

‘ಹರಿಜನರು ಯಾವುದೇ ಅನ್ಯ ಧರ್ಮವನ್ನು ಸೇರಲು ಒಪ್ಪುವುದಿಲ್ಲ. ಅವರು ಹುಟ್ಟಿದ ಹಿಂದು ಧರ್ಮದಲ್ಲಿಯೇ ಬದುಕಿ ಬಾಳಲು ಇಷ್ಟಪಡುತ್ತಾರೆ. ಆದರೆ ಅವರ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಮತ್ತು ಸಮಾನತೆಯಿಂದ ನಡೆಸಿಕೊಳ್ಳುವುದು ಸವರ್ಣೀಯರ ಜವಾಬ್ದಾರಿಯಾಗಿದೆ’- ಎಂಬ ದಿಟ್ಟತನದ ಮಾತುಗಳನ್ನು ಹೇಳಿದವರು ಡಾ.ಬಾಬು ಜಗಜೀವನರಾಮ್
1936 ರಲ್ಲಿ ಲಕ್ನೋದಲ್ಲಿ ನಡೆದ ಡಿಪ್ರೆಸ್ಡ್ ಕ್ಲಾಸ್ ಲೀಗ್ನ ಅಧ್ಯಕ್ಷತೆ ವಹಿಸಿ ಜಾತಿ ವ್ಯವಸ್ಥೆಯ ವಿರುದ್ಧ ಕಿಡಿಕಾರುತ್ತಲೇ ಈ ಮೇಲಿನ ಮಾತುಗಳನ್ನು ಹೇಳಿದ್ದರು. ಇಂದು ಬಾಬೂಜಿ ಜಯಂತಿ ಸಂದರ್ಭದಲ್ಲಿ ಅವರ ಕ್ರಾಂತಿಕಾರಿ ನಿಲುವು-ನಿರ್ಧಾರಗಳನ್ನು ನೆನಪು ಮಾಡಿಕೊಳ್ಳಬೇಕಿದೆ. ದಲಿತರ ಕಾಲನಿಗಳಲ್ಲಿ ಹೆಚ್ಚು ಮತಾಂತರ ನಡೆಯುತ್ತಿದ್ದು, ಆ ಕಾಲದಲ್ಲಿ ಜಾತಿ ವ್ಯವಸ್ಥೆಯೇ ಇದಕ್ಕೆ ಕಾರಣವೆಂದು ತಿಳಿದು, ಜಾತಿ ಪೋಷಕರನ್ನುದ್ದೇಶಿಸಿ ಗಮನಸೆಳೆದಿದ್ದರು.
ಬಾಬೂಜಿ ಹುಟ್ಟಿದ್ದು ಬಿಹಾರ ರಾಜ್ಯದ ಬೋಜ್ಪುರ್ ಜಿಲ್ಲೆಯ ಚಾಂದ್ವ ಗ್ರಾಮದಲ್ಲಿ. ಐದು ಜನ ಮಕ್ಕಳಲ್ಲಿ ಕೊನೆಯವರು. ತಂದೆ ಶೋಭಿರಾಂ ಸ್ವಲ್ಪ ಕಾಲ ಮಿಲಿಟರಿ ಸೇವೆಯಲ್ಲಿದ್ದು, ನಂತರ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡವರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಅವರು ಅನಿವಾರ್ಯವಾಗಿ ಬಾಲ್ಯ ವಿವಾಹವಾದರು. ಹಾಗೆಯೇ ವ್ಯಾಸಂಗ ಮುಂದುವರಿಸಿದರು. ಅತಿಯಾದ ಜಾತಿ ವ್ಯವಸ್ಥೆಯಲ್ಲಿ ದಲಿತರು ವಿದ್ಯಾಭ್ಯಾಸ ಮಾಡುವುದು ಕಷ್ಟವಾದ ದಿನಗಳಲ್ಲಿ ಛಲ ಬಿಡದೇ ಅತ್ಯಧಿಕ ಅಂಕಗಳಿಸುತ್ತಿದ್ದ ಕೆಲವೇ ಮಕ್ಕಳಲ್ಲಿ ಬಾಬೂಜಿ ಕೂಡ ಒಬ್ಬರಾಗಿದ್ದರು.
ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿ, ವಾರಾಣಸಿಯ ಬನಾರಸ್ ಹಿಂದು ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಯಾದರು. ಉನ್ನತ ವ್ಯಾಸಂಗದಲ್ಲಿ್ಲ್ದರೂ ಅಸ್ಪೃಶ್ಯತೆಯ ನೋವು ಹೊರೆಯಾಯಿತು. ದಲಿತ ವಿದ್ಯಾರ್ಥಿಯೆಂಬ ಕಾರಣಕ್ಕೆ ವಿದ್ಯಾರ್ಥಿನಿಲಯದ ಸವರ್ಣೀಯ ನೌಕರರು ಅವರ ತಟ್ಟೆ ಲೋಟಗಳನ್ನು ತೊಳೆಯಲು ನಿರಾಕರಿಸಿದರು. ಈ ಎಲ್ಲ ಅಪಮಾನಗಳ ನಡುವೆ ಪದವಿ ಪಡೆಯಲು ಕೋಲ್ಕತ್ತಾ ಯುನಿವರ್ಸಿಟಿಗೆ ಸೇರ್ಪಡೆಯಾದರು.
ಅಲ್ಲಿ ಬಿಎಸ್ಸಿ ಪದವಿ ಮುಗಿಸುತ್ತಲೇ ಕೂಲಿ ಕಾರ್ವಿುಕರು, ದಲಿತರ ಸಂಘಟನೆಗಳನ್ನು ಹುಟ್ಟುಹಾಕಿ ಸಾವಿರಾರು ಸಂಖ್ಯೆಯಲ್ಲಿ ಮಜ್ದೂರ್ ರ್ಯಾಲಿಗಳನ್ನು ನಡೆಸಿದರು. ಕೋಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿ ಸೇವೆ ಮಾಡಿದರು. ಹೀಗೆ ಆರಂಭವಾದ ಡಾ. ಬಾಬು ಜಗಜೀವನ್ರಾಮ್ ಅವರ ರಾಜಕೀಯ ಹೋರಾಟ ಈ ದೇಶದ ಉಪ ಪ್ರಧಾನಮಂತ್ರಿಗಳಾಗಿ ಸಾಧನೆಯ ಶಿಖರವೇರುವ ವರೆಗೆ ಸಾಗಿತು.
ಅಖಿಲ ಭಾರತ ರವಿದಾಸ ಮಹಾಸಭಾ ಸಂಘಟನೆಯ ನೇತೃತ್ವ ವಹಿಸಿ, ಶೋಷಿತ ಸಮುದಾಯಗಳ ಜಾಗೃತಿಗೆ ಮುನ್ನುಡಿ ಹಾಡಿದ ಬಾಬೂಜಿ, ಅಖಿಲ ಭಾರತ ನಿಮ್ನ ವರ್ಗಗಳ ಒಕ್ಕೂಟ ಸ್ಥಾಪಿಸಿ, ದಲಿತರಿಗೆ ದೇವಾಲಯಗಳ ಪ್ರವೇಶ ಮತ್ತು ಬಾವಿ, ಕೆರೆ, ಕಟ್ಟೆಗಳಲ್ಲಿ ನೀರು ದೊರೆಯಬೇಕೆಂದು ಹೋರಾಟ ರೂಪಿಸಿದರು.
1935, ಹೊಸ ಸಾರ್ವತ್ರಿಕ ಚುನಾವಣೆಗೆ ದೇಶದಲ್ಲಿ ನಾಂದಿ ಹಾಡಿದ ಕಾಲವದು. ಕೇಂದ್ರ ಮತ್ತು ರಾಜ್ಯ ಶಾಸನಸಭೆಗಳಿಗೆ 1937ರಲ್ಲಿ ಚುನಾವಣೆಗಳು ನಡೆದವು. ಬ್ರಿಟಿಷ್ ಸರ್ಕಾರ ಬಾಬೂಜಿ ಅವರನ್ನು ನಾಮ ನಿರ್ದೇಶನ ಮಾಡಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕಾಂಗ ಸಭೆಗೆ ಅವಿರೋಧ ಆಯ್ಕೆಯಾದರು. ಆಗಿನ್ನೂ ಅವರಿಗೆ 30 ವರ್ಷ. ಕಾಂಗ್ರೆಸಿನ ಕಿರಿಯ ವಯಸ್ಸಿನ ಸದಸ್ಯರಾದ ಹೆಗ್ಗಳಿಕೆ ಅವರದು.
