

| ಸುನೀಲ ಬಾರ್ಕೂರ್
ಕೆಲ ದಿನಗಳ ಹಿಂದೆ ಮೈಕ್ರೋಚಿಪ್ ತಯಾರಿಕೆಯ ದಿಗ್ಗಜ ಎನ್ ವಿಡಿಯಾ ಕಂಪನಿಯು ಎ 800 ಎಂಬ ಹೊಸ ಚಿಪ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಸದಾ ಹೊಸ ಆವಿಷ್ಕಾರಕ್ಕೆ ಒಡ್ಡಿಕೊಳ್ಳುವ ಇಲೆಕ್ಟ್ರಾನಿಕ್ ಮಾರುಕಟ್ಟೆಯಲ್ಲಿ ಕಂಪನಿಗಳು ಚಲಾವಣೆಯಲ್ಲಿರುವ ಆವೃತ್ತಿಯನ್ನು ಉನ್ನತೀಕರಿಸಿ ಪರಿಷ್ಕ್ರತ ಆವೃತ್ತಿಯನ್ನು ಬಿಡುಗಡೆ ಮಾಡುವುದು ವಾಡಿಕೆ. ತಮ್ಮ ಉತ್ಪನ್ನವು ಗ್ರಾಹಕನ ಬದಲಾಗುತ್ತಿರುವ ಜರೂರತ್ತುಗಳಿಗೆ ತಕ್ಕಂತೆ ಹೊಂದಿಕೊಳ್ಳಲು ಇದು ಅನಿವಾರ್ಯ ಕೂಡ. ಆದರೆ ಎನ್ ವಿಡಿಯಾ ಬಿಡುಗಡೆ ಮಾಡಿದ ಎ800 ತಾನೇ ತಯಾರಿಸಿದ್ದ ಎ 100 ಎಂಬ ಜನಪ್ರಿಯ ಚಿಪ್ನ ಬಲಹೀನ ಆವೃತ್ತಿಯೆಂಬುದು ಇಲ್ಲಿ ಗಮನಿಸಬೇಕಾದ ಅಂಶ. ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಉತ್ಪಾದಕರು ತಮ್ಮ
ಆರ್ಎನ್ಡಿ ತಂಡದ ಮೇಲೆ ಇನ್ನಿಲ್ಲದ ಒತ್ತಡ ಹೇರಿ ನಮ್ಮಲ್ಲೇ ಮೊದಲು ಎಂದು ಗ್ರಾಹಕರ ಗಮನಸೆಳೆಯುವ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುವ ಇಂದಿನ ದಿನಗಳಲ್ಲಿ ಮುಂಚೂಣಿ ಕಂಪನಿಯೊಂದಕ್ಕೆ ತನ್ನದೇ ಕೂಸಿನ ಕೈ ಕಾಲು ಮುರಿಯುವ ದರ್ದು ಏನಿತ್ತು ಎಂಬುದನ್ನು ಹುಡುಕಹೊರಟರೆ ಸಿಗುವ ದಾರಿ ಸೀದಾ ಅಮೆರಿಕದತ್ತ ತಲುಪುತ್ತದೆ.
