ತರ್ಪಣಾದಿಗಳಿಗೆ ಪ್ರಶಸ್ತ ಕಾಲ; ದಕ್ಷಿಣಾಯನ ಇಂದು ಆರಂಭ

Dakshinayana
Published on

| ಡಾ.ಗಣಪತಿ ಹೆಗಡೆ

ಮಾಸವೊಂದಕ್ಕೆ ಶುಕ್ಲಪಕ್ಷ, ಕೃಷ್ಣಪಕ್ಷ ಎಂಬ ಎರಡು ಪಕ್ಷಗಳಿರುವಂತೆ ಸಂವತ್ಸರವೊಂದಕ್ಕೆ ಎರಡು ಅಯನಗಳಿರುತ್ತವೆ. ಒಂದು ಉತ್ತರಾಯಣ. ಇನ್ನೊಂದು ದಕ್ಷಿಣಾಯನ. ಉತ್ತರಾಯಣಮಪ್ಯುಕ್ತಂ ಮಕರಸ್ಥೇ ದಿವಾಕರೇ|| ಮೇಷಾದಿ ಹನ್ನೆರಡು ರಾಶಿಗಳಲ್ಲಿ ಸೂರ್ಯನು ನಿರಂತರವಾಗಿ ಸಂಚರಿಸುತ್ತಾನೆ. ಹನ್ನೆರಡು ರಾಶಿಗಳ ಚಕ್ರದಲ್ಲಿ ಮಕರ ರಾಶಿಯಿಂದ ಆರಂಭವಾಗುವ ಸೂರ್ಯನ ಚಲನೆಯು ಉತ್ತರಾಯಣ ಅಂದರೆ ದಿವಾಕರನು ಮಕರ ರಾಶಿಯನ್ನು ಪ್ರವೇಶಿಸಿದಾಗ ಅದು ಉತ್ತರಾಯಣವಾಗುತ್ತದೆ. ಮಕರ ಸಂಕ್ರಾಂತಿಯಿಂದ ಕರ್ಕಾಟಕ ಸಂಕ್ರಾಂತಿಯವರೆಗಿನ ಆರು ತಿಂಗಳುಗಳ ಕಾಲವು ಉತ್ತರಾಯಣ ಕಾಲ. ಅಯನ ಅಂದರೆ ದಾರಿ ಎಂದರ್ಥ. ಗಮನ, ಸಂಚಾರ ಇತ್ಯಾದಿ ಅರ್ಥಗಳೂ ಇವೆ. ಗಗನದಲ್ಲಿ ಸೂರ್ಯನು ಕ್ರಮಿಸುವ ದಾರಿಯು ಉತ್ತರದ ಕಡೆಗಿದ್ದರೆ ಅದು ಉತ್ತರಾಯಣ. ಅಂದರೆ ಇದು ಸೂರ್ಯನು ಉತ್ತರದಿಕ್ಕಿನಲ್ಲಿ ಸಂಚರಿಸುವ ಕಾಲ. ಭಗವಾನ್ ಸೂರ್ಯನು ಕರ್ಕಾಟಕ ರಾಶಿಗೆ ಪ್ರವೇಶಿಸಿದರೆ ಅದು ದಕ್ಷಿಣಾಯನ. ಅಂದಿನಿಂದ ಸೂರ್ಯನು ದಕ್ಷಿಣ ದಿಕ್ಕಿನಲ್ಲಿ ಸಂಚರಿಸಲು ಆರಂಭಿಸುತ್ತಾನೆ. ಕರ್ಕಾಟಕ ರಾಶಿಯಿಂದ ಧನುರಾಶಿಯವರೆಗೆ ಸೂರ್ಯನ ಗಮನವು ದಕ್ಷಿಣಾಯನವಾಗುತ್ತದೆ. ದಕ್ಷಿಣ ಅಯನಂ ಅಂದರೆ ದಕ್ಷಿಣಸ್ಯಾಂ ದಿಶಿ ಸಂಚಾರಃ ಎಂದರ್ಥ.

ದೈವೇ ರಾತ್ರ್ಯಹನೀ ವರ್ಷಂ ಪ್ರವಿಭಾಗಸ್ತಯೋಃ ಪುನಃ|

ಅಹಸ್ತತ್ರೋದಗಯನಂ ರಾತ್ರಿಃ ಸ್ಯಾದ್ದಕ್ಷಿಣಾಯನಮ್|

ಎಂಬುದಾಗಿ ಹೇಳಿದ್ದಾರೆ. ಮನುಷ್ಯನ ಒಂದು ವರ್ಷವು ದೇವತೆಗಳಿಗೆ ಒಂದು ದಿನದ ಪ್ರಮಾಣವಾಗಿರುತ್ತದೆ. ಆ ದಿನದ ಹಗಲನ್ನು ಉತ್ತರಾಯಣವೆಂದೂ ರಾತ್ರಿಯನ್ನು ದಕ್ಷಿಣಾಯನವೆಂದೂ ಹೇಳಲಾಗಿದೆ. ಮನುಸ್ಮೃತಿಯಲ್ಲಿನ ಈ ಶ್ಲೋಕವು ದಕ್ಷಿಣಾಯನವನ್ನು ವಿವರಿಸುತ್ತದೆ.

ಋತುತ್ರಯಂ ಚಾಪ್ಯಯನಂ ದ್ವೆà—ಯನೇ ವರ್ಷಸಂಜ್ಞಿತೇ|

ಕರ್ಕಟಾದಿಸ್ಥಿತೇ ಭಾನೌ ದಕ್ಷಿಣಾಯನಮುಚ್ಯತೇ||

ಅಂದರೆ ಮೂರು ಋತುಗಳು ಮತ್ತು ಆರು ತಿಂಗಳುಗಳ ಅವಧಿಯದ್ದು ಒಂದು ಅಯನವಾಗಿರುತ್ತದೆ. ಅಂತಹ ಎರಡು ಅಯನಗಳು ಸೇರಿದರೆ ಒಂದು ವತ್ಸರವಾಗುವುದು. ಕರ್ಕಾಟಕ ರಾಶಿಯಲ್ಲಿ ಭಾನುವು ಪ್ರವೇಶಿಸಿದರೆ ಅಂದರೆ ಸೂರ್ಯನ ಚಲಿಸುವ ದಿಕ್ಕು ದಕ್ಷಿಣದ್ದಾಗಿದ್ದರೆ ಅದು ದಕ್ಷಿಣಾಯನ. ಉತ್ತರಾಯಣವು ಹಗಲು ಮತ್ತು ದಕ್ಷಿಣಾಯನವು ರಾತ್ರಿ ಎಂಬುದಾಗಿ ಕಲ್ಪಿಸಲಾಗಿದೆ.

ಅಗ್ನಿಜ್ಯೋತಿಃ ಅಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್

ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮಬ್ರಹ್ಮವಿದೋ ಜನಾಃ||

ಎಂಬುದಾಗಿ ಭಗವದ್ಗೀತೆಯಲ್ಲಿ ಗೀತಾಚಾರ್ಯ ಶ್ರೀಕೃಷ್ಣನು ಹೇಳಿದ್ದಾನೆ. ಅಂದರೆ ಜ್ಯೋತಿರ್ಮಯನಾದ ಅಗ್ನಿಯ ಅಭಿಮಾನಿಯಿರುವ, ಹಗಲಿನ ಅಭಿಮಾನಿ ದೇವತೆಯಿರುವ ಆರು ತಿಂಗಳುಗಳ ಕಾಲದ ಶುಭ್ರವಾದ ಮಾರ್ಗವು ಉತ್ತರಾಯಣ. ಈ ಉತ್ತರಾಯಣದಲ್ಲಿ ಬ್ರಹ್ಮಜ್ಞರು ಅಂದರೆ ಪರಮೇಶ್ವರನನ್ನು ಉಪಾಸನೆಯ ಮಾರ್ಗದಿಂದ ಅರಿತ ಯೋಗಿಗಳು ಪ್ರಾಣತ್ಯಾಗ ಮಾಡಿದರೆ ಅವರು ಅರ್ಚಿರಾದಿ ಮಾರ್ಗದಲ್ಲಿ ಅಂದರೆ ಬೆಳಕಿನ ದಾರಿಯಲ್ಲಿ ಸಾಗಿ ಸಾಕ್ಷಾತ್ ಬ್ರಹ್ಮನನ್ನೇ ಹೊಂದುತ್ತಾರೆ. ಅವರಿಗೆ ಪುನರ್ಜನ್ಮಗಳ ಬಂಧನವಿರುವುದಿಲ್ಲ, ಸಾಕ್ಷಾತ್ ಮೋಕ್ಷವನ್ನು ಪಡೆಯುವರು.

