ಯುದ್ಧರಂಗದಲ್ಲಿ ಆವಿರ್ಭವಿಸಿದ ಗೀತೆ: ಇಂದು ಗೀತಾ ಜಯಂತಿ

Geetha
Published on
ಭಾರತೀಯ ಪರಂಪರೆಯಲ್ಲಿ ಭಗವದ್ಗೀತೆಗೆ ಪೂಜನೀಯ, ಉನ್ನತವಾದ ಸ್ಥಾನವಿದೆ. ಇಂತಹ ಗೀತೆ ಅವತರಿಸಿದ ದಿನವೇ ಗೀತಾ ಜಯಂತಿ. ಬದುಕಿನಲ್ಲಿ ಜೀವನೋತ್ಸಾಹ, ಸಾಧನೋತ್ಸಾಹ ಹೆಚ್ಚಿಸಿಕೊಳ್ಳಲು ಓದಲೇಬೇಕಾದ ಭಗವದ್ಗೀತೆ ಆವಿರ್ಭವಿಸಿದ ದಿನವನ್ನು ಸಾರ್ವಜನಿಕ ಹಬ್ಬವಾಗಿ ಆಚರಿಸಬೇಕು.

ಗೀತಾ ಜಯಂತಿ, ದುಷ್ಟನಿಗ್ರಹ-ಶಿಷ್ಟಾನುಗ್ರಹ-ಧರ್ಮಸಂಸ್ಥಾಪನೆಗಾಗಿ ಅವತರಿಸಿದ ಭಗವಂತನು ಅರ್ಜುನನನ್ನು ಮುಂದಿಟ್ಟುಕೊಂಡು ಮನುಕುಲಕ್ಕೆ ನೀಡಿದ ಸಂದೇಶವು ಹೊರಹೊಮ್ಮಿದ ಪುಣ್ಯ ದಿನ. ವೇದ-ಶಾಸ್ತ್ರಗಳ ನಿಜವಾದ ತಿರುಳು ಯಾವುದು ಎಂಬುದು ಅಸ್ಪಷ್ಟವಾಗಿದ್ದ ಕಾರಣದಿಂದ ಉಂಟಾದ ಎಲ್ಲ ಗೊಂದಲಗಳಿಗೆ ಭಗವಂತನೇ ಇತಿಶ್ರೀ ಹಾಡಿದ ಗೀತೆ ಅವತರಿಸಿದ ದಿನ. ಭಾರತೀಯರಿಗೆ ವಿಶ್ವಮಾನ್ಯತೆಯನ್ನು ತಂದುಕೊಟ್ಟ ಜೀವನಯೋಗಶಾಸ್ತ್ರವು ಮೈದಾಳಿ ನಿಂತಕ್ಷಣ. ಆಧ್ಯಾತ್ಮಿಕ ಅಥವಾ ಪಾರಲೌಕಿಕ ಸಾಧಕರು ಸಾಧನೋತ್ಸಾಹವನ್ನು ಹೆಚ್ಚಿಸಿಕೊಳ್ಳಲು ಮತ್ತು ಐಹಿಕ ಸಾಧಕರು ಜೀವನೋತ್ಸಾಹ ಹೆಚ್ಚಿಸಿಕೊಳ್ಳಲು ಆಶ್ರಯಿಸಬೇಕಾದ ಉತ್ಸಾಹದ ಬುಗ್ಗೆ ಮೊಟ್ಟಮೊದಲು ಹೊರಚಿಮ್ಮಿದ ಸುಮುಹೂರ್ತ. ಆದ್ದರಿಂದ ಗೀತಾಜಯಂತಿಯನ್ನು ಎಲ್ಲರೂ ಹಬ್ಬವನ್ನಾಗಿ ಆಚರಿಸಬೇಕು.

ಭಗವಂತನು ಕರ್ಮಯೋಗ, ಭಕ್ತಿಯೋಗ, ರಾಜಯೋಗ, ಜ್ಞಾನಯೋಗ ಮುಂತಾದ ಶ್ರೇಷ್ಠವಿಷಯಗಳನ್ನು ಗೀತೆಯಲ್ಲಿ ಬೋಧಿಸಿದ್ದಾನೆ. ಇಷ್ಟೆಲ್ಲ ವಿಷಯಗಳನ್ನು ಯುದ್ಧರಂಗದಲ್ಲೇಕೆ ಬೋಧಿಸಿದ? ಎಂಬ ಪ್ರಶ್ನೆ ಬರುತ್ತದೆ. ಅಥವಾ ಯುದ್ಧರಂಗದಲ್ಲಿ ಇಂತಹ ಗಂಭೀರ ವಿಷಯಗಳನ್ನು ಹೇಳುವಷ್ಟು ಅವಕಾಶ, ಸಮಾಧಾನದ ಮನಃಸ್ಥಿತಿ, ಹಾಗೆಯೇ ಅರ್ಜುನನಿಗೂ ಇದನ್ನು ಕೇಳುವ ಮನಃಸ್ಥಿತಿ ಇರಲು ಸಾಧ್ಯವೇ? ಎಂಬ ಪ್ರಶ್ನೆಯೂ ಬರುತ್ತದೆ.

ಯುದ್ಧರಂಗದಲ್ಲೇ ಹೇಳಬೇಕು ಎಂಬುದು ಶ್ರೀಕೃಷ್ಣನ ಆಗ್ರಹವೇನೂ ಅಲ್ಲ. ಅರ್ಜುನನು ಸರಳವಾದ ಮಾತುಗಳಿಂದ ಅಥವಾ ಸುಲಭವಾದ ಮಾತುಗಳಿಂದ ದಾರಿಗೆ ಬರದಿದ್ದಾಗ ಗಟ್ಟಿಯಾದ ಮಾತುಗಳಿಂದ ಅವನನ್ನು ದಾರಿಗೆ ತರಬೇಕಾಯಿತು. ಇದನ್ನು ಒಂದನೇ ಅಧ್ಯಾಯದಲ್ಲಿ ಮತ್ತು ಎರಡನೇ ಅಧ್ಯಾಯದ ಆರಂಭದ ಭಾಗದಲ್ಲಿ ಗಮನಿಸಬಹುದು. ಒಂದನೇ ಅಧ್ಯಾಯದಲ್ಲಿ ಅರ್ಜುನನು ತನ್ನ ವಿಷಾದವನ್ನು ಹೇಳಿಕೊಂಡನಾದರೂ ಪಾಂಡಿತ್ಯದ ಮಾತುಗಳನ್ನಾಡಿದ. ಯುದ್ಧದಿಂದ ಕುಲಕ್ಷಯವಾಗುತ್ತದೆ, ಕುಲಕ್ಷಯದಿಂದ ಯಾವ ಯಾವ ದೋಷಗಳ ಸರಪಣಿ ಹುಟ್ಟಿಕೊಳ್ಳುತ್ತದೆಯೆಂಬುದನ್ನು ಅವನು ತರ್ಕಬದ್ಧವಾಗಿ ಮಂಡಿಸುತ್ತಾನೆ,

‘ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ವಃ ಸನಾತನಾಃ |

ಧಮೇ ನಷ್ಟೇ ಕುಲಂ ಕೃತ್ಸ್ನಂ ಅಧಮೋ? ಭಿಭವತ್ಯುತ ||’ (ಭ.ಗೀ. 1.40.)

ಕುಲಕ್ಷಯದಿಂದ ಶಾಶ್ವತವಾದ (ಅನೇಕ ತಲೆಮಾರುಗಳಿಂದ ಬಂದ) ಕುಲಧರ್ಮಗಳು ನಾಶವಾಗುತ್ತವೆ. ಧರ್ಮಗಳು ನಾಶವಾದಾಗ ಕುಲವನ್ನು ಅಧರ್ಮವು ಆವರಿಸುತ್ತದೆ.

ಅಧರ್ಮವು ಕುಲವನ್ನು ಆವರಿಸುವುದರಿಂದ ವರ್ಣಸಾಂಕರ್ಯವಾಗುತ್ತದೆ.

