ಹೋಳಿಗೆಗೂ ಅಡಕೆ ಸೈ; ನಿರಂತರ ಮೌಲ್ಯವರ್ಧನೆ ದಾರಿಯಲ್ಲಿರುವ ಅಡಕೆ

Vittavani lead 2
ಅಡಕೆ ಹೋಳಿಗೆ ತಯಾರಿಯಲ್ಲಿ ಶ್ರೀಕೃಷ್ಣ ಶಾಸ್ತ್ರಿ.
Published on

| ವೇಣುವಿನೋದ್ ಕೆ.ಎಸ್. ಮಂಗಳೂರು

ಅಡಕೆ ಜಗಿದು ಉಗಿಯುವುದಕ್ಕೆ ಎಂದು ಹೀಗೆಳೆಯುವ ಹಾಗಿಲ್ಲ. ನಿರಂತರ ಮೌಲ್ಯವರ್ಧನೆ ದಾರಿಯಲ್ಲಿರುವ ಅಡಕೆಯಲ್ಲಿ ಹಲವು ಉತ್ಪನ್ನ ಸಿದ್ಧಪಡಿಸಲಾಗುತ್ತಿದೆ. ಅಡಕೆಯ ಹೋಳಿಗೆ ಈ ಪಟ್ಟಿಗೆ ಲೇಟೆಸ್ಟ್ ಸೇರ್ಪಡೆ. ಅಡಕೆ ಚೊಗರಲ್ವೇ? ತಿನ್ನುವುದು ಹೇಗೆ ಸಾಧ್ಯ ಎಂಬಿತ್ಯಾದಿ ಸಂದೇಹಗಳು ನಿಮ್ಮಲ್ಲಿರಬಹುದು. ಆದರೆ ಅದೆಲ್ಲವನ್ನೂ ಪರಿಹರಿಸಿಕೊಂಡು ದಕ್ಷಿಣಕನ್ನಡ ಜಿಲ್ಲೆಯ ಯುವಕನೊಬ್ಬ ಅಡಕೆಯಿಂದಲೂ ಸಿಹಿತಿಂಡಿ ತಯಾರಿಸಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.

ಕೃಷಿ, ಅಡುಗೆ ಕೆಲಸ ಮಾಡಿಕೊಂಡಿರುವ ಪುತ್ತೂರು ತಾಲೂಕಿನ ಬಲ್ನಾಡು ಗುರಿಮೂಲೆಯ ಶ್ರೀಕೃಷ್ಣ ಶಾಸ್ತ್ರಿ, ಕೆಲದಿನಗಳ ಹಿಂದೆ ಅಡಕೆಯಿಂದ ಹೋಳಿಗೆ ಮಾಡಿದರೆ ಕೃಷಿಕರಿಗೆ ಒಂದಷ್ಟು ಸಹಾಯವಾಗಬಹುದು ಎಂದು ಯೋಚಿಸಿ, ಕಾರ್ಯತಂತ್ರ ರೂಪಿಸಿದರು. ಅಡಕೆಯನ್ನು ಮಿಲ್​ನಲ್ಲಿ ಪುಡಿ ಮಾಡಿಸಿದರು. ಆದರೆ ಹೋಳಿಗೆಗೆ ಬೇಕಾದಷ್ಟು ಸಣ್ಣ ಪುಡಿಯಾಗಲಿಲ್ಲ. ಅದನ್ನು ಮನೆಗೆ ತಂದು ತುಪ್ಪದಲ್ಲಿ ಹುರಿದು ಮತ್ತೆ ಮಿಕ್ಸಿಯಲ್ಲಿ ಮತ್ತಷ್ಟು ಪುಡಿ ಮಾಡಿಕೊಂಡರು. ಬಳಿಕ ಸಕ್ಕರೆ ಪಾಕ ಮತ್ತಿತರ ವಸ್ತುಗಳನ್ನು ಸೇರಿಸಿ ಪಾಕ ಬರಿಸಿ ಹೂರಣ ಸಿದ್ಧಗೊಳಿಸಿದರು. ಮೈದಾ ಬಳಸಿ ಸಾಂಪ್ರದಾಯಿಕವಾಗಿ ಕಣಕವನ್ನೂ ಮಾಡಿಕೊಂಡರು. ಸಾಮಾನ್ಯ ಹೋಳಿಗೆಯಂತೆಯೇ ಕಣಕದೊಳಗೆ ಹೂರಣ ಇಟ್ಟು ಮಣೆಯಲ್ಲಿ ಹೋಳಿಗೆ ಮಾಡಿ ಬೇಯಿಸಿದರು. ಅಡಕೆ ಹೋಳಿಗೆಯ ರುಚಿಯನ್ನು ಮನೆಯವರು, ಸಮೀಪ ಬಂಧುಗಳು ಮೆಚ್ಚಿಕೊಂಡರು. ಅಡಕೆಯ ಚೊಗರು ಸಿಹಿಯೊಂದಿಗೆ ನಸುವಾಗಿ ಬೆರೆತು ಅದರದ್ದೇ ಭಿನ್ನ ರುಚಿ ಸಿಗುತ್ತದೆ. ಹೂರಣ ಪಾಕ ಬರಿಸುವ ಕಾರಣ ಅಡಕೆಯ ಚೊಗರು ಸಾಕಷ್ಟು ನಿಯಂತ್ರಣ ಆಗುತ್ತದೆ ಎನ್ನುತ್ತಾರೆ ಶಾಸ್ತ್ರಿ.