ಧೂಮೋ ರಾತ್ರಿಃ ತಥಾ ಕೃಷ್ಣಃ ಷಣ್ಮಾಸಾ ದಕ್ಷಿಣಾಯನಮ್

ತತ್ರ ಚಾಂದ್ರಮಸಂ ಜ್ಯೋತಿರ್ಯೋಗೀ ಪ್ರಾಪ್ಯ ನಿವರ್ತತೇ||

ದಕ್ಷಿಣಾಯನದ ಆರು ಮಾಸಗಳಲ್ಲಿ ಪ್ರಾಣ ತ್ಯಜಿಸಿದವರು ಚಂದ್ರನ ಜ್ಯೋತಿಯನ್ನು ಸೇರಿ ಪುನಃ ಈ ಲೋಕಕ್ಕೆ ಬರುತ್ತಾರೆ. ದಕ್ಷಿಣಾಯನವು ರಾತ್ರಿಯಾದ್ದರಿಂದ ಈ ಕಾಲದಲ್ಲಿ ಮೃತಿಹೊಂದಿದ ಯೋಗಿಗಳು ಮತ್ತೆ ತಿರುಗಿ ಬಂದು ಭೂಮಿಯಲ್ಲಿ ಜನ್ಮತಾಳುತ್ತಾರೆ. ಅವರಿಗೆ ಪುನರ್ಜನ್ಮಗಳಿರುತ್ತವೆ. ಉತ್ತರಾಯಣವೆಂಬ ಪುಣ್ಯಕರವಾದ ಬೆಳಕಿನ ಮಾರ್ಗ ಹಾಗೂ ದಕ್ಷಿಣಾಯನವೆಂಬ ಕತ್ತಲಿನ ಮಾರ್ಗಗಳು ಸರ್ವಕಾಲದಲ್ಲಿಯೂ ಇರುತ್ತವೆ. ಶುಭಕಾರ್ಯಗಳಿಗೆ ಪ್ರಶಸ್ತವಾದದ್ದು ಉತ್ತರಾಯಣವಾದರೆ ತರ್ಪಣಾದಿಗಳಿಗೆ ಪ್ರಶಸ್ತವಾದದ್ದು ದಕ್ಷಿಣಾಯನ. ಈ ಕಾಲದಲ್ಲಿ ನದಿಯಲ್ಲಿ ಪುಣ್ಯಸ್ನಾನ, ಪೂಜೆ, ಜಪ, ದಾನಗಳನ್ನು ಮಾಡಿ ತರ್ಪಣ ಕೊಟ್ಟವರು ಸಮಸ್ತಪಾಪಗಳನ್ನು ಕಳೆದುಕೊಂಡು ಬಹುಪುಣ್ಯವನ್ನು ಪಡೆಯುವರು. ದಕ್ಷಿಣಾಯನ ಪುಣ್ಯಕಾಲದಲ್ಲಿ ಪಿತೃತರ್ಪಣ ಮಾಡುವುದರಿಂದ ಪಿತೃಗಳಿಗೆ ಅಕ್ಷಯವಾದ ತೃಪ್ತಿ ದೊರೆಯುತ್ತದೆ.

(ಲೇಖಕರು ಸಂಸ್ಕೃತ ವಿದ್ವಾಂಸರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net