

| ಸುಭಾಸ ದಲಾಲ ಚಿಕ್ಕೋಡಿ
ಕರೊನಾ ವೈರಸ್ ಆರ್ಭಟಕ್ಕೆ ಎಲ್ಲ ಕ್ಷೇತ್ರಗಳು ನಲುಗಿ ಹೋಗಿವೆ. ಆರ್ಥಿಕ ಸಂಕಷ್ಟದ ಸುಳಿಯಿಂದ ಹೊರಬರುವ ನಿಟ್ಟಿನಲ್ಲಿ ಪ್ರತಿಷ್ಠಿತ ಕಂಪನಿಗಳೂ ಸಹ ಸಿಬ್ಬಂದಿ ಹಾಗೂ ವೇತನ ಕಡಿತಗೊಳಿಸಲು ಮುಂದಾಗಿವೆ. ಆದರೆ, ಅಂತಾರಾಜ್ಯ ಸಹಕಾರಿ ಸಂಸ್ಥೆಯಾಗಿರುವ ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಶೇ.44 ವೇತನ ಹೆಚ್ಚಿಸುವ ಮೂಲಕ ಸಿಬ್ಬಂದಿಯ ಕಾಳಜಿ ಮೆರೆದಿದೆ.
ಅಭಿವೃದ್ಧಿಪಥದತ್ತ ಸೊಸೈಟಿ: 1991ರಲ್ಲಿ ಸ್ಥಾಪನೆಯಾದ ಸೊಸೈಟಿ ಅಭಿವೃದ್ಧಿಪಥದತ್ತ ಮುನ್ನಡೆಯುತ್ತಿದೆ. 3 ದಶಕಗಳಲ್ಲಿ ನಿರೀಕ್ಷೆಗೂ ಮೀರಿ ಬೆಳೆದುನಿಂತಿದೆ. ಕರ್ನಾಟಕದ 20 ಜಿಲ್ಲೆಗಳು ಮಾತ್ರವಲ್ಲದೆ, ಮಹಾರಾಷ್ಟ್ರದಲ್ಲೂ ತನ್ನ ಶಾಖೆ ಹೊಂದಿದೆ. 153 ಶಾಖೆಗಳಲ್ಲಿ 1 ಸಾವಿರಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರಂತೆ ಸಿಬ್ಬಂದಿ ಸಲಹುತ್ತಿರುವ ಸೊಸೈಟಿ ಆಡಳಿತ ಮಂಡಳಿ, ಈಗ ಕರೊನಾ ಸಂಕಷ್ಟ ಸಮಯದಲ್ಲೂ ವೇತನ ಪರಿಷ್ಕರಿಸಿ ಸಂತಸ ಹೆಚ್ಚಿಸಿದೆ. ಗುಣಮಟ್ಟದ ಸೇವೆ ಮೂಲಕ ಗ್ರಾಹಕರ ಮನಗೆದ್ದಿರುವ ಸೊಸೈಟಿ, ಸಾವಿರಾರು ಜನ ಬದುಕು ಕಟ್ಟಿಕೊಳ್ಳಲು ನೆರವಾಗಿದೆ.
ಎಷ್ಟು ವೇತನ ಹೆಚ್ಚಳ?: ಸೊಸೈಟಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿ ರುವ 1 ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ಪರಿಷ್ಕೃತ ವೇತನ ಅನ್ವಯವಾಗಲಿದ್ದು, ಹುದ್ದೆ ಹಾಗೂ ಸೇವಾನುಭವ ಆಧರಿಸಿ ವೇತನ ಪರಿಷ್ಕರಿಸಲಾಗಿದೆ. ಪ್ರಧಾನ ವ್ಯವಸ್ಥಾಪಕರಿಗೆ 25,600 ರೂ., ಉಪ ಪ್ರಧಾನ ವ್ಯವಸ್ಥಾಪಕರಿಗೆ 17,600ರಿಂದ 21,700 ರೂ., ಸಹಾಯಕ ಪ್ರಧಾನ ವ್ಯವಸ್ಥಾಪಕರಿಗೆ 11,800ರಿಂದ 14,900 ರೂ., ಹಿರಿಯ ಶಾಖಾ ವ್ಯವಸ್ಥಾಪಕರಿಗೆ 9,200 ರಿಂದ 14,000 ರೂ., ಕಿರಿಯ ಶಾಖಾ ವ್ಯವಸ್ಥಾಪಕರಿಗೆ 7,000ರಿಂದ 12,600 ರೂ., ಹಿರಿಯ ಗುಮಾಸ್ತರಿಗೆ 5,700ರಿಂದ 9,000 ರೂ., ಕಿರಿಯ ಗುಮಾಸ್ತರಿಗೆ 5,000ರಿಂದ 8,200 ರೂ., ಹಿರಿಯ ಸಿಪಾಯಿಗೆ 4,500ರಿಂದ 7,400 ರೂ., ಕಿರಿಯ ಸಿಪಾಯಿಗೆ 3,800ರಿಂದ 4,600 ರೂ., 3 ವರ್ಷದೊಳಗೆ ಸೇವಾನುಭವ ಹೊಂದಿದ ಸಿಪಾಯಿಗೆ 1,200 ರಿಂದ 1,600 ರೂ. ಹಾಗೂ ಗುಮಾಸ್ತರಿಗೆ 1,400ರಿಂದ 1,900 ರೂ. ವೇತನ ಹೆಚ್ಚಿಸಲಾಗಿದೆ.