ಸಮಾನತೆಯ ದನಿಯಾದ ಕ್ರಾಂತಿಕಾರಿ

Ambedkar
Published on
ಸಾಮಾಜಿಕ ಸುಧಾರಣೆಗೆ ವೈವಿಧ್ಯಮಯ ವೇದಿಕೆಗಳ ಮೂಲಕ ಪ್ರಯತ್ನ, ಹೋರಾಟ ನಡೆಸಿದವರು ಸಂವಿಧಾನ ಶಿಲ್ಪಿ ಅಂಬೇಡ್ಕರ್. ಅವರ ಮಹಾಪರಿನಿರ್ವಾಣ ದಿನವನ್ನು ಡಿಸೆಂಬರ್ 6ರಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರ ಜೀವನ-ಸಾಧನೆ-ಕೊಡುಗೆಗಳ ಅವಲೋಕನ ಇಲ್ಲಿದೆ.

ಡಾ. ಭೀಮರಾವ್ ರಾಮ್ ಅಂಬೇಡ್ಕರ್ ಅವರು ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ, ಅರ್ಥಶಾಸ್ತ್ರ›ಜ್ಞ, ಕಾನೂನು ತಜ್ಞ, ರಾಜಕಾರಣಿ ಮತ್ತು ಸಮಾಜ ಸುಧಾರಕರು. ಅವರು ಅಸ್ಪಶ್ಯತೆ ಮತ್ತು ಜಾತಿ ತಾರತಮ್ಯದಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ದಲಿತರು ಹಾಗೂ ಕೆಳಜಾತಿಗಳ ಹಕ್ಕುಗಳಿಗಾಗಿ ಹೋರಾಡಿದವರು. ಭಾರತದ ಸಂವಿಧಾನವನ್ನು ರಚಿಸುವ ಸಂದರ್ಭದಲ್ಲಿ, ತುಳಿತಕ್ಕೆ ಒಳಗಾದ, ಸಾಮಾಜಿಕ ನ್ಯಾಯ ವಂಚಿತ ಮತ್ತು ಅವಕಾಶ ವಂಚಿತರಿಗಾಗಿ ವಿಶೇಷ ಕಾಳಜಿವಹಿಸಿ ಗಮನಾರ್ಹ ಕೊಡುಗೆ ನೀಡಿದರು. ಅವರು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ ಮತ್ತು ಭಾರತೀಯ ಸಂವಿಧಾನದ ನಿರ್ವತೃ.

