ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ: ಇಂದು ಜಯಂತಿ

Mallamma
Published on
ಹನ್ನೆರಡನೇ ಶತಮಾನದ ಶರಣರ ಕ್ರಾಂತಿ ಒಂದು ಮಾದರಿಯಾದರೆ, 14ನೇ ಶತಮಾನದ ಶರಣೆ ಹೇಮರಡ್ಡಿ ಮಲ್ಲಮ್ಮನದು ಇನ್ನೊಂದು ಮಾದರಿ. ಈ ಎರಡೂ ಮಾದರಿಗಳ ಮಧ್ಯೆ ಸಾಕಷ್ಟು ಸಾಮ್ಯತೆ-ಭಿನ್ನತೆಗಳಿವೆ. ಇವೆರಡೂ ಘಟಿಸಿದ ಕಾಲಗಳ ನಡುವೆ 200 ವರ್ಷಗಳ ಅಂತರವಿದೆ. ಈ ಎರಡು ಸಂದರ್ಭದಲ್ಲೂ ಸಮಾಜದಲ್ಲಿನ ಅಸಮಾನತೆ, ಪ್ರೀತಿ, ದ್ವೇಷ, ಅಸೂಯೆಗಳ ಪಾತ್ರ ಗಮನಾರ್ಹವಾಗಿದೆ.

12ನೇ ಶತಮಾನದಲ್ಲಿ ವೀರವಿರಾಗಿಣಿ ಅಕ್ಕಮಹಾದೇವಿ ಎಂಬ ಶರಣೆ, ಶ್ರೀಶೈಲ ಮಲ್ಲಿಕಾರ್ಜುನನನ್ನು ಪತಿ ಎಂದು ಆರಾಧಿಸುತ್ತಿದ್ದಳು. 14ನೇ ಶತಮಾನದ ಮಲ್ಲಮ್ಮನೂ ಅವನನ್ನೇ ಆರಾಧ್ಯದೈವವಾಗಿ ಪೂಜಿಸುತ್ತಿದ್ದಳು. ಜೊತೆಗೆ ಅವಳು ತನ್ನ ಗಂಡ, ಮೈದುನ, ಭಾವ, ಅತ್ತೆ, ಮಾವ, ನೆಗೆಣ್ಣೆಯರಲ್ಲೆಲ್ಲ ಮಲ್ಲಿಕಾರ್ಜುನನನ್ನೇ ಕಾಣುತ್ತಿದ್ದಳು. ಅಕ್ಕ ಶ್ರೀಶೈಲದ ಕದಳಿವನದಲ್ಲಿ ಐಕ್ಯಳಾದಳು. ಮಲ್ಲಮ್ಮನ ಗುಡಿ ಶ್ರೀಶೈಲದ ಮಲ್ಲಿಕಾರ್ಜುನನ ಗುಡಿಯ ಬಳಿಯೇ ಇದೆ. ಮಲ್ಲಿಕಾರ್ಜುನ ಇಬ್ಬರಿಗೂ ಆರಾಧ್ಯದೈವ. ಮಲ್ಲಮ್ಮನ ಗುಡಿಯನ್ನು ಈಗಲೂ ನೋಡಬಹುದು. ಅಕ್ಕನ ಕದಳಿವನದಲ್ಲಿ ಪ್ರವೇಶಿಸುವುದು ಬಹುತರವಾಗಿ ಅಸಾಧ್ಯ.