ಕಳೆದ ಕೆಲ ದಿನಗಳಿಂದ ಚೀನಾದಲ್ಲಿ ಕೆಲಸ ಮಾಡುತ್ತಿರುವ ಅಮೆರಿಕನ್ನರು ಭಾರಿ ಒತ್ತಡದಲ್ಲಿದ್ದಾರೆ. ದೇಶ ಮತ್ತು ನೌಕರಿಯ ನಡುವೆ ಒಂದನ್ನು ಆರಿಸಿಕೊಳ್ಳುವ ಅನಿವಾರ್ಯತೆ ಅವರದ್ದು. ಇಷ್ಟೆಲ್ಲ ಸಂದಿಗ್ಧತೆಗೆ ಕಾರಣ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕಳೆದ ತಿಂಗಳು ಜಾರಿ ಮಾಡಿರುವ ತಂತ್ರಜ್ಞಾನ ರಫ್ತು ನಿಷೇಧ ಕಾಯ್ದೆ. ಈ ಕಾಯ್ದೆಯ ಅನಿರ್ವಾಯತೆಯನ್ನು ಅವಲೋಕಿಸುವ ಮುನ್ನ ತೀರ ಇತ್ತೀಚಿನ ಕೆಲ ಬೆಳವಣಿಗೆಗಳನ್ನು ಗಮನಿಸಬೇಕಾಗುತ್ತದೆ. ಕೆಲ ತಿಂಗಳ ಹಿಂದಷ್ಟೇ ಭಾರತದ ಸೇರಿದಂತೆ ಎಲ್ಲೆಡೆ ಕಾರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು ನಾವು ಕಂಡಿದ್ದೇವೆ. ಕೋವಿಡ್ ನಂತರದಲ್ಲಿ ಹೆಚ್ಚುಕಡಿಮೆ ಎಲ್ಲ ಸಿದ್ಧವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದರೂ ಹೆಚ್ಚಿನ ಕ್ಷೇತ್ರಗಳು ಲಗುಬಗನೇ ಚೇತರಿಸಿಕೊಂಡು ಬೇಡಿಕೆಯ ಸವಾಲನ್ನು ತಲುಪಿದವು. ಆದರೆ, ಎಲೆಕ್ಟ್ರಾನಿಕ್ ಸೆಮಿಕಂಡಕ್ಟರ್ ಐಸಿಗಳ ಸರಬರಾಜಿನಲ್ಲಿ ಉಂಟಾದ ನಿರ್ವಾತವನ್ನು ಭರ್ತಿ ಮಾಡಲು ತಯಾರಕರು ಪಟ್ಟ ಪಾಡೇ ಈಗಿನ ದಿನಗಳಲ್ಲಿ ಈ ಎಲೆಕ್ಟ್ರಾನಿಕ್ ಸೆಮಿಕಂಡಕ್ಟರ್ ಐಸಿ ಯಾನೆ ಚಿಪ್ಗಳ ಮೇಲೆ ನಾವೆಷ್ಟು ಅವಲಂಬಿತರಾಗಿದ್ದೇವೆಂದು ಹೇಳುತ್ತದೆ. ಮಕ್ಕಳ ಆಟಿಕೆಯಿರಲಿ, ಕಾರೇ ಆಗಲಿ, ನಮ್ಮ ಕೈಲಿರುವ ಮೊಬೈಲಿಂದ ಹಿಡಿದು ಕಂಪ್ಯೂಟರ್, ಆಧುನಿಕ ಶಸ್ತ್ರಾಸ್ತ್ರ ಹೀಗೆ ಸರ್ವಂ ಚಿಪ್ಪುಮಯಂ. ಇಂತಿಪ್ಪ ಬಹುಪಯೋಗಿ ಬೆರಳ ತುದಿಯಷ್ಟಿರುವ ಚಿಪ್ ಸಾಮ್ರಾಜ್ಯದ ಒಡೆಯರು ಜಗತ್ತನ್ನೇ ತಮ್ಮ ಬೆರಳ ತುದಿಯಲ್ಲಿ ಆಡಿಸಬಹುದೆಂಬ ದೂರಾಲೋಚನೆ ಈ ದೊಡ್ಡಣ್ಣರುಗಳಿಗೆ ಬಂದಿದ್ದೇ ಬಿಗಿನಿಂಗ್ ಆಫ್ ದ ಪ್ರಾಬ್ಲಮ್ಮು.