‘ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ||

ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ||’ (ಭ.ಗೀ. 1.42.)

ವರ್ಣಸಾಂಕರ್ಯದಿಂದ ಕುಲಘಾತುಕರಿಗೆ ಮತ್ತು ಕುಲಕ್ಕೆ ನರಕಪ್ರಾಪ್ತಿಯಾಗುತ್ತದೆ. ಅಲ್ಲದೇ ಅವರ ಪಿತೃಗಳು ಪಿಂಡ, ತರ್ಪಣಾದಿಗಳಿಲ್ಲದೆ ಅಧೋಗತಿಯನ್ನು ಹೊಂದುತ್ತಾರೆ.

ಹೀಗೆಯೇ ಇನ್ನೂ ಎರಡು ಶ್ಲೋಕಗಳಿವೆ. ಅರ್ಜುನನ ಈ ತರ್ಕಬದ್ಧವಾದ ಮಾತುಗಳಿಗೆ ಪ್ರತಿಕ್ರಿಯಿಸುವಾಗ ಶ್ರೀಕೃಷ್ಣನ ಬಾಯಿಯಿಂದ ‘ಪ್ರಜ್ಞಾವಾದಾಂಶ್ಚ ಭಾಷಸೇ’- (ಭ.ಗೀ. 2.11.) ಪಂಡಿತರ ಮಾತುಗಳನ್ನಾಡುತ್ತಿದ್ದಿಯೇ- ಎಂಬ ಮಾತು ಬಂದಿದೆ. ಹೀಗೆ ಅರ್ಜುನ ವಿಷಾದದ ಜೊತೆ ಪಾಂಡಿತ್ಯದ ಮಾತುಗಳನ್ನಾಡಿದ. ಕೇವಲ ವಿಷಾದವನ್ನಷ್ಟೇ ಪ್ರಕಟಿಸಲಿಲ್ಲ. ಪಂಡಿತರ ವಿಷಾದವನ್ನು ಪರಿಹರಿಸಲು ಪಾಂಡಿತ್ಯಪೂರ್ಣವಾದ ಉಪದೇಶವೇ ಬೇಕಾಗುತ್ತದೆ.

ಶ್ರೀಕೃಷ್ಣನು ಎರಡನೇ ಅಧ್ಯಾಯದ ಆರಂಭದಲ್ಲಿ ಸರಳವಾದ ಮಾತುಗಳಿಂದ ಒಮ್ಮೆ ಅರ್ಜುನನನ್ನು ಸರಿಪಡಿಸಲು ನೋಡುತ್ತಾನೆ.

‘ಕುತಸ್ತಾ್ವ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ |

ಅನಾರ್ಯಜುಷ್ಟಮಸ್ವರ್ಗ್ಯಂ ಅಕೀರ್ತಿಕರಮರ್ಜುನ ||’ (ಭ.ಗೀ. 2.2.)

‘ಈ ಅಕಾಲದಲ್ಲಿ ನಿನಗೇಕೆ ಇಂತಹ ಬುದ್ಧಿ ಬಂತು? ಅರ್ಜುನ! ಈ ಬುದ್ಧಿಯು ಶ್ರೇಷ್ಠ ಪುರುಷರಿಗೆ ಬರುವುದಿಲ್ಲ. ಇದು ಇಹದಲ್ಲಿ ಕೀರ್ತಿಯನ್ನು ಮತ್ತು ಪರದಲ್ಲಿ ಸದ್ಗತಿಯನ್ನು ನಾಶಮಾಡುತ್ತದೆ.’

‘ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ ತ್ವಯಿ ಉಪಪದ್ಯತೇ |

ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತೊ್ವೕತ್ತಿಷ್ಠ ಪರಂತಪ||’ (ಭ.ಗೀ. 2.3.)

‘ಈ ರೀತಿಯಲ್ಲಿ ಹೇಡಿತನಕ್ಕೊಳಗಾಗಬೇಡ. ಹೇ ಪಾರ್ಥ! ನಿನ್ನಂಥವರಿಗೆ ಈ ಹೇಡಿತನ ಯೋಗ್ಯವಲ್ಲ. ಮನಸ್ಸಿಗೆ ಆವರಿಸಿದ ಈ ದೌರ್ಬಲ್ಯವನ್ನು ಬಿಟ್ಟು ಯುದ್ಧಕ್ಕೆ ಸಜ್ಜಾಗು.’ ಹೀಗೆ ಸರಳ-ಸಹಜ ಮಾತುಗಳಿಂದಲೇ ಅರ್ಜುನನನ್ನು ಸರಿಪಡಿಸಲು ಒಮ್ಮೆ ಭಗವಂತ ಪ್ರಯತ್ನಿಸುತ್ತಾನೆ. ಆದರೆ ಅದಕ್ಕೆ ಅರ್ಜುನ ಬದಲಾಗಲಿಲ್ಲ. ಮತ್ತೆ ತನ್ನ ವಿಷಾದವನ್ನು ಹೇಳುತ್ತಾನೆ.

‘ಕಥಂ ಭೀಷ್ಮಂ ಅಹಂ ಸಂಖ್ಯೇ ದ್ರೋಣಂ ಚ ಮಧುಸೂದನ |

ಇಷುಭಿಃ ಪ್ರತಿಯೋತ್ಸಾ್ಯಮಿ ಪೂಜಾರ್ಹಾವರಿಸೂದನ ||’(ಭ.ಗೀ. 2.4.)

‘ಹೇ ಮಧುಸೂದನ! ಪೂಜ್ಯರಾದ ಭೀಷ್ಮ-ದ್ರೋಣರೇ ಮೊದಲಾದವರನ್ನು ಕುರಿತು ನಾನು ಹೇಗೆ ಬಾಣ ಪ್ರಯೋಗಿಸಲಿ.’ ಹೀಗೆ ಇನ್ನು ನಾಲ್ಕು ಶ್ಲೋಕಗಳಲ್ಲಿ ಪರಿಪರಿಯಾಗಿ ಅರ್ಜುನನು ತನ್ನ ವಿಷಾದವನ್ನು ಮತ್ತೆ ಹೇಳುತ್ತಾನೆ. ಆಗ ಶ್ರೀಕೃಷ್ಣನಿಗೆ ಅರ್ಥವಾಗಿರಬಹುದು- ಇವನನ್ನು ಸರಳ ಮಾತುಗಳಿಂದ ಸರಿಪಡಿಸಲು ಸಾಧ್ಯವಿಲ್ಲ. ಶ್ರೇಷ್ಠವಾದ ಉಪದೇಶವೇ ಇವನಿಗೆ ಬೇಕು ಎಂದು. ಆದ್ದರಿಂದ ಶ್ರೇಷ್ಠವಾದ ಉಪದೇಶ- ಅಧ್ಯಾತ್ಮೋಪದೇಶ- ಪ್ರಾರಂಭವಾಯಿತು.

