

| ಕೆ.ಎಸ್. ಕಣ್ಣನ್
ಗಂಗಾವತರಣದಲ್ಲಿ ಗಂಗೆಯ ಬಗ್ಗೆ ವಾಲ್ಮೀಕಿ ಹೇಳಿರುವ ಮಾತುಗಳು ಸ್ಮರಣಾರ್ಹ. ಆದಿಕವಿಗಳೂ ಋಷಿಗಳೂ ಆದವರು ಈ ನದಿಯನ್ನು ಹೇಗೆ ಕಂಡಿರುವರು! ಅವಳ ಪಾವಕತ್ವವನ್ನು ವರ್ಣಿಸುತ್ತಾ, ಬೇರೆಡೆಯಲ್ಲಿ ರಾಜನಾಗಿರುವುದಕ್ಕಿಂತ ಅವಳ ದಡದಲ್ಲಿ ಹೀನ ಜಂತುಗಳಾಗಿರುವುದು ಲೇಸೆನ್ನುತ್ತಾರೆ. ಅವಳಲ್ಲಿ ಸ್ನಾನ ಮಾಡಿದವರು ಸಂಸಾರಚಕ್ರಕ್ಕೆ ಮತ್ತೆ ಬೀಳುವುದಿಲ್ಲವೆಂದೂ, ಅವಳು ಮೋಕ್ಷಲಕ್ಷ್ಮಿಗೆ ವಿಜಯಧ್ವಜವೆಂದೂ ವರ್ಣಿಸುತ್ತಾರೆ. ಇಷ್ಟೇ ಅಲ್ಲ, ತಮ್ಮ ಮರಣವು ಅವಳ ಸ್ಮರಣೆಯೊಂದಿಗೇ ಆಗಬೇಕೆಂಬ ಕನಸು ಕಾಣುತ್ತಾರೆ. ಶಂಕರಾಚಾರ್ಯರು ಗಂಗೆಯ ಕುರಿತಾಗಿ ಎರಡು ಸ್ತೋತ್ರ ರಚಿಸಿದ್ದಾರೆ. ಗಂಗೆಯು ಸ್ವರ್ಗದಿಂದಲೂ ಪರ್ವತಗಳ ಮೂಲಕವೂ ಧುಮುಕುತ್ತಿರುವ ಪರಿಯನ್ನೂ, ಅವಳು ಪಾಪನಾಶಿನಿ ಎಂಬುದನ್ನೂ ಅವುಗಳಲ್ಲಿ ವರ್ಣಿಸುತ್ತಾರೆ. ಭರ್ತೃಹರಿಯ ಕನಸು ಇದು: ಎಂದಿಗಾದರೂ ನಾನು ಗಂಗೆಯ ದಡದಲ್ಲಿ ಹಿಮಾಲಯದ ಶಿಲೆಯೊಂದರ ಮೇಲೆ ಪದ್ಮಾಸನವನ್ನು ಹಾಕಿ ಕುಳಿತಿರಬೇಕು; ಬ್ರಹ್ಮ-ಧ್ಯಾನಾಭ್ಯಾಸದಿಂದಾಗಿ ಯೋಗ-ನಿದ್ರೆಯನ್ನು ಹೊಂದಿರಬೇಕು; ಅದೆಷ್ಟು ಆಳವಾಗಿರಬೇಕೆಂದರೆ, ಮುದಿಜಿಂಕೆಗಳು ತಮ್ಮ ಮೈಯನ್ನು ನನ್ನ ಮೈಗೆ ಉಜ್ಜಿಕೊಳ್ಳುತ್ತಾ ತಮ್ಮ ಮೈತುರಿಯನ್ನು ಕಳೆದುಕೊಳ್ಳುತ್ತಿರಬೇಕು! (ಅರ್ಥಾತ್, ನಾನಾದರೂ ಅದರ ಪರಿವೆ ಸಹ ಇಲ್ಲದೆ ಧ್ಯಾನದಲ್ಲಿ ಮುಳುಗಿಹೋಗಿರಬೇಕು) - ಅಂತಹ ಸುದಿವಸಗಳು ಅದೆಂದು ಬಂದಾವೋ! ಎಂದು ಎದುರುನೋಡುತ್ತಿದ್ದೇನೆ, ಎನ್ನುತ್ತಾನೆ. ‘‘ಗಂಗಾತೀರೇ... ಮಮ ಸುದಿವಸೈಃ’! ತನ್ನ ನೀತಿಶತಕದಲ್ಲಿ ಗಂಗೆಯ ಬಗ್ಗೆ ನಕಾರಾತ್ಮಕವಾಗಿ ಅಧೋಗತಿಯನ್ನು ಹೊಂದಿದವಳೆಂದು ಹೇಳಿದ್ದರೂ, ಆಮೇಲಿನ ವೈರಾಗ್ಯ-ಶತಕದಲ್ಲಿ ಮೇಲೆ ಹೇಳಿರುವುದನ್ನು