ತಂತ್ರಜ್ಞಾನ, ಶಿಕ್ಷಣ, ಆಧ್ಯಾತ್ಮಿಕ ಪರಂಪರೆಯ ಶಿಲ್ಪಿ

ವಿಜಯವಾಣಿ (5)
Published on

(ಲೇಖಕರು ರಾಜ್ಯ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು)

ಕರ್ನಾಟಕದ ಮಹತ್ವದ ಮಠ ಪರಂಪರೆಗಳಲ್ಲಿ ಒಂದಾದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ಸಮಾಜದ ಏಳಿಗೆಗಾಗಿ ಹಲವು ಆಯಾಮಗಳಲ್ಲಿ ಕೊಡುಗೆ ನೀಡಿ, ಅನ್ನ, ಅಕ್ಷರ, ಆರೋಗ್ಯ ದಾಸೋಹದ ಮೂಲಕ ಸಮುದಾಯದ ದಾರಿದೀಪವಾಗಿದ್ದರು. ಅವರ ನಂತರದಲ್ಲಿ ಅಂತಹ ಶ್ರೇಷ್ಠಸ್ಥಾನವನ್ನು ನಿರ್ವಹಿಸುವ ಸವಾಲು ಕಿರಿಯ ವಯಸ್ಸಿನಲ್ಲೇ ಪೀಠವನ್ನು ಅಲಂಕರಿಸಿದ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಮುಂದಿತ್ತು. ಇದೀಗ ಅವರ 12ನೇ ಪಟ್ಟಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಅವರು ಪೀಠವನ್ನು ಅಲಂಕರಿಸಿ ಸಾಗಿ ಬಂದ ಹಾದಿಯನ್ನು ಮೆಲುಕು ಹಾಕಿಕೊಂಡರೆ ನಿಜಕ್ಕೂ ಮತ್ತಷ್ಟು ಭಕ್ತಿ, ಗೌರವ, ಪ್ರೇರಣೆಯ ಭಾವ ಮೂಡುತ್ತದೆ.

1969ರ ಜುಲೈ 20ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ನರಸೇಗೌಡ ಮತ್ತು ನಂಜಮ್ಮ ದಂಪತಿಗೆ ನಾಗರಾಜು ಜನಿಸಿದರು (ಈಗಿನ ಡಾ. ನಿರ್ಮಲಾನಂದನಾಥ ಸ್ವಾಮೀಜಿ). ಐಐಟಿ ಮದ್ರಾಸ್​ನಿಂದ ಸ್ಟ್ರಕ್ಚರಲ್ ಇಂಜಿನಿಯರಿಂಗ್​ನಲ್ಲಿ ಎಂ.ಟೆಕ್ ಪದವಿ ಪಡೆದ ಬಳಿಕ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಜೀವನಮೌಲ್ಯಗಳಿಂದ ಪ್ರಭಾವಿತರಾದರು. ಶಾಶ್ವತ ಸತ್ಯವನ್ನು ಅರ್ಥಮಾಡಿಕೊಳ್ಳುವ ಉತ್ಸಾಹದಿಂದ ಅವರು ಸಂಸ್ಕೃತ ಅದ್ವೈತ ವೇದಾಂತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. 1998ರಲ್ಲಿ ಸಂನ್ಯಾಸ ದೀಕ್ಷೆಯನ್ನು ಪಡೆದರು. ಅವರ ನಿಸ್ವಾರ್ಥ ಸೇವೆ ಮತ್ತು ಮಠದ ಚಟುವಟಿಕೆಗಳಲ್ಲಿನ ಅವರ ಪಾಲ್ಗೊಳ್ಳುವಿಕೆಯು ಹಿರಿಯ ಶ್ರೀಗಳಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಬಗ್ಗೆ ವಿಶೇಷ ನಂಬಿಕೆ ಮೂಡಿ, ಅವರನ್ನು ತಮ್ಮ ಉತ್ತರಾಧಿಕಾರಿಯಾಗಿಸಲು ನಿರ್ಧರಿಸಿದರು.

