

ಐದು ಮಹಡಿಗಳ ಕಾನ್ವೆಂಟಿನ ಕಟ್ಟಡದ ಕೆಳಮಹಡಿಯಲ್ಲಿ ಊಟದ ಕೋಣೆ, ಅಡುಗೆ ಕೋಣೆ, ಮತ್ತು ಉಗ್ರಾಣಗಳಿದ್ದವು. ಊಟದ ಕೋಣೆಯ ಹೊರಭಾಗದಲ್ಲಿ ಮೊಗಸಾಲೆಯಿದ್ದು ಇದರ ಒಂದು ಬದಿಯಲ್ಲಿ, ಮಹಡಿಯ ಮೆಟ್ಟಿಲುಗಳ ಸಮೀಪವೇ ಮಲಗುವ ಕೋಣೆಯೊಂದಿತ್ತು. ಅಡುಗೆ ಕೋಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಹಿರಿಯ ಸನ್ಯಾಸಿನಿಯರಾದ ಸಿಸ್ಟರ್ ಹೆಲೆನ್ ಮತ್ತು ಸಿಸ್ಟರ್ ಸೆಫಿ ಅಲ್ಲಿರುತ್ತಿದ್ದರು. ಹಾಸ್ಟೆಲ್ಲಿನ ಕಟ್ಟಡಕ್ಕೆ ಲಿಫ್ಟ್ ಇರಲಿಲ್ಲ.
ಅಡುಗೆ ಕೋಣೆಯಿಂದ ಕಟ್ಟಡದ ಹೊರಗೆ ಹೋಗಲು ಬಾಗಿಲೊಂದಿತ್ತು. ಅಲ್ಲಿಂದ ಹೊರಬಂದರೆ ವಿಶಾಲವಾದ ಬಯಲು ಪ್ರದೇಶವಿತ್ತು. ಅಡುಗೆ ಕೋಣೆಯ ಸಮೀಪದಲ್ಲಿಯೇ ಬಾವಿಯೊಂದಿದ್ದು ಇದರಿಂದಲೇ ಹಾಸ್ಟೆಲಿಗೆ ನೀರು ಸರಬರಾಜಾಗುತ್ತಿತ್ತು. ಕಾನ್ವೆಂಟಿನ ಸುತ್ತ ಸುಮಾರು ಐದೂವರೆ ಅಡಿ ಎತ್ತರದ ಕಾಂಪೌಂಡ್ ಗೋಡೆಯಿತ್ತು. ಕಾನ್ವೆಂಟಿನ ಆವರಣದಲ್ಲಿ ಗಿಡಮರಗಳು ಸೊಂಪಾಗಿ ಬೆಳೆದಿದ್ದವು. ಕಾನ್ವೆಂಟಿಗೆ ಪ್ರವೇಶಿಸಲು ಮುಂಭಾಗದಲ್ಲಿ ದೊಡ್ಡ ಗೇಟಿತ್ತು. ಸ್ತ್ರೀಯರಿಗೇ ಮೀಸಲಿದ್ದ ಕಾನ್ವೆಂಟ್ ಕಟ್ಟಡಕ್ಕೆ ಕೆಲವರ ಹೊರತಾಗಿ ಯಾವ ಪುರುಷರೂ ಬರುವಂತಿರಲಿಲ್ಲ.
