ್ನೂ ಅದೇ ರೀತಿಯಾಗಿ ಜನರು ಶಿವನೊಂದಿಗೆ ಸಮೀಕರಿಸಿ ಕೋಲ ಸೇವೆ ನೀಡುತ್ತಿದ್ದಾರೆ. ಇದಕ್ಕೆ ತಕರಾರು ಏಕೆ? ದೇವರು ಅಥವಾ ದೈವಗಳು ಲಿಂಗರೂಪಿಗಳಾಗಿ ಅಥವಾ ಕಲ್ಲಿನರೂಪದಲ್ಲೂ ಪೂಜೆಗೆ ಒಳಪಡುತ್ತಿದ್ದಾರೆ. ಯಾಕೆಂದರೆ ಮಾಯಾರೂಪದಲ್ಲಿರುವ ದೈವ ದೇವರನ್ನು ಕಂಡವರಿಲ್ಲ. ಒಂದೊಂದು ಜನಾಂಗದವರು ದೈವಗಳನ್ನು ಅವರವರ ಕಲ್ಪನೆ ಮತ್ತು ಭಕ್ತಿಯ ಅಭಿರುಚಿಗೆ ತಕ್ಕಂತೆ ಆರಾಧಿಸುತ್ತಿದ್ದಾರೆ. ನಾಗಾರಾಧನೆಯನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳಬಹುದು. ಕೇರಳ-ಕರ್ನಾಟಕದ ಕರಾವಳಿ ಭಾಗದಲ್ಲಿರುವ ಬಾಕುಡ ಜನಾಂಗ ನಡೆಸುವ ನಾಗಾರಾಧನೆ ಮತ್ತು ನಾಗದರ್ಶನ ಅನನ್ಯ. ಅದೇ ಮೇರ ಜನಾಂಗದವರು ‘ಕಾಡ್ಯನಾಟ’ದ ರೀತಿಯಲ್ಲೂ, ಮತ್ತೆ ಕೆಲವರು ‘ಡಕ್ಕೆಬಲಿ’ ರೂಪದಲ್ಲಿ ನಡೆಸುತ್ತಿದ್ದಾರೆ. ಅದೇ ರೀತಿ ‘ನಾಗಮಂಡಲ’ ಸೇವೆಯೂ ಹೆಚ್ಚು ಪ್ರಚಲಿತದಲ್ಲಿರುವ ನಾಗಾರಾಧನೆ. ಒಂದೊಂದು ಜನಾಂಗದ ಭಿನ್ನ ವಿಭಿನ್ನ ಅನೂಚಾನ. ಒಂದೊಂದು ಜನಾಂಗದವರ ಮನಸ್ಸಿನಲ್ಲಿ ಒಂದೊಂದು ಕಲ್ಪನೆ. ಆದರೆ ಭಕ್ತಿ ಮುಖ್ಯ. ಕೊರಗ ತನಿಯನನ್ನು ಬುಡಕಟ್ಟು ರೂಪದಲ್ಲೇ ಚಿತ್ರಿಸುವುದಕ್ಕಿಂತ, ಹಿಂದೂ ಧಾರ್ವಿುಕ ನೆಲೆಯಲ್ಲಿ ಕೊರಗ ತನಿಯನನ್ನು ಭೂತಾರಾಧನೆಯ ರೂಪದಲ್ಲಿ ಆರಾಧಿಸುವುದನ್ನು ಮತ್ತು ವೈಭವೀಕರಿಸುವುದನ್ನು ಸ್ವಾಗತಿಸುವುದು ಹೆಚ್ಚು ಸಮಂಜಸ. ಹೇಳಲಿಕ್ಕೆ ಭಸ್ಮಧಾರಿಯಾಗಿ, ಹಾವುಗಳನ್ನು ಸುತ್ತಿಕೊಂಡಿರುವ, ಅರೆನಗ್ನ ರೂಪಿ ಈಶ್ವರನೂ ಹಿಮಾಲಯದ ಮೂಲನಿವಾಸಿಯೇ ಸರಿ. ಆದರೆ ಭಕ್ತರ ಮನಸ್ಸಿನಲ್ಲಿ ಜನಾಂಗಿಕ ಅಥವಾ ಎಥ್ನಿಕ್ ರೂಪದಲ್ಲೇ ಶಿವನ ಆರಾಧನೆ ಕಡಿಮೆ. ಹಿಮಾಲಯದ ಮೂಲ ನಿವಾಸಿಗಳು ಅಥವಾ ಅಘೊರಿಗಳು ಮಾತ್ರ ಶಿವನನ್ನು ಎಥ್ನಿಕ್ ರೂಪದಲ್ಲಿ ಆರಾಧಿಸುತ್ತಿದ್ದಾರೆ. ಎಥ್ನಿಕ್ (Ethnic) ಎನ್ನುವುದು ಅನಾಗರಿಕತೆ ಎಂಬ ಪದಕ್ಕೆ ಪರ್ಯಾಯವಾಗಿಯೂ ಬಳಕೆಯಲ್ಲಿತ್ತು. ಹಾಗಾಗಿಯೇ ಮೂಲರೂಪಕ್ಕಿಂತಲೂ ಅಲಂಕಾರಿಕ ರೂಪದಲ್ಲಿ ಶಿವ ಅಥವಾ ದೈವ-ದೇವರ ಆರಾಧನೆಯಲ್ಲಿ ಜನರು ಹೆಚ್ಚು ಕೃತಾರ್ಥತೆ ಪಡೆದುಕೊಳ್ಳುತ್ತಿದ್ದಾರೆ. ಈಶ್ವರನನ್ನು ಉತ್ತರದಲ್ಲಿ ಭೋಲೇನಾಥನಾಗಿ, ದಕ್ಷಿಣದಲ್ಲಿ ಮಂಜುನಾಥನಾಗಿ, ಮತ್ತೊಂದು ಕಡೆ ಶಂಕರನಾಗಿ, ಮಗದೊಂದು ಕಡೆ ಕಾಲಭೈರವನಾಗಿ, ಮತ್ತೆ ಹಲವು ಕಡೆ ಉಮಾಮಹೇಶ್ವರನಾಗಿ... ಹೀಗೆ ಭಿನ್ನ ವಿಭಿನ್ನ ರೀತಿಯಲ್ಲಿ, ವಿವಿಧ ಜನಾಂಗದವರು ಪೂಜಿಸುವುದಿಲ್ಲವೇ? ಹೀಗಿರುವಾಗ ಕೊರಗಜ್ಜ ದೈವವನ್ನು ಅವರವರ ಭಕ್ತಿಗನುಗುಣವಾಗಿ ಪೂಜಿಸುವುದರಲ್ಲಿ ತಪ್ಪೇನಿಲ್ಲ. ಕೊರಗಜ್ಜನನ್ನು ಶಿವನಿಗೆ ಸಮೀಕರಿಸುವುದರಿಂದ ಕೊರಗ ಜನಾಂಗದ ಸಾರ್ವಭೌಮತೆಗೆ ಧಕ್ಕೆ ಉಂಟಾಗುತ್ತದೆ ಎಂಬ ಮಾತು ಸೂಕ್ತವಲ್ಲ. ಕೊರಗರೂ ಹಿಂದೂಗಳೇ. ನಾಗರಿಕತೆಯು ವಿಕಸನವನ್ನು ಅರ್ಥಮಾಡಿ ಸ್ವೀಕರಿಸಬೇಕು. ಹಾಗಾದರೆ ವ್ಯಕ್ತಿಯ ಜೊತೆ ಜನಾಂಗವೂ ವಿಕಸನಗೊಳ್ಳುತ್ತ ಸಾಗುತ್ತದೆ.

ಅಸಮಾನತೆಯ ಕರಾಳ ಕಾಲಘಟ್ಟದಲ್ಲಿ ಉಪೇಕ್ಷೆಗೆ ಒಳಪಟ್ಟ ಕೊರಗ ಜನಾಂಗದ ವ್ಯಕ್ತಿಯೊಬ್ಬ ದೈವತ್ವ ಪಡೆದುಕೊಳ್ಳುವುದು, ಅಸಾಮಾನ್ಯ ವಿಚಾರವೇ ಸರಿ. ನಂಬಿಗೆಯ ದೈವವಾಗಿ, ಕಾರಣಿಕದ ಪುರುಷನಂತಾಗಿ, ತನ್ನನು ಉಪೇಕ್ಷಿಸುತ್ತಿದ್ದ ವ್ಯಕ್ತಿಗಳೇ ಕಾಲಿಗೆರಗಿ, ಭಯ-ಭಕ್ತಿಯಿಂದ ಈಶ್ವರ ಸ್ವರೂಪದಲ್ಲಿ ಪೂಜೆ ಸಲ್ಲಿಸುತ್ತಿರುವುದು ಜೀವಿತಾವಧಿಯಲ್ಲಿ ತನಿಯನಾಗಿದ್ದ ಕೊರಗಜ್ಜನ ಅಪ್ರತಿಮ ಮತ್ತು ಅಮೇಯ ಅಭ್ಯುತ್ಥಾನದ ನಿದರ್ಶನ. ಶಿಲುಬೆಗೇರಿಸುವ ಸಮಯದಲ್ಲಿ ಏಸುಕ್ರಿಸ್ತ ಅನುಭವಿಸಿದ್ದ ಬವಣೆ ಮತ್ತು ಹದಿನಾಲ್ಕು ವರ್ಷ ವನವಾಸವನ್ನನುಭವಿಸಿದ ಶ್ರೀರಾಮಚಂದ್ರನ ಸಂಕಷ್ಟದ ದಿನಗಳು; ನಂತರ ದೇವಸ್ವರೂಪಿಗಳಾಗಿ ಪೂಜನೀಯರೆಂದೆನಿಸಿಕೊಂಡಿದ್ದು ಕೊರಗಜ್ಜನ ವಿಚಾರದಲ್ಲೂ ತಾಳೆಹಾಕುವಂತಿದೆ. ಕೊರಗತನಿಯನ ದೇಹದ ಬರ್ಬರ ಅಂತ್ಯವು, ಜಾತಿಯ ಹಿಂಸೆ ಮತ್ತು ಅಸಮಾನತೆಯ ಕ್ರೌರ್ಯದ ಪ್ರತೀಕದಂತೆ ಕಂಡುಬರುತ್ತಿದೆ. ‘ಕೊಂದ ಮೇಲೆ ಮಾಯ ಮಾಡಿದೆವು’ ಎಂದು ಕೊಲೆಯ ಆರೋಪ ತಮ್ಮನ್ನು ಬಾಧಿಸದಿರಲೆಂದು ಕಂಡುಕೊಂಡ ಹೇಯ ಉಪಾಯ. ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದಂಥ ಮನೋಭಾವವೇ ಕೊರಗತನಿಯನ ದೇಹಾಂತ್ಯವನ್ನು ಬಯಸಿತ್ತು ಎನ್ನುವುದು ಮಾತ್ರ ನಗ್ನಸತ್ಯ.

(ಲೇಖಕರು ಬರಹಗಾರ-ನಿರ್ದೇಶಕ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net