ಕಿಶೋರಿ ತನ್ವಿತಾ ಸಾಧನೆ ಹಾದಿ: ಯೋಗ, ನಾಟ್ಯ, ಯಕ್ಷಗಾನದಲ್ಲಿ ಮಿಂಚುತ್ತಿರುವ ಪೋರಿ

Putani 2nd lead
Published on

ಇವಳ ವಯಸ್ಸು ಕೇವಲ 12. ಸಾಧನೆ ಮಾತ್ರ ಅಪಾರ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಯಲ್ಲಿ ಗೆಲುವಿನ ನಗೆ ಬೀರಿದ್ದಾಳೆ ಈ ಪೋರಿ. ಇವಳ ಮುಡಿಗೇರಿವೆ 18 ಸ್ವರ್ಣ, 4 ಬೆಳ್ಳಿ, 5 ಕಂಚಿನ ಪದಕ! ಕರ್ನಾಟಕದಾದ್ಯಂತ ವಿವಿಧ ಸಂಸ್ಥೆಗಳು ಏರ್ಪಡಿಸಿದ್ದ ಯೋಗ ಸ್ಪರ್ಧೆಗಳಲ್ಲೂ ಅಗ್ರಸ್ಥಾನ ಪಡೆದ ಕೀರ್ತಿ ಇವಳದು. ತನ್ವಿತಾ ಪಠ್ಯದ ಜತೆ ಪಠ್ಯೇತರ ವಿಷಯದಲ್ಲೂ ಮುಂದೆ ಇದ್ದಾಳೆ. ಭರತನಾಟ್ಯ, ಯಕ್ಷಗಾನವೂ ಸಿದ್ಧಿಸಿವೆ.

| ಗಣಪತಿ ಶಿರಳಗಿ ಸಾಗರ

ಶಿವಮೊಗ್ಗ ಜಿಲ್ಲೆ ಸಾಗರದ ವಸಂತಕುಮಾರ್- ಪುಷ್ಪಾ ದಂಪತಿಯ ಪುತ್ರಿ ತನ್ವಿತಾ, ಜನತಾ ಬಾಲವಿಕಾಸ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ. ಒಂದನೇ ತರಗತಿ ಓದುತ್ತಿರುವಾಗಲೇ ರಾಜ್ಯಮಟ್ಟದ ವಿಜ್ಞಾನ ಚಿಂತನ ಪರೀಕ್ಷೆಯಲ್ಲಿ ಸ್ವರ್ಣ ಪದಕ ಪಡೆದಿದ್ದಳು. ಅಲ್ಲಿಂದ ಶುರುವಾದ ಇವಳ ಸಾಧನೆಯ ಹಾದಿ ಉತ್ತುಂಗಕ್ಕೆ ಏರುತ್ತಲೇ ಇದೆ.

ಮಂಚಾಲೆ ಕಾನುಗೋಡಿನ ಶ್ರೀಧರಮೂರ್ತಿ ಮತ್ತು ಸಂಧ್ಯಾ ಬಳಿ ಯೋಗ ಕಲಿಯುತ್ತಿರುವ ತನ್ವಿತಾ, ನಾಟ್ಯಗುರು ವಿದ್ವಾನ್ ಜಿ.ಬಿ. ಜನಾರ್ದನ್ ಬಳಿ ಭರತನಾಟ್ಯ, ಪೂರ್ಣೆಶ್ ಸಾಗರ್ ಅವರಿಂದ ನೃತ್ಯ, ವೀಣಾ ಪಿ. ಕುಮಾರ್ ಅವರ ಗರಡಿಯಲ್ಲಿ ಯಕ್ಷಗಾನ ಕಲಿಯುತ್ತಿದ್ದಾಳೆ. ತನ್ವಿತಾಗೆ ಶಿಕ್ಷಕಿ ಕುಸುಮಾ ಸ್ಪೂರ್ತಿ ತುಂಬುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ, 14 ವರ್ಷದೊಳಗಿನವರ ಯೋಗಾಸನ ಸ್ಪರ್ಧೆಯಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಗೆದ್ದು, ದೊಡ್ಡಬಳ್ಳಾಪುರದ ಚಿಕ್ಕಮಧುರೆಯಲ್ಲಿ ನಡೆದ ವಿಭಾಗ ಮಟ್ಟದ ಸ್ಪರ್ಧೆಯಲ್ಲೂ ಗೆಲುವಿನ ನಗೆ ಬೀರಿ, ಬೀದರ್​ನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ಯೋಗ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ.

