ಚೆಂದದ ಕೈಬರಹ, ಹಾದಿ ಹಲವು ತರಹ..

Hand Writing
Published on
ಕರೊನಾ ಸಾಂಕ್ರಾಮಿಕದಿಂದಾಗಿ ಜಗತ್ತಿನಾದ್ಯಂತ ಮಕ್ಕಳೂ ಸಮಸ್ಯೆ ಎದುರಿಸಿದ್ದಾರೆ. ಭೌತಿಕ ತರಗತಿಗಳಿಗೆ ಕೊಕ್ ಕೊಟ್ಟು ಆನ್​ಲೈನ್ ತರಗತಿ ಪ್ರಾರಂಭಿಸಿದ್ದರಿಂದ ಮಕ್ಕಳಿಗೆ ಬರವಣಿಗೆ ಹವ್ಯಾಸ ತಪ್ಪಿದ್ದಂತೂ ಸುಳ್ಳಲ್ಲ. ಈಗ ಶಾಲಾರಂಭವಾಗಿದ್ದು, ಮಕ್ಕಳು ಮರಳಿ ತಮ್ಮ ಕೈಬರಹವನ್ನು ಹೇಗೆ ಉತ್ತಮಗೊಳಿಸಿಕೊಳ್ಳಬಹುದು ಎಂಬುದರ ಕುರಿತು ತಜ್ಞರ ಸಲಹೆಯನ್ನು ಇಲ್ಲಿ ನೀಡಲಾಗಿದೆ.

| ದೇವೇಂದ್ರ ಯಕ್ಕುಂಡಿ

ಕೈಬರಹ ವಿಶ್ಲೇಷಣೆಗಾರರು, ಆಪ್ತ ಸಲಹೆಗಾರರು

ಕೋವಿಡ್ ಜಗತ್ತಿನಾದ್ಯಂತ ಸಾಮಾಜಿಕವಾಗಿ, ಆರ್ಥಿಕವಾಗಿ ಸಮಸ್ಯೆಗಳನ್ನು ಉಂಟು ಮಾಡಿರುವಂತೆಯೇ ಶೈಕ್ಷಣಿಕವಾಗಿಯೂ ಅನೇಕ ತೊಂದರೆ ತಂದಿಟ್ಟಿದೆ. ಆಫ್​ಲೈನ್ ತರಗತಿಗಳಿಂದ ಪರೀಕ್ಷೆಗಳನ್ನು ಪೂರ್ತಿಗೊಳಿಸಿದರೂ ಅವರಲ್ಲಿ ಆತಂಕ, ಭಯದ ವಾತಾವರಣ ಉಂಟಾಗಿರುವುದನ್ನು ನಿರಾಕರಿಸಲಾಗುವುದಿಲ್ಲ. ವಿವಿಧ ಪದವಿ/ಸ್ನಾತಕೋತ್ತರ ವಿದ್ಯಾರ್ಥಿಗಳು ಸಹ ಇದಕ್ಕೆ ಹೊರತಲ್ಲ. ಇಂತಹ ಆತಂಕಿತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ನಿಮ್ಹಾನ್ಸ್ ಮತ್ತಿತರ ಸಂಸ್ಥೆಗಳು ಗಮನಿಸಿವೆ.

