ಶ್ರೇಷ್ಠ ಹಾಸ್ಯ ಸಾಹಿತಿ-ದ್ರಷ್ಟಾರ: ಇಂದು ಬೀಚಿ ಜನ್ಮದಿನ

Beechi
Published on
ಬೀಚಿ ಅವರು ಹಾಸ್ಯ ಸಾಹಿತ್ಯದ ಮೂಲಕ ಕನ್ನಡಕ್ಕೆ ಹೊಸತನ ತಂದುಕೊಟ್ಟ ಅಪ್ರತಿಮ ಲೇಖಕರು. ಹೀಗಾಗಿ, ಹಾಸ್ಯಬ್ರಹ್ಮ, ಕನ್ನಡ ಸಾಹಿತ್ಯದ ಬರ್ನಾರ್ಡ್ ಶಾ ಎಂದೇ ಕರೆಸಿಕೊಂಡರು. ಕಂದಾಚಾರ, ಮೂಢನಂಬಿಕೆ ವಿರೋಧಿಯಾಗಿದ್ದ ಬೀಚಿಯವರು ಸಮಾಜದ ಓರೆಕೋರೆಗಳನ್ನು ಹಾಸ್ಯದ ಮೂಲಕ ಜನರ ಮುಂದಿಟ್ಟರು. ಮನೆ ಮಾತು ತೆಲಗು ಭಾಷೆಯಾಗಿದ್ದರೂ ಕನ್ನಡದ ಪ್ರಾದೇಶಿಕ ಸೊಗಡನ್ನು ಕೃತಿಗಳಲ್ಲಿ ಕಟ್ಟಿಕೊಟ್ಟರು.
| ನಾರಾಯಣ ರಾಯಚೂರ್

‘ಇಲಸ್ಟ್ರೇಟೆಡ್ ವೀಕ್ಲಿ ಪತ್ರಿಕೆಯನ್ನು ಕೈಲಿ ಹಿಡಿದು ಅದರಲ್ಲಿ ಕನ್ನಡ ಪುಸ್ತಕವನ್ನು ಬಚ್ಚಿಟ್ಟು ಓದಲಾರಂಭಿಸಿದೆ. ಆರಂಭಿಸಿದುದಷ್ಟೇ ನನಗೆ ಗೊತ್ತು. ಅದೆಷ್ಟು ಬಾರಿ ಕಣ್ಣು ತೇವಗೊಂಡವೋ, ಎಷ್ಟು ಸಲ ಹೃದಯ ಮಿಡಿಯಿತೋ ಲೆಕ್ಕ ಸಿಕ್ಕಲಿಲ್ಲ. ಪುಸ್ತಕ ಮುಗಿದ ಮೇಲೆಯೇ ನನಗೆ ಎಚ್ಚರ. ಆ ಪುಸ್ತಕ ಯಾವುದು ಅಂತೀರಿ?- ಸಂಧ್ಯಾರಾಗ.’ ಕಾದಂಬರಿ ಸಾರ್ವಭೌಮ ಅ.ನ. ಕೃಷ್ಣರಾಯರ ಅನುಪಮ ಕಾದಂಬರಿ!

ಹೌದು, ಸಂಧ್ಯಾರಾಗ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲೊಂದು, ಸಂಗೀತಪ್ರಿಯರ, ಸಾಹಿತ್ಯ ಆಸಕ್ತರ ಅಚ್ಚುಮೆಚ್ಚಿನ ಕೃತಿಯೂ ಹೌದು. ಚಲನಚಿತ್ರವಾಗಿ ಡಾ. ರಾಜ್ ಅಭಿನಯದಲ್ಲಿ ಜೀವಂತಿಕೆ ಪಡೆದು ಮನೆಮಾತಾಗಿದ್ದ ಕೃತಿ ಕೂಡ. ಈ ಕಾದಂಬರಿಯ ಮರೆಯಲಾಗದ ಇನ್ನೂ ಒಂದು ಮಹತ್ತರ ಕೊಡುಗೆ ಇದೆ. ಅದುವೇ ಶ್ರೇಷ್ಠ ಹಾಸ್ಯ ಸಾಹಿತಿ-ದ್ರಷ್ಟಾರ ಬೀಚಿ.

