

ಬದುಕಿನ ಬಗೆಗಿನ ಭರವಸೆಯನ್ನು ನಾವು ಕಳೆದುಕೊಳ್ಳುವಂತಿಲ್ಲ. ಹಾಗೊಮ್ಮೆ ಕಳೆದುಕೊಂಡರೆ ಬದುಕಿಗೆ ಅರ್ಥವಿದೆಯೆ? ಕೆ.ಎಸ್.ನರಸಿಂಹಸ್ವಾಮಿಯವರು ಹೇಳುವಂತೆ ಸಾವು ಬದುಕಿನ ಕೊನೆಯಲ್ಲ; ಹಾಗೆಯೇ ಬದುಕಿನ ಎಲ್ಲ ಸವಾಲುಗಳಿಗೆ ಸಾವೇ ಪರಿಹಾರವೂ ಅಲ್ಲ. ಆದ್ದರಿಂದ ನಾವು ಸಾವನ್ನಷ್ಟೇ ಅಲ್ಲದೆ ಬದುಕನ್ನೂ ಕೂಡ, ಅದು ಎಷ್ಟೇ ಘೊರವಾಗಿದ್ದರೂ, ಅಸಹನೀಯವೆನ್ನಿಸಿದರೂ ಎದುರಿಸಲೇಬೇಕು. ಕಗ್ಗತ್ತಲೆಯ ದಾರಿಯುದ್ದಕೂ ಬೆಳಕು ಅಲ್ಲಲ್ಲಿ ಕಾಣುತಿದೆ. ತಲೆ ತುಂಬ ಹೂವು; ಕಣ್ತುಂಬ ಕಂಬನಿ, ಇದು ಬದುಕು; ಬೇಲಿಯುದ್ದಕು ಹೂವು, ಅದರ ಕೆಳಗೇ ಮುಳ್ಳು; ಹೆಜ್ಜೆಯಿಡಬೇಕು ಜೋಪಾನವಾಗಿ. ‘ನೊಂದ ನೋವನ್ನಷ್ಟೆ ಹಾಡಲೇಬೇಕೇನು, ಬೇಡವೇ ಯಾರಿಗೂ ಸಿರಿಮಲ್ಲಿಗೆ?’. ಹಾಗೆಂದು ರೋಮ್ ಹೊತ್ತಿ ಉರಿಯುತ್ತಿರುವಾಗ ಪಿಯಾನೋ ನುಡಿಸಬೇಕೆಂದಲ್ಲ. ನೋವಿನಾಚೆಗೂ ಬದುಕಿದೆ ಎಂಬ ಅರಿವು ನಮಗಿರಬೇಕು.
ಪ್ರಖ್ಯಾತ ಪರ್ಷಿಯನ್ ಕವಿ ಷೇಕ್ಸಾದಿಯನ್ನು ಮಾನವೀಯತೆ ಎಂದರೇನು ಎಂದು ಕೇಳಿದಾಗ ಆತ ಹೇಳಿದನಂತೆ: ‘ನನಗೆ ಬೇರೆಯವರ ಕಣ್ಣೀರನ್ನು ಒರೆಸಲಾಗದಿರಬಹುದು, ಆದರೆ ಕಣ್ಣೀರು ಬರುವಂತೆ ನಡೆದುಕೊಳ್ಳಲಾರೆ; ಕತ್ತಲಿನಲ್ಲಿರುವವರ ಮನೆಯಲ್ಲಿ ದೀಪ ಹಚ್ಚಿ ಬೆಳಕು ನೀಡುವ ಶಕ್ತಿ ನನಗಿಲ್ಲ, ನಿಜ, ಆದರೆ ಇರುವ ದೀಪವನ್ನು ಆರಿಸಲಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಲಾಗದಿರಬಹುದು, ಆದರೆ ಯಾರಿಗೂ ಅನಗತ್ಯ ಕಷ್ಟ ತೊಂದರೆ ಉಂಟುಮಾಡಲಾರೆ’. ಮಾನವೀಯತೆಯ ಪರಿಕಲ್ಪನೆಯನ್ನು ಇದಕ್ಕಿಂತ ಸಮರ್ಥವಾಗಿ ವಿವರಿಸುವುದು