ಚಂಚಲ ಜಗತ್ತಿನ ಚಿತ್ತವಿಕಾರ, ಅರ್ಜುನನ ಆತ್ಮಸಾಕ್ಷಾತ್ಕಾರ

Savyasachi
Published on
ದೇವೇಂದ್ರನ ಒಡ್ಡೋಲಗದಲ್ಲಿ ಸಂಭ್ರಮದ ಗೋಷ್ಠಿಯೊಂದು ಏರ್ಪಾಟಾಗಿದೆ. ಪರಮಶಿವನ ವಿರುದ್ಧವೇ ಕಾದಾಡಿ ಪಾಶುಪತಾಸ್ತ್ರವನ್ನು ಗೆದ್ದು ಸಶರೀರನಾಗಿ ದೇವಲೋಕಕ್ಕೆ ಆಗಮಿಸಿರುವ ಮೂರುಲೋಕದ ಗಂಡ ಅರ್ಜುನನನ್ನು ಇಂದ್ರ ತನ್ನ ಸಿಂಹಾಸನದಲ್ಲೇ ಕುಳ್ಳಿರಿಸಿಕೊಂಡಿದ್ದಾನೆ. ತಿಲೋತ್ತಮೆ, ರಂಭೆ, ಮಧುರಸ್ವರೆ, ಘೃತಾಚಿ, ಸುಕೇಶಿ, ಗೌರೀಶ್ವರಿ, ವರೂಥಿನಿ, ಪೂರ್ವಚಿತ್ತಿ, ಸುಲೇಖೆ, ಚಿತ್ರರಥಿ, ಸುರಭಿಗಂಧಿನಿ, ಚಾರುಮುಖಿ, ಊರ್ವಶಿ ಹೀಗೆ ಒಬ್ಬರೇ ಇಬ್ಬರೇ? ದೇವಾಂಗನೆಯರು ಅಮರಾವತಿಯ ರಾಜಾಂಗಣದಲ್ಲಿ ನರ್ತಿಸುತ್ತ, ಸಭಿಕರನ್ನು ಸಮ್ಮೋಹಿಸುತ್ತ ಮಾಧುರ್ಯಲೋಕವನ್ನೇ ಸೃಷ್ಟಿಗೈದಿದ್ದಾರೆ. ಏನದ್ಭುತ, ಎಂಥ ಸೌಂದರ್ಯ, ದೇವಲೋಕವಿದು ನಿಜದ ನಾಕ ಎಂದು ಬೆರಗಾಗಿ ಮೈಮರೆತ ಅರ್ಜುನ ‘ಈ ಯುವತಿ ತಾನಾವಳೋ ಕುಸು/ಮಾಯುಧನ ಖಂಡೆಯವಲಾ ಮಝು/ ಮಾಯೆಯೆನುತ..’ ಊರ್ವಶಿಯನ್ನೇ ಬಿಟ್ಟಕಣ್ಣು ಮುಚ್ಚಲು ಮರೆತಂತೆ ವೀಕ್ಷಿಸುತ್ತಿದ್ದಾನೆ. ಇಂದ್ರನೂ ಅದನ್ನು ಗಮನಿಸಿದ. ಆ ಸಂಗೀತಗೋಷ್ಠಿ ಮುಗಿಯುತ್ತಿದ್ದಂತೆಯೇ ಆಪ್ತ ಚಿತ್ರಸೇನನನ್ನು ಕರೆಸಿಕೊಂಡ ಇಂದ್ರ, ಊರ್ವಶಿಯ ಮೇಲೆ ಅರ್ಜುನನ ಮನ ವಾಲಿದ್ದನ್ನು ಒಡ್ಡೋಲಗದಲ್ಲಿ ಕಂಡೆ. ಪುತ್ರನ ಮನಸ್ಸಿಗೆ ಸಂತೋಷ ಪಡಿಸಲು ವ್ಯವಸ್ಥೆ ಮಾಡೆಂದು ಸೂಚಿಸುತ್ತಾನೆ. ಎಮಗೆ ಮಗನರ್ಜುನನು ನೀನಿಂ/ದೆಮಗೆ ಸೊಸೆಯಹುದಾತನಂತ/ ಸ್ಥಿಮಿರವನು ಕಳೆ ನಿನ್ನ ಕುಚಯುಗ ಕಾಂತಿ ಲಹರಿಯಲಿ.. ‘ಇಂದು ನಿನೆನ್ನ ಸೊಸೆಯ ರೂಪದಲ್ಲಿ ನನ್ನ ಮಗ ಅರ್ಜುನನಿಗೆ ಅಂತರಂಗ ಸುಖ ನೀಡಬೇಕು’ ಎಂಬ ಇಂದ್ರನ ಸಂದೇಶವನ್ನು ಚಿತ್ರಸೇನನ ಮೂಲಕ ತಿಳಿದು ಊರ್ವಶಿ ರೋಮಾಂಚಿತಳಾಗುತ್ತಾಳೆ. ಅಪೂರ್ವ ಸಂಗಮಕ್ಕಾಗಿ ಕಾತರಿಸುತ್ತಾಳೆ. ಲಜ್ಜೆಯಿಂದ ಸಜ್ಜಾಗುತ್ತಾಳೆ. ಮಂಗಳಸ್ನಾನ ಮಾಡಿ, ಬಗೆಬಗೆಯ ಪರಿಮಳದ್ರವ್ಯಗಳನ್ನು ಪೂಸಿಕೊಂಡು, ಅತ್ಯಮೂಲ್ಯ ಆಭರಣಗಳಿಂದ ಸಿಂಗರಿಸಿಕೊಂಡು, ಮೈಮನಗಳಲ್ಲಿ ಪುಳಕ ತುಂಬಿಕೊಂಡು ಪಾರ್ಥನ ಅರಮನೆಗೆ ಹೊರಡುತ್ತಾಳೆ. ವರ್ಷಗಟ್ಟಲೆ ಅರಮನೆಯ ಮೆಟ್ಟಿಲು ಕಾದರೂ, ದೇವಮುಖ್ಯರಿಗೇ ದರ್ಶನ ಭಾಗ್ಯ ಕರುಣಿಸದ ಊರ್ವಶಿ ಅರ್ಜುನನಲ್ಲಿ ಅನುರಕ್ತೆಯಾಗಿ ಹೊರಟಿರುವ ಸೊಬಗನ್ನು ಕಂಡು ದೇವತೆಗಳು ಬೆರಗಾಗುತ್ತಾರೆ.

ಪರಿಮಳದ ಪುತ್ಥಳಿಯೊ ಚೆಲುವಿನ/ ಕರುವಿನೆರಕವೊ ವಿಟರ ಪುಣ್ಯದ/ ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರುಫಲವೊ/ ಸ್ಮರನ ವಿಜಯಧ್ವಜವೊ ಮನ್ಮಥ/ ಪರಮ ಶಾಸ್ತ್ರದ ಮೂಲಮಂತ್ರವೊ/ ಸುರಸತಿಯರಧಿ ದೇವತೆಯೋ.. ವರ್ಣಿಸುವುದು ಅಸಾಧ್ಯ ಎಂಥ ಅನುಪಮ ಚೆಲುವು ಎಂದು ಊರ್ವಶಿಯ ಚೆಲುವಿಗೆ ಮನಸೋಲುತ್ತ ದೇವತೆಗಳು ಅರ್ಜುನನ ಭಾಗ್ಯವನ್ನು ನೆನೆಸಿಕೊಂಡು ಹಲುಬುತ್ತಾರೆ.