ಇಂಗ್ಲಿಷ್ ಮೋಹದಲ್ಲಿ ಮುಳುಗಿಹೋಗಿದ್ದ ಬೀಚಿ (ಅವರು ತಮ್ಮ ಹೆಸರನ್ನು ಬ್ಚೀಜಜಿಎಂದು ಬರೆಯುತ್ತಿದ್ದುದೇ ಅವರ ಆಂಗ್ಲ ಮೋಹಕ್ಕೆ ನಿದರ್ಶನ ಎನ್ನಬಹುದು) ಅವರನ್ನು ಕನ್ನಡ ಸಾಂಸ್ಕೃತಿಕ ಲೋಕಕ್ಕೆಳೆತಂದದ್ದೇ ಸಂಧ್ಯಾರಾಗ! ಮುಂದಿನದು ಇತಿಹಾಸ; ಸುರಮ್ಯ, ಸರಸ, ವಿನೋದ ವಾಙ್ಮಯದ ಇತಿಹಾಸ!

ಅವರು ಮಾತಲ್ಲೇ ಹೇಳುವಂತೆ... ‘ಕೇವಲ ಟೂತ್​ಬ್ರಷ್​ಗೆ ಮಾತ್ರ ಹಲ್ಲು ತೋರಬೇಕು’ ಎಂದುಕೊಂಡಿದ್ದ ಕನ್ನಡಿಗರನ್ನು ಬಾಯ್ತುಂಬಾ ನಗಿಸಿ, ಕಚಗುಳಿಯಿಟ್ಟು, ವಾಸ್ತವದ ಕಟು-ಸತ್ಯ ಬಿಚ್ಚಿ ಬೆಚ್ಚಿ ಬೀಳಿಸುತ್ತ ಬಡಿದೆಬ್ಬಿಸಿದವರು ಬೀಚಿ. ಅರವತ್ತಾರು ಕೃತಿಗಳು. ಅವುಗಳಲ್ಲಿ ಮೂವತೆôದು ಕಾದಂಬರಿಗಳು, ಹಾಸ್ಯ ಬರಹ, ಹರಟೆ, ನಾಟಕಗಳು ಮತ್ತು ‘ನನ್ನ ಭಯಾಗ್ರಫಿ’ ಎಂಬ ಆತ್ಮಕತೆ. ಚುಟುಕಾದ, ಚುರುಕಾದ ಮೊನಚು ಉತ್ತರಗಳ ಉತ್ತರ ಭೂಪ, ತಿಮ್ಮ ಸರಣಿ, ಒಂದೇ ಎರಡೇ? ಕ್ಷಣ ಕ್ಷಣಕ್ಕೂ ನಕ್ಕು ಹಗುರಾಗುವ, ಚಿಂತನೆಗೆ ಹಚ್ಚುವ ಕೃತಿ-ರತ್ನಗಳನ್ನು ನೀಡಿದ್ದಾರೆ ನಮ್ಮ ಬೀಚಿ.

ಬ್ಚೀಜಜಿಯವರ ಪೂರ್ತಿ ಹೆಸರು -ಭೀಮಸೇನ ರಾಯಸಂ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಇವರ ಹುಟ್ಟೂರು. ಜನನ 23 ಏಪ್ರಿಲ್ 1913. ಇಂದು ಅವರು ನಮ್ಮೊಂದಿಗೆ ಭೌತಿಕವಾಗಿ ಇದ್ದಿದ್ದರೆ ನೂರಾಹತ್ತನೆಯ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಈಗಲೂ ಸಂಭ್ರಮಿಸೋಣ, ಅವರ ಕೃತಿಗಳ ರೂಪದಲ್ಲಿ ನಮ್ಮೊಂದಿಗಿದ್ದೇ ಇದ್ದಾರಲ್ಲ! ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ಬಡತನವಂತೂ ಇದ್ದೇ ಇತ್ತು. ಹಾಗೂಹೀಗೂ ಎಸ್​ಎಸ್​ಎಲ್​ಸಿ ಪೂರೈಸಿ ಪೊಲೀಸ್ ಇಲಾಖೆಯಲ್ಲಿ ಅಟೆಂಡರ್ ಕೆಲಸ ಗಿಟ್ಟಿಸಿಕೊಂಡರು. ಬಳ್ಳಾರಿಯಿಂದ ಬೆಂಗಳೂರಿಗೂ ಬಂದರು. ತಮ್ಮ ಗುರು ಅ.ನ.ಕೃ. ಮಾ-ಹಿರಣ್ಣಯ್ಯ, ನಾಡಿಗೇರ್ ಕೃಷ್ಣರಾಯರು ಹೀಗೆ ಹಲವರ ಒಡನಾಟದಿಂದ ಹಾಸ್ಯ ಲೇಖನ ಕೃಷಿ ಮುಂದುವರಿಸಿದರು. ಆ ಕಾಲದ ಪಾಂಡಿತ್ಯ ಪ್ರತಿಭೆಗಳಾದ ಶ್ರೀರಂಗ (ಅವರ ‘ವಿಶ್ವಾಮಿತ್ರ’), ಜಿ.ಪಿ.ರಾಜರತ್ನಂ (ರತ್ನನ ಪದಗಳು), ಕೆ.ವಿ.ಐಯ್ಯರ್ (ರೂಪದರ್ಶಿ), ಡಿವಿಜಿ ಅವರ ಮಂಕುತಿಮ್ಮನ ಕಗ್ಗಗಳಿಂದ ಅಪಾರ ಪ್ರೇರಣೆಯನ್ನೂ ಪಡೆದರು.