ಕಷ್ಟ. ಕರೊನಾದ ಸಂದರ್ಭದಲ್ಲಿ ನಮ್ಮ ಸಮಾಜ ಅತ್ಯಂತ ಅಮಾನವೀಯವಾಗಿ ನಡೆದುಕೊಂಡದ್ದು ನೋವಿನ ಸಂಗತಿ. ನೋವಿಗೆ ಮಿಡಿದ ಹೃದಯಗಳು ಇಲ್ಲವೆಂದಲ್ಲ. ಆದರೆ ಸಾಮಾನ್ಯಜನರ ನೋವು ಸಂಕಟಗಳನ್ನೂ ಆದಾಯ ತರುವ ಒಂದು ದಂಧೆಯಾಗಿ ಮಾಡಿಕೊಂಡು ಅನೇಕರ ಸಾವಿಗೆ ಕಾರಣವಾದ ಸಮಾಜದ ಈ ಕ್ರೌರ್ಯ ಸಂವೇದನಾಶೀಲರೆಲ್ಲರೂ ತಲೆತಗ್ಗಿಸಬೇಕಾದ ಸಂಗತಿ. ‘ದಯವಿಲ್ಲದ ಧರ್ಮ ಅದಾವುದಯ್ಯ?’; ಬೆಡ್ ಕೊಡಿಸಲು, ಆಕ್ಸಿಜನ್ ಪಡೆಯಲು, ಮಾತ್ರೆ-ಇಂಜೆಕ್ಷನ್ ಎಲ್ಲದಕ್ಕೂ ಲಂಚ ನೀಡಬೇಕಾಯಿತೆನ್ನುವ ಸ್ಥಿತಿಯೇ ಅಸಹ್ಯಕರ. ಸರ್ಕಾರದ ಆಡಳಿತಕ್ಕೆ ಇದು ಕನ್ನಡಿ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ರೂಢಿಯ ಮಾತಿಗೆ ಅರ್ಥವಿದೆಯೇ? ಭವ್ಯವಾದ ಕಲ್ಲುಕಟ್ಟಡ ‘ವಿಧಾನಸೌಧ’ದಲ್ಲಿರುವ ಮಂದಿಗೆ ಹೃದಯವಿರುವುದು ನಿಜವೆನ್ನುವುದಾದರೆ ಇಂತಹ ಅಮಾನವೀಯ ಕ್ರೌರ್ಯವನ್ನು ನಿಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿ. ಇದು ಮನುಷ್ಯತ್ವದ ಕರ್ತವ್ಯವೆಂದು ಅವರು ಮನಗಾಣಲಿ. ಅಥವಾ ಆ ಕಟ್ಟಡದೊಳಗೆ ಪ್ರವೇಶಿಸಿದ ನಂತರ ಅಲ್ಪಸ್ವಲ್ಪ ಮನುಷ್ಯತ್ವ ಇರುವವರಲ್ಲಿಯೂ ಮಾನವೀಯತೆ ತನಗೆ ತಾನೇ ಸಾಯುತ್ತದೆಯೋ ಎಂಬ ಅನುಮಾನವೂ ಕಾಡುತ್ತದೆ. ಅಧಿಕಾರದ ಸ್ವರೂಪವೇ ಹಾಗೆ!
ಕರೊನಾದ ಭೀಕರ ಅಟ್ಟಹಾಸ ಅನೇಕ ನೆಲೆಗಳಲ್ಲಿ ನಮ್ಮ ಜೀವ ಹಿಂಡಿ ಹಿಪ್ಪೆ ಮಾಡಿರುವುದು ನಿಜವಾದರೂ ನಮ್ಮ ಸಾಮಾಜಿಕ ವ್ಯವಸ್ಥೆಯ ಮೂರು ವಲಯಗಳ ಬಗ್ಗೆ - ಪರಿಸರ, ಶಿಕ್ಷಣ ಹಾಗೂ ಆರೋಗ್ಯ - ಮರುಚಿಂತಿಸಲು ನಮ್ಮನ್ನು ಒತ್ತಾಯಿಸುತ್ತಿದೆ.
