ಸವಾಲುಗಳ ನಡುವೆಯೂ ಜನಮನ ಮೆಚ್ಚಿದ ಆಡಳಿತ

BSY BJP
Published on

ಬಹುಶಃ ಒಂದು ವರ್ಷದ ಆಡಳಿತದಲ್ಲಿ ಇಷ್ಟೊಂದು ಸವಾಲನ್ನು ಎದುರಿಸಿದ ಮತ್ತೊಂದು ರಾಜಕೀಯ ಪಕ್ಷ ಮತ್ತು ಮುಖ್ಯಮಂತ್ರಿ ಕರ್ನಾಟಕದ ಇತಿಹಾಸದಲ್ಲಿ ಹಿಂದೆ ಇರಲಾರರು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಇದೇ ಜುಲೈ 26ರಂದು ಒಂದು ವರ್ಷ ಪೂರೈಸುತ್ತಿದೆ.

ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಾಗ ರಾಜ್ಯ ಬರದ ಛಾಯೆಯಲ್ಲಿತ್ತು. ಅದನ್ನು ಎದುರಿಸಲು ಯೋಜನೆ ರೂಪಿಸುತ್ತಿದ್ದಾಗಲೇ ಕೆಲವೇ ದಿನಗಳೊಳಗೆ ಘೊರ ಪ್ರವಾಹ ಪರಿಸ್ಥಿತಿ. ಎರಡೂ ಒಂದು ರೀತಿಯ ಸವಾಲುಗಳ ಶಿಖರಗಳು. ರಾಜ್ಯದಲ್ಲಿ ಕಳೆದ 118 ವರ್ಷಗಳಲ್ಲಿ ಅತೀ ಹೆಚ್ಚು ಸರಾಸರಿ ಮಳೆ ದಾಖಲಾಗಿತ್ತು. 25 ಜಿಲ್ಲೆಗಳ 119 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೊಷಿಸಬೇಕಾಯಿತು. ಈ ಮೊದಲ ಸವಾಲನ್ನು ಸಮರ್ಥವಾಗಿ ಎದುರಿಸಿದ ಸರ್ಕಾರ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಜನರ ಸ್ಥಳಾಂತರ, ಜಾನುವಾರುಗಳ ರಕ್ಷಣೆಗೆ ಕ್ರಮ ಕೈಗೊಂಡಿತು. ಆ ಸಂದರ್ಭದಲ್ಲಿ ಅಪಾರ ಆಸ್ತಿಪಾಸ್ತಿ ನಷ್ಟ ಸಂಭವಿಸಿದ ಹಿನ್ನೆಲೆಯಲ್ಲಿ ಕ್ಷಿಪ್ರಗತಿಯಲ್ಲಿ, ಪಾರದರ್ಶಕವಾಗಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಆ ಸಂದರ್ಭದಲ್ಲಿ -ಠಿ; 1869 ಕೋಟಿಗಳ ಪರಿಹಾರ ಧನವನ್ನು ಕಳುಹಿಸಿಕೊಟ್ಟರು. ಪರಿಹಾರ ವಿತರಣೆ, ಮೂಲಸೌಕರ್ಯ ದುರಸ್ತಿ ಮತ್ತಿತರ ಪರಿಹಾರ ಕಾರ್ಯಗಳಿಗೆ ರಾಜ್ಯ ಸರ್ಕಾರ ಒಟ್ಟು -ಠಿ; 6108 ಕೋಟಿಗಳ ಧನರಾಶಿಯನ್ನು ಬಿಡುಗಡೆ ಮಾಡಿದೆ. ಎನ್​ಡಿಆರ್​ಎಫ್ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ಮೊತ್ತಕ್ಕಿಂತ ಹೆಚ್ಚಿನ ಪರಿಹಾರ ವಿತರಿಸಲಾಗಿದೆ.

‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ’ಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ ನಾಲ್ಕು ಸಾವಿರ ರೂಪಾಯಿಗಳನ್ನು ನೀಡುವ ಯೋಜನೆ ರೂಪಿಸಿದು, ರೈತರ ಮುಖದಲ್ಲಿ ನೆಮ್ಮದಿ ಕಾಣಲು ಸಾಧ್ಯವಾಯಿತು. ನೇಕಾರರಿಗೆ ಮತ್ತು ಮೀನುಗಾರರಿಗೆ ಸಾಲಮನ್ನಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಯಿತು. ಪಿಎಂ ಕಿಸಾನ್- ಕರ್ನಾಟಕ ಯೋಜನೆಯಡಿ 50 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲ ಆಗಿರುವುದನ್ನು ಅಂಕಿಅಂಶಗಳೇ ಹೇಳುತ್ತವೆ. ಒಂದು ಸರ್ಕಾರವನ್ನು ನಡೆಸುತ್ತಿರುವ ಆಡಳಿತ ಪಕ್ಷದ ಅಧ್ಯಕ್ಷನಾಗಿ ಇದು ಹೆಮ್ಮೆಯ ವಿಷಯವಲ್ಲವೇ.

ರೈತರ ಅನುಕೂಲಕ್ಕಾಗಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಯಿತು. ರೈತರ ಬೆಳೆ ಅವರ ಹಕ್ಕು ಎಂಬ ಸಿದ್ಧಾಂತವನ್ನು ಸಾಕಾರಗೊಳಿಸಿದ ಹೆಗ್ಗಳಿಕೆ ಸರ್ಕಾರದ್ದು. ನೇಕಾರರ ಸಾಲಮನ್ನಾ ಯೋಜನೆಗೆ -ಠಿ; 98.29 ಕೋಟಿ ವೆಚ್ಚವಾಗಲಿದ್ದು, 29,621 ನೇಕಾರರು ಇದರ ಅನುಕೂಲ ಪಡೆಯಲಿದ್ದಾರೆ. 2019 ಜನವರಿಯಿಂದ ಮಾರ್ಚ್ 31ರ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದ ನೇಕಾರರಿಗೂ ಈ ಸೌಲಭ್ಯ ವಿಸ್ತರಿಸಿ ಕೋವಿಡ್ ಸಂಕಷ್ಟ ಕಾಲದಲ್ಲಿ ಮಾನವೀಯತೆ ಮೆರೆದಿದೆ. ಇದರೊಂದಿಗೆ ಕೈಮಗ್ಗ ನೇಕಾರರಿಗೆ ವಾರ್ಷಿಕ ತಲಾ -ಠಿ; 2 ಸಾವಿರ ಆರ್ಥಿಕ ನೆರವು ನೀಡುವ ‘ನೇಕಾರ ಸಮ್ಮಾನ ಯೋಜನೆ’ಗೆ ಚಾಲನೆ ನೀಡಲಾಗಿದೆ.

ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ಪೂರೈಕೆ ಸರ್ಕಾರದ ಆದ್ಯತೆಯಾಗಿದೆ. ‘ಮನೆ ಮನೆಗೆ ಗಂಗೆ’ ಯೋಜನೆಯಡಿ 2023ರೊಳಗೆ ಎಲ್ಲ ಗ್ರಾಮೀಣ ಪ್ರದೇಶದ ಮನೆಗಳಿಗೆ ನಲ್ಲಿಯ ಮೂಲಕ ನೀರು ಸಂಪರ್ಕ ಒದಗಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಿ, ಸಮಗ್ರ ಕರ್ನಾಟಕದ ಅಭಿವೃದ್ಧಿ ಸಾಧನೆ ಸರ್ಕಾರದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಕಲಂ 371 (ಜೆ) ಅನ್ವಯ ವಿಶೇಷ ಸ್ಥಾನಮಾನ ಪಡೆದಿರುವ ಹೈದರಾಬಾದ್-ಕರ್ನಾಟಕವನ್ನು ‘ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಯಿತು. ಈ ಭಾಗದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲು ಪೂರಕವಾಗಿ ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ’ವನ್ನು ಸ್ಥಾಪಿಸಲಾಗಿದೆ.