‘ಲೋಕದ ಗಂಡರನ್ನೆಲ್ಲ ಒಲೆಯೊಳಗಿಕ್ಕು’ ಎಂದು ಗರ್ಜಿಸಿದ ಅಕ್ಕ, ತಾನಾಗಿ ಒಲಿದು ಬಂದ ರಾಜನಾದ ಕೌಶಿಕನ ಸಾಂಗತ್ಯವನ್ನು ತಿರಸ್ಕರಿಸಿ, ಮಲ್ಲಿಕಾರ್ಜುನನನ್ನು ಸೇರಲು ಶ್ರೀಶೈಲಕ್ಕೆ ಹೊರಟಳು. ಮಲ್ಲಮ್ಮ ತನ್ನ ಹುಚ್ಚ ಗಂಡನಲ್ಲಿಯೇ ಮಲ್ಲಿಕಾರ್ಜುನನನ್ನು ಕಂಡಳು. ಅವಳಿಗೆ ಮಲ್ಲಿಕಾರ್ಜುನ ಮಾತ್ರ ದೇವರಲ್ಲ, ಎಲ್ಲರೂ ಮಲ್ಲಿಕಾರ್ಜುನನಂತೆಯೇ ಕಾಣುತ್ತಿದ್ದರು. ಹೊಲಸು ನಾರುವ, ಮೈಎಲ್ಲ ಗಾಯಗಳಿಂದ ತುಂಬಿದ ಭಿಕ್ಷುಕ ಅವಳಲ್ಲಿ ಭಿಕ್ಷೆಯನ್ನು ಬಯಸಿದಾಗ, ಮಲ್ಲಮ್ಮ ಅವನ ಗಾಯಗಳನ್ನು ತೊಳೆದು ಸ್ನಾನ ಮಾಡಿಸಿ, ಊಟಕ್ಕೆ ನೀಡಿದಳು. ಅವಳಿಗೆ ಅವನೇ ಸಾಕ್ಷಾತ್ ಮಲ್ಲಿಕಾರ್ಜುನನಂತೆ ಕಂಡ. ಕಂಡ ಅಲ್ಲ; ಅವನೇ ನಿಜವಾದ ಮಲ್ಲಿಕಾರ್ಜುನ. ಅದು ಅವಳ ವಿಶಾಲ ದೃಷ್ಟಿ. ಅದೇ ಅವಳ ದೇವದೃಷ್ಟಿ. ಆಕೆ ಕಾಣುವುದೆಲ್ಲ ದೇವನದೇ ರೂಪ.

12ನೇ ಶತಮಾನದ ಕ್ರಾಂತಿ ಸಾಮೂಹಿಕ ನೆಲೆಯಲ್ಲಿ, ಈಗಿನ ಬೀದರ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಜರುಗಿತು. ಇನ್ನೊಂದು ಕ್ರಾಂತಿ ಆಂಧ್ರಪ್ರದೇಶದ ಶ್ರೀಶೈಲ ಸಮೀಪದ ಸಿದ್ದಾಪುರದಲ್ಲಿ ನಡೆಯಿತು. ಅದು ನಡೆದದ್ದು ಕೌಟುಂಬಿಕ/ಪ್ರಾದೇಶಿಕ ನೆಲೆಯಲ್ಲಾದರೂ ಅದರ ಕೀರ್ತಿ ಆಂಧ್ರಪ್ರದೇಶದ ಆಚೆಗೂ ಹರಡಿತು. ಬಹುತೇಕ ಕರ್ನಾಟಕದ ಪ್ರತಿ ಊರಲ್ಲೂ ಹೇಮರಡ್ಡಿ ಮಲ್ಲಮ್ಮ ನಾಟಕ/ಬಯಲಾಟ ಪ್ರದರ್ಶನಗೊಂಡಿವೆ. ಮಲ್ಲಮ್ಮ ರಡ್ಡಿ ಸಮಾಜಕ್ಕೆ ಮಾತ್ರ ಸೀಮಿತವಲ್ಲ; ಅವಳು ಸಮಸ್ತ ಸಮಾಜದ ಆದರ್ಶ ಸತಿ, ಭಕ್ತೆ, ಸಂಸಾರದೊಂದಿಗೆ ಪಾರಮಾರ್ಥಿಕ ಸಾಧನೆಗೈದ ಪರಮಸಾಧಕಿ.

