

| ಜಿ.ಎಲ್. ಭಟ್
ಅದು ಕಳೆದ ಶತಮಾನದ ಎಂಬತ್ತರ ದಶಕ. ಶಿಲ್ಪಕಲಾಭ್ಯಾಸಿಯಾಗಿ ಬೆಂಗಳೂರಿಗೆ ಬಂದೆ. ಖ್ಯಾತ ಶಿಲ್ಪಿ ವಾದಿರಾಜ ಅವರ ಕೆತ್ತನೆಗಳನ್ನು ನೋಡಿ ‘ನಾನು ಶಿಲ್ಪಕಲೆ ಕಲಿತರೆ ಇವರಿಂದಲೇ’ ಎಂದು ನಿಶ್ಚಯಿಸಿದೆ. ಆಗ ಬಸವನಗುಡಿಯಲ್ಲಿ ಅವರ ಮನೆ. ಮೊದಲ ಸಲ ಅವರ ಮನೆಗೆ ಹೋದಾಗ ಕಂಡಿದ್ದು ಕನಕಾ ಮೂರ್ತಿ ಅವರನ್ನು. ಅವರು ಉಳಿ ಸುತ್ತಿಗೆ ಹಿಡಿದು ಕಲ್ಲಿನ ಮುಂದೆ ಕುಳಿತು ಟಕ್ಟಕ್ ಎಂದು ಕೆತ್ತಿ ಸುಂದರ ಆಕಾರ ಕೊಡುವುದನ್ನು ಜೀವನದಲ್ಲಿ ಮೊದಲ ಬಾರಿ ಕಂಡು ದಂಗಾಗಿ ಹೋದೆ. ಶಿಲ್ಪ ಕಲಾವಿದರ ಮನೆತನವಲ್ಲದಿದ್ದರೂ ಇಷ್ಟು ಸುಂದರವಾಗಿ ಶಿಲ್ಪ ನಿರ್ವಿುಸುವ ಅವರ ಸಾಮರ್ಥ್ಯ ನೋಡಿ, ಅವರ ಅನೇಕ ಅನುಭವದ ಮಾತುಗಳನ್ನು ಕೇಳಿ ನಾನೂ ಪ್ರಭಾವ- ಪ್ರೇರಣೆಗೆ ಒಳಗಾದೆ.
ವಾದಿರಾಜರ ಹಿರಿಯ ಶಿಷ್ಯೆಯಾಗಿ ಅವರ ಎಲ್ಲ ತಂತ್ರಗಾರಿಕೆಗಳನ್ನು ಕರಗತ ಮಾಡಿಕೊಂಡಿದ್ದರು. ವಿವಿಧ ಜಾತಿಯ ಕಲ್ಲುಗಳಲ್ಲಿ ಕೆತ್ತನೆ ಮಾಡುವ, ಮಣ್ಣು-ಫೈಬರ್ ಗ್ಲಾಸ್-ಲೋಹ ಮುಂತಾದ ಮಾಧ್ಯಮಗಳಲ್ಲಿ ಭಾವ ಶಿಲ್ಪಗಳನ್ನು ನಿರ್ಮಾಣ ಮಾಡಿದ ಅಗಾಧ ಅನುಭವ ಅವರದು. ತಮ್ಮ ದೊಡ್ಡ ಮನೆತನದ ಪ್ರಭಾವದಿಂದಲೋ, ಪ್ರತಿಭಾನ್ವಿತ ಹಿರಿಯರ ಸಾಹಚರ್ಯದಿಂದಲೋ ಸಹಜವಾಗಿಯೇ ಕನಕಾ ಮೂರ್ತಿ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದರು. ಸ್ವತಃ ಕರ್ನಾಟಕ ಸಂಗೀತ ಬಲ್ಲವರಾಗಿದ್ದರು. ದೇವರನಾಮಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಉತ್ತಮ ವಾಗ್ಮಿ, ಸಾಹಿತ್ಯಪ್ರೇಮಿ ಕೂಡ. ಉತ್ತಮ ಚಿತ್ರರಚನೆಯಲ್ಲೂ ಸಿದ್ಧಹಸ್ತೆ. ಕಲಾ ಲೇಖನಗಳನ್ನೂ ಬರೆದಿದ್ದರು. ಕಲಾ ವಿಮರ್ಶೆಯನ್ನೂ ಮಾಡುತ್ತಿದ್ದರು. ಇಂಗ್ಲಿಷ್ನಲ್ಲಿ ಅರಳು ಹುರಿದಂತೆ ಮಾತನಾಡುತ್ತಿದ್ದರು. ನೇರ, ದಿಟ್ಟ ಮಾತು. ಎದುರಿಗಿದ್ದವರಿಗೆ ಕಹಿ ಎನಿಸಿದರೂ ಹೇಳುವ ಜಾಯಮಾನ. ಪಾಕ ಪ್ರವೀಣೆ. ಎಷ್ಟೆಲ್ಲ ಕೆಲಸಗಳಿದ್ದರೂ ಮನೆಗೆ ಬಂದವರಿಗೆ ತಾವೇ ಅಡುಗೆ ಮಾಡಿ ಬಡಿಸುತ್ತಿದ್ದರು. ಹೊಸ ಚಿಂತನೆಗಳಿಗೆ ಸದಾ ತೆರೆದ ಕಿವಿ, ಮನಸ್ಸು. ತಾವು ರಚಿಸುತ್ತಿದ್ದ ಪ್ರತಿಯೊಂದು ಕೆತ್ತನೆ ಕೆಲಸದಲ್ಲೂ ಒಂದಲ್ಲ ಒಂದು ಹೊಸ ತಂತ್ರ, ವಿನ್ಯಾಸ ಅಳವಡಿಸುತ್ತಿದ್ದರು.ಅದೇ ಅವರ ಸಿಗ್ನೇಚರ್. ಅತಿ ದೊಡ್ಡ ಕಲ್ಲಿನ ಕೆತ್ತನೆ ಎಂದರೆ ಅವರಿಗೆ ಎಲ್ಲಿಲ್ಲದ ಉತ್ಸಾಹ. ಚಿಕ್ಕ ಕಲ್ಲಿನ ಶಿಲ್ಪ ರಚನೆಯ ಕೆಲಸ ಬಂದಾಗ, ‘ಅಯ್ಯೋ ಭಟ್ರೆ ಸಣ್ಣ ಕೆಲಸ ಬೋರು’ ಎನ್ನುತ್ತಿದ್ದರು. ಮರ ಕೆತ್ತನೆ ಬಗ್ಗೆಯೂ ಅಷ್ಟು ಆಸಕ್ತಿ ಇರಲಿಲ್ಲ. ಬೇರೆ ಬೇರೆ ಜಾತಿಯ ಕಲ್ಲುಗಳ ಕೆತ್ತನೆಯೆಂದರೆ ಆನಂದ. ಗ್ರಾನೈಟ್, ಬಳಪದ ಕಲ್ಲು, ಕೆಂಪುಮಿಶ್ರಿತ ಮರಳುಕಲ್ಲು, ಸ್ಲೇಟ್ಸ್ಟೋನ್ ಮುಂತಾದವನ್ನು ಶಿಲ್ಪಕ್ಕೆ ಬಳಸಿದ್ದರು. ಭಾರತದ ಕಲ್ಲುಗಳಷ್ಟೇ ಅಲ್ಲ, ಇಂಗ್ಲೆಂಡ್, ಫ್ರಾನ್ಸ್ನಿಂದ ವಿವಿಧ ಜಾತಿಯ ಕಲ್ಲುಗಳನ್ನು ತರಿಸಿ ಶಿಲ್ಪ ರಚಿಸಿದ್ದರು.