ಅಚ್ಚಮ್ಮ ನೆಲಮಹಡಿಗೆ ಇಳಿದ ಕೂಡಲೇ ಕಾರಿಡಾರ್ನಲ್ಲಿ ದೀಪ ಉರಿಯುತ್ತಿರುವುದನ್ನು ಕಂಡು ಅಚ್ಚರಿಗೊಂಡಳು. ಏಕೆಂದರೆ ತಾನು ಕಳೆದ ರಾತ್ರಿ ಮಲಗಲು ಹೋಗುವ ಮುಂಚೆ ದೀಪವನ್ನು ಆರಿಸಿದ್ದು ಆಕೆಗೆ ನೆನಪಿತ್ತು. ಆನಂತರ ಆಕೆ ಅಡುಗೆ ಕೋಣೆಗೆ ಹೋಗಿ ದೀಪವನ್ನು ಹಾಕಿ ಡೈನಿಂಗ್ ಹಾಲಿಗೆ ಹೋದಳು. ಅಲ್ಲಿದ್ದ ರೆಫ್ರಿಜಿರೇಟರ್ನಲ್ಲಿಟ್ಟಿದ್ದ ಹಾಲಿನ ಪ್ಯಾಕೆಟ್ಟುಗಳನ್ನು ತೆಗೆದುಕೊಳ್ಳಲು ಹೋದಾಗ ಫ್ರಿಜ್ ಬಾಗಿಲು ತೆರೆದಿತ್ತು. ಅದರ ಮುಂದುಗಡೆ ನೆಲದ ಮೇಲೆ ಪ್ಲಾಸ್ಟಿಕ್ ನೀರಿನ ಬಾಟಲೊಂದು ಬಿದ್ದಿದ್ದು ಅದರಿಂದ ನೀರು ಕೆಳಗೆ ಸುರಿದಿತ್ತು. ಆ ಬಾಟಲಿನ ಹತ್ತಿರವೇ ಚಪ್ಪಲಿಯೊಂದು ಬಿದ್ದಿರುವುದನ್ನು ನೋಡಿ ಆಕೆ ಗಾಬರಿಯಾದಳು.
ಏತನ್ಮಧ್ಯೆ ಇನ್ನೊಬ್ಬ ಅಡುಗೆಯಾಕೆ ತೇರೇಸಮ್ಮ ಅಡುಗೆ ಕೋಣೆಗೆ ಬಂದು ಬಾವಿಯಿಂದ ನೀರು ತರಲು ಹೊರ ಆವರಣಕ್ಕೆ ಹೋಗುವ ಬಾಗಿಲನ್ನು ತೆರೆಯಲು ಹೋದಾಗ ಅದರ ಅಗಳಿಯು ತೆರೆದಿದ್ದರಿಂದ ಬಾಗಿಲನ್ನು ನೂಕಿದಳು. ಆದರೆ ಬಾಗಿಲಿಗೆ ಹೊರಗಿನ ಅಗುಳಿ ಹಾಕಿದ್ದರಿಂದ ಅದನ್ನು ತೆರೆಯಲಾಗಲಿಲ್ಲ. ಹಾಸ್ಟೆಲಿನ ಒಳಗಡೆಯಿಂದ ಯಾರೋ ಹೊರಕ್ಕೆ ಹೋಗಿ ಬಾಗಿಲನ್ನು ಹೊರಗಿನಿಂದ ಮುಚ್ಚಿದ್ದುದು ತಿಳಿಯುತ್ತಿತ್ತು. ಆ ಬಾಗಿಲ ಹೊಸ್ತಿಲಲ್ಲಿ ಒಂಟಿ ಚಪ್ಪಲಿ ಬಿದ್ದಿತ್ತು. ಎರಡೂ ಬಾಗಿಲುಗಳ ಸಂದಿಯಲ್ಲಿ ಸನ್ಯಾಸಿನಿಯರು ತಲೆಯ ಮೇಲೆ ಧರಿಸುವ ಒಂದು ಬಿಳಿಯ ವೇಲ್ ಸಿಕ್ಕಿಹಾಕಿಕೊಂಡಿತ್ತು. ಸ್ವಲ್ಪ ದೂರದಲ್ಲಿ ನೆಲದ ಮೇಲೆ ಸಣ್ಣ ಕೈ ಕೊಡಲಿ ಹಾಗೂ ಖಾಲಿ ಹಣ್ಣಿನ ಬುಟ್ಟಿ ಬಿದ್ದಿತ್ತು. ತೆರೇಸಮ್ಮ ಹೆದರಿ ಅಚ್ಚಮ್ಮನನ್ನು ಕೂಗಿ ಕರೆದಳು.