ನಾವು ಚಿಕ್ಕವರಿದ್ದಾಗ ನೀರು ಮಾರಾಟವಾಗುತ್ತದೆನ್ನುವ ಸಂಗತಿಯೇ ಭಯಾನಕ ಪರಿಕಲ್ಪನೆಯಾಗಿತ್ತು. ನಮ್ಮ ಹಳ್ಳಿಗಳಲ್ಲಿ ಬಾವಿ ತೋಡುವುದಿರಲಿ, ಆಟವಾಡಲು ಕೊಂಚ ಗುಂಡಿ ತೋಡಿದರೇ ನೀರು ಚಿಮ್ಮುತ್ತಿತ್ತು. ಅರವತ್ತರ ದಶಕದಲ್ಲಿ ಭೀಕರ ಬರ ಬಂದಾಗಲೂ ಕುಡಿಯುವ ನೀರಿಗೆ ತೊಂದರೆ ಇರಲಿಲ್ಲ. ಈಗ ಹಾಲಿನಂತೆಯೇ ನೀರನ್ನೂ ಕೊಳ್ಳುವ ಪರಿಸ್ಥಿತಿ ನಿರ್ವಣವಾಗಿದೆ. ನೀರು ಹೀಗೆ ಮಾರಾಟವಾಗಲು ಆರಂಭವಾದಾಗ ಮುಂದೆ ಉಸಿರಾಡುವ ಗಾಳಿಯನ್ನು ಸಣ್ಣ ಸಿಲಿಂಡರಿನಲ್ಲಿ ಬೆನ್ನಿಗೆ ಕಟ್ಟಿಕೊಂಡು ಓಡಾಡುವ ಸನ್ನಿವೇಶ ಬರುತ್ತದೆ ಎಂದು ತಮಾಷೆ ಮಾಡುತ್ತಿದ್ದೆವು. ಈಗ ಉಸಿರಾಡಲು ಆಮ್ಲಜನಕ ಸಿಗದೆ ಜನರು ಸಾಯುವ ಸ್ಥಿತಿ ನಿರ್ಮಾಣವಾಗಿದೆ.
‘ಆಹಾರವೇ ಔಷಧಿಯಾಗಬೇಕೆ ಹೊರತು ಔಷಧಿ ಆಹಾರವಾಗಬಾರದು’ ಎಂಬುದು ರೂಢಿಮಾತು. ಈಗ ಔಷಧಿಯನ್ನೇ ಆಹಾರವೆಂಬಂತೆ ಬಳಸುತ್ತಿದ್ದೇವೆ. ಬದುಕಿನಲ್ಲಿ ಒಬ್ಬರು ಒಂದು ಮರವನ್ನಾದರೂ ನೆಡಬೇಕು ಎಂಬುದು ನಮ್ಮ ಹಳ್ಳಿಗಳಲ್ಲಿ ಪ್ರಚಲಿತವಿದ್ದ ಸಂಪ್ರದಾಯ. ಅದರ ಫಲವೆಂಬಂತೆ ಎಲ್ಲ ಕಾಲದಲ್ಲಿಯೂ ಬೇರೆ ಬೇರೆ ಹಣ್ಣುಗಳು ಸಮೃದ್ಧವಾಗಿ ಸಿಗುತ್ತಿತ್ತು. ನಮಗಿಂತ ಹೆಚ್ಚಾಗಿ ಪಕ್ಷಿಗಳು ಅವುಗಳನ್ನು ತಿನ್ನುತ್ತಿದ್ದವು. ಸಮೃದ್ಧವಾಗಿ ಆಮ್ಲಜನಕ ನೀಡುತ್ತಿದ್ದ ಮರಗಳಿಗೆ ಕೊಡಲಿ ಹಾಕಿದೆವು. ಒಂದು ಕಡೆ ಅರಣ್ಯ ನಾಶ, ಮತ್ತೊಂದು ಕಡೆ ಕಾಂಕ್ರೀಟ್ ಕಾಡಿನ ಸೃಷ್ಟಿ, ಮಗದೊಂದು ಕಡೆ ಕ್ರಿಮಿನಾಶಕ ಬಳಸಿ ತಿನ್ನುವ ಆಹಾರವನ್ನೇ ವಿಷಮಯವಾಗಿಸುವ ವಾಣಿಜ್ಯ ದೃಷ್ಟಿ-ಇವೆಲ್ಲವೂ ನಮ್ಮನ್ನು ಈ ಸ್ಥಿತಿಗೆ ತಂದು ನಿಲ್ಲಿಸಿವೆ. ಈಗ ಕಾಡುತ್ತಿರುವ ಕರೊನಾ ಹಾಗಿರಲಿ, ಸಮಾಜಕ್ಕೇ ಭ್ರಷ್ಟತೆಯ, ದುರಾಸೆಯ ರೋಗ ತಗುಲಿದೆ; ರೋಗ ನಿರೋಧಕ ಶಕ್ತಿಯನ್ನು ಸಮಾಜವೇ ಕಳೆದುಕೊಂಡಿದೆ. ಪರಿಸರ ರಕ್ಷಣೆ ರೋಗನಿರೋಧಕ ವಜ್ರಕವಚವೆಂಬುದನ್ನು ನಾವು ಈಗಲಾದರೂ ಮನಗಾಣಬೇಕಿದೆ.
ಒಂದು ಕಾಲಕ್ಕೆ ಶಿಕ್ಷಣ ಹಾಗೂ ಆರೋಗ್ಯ ಸೇವಾವಲಯಗಳಾಗಿದ್ದವು. ವ್ಯಾಪಾರದ ಉದ್ದೇಶದಿಂದ ನಮ್ಮಲ್ಲಿಗೆ ಬಂದ ಬ್ರಿಟೀಷರು ಕ್ರಮೇಣ ನಮ್ಮ ಬದುಕಿನಾಳಕ್ಕೆ ಪ್ರವೇಶ ಮಾಡಲು ಮೊದಲಿಗೆ ಆಯ್ಕೆ ಮಾಡಿಕೊಂಡದ್ದು ಇವೆರಡು ಕ್ಷೇತ್ರಗಳನ್ನೇ. ಈಗಲೂ ಈ ವಲಯಗಳಲ್ಲಿ ಕ್ರಿಶ್ಚಿಯನ್ ಸಂಸ್ಥೆಗಳ ಪ್ರಾಮುಖ್ಯತೆಯನ್ನು ಅಲ್ಲಗಳೆಯಲಾಗದು. ಮನೆಯ ಎಲ್ಲರೂ ಆರೋಗ್ಯವಾಗಿರಬೇಕು; ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು- ಇದು ಎಲ್ಲರ ಅಪೇಕ್ಷೆ. ಬ್ರಿಟೀಷರು ಇದನ್ನು ಅರ್ಥಮಾಡಿಕೊಂಡು, ಈ ವಲಯಗಳಿಗೆ ವಿಶೇಷ ಪ್ರಾಧಾನ್ಯತೆ ನೀಡಿ, ಕ್ರಮೇಣ ನಮ್ಮ ಸಾಮಾಜಿಕ ರಚನೆಯ ವಿನ್ಯಾಸವನ್ನೇ ಬದಲಿಸಿಬಿಟ್ಟರು. ಈಗ ನಾವೆಲ್ಲರೂ ಹೇಗೆ ‘ವಸಾಹತುಶಿಶು’ಗಳಾಗಿ, ನಮಗೆ ನಾವೇ ‘ಆತ್ಮೀಯಶತ್ರು’ ಗಳಾಗಿ ರೂಪಾಂತರವಾಗಿದ್ದೇವೆಂಬುದನ್ನು ವಿವರಿಸುವ ಅಗತ್ಯವಿಲ್ಲ.
