ಉಪರಾಷ್ಟ್ರಪತಿ ಹುದ್ದೆಯ ಸುತ್ತಮುತ್ತ

untitled-design-12-68c0683c320d3
Published on

| ಚನ್ನಬಸಪ್ಪ ರೊಟ್ಟಿ ಭಾರತದ 17ನೇ ಉಪರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ. ಭಾರತದ ಉಪರಾಷ್ಟ್ರಪತಿ ಹುದ್ದೆ ಹಲವು ಕಾರಣಗಳಿಂದ ವಿಶೇಷವಾಗಿದೆ. ವಿಮರ್ಶಕರಿಂದ ‘ಹಿಸ್ ಸೂಪರ್​ಫ್ಲುಯಸ್ ಹೈನೆಸ್’ ಎಂಬ ಟೀಕೆಗೂ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಉಪರಾಷ್ಟ್ರಪತಿ ಹುದ್ದೆ ಕುರಿತಾದ ವಿಶಿಷ್ಟ ಮಾಹಿತಿಗಳು ಇಲ್ಲಿವೆ.

ಸಂಘದ ಕಟ್ಟಾಳು ಒಬಿಸಿ ನಾಯಕ

ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಸಿ.ಪಿ.ರಾಧಾಕೃಷ್ಣನ್ ಅವರು ತಮಿಳುನಾಡಿನ ತಿರುಪ್ಪೂರಿನಲ್ಲಿ 1957ರ ಅಕ್ಟೋಬರ್ 20ರಂದು ಜನಿಸಿದರು. ಒಬಿಸಿ ಕೆಟಗರಿಯಲ್ಲಿ ಬರುವ ಪ್ರಭಾವಿ ಗೌಂಡರ್ ಸಮುದಾಯದವರು. ಬಿಜಿನೆಸ್ ಅಡ್ಮಿನಿಸ್ಟ್ರೇಷನ್​ನಲ್ಲಿ ಪದವಿ ಗಳಿಸಿದರು. ಕಾಲೇಜಿನಲ್ಲಿದ್ದಾಗ ಟೇಬಲ್ ಟೆನಿಸ್ ಚಾಂಪಿಯನ್ ಆಗಿದ್ದರು ಮತ್ತು ದೂರ ಅಂತರದ ಓಟಗಾರರಾಗಿದ್ದರು. ಹದಿನಾರನೇ ವಯಸ್ಸಿನಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ (ಮುಂಚೆ ಜನಸಂಘ) ಸಂಪರ್ಕ.

1974ರಲ್ಲಿ ಜನಸಂಘದ ರಾಜ್ಯ ಕಾರ್ಯಕಾರಿಣಿಗೆ ಆಯ್ಕೆ. 1998ರಲ್ಲಿ ಕೊಯಮತ್ತೂರು ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶ. 1999ರಲ್ಲಿಯೂ ಅಲ್ಲಿಂದಲೇ ಆಯ್ಕೆ. ರಾಜ್ಯದಲ್ಲಿ ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಸಾಧಿಸುವಲ್ಲಿ ಇವರೂ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. 2004-2006ರವರೆಗೆ ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷರಾಗಿ ಕಾರ್ಯ. 2004ರ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಕಹಿಯುಣ್ಣಬೇಕಾಯಿತು. 2024ರಿಂದ ವಿವಿಧ ಅವಧಿಗೆ ಪುದುಚೇರಿ ಲೆಫ್ಟಿನೆಂಟ್ ಗವರ್ನರ್, ತೆಲಂಗಾಣ ಮತ್ತು ಜಾರ್ಖಂಡ್ ರಾಜ್ಯಪಾಲರಾಗಿ ಕಾರ್ಯನಿರ್ವಹಣೆ. 2024ರ ಜುಲೈ 31ರಂದು ಮಹಾರಾಷ್ಟ್ರ ಗವರ್ನರ್ ಆಗಿ ನೇಮಕ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ ಪಕ್ಷದ ಬೇರನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಅವರನ್ನು ಉಪ ರಾಷ್ಟ್ರಪತಿ ಹುದ್ದೆಗೆ ತರಲಾಗುತ್ತಿದೆ ಎಂಬುದು ರಾಜಕೀಯ ವಿಶ್ಲೇಷಕರ ವ್ಯಾಖ್ಯಾನ. ಮುಂದಿನ ವರ್ಷ (2026) ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ.