ತಾಂತ್ರಿಕವಾಗಿ ಮುಂದುವರಿದ ದೇಶಗಳಲ್ಲಿ ಬರವಣಿಗೆಗಾಗಿ ತರಗತಿಗಳಲ್ಲಿ ಗಣಕಯಂತ್ರಗಳ ಉಪಯೋಗ ಪ್ರಾರಂಭಿಸಲಾಗಿದೆ. ಆದರೆ ಮಕ್ಕಳ ಕೈಬರಹ ಕುಶಲತೆಗೆ ಗಣಕಯಂತ್ರಗಳು ಪರ್ಯಾಯವಲ್ಲ ಎಂಬುದು ಸಾಬೀತಾಗಿದೆ. ಇದೇ ಕಾರಣಕ್ಕಾಗಿ ಕೈಬರಹ ಕುಶಲತೆಯನ್ನು ಉಳಿಸಿ ಬೆಳೆಸಿಕೊಳ್ಳಬೇಕಾಗಿದೆ. ಕೈಬರಹ ಕೇವಲ ಸಂವಹನ ಮಾರ್ಗಸೂಚಿ ಅಷ್ಟೇ ಅಲ್ಲ ಅದು ವ್ಯಕ್ತಿತ್ವ ನಿರ್ಮಾಣ ಮಾಡಬಲ್ಲದು. ಬರವಣಿಗೆ ಒಂದು ಕೌಶಲ ಮತ್ತು ಭಾವನೆ-ಸಂಗತಿಗಳನ್ನು ತಿಳಿಸುವ ಸಂವಹನ. ಅಕ್ಷರಗಳ ರಚನೆ, ಗುರುತಿಸುವಿಕೆ ಎಲ್.ಕೆ.ಜಿ. ಯಿಂದಲೇ ಪ್ರಾರಂಭವಾದರೂ 3ನೇ ವರ್ಗದ ನಂತರ ಭಾವನಾತ್ಮಕವಾಗಿ ವ್ಯಕ್ತಪಡಿಸುವುದನ್ನು ಈ ಕ್ರಿಯೆಯಲ್ಲಿ ಭಾಗವಹಿಸುವುದನ್ನು ಪ್ರಾರಂಭಿಸಲಾಗುವುದು. ಮಗು ತೀವ್ರತರಹದ ಭಾವನಾತ್ಮಕ ಅಂಶಗಳಿಂದ ಬಳಲುತ್ತಿದ್ದಲ್ಲಿ ಕೌಟುಂಬಿಕ ಆಪ್ತ ಸಲಹೆಯನ್ನು ಕೈಗೊಳ್ಳಬೇಕಾಗುತ್ತದೆ. ಅವಶ್ಯವಿದ್ದಲ್ಲಿ ಮಾನಸಿಕ ತಜ್ಞರಿಗೆ ಶಿಫಾರಸು ಮಾಡಬೇಕಾಗುತ್ತದೆ. ಶಿಕ್ಷಕರು ಮತ್ತು ಪಾಲಕರು ಜತೆಯಾಗಿ ಮಕ್ಕಳೊಂದಿಗೆ ಹೆಚ್ಚಿನ ಕಾಳಜಿ ವಹಿಸ ಬೇಕಾಗುತ್ತದೆ.

ಕೈ ನೋವು ತಪ್ಪಿಸಿಕೊಳ್ಳಿ: ಸರಿಯಾದ ಪೆನ್ ಬಳಸಿ, ಪೆನ್ ಹಿಡಿತ ಮಂದವಾಗಿರಲಿ, ಚಲನೆಗೆ ಮುಂಗೈ ಬಳಸಿಕೊಳ್ಳಿ, ನಿಯಮಿತವಾಗಿ ಕೈ, ತೋಳುಗಳಿಗೆ ಸರಳ ವ್ಯಾಯಾಮ ಮಾಡಿ. ಎಡಚರಾಗಿದ್ದರೆ ಬಲವಂತವಾಗಿ ಬಲಗೈಯಿಂದ ಬರೆಯಬೇಡಿ. ಇದಕ್ಕೆ ಪಾಲಕರೂ ಒತ್ತಡ ತರಬಾರದು. ಪ್ರಪಂಚದ ಅನೇಕ ಮಹಾನ್ ವ್ಯಕ್ತಿಗಳು ಎಡಗೈ ಬರಹಗಾರರು ಎಂಬುದು ತಿಳಿದಿರಲಿ (ಉದಾ: ಡಾ. ರಾಜೇಂದ್ರ ಪ್ರಸಾದ್, ಅಮಿತಾಭ್ ಬಚ್ಚನ್, ತೆಂಡುಲ್ಕರ್ ಇತ್ಯಾದಿ).