ಹಾಗೆ ನೋಡಿದರೆ ಈ ಚಿಪ್ ತಯಾರಿಕೆ ಒಂದೇ ದೇಶದ ಜಹಗೀರುದಾರಿಕೆಯೇನಲ್ಲ. ಚಿಪ್ ವಿನ್ಯಾಸದಲ್ಲಿ ನೆದರ್ಲೆಂಡಿನ ಎಎಸ್ಎಂಎಲ್ ಏಕಸ್ವಾಮ್ಯ ಹೊಂದಿದ್ದು ತಯಾರಿಕೆಯಲ್ಲಿ ತೈವಾನಿನ ಟಿಎಸ್ಎಂಸಿ ಮತ್ತು ದಕ್ಷಿಣ ಕೊರಿಯಾದ ಸ್ಯಾಮಸಂಗ್ ಕಂಪನಿಗಳೆರಡೇ ಜಾಗತಿಕ ಉತ್ಪಾದನೆಯ ಶೇಕಡ 80 ರಷ್ಟು ಕಾಣಿಕೆ ನೀಡುತ್ತವೆ. ಮೂರನೆಯ ಸ್ಥಾನದ ಇಂಟೆಲ್ಗೆ ಇಲ್ಲಿ ಅತಿಥಿಪಾತ್ರ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಚಿಪ್ ತಯಾರಿಕಾ ಕಂಪೆನಿಗಳ ಹೆಚ್ಚಿನ ಶಾಖೆಗಳು ಚೀನಾದ ನೆಲದಲ್ಲಿ ಸ್ಥಿತವಾಗಿದ್ದು ಜಾಗತಿಕ ಉತ್ಪಾದನೆಯ ಶೇಕಡ ಮೂವತ್ತರಷ್ಟು ಫಸಲು ಚೀನಾದಿಂದಲೇ ಬರುವ ಮೂಲಕ ನಂಬರ್ ಒನ್ ಚಿಪ್ ತಯಾರಿಕಾ ದೇಶವೆಂಬ ಬಿರುದನ್ನು ಗಳಿಸಿಕೊಂಡಿದೆ. ಆದರೆ, ಮಜವೆಂದರೆ ಚಿಪ್ ತಯಾರಿಕೆಯ ಅತಿಮುಖ್ಯ ಘಟ್ಟವಾದ ಮೂಡಿಸುವಿಕೆ (ಛಿಠ್ಚಿಜಜ್ಞಿಜ) ತಂತ್ರಜ್ಞಾನದ ದಿಗ್ಗಜ ಅಮೆರಿಕ ಮೂಲದ ಲ್ಯಾಮ್ ರಿಸರ್ಚ್ ಸೇರಿದಂತೆ ಹೆಚ್ಚಿನ ಪಕ್ಷ ಚೀನಾದಲ್ಲಿ ಚಿಪ್ ತಯಾರಿಕಾ ಘಟಕಗಳಲ್ಲಿ ತೊಡಗಿಸಿಕೊಂಡಿದ್ದು ಅಲ್ಲಿನ ತಂತ್ರಜ್ಞರೆಲ್ಲ ಅಮೆರಿಕದವರು. ಚಿಪ್ ತಯಾರಿಕೆಯಲ್ಲಿ ಚೀನಾ ಏಕಸ್ವಾಮ್ಯ ಗಳಿಸುತ್ತಿರುವ ಸಂಗತಿ ಕೋವಿಡ್ ನಂತರದ ಉಂಟಾದ ಐಸಿ ಕ್ಷಾಮದಿಂದ ಎಲ್ಲ ದೇಶಗಳ ಗಮನಕ್ಕೆ ಬಂತು. ಹೀಗೆ ಬಿಟ್ಟರೆ ಈ ಚೀನಾ ತನ್ನ ಔಷಧವನ್ನು ತನಗೇ ಕುಡಿಸುತ್ತದೆ ಎಂದು ಮನಗಂಡ ಅಮೆರಿಕ ತನ್ನ ಪೌರೋಹಿತ್ಯದಲ್ಲಿ ಜಪಾನ್, ದಕ್ಷಿಣ ಕೊರಿಯಾ ಮತ್ತು ತೈವಾನ್ ಒಳಗೊಂಡ ಚಿಪ್ 4 ಎಂಬ ರಂಗವನ್ನು ರಚಿಸಿ ಚಿಪ್ ಯುದ್ಧಕ್ಕೆ ಮುನ್ನುಡಿ ಹಾಡಿತು. ಆದರೆ, ತಮ್ಮ ದೇಶದ ರಫ್ತಿನ ಬಹುದೊಡ್ಡ ಪಾಲುದಾರನಾದ ಚೀನಾದೊಡನೆ ವ್ಯಾಪಾರ ಮುರಿದುಕೊಳ್ಳುವ ರಿಸ್ಕಗೆ ದುಡುಕದೇ ನಿಧಾನಿಸುತ್ತಿರುವ ಸದಸ್ಯ ರಾಷ್ಟ್ರಗಳ ವರ್ತನೆಯನ್ನು ಕಂಡು ಕೆರಳಿರುವ ಬೈಡನ್ ಕೊನೆಗೂ ತಂತ್ರಜ್ಞಾನ ರಫ್ತು ನಿಷೇಧ ಕಾಯ್ದೆಯ ಬ್ರಹ್ಮಾಸ್ತ್ರವನ್ನು ಉಪಯೋಗಿಸಿದ್ದಾರೆ. ಅಮೆರಿಕದ ಯಾವುದೇ ಸಂಸ್ಥೆ ಮತ್ತು ನಾಗರಿಕರು ಚೀನಾದ ಕಂಪನಿಗಳಿಗೆ ಅತ್ಯಾಧುನಿಕ ಚಿಪ್ ತಯಾರಿಕಾ ತಂತ್ರಜ್ಞಾನ ಮಾಹಿತಿಯನ್ನು ಹಂಚಿಕೊಳ್ಳಲು ಲೈಸೆನ್ಸ್ ಪಡೆಯುವುದನ್ನು ಕಡ್ಡಾಯ ಮಾಡಿ, ಒಂದು ಪಕ್ಷ ಉಲ್ಲಂಘಿಸಿದಲ್ಲಿ ಅಮೆರಿಕದ ಪೌರತ್ವವನ್ನು ರದ್ದು ಮಾಡುವ ಫರ್ವನು ಹೊರಡಿಸಿದ್ದಾರೆ. ತಂತ್ರಜ್ಞಾನವನ್ನು ತಪ್ಪು ಕೈಗಳಿಗೆ ಕೊಡುವುದನ್ನು ನಿರ್ಬಂಧಿಸುವ ಕಾನೂನು ಇದೆಂದು ಬಣ್ಣಿಸಿಕೊಂಡಿರುವ ಅಮೆರಿಕದ ಈ ನಡೆಯಿಂದ ಚೀನಾದಲ್ಲಿ ಕಾರ್ಯನಿರತ ಅಮೆರಿಕದ ಕಂಪನಿಗಳು ತಮ್ಮ ತಂತ್ರಜ್ಞರನ್ನು ವಾಪಸ್ಸು ಕರೆಸತೊಡಗಿವೆ. ಅತ್ತ ಅಮೆರಿಕದ ದ್ವೇಷವನ್ನು ಕಟ್ಟಿಕೊಳ್ಳಲಾಗದೆ ಇತ್ತ ಚೀನಾದಿಂದ ಗಳಿಸುತ್ತಿರುವ ಥೈಲಿಯನ್ನೂ ಬಿಟ್ಟುಕೊಡಲಾಗದ ಇಕ್ಕಟ್ಟಿಗೆ ಸಿಲುಕಿರುವ ಅಮೆರಿಕ ಮೂಲದ ಕಂಪನಿಗಳು ಈ ಬೀಸೊ ದೊಣ್ಣೆಯಿಂದ ಪಾರಾಗಲು ತಮ್ಮದೇ ಉತ್ಪಾದನೆಯ ದುರ್ಬಲ ಆವೃತ್ತಿಗಳನ್ನು