

ಅನೇಕ ವ್ರತಗಳು ಪುರಾಣದಲ್ಲಿದ್ದರೂ ಅವುಗಳಲ್ಲಿ ಎಲ್ಲವೂ ಆಚರಣೆಯಲ್ಲಿ ಇದ್ದಂತೆ ಕಾಣುವುದಿಲ್ಲ ಎಂಬ ಮಾತಿಗೆ ಅನಂತ ಚತುರ್ದಶೀ ವ್ರತವು ಹೊರತಾಗಿದೆ. ಈ ವ್ರತವನ್ನು ಪ್ರತಿವರ್ಷವೂ ಭಾದ್ರಪದ ಶುಕ್ಲ ಚತುರ್ದಶಿಯಂದು ಅಲ್ಲಲ್ಲಿ ಕೆಲವರು ಆಚರಿಸುತ್ತಾರೆ. ಈ ವರ್ಷ ಈ ವ್ರತವು 19.09.2021 ಭಾನುವಾರ ಆರಂಭವಾಗಿ ಸೋಮವಾರ ಸಂಪನ್ನವಾಗಲಿದೆ.
ಅನಂತನು ಯಾರು ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ಪರಮಾತ್ಮನೆಂದೇ ಹೇಳಬಹುದಾದರೂ ಅನಂತ ನಾಗನೂ ಆ ಸಾಲಿಗೆ ಸೇರುತ್ತಾನೆ. ‘ಅನಂತನು ನಾನೇ’ ಎಂದು ಭಗವಂತನು ಗೀತೆಯಲ್ಲಿ ಹೇಳುವುದರಿಂದ ಅನಂತ ನಾಗನು ಪರಮಾತ್ಮನ ವಿಭೂತಿಯೆಂಬಲ್ಲಿ ಸಂಶಯವಿಲ್ಲ. ಅದಲ್ಲದಿದ್ದರೂ ಅನಂತ ನಾಗನನ್ನು ಪರಮಾತ್ಮನೆಂದೇ ಭಾವಿಸಿ ಪೂಜಿಸಿದರೆ ಅದರಲ್ಲಿ ದೋಷವೇನೂ ಇಲ್ಲ. ವೈದಿಕ ಅವೈದಿಕ ಭೇದವಿಲ್ಲದೆ ಸಮಸ್ತರೂ ಈ ವ್ರತವನ್ನು ಪ್ರತಿವರ್ಷವೂ ಆಚರಿಸುವುದುಂಟು. ಆದರೆ ಆಚರಣೆಯಲ್ಲಿ ವ್ಯತ್ಯಾಸವಿದೆ. ಜೈನರು ಉದ್ದೇಶಪೂರ್ವಕವಾಗಿ ಮಾಡಿದ್ದ ತಪ್ಪುಗಳಿಗೆ ಕ್ಷಮೆಯನ್ನು ಕೇಳಿದರೆ, ವೈದಿಕರು ಹದಿನಾಲ್ಕು ಗಂಟುಗಳಿರುವ ರೇಶ್ಮೆಯ ದಾರವನ್ನು ಕಟ್ಟಿಕೊಂಡು ಅಭ್ಯುದಯವನ್ನು ಬಯಸುತ್ತಾರೆ. ಈ ದಾರವನ್ನು ಗಂಡಸರು ಬಲಗೈಗೆ ಕಟ್ಟಿಕೊಂಡರೆ ಹೆಂಗಸರು ಎಡಗೈಗೆ ಕಟ್ಟಿಕೊಳ್ಳುತ್ತಾರೆ.