ಸಂವಿಧಾನದ ವಿಧಿಗಳು ಏನು ಹೇಳುತ್ತವೆ?

63ನೇ ವಿಧಿ: ಭಾರತದಲ್ಲಿ ಉಪರಾಷ್ಟ್ರಪತಿ ಹುದ್ದೆ ಇರಬೇಕು ಎಂದು ಹೇಳುತ್ತದೆ.

64ನೇ ವಿಧಿ: ಉಪರಾಷ್ಟ್ರಪತಿ ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ ಎಂದು ಹೇಳುತ್ತದೆ.

65ನೇ ವಿಧಿ: ರಾಷ್ಟ್ರಪತಿಗಳ ನಿಧನ, ರಾಜೀನಾಮೆ, ಪದಚ್ಯುತಿ ಅಥವಾ ಇತರ ಕಾರಣದಿಂದ ರಾಷ್ಟ್ರಪತಿ ಹುದ್ದೆ ಖಾಲಿ ಇದ್ದಾಗ ಉಪರಾಷ್ಟ್ರಪತಿಗಳು ಹಂಗಾಮಿ ರಾಷ್ಟ್ರಪತಿಯಾಗಿರುತ್ತಾರೆ.

66ನೇ ವಿಧಿ: ಉಪರಾಷ್ಟ್ರಪತಿಗಳ ಅರ್ಹತೆಗಳನ್ನು ವಿವರಿಸುತ್ತದೆ ಹಾಗೂ ಒಬ್ಬ ವ್ಯಕ್ತಿ ಎಷ್ಟು ಸಾರಿ ಬೇಕಾದರೂ ಉಪರಾಷ್ಟ್ರಪತಿಯಾಗಲು ಅವಕಾಶ ನೀಡುತ್ತದೆ.

67ನೇ ವಿಧಿ: ಉಪರಾಷ್ಟ್ರಪತಿ ಅಧಿಕಾರಾವಧಿ (5 ವರ್ಷ), ರಾಜೀನಾಮೆ ಮತ್ತು ಪದಚ್ಯುತಿ ಕುರಿತು ವಿವರಿಸುತ್ತದೆ. ಉತ್ತರಾಧಿಕಾರಿ ಪ್ರಮಾಣವಚನ ಸ್ವೀಕರಿಸುವವರೆಗೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡುತ್ತದೆ.

68ನೇ ವಿಧಿ: ಉಪರಾಷ್ಟ್ರಪತಿ ಹುದ್ದೆ ಖಾಲಿಯಾದಾಗ ಆದಷ್ಟು ಬೇಗ ಚುನಾವಣೆ ನಡೆಸಬೇಕು ಎಂದು ತಿಳಿಸುತ್ತದೆ.

69ನೇ ವಿಧಿ: ಉಪರಾಷ್ಟ್ರಪತಿ ತಮ್ಮ ಅಧಿಕಾರ ಸ್ವೀಕರಿಸುವ ಮೊದಲು ರಾಷ್ಟ್ರಪತಿ ಸಮ್ಮುಖದಲ್ಲಿ ಅಥವಾ ಅವರಿಂದ ನೇಮಕಗೊಂಡ ವ್ಯಕ್ತಿ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಬೇಕು ಎಂದು ಹೇಳುತ್ತದೆ.

70ನೇ ವಿಧಿ: ಅನಿಶ್ಚಿತ ಸಂದರ್ಭಗಳಲ್ಲಿ ಉಪರಾಷ್ಟ್ರಪತಿ ರಾಷ್ಟ್ರಪತಿಗಳ ಕಾರ್ಯ ನಿರ್ವಹಿಸುವ ಬಗ್ಗೆ ತಿಳಿಸುತ್ತದೆ. ಅನಿಶ್ಚಿತ ಸಂದರ್ಭ ಯಾವುವು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಸಂಸತ್ತಿಗೆ ನೀಡುತ್ತದೆ.

71ನೇ ವಿಧಿ: ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ವಿವಾದಗಳನ್ನು ಸವೋಚ್ಚ ನ್ಯಾಯಾಲಯದಲ್ಲಿಯೇ ವಿಚಾರಿಸಬೇಕು. ಈ ಕುರಿತು ಮೇಲ್ಮನವಿಗೆ ಅವಕಾಶವಿಲ್ಲ ಎಂದು ಉಲ್ಲೇಖಿಸುತ್ತದೆ.