ಅರಮನೆಯ ಮುಖಬಾಗಿಲಲ್ಲಿ ಪಲ್ಲಕ್ಕಿಯಿಂದಿಳಿದ ಊರ್ವಶಿ ಬಳ್ಳಿಯಂತೆ, ಮಿಂಚಿನಂತೆ, ಬೆಳದಿಂಗಳಿನಂತೆ ಕಂಪು-ತಂಪು ಸೂಸುತ್ತ ಇಂದ್ರಮಹಲಿನ ಒಂದೊಂದೇ ಪ್ರಾಕಾರಗಳನ್ನು ದಾಟಿ ಅಂತಃಪುರದತ್ತ ಹೆಜ್ಜೆ ಹಾಕುತ್ತಿದ್ದರೆ, ವೈಭವದ ಪಲ್ಲಂಗದಲ್ಲಿ ಅರ್ಜುನ ತಿಳಿನಿದ್ರೆಯಲ್ಲಿದ್ದಾನೆ. ಮನ್ಮಥನ ಪುಷ್ಪಬಾಣ ಸೋಕಿ ಇಡೀ ಅರಮನೆಯಲ್ಲಿ ಪರಿಮಳದ ತಂಗಾಳಿ ಬೀಸಿ ಮೋಹದ ಮಾಯಾಜಾಲ ಪಸರಿಸಿ ಸಮ್ಮೋಹಕ ವಾತಾವರಣ ಸೃಷ್ಟಿಯಾದ ಆ ಸುಮಧುರ ಸನ್ನಿವೇಶದಲ್ಲಿ ಕನಸಿನಲ್ಲಿ ಆವರಿಸಿದ ಪ್ರೀತಿರಸದ ಸುಖಭಾರದಲ್ಲಿ ಮೈಹಗುರಾಗಿ ಕಣ್ತೆರೆದ ಅರ್ಜುನನಿಗೆ ಆಶ್ಚರ್ಯ. ಏಕಾಂತದ ಹೊತ್ತಿನಲ್ಲಿ ತ್ರಿಲೋಕ ಸೌಂದರ್ಯ ಮೂರ್ತರೂಪವಾಗಿ, ದೇವಕನ್ನಿಕೆಯೇ ತನ್ನನ್ನು ಹುಡುಕಿಕೊಂಡು ಮೋಹನಾಕಾರದಿಂದ ಬಂದಿರುವುದೇಕೆಂದು ಬೆಚ್ಚುತ್ತಾನೆ. ಮರುಕ್ಷಣದಲ್ಲೇ ಸಾವರಿಸಿಕೊಂಡು ಅಪ್ಸರನಾರಿಯನ್ನು ಸ್ವಾಗತಿಸುತ್ತಾನೆ. ಮಣಿಮಂಚದಿಂದ ಕೆಳಗಿಳಿದು ಕೈಮುಗಿದು, ‘ಸುರೇಂದ್ರನ ಮಾನಿನಿ ನೀವು ಅಭಿವಂದನೀಯರು. ನಿಮ್ಮ ದರ್ಶನದಿಂದ ನಾನು ಕೃತಾರ್ಥನಾದೆ. ನಿಮ್ಮ ಮಗನ ಉಪಚಾರವನ್ನು ಸ್ವೀಕರಿಸಿ ಇಲ್ಲಿಗೆ ಆಗಮಿಸಿದ ಕಾರಣವನ್ನು ತಿಳಿಸಿ’ ಎಂದು ವಿನಂತಿಸುತ್ತಾನೆ.

ಈಗ ಬೆರಗಾಗುವ ಸರದಿ ಊರ್ವಶಿಯದಾಗಿತ್ತು. ಅರೆರೆ, ಇದೇನಾಯ್ತು ಎಂದು ಒಳಗೊಳಗೇ ಬೆಚ್ಚುತ್ತಾಳೆ, ಇಂಥ ಅಪ್ಸರಕನ್ನಿಕೆ ಎದುರು ಬಂದಾಗಲೂ ಮಾತೃಸ್ವರೂಪ ಕಂಡ ಪಾರ್ಥನ ಮನಸ್ಸಿನ ನಿಗ್ರಹವನ್ನು ಒಳಗೊಳಗೇ ಮೆಚ್ಚುತ್ತಾಳೆ. ಬಂದ ಕೆಲಸ ಕೆಟ್ಟಿತಲ್ಲ ಎಂದು ಹಲ್ಕಚ್ಚುತ್ತಾಳೆ. ಮರುಕ್ಷಣದಲ್ಲೇ ಮನುಷ್ಯಮಾತ್ರನಿಂದ ಇದೆಂಥ ತಿರಸ್ಕಾರ ಎಂದು ಕ್ರುದ್ಧಳಾಗುತ್ತಾಳೆ. ಇಂದ್ರ ಏಕಾದರೂ ಅಂಥದ್ದೊಂದು ಸಂದೇಶ ಕಳಿಸಿದನೋ? ಚಿತ್ರಸೇನನ ಮಾತು ಕೇಳಿ ಏಕಾದರೂ ಈತನಿಗೆ ಮನಸ್ಸು ಕೊಟ್ಟೆನೋ? ಇಲ್ಲಿಯವರೆಗೂ ಏಕೆ ಬಂದೆನೋ? ಮನ್ಮಥನು ಇಂಥ ಸಂದರ್ಭವನ್ನು ಅದೇಕೆ ಸೃಷ್ಟಿಸಿದನೋ ಎಂದು ಊರ್ವಶಿ ಮನಸ್ಸಿನಲ್ಲೇ ನಿಡುಸುಯ್ಯುತ್ತಾಳೆ.

ಈ ಪಾರ್ಥನೇನು ಮತಿಹೀನನೇ, ನಪುಂಸಕನೇ? ತಪೋನಿಷ್ಠನೇ, ಖಳನೇ, ಖೂಳನೇ, ನಾನು ಬಂದಿರುವುದೇಕೆಂದು ತಿಳಿಯದಷ್ಟು ಮಂದಬುದ್ಧಿ ಯವನೇ ಎಂದು ಕುಪಿತ-ಕಂಗಾಲಾದ ಊರ್ವಶಿ, ‘ಇಂದ್ರನ ಆದೇಶದಂತೆ, ಚಿತ್ರಸೇನನ ಸಂದೇಶದಂತೆ ನಿನ್ನ ಅಂತಃಪುರಕ್ಕೆ ಬಂದಿರುವೆ. ಒಲಿದು ಬಂದವಳನ್ನು ತಿರಸ್ಕರಿಸುವುದು ಶ್ರೇಯಸ್ಸಲ್ಲ, ನಿನ್ನ ವ್ಯಕ್ತಿತ್ವಕ್ಕೆ ಭೂಷಣವಲ್ಲ, ಲಜ್ಜೆ, ಅಂಜಿಕೆ ಬಿಟ್ಟು ನನ್ನನ್ನು ಸ್ವಾಗತಿಸಬಾರದೇ?’ ಎಂದು ಅನುನಯಿಸುತ್ತಾಳೆ. ಆದರೆ, ಅರ್ಜುನನದು ಶಿವನನ್ನು ಮೀರಿಸುವ ನಿಗ್ರಹ. ‘ಶಿವ ಶಿವಾ ಇದೆಂಥ ಮಾತು ಹೇಳಿದೆ ಮಾತೆ? ನಮ್ಮ ವಂಶದ ಮೂಲ ಜನನಿ ನೀವು. ಹಿಂದೆ ಪುರೂರವನನ್ನು ವರಿಸಿದವರು ನೀವು. ಪುರು ವಂಶದ ಕುಡಿಗಳು ನಾವು. ನಿಮ್ಮೊಂದಿಗೆ ಅನ್ಯವಿಚಾರ ನಿಷಿದ್ಧ, ಅಪದ್ಧವಲ್ಲವೇ? ನನ್ನನ್ನು ಕ್ಷಮಿಸಿ, ಗೌರವ ಸ್ವೀಕರಿಸಿ’ ಎಂಬ ಅರ್ಜುನನ ಮಾತಿಗೆ ಊರ್ವಶಿ ಕೆರಳುತ್ತಾಳೆ. ‘ದೇವಲೋಕದ ಗಣಿಕೆಯರಿಗೆ ಲೋಕರೂಢಿಯ ಕಟ್ಟುಪಾಡುಗಳಿಲ್ಲ ಎಂದು ಅರಿಯದ ಮೂಢನೇ ನೀನು? ಮುಪ್ಪಾಗದ, ಮುಕ್ಕಾಗದ ನಿತ್ಯ ಕನ್ನಿಕೆಯರು ನಾವು, ಸಂಬಂಧಗಳ ಬಂಧ-ಮೋಹ-ಪಾಶಗಳ ಬದ್ಧತೆ ನಮಗಿಲ್ಲ. ಬಯಸಿಬಂದ ಕಾಮಿನಿಯ ಮನಸ್ಸನ್ನು ಗೌರವಿಸದವನು ಇಂದ್ರನಾಗಿರಲಿ, ಚಂದ್ರನಾಗಿರಲಿ ಕುರಿಸಮಾನ. ಇದನ್ನು ಅರ್ಥ ಮಾಡಿಕೊಳ್ಳದೇ ನನ್ನನ್ನು ಅವಮಾನಿಸಿದ, ಒಲಿದು ಬಂದ ಸೌಂದರ್ಯದ ಅಧಿದೇವತೆಯನ್ನು ತಿರಸ್ಕರಿಸಿದ ನೀನು ಭೂಲೋಕದಲ್ಲಿ ಒಂದು ವರ್ಷ ನಪುಂಸಕನಾಗಿ ನರಳು’ ಎಂದು ಶಪಿಸಿದಳು.

ಅರ್ಜುನ ಜಗದೇಕವೀರ. ಸುರಸುಂದರ. ಸ್ವಯಂವರದಲ್ಲಿ ದ್ರೌಪದಿಯನ್ನು ಗೆದ್ದ ಮನೋಹರ. ವಿಚಿತ್ರಸನ್ನಿವೇಶದಲ್ಲಿ ವರ್ಷಕಾಲ ಸಂನ್ಯಾಸಿಯಂತಿರುವ ದೀಕ್ಷೆ ತೊಟ್ಟು ರಾಜ್ಯತೊರೆದರೂ, ಸಂದರ್ಭ, ಸಂಬಂಧಗಳಿಗೆ ಕಟ್ಟುಬಿದ್ದು ಮೂರು ಮದುವೆಯಾಗಿ ಮರಳಿದ ಮಹಾನುಭಾವ. ಆದರೆ, ವೈರತ್ವಕ್ಕಿಂತ ವೀರತ್ವದಿಂದ ಜಗತ್ತು ಗೆಲ್ಲಲು ಹೊರಟ ಅರ್ಜುನ ಪರಮಶಿವನೇ ನರವೇಷದಲ್ಲಿ ಬಂದು ಪಂಥಾಹ್ವಾನ ನೀಡಿದಾಗ ಕಾದಾಡಿದ ಪರಮಸಾಹಸಿ. ತನ್ನ ವೀರತ್ವ, ಧೈರ್ಯ, ಶೌರ್ಯ, ಸಾಹಸ ಪ್ರವೃತ್ತಿ ಬಗ್ಗೆ ಅರ್ಜುನನಿಗೆ ಗರ್ವವಿತ್ತಾದರೂ, ಚಿತ್ತವಿಕಾರವಿರಲಿಲ್ಲ. ಅದೇ ಕಾರಣಕ್ಕೆ ಮೋಹನಾಕಾರದಲ್ಲಿ ಊರ್ವಶಿಯೇ ಬಂದಾಗಲೂ ಪಾರ್ಥನ ಚಿತ್ತ ಚಂಚಲವಾಗಲಿಲ್ಲ. ಮನುಷ್ಯಾಕಾರದಲ್ಲಿ ದೇವಕನ್ನಿಕೆ ಸಾಕಾರದ ಕ್ಷಣದಲ್ಲೂ ವಿವೇಚನೆಯನ್ನು ಆತ ಮರೆಯಲಿಲ್ಲ. ‘ದೇವಗಣಿಕೆಗೆ ಸಂಬಂಧಗಳ ಕಟ್ಟುಗಳಿಲ್ಲವಾದರೂ, ಮನುಷ್ಯನಿಗೆ ಇದ್ದೇ ಇದೆ. ಚಿರಯೌವನೆಯಾದ ನೀನು ಮನುಷ್ಯನಾದ ನನಗೆ ಮಾತೃಸ್ವರೂಪಳು, ಪೂಜ್ಯಳು. ನಿನ್ನೊಂದಿಗೆ ಮಾತಾ-ಪುತ್ರನ ಸಂಬಂಧ ಮಾತ್ರವೇ ಏರ್ಪಡಲು ಸಾಧ್ಯ’ ಎಂಬ ದೃಢ ನಿಲುವಿನಿಂದ ಅರ್ಜುನ ವಿಚಲಿತನಾಗಲಿಲ್ಲ. ಶಿವನ ಗೆದ್ದ ಪಾರ್ಥ, ಮೋಹಕ್ಕೆ ಕಟ್ಟುಬಿದ್ದು ಊರ್ವಶಿಯ ಸೌಂದರ್ಯಕ್ಕೆ ಸೋತ ಎಂಬ ಅಪವಾದ ಸೃಷ್ಟಿಯಾಗದಂತೆ ಅರ್ಜುನ ನಡೆದುಕೊಂಡಿದ್ದು ಮನುಷ್ಯ ಜನ್ಮದ ಅರ್ಥ, ಮೌಲ್ಯ, ತತ್ತಾ್ವದರ್ಶಗಳನ್ನು ಪ್ರತಿಷ್ಠಾಪಿಸಿತು.

ಇಂಥ ಒಂದು ಮನೋನಿಗ್ರಹ, ದೃಢ ನಿರ್ಧಾರ, ಬದುಕಿನಲ್ಲಿ ತಮಗೆ ಏನು ಬೇಕು, ಯಾವುದು ಬೇಡ ಎಂಬ ಸ್ಪಷ್ಟತೆಯಿಂದ ಆದರ್ಶ ವ್ಯಕ್ತಿತ್ವ, ಆದರ್ಶ ಸಮಾಜ, ಆದರ್ಶ ಜಗತ್ತು ರೂಪಿಸಲು ಸಾಧ್ಯ ಎಂದು ಕಾವ್ಯಮಯವಾಗಿ ಕಟ್ಟಿಕೊಟ್ಟವರು ಯುಗದ ಕವಿ, ಜಗದ ಕವಿ ಕುಮಾರವ್ಯಾಸ. ಇವತ್ತಿನ ಸಂದರ್ಭದಲ್ಲಿ ಗದುಗಿನ ಭಾರತವನ್ನು ಮತ್ತೆಮತ್ತೆ ಓದುವುದರಿಂದ ದಾರಿತಪು್ಪತ್ತಿರುವ, ಅನ್ಯಾಯದ, ಅಧರ್ಮದ, ಕಾಮಲಾಲಸೆಯ ಮಾರ್ಗದಲ್ಲಿ ಬಣ್ಣಗೇಡಿಯಾಗಿರುವ ಸಮಾಜಕ್ಕೆ ಅರಿವು ಮೂಡಬಹುದೋ ಏನೋ..