ಯುದ್ಧದಲ್ಲಿ ಉಪದೇಶ ಮಾಡಲು ಸಾಧ್ಯವೇ? ಅಥವಾ ಅದನ್ನು ಕೇಳಿ ಅರ್ಥಮಾಡಿಕೊಳ್ಳಲು ಸಾಧ್ಯವೇ? ಈ ಪ್ರಶ್ನೆಗೆ ಉತ್ತರವಿಷ್ಟೇ- ಅದು ಇಂದಿನ ಕಾಲದ ಯುದ್ಧವಲ್ಲ. ಇಂದಿನ ಕಾಲದ ಕೂಟಯುದ್ಧ (ಮೋಸಗಾರಿಕೆಯ ಯುದ್ಧ) ವನ್ನು ನೋಡಿದ್ದರಿಂದ ಈ ಪ್ರಶ್ನೆ ಹುಟ್ಟಿಕೊಂಡಿತು. ಆ ಕಾಲದಲ್ಲಿ ಯುದ್ಧವು ಈಗಿನಕ್ಕಿಂತ ಹೆಚ್ಚು ನೀತಿಯಿಂದ ಕೂಡಿತ್ತು. ಸೂರ್ಯಾಸ್ತದ ನಂತರ ಯುದ್ಧ ಮಾಡುವಂತಿಲ್ಲ. ಸ್ತ್ರೀಯರನ್ನು ಕುರಿತು ಶಸ್ತ್ರ ಪ್ರಯೋಗಿಸುವಂತಿಲ್ಲ. ನಿರಾಯುಧನಾದ ವ್ಯಕ್ತಿಯ ಮೇಲೆ ಆಯುಧ ಪ್ರಯೋಗ ಮಾಡುವಂತಿಲ್ಲ. ಇಂತಹ ಯುದ್ಧ ನಿಯಮಗಳು ಚಾಲ್ತಿಯಲ್ಲಿದ್ದ ಕಾಲವದು. ಆದ್ದರಿಂದ ಯುದ್ಧರಂಗದಲ್ಲಿ ಉಪದೇಶ ಸಾಧ್ಯವಿತ್ತು. ಹಾಗೆಯೇ ಅದನ್ನು ಕೇಳಿ ಅರ್ಥಮಾಡಿಕೊಳ್ಳಲೂ ಸಾಧ್ಯವಿತ್ತು.

ಬಹುಶಃ ಯುದ್ಧರಂಗದಲ್ಲಿ ಗೀತೋಪದೇಶ ಮಾಡಲು ಇನ್ನೊಂದು ಉದ್ದೇಶವಿರಬಹುದು. ಯುದ್ಧದಂತಹ ಪ್ರಸಂಗವಿದ್ದರೂ, ಯುದ್ಧದಲ್ಲಿ ತನ್ನ ಪಕ್ಷದ ಪ್ರಮುಖ ಯೋಧನು ಎದೆಗುಂದಿದ್ದರೂ ತಾನು ಸ್ವಲ್ಪವೂ ವಿಚಲಿತನಾಗದಿರುವ ಯೋಗೀಶ್ವರನೆಂಬುದನ್ನು ತೋರಿಸಿಕೊಡುವ ಉದ್ದೇಶದಿಂದ ಭಗವಂತನು ಹೀಗೆ ಮಾಡಿರಬಹುದು. ಇದು ಅಧ್ಯಾತ್ಮೋಪದೇಶದ ಆರಂಭದಲ್ಲಿ ವ್ಯಕ್ತವಾಗಿದೆ.

‘ತಮುವಾಚ ಹೃಷೀಕೇಶಃ ಪ್ರಹಸನ್ನಿಹ ಭಾರತ |

ಸೇನಯೋರುಭಯೋರ್ಮಧ್ಯೇ ವಿಷೀದಂತಮಿದಂ ವಚಃ ||’ (ಭ.ಗೀ. 2.10.)

ವಿಷಾದ ಸ್ಥಿತಿಯಲ್ಲಿರುವ ಅರ್ಜುನನನ್ನು ಕುರಿತಾಗಿ ಮುಗುಳ್ನಗೆಯೊಂದಿಗೆ ಶ್ರೀಕೃಷ್ಣನು ಮಾತಾಡಲು ಪ್ರಾರಂಭಿಸಿದ. ಅವನ ಈ ಮುಗುಳ್ನಗೆಯೇ ಯೋಗೀಶ್ವರತ್ವವನ್ನು ಸಾರುತ್ತದೆ. ಬದುಕಿನಲ್ಲಿ ಜೀವನೋತ್ಸಾಹ, ಸಾಧನೋತ್ಸಾಹ ಹೆಚ್ಚಿಸಿಕೊಳ್ಳಲು ಓದಲೇಬೇಕಾದ ಭಗವದ್ಗೀತೆ ಆವಿರ್ಭವಿಸಿದ ದಿನವನ್ನು ಸಾರ್ವಜನಿಕ ಹಬ್ಬವಾಗಿ ಆಚರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net