92ನೇ ವಿಧಿ: ಉಪರಾಷ್ಟ್ರಪತಿಗಳನ್ನು ಹುದ್ದೆಯಿಂದ ತೆಗೆದುಹಾಕುವ ನಿರ್ಣಯ ಚರ್ಚೆಯಲ್ಲಿರುವಾಗ ಅವರು ರಾಜ್ಯಸಭೆ ಅಧ್ಯಕ್ಷತೆ ವಹಿಸದಂತೆ ನಿರ್ಬಂಧಿಸುತ್ತದೆ.

100ನೇ ವಿಧಿ: ರಾಜ್ಯಸಭೆ ಅಧ್ಯಕ್ಷರಾಗಿರುವಾಗ ನಿರ್ಣಾಯಕ ಮತ ಚಲಾಯಿಸುವ ಅಧಿಕಾರ ನೀಡುತ್ತದೆ.

ಗಮನಿಸಬೇಕಾದ ಅಂಶಗಳು

ಅಮೆರಿಕದಿಂದ ಎರವಲು: ಭಾರತದ ಉಪರಾಷ್ಟ್ರಪತಿ ಹುದ್ದೆಯನ್ನು ಅಮೆರಿಕ ಸಂವಿಧಾನದಿಂದ ಎರವಲು ಪಡೆಯಲಾಗಿದೆ.

ಅನಗತ್ಯ ಹುದ್ದೆ ಎಂಬ ಟೀಕೆ: ಭಾರತದ ಸಂವಿಧಾನ ಉಪರಾಷ್ಟ್ರಪತಿಗಳಿಗೆ ಆ ಹುದ್ದೆಯಲ್ಲಿ ಯಾವುದೇ ಮಹತ್ವದ ಕಾರ್ಯ ನಿಯೋಜಿಸಿಲ್ಲ. ಆದ್ದರಿಂದ, ವಿಮರ್ಶಕರು ಈ ಹುದ್ದೆಯನ್ನು ‘ಹಿಸ್ ಸೂಪರ್​ಫ್ಲುಯಸ್ ಹೈನೆಸ್’ (ಅನಗತ್ಯ ವಾಗಿರುವ ಮಹಾನ್ ಹುದ್ದೆ) ಎಂದು ಟೀಕಿಸುತ್ತಾರೆ.

ತಕ್ಷಣದ ಪರ್ಯಾಯ ಇಲ್ಲ: ಭಾರತದ ಉಪರಾಷ್ಟ್ರಪತಿ ಹುದ್ದೆ ಖಾಲಿಯಾದಾಗ, ಅಥವಾ ಅವರು ತಮ್ಮ ಅವಧಿ ಮುಗಿಯುವ ಮುನ್ನ ಭಾರತದ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದಾಗ, ಉಪರಾಷ್ಟ್ರಪತಿಗಳ ಕರ್ತವ್ಯಗಳನ್ನು ಯಾರು ನಿರ್ವಹಿಸಬೇಕು ಎಂಬ ಕುರಿತು ಸಂವಿಧಾನ ಏನನ್ನೂ ಉಲ್ಲೇಖಿಸಿಲ್ಲ.

ಜಂಟಿ ಸದನ ನಿಯಮ ಬದಲಾವಣೆ: ಎರಡೂ ಸದನಗಳು ಜಂಟಿ ಸಭೆ ಸೇರಿ ಉಪರಾಷ್ಟ್ರಪತಿಗಳನ್ನು ಚುನಾಯಿಸಬೇಕೆಂಬ ನಿಯಮವನ್ನು ಸಂವಿಧಾನ ಒಳಗೊಂಡಿತ್ತು. 1961ರಲ್ಲಿ ಜಾರಿಗೆ ಬಂದ 11ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಮೂಲಕ ಈ ಸಂಕೀರ್ಣ ನಿಯಮ ತೆಗೆದುಹಾಕಲಾಗಿದೆ.

ಹೆಚ್ಚು ಮತ ಗಳಿಸಿದವರು: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಹೆಗ್ಗಳಿಕೆಯನ್ನು ಕೊಚೇರಿಲ್ ರಾಮನ್ ನಾರಾಯಣನ್ (1992) ಹೊಂದಿದ್ದಾರೆ. ಅವರು 700 ಮತ ಗಳಿಸಿದ್ದರು. ಅವರ ಪ್ರತಿಸ್ಪರ್ಧಿ ಕಾಕಾ ಜೋಗಿಂದರ್ ಸಿಂಗ್ ಕೇವಲ 1 ಮತ ಗಳಿಸಿದ್ದರು.