ಚೀನಾಗೆ ಪೂರೈಸುತ್ತಿವೆ. ಎನ್ ವಿಡಿಯಾ ಕಂಪನಿಯ ಎ800 ಚಿಪ್ ಕೂಡ ಈ ಕಷ್ಟಕಾಲದ ಶಿಶುಗಳಲ್ಲಿ ಒಂದು. ಮಾನವ ಸಂಪನ್ಮೂಲದಲ್ಲಿ ಶ್ರೀಮಂತವಾಗಿದ್ದರೂ ಸೂಪರ್ ಕಂಪ್ಯೂಟರ್ ಮತ್ತು ರಕ್ಷಣಾ ಕ್ಶೇತ್ರದಲ್ಲಿನ ಅತ್ಯಾಧುನಿಕ ಸಾಮಗ್ರಿಗಳ ತಯಾರಿಕೆಗೆ ಅತ್ಯಗತ್ಯವಾಗಿರುವ ಚಿಪ್ ತಂತ್ರಜ್ಞಾನಕ್ಕಾಗಿ ಅಮೆರಿಕದ ಮೇಲೆ ಅವಲಂಬಿತವಾಗಿರುವ ಚೀನಾ, ಈ ಬೆಳವಣಿಗೆಯಿಂದ ದಿಗ್ಭ›ಮೆಗೊಂಡಿದ್ದು ಕೊನೆಗೆ ಚಿಪ್ಪು ಯಾರ ಕೈಗೆ ಸೇರಲಿದೆಯೆಂಬ ಕುತೂಹಲದಿಂದ ಜಗತ್ತು ಈ ಎರಡು ದೇಶಗಳತ್ತ ನೋಡುತ್ತಿದೆ.
ಚೀನಾಗೆ ಬಿಸಿ: ಜಾಗತಿಕವಾಗಿ ಅರ್ಧ ಟ್ರಿಲಿಯನ್ ಅಮೆರಿಕನ್ ಡಾಲರ್ ಅಂದರೆ ಅಜಮಾಸು ನಲವತ್ತು ಲಕ್ಷ ಕೋಟಿ ರೂಪಾಯಿ ವಾರ್ಷಿಕ ವ್ಯವಹಾರದ ಈ ಕ್ಷೇತ್ರದಲ್ಲಿ ಹೆಚ್ಚಿನ ಪಾಲುದಾರಿಕೆಯಿರುವುದು ತೈವಾನಿನದು. ಜಗತ್ತಿನ ಒಟ್ಟು ಉತ್ಪಾದನೆಯ ಶೇಕಡ 35ರಷ್ಟು ಬಳಸುವ ಚೀನಾ ನಂ. 1 ಬಳಕೆದಾರ. ಇದರಲ್ಲಿ ಹೆಚ್ಚಿನ ಪಾಲು ತನ್ನ ಆಂತರಿಕ ಬಳಕೆಗೆ ಉಪಯೋಗಿಸುವ ಚೀನಾದ ರಫ್ತು ಜಾಗತಿಕ ಪ್ರಮಾಣದ ಕೇವಲ ಶೇಕಡ 15ರಷ್ಟು. ಚೀನಾದ ಇಷ್ಟೊಂದು ಪ್ರಮಾಣದಲ್ಲಿ ಬಳಸುವುದಕ್ಕೆ ಕಾರಣ ಶಸ್ತ್ರಾಸ್ತ್ರ ತಯಾರಿಕೆಯೆಂಬುದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಗುಮಾನಿ. ಈ ಕಾರಣಕ್ಕೇನೆ ಈ ಐಸಿ ಮತ್ತು ಮೂರನೆಯ ಪೀಳಿಗೆಯ ನ್ಯಾನೊ ತಂತ್ರಜ್ಞಾನದ ಮೈಕ್ರೋಚಿಪ್ ಬಹಿಷ್ಕಾರದ ಬಿಸಿ ಚೀನಾಗೆ ತಟ್ಟಿದೆ.
