ಸಂಪಾದಕೀಯ: ಜನರ ಪ್ರಾಣಕ್ಕೆ ಬೆಲೆ ಇಲ್ಲವೆ?

untitled-design-4-6908ec3e7a81c
Published on

ದೇಶದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ. ಕಾನೂನಿನ, ದಂಡದ ಯಾವುದೇ ಭಯವಿಲ್ಲದೆ ಸುರಕ್ಷಾ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುತ್ತಿರುವ ದುರುಳರು ಅಮಾಯಕರ ಪ್ರಾಣ ತೆಗೆಯುತ್ತಿದ್ದಾರೆ. ತೆಲಂಗಾಣದಲ್ಲಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ 19 ಮಂದಿ ದುರ್ಮರಣ ಹೊಂದಿದ್ದಾರೆ.

ರಾಜಸ್ಥಾನದಲ್ಲಿ ಎರಡೇ ದಿನಗಳಲ್ಲಿ (ಭಾನುವಾರ ಮತ್ತು ಸೋಮವಾರ) ಎರಡು ಭೀಕರ ಅಪಘಾತಗಳು ಸಂಭವಿಸಿ, 29 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಮಿನಿ ಲಾರಿಯ ಚಾಲಕ ರಾಜಸ್ಥಾನದ ಜೈಪುರದಲ್ಲಿ ಸೋಮವಾರ ಅಡ್ಡಾದಿಡ್ಡಿ ವಾಹನ ಚಲಾಯಿಸಿ, 17 ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಕೆಲ ಶವಗಳು ತುಂಡುಗಳಾಗಿ ಚದುರಿ ಬಿದ್ದಿದ್ದು, ಅಪಘಾತದ ಭೀಕರತೆಗೆ ಸಾಕ್ಷಿ. ಮದ್ಯ ಸೇವಿಸಿ ವಾಹನ ಚಲಾಯಿಸುವವರ ಮೇಲೆ ಸಾಮಾನ್ಯ ದಂಡ ಹಾಕಿ (ಅದೂ ಅವರು ತಪಾಸಣೆ ವೇಳೆ ಸಿಕ್ಕಿಬಿದ್ದರೆ ಮಾತ್ರ) ಬಿಟ್ಟು ಬಿಡಲಾಗುತ್ತದೆ. ಇಂಥವರ ಚಾಲನಾ ಪರವಾನಗಿಯನ್ನೇ ರದ್ದು ಗೊಳಿಸುವುದಲ್ಲದೆ, ಕಠಿಣ ಕಾರಾಗೃಹ ಶಿಕ್ಷೆಯನ್ನೂ ವಿಧಿಸಬೇಕು. ಜನರ ಪ್ರಾಣದ ಬಗ್ಗೆ ಕಾಳಜಿಯೇ ಇಲ್ಲದೆ ಮನಸ್ಸಿಗೆ ಬಂದಂತೆ ವಾಹನ ಚಲಾಯಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಅಪಘಾತಗಳ ಪ್ರಮಾಣ ತಗ್ಗಿಸಲು ಸಾಧ್ಯವಿಲ್ಲ.