ಬಾಲಗಂಗಾಧರನಾಥ ಸ್ವಾಮೀಜಿ ಭೈರವೈಕ್ಯವಾದ ನಂತರ, ಡಾ. ನಿರ್ಮಲಾನಂದನಾಥ ಸ್ವಾಮೀಜಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಜಗದ್ಗುರುವಾಗಿ ದೈವಿಕ ಪೀಠವನ್ನು ಅಲಂಕರಿಸಿದರು. ಅವರೊಂದಿಗಿನ ಒಡನಾಟ, ಮಾರ್ಗದರ್ಶನ ಯಾವತ್ತಿಗೂ ಪ್ರೇರಣಾದಾಯಿ ಹಾಗೂ ಆಳವಾದ ಅನುಭವ, ಮಾರ್ಗದರ್ಶನವನ್ನು ನೀಡುತ್ತದೆ. ಇತ್ತೀಚೆಗೆ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಹಾಪೋಷಕರಾಗಿ ನಿರ್ಮಲಾನಂದನಾಥ ಸ್ವಾಮೀಜಿಯವರು ನಿಯೋಜನೆಗೊಂಡು ಸಮ್ಮೇಳನಕ್ಕೆ ಬೆನ್ನೆಲುಬಾಗಿ ನಿಂತಿದ್ದನ್ನು ಇಲ್ಲಿ ಸ್ಮರಿಸಲೇಬೇಕು. ಬಾಲಗಂಗಾಧರನಾಥ ಶ್ರೀಗಳ ತಪೋಬಲದ ಫಲವಾಗಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ದೇಶವಿದೇಶಗಳಲ್ಲಿ ಶಿಷ್ಯರು, ಭಕ್ತರು, ಶ್ರದ್ಧಾಳುಗಳನ್ನು ಹೊಂದಿತು. ಆ ಮಹಾಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವುದಲ್ಲದೆ, ಅನೇಕ ಹೊಸ ಯೋಜನೆಗಳನ್ನು ರೂಪಿಸಿಕೊಂಡು ಅನುಷ್ಠಾನಗೊಳಿಸುವಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಯವರ ಕೊಡುಗೆ ಅನನ್ಯವಾಗಿದೆ.

ರಾಮನಗರದ ಅರ್ಚಕರಹಳ್ಳಿಯ ಅಂಧರಶಾಲೆಯ ನಿರ್ವಹಣೆ, ನಂತರ ಬಾನಂದೂರಿನ ಶಾಖಾಮಠದ ಉಸ್ತುವಾರಿ ವಹಿಸಿದ್ದ ಶ್ರೀಗಳು 1998ರಲ್ಲಿ ಚಿಕ್ಕಬಳ್ಳಾಪುರ ಶಾಖಾಮಠದ ಜವಾಬ್ದಾರಿ ವಹಿಸಿಕೊಂಡರು. ಆ ವೇಳೆಗೆ ಅಲ್ಲಿ ಶಾಖಾಮಠದ ಜೊತೆಗೆ ತಾಂತ್ರಿಕ ಮಹಾವಿದ್ಯಾಲಯ ಕಾರ್ಯನಿರ್ವಹಿಸುತ್ತಿತ್ತು. ಸ್ವಾಮೀಜಿ ಯಾವ ಅಮೃತಗಳಿಗೆಯಲ್ಲಿ ಅಲ್ಲಿಗೆ ಪ್ರವೇಶ ಮಾಡಿದರೋ ಅಲ್ಲಿ ಅಭಿವೃದ್ಧಿ ಪರ್ವವೇ ಶುರುವಾಯಿತು. ಮಾಲೂರು, ಗೌರಿಬಿದನೂರು, ಶಿಡ್ಲಘಟ್ಟ, ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಪೂರ್ವದಿಂದ ಹಿಡಿದು ಪಿಯುಸಿವರೆಗೆ ಗುಣಮಟ್ಟದ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳು ಸುಸಜ್ಜಿತ ಕಟ್ಟಡದಲ್ಲಿ ಎಲ್ಲ ರೀತಿಯ ಮೂಲಸೌಕರ್ಯ ಮತ್ತು ಶೈಕ್ಷಣಿಕ ಅಗತ್ಯಗಳೊಂದಿಗೆ ತಲೆಯೆತ್ತಿ ನಿಂತವು.