ಇಬ್ಬರೂ ಪರಿಚಾರಕಿಯರು ಹಿಂದಿನ ರಾತ್ರಿ ಆ ಸ್ಥಳದಲ್ಲಿ ಏನೋ ನಿಗೂಢ ಕೃತ್ಯ ನಡೆದಿದೆ ಎಂದು ಶಂಕಿಸಿ ನೆಲಮಹಡಿಯಲ್ಲಿರುತ್ತಿದ್ದ ಹಿರಿಯ ನನ್ಗಳ ಕೊಠಡಿಗೆ ಧಾವಿಸಿದರು. ಆ ರಾತ್ರಿ ಸಿಸ್ಟರ್ ಹೆಲೆನ್ ಹಾಸ್ಟೆಲಿನಲ್ಲಿರದಿದ್ದ ಕಾರಣ ಅಲ್ಲಿದ್ದ ಸಿಸ್ಟರ್ ಸೆಫಿಗೆ ಕೂಡಲೇ ಡೈನಿಂಗ್ ಹಾಲ್ ಮತ್ತು ಅಡುಗೆ ಕೋಣೆಗೆ ಬರಲು ವಿನಂತಿಸಿದರು. ಸಿಸ್ಟರ್ ಸೆಫಿ ಅಲ್ಲಿಗೆ ಬರುವಷ್ಟರಲ್ಲಿಯೇ ಹಾಸ್ಟೆಲ್ಲಿನ ಕೆಲವು ನಿವಾಸಿಗಳೂ ಚಹಾ ಕುಡಿಯಲು ಡೈನಿಂಗ್ ಹಾಲಿಗೆ ಬಂದರು.
ನೆಲದ ಮೇಲೆ ಬೇರೆ ಬೇರೆಯಾಗಿ ಬಿದ್ದಿದ್ದ ಚಪ್ಪಲಿಗಳನ್ನು ನೋಡಿದ ಕೆಲವರು ಅವೆರಡೂ ಕಾನ್ವೆಂಟ್ನ ನಿವಾಸಿ ಸಿಸ್ಟರ್ ಅಭಯಾಳದ್ದೆಂದು ಗುರುತಿಸಿದರು. ಅಭಯಾ ಸುಮಾರು 21 ವರ್ಷ ವಯಸ್ಸಿನವಳಾಗಿದ್ದು ಪಿಯುಸಿ ದ್ವಿತೀಯ ತರಗತಿಯಲ್ಲಿ ಕಲಿಯುತ್ತಿದ್ದಳು. ತನ್ನ ಚಪ್ಪಲಿಗಳನ್ನು ಅಲ್ಲೇಕೆ ಬಿಟ್ಟಿದ್ದಾಳೆಂದು ವಿಚಾರಿಸುವ ಉದ್ದೇಶದಿಂದ ಸಿಸ್ಟರ್ ಸೆಫಿ ತೇರೇಸಮ್ಮಳನ್ನು ಅಭಯಾಳ ಕೋಣೆಗೆ ಕಳಿಸಿದರು. ಅಭಯಾ ನೀರು ಕುಡಿಯಲೆಂದು ಡೈನಿಂಗ್ ಹಾಲಿಗೆ 4 ಗಂಟೆಗೆ ಹೋದವಳು ಇನ್ನೂ ಕೋಣೆಗೆ ವಾಪಸಾಗಿಲ್ಲ ಎಂದು ಅವಳ ಸಹಪಾಠಿಗಳು ತೆರೇಸಮ್ಮಳಿಗೆ ತಿಳಿಸಿದರು.