4 ಬಾರಿ ಅವಿರೋಧ ಆಯ್ಕೆ: ಡಾ.ಸರ್ವಪಲ್ಲಿ ರಾಧಾಕೃಷ್ಣನ್ 1952ರಲ್ಲಿ ಮತ್ತು 1957ರಲ್ಲಿ, ನ್ಯಾಯಮೂರ್ತಿ ಮಹಮ್ಮದ್ ಹಿದಾಯತ್ ಉಲ್ಲಾ ಅವರು 1979ರಲ್ಲಿ ಹಾಗೂ ಶಂಕರ್ ದಯಾಳ್ ಶರ್ಮಾ 1987ರಲ್ಲಿ ಉಪರಾಷ್ಟ್ರಪತಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ.

ರಾಷ್ಟ್ರಪತಿಗಳಾಗಿ ಆಯ್ಕೆಯಾದವರು 6 ಜನ: ಇಲ್ಲಿಯವರೆಗೆ ಒಟ್ಟು 6 ಜನ ಉಪರಾಷ್ಟ್ರಪತಿಗಳು ರಾಷ್ಟ್ರಪತಿಗಳಾಗಿ ಆಯ್ಕೆಯಾಗಿದ್ದಾರೆ. ಅವರೆಂದರೆ; ಡಾ.ಸರ್ವಪಲ್ಲಿ ರಾಧಾಕೃಷ್ಣನ್ (1962-1967), ಡಾ.ಜಾಕಿರ್ ಹುಸೇನ್ (1967-1969), ವರಾಹ ವೆಂಕಟ ಗಿರಿ (1969-1974), ರಾಮಸ್ವಾಮಿ ವೆಂಕಟರಾಮನ್ (1987-1992), ಶಂಕರ್ ದಯಾಳ್ ಶರ್ಮಾ (1992-1997) ಹಾಗೂ ಕೊಚೇರಿಲ್ ರಾಮನ್ ನಾರಾಯಣನ್ (1997-2002) (ಗಮನಿಸಿ: ಆವರಣದಲ್ಲಿರುವುದು ರಾಷ್ಟ್ರಪತಿ ಆಗಿದ್ದಾಗಿನ ಅವಧಿ).

ಅಧಿಕಾರದಲ್ಲಿದ್ದಾಗಲೇ ನಿಧನ: ಅಧಿಕಾರದಲ್ಲಿದ್ದಾಗ ನಿಧನರಾದ ಏಕೈಕ ಉಪರಾಷ್ಟ್ರಪತಿ ಕೃಷ್ಣಕಾಂತ್.

(ವಿಧಿ 66)

ಚುನಾವಣಾ ಪ್ರಕ್ರಿಯೆ

952ರ ಉಪರಾಷ್ಟ್ರಪತಿ ಚುನಾವಣೆ ಕಾಯ್ದೆ ಯನ್ವಯ ಭಾರತದ ಚುನಾವಣಾ ಆಯೋಗ ನಿರ್ವಹಿಸುತ್ತದೆ.

ಭಾರತದ ಉಪರಾಷ್ಟ್ರಪತಿಗಳನ್ನು ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಒಳಗೊಂಡ (ನಾಮಕರಣಗೊಂಡ ಸದಸ್ಯರೂ ಸೇರಿದಂತೆ) ನಿರ್ವಾಚನ ಮಂಡಳಿ (ಚುನಾವಣಾ ಕಾಲೇಜ್) ಮೂಲಕ ಆಯ್ಕೆ ಮಾಡಲಾಗುತ್ತದೆ.

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಸದಸ್ಯರು ಉಪರಾಷ್ಟ್ರಪತಿಗಳನ್ನು ಚುನಾಯಿಸುವ ನಿರ್ವಾಚನಾ ಮಂಡಳಿ ಒಳಗೊಂಡಿರುವುದಿಲ್ಲ.