ಮಹಾಡ್ ಸತ್ಯಾಗ್ರಹ: ಭಾರತದ ಜಾತಿ ವ್ಯವಸ್ಥೆಯಲ್ಲಿ ಅಸ್ಪಶ್ಯರನ್ನು ಹಿಂದೂಗಳಿಂದ ಬೇರ್ಪಡಿಸಲಾಯಿತು. ಮೇಲ್ಜಾತಿ ಹಿಂದೂಗಳು ಬಳಸುತ್ತಿದ್ದ ಸಾರ್ವಜನಿಕ ನೀರಿನ ಮೂಲವನ್ನು ದಲಿತರು ಬಳಸಲು ನಿಷೇಧಿಸಲಾಯಿತು. ಅಂಬೇಡ್ಕರ್ ನೇತೃತ್ವದಲ್ಲಿ 1927ರ ಮಾರ್ಚ್ 20ರಂದು ಮಹಾಡ್ ಸತ್ಯಾಗ್ರಹವನ್ನು ಪ್ರಾರಂಭಿಸಲಾಯಿತು. ಮಹಾರಾಷ್ಟ›ದ ಮಹಾಡ್​ನಲ್ಲಿ ಸಾರ್ವಜನಿಕ ಕೊಳದ ನೀರನ್ನು ಅಸ್ಪಶ್ಯರಿಗೆ ಬಳಸಲು ಅವಕಾಶ ನೀಡುವುದು ಇದರ ಉದ್ದೇಶವಾಗಿತ್ತು. ಆಂದೋಲನಕ್ಕೆ ಅವರು ಮಹಾಡ್​ನ ಚಾವಡಾರ್ ಕೊಳವನ್ನು ಆರಿಸಿಕೊಂಡಿದ್ದರು. ಈ ಸತ್ಯಾಗ್ರಹದಲ್ಲಿ ಸಾವಿರಾರು ದಲಿತರು ಭಾಗವಹಿಸಿದ್ದರು. ಅಂಬೇಡ್ಕರ್ ತಮ್ಮ ಕಾರ್ಯಗಳಿಂದ ಹಿಂದೂ ಜಾತಿ ವ್ಯವಸ್ಥೆಯ ವಿರುದ್ಧ ಪ್ರಬಲ ದಾಳಿ ನಡೆಸಿದರು. ಚಾವಡಾರ್ ಕೊಳದ ಸತ್ಯಾಗ್ರಹ ನೀರಿಗಾಗಿ ಮಾತ್ರವಲ್ಲ, ಸಮಾನತೆಯ ಕಟ್ಟುಪಾಡುಗಳನ್ನು ಸ್ಥಾಪಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದು ಹೇಳಿದರು. ಸತ್ಯಾಗ್ರಹದ ಸಮಯದಲ್ಲಿ ದಲಿತ ಮಹಿಳೆಯರನ್ನು ಉಲ್ಲೇಖಿಸಿ, ಎಲ್ಲಾ ಹಳೆಯ ಪದ್ಧತಿಗಳನ್ನು ತ್ಯಜಿಸಲು ಮತ್ತು ಮೇಲ್ಜಾತಿ ಭಾರತೀಯ ಮಹಿಳೆಯರಂತೆ ಸೀರೆಗಳನ್ನು ಧರಿಸುವಂತೆ ಒತ್ತಾಯಿಸಿದರು. ಮಹಾಡ್​ನಲ್ಲಿ ಅಂಬೇಡ್ಕರ್ ಭಾಷಣದ ನಂತರ ದಲಿತ ಮಹಿಳೆಯರು ಮೇಲ್ವರ್ಗದ ಮಹಿಳೆಯರು ಸೀರೆಗಳನ್ನು ಧರಿಸುವ ರೀತಿಯಿಂದ ಪ್ರಭಾವಿತರಾದರು. ಅಸ್ಪಶ್ಯರಿಗೂ ಕೊಳದ ನೀರನ್ನು ಬಳಸುವ ಹಕ್ಕು ಇದೆ ಎಂದು ಬಾಂಬೆ ಹೈಕೋರ್ಟ್ 1937ರ ಡಿಸೆಂಬರ್​ನಲ್ಲಿ ಐತಿಹಾಸಿಕ ತೀರ್ಪು ನೀಡಿತು.

ಸಮಾಜಕ್ಕಾಗಿ ಸಮರ್ಪಣೆ: ಬಾಬಾಸಾಹೇಬ್ ಅಂಬೇಡ್ಕರರು ಅಸ್ಪಶ್ಯರುಮತ್ತು ಇತರ ಕೆಳಜಾತಿಗಳ ಸಮಾನತೆಗಾಗಿ ಹೋರಾಡಿ ಯಶಸ್ಸನ್ನು ಸಾಧಿಸಿದರು. ಅವರು ಸ್ವಾರ್ಥಕ್ಕಾಗಿ ಸಾಮಾಜಿಕ ನ್ಯಾಯದ ತತ್ವ ನೀತಿಗಳಿಗೆ ಯಾವತ್ತೂ ತಿಲಾಂಜಲಿಯನ್ನಿಡಲಿಲ್ಲ. ಸಮಾಜಕ್ಕಾಗಿ, ದೇಶಕ್ಕಾಗಿ, ಬಡವರಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡರು. ಅವರ ಕ್ರಾಂತಿಕಾರಿ ನಿಲುವುಗಳು ವಿಶೇಷವಾಗಿ 1930 ರ ನಂತರ ಅದರಲ್ಲೂ ವಿಶೇಷವಾಗಿ 1938ರ ಮುಂಬೈಯ ಕಾರ್ವಿುಕ ಚಳವಳಿಯ ಸಂದರ್ಭದಲ್ಲಿ ಪ್ರಖರವಾಗಿ ವ್ಯಕ್ತವಾದವು. ಅವರು ಕಾರ್ವಿುಕ ಪಕ್ಷವನ್ನು ಸ್ಥಾಪಿಸಿದರಾದರೂ ಅದು ಭಾರತದಾದ್ಯಂತ ವ್ಯಾಪಕವಾಗಿ ಪರಿಗಣಿಸಲ್ಪಡಲಿಲ್ಲ.