ಚಪ್ಪಲಿಗಳು ಹಾಗೂ ನೀರಿನ ಬಾಟಲಿಯನ್ನು ಬಿಟ್ಟು ಅಭಯಾ ಹೋದದ್ದಾದರೂ ಎಲ್ಲಿಗೆಂದು ತಿಳಿಯಲು ಹಾಸ್ಟೆಲಿನ ಎಲ್ಲೆಡೆಯಲ್ಲಿಯೂ ಹುಡುಕಲಾಯಿತು. ಆ ಕಟ್ಟಡದಲ್ಲಿಯೇ ವಾಸವಾಗಿದ್ದ ಕಾನ್ವೆಂಟಿನ ಮುಖ್ಯಸ್ಥೆ ಮದರ್ ಸುಪೀರಿಯರ್ ಲಿಸ್ಸಿ ಇವರಿಗೆ ಮಾಹಿತಿ ಹೋಯಿತು. ಅವರು ಅವಸರವಸರವಾಗಿ ಸ್ಥಳಕ್ಕೆ ಬಂದರು. ಆಗ ಬೆಳಗಿನ ಸುಮಾರು 5.30 ಗಂಟೆಯಾಗಿತ್ತು. ಮದರ್ ಸುಪೀರಿಯರ್ ಕೆಲವು ಸನ್ಯಾಸಿನಿಯರನ್ನು ಜೊತೆಮಾಡಿಕೊಂಡು ಕಟ್ಟಡದ ಹಿಂಭಾಗದ ಬಯಲಿಗೆ ಹೋಗಿ ಟಾರ್ಚ್ ಬೆಳಕಿನಲ್ಲಿ ಹುಡುಕಿದರು. ಕಟ್ಟಡದ ತಾರಸಿಯ ಮೇಲೆ ಹೋಗಿ ನೋಡಲು ಇಬ್ಬರಿಗೆ ಆದೇಶಿಸಿದರು. ಎಲ್ಲಿಯೂ ಅಭಯಾ ಕಾಣಲಿಲ್ಲ.
ಏತನ್ಮಧ್ಯೆ ಬೆಳಕು ಹರಿಯಿತು. ಬಾವಿಯ ಕಟ್ಟೆಯ ಮೇಲೆ ಸಾಮಾನ್ಯವಾಗಿ ಇಡುತ್ತಿದ್ದ ನೀರಿನ ಬಕೆಟ್ ಕೆಳಗೆ ಬಿದ್ದಿದ್ದನ್ನು ನೋಡಿದ ಕೆಲವರು ಅಭಯಾ ಬಾವಿಯೊಳಗೆ ಬಿದ್ದಿರುವಳೇನೋ ಎಂದು ಶಂಕಿಸಿ ಬಾವಿಯ ಬಳಿಗೆ ಹೋಗಿ ಕೆಳಗೆ ಇಣುಕಿದರು. ಏನೂ ಕಾಣಲಿಲ್ಲ. ಸನ್ಯಾಸಿನಿಯಾಗಹೊರಟಿದ್ದ ಯುವತಿ ಏಕಾಏಕಿ ಕಾಣೆಯಾದದ್ದು ಗಂಭೀರ ವಿಷಯವಾಗಿದ್ದ ಕಾರಣ ಮದರ್ ಸುಪೀರಿಯರ್ ರ್ಚಚಿನ ಹಿರಿಯ ಅಧಿಕಾರಿಗೆ ಮಾಹಿತಿ ನೀಡಿದರು. ಅವರ ಆದೇಶದಂತೆ ಅಭಯಾಳ ಮಾತಾಪಿತರಿಗೆ ಆಕೆ ಕಾಣೆಯಾಗಿರುವ ಬಗ್ಗೆ ತಿಳಿಸಲಾಯಿತು. ಆನಂತರ ರ್ಚಚಿನ ಹಿರಿಯರು ತಮಗೆ ಪರಿಚಯವಿದ್ದ ಪೊಲೀಸ್ ಅಧಿಕಾರಿ ಕೆ.ಟಿ.ಮೈಕೇಲ್ ಅವರಿಗೆ ವಿಷಯ ತಿಳಿಸಿದರು. ಮೈಕೇಲ್, ಕೊಟ್ಟಾಯಂನಲ್ಲಿ ಕೇರಳ ಸಿಐಡಿಯ ಎಸ್ಪಿ ಆಗಿದ್ದರು. ಅವರ ಸೂಚನೆಯ ಮೇರೆಗೆ ಮದರ್ ಸುಪೀರಿಯರ್ ಲಿಸಿ, ಇತರ ನನ್ಗಳ ಜೊತೆಗೆ ಕೊಟ್ಟಾಯಂ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದರು. ಆಗ ಗಂಟೆ ಬೆಳಗಿನ 9.15 ಆಗಿತ್ತು.
ಅಡಿಷನಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಗಸ್ಟೀನ್ ಸಿಬ್ಬಂದಿಯೊಡನೆ ಕಾನ್ವೆಂಟ್ಗೆ ಬಂದು ಸ್ಥಳ ಪರಿಶೀಲನೆ ಮಾಡಿದರು. ಅಭಯಾಳ ಸಹಪಾಠಿಗಳೊಂದಿಗೆ ಮಾತನಾಡಿ ಅವಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು. ಅಷ್ಟರಲ್ಲಿ ಎಸ್ಪಿ ಮೈಕೇಲ್ ಸಹ ಅಲ್ಲಿಗೆ ಬಂದು ಅಭಯಾ ಬಾವಿಯಲ್ಲಿ ಬಿದ್ದಿರಬಹುದೆಂದು ಶಂಕಿಸಿ ನುರಿತ ಈಜುಗಾರರನ್ನು ಕರೆಸಿದರು. ಬಾವಿಯ ತಳದಲ್ಲಿ ದೇಹವೊಂದಿದೆ ಎಂದು ಈಜುಗಾರರು ಹೇಳಿದಾಗ ಅದನ್ನು ಹೊರತೆಗೆಯಲು ಅಗ್ನಿಶಾಮಕ ದಳಕ್ಕೆ ಮಾಹಿತಿ ಹೋಯಿತು.
ಅಗ್ನಿಶಾಮಕ ಸಿಬ್ಬಂದಿ ಬಾವಿಯ ತಳದಲ್ಲಿದ್ದ ಶವವನ್ನು ಮೇಲಕ್ಕೆ ತೆಗೆದರು. ಅದು ಸಿಸ್ಟರ್ ಅಭಯಾಳದ್ದೇ ಎಂದು ತಿಳಿದಾಗ ಹಾಸ್ಟೆಲ್ ನಿವಾಸಿಗಳು ಗಾಬರಿಗೊಂಡರು. ಇದು ಹೇಗಾಯಿತು ಎಂದು ಮದರ್ ಸುಪೀರಿಯರ್ ಅವರನ್ನು ಅಗ್ನಿಶಾಮಕ ಅಧಿಕಾರಿಗಳು ಕೇಳಿದಾಗ ಅಭಯಾ ಬಾವಿಯಿಂದ ನೀರನ್ನು ಮೇಲಕ್ಕೆತ್ತುವ ಪಂಪನ್ನು ಚಾಲೂ ಮಾಡಲು ಹೋಗುವಾಗ ಅಕಸ್ಮಾತ್ತಾಗಿ ಬಾವಿಯೊಳಗೆ ಬಿದ್ದಿರಬಹುದು ಎಂದರು. ಇದನ್ನೇ ಅಗ್ನಿಶಾಮಕ ಅಧಿಕಾರಿಗಳು ತಮ್ಮ ದಾಖಲೆಗಳಲ್ಲಿ ಬರೆದರು.
ಪೊಲೀಸರು ಶಂಕಿತ ಸಾವಿನ ಪ್ರಕರಣ ದಾಖಲಿಸಿಕೊಂಡರು. ಪಂಚನಾಮೆಯ ಸಮಯದಲ್ಲಿ ಪೊಲೀಸರು ಮೃತಳ ತಲೆಯ ಹಿಂಬದಿಯಲ್ಲಿ ಪೆಟ್ಟುಗಳಾಗಿದ್ದನ್ನು ಹಾಗೂ ಬೆನ್ನು, ಪೃಷ್ಠದ ಮೇಲೆ ತರಚಿದ ಗಾಯಗಳಾಗಿದ್ದನ್ನು ಗಮನಿಸಿದರು. ಮೃತದೇಹದ ಫೋಟೋ ತೆಗೆದ ಛಾಯಾಗ್ರಾಹಕ, ಮೃತಳ ಕತ್ತಿನ ಮೇಲೆ ಉಗುರಿನ ಗುರುತುಗಳಿದ್ದುದನ್ನು ಗಮನಿಸಿದ. ಸಿಸ್ಟರ್ ಅಭಯಾ ಅದೇ ಊರಿನಲ್ಲಿದ್ದ ಥಾಮಸ್ ಮತ್ತು ಲೀನಮ್ಮ ಇವರ ಪುತ್ರಿ. 1971ರಲ್ಲಿ ಜನಿಸಿದ ಆಕೆ 1990ರ ಮೇ 1ರಂದು ಕ್ರೈಸ್ತ ಸನ್ಯಾಸಿನಿಯಾಗಿ ದೀಕ್ಷೆ ಪಡೆದು ಕಾನ್ವೆಂಟ್ಗೆ ದಾಖಲಾಗಿದ್ದಳು. ಮೊದಲು ಆಕೆಯ ಹೆಸರು ಬೀನಾ ಎಂದಾಗಿತ್ತು.