ಐಸಿ ತಂತ್ರಜ್ಞಾನ: ಗೃಹಬಳಕೆ ಇಲೆಕ್ಟ್ರಾನಿಕ್ಸ್ ಅಂದ ತಕ್ಷಣ ಮೊದಲು ನೆನಪಿಗೆ ಬರುವುದು ರೇಡಿಯೋ. ನಮ್ಮ ತಾತನ ಕಾಲದ ಮುಕ್ಕಾಲು ಸೂಟಕೇಸಿನಷ್ಟಿರುತ್ತಿದ್ದ ವಾಲ್ವ್ ರೇಡಿಯೋ ಹಲವರಿಗೆ ನೆನಪಿರಬಹುದು. ಶುರುವಾಗಲು ಹದಿನೈದು ನಿಮಿಷ ತೆಗೆದುಕೊಳ್ಳುತ್ತಿದ್ದ ಆ ರೇಡಿಯೋ ಬದಲಿಗೆ ಸೆಮಿಕಂಡಕ್ಟರ್ ಟ್ಟ್ರಾನ್ಸಿಸ್ಟರ್ ಬಳಸಿ ಪುಟ್ಟದಾಗಿದ್ದು ಎತ್ತಿಕೊಂಡು ಹೋಗಬಹುದಾದಂತಹ ಟ್ರಾನ್ಸಿಸ್ಟರ್ ರೇಡಿಯೋದ ಅವಿಷ್ಕಾರವಾಗಿದ್ದೇ ತಡ ಅದು ಅತಿಬೇಗ ಜನಪ್ರಿಯವಾಗಿ ಮನೆಮನೆ ತಲುಪಿತು. ಇದು ಸೆಮಿಕಂಡಕ್ಟರ್ ಯುಗದ ಮೊದಲ ಪೀಳಿಗೆ. ಇದೇ ತಂತ್ರಜ್ಞಾನದ ಮುಂದಿನ ಪೀಳಿಗೆಯೇ ಇಂಟಗ್ರೇಟೆಡ್ ಸರ್ಕ್ಯೂಟ ಯಾನೆ ಐಸಿ ಗಳು. 1959ರಲ್ಲಿ ಕಂಡುಹಿಡಿಯಲಾಗಿದ್ದು ಸಿಲಿಕಾನ್ ಬಳಸಿ ತಯಾರಾಗುತ್ತಿದ್ದು ಇಡೀ ಸರ್ಕ್ಯೂಟ್ ಬೋರ್ಡಿನ ಕೆಲಸವನ್ನು ಅಂಗುಲಗಾತ್ರದ ಸಹಸ್ರಪದಿಯಂತೆ ಕಾಣುವ ಈ ಐಸಿಗಳು ಮಾಡಲಾರಂಭಿಸಿದ್ದೇ ಹೊಸಹೊಸ ಸಾಧ್ಯತೆಗಳು ತೆರೆದುಕೊಂಡವು . ಹುಟ್ಟಿದಾಗ ಒಂದು ಕೊಠಡಿಯಷ್ಟು ಜಾಗೆಯನ್ನು ಕಬಳಿಸುತ್ತಿದ್ದ ಕಂಪ್ಯೂಟರ್ ಇಂದು ನಮ್ಮ ತೊಡೆಯ ಮೇಲೆ ಕೂರುವಂತೆ ಮಾಡಿದ್ದೇ ಈ ಐಸಿ ಯಾನೇ ಮೈಕ್ರೋಚಿಪ್ಗಳು. ಇಂದು ಪುಟ್ಟ ಕಾಲ್ಕುಲೇಟರ್ನಿಂದ ದೊಡ್ಡ ಕ್ಷಿಪಣಿಯ ತಯಾರಿಕೆಗೂ ಈ ಐಸಿಗಳು ಬೇಕೇಬೇಕು.ಈಗಿನ ಜಮಾನಾದ ಕೃತಕ ಬುದ್ಧಿಮತ್ತೆಯಂತಹ ನೂತನ ತಾಂತ್ರಿಕತೆ ಕಾರ್ಯನಿರ್ವಹಿಸಲೂ ಇವು ಅತ್ಯವಶ್ಯ.
