

| ಹೆದ್ದೆಸೆ ರಮೇಶ ಭಟ್
ನಮ್ಮ ಪೂರ್ವಿಕರು ಕಾಲವನ್ನು ಕ್ಷಣದಿಂದ ಹಿಡಿದು ಬ್ರಹ್ಮಕಲ್ಪದವರೆಗೆ ಅತ್ಯಂತ ವಿಶೇಷವಾಗಿ ವಿಶ್ಲೇಷಣೆ ಮಾಡಿದ್ದಾರೆ. ಒಂದು ಸಂವತ್ಸರದಲ್ಲಿ ಆರು ಋತುಗಳು ಬರುತ್ತವೆ. ಒಂದೊಂದಕ್ಕೂ ಎರಡೆರಡು ಮಾಸ. ಮೊದಲನೆಯದು ವಸಂತ, ಎರಡನೆಯದು ಗ್ರೀಷ್ಮ. ವಸಂತದಲ್ಲಿ ಎರಡು ಮಾಸಗಳು- ಚೈತ್ರ ಮತ್ತು ವೈಶಾಖ. ಹಾಗೆಯೇ ಗ್ರೀಷ್ಮ ಋತುವಿನಲ್ಲಿ ಜ್ಯೇಷ್ಠ ಮತ್ತು ಆಷಾಢ ಮಾಸ ಇವೆ. ಆಷಾಢ ಎಂಬುದು ಚಾಂದ್ರಮಾನ ಗಣನೆಯಲ್ಲಿ ನಾಲ್ಕನೆಯ ಮಾಸ. ಆಷಾಢದಲ್ಲಿ ಮುಹೂರ್ತಗಳು ಇರುವುದಿಲ್ಲ ಎಂಬುದು ಸಾಮಾನ್ಯ ತಿಳಿವಳಿಕೆ. ಇದಕ್ಕೆ ಕಾರಣವೇನೆಂದರೆ ಆಷಾಢದಲ್ಲಿ ಬರುವ ಸಂಕ್ರಮಣ. ಸೂರ್ಯನು ಒಂದು ಮಾಸದಿಂದ ಇನ್ನೊಂದು ಮಾಸಕ್ಕೆ ಹೋಗುವ ಪರ್ವ ಕಾಲಕ್ಕೆ ಸಂಕ್ರಮಣ ಎನ್ನುತ್ತಾರೆ. ಇಲ್ಲಿ ಕರ್ಕಾಟಕ ಸಂಕ್ರಮಣ ಬರುತ್ತದೆ. ಮಿಥುನದ ನಂತರ ಕರ್ಕಾಟಕ ಮಾಸವಾಗುವುದರಿಂದ ಇಲ್ಲಿ ಸಂಕ್ರಮಣ ಬರುತ್ತದೆ. ಇದು ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಸೂರ್ಯನು ಪಥ ಬದಲಿಸುವ ಸಂಕ್ರಮಣ ಕಾಲ. ಹಾಗಾಗಿ ಪೂರ್ವಿಕರು ಉತ್ತರಾಯಣದಲ್ಲಿ ಎಲ್ಲ ಮುಹೂರ್ತಗಳನ್ನು ಇಟ್ಟಿದ್ದಾರೆ. ದಕ್ಷಿಣಾಯನದಲ್ಲಿ ಯಾವ ಮುಹೂರ್ತವನ್ನೂ ಇಟ್ಟಿಲ್ಲ. ಇದಕ್ಕೊಂದು ಪೌರಾಣಿಕ ಹಿನ್ನೆಲೆಯೂ ಇದೆ. ದೇವತೆಗಳು ಉತ್ತರಾಯಣದಲ್ಲಿ ಎಚ್ಚರದಲ್ಲಿರುತ್ತಾರೆ. ದಕ್ಷಿಣಾಯನದಲ್ಲಿ ನಿದ್ರೆಗೆ ಜಾರುತ್ತಾರೆ. ನಮ್ಮ ಒಂದು ವರುಷ, ದೇವತೆಗಳಿಗೆ ಒಂದು ದಿವಸಕ್ಕೆ ಸಮ. ಹಾಗಾಗಿ ದೇವತೆಗಳಿಗೆ ಉತ್ತರಾಯಣ ಹಗಲಾದರೆ, ದಕ್ಷಿಣಾಯನ ರಾತ್ರಿ. ಇದೇ ಕಾರಣಕ್ಕೆ ನಮ್ಮ ಪೂರ್ವಿಕರು ಉತ್ತರಾಯಣದಲ್ಲಿ ಯಾವ ಮುಹೂರ್ತವನ್ನೂ ಇಟ್ಟಿಲ್ಲ. ಈ ಸಮಯದಲ್ಲಿ ಉಪನಯನ, ಮದುವೆ, ಚೂಡಾಕರ್ಮ, ಗೃಹಪ್ರವೇಶ ಮುಂತಾದ ಶುಭಸಮಾರಂಭಗಳು ನಡೆಯುವುದಿಲ್ಲ.