ಅಡಕೆ ಪುಡಿ ಸವಾಲು: ದೊಡ್ಡ ಪ್ರಮಾಣದಲ್ಲಿ ಅಡಕೆ ಹೋಳಿಗೆ ಮಾಡುವುದು ಸದ್ಯಕ್ಕೆ ಶಾಸ್ತ್ರಿ ಅವರಿಗೆ ಸವಾಲು. ಯಾಕೆಂದರೆ ಅಷ್ಟು ಪ್ರಮಾಣದಲ್ಲಿ ಅಡಕೆ ಪುಡಿ ಮಾಡಿಕೊಳ್ಳುವುದು ಕಷ್ಟ. ಹಾಗಾಗಿ ಅವರು ಅದಕ್ಕೆ ಪ್ರತ್ಯೇಕ ಯಂತ್ರಗಳನ್ನು ಖರೀದಿಸುವ ಯೋಜನೆಯಲ್ಲಿದ್ದಾರೆ. ನನಗೆ ಹಲವೆಡೆಗಳಿಂದ ಅಡಕೆ ಹೋಳಿಗೆಗೆ ಆರ್ಡರ್ ಬರುತ್ತಿದೆ. ಆದರೆ ಸದ್ಯಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಅಡಕೆ ಪುಡಿ ಮಾಡುವ ಕೆಲಸ ಸರಾಗವಾದ ಬಳಿಕವಷ್ಟೇ ದೊಡ್ಡ ಪ್ರಮಾಣದಲ್ಲಿ ಹೋಳಿಗೆ ಪೂರೈಸಬಹುದು ಎನ್ನುತ್ತಾರೆ ಶ್ರೀಕೃಷ್ಣ ಶಾಸ್ತ್ರಿ.

ಕೊಕ್ಕೊ ಹೋಳಿಗೆಯೂ ಸಕ್ಸಸ್: ಕೊಕ್ಕೊದಿಂದಲೂ ಶಾಸ್ತ್ರಿ ಯಶಸ್ವಿಯಾಗಿ ಹೋಳಿಗೆ ಸಿದ್ಧಪಡಿಸಿದ್ದಾರೆ. ಒಣ ಕೊಕ್ಕೊ ಬೀಜವನ್ನು ಹುರಿದು ಸಿಪ್ಪೆ ತೆಗೆದು ಪುಡಿ ಮಾಡಿ ಸಕ್ಕರೆ ಪಾಕದೊಂದಿಗೆ ಮಿಶ್ರ ಮಾಡಿ ಅಗತ್ಯ ವಸ್ತು ಸೇರಿಸಿ ಹೂರಣ ರೆಡಿ ಮಾಡುವುದು, ಎಂದಿನಂತೆ ಕಣಕದ ಒಳಗೆ ಇರಿಸಿ ಲಟ್ಟಿಸುವುದು. ಇದರಿಂದ ಚಾಕಲೇಟ್ ರುಚಿಯುಳ್ಳ ಹೋಳಿಗೆ ಮೆಲ್ಲಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net