

| ಮಂಡಗದ್ದೆ ಪ್ರಕಾಶ್ಬಾಬು ಕೆ.ಆರ್.
ಪ್ರಕೃತಿ ವಿಸ್ಮಯಗಳಿಗೆ ಹಿಮಾಲಯ ತವರು. ವಿಶ್ಲೇಷಣೆಗಳಿಗೆ ನಿಲುಕದ ವಿಸ್ಮಯಗಳು ಅಲ್ಲಿವೆ. ಅವುಗಳಲ್ಲಿ ಅಮರನಾಥ ಗುಹೆಯಲ್ಲಿರುವ ಹಿಮಲಿಂಗವೂ ಒಂದು. ಹಿಮಾಲಯದಲ್ಲಿ ಬೇರೆಬೇರೆ ಆಕಾರದ ಹಿಮರಾಶಿಯನ್ನು ನಾವು ಕಾಣಬಹುದು. ಆದರೆ ಸಾವಿರಾರು ವರ್ಷಗಳಿಂದ ಒಂದೇ ರೀತಿಯಲ್ಲಿ ಲಿಂಗಾಕಾರವಾಗಿ ರೂಪುಗೊಳ್ಳುವ ಅಮರನಾಥ ಹಿಮಲಿಂಗದ ವಿಶೇಷತೆಯೇ ಬೇರೆ.
ಅಮರನಾಥಕ್ಕೆ ಹೋಗಿಬರುವುದು ಸಾಹಸವೇ ಸರಿ. ದಾರಿಯುದ್ದಕ್ಕೂ ಸೈನಿಕ ಸುರಕ್ಷಾ ವ್ಯವಸ್ಥೆ, ಉಚಿತ ಊಟೋಪಚಾರ, ವೈದ್ಯಕೀಯ ಸೇವೆ ಇದ್ದರೂ ಆ ಕೊರೆಯುವ ಚಳಿಯಲ್ಲಿ ಮಾಡುವ ಚಾರಣ, ರೋಚಕ ಅನುಭವ ನೀಡುತ್ತದೆ. ಜತೆಗೆ, ದಾರಿಯುದ್ದಕ್ಕೂ ಪರ್ವತಗಳು, ನದಿ ಸರೋವರಗಳು, ದಟ್ಟಾರಣ್ಯ... ಆ ಸುಂದರ ಪ್ರಕೃತಿಯನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ. ಯಾತ್ರೆಗೆ ಹೋಗಲು ಎರಡು ಮಾರ್ಗಗಳಿವೆ. ಜಮ್ಮು, ಪಹಲ್ಗಾಂವ್, ಚಂದನವಾಡಿ ಮೂಲಕ ಒಂದು ಮಾರ್ಗ. ಅಲ್ಲಿಂದ ಅಮರನಾಥಕ್ಕೆ 32 ಕಿಮೀ; ಇನ್ನೊಂದು, ಶ್ರೀನಗರ, ಬಾಲ್ಟಾಲ್ ಮೂಲಕ. ಅದರ ದೂರ 17 ಕಿಮೀ; ಇದು ಸಮೀಪವಾದರೂ ಕಡಿದಾದ, ಕಷ್ಟದ ಮಾರ್ಗ. ಶ್ರೀನಗರದಿಂದ ಅಮರನಾಥಕ್ಕೆ ನೇರವಾಗಿ ಹೆಲಿಕಾಪ್ಟರ್ ವ್ಯವಸ್ಥೆಯೂ ಇದೆ. ಆರೋಗ್ಯ ಸಮಸ್ಯೆ ಇರುವವರಿಗೆ, ವಯೋವೃದ್ಧರಿಗೆ ಎರಡೂ ಮಾರ್ಗಗಳಲ್ಲಿ ಕುದುರೆ, ಡೋಲಿ ವ್ಯವಸ್ಥೆ ಕೂಡ ಉಂಟು. ಕರ್ನಾಟಕದಿಂದ ದೆಹಲಿಗೆ, ಅಲ್ಲಿಂದ ಜಮ್ಮುವಿಗೆ ವಿಮಾನ ಅಥವಾ ರೈಲಿನ ಮೂಲಕ ತಲುಪಬಹುದು. ಮೊದಲ ಮಾರ್ಗದಲ್ಲಿ ಅಮರನಾಥಕ್ಕೆ ಹೋಗುವುದಾದರೆ ಜಮ್ಮುವಿನಲ್ಲಿ ತಂಗಲು ಹೋಟೆಲ್ಗಳಿವೆ. ನಂತರ ಬಸ್/ವ್ಯಾನ್ ಮೂಲಕ 315 ಕಿಮೀ ಪ್ರಯಾಣಿಸಿದರೆ ಪೆಹಲ್ಗಾಂವ್ ಸಿಗುತ್ತದೆ. ಅಲ್ಲಿಂದಲೇ ಉಚಿತ ಊಟೋಪಚಾರ ಆರಂಭವಾಗುತ್ತದೆ. ಟೆಂಟ್ಗಳ ವ್ಯವಸ್ಥೆ ಇರುತ್ತದೆ. ಹಣ ಕೊಟ್ಟು ಅವುಗಳಲ್ಲಿ ತಂಗಬಹುದು. ಪೆಹಲ್ಗಾಂವ್ನಿಂದ ಟ್ರೆಕ್ಕಿಂಗ್ ಅಥವಾ ಸಣ್ಣ ವಾಹನಗಳ ಮೂಲಕ 16 ಕಿಮೀ ಕ್ರಮಿಸಿದರೆ ಚಂದನವಾಡಿ ಸಿಗುತ್ತದೆ. ಇದು ಕಾಡುಮೇಡು, ಬೆಟ್ಟಗುಡ್ಡಗಳಿಂದ ಕೂಡಿದ ಸ್ಥಳ. ಅಲ್ಲಿಂದ ಶೇಷನಾಗ್ಗೆ ಪ್ರಯಾಣ. ಯಾತ್ರಿಕರ ಶಕ್ತಿ, ಧೈರ್ಯದ ಪರೀಕ್ಷೆ ಶುರುವಾಗುವುದೇ ಇಲ್ಲಿಂದ. ಆದರೆ ಯಾತ್ರಿಕರ ಲಗೇಜ್ ಹೊತ್ತುಕೊಂಡು ಬರಲು ಕೂಲಿಯವರು ಸಿಗುತ್ತಾರೆ. ಶೇಷನಾಗ್ನಿಂದ ಪಂಚತಾರಿಣಿಗೆ 14 ಕಿಮೀ ದೂರ. ಇಲ್ಲಿಯೂ ಕಠಿಣ ಬೆಟ್ಟಗುಡ್ಡಗಳ ಶ್ರೇಣಿಯನ್ನು ಹತ್ತಿ ಇಳಿಯಬೇಕಾಗುತ್ತದೆ. ಕೈಕಾಲು ಮರಗಟ್ಟುವಷ್ಟು ಚಳಿ ಇರುತ್ತದೆ. ಇಲ್ಲಿಯೂ ತಂಗಲು ಟೆಂಟ್ಗಳು ಸಿಗುತ್ತವೆ. ಇಲ್ಲಿಂದ ಅಮರನಾಥಕ್ಕೆ ಕೇವಲ 6 ಕಿಮೀ ಪ್ರಯಾಣ. ಹಿಮದ ಮೇಲೆಯೇ ಚಾರಣ ಮಾಡುವ ಸಂಭವ ಬರಬಹುದು. ಆಗ ಜಾರುವುದು, ಬೀಳುವುದು ಸಾಮಾನ್ಯ. ಹಾಗಾಗಿ ಊರುಗೋಲು ಅತ್ಯವಶ್ಯಕ.
ಅಲ್ಲಿಂದ ಒಂದು ಕಿಮೀ ಮುಂಚಿತವಾಗಿಯೇ ಪ್ರಕೃತಿ ನಿರ್ವಿುತವಾದ ಬೃಹತ್ ಗುಹೆಯ ದರ್ಶನವಾಗುತ್ತದೆ. ಈ ಗುಹೆ ಸುಮಾರು 150 ಅಡಿ ಎತ್ತರ, ನೂರು ಅಡಿ ಅಗಲ ಇದೆ. ಭಕ್ತರು ಸರದಿ ಮೂಲಕ ಹೋಗಬೇಕು. ಅನುಮತಿ ಪತ್ರ ತೋರಿಸಿ, ಮುನ್ನಡೆದರೆ ಹಿಮಲಿಂಗದ ದರ್ಶನವಾಗುತ್ತದೆ. ಅದನ್ನು ರ್ಸ³ಸಲು ಬಿಡುವುದಿಲ್ಲ. ಐದಾರು ಅಡಿ ದೂರದಿಂದಲೇ ದರ್ಶನ-ಪೂಜೆ ಮಾಡಬೇಕು. ಅದರ ಪಕ್ಕದಲ್ಲಿಯೇ ತೀಥೋಧ್ಭವ ಇರುತ್ತದೆ. ಭಕ್ತರು ಸಂಗ್ರಹಿಸಿಕೊಂಡು ಬರಬಹುದು. ಸಮುದ್ರಮಟ್ಟದಿಂದ 13420 ಅಡಿ ಎತ್ತರವಿರುವ ಅಮರನಾಥದಲ್ಲಿ ವಿಪರೀತ ಚಳಿ ಇರುವುದರಿಂದ ತಂಗಲು ಅವಕಾಶ ಕಡಿಮೆ. ತೀರಾ ಅನಿವಾರ್ಯವಾದರೆ ಟೆಂಟ್ಗಳು ಲಭ್ಯ. ಇನ್ನೊಂದು ಮಾರ್ಗವಾದ ಶ್ರೀನಗರ ಬಾಲ್ಟಾಲ್ ಮೂಲಕವೂ ಅಮರನಾಥಕ್ಕೆ ಚಾರಣ ಮಾಡಬಹುದು. ಕುದುರೆ, ಡೋಲಿಯನ್ನೂ ಬಳಸಬಹುದು. ಬಾಲ್ಟಾಲ್ನಲ್ಲಿ ಟೆಂಟ್ ವ್ಯವಸ್ಥೆ ಇದೆ. ಅಲ್ಲಿಂದ ಅಮರನಾಥಕ್ಕೆ 17 ಕಿಮೀ ಮಾತ್ರ; ಆದರೆ ತೀರಾ ಕಡಿದಾದ ದಾರಿ. ಮಳೆ ಬಂದರಂತೂ ಪರಿಸ್ಥಿತಿ ಇನ್ನೂ ಕಠಿಣ. ಅಂಥ ಸಂದರ್ಭದಲ್ಲಿ ಈ ಮಾರ್ಗವನ್ನೇ ಮುಚ್ಚಿಬಿಡುತ್ತಾರೆ.