ಅಂಬೇಡ್ಕರ್ ಸಾರ್ವಜನಿಕ ಜೀವನದಲ್ಲಿ 40 ವರ್ಷಗಳ ಕಾಲ ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ನ್ಯೂಯಾರ್ಕ್​ನಲ್ಲಿ ನಡೆದ ಮಾನವಶಾಸ್ತ್ರ ವಿಚಾರ ಸಂಕಿರಣದಲ್ಲಿ ಅವರು ‘ಭಾರತದಲ್ಲಿ ಜಾತಿಗಳು: ಅವುಗಳ ಯಾಂತ್ರಿಕೃತ ವ್ಯವಸ್ಥೆ ಹುಟ್ಟು ಮತ್ತು ಅಭಿವೃದ್ಧಿ’ ಕುರಿತು ಮಂಡಿಸಿದ ಪ್ರಬಂಧದಲ್ಲಿ ವಿಶಿಷ್ಟವಾದ ವಿಚಾರಗಳನ್ನು ಪ್ರಸ್ತುತಪಡಿಸಿದ್ದರು. ಅವರೊಬ್ಬ ಉದಾರವಾದಿ ಚಿಂತಕರಾಗಿದ್ದರು. ಅವರು ಮಾರ್ಕ್ಸ್​ವಾದಿ ವಿಚಾರಧಾರೆ ಅಧ್ಯಯನ ಮಾಡಿದರು. ಆದರೆ ಕ್ರಾಂತಿಕಾರಿ ಸಿದ್ಧಾಂತ ಅಥವಾ ಪ್ರಯೋಗದಿಂದ ಅವರ ಮನವೊಲಿಸಲು ಸಾಧ್ಯವಾಗಲಿಲ್ಲ. ಅವರು ಗಾಂಧೀವಾದ ಮತ್ತು ಕಾಂಗ್ರೆಸ್ ಸಿದ್ಧಾಂತವನ್ನು ತೀವ್ರವಾಗಿ ವಿರೋಧಿಸಿದರು. 1950 ರ ದಶಕದ ಆರಂಭದಲ್ಲಿ ಜವಾಹರಲಾಲ್ ನೆಹರು ಅವರು ಹಿಂದೂ ಕೋಡ್ ಬಿಲ್ ಜಾರಿಗೆ ತರುವ ವಿಷಯದಲ್ಲಿ ತಮ್ಮದೇ ಸಂಪುಟದ ಕಾನೂನು ಸಚಿವರ ಅಭಿಪ್ರಾಯಗಳನ್ನು ಪರಿಗಣಿಸಲಿಲ್ಲ. ಆದಾಗ್ಯೂ ಅಂಬೇಡ್ಕರರು ಕೆಲವು ಸಾಮಾಜಿಕ ವಿಷಯಗಳ ಬಗ್ಗೆ ನೆಹರೂರೊಂದಿಗೆ ಸಾಮಾನ್ಯ ಅಂಶಗಳನ್ನು ಹಂಚಿಕೊಂಡರು.

ಅಂಬೇಡ್ಕರರು ಮೊದಲಿಂದಲೂ ಧೈರ್ಯಶಾಲಿ. ಸಾಮಾಜಿಕವಾಗಿ ತುಳಿತಕ್ಕೊಳಗಾದ ಮತ್ತು ಅವಮಾನಕ್ಕೊಳಗಾದ ಶಾಲಾ ಬಾಲಕನಾಗಿ ಅವರು ಕಲ್ಪನೆಗಳನ್ನು ಪ್ರೀತಿಸುತ್ತಿದ್ದರು, ಅವರು ಬರೋಡಾದ ರಾಜಮನೆತನವನ್ನು ಒಳಗೊಂಡಂತೆ ಯಾರಿಂದಲೂ ಪ್ರಭಾವಿತರಾಗಲು ನಿರಾಕರಿಸಿದರು. ಸಹಪಾಠಿಗಳೊಂದಿಗೆ ಕ್ರಿಕೆಟ್ ಆಡುವುದಕ್ಕೆ ಸಾಮಾಜಿಕವಾಗಿ ನಿರ್ಬಂಧಕ್ಕೊಳಗಾದ ಒಬ್ಬ ಬಾಲಕ ತನ್ನ ದೃಷ್ಟಿ ಬೇರೆಡೆಗೆ ಚೆದುರಲು ಅವಕಾಶ ಕೊಡದೇ ಗುರಿ ತಲುಪಿದರು. ಅವರು ಸಾರ್ವಜನಿಕ ಜೀವನದಲ್ಲಿ ಸಾಧಿಸಬಹುದಾದ ಪ್ರಾಯೋಗಿಕ ಗುರಿಗಳ ಮೇಲೆ ಗಮನವನ್ನು ಕೇಂದ್ರೀಕರಿಸಿ ಕಾರ್ಯಪ್ರವೃತ್ತರಾದರು.