ಚಿಕ್ಕಬಳ್ಳಾಪುರದ ಹೊರವಲಯದಲ್ಲಿ ಈಗ ತಾಂತ್ರಿಕ ಮಹಾವಿದ್ಯಾಲಯ ಇರುವ ಆವರಣದ ಎದುರು ಒಂದು ಚಿಕ್ಕ ಕಲ್ಲಿನ ಮಂಟಪವೇ ಆ ಕಾಲಕ್ಕೆ ವೀರಾಂಜನೇಯಸ್ವಾಮಿಯ ಗುಡಿಯಾಗಿತ್ತು. ಸ್ವಾಮೀಜಿ ಪ್ರವಾಸ ಹೊರಡುವ ಮುನ್ನ ಮತ್ತು ಹಿಂದಿರುಗಿದ ನಂತರ ಆಂಜನೇಯಸ್ವಾಮಿಗೆ ನಮಸ್ಕರಿಸಿ ಮುಂದಿನ ಕಾರ್ಯಕ್ಕೆ ತೆರಳುತ್ತಿದ್ದರು. ಈ ಗುಡಿಗೆ ಚಾರಿತ್ರಿಕ ಹಿನ್ನೆಲೆ ಕೂಡ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಮಾರ್ಗದಲ್ಲಿ ಹೋಗುವ ಸಂದರ್ಭದಲ್ಲಿ ವೀರಾಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿದ್ದರಂತೆ. ಆ ಪುಟ್ಟ ಗುಡಿಯಿದ್ದ ಸ್ಥಳದಲ್ಲಿ ಸ್ವಾಮೀಜಿ ತಮ್ಮ ಸಂಕಲ್ಪಬಲ ಮತ್ತು ಭಕ್ತರ ಸಹಕಾರದಿಂದ ಬೃಹತ್ ದೇವಾಲಯ ಸಂಕೀರ್ಣವನ್ನು ನಿರ್ಮಾಣ ಮಾಡಿ ಅಲ್ಲಿ ಧಾರ್ವಿುಕ ಪರಿಸರವನ್ನು ಮೂಡಿಸಿದ್ದಾರೆ.

ಶ್ರೀಗಳ ಕಾರ್ಯಕ್ಷಮತೆ ಬಾಲಗಂಗಾಧರನಾಥ ಸ್ವಾಮೀಜಿಯವರ ಕೃಪಾದೃಷ್ಟಿಗೆ ಬಿದ್ದು 2011ರಲ್ಲಿ ಅವರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಯಾಗಿ ನಿಯುಕ್ತರಾದರು. 2013ರಲ್ಲಿ, ಸ್ವಾಮೀಜಿ 72ನೇ ಪೀಠಾಧ್ಯಕ್ಷರಾಗಿ ಪಟ್ಟಾಭಿಷೇಕಗೊಂಡರು. ಮಹತ್ತರವಾಗಿ ಬೆಳೆದು ನಿಂತ ಮಹಾಸಂಸ್ಥಾನ ಮಠವನ್ನು ಉನ್ನತೀಕರಣಗೊಳಿಸಿ ವಿಜ್ಞಾನ, ತಂತ್ರಜ್ಞಾನ ಹಾಗೂ ಆಧುನಿಕತೆಯ ಸ್ಪರ್ಶ ನೀಡುವಲ್ಲಿ ಶ್ರೀಗಳ ಕೊಡುಗೆ ಅಪಾರ. ಇತ್ತೀಚೆಗೆ ನಾನು ನಮ್ಮ ಕೃಷಿ ಇಲಾಖೆಯ ಕಾರ್ಯ ನಿಮಿತ್ತ ಅಮೆರಿಕಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ, ಅಲ್ಲಿ ಮಠದ ಸಾಮಾಜಿಕ ಕಾರ್ಯಗಳನ್ನು ನೋಡುವ ಅವಕಾಶ ಲಭಿಸಿತು. ಇಂತಹ ಹೊಸ ಕಾರ್ಯಗಳು ಜನ್ಮಭೂಮಿಯೊಂದಿಗೆ ನಮ್ಮ ಅನಿವಾಸಿ ಕನ್ನಡಿಗರ ನಂಟು, ಕೊಡುಗೆ ಸದಾ ಮುಂದುವರಿಸಲು ನೆರವಾಗುತ್ತಿದೆ. ಶ್ರೀಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ವಸತಿ, ಆಹಾರ, ಆರೋಗ್ಯ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ನಿಜಕ್ಕೂ ಪ್ರೇರಣೆ.