ಬೀಚಿಯವರ ಒಂದು ಕೃತಿ- ‘ದೇವರ ಆತ್ಮಹತ್ಯೆ’ ದಿಗಿಲುಂಟು ಮಾಡಿದ ಪ್ರಸಂಗ ಹಾಗೂ ‘ಬಳ್ಳಾರಿ ರಾಘವಾಚಾರ್ಯರಂತಹ ಅಪ್ರತಿಮ ರಂಗ ಕರ್ವಿು/ ವಕೀಲರ ನೆರವು ಸಿಗದೇ ಹೋಗಿದ್ದರೆ ಈ ಬೀಚಿ ಎಂದೋ ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದ’ ಎಂದೇ ಸ್ಮರಿಸಿಕೊಂಡಿದ್ದಾರೆ ಬೀಚಿ. ಆ ದಿನಗಳಲ್ಲೇ ಇವರ ಬಂಡಾಯ-ಪ್ರವೃತ್ತಿ ಇವರಿಗೆ ಹೆಸರಿನ ಜತೆಗೆ ಶತ್ರುಗಳನ್ನೂ ತಂದಿತ್ತೆಂಬುದು ಅಚ್ಚರಿಯ ವಿಷಯವೇನಲ್ಲ. ಮುಂದೆ ಜೀವನದ ನಡುದಾರಿಯಲ್ಲಿ ಹದಿಹರೆಯದ ಮಗನನ್ನು ಕಳೆದುಕೊಂಡಾಗಲೂ ಆತ್ಮಹತ್ಯೆಯ ಭೂತ ಎದುರಾಗಿತ್ತು; ಹೆಂಡತಿ ಸೀತಾಬಾಯಿಯವರ ಧೈರ್ಯ ತುಂಬುವಿಕೆ, ಆ ಕ್ರೂರ, ಕಠೋರ ನಿರ್ಧಾರದಿಂದ ಹೊರಬರಲು ಸಾಕಷ್ಟು ಸಹಕಾರ ನೀಡಿತು. ಕೆಟ್ಟ ಘಳಿಗೆ ಮಾಯವಾಯಿತು. ಆಗಲೇ ಅವರು ಬರೆಯುತ್ತಾರೆ-

‘ಮಾನವನ ಬಾಳು ಗೋಪುರದ ಗಡಿಯಾರ. ತಲೆ ಎತ್ತಿದರೆ ಮಾತ್ರ ಕಾಣುತ್ತದೆ. ಎತ್ತಲು ತಲೆ ಎಂಬುದೊಂದುಬೇಕು. ಎತ್ತಬೇಕು ಅಂಬುದು ಅದಕ್ಕೆ ತೋಚಬೇಕು, ಅಲ್ಲವೇ? ಅದಕ್ಕಾಗಿ ಮನುಷ್ಯನೆಂಬ ಪ್ರಾಣಿ ಊರ್ಧ್ವಮುಖಿ.’ ಹಾಗೆಯೇ ಅವರ ಈ ಮಾತೂ ಇಲ್ಲಿ ಹೆಚ್ಚು ಪ್ರಸ್ತುತ- ‘ಮನೆ ನಿಂತಿರುವುದು ಹೆಂಡತಿಯಿಂದ, ಅದು ಬಿದ್ದರೆ? ಗಂಡನ ತಲೆ ಮೇಲೇ!’