ಅಗತ್ಯ ವಸ್ತುಗಳು: ಅಲ್ಲಿ ವಾತಾವರಣ ಒಂದೇ ರೀತಿ ಇರುವುದಿಲ್ಲ. ಬಿಸಿಲು, ಚಳಿ, ಮಳೆ ಯಾವಾಗ ಬೇಕಾದರೂ ಉಂಟಾಗುವ ಸಂಭವ ಇರುತ್ತದೆ. ಹಾಗಾಗಿ ಆಯಾ ವಾತಾವರಣಕ್ಕೆ ಬೇಕಾದ ಎಲ್ಲ ವಸ್ತುಗಳು ಯಾತ್ರಿಕರ ಬಳಿ ಇರುವುದು ಅಗತ್ಯ. ಸ್ವೆಟರ್, ಮಂಕಿಕ್ಯಾಪ್, ಜಾಕೆಟ್, ವಾಕಿಂಗ್ ಸ್ಟಿಕ್, ವ್ಯಾಸಲಿನ್, ನಿತ್ಯ ಬಳಸುವ ಔಷಧ, ಡ್ರೖೆಫ್ರೂಟ್ಸ್, ಬಿಸ್ಕತ್, ಕೈಚೀಲ, ಅಗತ್ಯವಿರುವಷ್ಟು ಹಣ, ಎಟಿಎಂ ಕಾರ್ಡ್, ಮನೆಯ ಅಥವಾ ಸಂಬಂಧಿಕರ ದೂರವಾಣಿ ಸಂಖ್ಯೆ, ಮನೆ ವಿಳಾಸದ ಕಾರ್ಡ್, ಗುರುತಿನ ಚೀಟಿಗಳು, ಎಲ್ಲಕ್ಕಿಂತ ಮುಖ್ಯವಾಗಿ ಅಮರನಾಥ ಯಾತ್ರೆಯ ಅನುಮತಿ ಪತ್ರ... ಮುಂತಾದವುಗಳನ್ನು ಜತೆಯಲ್ಲಿ ಇಟ್ಟುಕೊಳ್ಳಬೇಕು.
ಅನುಮತಿ ಪತ್ರ: ಯಾತ್ರಿಕರಿಗೆ ಅನುಮತಿ ಪತ್ರ ಅತ್ಯಗತ್ಯ. ಅದನ್ನು ಶ್ರೀ ಅಮರನಾಥಜೀ ಶ್ರೖೆನ್ ಬೋರ್ಡ್ನಿಂದ ಆನ್ಲೈನ್ನಲ್ಲಿ ಪಡೆಯಬಹುದು. ಈಗಾಗಲೇ ಲಕ್ಷಾಂತರ ಭಕ್ತರು ಈ ಪತ್ರ ಪಡೆದಿದ್ದಾರೆ. ಅದು ಶೀತಗಾಳಿಯ ಹಿಮಾಚ್ಛಾದಿತ ಮಾರ್ಗವಾದ್ದರಿಂದ ಆರೋಗ್ಯ ಸದೃಢತೆ ಪತ್ರವನ್ನೂ ವೈದ್ಯರಿಂದ ಪಡೆದುಕೊಂಡು ಹೋಗಬೇಕು. ಅಲ್ಲಿ ಬೆಟ್ಟಗುಡ್ಡ ಏರಬೇಕಾಗುವುದರಿಂದ ಹೋಗುವ ಮೊದಲು ನಿತ್ಯವೂ ಆರೇಳು ಕಿಮೀ ನಡೆದು ಅಭ್ಯಾಸ ಮಾಡಿಕೊಳ್ಳಬೇಕು. ಎತ್ತರದ ಪ್ರದೇಶದಲ್ಲಿ ಉಸಿರಾಟದ ಸಮಸ್ಯೆ ಆಗದಿರಲೆಂದು ಮೊದಲೇ ಪ್ರಾಣಾಯಾಮ ಅಭ್ಯಾಸ ಮಾಡುವುದು ಒಳ್ಳೆಯದು.