ಬಿಹಾರದ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಬಾಬೂಜಿ ಅವರು ಸಾಧನೆಯ ಹಾದಿಯ ಮೆಟ್ಟಿಲುಗಳನ್ನು ಏರುತ್ತ ವಾರ್ತಾ ಮತ್ತು ಪ್ರಚಾರ, ಸಾರಿಗೆ ಮತ್ತು ರೈಲ್ವೆ, ದೂರಸಂಪರ್ಕ, ಕಾರ್ವಿುಕ ಮತ್ತು ಪುನರ್ವಸತಿ, ಆಹಾರ, ಕೃಷಿ, ಸಮುದಾಯ ಅಭಿವೃದ್ಧಿ, ಸಹಕಾರ, ನೀರಾವರಿ ಇತ್ಯಾದಿ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.
ವಿಶೇಷವಾಗಿ 1970-74ರಲ್ಲಿ ಭಾರತದ ರಕ್ಷಣಾ ಸಚಿವರಾಗಿ ಅಮೋಘ ಸಾಧನೆ ಮಾಡಿದರು. ಭಾರತ-ಪಾಕಿಸ್ತಾನ ಯುದ್ಧದಲ್ಲಿ ದಿಗ್ವಿಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೇ ಕಾರಣಕ್ಕೆ ಅನೇಕರು ‘ಆಡು ಮುಟ್ಟದ ಸೊಪ್ಪಿಲ್ಲ ಬಾಬೂಜೀ ನಿರ್ವಹಿಸದ ಖಾತೆಗಳಿಲ್ಲ’ ಎನ್ನುತ್ತಾರೆ. ಅವರು ಸ್ಪರ್ಧಿಸಿದ ಚುನಾವಣೆಗಳಲ್ಲಿ ಎಂದೂ ಸೋತಿಲ್ಲ. ಇಂತಹ ಅಪ್ರತಿಮ ಸಾಧಕ ವ್ಯಕ್ತಿತ್ವವನ್ನು ಹೊಂದಿದ ಅವರು ಎಪ್ಪತ್ತರ ದಶಕದಲ್ಲಿ ಇಂದಿರಾ ಗಾಂಧಿಯವರು ಕೈಗೊಂಡ ತುರ್ತು ಪರಿಸ್ಥಿತಿಯ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಹೊರಬಂದರು.
1977ರಲ್ಲಿ ‘ದ ಕಾಂಗ್ರೆಸ್ ಫಾರ್ ಡೆಮಾಕ್ರಸಿ’ ಎಂಬ ಸ್ವತಂತ್ರ ಪಕ್ಷವನ್ನು ಕಟ್ಟಿದ್ದರು. ದಕ್ಷ ಆಡಳಿತಗಾರರಾಗಿ ನಮ್ಮ ಮುಂದೆ ಡಾ. ಬಾಬು ಜಗಜೀವನ ರಾಂ ಅವರು ಆದರ್ಶಪ್ರಾಯರಾಗಿದ್ದಾರೆ. ಕೃಷಿ ಸಚಿವರಾಗಿ ಅವರು ಮಾಡಿದ ವಿನೂತನ, ಅಮೋಘ ಸೇವೆಗೆ ದೇಶ ಅವರನ್ನು ‘ಹಸಿರು ಕ್ರಾಂತಿಯ ಹರಿಕಾರ’ ಎಂದೇ ಕರೆಯಿತು. ಅವರಿಗೆ ಪ್ರಧಾನಿಯಾಗುವ ಅರ್ಹತೆ ಇತ್ತು. ದಲಿತ ಸಮುದಾಯದಲ್ಲಿ ಹುಟ್ಟಿ ಜಾತಿ, ಅಸ್ಪೃಶ್ಯತೆಯನ್ನು ಮೀರಿ ಬೆಳೆದ ಬಾಬು ಜಗಜೀವನರಾಮ್ ಅವರು ಭವಿಷ್ಯದ ಭಾರತಕ್ಕೆ ಆದರ್ಶರಾಗಿದ್ದಾರೆ.
(ಲೇಖಕರು ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಮಠದ ಪೀಠಾಧಿಕಾರಿ)