ಅವರ ಮೊದಲ ಕಾದಂಬರಿ ದಾಸ ಕೂಟ; ಇನ್ನುಳಿದಂತೆ ಬೆಳ್ಳಿ ತಿಂಮ ನೂರೆಂಟು ಹೇಳಿದ, ತಿಂಮನ ತಲೆ, ತಿಂಮಾಯಣ, ಅಂದನಾ ತಿಂಮ, ತಿಂಮ ರಸಾಯನ, ತಿಂಮ ಸತ್ತಾಗ, ತಿಮ್ಮಿಕ್ಷನರಿ, ಹೀಗೆ ಸಾಗುತ್ತದೆ ತಿಮ್ಮ-ಸರಣಿ. ಇಲ್ಲಿನ ಒಂದೊಂದು ಪ್ರಸಂಗಗಳೂ ಇಂದಿಗೂ ಮತ್ತೆ, ಮತ್ತೆ ಚಪ್ಪರಿಸಬಲ್ಲ ಗುಣವುಳ್ಳ ಹಾಸ್ಯ ರಸ-ಪಾಕಗಳು. ಒಂದು ಸ್ಯಾಂಪಲ್- ಒಮ್ಮೆ ತಿಮ್ಮ ಶಾಲೆಗೆ ಬಹಳ ತಡವಾಗಿ ಹೋದ. ಗುರುಗಳು, ‘ಏಕೋ ತಿಮ್ಮ ಶಾಲೆಗೆ ಲೇಟು?’ ತಿಮ್ಮ, ‘ಹೌದು ಗುರುಗಳೆ ಲೇಟಾಯ್ತು.’ ಅದೇ ಯಾಕೆ ಲೇಟಾಯ್ತು? ಎಂಬುದು ಗುರುಗಳ ಮರು ಪ್ರಶ್ನೆ. ‘ಏನಿಲ್ಲಾ ಗುರುಗಳೇ ನಿನ್ನೆ ನಮ್ಮ ಮನೆ ಹತ್ತಿರ ಭಾರಿ ಮಳೆಯಾಗಿ ರಸ್ತೆಯಲ್ಲೆಲ್ಲಾ ಕೆಸರೋ ಕೆಸರು. ಒಂದು ಹೆಜ್ಜೆ ಮುಂದೆ ಇಟ್ರೆ, ಜಾರಿ ಎರಡು ಹೆಜ್ಜೆ ಹಿಂದೆ ಹೋಗ್ತಿದ್ದೆ; ಹಾಗಾಗಿ ಶಾಲೆಗೆ ಬರೋದು ತಡವಾಯ್ತು.’ ಆದರೆ, ಗುರುಗಳು ಬಿಡಬೇಕಲ್ಲ, ಒಂದು ಹೆಜ್ಜೆ ಮುಂದೆ ಇಟ್ರೆ ಎರಡು ಹೆಜ್ಜೆ ಹಿಂದೆ ಹೋಗ್ತಿದ್ದೀಯಲ್ಲ, ಹಾಗಾದ್ರೆ ಶಾಲೆಗೆ ಹ್ಯಾಗ್ ಬಂದೆ? ತಿಮ್ಮನ ಉತ್ತರ ಸಿದ್ಧವಿತ್ತು, ‘ಅದಕ್ಕೇ ಗುರುಗಳೇ ಶಾಲೆ ಕಡೆಗೆ ಬೆನ್ನು ಮಾಡಿ ಮನೆ ಕಡೆ ಹೆಜ್ಜೆ ಹಾಕ್ತಿದ್ದೆ.’ ಆಲ್ಲಿಗೆ ತಿಂಮನ ಗುರುಗಳು ಸುಸ್ತೋ, ಸುಸ್ತು.