ಅವಳು ಹುಟ್ಟಿದ್ದು ಸುಮಾರು 600 ವರ್ಷಗಳ ಹಿಂದೆ. ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಯ ರಾಮಪುರ ಎಂಬ ಊರಲ್ಲಿ. ಅಪ್ಪ ನಾಗರಡ್ಡಿ, ಅವ್ವ ಗೌರಮ್ಮತಾಯಿ. ಇವರಿಗೆ ಸುದೀರ್ಘಕಾಲ ಮಕ್ಕಳಾಗಲಿಲ್ಲ. ಅವರು ಶ್ರೀಶೈಲ ಮಲ್ಲಿಕಾರ್ಜುನನಲ್ಲಿ ಹರಕೆ ಹೊತ್ತು, ಮಗಳನ್ನು ಪಡೆದರು. ಮಲ್ಲಿಕಾರ್ಜುನನ ಸ್ಮರಣೆಗಾಗಿ ಅವಳಿಗೆ ‘ಮಲ್ಲಮ್ಮ’ ಎಂಬ ಹೆಸರಿಟ್ಟರು. ಅವಳನ್ನು ನೋಡಿದಾಗೊಮ್ಮೆ, ಅವಳ ಹೆಸರನ್ನು ಕರೆದಾಗೊಮ್ಮೆ ಅವರಿಗೆ ಮಲ್ಲಿಕಾರ್ಜುನನ ನೆನಪಾಗುತ್ತಿತ್ತು. ಹೀಗಾಗಿ ಮಲ್ಲಮ್ಮನಿಗೂ ಮಲ್ಲಿಕಾರ್ಜುನನೇ ಆರಾಧ್ಯದೇವನಾದ.

ರಾಮಪುರದ ಸಮೀಪದಲ್ಲಿರುವ ಸಿದ್ದಾಪುರ ಮಲ್ಲಮ್ಮನ ಗಂಡನ ಮನೆ. ಅವರ ಮಾವ ಹೇಮರಡ್ಡಿಗೆ ಪಾಂಡವರಂತೆ ಐದು ಜನ ಗಂಡು ಮಕ್ಕಳು. ಅವರಲ್ಲಿ ಮಧ್ಯಮ ಪುತ್ರ, ಅಂದರೆ ಮೂರನೆಯ ಮಗ ಭರಮರಡ್ಡಿ ಮಲ್ಲಮ್ಮನ ಗಂಡ. ಅವನನ್ನು ಎಲ್ಲರೂ ಹುಚ್ಚ ಎಂದೇ ಕರೆಯುತ್ತಿದ್ದರು. ಮಲ್ಲಮ್ಮನಿಗೆ ಮಾತ್ರ ಅವನು ಪ್ರತ್ಯಕ್ಷ ಮಲ್ಲಿಕಾರ್ಜುನ ದೇವರಂತೆಯೇ ಕಾಣುತ್ತಿದ್ದ. ಅವಳ ಪತಿಭಕ್ತಿ, ಅವಳನ್ನು ದ್ವೇಷಿಸಿ ಹಲವು ತೊಂದರೆ ಕೊಡುತ್ತಿದ್ದ ನಾದಿನಿ, ನೆಗಣ್ಣಿಯರ ಮೇಲಿನ ಪ್ರೀತಿ ಅವಳನ್ನು ವಿಶೇಷ ವ್ಯಕ್ತಿಯನ್ನಾಗಿಸಿದವು. ಅವಳ ಭಕ್ತಿಗೆ ಮೆಚ್ಚಿದ ಮಲ್ಲಿಕಾರ್ಜುನ ಪ್ರತ್ಯಕ್ಷನಾಗಿ ‘ಏನು ವರ ಬೇಕು’ ಎಂದು ಕೇಳಿದಾಗ, ಅವಳು ತನಗಾಗಿ ಏನನ್ನೂ ಬೇಡಲಿಲ್ಲ. ಹಾಗೆಯೇ ಬೇಡದೆಯೂ ಇರಲಿಲ್ಲ. ಅವಳು ಬೇಡಿದ್ದು, ತನಗೆ ಕಿರಿಕಿರಿ ಕೊಟ್ಟ ತನ್ನವರು ಯಾವಾಗಲೂ ಸಿರಿವಂತರಾಗಿರಬೇಕು ಎಂದು. ರಡ್ಡಿ ಜನರಲ್ಲಿ ಕಡ್ಡಿ ಬಂಗಾರವಾದರೂ ಇರಬೇಕು.. ಹಾಗೆ ವರ ಕೊಡು ಎಂದು ಕೇಳಿದಳು.