ರಾಷ್ಟ್ರಪತಿಗಳ ಚುನಾವಣೆಯಂತೆ ಉಪರಾಷ್ಟ್ರಪತಿಗಳ ಚುನಾವಣೆಯಲ್ಲಿಯೂ ಏಕಮತ ವರ್ಗಾವಣೆ ಪ್ರಮಾಣಾನುಗುಣ (ಆದ್ಯತೆ ಶ್ರೇಣೀಕರಣ/ಸಮಾಜಮಿತಿ ಮಾಪನ) ಪದ್ಧತಿ ಅನುಸರಿಸಲಾಗುತ್ತದೆ.

ವಿಪ್​ ನಿರ್ಬಂಧ ಇಲ್ಲದ್ದರಿಂದ ಯಾವ ಅಭ್ಯರ್ಥಿಗಾದರೂ ತಮ್ಮ ಮತ ಚಲಾಯಿಸಬಹುದು.

ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ 20 ಮಂದಿ ಮತದಾರರು ಪ್ರಸ್ತಾಪಕರಾಗಿ, 20 ಮಂದಿ ಅನುಮೋದಕರಾಗಿ ಸಹಿ ಹಾಕಬೇಕು. ್ಞಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಆರ್​ಬಿಐನಲ್ಲಿ 15,000 ರೂ. ಠೇವಣಿ ಇಡಬೇಕು.

ಉಪರಾಷ್ಟ್ರಪತಿ ಹುದ್ದೆ ಅರ್ಹತೆಗಳು (ವಿಧಿ 66)

ಭಾರತದ ಪೌರನಾಗಿರಬೇಕು.  35 ವರ್ಷ ಮೀರಿದವರಾಗಿರಬೇಕು. ರಾಜ್ಯಸಭಾ ಸದಸ್ಯರಿಗಿರಬೇಕಾದ ಅರ್ಹತೆಗಳನ್ನು ಹೊಂದಿರಬೇಕು. ಯಾವುದೇ ಲಾಭದಾಯಕ ಹುದ್ದೆಯಲ್ಲಿರಬಾರದು.

ಸಿಜೆಐ ರಾಷ್ಟ್ರಪತಿ ಆಗುವ ವಿಶೇಷ ಸಂದರ್ಭ

ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಎರಡೂ ಹುದ್ದೆಗಳು ತೆರವಾದ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಾಧೀಶರು ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಉದಾಹರಣೆಗೆ: 1969ರಲ್ಲಿ ರಾಷ್ಟ್ರಪತಿಯಾಗಿದ್ದ ಡಾ.ಜಾಕಿರ್ ಹುಸೇನ್ ನಿಧನರಾದಾಗ ಉಪರಾಷ್ಟ್ರಪತಿ ವಿ.ವಿ.ಗಿರಿ ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ ಅಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಿದಾಯತ್ ಉಲ್ಲಾ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ್ದರು.

ಪದಚ್ಯುತಗೊಳಿಸುವಿಕೆ (ವಿಧಿ: 67(ಬಿ) ಮತ್ತು 67(ಸಿ))

ಉಪರಾಷ್ಟ್ರಪತಿಗಳನ್ನು ಅವರ ಅಧಿಕಾರಾವಧಿ ಮುಗಿಯುವ ಮುನ್ನ ರಾಜ್ಯಸಭೆಯಲ್ಲಿ ಪರಿಣಾಮಕಾರಿ ಬಹುಮತ ಮತ್ತು ಲೋಕಸಭೆಯಲ್ಲಿ ಸರಳ ಬಹುಮತದಿಂದ ನಿರ್ಣಯ ಅಂಗೀಕರಿಸುವ ಮೂಲಕ ಪದಚ್ಯುತಗೊಳಿಸಬಹುದು. ನಿರ್ಣಯ ಮಂಡಿಸುವ ಕನಿಷ್ಠ 14 ದಿನಗಳ ಮುನ್ನ ಉಪರಾಷ್ಟ್ರಪತಿಗಳಿಗೆ ನೋಟಿಸ್ ನೀಡಬೇಕು.

ಪ್ರತ್ಯೇಕ ವೇತನ ಸೌಲಭ್ಯಗಳಿಲ್ಲ!

ಭಾರತದ ಸಂವಿಧಾನವು ಉಪರಾಷ್ಟ್ರಪತಿ ಹುದ್ದೆಗೆ ಪ್ರತ್ಯೇಕ ವೇತನ ಮತ್ತು ಇತರ ಸೌಲಭ್ಯಗಳನ್ನು ನಿಗದಿಪಡಿಸಿಲ್ಲ.