ಸುಧಾ ವಾರಪತ್ರಿಕೆಯ ‘ನೀವು ಕೇಳಿದಿರಿ?’ ಅಂಕಣದಲ್ಲಿ ಅವರು ನೀಡುತ್ತಿದ್ದ ಉತ್ತರಗಳು ಬಲು ಮಾರ್ವಿುಕ. ‘ಉತ್ತರ ಭೂಪ’ ಎಂಬ ಸಂಗ್ರಹಯೋಗ್ಯ ಕೃತಿಯಾಗಿ ಇಂದಿಗೂ ಮರು ಮುದ್ರಣ ಕಾಣುತ್ತಲೇ ತನ್ನ ಸತ್ವ-ಶಕ್ತಿಗಳನ್ನು ತೋರ್ಪಡಿಸಿದ ಕೃತಿ ಇದು. ಅದರಲ್ಲಿನ ಕೆಲವು ಝುಲಕಗಳು ಇಲ್ಲಿವೆ.

  • ಜೀವನವು ಬಸ್ಸಿನ ಪ್ರಯಾಣವಿದ್ದಂತೆ, ಓಡುವಾಗ ಗಾಳಿ ಬಹಳ, ನಿಂತಾಗ ವಿಪರೀತ ಸೆಕೆ..
  • ದುಡಿಯದೇ ಇರುವ ಪ್ರತಿಯೊಬ್ಬ ಶ್ರೀಮಂತನು ಭಿಕ್ಷುಕನೆ.
  • ಸಾಹಿತ್ಯವು ಶ್ರೀಮಂತರಿಗೆ ಕಥೆಯನ್ನು ಕೊಡುತ್ತದೆ, ಬಡತನವು ಸಾಹಿತ್ಯಕ್ಕೆ ಕಥೆಯನ್ನು ಕೊಡುತ್ತದೆ.
  • ಎಮ್ಮೆಗು ಎಂಎಲ್​ಎಗೂ ಏನು ವ್ಯತ್ಯಾಸ? ಎಮ್ಮೆ ತಿರುಗಾಡಿ ಮೇಯುತ್ತದೆ. ಎಂಎಲ್​ಎ ಕುಳಿತಲ್ಲೇ ಮೇಯುತ್ತಾನೆ...
  • ಗೆಳೆಯನನ್ನು ಉಪ್ಪಿನಂತೆ ಬಳಸಿಕೊಳ್ಳಬೇಕು, ಸಕ್ಕರೆಯಂತೆ ಸುರುವಿಕೊಳ್ಳಬಾರದು.

ಸಮಾಜದ ಓರೆ -ಕೋರೆಗಳನ್ನು, ಆಚರಣೆಗಳನ್ನು, ಮೂಢ ನಂಬಿಕೆಗಳನ್ನು ಪ್ರಶ್ನಿಸುತ್ತ ವೈಚಾರಿಕ ಚಿಂತನೆಯನ್ನು ಬಿತ್ತುತ್ತಾ ತಾವೂ ಬೆಳೆಯುತ್ತ ಹಾಸ್ಯ, ವಿಡಂಬನೆಯ ಚಾಟಿಯಿಂದ ಎಚ್ಚರಿಸುತ್ತಾ ಸಾಗಿದ ಬೀಚಿ ಅವರು ನಮ್ಮನ್ನಗಲಿ (1980) ನಾಲ್ಕು ದಶಕಗಳು ಮೀರಿರಬಹುದಾದರೂ ಅವರ ವಿಷಯ-ವಿಚಾರಗಳು,‘ತಿಮ್ಮ’ ನಮ್ಮೊಂದಿಗೆ ಅನುದಿನವೂ ಸಾಗಿಯೇ ಬರುತ್ತಿರುತ್ತವೆ. ಅವರ ಬದುಕು-ಬರಹ, ಸಾಧನೆ ಕುರಿತ ನಾಟಕ, ಸಾಮಾಜಿಕ ಜಾಲತಾಣಗಳಲ್ಲಿ ತುಣುಕುಗಳು, ಝುಲಕ್​ಗಳು ಕಚಗುಳಿ ಇಡುತ್ತ ಬಡಿದೆಬ್ಬಿಸುತ್ತಲೇ ಇರುತ್ತವೆ. ಹಾಸ್ಯ ಹುಟ್ಟಿದಾಗೆಲ್ಲಾ; ಹುಟ್ಟಿದಲ್ಲೆಲ್ಲಾ ಅವರ ಹುಟ್ಟು-ಹಬ್ಬವೇ!!

(ಲೇಖಕರು ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net