ಸಾಮಾಜಿಕ ಸಮಾನತಾವಾದ ಮತ್ತು ಜನಪ್ರಿಯ ಸ್ವಾತಂತ್ರ್ಯಗಳನ್ನು ಪ್ರತಿಪಾದಿಸುವಾಗ ಮತ್ತು ದೊಡ್ಡ ಉದ್ಯಮಿಗಳು- ಭೂಮಾಲೀಕತ್ವವನ್ನು ಟೀಕಿಸುವಾಗ, ಸಾಮಾಜಿಕ-ಆರ್ಥಿಕ ಪ್ರಜಾಪ್ರಭುತ್ವಕ್ಕಾಗಿ ಪ್ರಚಾರ ಮಾಡುವಾಗ, ಅವರು ಮಾರ್ಕ್ಸ್​ವಾದ ಮತ್ತು ಕಮ್ಯುನಿಸಂನ ಪ್ರಜ್ಞಾಪೂರ್ವಕ ಸೈದ್ಧಾಂತಿಕ ಮತ್ತು ರಾಜಕೀಯ ಎದುರಾಳಿಯಾಗಿ ಉಳಿದು ಬೌದ್ಧಧರ್ಮವನ್ನು ಪೋ›ತ್ಸಾಹಕ ಅಸ್ತ್ರವನ್ನಾಗಿ ಕಂಡುಕೊಂಡರು. ಕಾಶ್ಮೀರ, ಭಾಷೆ, ರಾಷ್ಟಿ›ೕಯತೆ, ಪೌರತ್ವ, ಜನಾಂಗೀಯತೆ ಇಂತಹ ಜಟಿಲ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಅವರು ವಿಶ್ಲೇಷಣಾತ್ಮಕವಾದ ಆಸಕ್ತಿದಾಯಕ ವಿಷಯಗಳನ್ನು ಪ್ರತಿಪಾದಿಸುತ್ತಿದ್ದರು. ಅವರ ವಿಶ್ಲೇಷಣೆಯು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಮತ್ತು ಕೇಂದ್ರ-ರಾಜ್ಯಗಳ ಸಂಬಂಧಗಳ ಕುರಿತು ಸರಿಯಾದ ಪ್ರಜಾಸತ್ತಾತ್ಮಕ ತಿಳಿವಳಿಕೆಯನ್ನು ಉದ್ದೀಪನಗೊಳಿಸಿತು. ಸಾಮಾಜಿಕ ನ್ಯಾಯಕ್ಕಾಗಿ ಅವರು ಹೊಂದಿದ ಉತ್ಸಾಹ (ಪ್ರಾಚೀನ ಆಡಳಿತ ಮತ್ತು ತುಳಿತಕ್ಕೊಳಗಾದ ವರ್ಗಗಳಿಗೆ ಸಂಬಂಧಿಸಿದಂತೆ ಗಾಂಧೀಜಿಯವರ ಹೊಂದಾಣಿಕೆಯ ದೃಷ್ಟಿಕೋನವನ್ನು ಮೀರಿದ್ದು), ಪ್ರಜಾಪ್ರಭುತ್ವದ ಸ್ವಾತಂತ್ರ್ಯಗಳು, ಆಧುನಿಕ, ವೈಜ್ಞಾನಿಕ ಮತ್ತು ಕ್ರಾಂತಿಕಾರಿ ವಿಚಾರಗಳಿಗೆ ಅವರ ಮುಕ್ತತೆ, ಜಾತ್ಯತೀತ ಮತ್ತು ಪ್ರಗತಿಪರ ನಿಲುವುಗಳು ವಿಶೇಷವಾಗಿ ಮಹಿಳೆಯರ ಸ್ಥಿತಿ-ಭವಿಷ್ಯದ ಬಗ್ಗೆ ಚಿಂತನೆ, ನಾಗರಿಕ ಸಮಾಜದ ವಿಶಾಲ ಹಿತಾಸಕ್ತಿಗಳನ್ನು ಆಧರಿಸಿದ ಬೌದ್ಧಿಕ ಕೊಡುಗೆಗಳು ಮತ್ತು ವ್ಯಾಪಕವಾದ ಆಸಕ್ತಿಗಳು; ಸಾಧಿಸಬಹುದಾದ, ಪ್ರಾಯೋಗಿಕ ಗುರಿಗಳ ಮೇಲೆ ಕೇಂದ್ರೀಕರಿಸುವ ಅವರ ಸಾಮರ್ಥ್ಯ ಮತ್ತು ವಾಸ್ತವಿಕತೆಯ ರಚನಾತ್ಮಕ ಪ್ರಜ್ಞೆಗಳು ಅವರನ್ನು ಅಪರೂಪದ ವಿಶಿಷ್ಟ ರೀತಿಯ ನಾಯಕನನ್ನಾಗಿ ಗುರುತಿಸಲು ಕಾರಣೀಭೂತವಾದ ಮಹತ್ವದ ಗುಣಾತ್ಮಕ ಅಂಶಗಳು.

ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಮತ್ತು ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಸಂಪುಟದಲ್ಲಿ ಸ್ವತಂತ್ರ ಭಾರತದ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ್ದರೂ, ಭಾರತೀಯ ರಾಜಕಾರಣದಲ್ಲಿ ಕಾಂಗ್ರೆಸ್ಸೇತರ ಮತ್ತು ಕಾಂಗ್ರೆಸ್-ವಿರೋಧಿ ನಿಲುವುಗಳ ಆದ್ಯರೆಂದೇ ಅಂಬೇಡ್ಕರ್ ಅವರನ್ನು ಗುರುತಿಸಬಹುದು.

ಅಂಬೇಡ್ಕರ್ ವಕೀಲ ಮತ್ತು ರಾಜಕಾರಣಿ ಆಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಸಮಾಜ ಸುಧಾರಕರಾಗಿದ್ದರು. ಇಂದು ನಮ್ಮ ರಾಷ್ಟ್ರದ ಪ್ರಜಾಸತ್ತೆಗೆ ಮೂಲಭೂತ ಅಡಿಪಾಯವಾಗಿರುವ ಭಾರತದ ಸೊಗಸಾದ ಸಂವಿಧಾನವನ್ನು ಅವರು ರಚಿಸಿದ್ದಾರೆ. ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಡಿದರು. ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯಗಳನ್ನು ಮತ್ತು ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಮತ್ತು ಸಮಾಜದಲ್ಲಿ ಹಾಗೂ ಇತರ ಕ್ಷೇತ್ರಗಳಲ್ಲಿ ಸಮಾನ ಸ್ಥಾನಮಾನಕ್ಕಾಗಿ ಜೀವನದುದ್ದಕ್ಕೂ ಹೋರಾಡಿದ ಏಕಮೇವ ಅದ್ವಿತೀಯ ನಾಯಕ ಅಂಬೇಡ್ಕರ್. ಒಬ್ಬರನ್ನೊಬ್ಬರು ಸಮಾನವಾಗಿ ಪರಿಗಣಿಸದ ಹೊರತು ಏಕೀಕೃತ ಮತ್ತು ಪ್ರಗತಿಪರ ಭಾರತದ ಕಲ್ಪನೆ ನಿರರ್ಥಕವಾಗಿ ಉಳಿಯುತ್ತದೆ ಎಂದು ಪ್ರತಿಪಾದಿಸಿ, ಏಕತೆಯ ತತ್ವವನ್ನು ಅನುಷ್ಠಾನಗೊಳಿಸಲು ಅಹೋರಾತ್ರಿ ಶ್ರಮಿಸಿದರು.

(ಲೇಖಕರು ಜಲಸಂಪನ್ಮೂಲ ಸಚಿವರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net