ನಮ್ಮ ಕಾಲದ ದುರಂತವೆಂದರೆ ಒಂದು ಕಾಲಕ್ಕೆ ಸೇವಾವಲಯದಲ್ಲಿದ್ದ ಈ ಎರಡೂ ಕ್ಷೇತ್ರಗಳು ‘ಉದ್ಯಮ’ವಾಗಿ ರೂಪಾಂತರವಾದದ್ದು. ಉದ್ಯಮದ ಮೂಲ ಆಶಯವೇ ಹಣಸಂಪಾದನೆ. ಆರೋಗ್ಯ ಹಾಗೂ ಶಿಕ್ಷಣ ಎಲ್ಲರ ಅಗತ್ಯವಾದುದರಿಂದ ಪ್ರತಿಯೊಬ್ಬರೂ ಇದನ್ನು ಪಡೆಯಲು ‘ಕೇಳಿದಷ್ಟು’ ಹಣವನ್ನು ‘ಅನಿವಾರ್ಯ’ವಾಗಿ ಸಂದಾಯ ಮಾಡಿಯೇ ಮಾಡುತ್ತಾರೆ. ವ್ಯಾಪಾರದಲ್ಲಿ ಚೌಕಾಸಿ ಮಾಡುವುದು ಎಲ್ಲ ಕಡೆ ರೂಢಿ. ಆದರೆ ಚೌಕಾಸಿಯಿಲ್ಲದ ವ್ಯಾಪಾರವೆಂದರೆ ಆರೋಗ್ಯ ಹಾಗೂ ಶಿಕ್ಷಣ. ನಮ್ಮ ಜನಪ್ರತಿನಿಧಿಗಳೆಲ್ಲರ ಆದಾಯದ ಮೂಲದಲ್ಲಿ ಈ ‘ಉದ್ಯಮ’ಗಳಿವೆ. ಆದ್ದರಿಂದಲೇ ಇಲ್ಲಿ ನಿಯಂತ್ರಣ ಅಸಾಧ್ಯ.
ವಾಸ್ತವವಾಗಿ ಈ ಎರಡೂ ಕ್ಷೇತ್ರಗಳಲ್ಲಿ ಪರಿಣತರ ಪಾತ್ರ ಅತ್ಯಂತ ಮುಖ್ಯ. ಒಳ್ಳೆಯ ಅಧ್ಯಾಪಕ ನಮ್ಮ ಮಕ್ಕಳ ವ್ಯಕ್ತಿತ್ವ, ಭವಿಷ್ಯವನ್ನು ರೂಪಿಸುವುದರ ಮೂಲಕ ಸಾಮಾಜಿಕ ಆರೋಗ್ಯವನ್ನು ಕಾಪಾಡಿದರೆ, ಒಳ್ಳೆಯ ವೈದ್ಯ ನಮ್ಮ ದೇಹವನ್ನು ಸದೃಢವಾಗಿಡುವುದರ ಮೂಲಕ ಸಮಾಜದ ಚೈತನ್ಯವನ್ನು, ಕ್ರಿಯಾಶೀಲತೆಯನ್ನು ರಕ್ಷಿಸುತ್ತಾನೆ. ಆದರೆ ಇವರಿಬ್ಬರೂ ಇಂದು ದನಿಯಿಲ್ಲದ ದುಡಿಮೆಗಾರರು ಮಾತ್ರವಾಗಿದ್ದಾರೆ. ರೋಗಿ ಯಾವ ಬಗೆಯ ಚಿಕಿತ್ಸೆ ಪಡೆಯಬೇಕು, ಯಾವ ಔಷಧಿ ತೆಗೆದುಕೊಳ್ಳಬೇಕು ಎಂದು ನಿರ್ಧಾರ ಮಾಡುವವರು ಪರಿಣತ ವೈದ್ಯರಲ್ಲ, ಬದಲಿಗೆ ಅವರನ್ನು ನಿಯಂತ್ರಿಸುತ್ತಿರುವ ಉದ್ಯಮಿ ಬಂಡವಾಳಶಾಹಿಗಳು. ಹಾಗೆಯೇ ನಮ್ಮ ಮಕ್ಕಳು ಯಾವ ಬಗೆಯ ಶಿಕ್ಷಣ ಪಡೆಯಬೇಕೆಂದು ನಿರ್ಧರಿಸುತ್ತಿರುವವರು ಪರಿಣತ ಶಿಕ್ಷಣತಜ್ಞರಲ್ಲ, ಬದಲಿಗೆ ಶಿಕ್ಷಣ ಕ್ಷೇತ್ರದ ನೀತಿನಿಯಮಗಳನ್ನು ಜನಪ್ರತಿನಿಧಿಗಳ ಮೂಲಕ ರೂಪಿಸುತ್ತಿರುವ ಬಂಡವಾಳಶಾಹಿಗಳು. ಇದು ಸಮಸ್ಯೆಯ ಒಂದು ಮುಖವಾದರೆ, ಇದರ ಇನ್ನೊಂದು ಮುಖ ಇನ್ನೂ ಭೀಕರ.