ಚಿತ್ರಿಸಿದ್ದಾನೆ. ವೈರಾಗ್ಯ-ಶತಕದ ಕಟ್ಟಕಡೆಯ ಭಾಗವಾದ ಅವಧೂತ-ಚರ್ಯಾಪ್ರಕರಣದಲ್ಲಿ, ತನ್ನ ಭಾಗ್ಯ ಫಲಿಸಿದರೆ ಗಂಗಾತೀರದ ಆ ಸನ್ನಿವೇಶ ದೊರೆತೀತೆಂಬ ಮೇಲಿನ ಮಾತು ಬರುತ್ತದೆ. ಇದಕ್ಕೆ ಸ್ವಲ್ಪ ಮುಂಚೆ ಕೂಡ, ‘ಸ್ನಾತ್ವಾ ಗಾಂಗೈಃ ಪಯೋಭಿಃ’ಎಂದು ಗಂಗಾ-ಸ್ನಾನದ ಶ್ರೇಷ್ಠತೆಯನ್ನು ಕೊಂಡಾಡಿದ್ದಾನೆ. ಆರಂಭದ ಧೋರಣೆಯು ಒಂದಾದರೂ ಅಂತ್ಯದ ಕನಸು ಸಕಾರಾತ್ಮಕವೇ. ಶಂಕರಭಗವತ್ಪಾದರೂ ಹೀಗೆಯೇ ಮಾಡಿದ್ದಾರೆ! ಭಜಗೋವಿಂದದಲ್ಲಿ ‘ಜನರು ಏನೆಲ್ಲ ಮಾಡುತ್ತಾರೆ! ಗಂಗೆಗೆ ಹೋಗುವುದೇನು, ಸಾಗರಕ್ಕೆ ಹೋಗುವುದೇನು, ವ್ರತಗಳನ್ನು ಮಾಡುವುದೇನು, ದಾನವನ್ನು ಮಾಡುವುದೇನು? - ಇವೆಲ್ಲವನ್ನೂ ಮಾಡುತ್ತಾರೆ! ಆದರೆ ಮುಕ್ತಿಯೊಂದಕ್ಕಾಗಿ ನೂರುಜನ್ಮವಾದರೂ ಏನು ಶ್ರಮಪಡಲೂ ಸಿದ್ಧರಿಲ್ಲವಲ್ಲಾ!- ಎನ್ನುತ್ತಾ ಜನರ ಮೂರ್ಖತನವನ್ನು ಅಧಿಕ್ಷೇಪಿಸುತ್ತಾರೆ. ಈ ಮಾತಿನ ಮರ್ಮವನ್ನು ಮುಂದೆ ನೋಡುತ್ತೇವೆ. ಭರ್ತೃಹರಿಯಾದರೂ ಮೊದಲೊಂದು ಕೊನೆಗೊಂದು ಹೇಳಿದ. ಆದರೆ ಇವರು, ಇನ್ನು ಮೂರೇ ಶ್ಲೋಕವಾದ ಮೇಲೆ ಹೇಳಿರುವುದೇನು? ‘ಗಂಗಾಪಾನದಿಂದಲೇ ಮೋಕ್ಷವು ಸಿದ್ಧಿಸುವುದು’ ಎಂದು! ‘ಗೀತೆಯನ್ನು ಕಿಂಚಿತ್ತಾಗಿ ಓದಿದರೂ ಆಯಿತು; ಗಂಗಾಜಲದ ಒಂದು ಲವದ ಒಂದು ಕಣದ ಒಂದು ಭಾಗವಷ್ಟನ್ನಾದರೂ ಪಾನ ಮಾಡಿದರಾಯಿತು, ಆತನಿಗಿನ್ನು ಯಮದರ್ಶನವಾಗದು’ ಎಂದು! ಸ್ವಲ್ಪ ಗಮನಿಸಿ. ಗಂಗೆಯ ಮಹಿಮೆಯೆಷ್ಟೆಂದರೆ, ಅದರ ಒಂದು ಬಿಂದುವಿನ ಮಹಿಮೆಯನ್ನಲ್ಲ ಇಲ್ಲಿ ಹೇಳಿರುವುದು. ಜಲದ ಲವದ ಕಣಿಕೆಯದು. ಲವವೆಂದರೂ ಲೇಶವೆಂದರೂ ಒಂದೇ; ಕಣವೆಂದರೂ ಅಣುವೆಂದರೂ ಒಂದೇ; ಇನ್ನು ಕಣದೊಂದು ಪುಟ್ಟ ಭಾಗವೇ ಕಣಿಕೆ. ಅಲ್ಲಿಗೆ, ಗಂಗೆಯ ಜಲದ ಲವದ ಕಣದ ಕಿರುಭಾಗವಾಯಿತು! ಇಷ್ಟೇ ಸಾಕು! ಅಷ್ಟು ಶಕ್ತಿ ಅದಕ್ಕೆ, ಅಬ್ಬಬ್ಬ!