ಇಂಗ್ಲೆಂಡ್ಗೆ ಭಾರತೀಯ ಕಲಾ ರಾಯಭಾರಿಯಾಗಿ ಹಲವು ಸಲ ಹೋಗಿ ಕಲಾ ಉತ್ಸವಗಳಲ್ಲಿ ಭಾಗವಹಿಸಿದ್ದರು. ಅಲ್ಲಿನ ಲಿಂಪ್ಲಿಸ್ಟಿಕ್ ಬಾತ್ ಸ್ಟೋನ್, ಫ್ರೆಂಚ್ ಸ್ಟೋನ್, ಲೈಮ್ ಸ್ಟೋನ್ಗಳಲ್ಲಿ ಕೆತ್ತನೆ ಮಾಡಿದ ಕೀರ್ತಿ ಅವರದು. ಇಂಗ್ಲೆಂಡ್ನಲ್ಲಿ ಅತಿ ದೊಡ್ಡ ಮಿತ್ರಸಮೂಹ ಹೊಂದಿದ್ದರು. ಬರೀ ಶಿಲ್ಪಕಲಾವಿದರಷ್ಟೇ ಅಲ್ಲ, ಬೇರೆ ಬೇರೆ ಕ್ಷೇತ್ರದವರೂ ಅವರಿಗೆ ಆಪ್ತರಾಗಿದ್ದರು. ನಾನು ಇಂಗ್ಲೆಂಡ್ಗೆ ಭೇಟಿ ಕೊಟ್ಟಾಗ ಅಲ್ಲಿನ ಕಲಾವಿದರು ನನ್ನ ಬಗ್ಗೆ ವಿಚಾರಿಸುವುದಕ್ಕಿಂತ ‘ಕನಕಾ ಹೇಗಿದ್ದಾರೆ’ ಎಂದು ಮಾತು ಆರಂಭಿಸುತ್ತಿದ್ದರು! ಅವರಿಗಾಗಿ ಉಡುಗೊರೆಗಳನ್ನೂ ಕೊಟ್ಟು ಕಳಿಸುತ್ತಿದ್ದರು. ಅಂತಹ ಕಲಾವಿದೆಗೆ ಪ್ರಶಸ್ತಿ-ಪುರಸ್ಕಾರಗಳಿಗೆ ಬರವುಂಟೆ? ಜಕಣಾಚಾರಿ ಪ್ರಶಸ್ತಿಯಂತೂ ಅವರನ್ನು ಹುಡುಕಿಕೊಂಡು ಬಂತು. ರಾಷ್ಟ್ರೀಯ ಪ್ರಶಸ್ತಿಯಿಂದ ವಂಚಿತರಾಗಿದ್ದರೂ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಿದ್ದರು.
*ಮೌನವಾಯಿತು ಮಾತು*
ಸುಮಾರು 80 ವರ್ಷಗಳ ತುಂಬು ಜೀವನ ನಡೆಸಿದ ಕನಕಾ ಮೂರ್ತಿ ‘ಕಲ್ಲು ಕನಕಾ’ ಎಂದೇ ಪ್ರಸಿದ್ಧರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಕ್ಕರೆ ಕಾಯಿಲೆಗೆ ಒಳಗಾಗಿದ್ದರು. ಆಹಾರಮಿತಿ- ಆರೋಗ್ಯ ಪ್ರಜ್ಞೆ ಇದ್ದದ್ದರಿಂದ ಕರೊನಾ ಸಂದರ್ಭದಲ್ಲೂ ಬಹು ಹುಷಾರಾಗಿಯೇ ಇದ್ದರು. ವ್ಯಾಕ್ಸಿನೇಷನ್ಗೆ ಒಮ್ಮೆ ಹೋಗಿದ್ದು ಬಿಟ್ಟರೆ ಯಾವ ಕಾರಣಕ್ಕೂ ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ. ಆದರೆ ಕಾಲನಿಗೂ ಒಂದು ಕಾಲ ಇರುತ್ತಲ್ಲ! ಅವರಿಗೇ ಅರಿವಿಲ್ಲದಂತೆ ಕೋವಿಡ್ ಬಂದಿತ್ತು. ಪತಿ ನಾರಾಯಣಮೂರ್ತಿ, ಮಗಳು ಸುಮತಿ (ರೂಮಿ), ಮನೆಮಗನಂತಿರುವ ಶಿಷ್ಯ ಮಹದೇವ ಮುಂತಾದವರು ಪಟ್ಟ ಶ್ರಮ ಫಲ ನೀಡಲಿಲ್ಲ. ಮೇ 13ರ ಬೆಳಗ್ಗೆ ಕನಕಾ ಮೂರ್ತಿ ಇನ್ನಿಲ್ಲ ಎಂಬ ಸುದ್ದಿ ಬಂದಪ್ಪಳಿಸಿದಾಗ ಮಾತು ಮೌನವಾಗಿತ್ತು.
(ಲೇಖಕರು ಕರ್ನಾಟಕದ ಖ್ಯಾತ ಶಿಲ್ಪ ಕಲಾವಿದರು)