ಉದ್ಯೋಗಾವಕಾಶವೂ ಇದೆ: ಕೈಬರಹ ವಿಷಯದಲ್ಲಿ ಪರಿಣತಿ ಹೊಂದಿದವರಿಗೆ ಫೊರೆನ್ಸಿಕ್ ಲ್ಯಾಬ್, ಕೌನ್ಸೆಲಿಂಗ್, ಹ್ಯಾಂಡ್​ರೈಟಿಂಗ್ ಅನಲಿಸಿಸ್, ಕ್ರೖೆಂ ಬ್ರಾಂಚ್​ಗಳಲ್ಲಿ ಉದ್ಯೋಗಾವಕಾಶ ಇದೆ. ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಲಾಗುತ್ತಿದ್ದರೂ, ಕೈಬರಹ ತಜ್ಞರಿಗೆ ಬೇಡಿಕೆ ಇದ್ದೇ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಫೊರೆನ್ಸಿಕ್ ಸೈನ್ಸ್​ನಲ್ಲಿ ಬಿಎಸ್ಸಿ/ಎಂಎಸ್ಸಿ ಅಥವಾ ಖಾಸಗಿ ಸಂಸ್ಥೆಗಳ ತರಬೇತಿ ಪಡೆಯಬಹುದು.

ಬರಹಕ್ಕೆ ಮಾನಸಿಕ ಸ್ಥಿತಿಯೂ ಪ್ರಮುಖ: ಸಾಮಾನ್ಯವಾಗಿ ಕೈಬರಹ ಎಂದ ಕೂಡಲೆ ಕಾಪಿ ರೈಟಿಂಗ್ ಬಗ್ಗೆ ಹೇಳುತ್ತೇವೆ. ಕೆಲ ಮಕ್ಕಳು ಕಾಪಿ ರೈಟಿಂಗ್ ಕೂಡ ಅಂದವಾಗಿ ಬರೆದಿರುವುದಿಲ್ಲ ಅಥವಾ ಅಂದವಾಗಿ ಕಾಣುವುದಿಲ್ಲ. ಇದಕ್ಕೆ ಸಾಕಷ್ಟು ಕಾರಣಗಳಿರುತ್ತವೆ. ಮಕ್ಕಳ ಮಾನಸಿಕ, ದೈಹಿಕ, ಸಾಮಾಜಿಕ ಪರಿಸ್ಥಿತಿಗಳು ಪರಿಣಾಮ ಬೀರುತ್ತವೆ. ಆದರೆ ಅಧ್ಯಯನ ವಿಷಯಕ್ಕೆ ಬಂದಾಗ ಮಕ್ಕಳ ಮಾನಸಿಕ ಸ್ಥಿತಿ ಉತ್ತಮವಾಗಿರಬೇಕು. ಮಕ್ಕಳು ಬರವಣಿಗೆ ಅಭ್ಯಾಸಕ್ಕೆ ಆಯ್ದುಕೊಳ್ಳುವ ಪೆನ್ನು ಕೂಡ ಕೈಬರಹ/ಹ್ಯಾಂಡ್​ರೈಟಿಂಗ್ ಮೇಲೆ ಪರಿಣಾಮ ಬೀರುತ್ತದೆ.

ಬರವಣಿಗೆ ನ್ಯೂನತೆಗಳು

  • ಮಂದ ವೇಗ
  • ಅಕ್ಷರಗಳ ಅಳತೆಯಲ್ಲಿ ವ್ಯತ್ಯಾಸ
  • ಅಕ್ಷರಗಳ ನಡುವಿನ ಅಂತರ
  • ಅಸ್ತವ್ಯಸ್ತತೆ
  • ದಾರಿ ತಪ್ಪಿದ ಅಕ್ಷರಗಳು
  • ಅಕ್ಷರಗಳ ವಕ್ರದಲ್ಲಿ ಏರುಪೇರು
  • ಪೇಪರ್ ಮೇಲೆ ಪೆನ್ನಿನ ಒತ್ತಡ