ಪೂಜೆಯ ಅಂಗವಾಗಿ ಕಥೆಯ ಶ್ರವಣ ಮಾಡಲಾಗುತ್ತದೆ. ಸುಮಂತ ಮತ್ತು ದೀಕ್ಷಾ ಎಂಬ ದಂಪತಿಗೆ ಸುಶೀಲೆಯೆಂಬ ಮಗಳಿದ್ದಳು. ಸುಮಂತನಿಗೆ ಪತ್ನಿವಿಯೋಗವಾದ ಕಾರಣ ಮರುಮದುವೆಯಾಯಿತು. ಇದರ ಪರಿಣಾಮವಾಗಿ ಮಲತಾಯಿಯಿಂದ ಸುಶೀಲೆಗೆ ಸಾಕಷ್ಟು ತೊಂದರೆಯಾಯಿತು. ಹಾಗಾದರೂ ಪುಣ್ಯವಂತೆಯಾದ ಸುಶೀಲೆಯು ಎಲ್ಲವನ್ನೂ ಸಹಿಸಿಕೊಂಡಳು. ಅವಳ ಮದುವೆಯು ಕೌಂಡಿನ್ಯ ಎಂಬ ಯುವಕನೊಂದಿಗೆ ನೆರವೇರಿದ ಮೇಲೆ ಮಲತಾಯಿಯ ಕಾಟವನ್ನು ತಪ್ಪಿಸುವುದಕ್ಕಾಗಿ ಅವರಿಬ್ಬರೂ ಅಲ್ಲಿಂದ ದೂರ ಸರಿದರು.
ಒಂದು ನದಿಯ ತೀರದಲ್ಲಿ ಹೋಗುತ್ತಿರುವಾಗ ಸುದೈವದಿಂದ ಸುಶೀಲೆಗೆ ಅನಂತ ದೇವನನ್ನು ಪೂಜಿಸುತ್ತಿರುವ ಸ್ತ್ರೀಯರು ಗೋಚರಿಸಿದರು. ಆ ಸ್ತ್ರೀಯರಿಂದ ಅನಂತ ಮಹಿಮೆಯನ್ನು ಅರಿತು ಸುಶೀಲೆಯು ಪತಿಗೆ ತಿಳಿಸಿದಳು. ಅನಂತ ವ್ರತವನ್ನು ಅಂತರಂಗದಲ್ಲಿ ಸಂಕಲ್ಪಿಸಿ ಅವಳು ಅದನ್ನು ಆಚರಿಸಿ ಧನ್ಯಳಾದಳು. ಅದರ ಫಲವಾಗಿ ಅವರು ಸುಖ ಸಮೃದ್ಧಿ ಪಡೆದರಾದರೂ, ಕೌಂಡಿನ್ಯನಿಗೆ ಮನವರಿಕೆಯಾಗದೇ, ಅವಳು ಕೈಗೆ ಕಟ್ಟಿಕೊಂಡಿರುವ ಅನಂತ ದಾರವನ್ನು ಕಿತ್ತು ಬೆಂಕಿಗೆ ಹಾಕಿದನು. ಇದರಿಂದ ಅಸಮಾಧಾನ ಹೊಂದಿದ ಅನಂತ ದೇವನು ಅವನ ಜೀವನದಲ್ಲಿ ಅನಾಹುತಗಳ ಸಾಲನ್ನೇ ತೋರಿಸತೊಡಗಿದನು. ಆಗ ಕೌಂಡಿನ್ಯನಿಗೆ ನಿಜಸ್ಥಿತಿಯ ಅರಿವಾಯಿತು. ಅವನು ಅನಂತ ದೇವನನ್ನು ಎಲ್ಲೆಲ್ಲಿಯೂ ಅನ್ವೇಷಿಸಲು ಆರಂಭಿಸಿದನು. ಕೌಂಡಿನ್ಯನ ಪ್ರಯತ್ನವು ಕೂಡಲೇ ಫಲಿಸಲಿಲ್ಲ. ಅವನು ಕಾಡಿನಲ್ಲಿ ಅಲೆಯುತ್ತಿರುವಾಗ ಫಲಭರಿತವಾದ ಮಾವಿನ ಮರವೊಂದು ಕಾಣಿಸಿತು. ಆದರೆ ಅದು ಕ್ರಿಮಿಗಳಿಂದ ತುಂಬಿ ಅಗ್ರಾಹ್ಯವೇ ಆಗಿತ್ತು. ಅದನ್ನು ಅವಿವೇಕಿಯಾದ ಕೌಂಡಿನ್ಯನು ನೋಡಿ, ‘ಅನಂತ ದೇವನನ್ನು ನೋಡಿರುವೆಯಾ’ ಎಂದು ಕೇಳಿದನು. ಆದರೆ ಆ ಮರವು ಉತ್ತರಿಸುವುದೆಂತು? ಮುಂದೆ ಸಾಗಿದ ಕೌಂಡಿನ್ಯನು ಒಂದು ಹಸುವನ್ನೂ, ಕರುವನ್ನೂ ನೋಡಿದನು. ಸಮೃದ್ಧವಾದ ಹುಲ್ಲುಗಾವಲಿನಲ್ಲಿ ಮೇಯದೇ ನಿಂತಿರುವ ಎತ್ತನ್ನು ಕಂಡನು. ಅಲ್ಲಿಯೇ ಮುಂದೆ ಎರಡು ಕೆರೆಗಳು, ಕತ್ತೆ ಮತ್ತು ಆನೆಯನ್ನು ಕಂಡು, ಅವುಗಳಲ್ಲಿ ಅನಂತ ದೇವನನ್ನು ಕುರಿತು ಪ್ರಶ್ನಿಸಿದನು. ಸ್ವಾಭಾವಿಕವಾಗಿ ಅವನ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ.
ಅನಂತ ದೇವನನ್ನು ಕಾಣಲೇಬೇಕೆಂಬ ತವಕದಿಂದ ಹೊರಟಿದ್ದ ಕೌಂಡಿನ್ಯನಿಗೆ ನಿರಾಸೆಯಾಯಿತು. ಜೀವಿಸುವುದೇ ಬೇಡವೆಂದು ಅವನು ಆತ್ಮಹತ್ಯೆಯ ನಿರ್ಧಾರ ಮಾಡಿದನು. ಕೊರಳಿಗೆ ನೇಣು ಹಾಕಿಕೊಳ್ಳಬೇಕೆಂದಿರುವಾಗ ವೃದ್ಧ ಬ್ರಾಹ್ಮಣನೊಬ್ಬನು ಗೋಚರಿಸಿದನು. ಅವನು ಕೌಂಡಿನ್ಯನಿಗೆ ಬುದ್ಧಿ ಹೇಳಿ ತನ್ನ ಜೊತೆಗೆ ಕರೆದೊಯ್ದನು. ಅವರಿಬ್ಬರೂ ಕಗ್ಗತ್ತಲೆಯಿಂದ ತುಂಬಿದ್ದ ಗುಹೆಯೊಂದನ್ನು ಪ್ರವೇಶಿಸಿದರು. ಕತ್ತಲೆಯಲ್ಲಿ ತೆವಳುತ್ತಾ ಮುಂದೆ ಹೋದಮೇಲೆ ಬೆಳಕು ಕಾಣಿಸಿತು. ಅಲ್ಲಿ ಅರಮನೆಯೂ, ಅಸಂಖ್ಯಾತ ಜನಜಂಗುಳಿಯೂ ಇದ್ದಿತ್ತು. ಅದನ್ನು ಲಕ್ಷಿಸದೇ ಆ ವೃದ್ಧನು ನೇರವಾಗಿ ಸಿಂಹಾಸನದ ಬಳಿಗೆ ಹೋದನು. ಆ ಸಿಂಹಾಸನದ ಮೇಲೆ ಅನಂತ ದೇವನೇ ವಿರಾಜಿಸುತ್ತಿದ್ದನು. ಅವನನ್ನು ನೋಡಿದ ಕೌಂಡಿನ್ಯನಿಗೆ ಅನಂತ ದಾರವನ್ನು ಬೆಂಕಿಗೆ ಹಾಕಿದ ತನ್ನ ತಪ್ಪು ಅರಿವಾಯಿತು. ಸುಶೀಲೆಯನ್ನು ನೆನೆದು ಅವನು ಪಶ್ಚಾತ್ತಾಪಗೊಂಡನು. ಹಾಗೂ ತಾನು ಮಾಡಿದ ತಪ್ಪನ್ನು ಮನ್ನಿಸುವಂತೆ ಅನಂತ ದೇವನನ್ನು ಪ್ರಾರ್ಥಿಸಿದನು. ಅದಕ್ಕೆ ಪ್ರತಿಯಾಗಿ ಅನಂತ ದೇವನು ಹದಿನಾಲ್ಕು ವರ್ಷಗಳವರೆಗೆ ವ್ರತವನ್ನು ಆಚರಿಸುವಂತೆ ಆದೇಶಿಸಿದನು. ವ್ರತದ ಮಹಿಮೆಯಿಂದ ಮನುಷ್ಯನು ಪಾಪಗಳನ್ನೆಲ್ಲಾ ಕಳೆದುಕೊಂಡು, ಸಕಲ ಸಂಪತ್ತನ್ನೂ ಪಡೆಯುವನೆಂದು ತಿಳಿಸಿದನು.