ಒಂದು ಕಡೆ ಭೀಕರ ಪ್ರವಾಹ ಮತ್ತೊಂದೆಡೆ ಕೋವಿಡ್-19 ಸಂಕಷ್ಟಗಳ ನಡುವೆಯೂ ರಾಜ್ಯದ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಪ್ರಯತ್ನಿಸಲಾಗಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗಿದೆ. ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಕೊರತೆ ಆಗದಂತೆ ಎಚ್ಚರ ವಹಿಸಲಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಆಯವ್ಯಯವನ್ನು ಮಂಡಿಸಲಾಯಿತು. ಆದರೆ ಜಾಗತಿಕವಾಗಿ ಮನುಕುಲವನ್ನು ಕಂಗೆಡಿಸಿರುವ ಕರೊನಾ ಸೋಂಕಿನಿಂದಾಗಿ ಸರ್ಕಾರದ ಆದ್ಯತೆಗಳು ಸದ್ಯಕ್ಕೆ ಬದಲಾಗುವಂತಾಗಿದೆ.

ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದಂತೆಯೇ, ರಾಜ್ಯ ಸರ್ಕಾರ ತ್ವರಿತವಾಗಿ ಲಾಕ್​ಡೌನ್ ಘೊಷಿಸಿತು. ಶಾಲೆ, ಕಾಲೇಜುಗಳನ್ನು ಮುಚ್ಚುವ ಮೂಲಕ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಲಾಯಿತು. ದೇಶದಲ್ಲಿಯೇ ಮೊದಲು ಲಾಕ್​ಡೌನ್ ಘೊಷಿಸಿದ ರಾಜ್ಯ ಕರ್ನಾಟಕ. ಲಾಕ್​ಡೌನ್ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಕೋವಿಡ್ ಸೋಂಕಿನ ನಿಯಂತ್ರಣ ಮಾಡಲಾಗಿದೆ. ಈ ಅವಧಿಯಲ್ಲಿ ಬಡವರು ಯಾರೂ ಹಸಿವಿನಿಂದ ಬಳಲದಂತೆ ಕಾಳಜಿ ವಹಿಸಲಾಯಿತು. ಮುಂಗಡ ಪಡಿತರ ವಿತರಣೆ, ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ವಿತರಿಸಲಾಗಿದೆ.

ಆರೋಗ್ಯ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಹೈ ಫ್ರೋ ಆಕ್ಸಿಜನ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಆಗಸ್ಟ್ 15ರ ವೇಳೆಗೆ ಇವು ಸಿದ್ಧವಾಗಲಿವೆ. ಅನ್​ಲಾಕ್ ಪ್ರಕ್ರಿಯೆ ಪ್ರಾರಂಭವಾದ ನಂತರ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು, ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವ ಮೂಲಕ ಅವರ ಜೀವರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭೀಣಿಯರು, ವೃದ್ಧರು ಮತ್ತು ಮಕ್ಕಳನ್ನು ಗುರುತಿಸಿ, ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 1.5 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ಕರ್ನಾಟಕ ಇಂಥ ಸಮೀಕ್ಷೆ ನಡೆಸಿದ ಮೊದಲ ರಾಜ್ಯವಾಗಿದೆ. ಕೋವಿಡ್ ಸೋಂಕಿನಿಂದ ತೀವ್ರವಾಗಿ ಅನಾರೋಗ್ಯ ಪೀಡಿತರಾದವರಿಗೆ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಚಿಕಿತ್ಸೆ ನೀಡುವ ಉದ್ದೇಶದಿಂದ, ರೋಗ ಲಕ್ಷಣಗಳಿಲ್ಲದ ಹಾಗೂ ಲಘುವಾಗಿ ಲಕ್ಷಣಗಳನ್ನು ಹೊಂದಿದ ಸೋಂಕಿತರ ಆರೈಕೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10100 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ.