ಕೈಬರಹ ಸುಧಾರಣೆಗೆ ಟಿಪ್ಸ್

  • ಕೂರುವ ಭಂಗಿ ಸರಿಯಾಗಿರಲಿ. ಮಲಗಿಕೊಂಡು/ಅರ್ಧ ಒರಗಿಕೊಂಡು ಕೂತು ಬರೆದರೆ ಕೈಬರಹ ಸರಿಯಾಗುವುದಿಲ್ಲ. ನೇರವಾಗಿ ಕೂತು ಬರೆಯುವ ಅಭ್ಯಾಸ ಒಳ್ಳೆಯದು.
  • ಮೊದಲಿಂದಲೂ ಹಗುರವಾದ ಪೆನ್ನಿನಲ್ಲಿ ಬರೆಯುತ್ತಿದ್ದರೆ ಅದನ್ನೇ ಆಯ್ದುಕೊಳ್ಳಿ. ಒಳ್ಳೆಯ ಬ್ರಾ್ಯಂಡ್ ಅಂತ ಭಾರವಾದ ಪೆನ್ನು ಕೊಂಡಲ್ಲಿ ಹ್ಯಾಂಡ್​ರೈಟಿಂಗ್ ಬದಲಾಗುತ್ತದೆ.
  • ಕೈ ಹಾಗೂ ಪೇಪರ್ ಹಿಡಿದುಕೊಳ್ಳುವ ರೀತಿ ಸರಿ ಇರಬೇಕು.
  • ಪ್ರತಿ ದಿನ ಎಷ್ಟು ಬರವಣಿಗೆ ಅಭ್ಯಾಸ ಮಾಡುತ್ತೀರಾ ಎನ್ನುವುದು ಮುಖ್ಯ. ಇತರ ದಿನಗಳಲ್ಲಿ ಬರವಣಿಗೆ ಅಭ್ಯಾಸ ಮಾಡದೆ, ಪರೀಕ್ಷೆಗೆ ಒಮ್ಮೆಲೆ ಹೋಗಿ ಬರೆದರೆ ಕೈ ನೋವು ಬಂದು ಅಕ್ಷರ ಸುಂದರವಾಗಿ ಮೂಡಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ದಿನ ತಪ್ಪದೇ ಕೈ ಬರಹ ಅಭ್ಯಾಸ ಮಾಡಬೇಕು.
  • ಸಾಧ್ಯವಾದಷ್ಟು ನೋಟ್ಸ್​ಗಳನ್ನು ಜೆರಾಕ್ಸ್ ಅಥವಾ ಟೈಪಿಂಗ್ ಮಾಡಿಸುವ ಬದಲು, ನೀವೇ ಬರೆದುಕೊಳ್ಳಿ. ಇದು ಕೈ ಬರಹ ಸುಧಾರಣೆ ಜತೆಗೆ ಪರೀಕ್ಷೆಗೂ ಸಹಕಾರಿಯಾಗುತ್ತದೆ.
  • ಬರೆಯುವಾಗ ಪ್ರತಿ ಸಾಲು ಹಾಗೂ ಪದಗಳ ನಡುವೆ ನೀಡುವ ಅಂತರ ಕೂಡ ಅಂದ ಹೆಚ್ಚಿಸುತ್ತದೆ.
  • ಗೆರೆ ಹಾಕಿರುವ ಹಾಗೂ ಗೆರೆ ಇಲ್ಲದ (ಅನ್​ರೂಲ್ಡ್) ಕಾಗದದ ಮೇಲೆ ಬರೆದು ಅಭ್ಯಾಸ ಮಾಡಿ.
  • ಮಕ್ಕಳು ತಮ್ಮ ಹೆಸರನ್ನೇ ಬರೆದು ಅಭ್ಯಾಸ ಮಾಡಿದಾಗ ಮಾನಸಿಕವಾಗಿ ಕನೆಕ್ಟ್ ಆಗುತ್ತಾರೆ.

| ದೇವಾಂಶು ವಲ್ಲಭ ಕೈಬರಹ ತಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net