ಶ್ರೀಗಳ ನೇತೃತ್ವದಲ್ಲಿ ಇಂದು ಆದಿಚುಂಚನಗಿರಿ ಟ್ರಸ್ಟ್ 500ಕ್ಕೂ ಹೆಚ್ಚು ವಿವಿಧ ರೀತಿಯ ಶಿಕ್ಷಣ ನೀಡುವ ಶಾಲಾ, ಕಾಲೇಜುಗಳನ್ನು ಹೊಂದಿದ್ದು, ಅದರಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಮೂರು ವೈದ್ಯಕೀಯ ಮಹಾವಿದ್ಯಾಲಯಗಳು, ಐದು ತಾಂತ್ರಿಕ ವಿದ್ಯಾಲಯಗಳು, ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಗಳು, ಅಂಧರ ಶಾಲೆ, ವೃದ್ಧಾಶ್ರಮ, ಗೋಶಾಲೆ, ವೇದ-ಸಂಸ್ಕೃತ ಶಿಕ್ಷಣ ನೀಡುವ ಗುರುಕುಲ, ದುರ್ಬಲ ವರ್ಗದ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪ್ರಸಾದನಿಲಯಗಳು, ದುಡಿಯುವ ಮಹಿಳೆಯರ ಹಾಸ್ಟೆಲ್, ವಿದ್ಯಾರ್ಥಿನಿಯರ ಹಾಸ್ಟೆಲ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಮತ್ತು ಶಿಕ್ಷಣ ನೀಡಲು ಪ್ರತ್ಯೇಕ ತಪಸ್ ಶಾಲೆ, ಯುಪಿಎಸ್​ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ದೆಹಲಿಯಲ್ಲಿ ಆಶ್ರಯ- ಹೀಗೆ ಶಿಕ್ಷಣ ಕ್ಷೇತ್ರದಲ್ಲಿ ನವೀನ ಮಾದರಿಯ ಪ್ರಯೋಗಗಳು ನಡೆಯುತ್ತಿವೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ನೋಯ್ಡಾದಲ್ಲಿ ಶಿಕ್ಷಣ ಸಂಸ್ಥೆಗಳು ತಲೆಯೆತ್ತಿ ನಿಂತಿವೆ. ಅಲ್ಲದೆ, ಬಿಜಿಎಸ್ ಮೆಡಿಕಲ್ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಸ್ಥಾಪಿಸಿದ ಶ್ರೇಯಸ್ಸು ಶ್ರೀಗಳಿಗೆ ಸಲ್ಲುತ್ತದೆ.

ಇದರೊಂದಿಗೆ, ಕೃಷಿ ವಿಶ್ವವಿದ್ಯಾಲಯ, ಆಯುರ್ವೆದ ಕಾಲೇಜ್, ನರ್ಸಿಂಗ್ ಕಾಲೇಜ್, ದೆಹಲಿಯಲ್ಲಿ ಪಬ್ಲಿಕ್ ಶಾಲೆ ಹಾಗೂ ತಿರುಪತಿಯಲ್ಲಿ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯನ್ನು ಸ್ಥಾಪಿಸುವಲ್ಲಿ ಹಾಗೂ ಇನ್ನೂ ಇಂತಹ ಹತ್ತು-ಹಲವು ಯೋಜನೆಗಳನ್ನು ರೂಪಿಸುವಲ್ಲಿ ಅವರ ದೂರದೃಷ್ಟಿ ನಾಯಕತ್ವ ವ್ಯಕ್ತವಾಗುತ್ತದೆ. ಹಲವಾರು ಶಾಖಾಮಠಗಳು ಕರ್ನಾಟಕ, ತಮಿಳುನಾಡು, ನವದೆಹಲಿ, ಕಾಶಿ, ನೈಮಿಷಾರಣ್ಯ, ಚಿತ್ರಕೂಟ, ಅಯೋಧ್ಯೆ ಮತ್ತು ಅಮೆರಿಕದ ನ್ಯೂಜೆರ್ಸಿಯಲ್ಲಿವೆ. ಅಮೆರಿಕದ ನ್ಯೂಜೆರ್ಸಿಯಲ್ಲಿ ಗಂಗಾಧರೇಶ್ವರ, ಕಾಲಭೈರವ ಮತ್ತು ಆಂಜನೇಯ ಸ್ವಾಮಿ ದೇವರ ಬೃಹತ್ ದೇವಾಲಯ ಸಂಕೀರ್ಣ ನಿರ್ವಣವಾತ್ತಿದೆ. ಬಿ.ಜಿ.ನಗರದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯನ್ನು 150 ಹಾಸಿಗೆಗಳಿಂದ 300 ಹಾಸಿಗೆಗಳಿಗೆ ಉನ್ನತೀಕರಿಸಲಾಗಿದೆ. ನಿರ್ಮಲಾನಂದನಾಥ ಸ್ವಾಮೀಜಿ ಅಖಿಲ ಭಾರತ ಹಿಂದೂ ಆಚಾರ್ಯ ಮಹಾಸಭೆಯ ಸಂಚಾಲಕರೂ ಹೌದು. ಸ್ವಾಮೀಜಿಯವರು ಅಬುಧಾಬಿಯಲ್ಲಿ ನಿರ್ವಣಗೊಂಡಿರುವ ಬೃಹತ್ ಸ್ವಾಮಿನಾರಾಯಣ ದೇವಾಲಯದ ಉದ್ಘಾಟನೆಗೆ ಕರ್ನಾಟಕದಿಂದ ಆಹ್ವಾನಿತರಾದ ಏಕಮಾತ್ರ ಪೀಠಾಧಿಪತಿಗಳು.