ಕೌಂಡಿನ್ಯನು ನೋಡಿದ ಮಾವಿನ ಮರವು, ಹಿಂದಿನ ಜನ್ಮದಲ್ಲಿ ವಿದ್ಯಾವಂತನಾದ ಬ್ರಾಹ್ಮಣನಾಗಿತ್ತು. ಆದರೆ ಆ ಬ್ರಾಹ್ಮಣನು ತನ್ನಲ್ಲಿರುವ ವಿದ್ಯೆಯನ್ನು ಯಾರಿಗೂ ಹೇಳುತ್ತಿರಲಿಲ್ಲ. ಹಸು, ಕರು, ಎತ್ತುಗಳಾದರೂ ಹಿಂದಿನ ಜನ್ಮದಲ್ಲಿ ಪಾಪಗಳನ್ನೇ ಮಾಡಿದ ಜನರಾಗಿದ್ದರು. ಎರಡು ಕೆರೆಗಳೂ ಸ್ವಾರ್ಥಿಗಳಾದ ಸೋದರಿಯರಾಗಿದ್ದರು. ಕತ್ತೆಯೂ, ಆನೆಯೂ ಸ್ವಾರ್ಥದ ಪರಾಕಾಷ್ಠೆಯನ್ನೇ ಹೊಂದಿದ್ದ ಜನರಾಗಿದ್ದರು ಎಂಬ ವಿವರಣೆಯನ್ನು ಸ್ವತಃ ಅನಂತ ದೇವನೇ ನೀಡಿದನು. ಇದನ್ನು ಆಲಿಸಿದ ಕೌಂಡಿನ್ಯನು ಅನಂತ ವ್ರತವನ್ನು ಆಚರಿಸಿ ಧನ್ಯನಾದನು.
ಈ ಕಥೆಯ ಸಂದೇಶವು ಸಮಾಜಮುಖಿಯಾಗಿದೆ ಎಂಬಲ್ಲಿ ಸಂಶಯವಿಲ್ಲ. ತನ್ನಲ್ಲಿರುವ ವಿದ್ಯೆಯನ್ನು ಪ್ರತಿಯೊಬ್ಬನೂ ಬೇರೆಯವರಿಗೆ ಕಲಿಸಬೇಕು. ಸ್ವಾರ್ಥವು ಅವನತಿಯ ದಾರಿ. ಪರಾರ್ಥವು ಶ್ರೇಯಸ್ಸಿಗೆ ಸಾಧನವೆಂದು ಈ ದರ್ಶನದಲ್ಲಿ ವ್ಯಕ್ತವಾಗಿದ್ದು ಮನುಷ್ಯನು ಪರಮಾತ್ಮನಲ್ಲಿ ಶ್ರದ್ಧೆಯನ್ನು ಹೊಂದಿ ಪೂಜಿಸಬೇಕು, ಹಾಗೂ ಸಮಾಜಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟು, ಸುಸಂಸ್ಕೃತನಾಗಿ ಬಾಳಬೇಕೆಂಬ ಘನವಾದ ಸಂದೇಶವು ಇಲ್ಲಿದೆ.
(ಲೇಖಕರು ಸಂಸ್ಕೃತ ವಿದ್ವಾಂಸರು)