ಅಜಾಗರೂಕ ಚಾಲನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇರುವುದು ಮತ್ತು ಸಂಚಾರ ಪೊಲೀಸ್ ಇಲಾಖೆಯಲ್ಲಿ ಇರುವ ಲಂಚದ ಹಾವಳಿಯಿಂದ ವ್ಯವಸ್ಥೆ ಹದಗೆಟ್ಟು ಹೋಗಿದ್ದು, ನಿಯಮಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹೀಗಾಗಿ ಯಾವುದೇ ತಪು್ಪ ಮಾಡದ ಅಮಾಯಕ ಜನರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಸ್ಥಿತಿ ಬದಲಾಗಲೇ ಬೇಕು. ಅತಿ ವೇಗದ ಚಾಲನೆ, ನಿರ್ಲಕ್ಷ ್ಯ ಚಾಲನೆ, ರಾಂಗ್ ವೇಯಲ್ಲಿ ನುಗ್ಗಿ ಬರುವುದು ಹೀಗೆ ಸಂಚಾರ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಅಪಘಾತ ಮತ್ತು ಜೀವಹಾನಿಗೆ ಕಾರಣವಾಗುತ್ತಿವೆ. 2024ರಲ್ಲಿ ದೇಶದಲ್ಲಿ 1.68 ಲಕ್ಷ ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದು, ಈ ಪೈಕಿ 30 ಸಾವಿರ ಜನರು ಹೆಲ್ಮೇಟ್ ಧರಿಸದ ಕಾರಣಕ್ಕೆ ಜೀವ ತೆತ್ತಿದ್ದಾರೆ. 2023ರಲ್ಲಿ ರಸ್ತೆ ಅಪಘಾತಗಳಿಗೆ 1.8 ಲಕ್ಷ ಜನ ಬಲಿಯಾಗಿದ್ದಾರೆ.

ರಸ್ತೆ ಅಪಘಾತಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ಜಂಟಿ ಹೊಣೆಗಾರಿಕೆ ಇದೆ. ರಸ್ತೆಗಳ ದುಸ್ಥಿತಿ, ವಾಹನ ಸವಾರರ ಅಜಾಗರೂಕ ಚಾಲನೆ, ವಿಶ್ರಾಂತಿ ಇಲ್ಲದೆ ವಾಹನ ಚಲಾಯಿಸುವುದು ಮತ್ತು ಹವಾಮಾನ ವೈಪರೀತ್ಯದಂಥ ಕಾರಣಗಳು ಅಪಘಾತದ ಪ್ರಮಾಣ ಹೆಚ್ಚಿಸುತ್ತಿವೆ. ಜನರು ಕೂಡ ಸಂಚಾರ ನಿಯಮಗಳ ಪಾಲನೆಯಲ್ಲಿ ಯಾವುದೇ ಕಾರಣಕ್ಕೂ ಅಸಡ್ಡೆ ತೋರಬಾರದು, ಅಡ್ಡಾದಿಡ್ಡಿ ಸಂಚರಿಸುವ ವಾಹನ ಚಾಲಕರ ವಿರುದ್ಧ ಸಂಚಾರ ಪೊಲೀಸರು ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ, ರಸ್ತೆಗಳ ಗುಣಮಟ್ಟ ಹೆಚ್ಚಬೇಕು. ಗುಂಡಿಗಳು ಸೃಷ್ಟಿಸಿರುವ ಗಂಡಾಂತರಗಳಿಂದ ಮಾರಣಾಂತಿಕ ಅಪಘಾತಗಳು ಸಂಭವಿಸಿದ ಹಲವು ನಿದರ್ಶನಗಳಿಗೆ ರಾಜ್ಯ ರಾಜಧಾನಿ ಬೆಂಗಳೂರು ಸಾಕ್ಷಿಯಾಗಿದೆ ಎಂಬುದನ್ನು ಮರೆಯುವಂತಿಲ್ಲ.

ಜೀವ ಮತ್ತು ಜೀವನ ಎರಡೂ ಅಮೂಲ್ಯ. ಚಾಲಕರು ಸುರಕ್ಷಿತ ಚಾಲನೆಯ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ರಸ್ತೆ ಮತ್ತು ವಾಹನಗಳು ಅಭಿವೃದ್ಧಿಯ ವಾಹಕಗಳಾಗಬೇಕೆ ಹೊರತು ಜೀವಹಾನಿಯ ಮಾಧ್ಯಮಗಳಲ್ಲ ಎಂಬ ವಾಸ್ತವವನ್ನು ಸರ್ಕಾರ ಮತ್ತು ಜನಸಾಮಾನ್ಯರು ಮನಗಾಣಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net