ಬಾಲ್ಯಾವಸ್ಥೆಯಲ್ಲಿ ಭಾರತ: ಈ ನಡುವೆ ಈ ಇಬ್ಬರ ಜಗಳದಿಂದ ಎಲ್ಲ ದೇಶಗಳು ತಮ್ಮ ಲಾಭ ಲುಕ್ಸಾನಿನ ಲೆಕ್ಕಾಚಾರ ಹಾಕುತ್ತಿವೆ. ಭಾರತದ ಮಟ್ಟಿಗೆ ಹೇಳುವುದಿದ್ದಲ್ಲಿ ನಮ್ಮಲ್ಲಿ ಈ ಮೈಕ್ರೋ ಚಿಪ್ ತಯಾರಿಕೆಯು ಇನ್ನೂ ಬಾಲ್ಯಾವಸ್ಥೆಯಲ್ಲಿದೆ. ನಮ್ಮಲ್ಲಿನ ಕೆಲವೇ ಕೆಲವು ಸಂಸ್ಥೆಗಳು ಚಿಪ್ ತಯಾರಿಕೆಯಲ್ಲಿ ತೊಡಗಿಸಿಕೊಂಡರೂ ಅವೆಲ್ಲ ಈಗಿನ ಆಧುನಿಕ ತಂತ್ರಜ್ಞಾನದಿಂದ ಬಲೂ ದೂರದಲ್ಲಿವೆ. ಕೋವಿಡ್ ನಂತರದ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡಿರುವ ಸರ್ಕಾರವು ಸೆಮಿಕಂಡಕ್ಟರ್ ತಂತ್ರಜ್ಞಾನಕ್ಕೆ ಒತ್ತು ನೀಡಲು ಜಾಗತಿಕ ಉದ್ಯಮಿಗಳಿಗೆ ರತ್ನಗಂಬಳಿ ಹಾಸಿದೆ. ಇದರ ಪರಿಣಾಮದಿಂದಲೇ ವೇದಾಂತಾ ಕಂಪನಿಯು ಗುಜರಾತಿನಲ್ಲಿ ಭಾರತದ ಅತಿದೊಡ್ಡ ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಘಟಕವನ್ನು ಆರಂಭಿಸಲು ನಿರ್ಧರಿಸಿದೆ. ಟಾಟಾ ಸಮೂಹವೂ ಅಖಾಡಕ್ಕೆ ಇಳಿಯುವ ಮುನ್ಸೂಚನೆ ನೀಡಿದೆ. ಕೆಲ ದಿನಗಳ ಹಿಂದೆಯಷ್ಟೇ ಲ್ಯಾಮ್ ರಿಸರ್ಚ್ ಬೆಂಗಳೂರಿನಲ್ಲಿ ತನ್ನ ಎರಡನೆಯ ಸಂಶೋಧನಾ ಕೇಂದ್ರವನ್ನು ಆರಂಭಿಸುವ ಘೊಷಣೆ ಮಾಡಿದೆ. ಎಪ್ಲೈಡ ಮಟಿರಿಯಲ್ಸ್ ಸಹ ತನ್ನ ಬರುವಿಕೆಯನ್ನು ಸಾರಿದೆ. ಆದರೆ, ಇವೆಲ್ಲ ಕಾರ್ಯಗತವಾಗಿ ಒಂದು ಹಂತಕ್ಕೆ ಬರಲು ಇನ್ನೂ ಐದರಿಂದ ಹತ್ತು ವರ್ಷಗಳಾದರೂ ಬೇಕು. ಸರ್ಕಾರದ ನಿರಂತರ ಪೋ›ತ್ಸಾಹವಿದ್ದಲ್ಲಿ ಮುಂದೊಂದು ದಿನ ಚಿಪ್ ಉದ್ಯಮದ ಖ್ಯಾತನಾಮನಾಗಲು ನಮಗೆ ಖಂಡಿತ ಅವಕಾಶವಿದೆ. ಕಾದು ನೋಡೋಣ.
(ಲೇಖಕರು ಹವ್ಯಾಸಿ ಬರಹಗಾರರು)