ಹಾಗೆ ನೋಡಿದರೆ ನಮ್ಮ ಸರ್ಕಾರಿ ಶಾಲಾ ಕಾಲೇಜುಗಳು ಹಾಗೂ ಆಸ್ಪತ್ರೆಗಳಿಗೆ ವೆಚ್ಚ ಮಾಡುವ ಹಣ ಕಡಿಮೆಯೇನಲ್ಲ; ಆದರೆ ಅಲ್ಲಿ ನಿರ್ವಹಣೆಯ ಕೊರತೆ. ಇದೇನು ಆಡಳಿತದ ಅದಕ್ಷತೆಯೋ, ಅಥವಾ ಖಾಸಗಿಯವರಿಗೆ ಅನುಕೂಲ ಕಲ್ಪಿಸಿಕೊಡುವ ಒಳಉದ್ದೇಶದ ನಿರ್ಲಕ್ಷ್ಯವೋ ಎನ್ನುವುದು ಯಕ್ಷಪ್ರಶ್ನೆಯೇನಲ್ಲ! ಸರ್ಕಾರಿ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾದರೆ ಖಾಸಗಿ ಸಂಸ್ಥೆಗಳ ಸುಲಿಗೆ ಸಹಜವಾಗಿಯೇ ನಿಯಂತ್ರಣಕ್ಕೆ ಬರುತ್ತದೆ. ಆದರೆ ಆಡಳಿತದಲ್ಲಿರುವವರೇ ಅಲ್ಲಿಯೂ ಪಾಲುದಾರರಾದ್ದರಿಂದ ಇಲ್ಲಿಯ ಸಮರ್ಪಕ ಯಶಸ್ವೀ ನಿರ್ವಹಣೆ ಅವರಿಗೆ ಬೇಕಿಲ್ಲ; ಜೊತೆಗೆ ಇಲ್ಲಿಯೂ ಅವರ ಪಾಲು ಸಂದಾಯವಾದರೆ ಹೇಗೆ ನಡೆದರೇನು?
ಈ ವಿಷವ್ಯೂಹದಲ್ಲಿ ನಾವೆಲ್ಲರೂ ಒಂದಲ್ಲ ಒಂದು ರೀತಿ ಪರೋಕ್ಷವಾಗಿ ಪಾಲುದಾರರೇ ಆದ್ದರಿಂದ ದಿವ್ಯಮೌನಕ್ಕೆ ಶರಣಾಗಿದ್ದೇವೆ. ಈ ಪರಿಸ್ಥಿತಿ ಬದಲಾಗಬೇಕೆಂದರೆ ಒಂದೇ ದಾರಿ- ಜನಪರ ಚಳುವಳಿ; ಸಾಮಾನ್ಯಜನರು ಸಿಡಿದೆದ್ದು ನಿಲ್ಲುವುದು. ಅಂತಹ ಚಳುವಳಿಗೆ ಕರೊನಾ ಪ್ರೇರಣೆ ಒದಗಿಸಿದರೆ- ಕರೊನಾ ತಂದೊಡ್ಡಿರುವ ಎಲ್ಲ ಆಘಾತಗಳ ನಡುವೆಯೂ ಅದೊಂದು ಇತ್ಯಾತ್ಮಕ ಪರಿಣಾಮ.
(ಲೇಖಕರು ಖ್ಯಾತ ವಿಮರ್ಶಕರು)