ಹೇಮರಡ್ಡಿ ಕುಟುಂಬ ನಾಡಿಗೆ ಕೊಟ್ಟದ್ದು ಮಲ್ಲಮ್ಮ ಎಂಬ ಸಾಧಿ್ವುನ್ನು ಮಾತ್ರವಲ್ಲ; ವೇಮನ ಎಂಬ ಸಂತನನ್ನೂ ಕೂಡ. ಅದಕ್ಕೂ ಮಲ್ಲಮ್ಮನ ನಡೆ-ನುಡಿಯೇ ಪ್ರೇರಣೆ. ಎಲ್ಲ ದುಶ್ಚಟಗಳ ದಾಸನಾಗಿದ್ದ ವೇಮನ, ಮಲ್ಲಮ್ಮನಿಂದ ಪರಿವರ್ತನೆಗೊಂಡ. ಎರಡು ಪ್ರಖರ ರತ್ನಗಳನ್ನು ನಾಡಿಗೆ ಕೊಟ್ಟ ಶ್ರೇಯಸ್ಸು ಹೇಮರಡ್ಡಿ ಕುಟುಂಬದ್ದು.

12ನೇ ಶತಮಾನದ ಶರಣರಂತೆ ಮಲ್ಲಮ್ಮ ವಚನಗಳನ್ನು ಬರೆಯಲಿಲ್ಲ ಅಥವಾ ಹೇಳಲಿಲ್ಲ. ಅವಳ ಜೀವನವೇ ಒಂದು ಅದ್ವಿತೀಯ ಹಾಗು ಅಪೂರ್ವ ವಚನ.

ಅನೇಕ ಶರಣರು ಪವಾಡ ಮಾಡಿದಂತೆ, ಮಲ್ಲಮ್ಮನೂ ಪವಾಡ ಮಾಡಿದ್ದಾಳೆ. ಕುರುಡರಿಗೆ ಕಣ್ಣು ಕೊಟ್ಟಿದ್ದಾಳೆ. ದ್ವೇಷಿಸುವವರನ್ನು ಪ್ರೀತಿಸುವಂತೆ

ಮಾಡಿದ್ದಾಳೆ. ಮಹಾತ್ಮರು ಯಾರನ್ನೋ ಮೆಚ್ಚಿಸಲು ಅಥವಾ ಪ್ರಭಾವಿಸಲು ಪವಾಡಗಳನ್ನು ಮಾಡುವುದಿಲ್ಲ. ಅವು ಆಕಸ್ಮಿಕವಾಗಿ ಘಟಿಸುತ್ತವೆ. ಅವುಗಳ ಹಿಂದೆ ಜನೋಪಕಾರ ಹಾಗೂ ಜನಕಲ್ಯಾಣದ ಗುರಿ ಮಾತ್ರ ಇರುತ್ತದೆ. ಅವುಗಳನ್ನು ನೋಡಿದವರು ಒಂದಿಷ್ಟು ಖಾರ-ಉಪ್ಪು ಹಚ್ಚಿ ರೋಚಕವಾಗಿ ಹೇಳುವುದುಂಟು. ಅದನ್ನು ನಂಬದವರು ಅದು ಹೇಗೆ ಸಾಧ್ಯ ಎಂದು ನಿರ್ಲಕ್ಷಿಸುವುದೂ ಉಂಟು.

2017ರಿಂದ ಪ್ರತಿವರ್ಷ ಮೇ 10ರಂದು ಹೇಮರಡ್ಡಿ ಮಲ್ಲಮ್ಮನ ಜಯಂತಿ ಆಚರಣೆ, ಅಧಿಕೃತವಾಗಿ ಆರಂಭವಾಯಿತು. ಈ ವರ್ಷ ಮಲ್ಲಮ್ಮನ 600ನೇ ಜಯಂತಿ. ಹೀಗಾಗಿ ಅದಕ್ಕೊಂದು ವಿಶೇಷ ಕಳೆ ಬಂದಿದೆ.

(ಲೇಖಕರು ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net