ಹೀಗೆ ಕವಿಯೊಬ್ಬರು, ಜ್ಞಾನಿಯೊಬ್ಬರು- ಇಬ್ಬರೂ ಗಂಗೆಯನ್ನು ತೆಗಳಿಯೂ ಹೊಗಳಿಯೂ ಇದ್ದಾರೆ. ಇದೇನೀ ದ್ವಂದ್ವ? ಸರಿಯಾದುದು ಯಾವುದು? ಎಂಬ ವ್ಯವಸ್ಥೆ ಬೇಕಲ್ಲವೆ? ಈ ಪ್ರಶ್ನೆಗೆ ಉತ್ತರವನ್ನು ಎರಡು-ಮೂರು ಸ್ತರಗಳಲ್ಲಿ ಕಾಣಬಹುದು. ಮೊದಲನೆಯದಾಗಿ, ಮಹಾತ್ಮರಲ್ಲೂ ಕೆಲವೊಮ್ಮೆ ಸಣ್ಣ-ಪುಟ್ಟ ದೋಷಗಳು ಬರಬಹುದು. ಅವು ಆದರ್ಶವೆಂದಲ್ಲ. ಆ ಅಂಶದಲ್ಲಿ ಅವರನ್ನು ಅನುಕರಿಸಬೇಕಾದುದಿಲ್ಲ, ಅಷ್ಟೆ. ಅಲ್ಲಿಗವನ್ನು ಬಿಡಬೇಕು. ಇನ್ನೂ ಸರಿಯೆಂದರೆ, ಸರಿಯಾದುದೂ ಸಹ ತಪ್ಪೆಂದು ನಮ್ಮ ಕಣ್ಣಿಗೆ ತೋರಬಹುದು. ವಾಸ್ತವವಾಗಿ ಗಂಗೆಯಿಂದಾದುದು ಲೋಕೋದ್ಧಾರವೇ. ಆದರೆ ನಮ್ಮ ಕಣ್ಣಿಗೆ ಬಿದ್ದದ್ದು ಅವಳು ಬಿದ್ದದ್ದು, ಅಷ್ಟೆ. ಸಹಾಯ ಮಾಡಲು ಧುಮುಕಿ ಬಂದವರನ್ನು ‘ಅಯ್ಯೋ ಬಿದ್ದುಹೋದೆಯಾ!’ ಎಂದಂದಂತಾಯಿತು, ಅಷ್ಟೆ! ಶ್ರೀರಂಗಮಹಾಗುರುಗಳು ಒಂದು ಭವ್ಯವಾದ ಉದಾಹರಣೆಯನ್ನು ಕೊಡುತ್ತಿದ್ದರು.. ‘ಈಜು ಬರದೆ ನೀರಿನಲ್ಲಿ ಮುಳುಗುತ್ತಿರುವನನ್ನು ಉಳಿಸಲು ಈಜುಬಲ್ಲವನೊಬ್ಬ ನೀರಿಗೆ ಧುಮುಕಿದರೆ, ಇಬ್ಬರಿಗೂ ಭೇದ ತಿಳಿಯದವ ಇಬ್ಬರೂ ಬಿದ್ದಿರುವವರೇ ಎಂದುಕೊಂಡಾನು!’ ಮೂರನೆಯದಾಗಿ, ಕವಿಗಳು ಕೊಡುವ ಉದಾಹರಣಗಳೆಲ್ಲಾ ಸದಾ ಪೂರ್ಣವಾಗಿಯೂ ಔಚಿತ್ಯಪೂರ್ಣವಾಗಿಯೂ ಇರುತ್ತವೆಂದು ಹೇಳುವಂತಿಲ್ಲ. ಒಟ್ಟಾರೆ ಚಿತ್ರವನ್ನು ಬಿಟ್ಟು ಕೆಲವೊಮ್ಮೆ ಏಕದೇಶವನ್ನೇ ಎಂದರೆ ಒಂದು ಸಣ್ಣ ಭಾಗವನ್ನೇ ತೆಗೆದುಕೊಂಡು ಯಾವುದಕ್ಕೋ ಉದಾಹರಣೆಯನ್ನಾಗಿ ಕೊಡುವುದುಂಟು! ಆಗ ಏನೋ ಭಾಗಶಃ ಅನ್ವಯವು ಘಟಿಸೀತು, ಅಷ್ಟೆ. ಕವಿ-ವಿವಕ್ಷೆಯನ್ನು ಗಮಿನಿಸಿ, ಉಳಿದದ್ದನ್ನು ಬಿಡುವುದರಲ್ಲಲ್ಲವೇ ಔಚಿತ್ಯವಿರುವುದು?