ಕೋವಿಡ್ ನಿಯಂತ್ರಣಕ್ಕಾಗಿ ಲಾಕ್​ಡೌನ್ ಘೊಷಿಸಿದ ಸಂದರ್ಭದಲ್ಲಿ -ಠಿ;2272 ಕೋಟಿ ಪ್ಯಾಕೇಜ್ ಘೊಷಣೆ ಮಾಡುವ ಮೂಲಕ ಅಸಂಘಟಿತ ವಲಯದ ಕಾರ್ವಿುಕರು, ಹೂ, ಹಣ್ಣು, ತರಕಾರಿ ಬೆಳೆದ ರೈತರು, ನೇಕಾರರು, ಟ್ಯಾಕ್ಸಿ ಮತ್ತು ಆಟೋ ಚಾಲಕರು, ಕ್ಷೌರಿಕರು, ಮಡಿವಾಳರು ಮತ್ತು ಕುಶಲಕರ್ವಿುಗಳಿಗೆ ಪರಿಹಾರ ಒದಗಿಸಲಾಗಿದೆ.

ಪೊಲೀಸ್ ಇಲಾಖೆಯ ಅಧಿಕಾರಿ/ ಸಿಬ್ಬಂದಿ ವೇತನವನ್ನು ಔರಾದ್​ಕರ್ ಸಮಿತಿಯ ವರದಿಯಂತೆ ಸಮಾಧಾನಕರ ರೀತಿಯಲ್ಲಿ ಪರಿಷ್ಕರಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಶೇಕಡ 25ರಷ್ಟು ಹೆಚ್ಚಿಸಲಾಗಿದೆ. ಇನ್ನು ಮುಂದೆ ಹಿಂದೂ ದೇವಾಲಯಗಳಿಗೆ ಬರುವ ಆದಾಯ, ಅನುದಾನ, ಕಾಣಿಕೆಯನ್ನು ಅನ್ಯಧರ್ಮ ಅಥವಾ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಿರಲು ಮುಜರಾಯಿ ಇಲಾಖೆ ತೀರ್ವನಿಸಿದೆ.

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ, ಕೋವಿಡ್-19 ಸಾಂಕ್ರಾಮಿಕ, ಜಾಗತಿಕ ಆರ್ಥಿಕ ಕುಸಿತ ಮೊದಲಾದ ಸಂಕಷ್ಟದ ಸನ್ನಿವೇಶಗಳು ಎದುರಾದರೂ ರಾಜ್ಯವು ಹೂಡಿಕೆದಾರರನ್ನು ಆಕರ್ಷಿಸಲು, ಈ ಮೂಲಕ ರಾಜ್ಯದ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಆದ್ಯತೆ ನೀಡಿದೆ. ದಾವೊಸ್​ನಲ್ಲಿ ನಡೆದ ‘ವರ್ಲ್ಡ್ ಎಕನಾಮಿಕ್ ಫೋರಂ’ ಸಮಾವೇಶದಲ್ಲಿ ಸಿಎಂ ಹಾಗೂ ಸಚಿವರು ಪಾಲ್ಗೊಂಡು 40ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿ, ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏರೋಸ್ಪೇಸ್, ಆಹಾರ ಸಾಗಣೆ ಸರಪಣಿ, ಮತ್ತಿತರ ವಲಯಗಳಲ್ಲಿ ಹೂಡಿಕೆ ಮಾಡಲು ಹಲವು ಕಂಪನಿಗಳು ಆಸಕ್ತಿ ತೋರಿವೆ. ರೈತರು ಹಾಗೂ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು ಭೂಸುಧಾರಣಾ ಕಾಯ್ದೆಯ ಸೆಕ್ಷನ್ 79ಗೆ (ಎ ಮತ್ತು ಬಿ) ತಿದ್ದುಪಡಿ ತರಲಾಗಿದೆ. ಕಾರ್ವಿುಕ ಕಾಯಿದೆಗಳಿಗೂ ತಿದ್ದುಪಡಿ ತರುವ ಮೂಲಕ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ಒದಗಿಸಲಾಗಿದೆ.