ಏತನ್ಮಧ್ಯೆ ಕಾನ್ವೆಂಟ್ನ ಹಿರಿಯರು ಮತ್ತು ಕಾನ್ವೆಂಟಿನ ಉಸ್ತುವಾರಿ ಹೊತ್ತ ರ್ಚಚಿನ ಹಿರಿಯರು ಸಿಸ್ಟರ್ ಅಭಯಾ ಆತ್ಮಹತ್ಯೆ ಮಾಡಿಕೊಂಡಳು ಎಂದೇ ಎಲ್ಲರಿಗೂ ತಿಳಿಸಿದರು. ತನ್ನ ಕುಟುಂಬ ಸದಸ್ಯರ ಆರೋಗ್ಯ ಮತ್ತು ವಿದ್ಯಾಭ್ಯಾಸದಲ್ಲಿ ಹಿನ್ನಡೆಯಿಂದ ತೀರಾ ಖಿನ್ನಳಾಗಿದ್ದ ಕಾರಣದಿಂದಲೇ ಆಕೆ ಹೀಗೆ ಮಾಡಿದಳೆಂದು ಅವರು ಹೇಳಿದರು. ಅಭಯಾಳ ತಂದೆ ಥಾಮಸ್ ಸಿಟ್ಟಿಗೆದ್ದು ತನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ, ಆಕೆಗೆ ಜೀವನದಲ್ಲಿ ಜಿಗುಪ್ಸೆ ಇರಲಿಲ್ಲ, ಆಕೆಯ ಸಾವಿನ ಬಗ್ಗೆ ತನಗೆ ಸಂಶಯ ಬರುತ್ತಿದೆ ಎಂದರು. ಬಾವಿಯ ಪಂಪನ್ನು ಚಾಲೂ ಮಾಡುವುದು ವಿದ್ಯಾರ್ಥಿನಿಯರ ಕೆಲಸವಾಗಿರದಿದ್ದರೂ ಮದರ್ ಸುಪೀರಿಯರ್ ಅಗ್ನಿಶಾಮಕ ದಳಕ್ಕೆ ತಪ್ಪು ಮಾಹಿತಿಯೇಕೆ ಕೊಟ್ಟರು ಎಂದು ಚಕಿತಗೊಂಡ ಅಭಯಾಳ ಸಹಪಾಠಿಗಳು ಕಾನ್ವೆಂಟಿನ ಊಟದ ಹಾಲ್ ಮತ್ತು ಅಡುಗೆ ಕೋಣೆಯಲ್ಲಿನ ದೃಶ್ಯವನ್ನು ನೋಡಿದರೆ ಅಭಯಾಳ ಸಾವು ಆಕಸ್ಮಿಕವೂ ಅಲ್ಲ ಆತ್ಮಹತ್ಯೆಯೂ ಅಲ್ಲ ಎಂದು ಬಲವಾಗಿ ಸಂಶಯ ಬರುತ್ತಿದೆ ಎಂದು ಗುಸುಗುಸು ಮಾತನಾಡಿಕೊಳ್ಳತೊಡಗಿದರು. ವೈದ್ಯಕೀಯ ವರದಿ ಬರುವ ಮುನ್ನವೇ ಅಭಯಾಳ ಸಾವನ್ನು ಸಂಸ್ಥೆಯ ಹಿರಿಯರು ಆತ್ಮಹತ್ಯೆಯೆಂದೇಕೆ ಬಿಂಬಿಸಹೊರಟಿದ್ದಾರೆ ಎಂದು ಅವರು ಪ್ರಶ್ನಿಸತೊಡಗಿದರು.
(ಮುಂದುವರಿಯುವುದು)
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)