ಇದಕ್ಕಿಂತಲೂ ಮುಖ್ಯವಾಗಿ, ಶ್ರದ್ಧೆಯೆಂಬುದಿಲ್ಲದೆ ಹೋದಲ್ಲಿ, ಗಂಗೆಗೆ ಹೋಗಿಬಂದರೂ, ಮಿಂದುಬಂದರೂ ಫಲವಿಲ್ಲ. ಮುಕ್ತಿಯತ್ತಲೇ ಉತ್ಕಟವಾಗಿ ಮನಸ್ಸು ಲಗ್ನವಾಗಿದ್ದಲ್ಲಿ ಗಂಗಾಸ್ನಾನವೇ ಏಕೆ, ದೂರದಲ್ಲೆಲ್ಲೋ ಇದ್ದುಕೊಂಡೇ ಗಂಗಾ-ಜಲ-ಬಿಂದುವೊಂದರ ಪಾನ ಮಾಡಿದರೇ ಸಾಕಾದೀತು! ಸ್ಮರಣೆಯೊಂದೆ ಸಾಲದೇ? ಹೀಗೆ ಒಂದೇ ಕೆಲಸವನ್ನೇ ಒಡ್ಡಾಗಿ ಗೊಡ್ಡಾಗಿ ಮಾಡುವುದಕ್ಕೂ, ಬದಲಾಗಿ ಅರಿವಿನೊಂದಿಗೆ ತಿಳಿವಿನ ಮನಸ್ಸಿನೊಂದಿಗೆ ಶ್ರದ್ಧೆಯೊಂದಿಗೆ ಮಾಡುವುದಕ್ಕೂ ಇರುವ ಭೇದವನ್ನು ಹೀಗೆ ತಿಳಿಸಿದ್ದಾರೆಂಬುದನ್ನು ಮನಗಾಣಬೇಕು. ಯಾವುದೇ ಕರ್ಮವಾಗಲಿ, ‘ವಿದ್ಯಯಾ ಶ್ರದ್ಧಯಾ ಉಪನಿಷದಾ’ ಮಾಡು ಎಂದು ತಾನೆ ಉಪನಿಷತ್ತು ಹೇಳುವುದೂ? ಶ್ರೀರಂಗಮಹಾಗುರುಗಳು ಹೇಳುವಂತೆ ಮರ್ಮವರಿತು ಕರ್ಮ ಮಾಡಬೇಕು. ಆದರಿದೋ ‘ಗಂಗಾಸ್ನಾನದಿಂದ ಪಾಪವು ಹೇಗೂ ಕಳೆಯುವುದಲ್ಲವೇ?’ ಎಂದುಕೊಂಡು ಮತ್ತೆ ಪಾಪಕೃತ್ಯಕ್ಕೆ ಮನಸ್ಸು ತೊಡಗಿತೋ, ಕೆಟ್ಟೆವು. ಎಂದೇ, ಮುಖ್ಯತೀರ್ಥವಾವುದೆಂದು ಕೇಳಿಕೊಂಡು, ‘ಯಾವುದು ಮನೋ-ಮಲವನ್ನು ಹೋಗಲಾಡಿಸುವುದೋ ಅದೇ ಮುಖ್ಯತೀರ್ಥ’ ಎಂದು ಶಂಕರರೇ ಹೇಳುತ್ತಾರೆ (ಕಿಂ ತೀರ್ಥಮಪಿ ಚ ಮುಖ್ಯಂ? ಚಿತ್ತ-ಮಲಂ ಯನ್ನಿವರ್ತಯತಿ). ಇಲ್ಲದಿದ್ದಲ್ಲಿ, ಅವರೇ ಕೇಳುವ ಪ್ರಶ್ನೆ ಕಣ್ಣ ಮುಂದೆ ನಿಲ್ಲುತ್ತದೆ (ಅನಾತ್ಮಶ್ರೀ- ವಿಗರ್ಹಣಸ್ತೋತ್ರದಲ್ಲಿ). ಜಾಹ್ನವಿಯಲ್ಲಿ ಸ್ನಾನ ಮಾಡಿದರೇನು ಬಂದಿತು- ಆತ್ಮಸಾಕ್ಷಾತ್ಕಾರವನ್ನೇ ಮಾಡಿಕೊಳ್ಳದಿದ್ದಲ್ಲಿ!? - ‘ಸ್ನಾತಸ್ತೀರ್ಥೇ ಜಹ್ನುಜಾದೌ ತತಃ ಕಿಂ/ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಭೂತ್?’.