ಮಂಡ್ಯ ಜಿಲ್ಲೆಯಲ್ಲಿ 2016ರ ಬರಗಾಲ ಪರಿಸ್ಥಿತಿ ಸಂದರ್ಭದಲ್ಲಿ ಶ್ರೀಗಳು ರೈತರಿಗೆ ಧೈರ್ಯ ತುಂಬಿದ್ದು ಹಾಗೂ ಕೋವಿಡ್ ಸಂದರ್ಭದಲ್ಲಿ ರೋಗಿಗಳ ರಕ್ಷಣೆಗಾಗಿ ತೆಗೆದುಕೊಂಡ ಕ್ರಮವನ್ನು ಸದಾ ನೆನಪಿಸಿಕೊಳ್ಳುವಂಥದ್ದು. ತಮಿಳುನಾಡು, ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಜನರು ಮನೆಮಠ ಕಳೆದುಕೊಂಡಾಗ ಅವರ ನೆರವಿಗೆ ಧಾವಿಸಿದ ಸ್ವಾಮೀಜಿ ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ಸಂತ್ರಸ್ತರಿಗೆ ಅಗತ್ಯವಾದ ಆಹಾರ ಸಾಮಗ್ರಿಗಳು, ಬಟ್ಟೆ, ವೈದ್ಯಕೀಯ ಸೌಲಭ್ಯ ಕಲ್ಪಿಸಿದರು. ಅಸ್ಸಾಂ ಮತ್ತು ಒಡಿಶಾ ರಾಜ್ಯಗಳಲ್ಲಿ ಪ್ರಾಕೃತಿಕ ವಿಕೋಪದಲ್ಲಿ ಪಾಲಕರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ಶ್ರೀಮಠದಲ್ಲಿ ಆಶ್ರಯ ಒದಗಿಸಿದರು. ಬಾಲಗಂಗಾಧರನಾಥ ಸ್ವಾಮೀಜಿ ಆದಿಚುಂಚನಗಿರಿಯನ್ನು ವಿಶ್ವವಿಖ್ಯಾತಗೊಳಿಸಿದರೆ, ಅವರ ಉತ್ತರಾಧಿಕಾರಿಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಅದರ ಕಸ್ತೂರಿ ಕಂಪನ್ನು ಜಗದಗಲ ಹರಡಿಸಿದ್ದಾರೆ.

ಇಂದು, ನಾಳೆ ವಿಜ್ಞಾತಂ ಉತ್ಸವ

ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ 12ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಫೆ. 19 ಮತ್ತು 20ರಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬಿ.ಜಿ. ನಗರದಲ್ಲಿರುವ ಆದಿಚುಂಚನಗಿರಿ ಕ್ಷೇತ್ರದಲ್ಲಿ ವಿಜ್ಞಾತಂ ಉತ್ಸವ-2025 ನಡೆಯಲಿದೆ. ಉತ್ಸವದ ಅಂಗವಾಗಿ ವಸ್ತು ಪ್ರದರ್ಶನ, ವಿಶೇಷ ಉಪನ್ಯಾಸಗಳು, ರಸಪ್ರಶ್ನೆ, ನೃತ್ಯೋತ್ಸವ ನಡೆಯಲಿವೆ. ಸಚಿವರಾದ ಚಲುವರಾಯಸ್ವಾಮಿ, ಡಾ. ಜಿ. ಪರಮೇಶ್ವರ್, ವಿಜ್ಞಾನಿ ಡಾ. ಗೌತಮ್ ರಾಧಾಕೃಷ್ಣ ದೇಶಿರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬುಧವಾರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಗುರುವಾರ ಡಾ. ನಿರ್ಮಲಾನಂದನಾಥ ಸ್ವಾಮೀಜಿ ವಾರ್ಷಿಕ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದ್ದು, ಇದೇ ವೇಳೆ 8ನೇ ವಿಜ್ಞಾತಂ ಪ್ರಶಸ್ತಿಯನ್ನು ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಅವರಿಗೆ ಪ್ರದಾನ ಮಾಡಲಾಗುತ್ತದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಶಾಸಕ ಶರತ್ ಬಚ್ಚೇಗೌಡ ಪಾಲ್ಗೊಳ್ಳಲಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net