ಅನ್​ಲಾಕ್ ಪ್ರಕ್ರಿಯೆ ಪ್ರಾರಂಭವಾದ ನಂತರ ಕೈಗಾರಿಕೋದ್ಯಮಿಗಳ ಬೇಡಿಕೆಯ ಮಾನವ ಸಂಪನ್ಮೂಲ ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಯಡಿ ತರುವ ‘ಸ್ಕಿಲ್ ಕನೆಕ್ಟ್’ ಎಂಬ ಪೋರ್ಟಲ್ ಪ್ರಾರಂಭಿಸಲಾಗಿದೆ. ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ರಾಜ್ಯದಲ್ಲಿ ಕಲಬುರಗಿ, ಬೀದರ್ ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡಿವೆ. ಶಿವಮೊಗ್ಗ ಕಿರು ವಿಮಾನ ನಿಲ್ದಾಣ ಕಾಮಗಾರಿ ವೇಗ ಪಡೆದುಕೊಂಡಿದೆ. ಅಂತೆಯೇ ರಾಜ್ಯದ ರೈಲ್ವೆ ಜಾಲವನ್ನೂ ವಿಸ್ತರಿಸಲು ಆದ್ಯತೆ ನೀಡಲಾಗಿದೆ. ಶಿವಮೊಗ್ಗ-ರಾಣೆಬೆನ್ನೂರು ರೈಲುಮಾರ್ಗ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ಬೆಳಗಾವಿ-ಧಾರವಾಡ ರೈಲುಮಾರ್ಗ ನಿರ್ವಣಕ್ಕೆ ಕೇಂದ್ರ ಸರ್ಕಾರದಿಂದ ತಾತ್ವಿಕ ಅನುಮೋದನೆ ದೊರೆತಿದೆ. ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರ ಆಸಕ್ತಿಯ ಕೇಂದ್ರವಾಗಿರುವ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಮತ್ತು ಮೆಟ್ರೋ ಯೋಜನೆಗಳ ಕಾಮಗಾರಿಗಳು ಚುರುಕುಗೊಂಡಿದ್ದವು. ಅಂತೆಯೇ ಬೆಂಗಳೂರು ನಗರದ ನಿರ್ವತೃ ನಾಡಪ್ರಭು ಕೆಂಪೇಗೌಡರ ಬೃಹತ್ ಪುತ್ಥಳಿಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ವಿುಸಲು ಸರ್ಕಾರ ಮುಂದಾಗಿದೆ.

ಮುಂದಿನ ಎರಡೂವರೆ ವರ್ಷದ ಅವಧಿ ನಮ್ಮ ಪಾಲಿಗೆ ರಾಜ್ಯದ ಅಭಿವೃದ್ಧಿ ಮತ್ತು ಪ್ರಕೃತಿ ನೀಡುವ ಸವಾಲನ್ನು ಎದುರಿಸಿ ಜನಮೆಚ್ಚುಗೆಯ ಆಡಳಿತ ನೀಡಲು ಜನರ ಸಹಕಾರ ಗಳಿಸುವಲ್ಲಿ ಪ್ರಮುಖ ಕಾಲಘಟ್ಟವಾಗಿದೆ. ಎಷ್ಟೇ ಸವಾಲಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ದೂರದೃಷ್ಟಿಯ ದಣಿವರಿಯದ ಕೆಲಸ ಮತ್ತು ಸಚಿವರು, ಶಾಸಕರ, ಜನಪ್ರತಿನಿಧಿಗಳ ಅವಿರತ ಶ್ರಮದಿಂದ ರಾಜ್ಯವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವುದರಲ್ಲಿ ಸಂಶಯವಿಲ್ಲ.

(ಲೇಖಕರು ಬಿಜೆಪಿ ರಾಜ್ಯಾಧ್ಯಕ್ಷರು, ದಕ್ಷಿಣ ಕನ್ನಡ ಸಂಸದರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net