ಮನಸ್ಸಿನ ನಿಗ್ರಹವೆನ್ನುವುದು ನಿಜಕ್ಕೂ ಅತ್ಯಂತ ಕಠಿಣವಾದ ಸಂಗತಿ. ಜೀವನ ಪಯಣದಲ್ಲಿ ಯಾವಾಗಲೂ ಎರಡು ದಾರಿಗಳಿರುತ್ತವೆ. ಒಂದು ಸರಿಯಾದ ದಾರಿ ಇನ್ನೊಂದು ತಪು್ಪದಾರಿ. ಸರಿ ದಾರಿ ತುಳಿಯುವುದು ಯಾವಾಗಲೂ ಕಠಿಣ. ಏಕೆಂದರೆ, ಆ ದಾರಿಯಲ್ಲಿ ಮುಂದೆ ಯಾವ ತಿರುವಿದೆ? ಯಾವ ಕೊರಕಲಿದೆ? ಗುರಿ ಎನ್ನುವುದು ಎಷ್ಟು ದೂರವಿದೆ? ನಿಜಕ್ಕೂ ತಲುಪಲು ಸಾಧ್ಯವಾದೀತೇ? ಎಂದು ಗೊತ್ತಿಲ್ಲದ ಅಯೋಮಯ ಪರಿಸ್ಥಿತಿ. ಇಂಥ ದಾರಿಯಲ್ಲಿ ಸಾಗುವಾಗ ಜೊತೆಗೆ ಬರುವ ಸಂಗಾತಿಗಳು ಎರಡೇ. ಒಂದು ಸತ್ಯ ಇನ್ನೊಂದು ಧೈರ್ಯ. ಆದರೆ, ತಪು್ಪದಾರಿ ಎನ್ನುವುದು ಹಾಗಲ್ಲ? ಆ ಮಾರ್ಗದಲ್ಲಿ ಆಕರ್ಷಣೆಗಳು, ಪ್ರಲೋಭನೆಗಳು ಬಹಳ. ಸುಳ್ಳು ಹಾಗೂ ಆತ್ಮವಂಚನೆ ಈ ದಾರಿಯಲ್ಲಿ ಸಾಗುವವರ ಸಂಗಾತಿಗಳು. ನಾಳೆ ಎಂಬುದು ನಾಳೆಗಿರಲಿ. ಇಂದಿನ ಸುಖಭೋಗ ಕಳೆದುಕೊಳ್ಳುವುದೇಕೆ ಎಂಬ ಮನೋಭಾವ ಈ ದಾರಿಯಲ್ಲಿ ಸಾಗುವವರ ಸಮರ್ಥನೆ. ಹೀಗೆ ಸರಿ ಮತ್ತು ತಪು್ಪ ಎಂಬ ಎರಡು ಆಯ್ಕೆಗಳು ಎದುರಿಗಿದ್ದಾಗ ಸರಿಯನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕೆ, ತಪು್ಪ ದಾರಿಯ ಆಸೆ- ಆಮಿಷಗಳನ್ನು ತಿರಸ್ಕರಿಸುವುದಕ್ಕೆ ದೊಡ್ಡ ಪ್ರಮಾಣದ ಆತ್ಮನಿಗ್ರಹ ಶಕ್ತಿ ಬೇಕಾಗುತ್ತದೆ. ಈ ಡಿಜಿಟಲ್ ಯುಗದಲ್ಲಿ ಚಂಚಲ ಪುರುಷನ ಚಿತ್ತಾಪಹರಣಕ್ಕೆ ಕಾಯುವ ಮೋಹದ ಊರ್ವಶಿಯರು ಸಾವಿರ. ಆದರೆ, ಪರಸ್ತ್ರೀ ದೇಹದಲ್ಲಿ ಮಾತೃಸ್ವರೂಪ ಕಾಣುವ ಅರ್ಜುನನಂಥವರು ಮಾತ್ರ ವಿರಳಾತಿವಿರಳ. ಬಹುಶಃ ಇವತ್ತಿನ ಸಮಾಜದಲ್ಲಿ ನಿತ್ಯ ಕಾಣುತ್ತಿರುವ ಸೈಬರ್ ಅಪರಾಧಗಳಿಗೆ, ಅನೈತಿಕ ಅಪಚಾರಗಳಿಗೆ, ಹನಿಟ್ರಾ್ಯಪ್​ನಂಥ ವಿಕಾರಗಳಿಗೆ ಮನುಷ್ಯ ವಿವೇಕ, ವಿವೇಚನೆ, ನಿಗ್ರಹಶಕ್ತಿಯನ್ನು ಮರೆತು ಚಪಲಚಂಚಲನಾಗುತ್ತಿರುವುದೇ ಕಾರಣ. ಭಯಭರಿತ ಭಕ್ತಿಯಲಿ ಕಾಮಾ/ರಿಯನು ಗೆಲಿದರ್ಜುನನು ಹರ ವೈ/ ರಿಯನು ಗೆಲಿದನು ಧೈರ್ಯದಿಂದೂರ್ವಶಿಯ ಶಾಪದಲಿ (ಭಯಭಕ್ತಿಯಿಂದ ಮನ್ಮಥವೈರಿ ಪರಮೇಶ್ವರನನ್ನು ಗೆದ್ದ ಅರ್ಜುನನು ಊರ್ವಶಿಯ ಶಾಪವನ್ನು ಲೆಕ್ಕಿಸದೆ ಹರನ ವೈರಿ ಮನ್ಮಥನನ್ನು ಸೋಲಿಸಿದನು) ಎಂಬ ಕುಮಾರವ್ಯಾಸನ ನುಡಿ ಸಾರವನ್ನು ನಮ್ಮ ಶಾಲೆ, ಕಾಲೇಜುಗಳಲ್ಲಿ ಹೆಚ್ಚು ಹೆಚ್ಚು ಕಲಿಸಿದರೆ, ಯುವಜನ ವಿಚಾರಭ್ರಷ್ಟರಾಗುವುದನ್ನು, ವಿವೇಕಭ್ರಷ್ಟ, ಲಂಪಟರಾಗುವುದನ್ನು ತಪ್ಪಿಸಬಹುದೇನೋ?

ನಲಿನೀದಲಗತ ಜಲಮತಿತರಲಂ / ತದ್ವಜ್ಜೀವಿತಮತಿಶಯಚಪಲಂ

ವಿದ್ದಿ ವ್ಯಾಧ್ಯಭಿಮಾನಗ್ರಸ್ತಂ / ಲೋಕಂ ಶೋಕಹತಂಚ ಸಮಸ್ತಂ

ತಾವರೆ ಎಲೆಯ ಮೇಲಿನ ನೀರು ಒಂದೆಡೆ ನಿಲ್ಲದೆ ಬಹುಬೇಗ ಜಾರಿ ಸೋರಿಹೋಗುತ್ತದೆ. ಈ ಮನುಷ್ಯ ಜನ್ಮವೂ ಅಷ್ಟೇ. ಅತ್ಯಂತ ಚಂಚಲ ಹಾಗೂ ಅನಿಶ್ಚಿತ. ಯಾವ ಕ್ಷಣದಲ್ಲಾದರೂ ದೇಹ ಬಿದ್ದುಹೋಗಬಹುದು, ಪ್ರಾಣಪಕ್ಷಿ ಹಾರಿ ಹೋಗಬಹುದು. ಈ ಜಗತ್ತು ರೋಗ, ದುರಹಂಕಾರಗಳಿಂದ ತುಂಬಿದೆಯೆಂದೂ, ಪ್ರತಿಯೊಬ್ಬರೂ ಒಂದಲ್ಲ ಒಂದು ದುಃಖದಿಂದ ಬಳಲುತ್ತಿರುವುದರೆಂದೂ ತಿಳಿದುಕೊಳ್ಳಬೇಕು. ಇರುವಷ್ಟು ಕಾಲ ಚಪಲಚಿತ್ತವನ್ನು ಗೋವಿಂದನ ಭಜನೆಯಿಂದ ಕಟ್ಟಿಹಾಕಬೇಕು ಎಂದು ಶಂಕರಾಚಾರ್ಯರು ಉಪದೇಶಿಸಿರುವುದು ಇದೇ ಕಾರಣಕ್ಕೆ. ಅರಿತು ಬಾಳಿದರೆ ಭೂಮಿಯೇ ಸ್ವರ್ಗ ಅಲ್ಲವೇ?

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net