ಇವರು ರಾಜ್ಯಸಭೆ ಪದನಿಮಿತ್ತ ಅಧ್ಯಕ್ಷರಾಗಿ ಮಾಸಿಕ 4 ಲಕ್ಷ ರೂ. ವೇತನ, ದಿನಭತ್ಯೆ, ಬಾಡಿಗೆರಹಿತ ನಿವಾಸ, ವೈದ್ಯಕೀಯ ಭತ್ಯೆ, ಪ್ರವಾಸ ಭತ್ಯೆ, ಪಿಂಚಣಿ ಪಡೆಯುತ್ತಾರೆ.

ಭಾರತದ ಉಪರಾಷ್ಟ್ರಪತಿಗಳ ಪಟ್ಟಿ

1. ಡಾ.ಸರ್ವಪಲ್ಲಿ ರಾಧಾಕೃಷ್ಣನ್ (1952ರ ಮೇ 13 ರಿಂದ 1957ರ ಮೇ 12 )

2. ಡಾ.ಸರ್ವಪಲ್ಲಿ ರಾಧಾಕೃಷ್ಣನ್ (1957ರ ಮೇ 13 ರಿಂದ 1962ರ ಮೇ 12 )

3. ಡಾ.ಜಾಕಿರ್ ಹುಸೇನ್ (1962ರ ಮೇ 13 ರಿಂದ 1967ರ ಮೇ 12 )

4. ವರಾಹ ವೆಂಕಟ ಗಿರಿ (1967ರ ಮೇ 13 ರಿಂದ 1969ರ ಜುಲೈ 20)

5. ಗೋಪಾಲ್ ಸ್ವರೂಪ್ ಪಾಠಕ್ (1969ರ ಆಗಸ್ಟ್ 31 ರಿಂದ 1974ರ ಆ.30)

6. ಬಸಪ್ಪ ದಾನಪ್ಪ ಜತ್ತಿ (1974ರ ಆಗಸ್ಟ್ 31ರಿಂದ 1979ರ ಆಗಸ್ಟ್ 30)

7. ನ್ಯಾ.ಮಹಮ್ಮದ್ ಹಿದಾಯತ್ ಉಲ್ಲಾ (1979ರ ಆ.31 ರಿಂದ 1984ರ ಆ.30)

8. ರಾಮಸ್ವಾಮಿ ವೆಂಕಟರಾಮನ್ (1984ರ ಆಗಸ್ಟ್ 31ರಿಂದ 1987ರ ಜುಲೈ 24)

9. ಶಂಕರ್ ದಯಾಳ್ ಶರ್ಮಾ (1987ರ ಸೆಪ್ಟೆಂಬರ್ 7 ರಿಂದ 1992ರ ಜುಲೈ 24)

10. ಕೊಚೇರಿಲ್ ರಾಮನ್ ನಾರಾಯಣನ್ (1992ರ ಆ.21ರಿಂದ 1997ರ ಜು.24)

11. ಕೃಷ್ಣಕಾಂತ್ (1997ರ ಆಗಸ್ಟ್ 21 ರಿಂದ 2002ರ ಜುಲೈ 27)

12. ಭೈರೋನ್ ಸಿಂಗ್ ಶೇಖಾವತ್ (2002ರ ಆ.19ರಿಂದ 2007ರ ಜುಲೈ 21)

13. ಮಹಮ್ಮದ್ ಹಮೀದ್ ಅನ್ಸಾರಿ (2007ರ ಆಗಸ್ಟ್ 11 ರಿಂದ 2012ರ ಆ.10)

14. ಮಹಮ್ಮದ್ ಹಮೀದ್ ಅನ್ಸಾರಿ (2012ರ ಆಗಸ್ಟ್ 11 ರಿಂದ 2017ರ ಆ.10)

15. ಎಂ.ವೆಂಕಯ್ಯ ನಾಯ್ಡು (2017ರ ಆಗಸ್ಟ್ 11ರಿಂದ 2022ರ ಆಗಸ್ಟ್ 11)

16. ಜಗದೀಪ್ ಧನಕರ್ (2022ರ ಆಗಸ್ಟ್ 11ರಿಂದ 2025ರ ಜುಲೈ 21)

17. ಸಿ.ಪಿ.ರಾಧಾಕೃಷ್ಣನ್ (2025ರ ಸೆಪ್ಟೆಂಬರ್ 9ರಿಂದ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net