ಯಾವನು ಅತ್ಯಂತ ಶುದ್ಧನೋ ಅರ್ಥಾತ್ ಅಂತರಂಗಶುದ್ಧಿಯನ್ನು ವಿಶೇಷವಾಗಿ ಹೊಂದಿರುವನೋ ಅಂತಹವನು ಗಂಗೆಯ ಪರ್ಯಂತ ಹೋಗಲೇಬೇಕಿಲ್ಲ ಎಂಬ ಮಾತು ಸಹ ಉಂಟು! ಹಾಗೆಂದು ಸಾಕ್ಷಾತ್ ಮನುಸ್ಮೃಯಲ್ಲೇ ಹೇಳಿದೆ- ನಿನ್ನ ಹೃದಯದಲ್ಲೇ ಯಮನಿದ್ದಾನಲ್ಲವೇ? ಅವನೊಡನೆ ನಿನಗೆ ತಕರಾರಿಲ್ಲವೋ, ನಿನಗೇಕೆ ಗಂಗೆ, ನಿನಗೇಕೆ ಕುರುಕ್ಷೇತ್ರ? ಅಲ್ಲೆಲ್ಲಿಗೂ ಹೋಗಬೇಕಿಲ್ಲ! ‘ಯಮೋ ವೈವಸ್ವತೋ ರಾಜಾ ಯಸ್ತವೈಷ ಹೃದಿ ಸ್ಥಿತಃ | ತೇನ ಚೇದ್ ಅವಿವಾದಸ್ತೇ ಮಾ ಗಂಗಾಂ ಮಾ ಕುರೂನ್ ಗಮಃ’||
ಇದೋ ನೋಡಿ ಸೃಷ್ಟಿಯ ಮಧುರ ವೈಚಿತ್ರ್ಯ! ಗಂಗೆಯ ಬಿಂದುಪಾನವಾದರೂ ಆಯಿತು, ಯಮನ ದರ್ಶನವಿನ್ನಿಲ್ಲ; ಹಾಗೆಯೇ, ಒಳಗಣ ಯಮನೊಡನೆ ವಿವಾದವಿಲ್ಲವೋ, ನಿನಗಿನ್ನು ಗಂಗೆಯ ಹಂಗೂ ಇಲ್ಲ! ಸಾರವಿಷ್ಟೆ. ಗಂಗಾಸ್ನಾನ-ಪಾನ-ಸ್ಮರಣಗಳೆಲ್ಲವೂ ಸಫಲವೇ - ಯುಕ್ತವಾದ ಭಾವವಿದ್ದಲ್ಲಿ. ಮೈಮಾತ್ರ ಮುಳುಗು ಹಾಕಿದರಾಗದು, ಜೊತೆಗೆ ಮನಸ್ಸು ಭಗವದ್ಭಾವದಲ್ಲಿ ಮುಳುಗಲಿ. ‘ಒಳಗಣ ಜ್ಞಾನ ಗಂಗೆಯಲ್ಲಿ ಮೀಯುವುದಕ್ಕಿಂತಲೂ ಸಫಲತೆ ಮತ್ತೊಂದುಂಟೇ?’
(ಲೇಖಕರು ಪೀಠಪ್ರಾಧ್ಯಾಪಕರು, ಐ.ಐ.ಟಿ. ಮದರಾಸು; ಆಧ್ಯಾತ್ಮಿಕ ಚಿಂತಕರು, ಅಷ್ಟಾಂಗಯೋಗ ವಿಜ್ಞಾನಮಂದಿರಂ)