ಪ್ರಾಕೃತಿಕ ಹಿನ್ನೆಲೆ: ಆಷಾಢ ಬಂತೆಂದರೆ ಮಳೆಗಾಲ ಪ್ರಾರಂಭವಾಗುತ್ತದೆ. ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣ ಬೆಳೆಸುವುದು ಕಷ್ಟ. ಕೃಷಿಯ ಕಡೆಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಆದ್ದರಿಂದ ಬೇರೆ ಕಾರ್ಯಗಳನ್ನು ಬದಿಗೊತ್ತಬೇಕಾಗುತ್ತದೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳನ್ನು ಆಷಾಢದಲ್ಲಿ ತವರಿಗೆ ಕಳಿಸುವ ಪದ್ಧತಿಯೂ ಇದೆ. ಪತಿಯು ಕೃಷಿ ಕೆಲಸ ಅಥವಾ ತನ್ನ ನಿರ್ದಿಷ್ಟ ಕಾರ್ಯದತ್ತ ಹೆಚ್ಚು ಗಮನ ಕೊಡಲಿ ಎಂಬುದು ಇದರ ಹಿಂದಿನ ಉದ್ದೇಶ. ಮುಹೂರ್ತಗಳು ನಿಷೇಧವಾಗಿವೆ ಎಂದ ಮಾತ್ರಕ್ಕೆ ಆಷಾಢ ಒಳ್ಳೆಯದಲ್ಲ ಎಂದೇನಲ್ಲ. ಪುರಿ ಜಗನ್ನಾಥನ ರಥಯಾತ್ರೆ, ಪಂಢರಾಪುರ ದೇವರ ದರ್ಶನ ನಡೆಯುವುದು ಆಷಾಢದಲ್ಲಿಯೇ. ಅಷ್ಟೇ ಅಲ್ಲ, ಯತಿಗಳು ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಂದು (ಜು. 10) ಚಾತುರ್ವಸ್ಯ ವ್ರತ ಆರಂಭಿಸುತ್ತಾರೆ. ಈ ಸಮಯವು ಸಂಚಾರಕ್ಕೆ ಯೋಗ್ಯವಾಗಿ ರುವುದಿಲ್ಲ ಎಂಬುದು ಇದಕ್ಕೆ ಕಾರಣ. ಗುರುಪೂರ್ಣಿಮೆ ಬರುವುದು ಕೂಡ ಆಷಾಢದಲ್ಲಿ.
ಒಳ್ಳೆಯ ಮುಹೂರ್ತವೂ ಇದೆ!: ಸೌರಮಾನದಲ್ಲಿ ಬರುವ ಮಿಥುನ ಮತ್ತು ಕರ್ಕಾಟಕ ಮಾಸಗಳು ಆಷಾಢದಲ್ಲಿಯೇ ಬರುತ್ತವೆ. ಮಿಥುನ ಮಾಸದಲ್ಲಿ ಮುಹೂರ್ತಗಳಿಗೆ ಯಾವುದೇ ಬಾಧಕವಿಲ್ಲ. ಕರ್ಕಾಟಕ ಮಾಸವು ದಕ್ಷಿಣಾಯನವಾದ್ದರಿಂದ ಆ ಕಾಲಘಟ್ಟದಲ್ಲಿ ಯಾವುದೇ ಮುಹೂರ್ತ ಸಿಗುವುದಿಲ್ಲ. ಯಾವುದಾದರೂ ಸಮಾರಂಭ ಮಾಡಲೇಬೇಕು ಎನ್ನುವ ಅನಿವಾರ್ಯ ಸಂದರ್ಭ ಇದ್ದರೆ ಮಿಥುನ ಮಾಸದಲ್ಲಿ ಬರುವ ಆಷಾಢದಲ್ಲಿ ಮಾಡಬಹುದು.
ಪುಣ್ಯದ ಕೆಲಸಗಳು: ಆಷಾಢ ಮಾಸದಲ್ಲಿ ಯತಿಗಳ ಪೂಜಾನುಷ್ಠಾನಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸಿಕೊಡುವುದು ನಾಗರಿಕರ ಪಾಲಿಗೆ ಪುಣ್ಯದ ಕೆಲಸ. ಯಜ್ಞ, ಪೂಜೆ ಮಾಡುವುದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ಸೂರ್ಯ, ವರುಣ, ವಿಷ್ಣು, ಅಂಗಾರಕನ ಆರಾಧನೆ ಪ್ರಶಸ್ತವಾದದ್ದು. ಪಾದುಕೆ, ಛತ್ರಿ, ಉಪ್ಪು, ನೆಲ್ಲಿಕಾಯಿ ದಾನ ಮಾಡುವುದು ಒಳ್ಳೆಯದು.
ಆರೋಗ್ಯ ರಕ್ಷಣೆ: ಆಷಾಢದಲ್ಲಿ ಹೆಚ್ಚು ತಂಪು ಇರುವುದರಿಂದ ಜಠರಾಗ್ನಿ ಕುಂಠಿತ ಗೊಂಡಿರುತ್ತದೆ. ಜೀರ್ಣಕ್ರಿಯೆ ನಿಧಾನವಾಗುತ್ತದೆ. ಜೀರಿಗೆ, ಶುಂಠಿ, ಇಂಗು, ನೆಲ್ಲಿಕಾಯಿಯ ಅಂಶಗಳಿರುವ ಪದಾರ್ಥಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.