ಆನ್​ಲೈನ್ ಸ್ಪರ್ಧೆಯಲ್ಲೂ ಗೆಲುವು: 2020ರಲ್ಲಿ ಅರುಣಾಚಲ ಪ್ರದೇಶದ ಭಾರತೀಯ ವುಮೆನ್ ಒಲಿಂಪಿಕ್ ಅಸೋಸಿಯೇಷನ್ ನಡೆಸಿದ 14 ವರ್ಷದೊಳಗಿನ ಬಾಲಕಿಯರ ವಿಭಾಗದ ಆನ್​ಲೈನ್ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾಳೆ. ಟರ್ಕಿಯ ಇಂಟರ್​ನ್ಯಾಷನಲ್ ಯೋಗ ಒಲಿಂಪಿಕ್ ಸಂಸ್ಥೆ 2020ರ ಆಗಸ್ಟ್​ನಲ್ಲಿ ನಡೆಸಿದ ಆನ್​ಲೈನ್ ಯೋಗ ಸ್ಪರ್ಧೆಯಲ್ಲಿ 1 ಸ್ವರ್ಣ ಮತ್ತು 1 ಬೆಳ್ಳಿ ಪದಕ ಪಡೆದಿದ್ದಾಳೆ. ತಮಿಳುನಾಡಿನ ಶಿವದರ್ಶನ್ ಯೋಗ ವಿದ್ಯಾಲಯದ ಸ್ವಾಮಿ ಶಿವಾನಂದ ಸರಸ್ವತಿ ಸ್ವಾಮೀಜಿ ಜನ್ಮದಿನದ ಪ್ರಯುಕ್ತ 2020ರ ಸೆಪ್ಟೆಂಬರ್​ನಲ್ಲಿ ಏರ್ಪಡಿಸಿದ್ದ ಆನ್​ಲೈನ್ ಅಂತಾರಾಷ್ಟ್ರೀಯ ಯೋಗ ಚಾಂಪಿಯನ್​ಶಿಪ್ (11-15 ವರ್ಷದೊಳಗಿನ ಬಾಲಕಿಯರ ವಿಭಾಗ) ಸ್ಪರ್ಧೆಯಲ್ಲೂ ಚಿನ್ನದ ಪದಕ ತನ್ವಿತಾಳ ಮುಡಿಗೇರಿದೆ. ಗುಜರಾತಿನಲ್ಲಿ ನಡೆದ ‘ರಂಗೋತ್ಸವ’ ಆನ್​ಲೈನ್ (10-25 ವರ್ಷದೊಳಗಿನವರು) ಯೋಗ ಸ್ಪರ್ಧೆಯಲ್ಲೂ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಸ್ವರ್ಣ ಪದಕ ಒಲಿದಿದೆ.

ಪ್ರಶಸ್ತಿ-ಪುರಸ್ಕಾರಗಳು

  • ಸಾಗರ ನಗರಸಭೆ ಏರ್ಪಡಿಸಿದ್ದ 2018ರ ಕನ್ನಡ ರಾಜ್ಯೋತ್ಸವದಲ್ಲಿ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ
  • 2019ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ‘ಕಲಾಶ್ರೀ’ ಪ್ರಶಸ್ತಿ ನೀಡಿ ಸನ್ಮಾನ
  • ಮಂಡ್ಯದಲ್ಲಿ ಬೆಳಕು ಪಂಚ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯಮಟ್ಟದ ‘ಕಲಾರತ್ನ’ ಪುರಸ್ಕಾರ
  • ಸಾಗರ ಶಾಖೆ ಭಾರತೀಯ ಜೀವವಿಮಾ ನಿಗಮದಿಂದ 2018-19ರ ಸಾಲಿನ ‘ಅತ್ಯುತ್ತಮ ವಿದ್ಯಾರ್ಥಿನಿ ವಾರ್ಷಿಕ ಪುರಸ್ಕಾರ’
  • ಶ್ರೀಕ್ಷೇತ್ರ ಸಿಗಂದೂರಿನ ಜಾತ್ರೋತ್ಸವದಲ್ಲಿ ದೇವಾಲಯ ಆಡಳಿತ ಮಂಡಳಿಯಿಂದ ಸನ್ಮಾನ
  • ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಮೇಘಮೈತ್ರಿ ಕನ್ನಡ ಮತ್ತು ಸಾಹಿತ್ಯ ವೇದಿಕೆ ಕಮತಗಿ ಸಂಸ್ಥೆ ವತಿಯಿಂದ 2019ರಲ್ಲಿ ನಡೆದ ಮೇಘಮೈತ್ರಿ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಮೇಘಮೈತ್ರಿ ಬಾಲ ಪುರಸ್ಕಾರ’
  • ಆರ್ಟ್ ಆಫ್ ಲರ್ನಿಂಗ್ ಸಂಸ್ಥೆಯ ಆನ್​ಲೈನ್ ರಾಷ್ಟ್ರೀಯ ಮಟ್ಟದ ಯೋಗ ಚಾಂಪಿಯನ್ ಯೋಗ ನೃತ್ಯದಲ್ಲಿ ಪ್ರಥಮ ಸ್ಥಾನ
  • ನುಮಾ ಇಂಡಿಯಾ ಯೋಗ ಸಂಸ್ಥೆ ನಡೆಸಿದ ಯೋಗ ಸೂರ್ಯನಮಸ್ಕಾರದಲ್ಲಿ ಸಾಧನೆ ಮಾಡಿ ಜಾಗತಿಕ ಪುಸ್ತಕದಲ್ಲಿ ತನ್ವಿತಾಳ ಹೆಸರು ದಾಖಲು
  • ಡ್ರಾಮಾ ಜೂನಿಯರ್ಸ್ ಸೀಸನ್-3 ರಲ್ಲಿ ಅತಿಥಿ ಕಲಾವಿದೆಯಾಗಿ ಭಾಗಿ
  • ತನ್ವಿತಾ ಓದುತ್ತಿರುವ ಶಾಲೆಯಿಂದ ‘ಅಪ್ರತಿಮ ಪ್ರತಿಭಾ ಪುರಸ್ಕಾರ’
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net