

ಪೊಲೀಸರು, ರಿಕ್ಷಾ ಚಾಲಕರು, ಸೆಕ್ಯುರಿಟಿ ಗಾರ್ಡ್ಗಳು, ಪೌರಕಾರ್ವಿುಕರು ಸೇರಿದಂತೆ ಹಲವರು ಸಹಾಯ ಮಾಡಿದ್ದು ಗೊತ್ತಾದರೂ ಅದನ್ನು ನಾವು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ದಿನನಿತ್ಯ ಸಹಾಯ ಮಾಡುವ ಇಂಥ ಜನರನ್ನು ವಿಶಿಷ್ಟ ರೀತಿಯಲ್ಲಿ ಸ್ಮರಿಸುವ ಅಭಿಯಾನವೊಂದನ್ನು ಶುರು ಮಾಡಿದ್ದಾರೆ ದೆಹಲಿಯ ಯುವಕರು.
ಏನದು ಅಭಿಯಾನ?
ಮಹಾನಗರಗಳ ಜನರು ಒಮ್ಮೆ ಊಹಿಸಿಕೊಳ್ಳಿ, ಟ್ರಾಫಿಕ್ ಲೈಟ್ ಆಫ್ ಆಗಿರುತ್ತದೆ, ವಾಹನ ಸಂಚಾರವನ್ನು ನಿಯಂತ್ರಿಸಲು ಪೊಲೀಸರೇ ಇರುವುದಿಲ್ಲ. ಪರಿಸ್ಥಿತಿ ಹೇಗಿರುತ್ತದೆ? ಅತ್ತ, ಇತ್ತ, ಎತ್ತೆತ್ತಲೂ ವಾಹನ ಸವಾರರು ಮುನ್ನುಗ್ಗಿ ಒಂದೇ ನಿಮಿಷದೊಳಗೆ ಸಂಚಾರ ಸಂಪೂರ್ಣ ಅಸ್ತವ್ಯಸ್ತ. ಆದರೆ ದಿನಪೂರ್ತಿ ಮಳೆ, ಗಾಳಿ, ಧೂಳು, ಬಿಸಿಲು ಎನ್ನದೇ ಸಂಚಾರವನ್ನು ನಿಯಂತ್ರಿಸುವ ಪೊಲೀಸರು ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಎನ್ನಿಸುವುದು ಉಂಟೇ? ಅವರಿಗೆ ಎಂದಾದರೂ ನಾವು ‘ಥ್ಯಾಂಕ್ಸ್’ ಹೇಳಿದ್ದುಂಟೆ?
ಇನ್ನು ಹಲವು ಅಪಾರ್ಟ್ವೆುಂಟ್ಗಳಲ್ಲಿ, ಕಚೇರಿಗಳಲ್ಲಿ ಸೆಕ್ಯುರಿಟಿ ಗಾರ್ಡ್ಗಳು ಇರುತ್ತಾರೆ. ರಾತ್ರಿ ನಿದ್ದೆಗೆಟ್ಟು ಅವರು ಕಾವಲು ಕಾಯುತ್ತಾರೆ. ಅವರು ನಿದ್ದೆಗೆಟ್ಟರೆ ಮಾಲೀಕರಿಗೆ ಹಾಯಾದ ನಿದ್ದೆ. ಆದರೆ ಅಂಥ ಸೆಕ್ಯುರಿಟಿ ಗಾರ್ಡ್ಗಳಿಗೆ ಧನ್ಯವಾದ ಸಲ್ಲಿಸುವವರು ತೀರಾ ವಿರಳ. ಆಟೋರಿಕ್ಷಾ ಚಾಲಕರನ್ನು ದೂಷಿಸುವವರೇ ಹೆಚ್ಚು. ಆದರೆ, ತುರ್ತು ಸಂದರ್ಭಗಳಲ್ಲಿ ಆಟೋ ಸಿಗದೇ ಹೋದಲ್ಲಿ ಎಷ್ಟೊಂದು ಪರದಾಡುತ್ತೇವಲ್ಲವೆ? ಆದರೆ ಎಂದಾದರೂ ಚಾಲಕನಿಗೆ ನಾವು ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದೇವೆ?
ಇಂಥ ಎಷ್ಟೋ ಸಹಾಯಕರು ನಮ್ಮ ಜೀವನದಲ್ಲಿ ದಿನನಿತ್ಯ ಬರುತ್ತಲೇ ಇರುತ್ತಾರೆ. ‘ಅದು ಅವರ ಕರ್ತವ್ಯ, ಮಾಡುತ್ತಾರಷ್ಟೇ’ ಎಂದು ನಾವು ಸುಮ್ಮನಾಗುತ್ತೇವಷ್ಟೇ.
ಆದರೆ ದೆಹಲಿಯ ಯುವ ಗುಂಪು ಇಂಥ ಸಹಾಯಕರನ್ನು ಸ್ಮರಿಸುವ ಸಲುವಾಗಿ ಹೊಸದೊಂದು ಅಭಿಯಾನ ಶುರು ಮಾಡಿದೆ. ಅಭಿನವ್ ಮಲ್ಹೋತ್ರಾ ಎಂಬ ಯುವಕ 2018ರಲ್ಲಿ ಶುರು ಮಾಡಿರುವ ಈ ಅಭಿಯಾನ ಒಂದು ವರ್ಷದಲ್ಲಿಯೇ ಭಾರಿ ಮೆಚ್ಚುಗೆ ಗಳಿಸಿದ್ದು, ಇದೀಗ ಸಹಸ್ರಾರು ಯುವಸಮೂಹ ಈ ಅಭಿಯಾನದ ಭಾಗವಾಗಿದೆ. ಈ ನಿಟ್ಟಿನಲ್ಲಿಯೇ ‘ರಬ್ ಶುಕ್ರಾನ್’ ಸಂಸ್ಥೆಯೂ ಶುರುವಾಗಿದೆ.
ಏನಿದು ರಬ್ ಶುಕ್ರಾನ್?: ಅಭಿನವ್ ಮಲ್ಹೋತ್ರಾ ಅವರ ನೇತೃತ್ವದಲ್ಲಿ ಶುರುವಾಗಿರುವ ಸ್ವಯಂಸೇವಾ ಸಂಸ್ಥೆ ರಬ್ ಶುಕ್ರಾನ್. ಇಲ್ಲಿ ಯುವಕ- ಯುವತಿಯರ ದೊಡ್ಡ ತಂಡ ಕೆಲಸ ಮಾಡುತ್ತಿದೆ. ಇವರೆಲ್ಲರೂ ಸೇರಿ ಕೃತಜ್ಞತೆ ಸಲ್ಲಿಸುವ ಕಾರ್ಡ್ ತಯಾರಿಸುತ್ತಾರೆ. ಅದರ ಮೇಲೆ ‘ನಿಮ್ಮ ಸಹಾಯವನ್ನು ನಾವು ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ. ಅಂಥ ಕೆಲಸವನ್ನು ನೀವು ಮಾಡುತ್ತಿದ್ದೀರಿ.
ನೀವಿಲ್ಲದಿದ್ದರೆ ನಮ್ಮ ಜೀವನ ಬಹಳ ಕಷ್ಟಮಯವಾಗುತ್ತಿತ್ತು. ನಮ್ಮ ಜೀವನವನ್ನು ಸುಲಭಗೊಳಿಸಿದ್ದಕ್ಕಾಗಿ ನಿಮಗೆ ನಾವು ಸದಾ ಋಣಿ’ ಎಂದು ಬರೆಯಲಾಗುತ್ತದೆ. ‘ಯಾವುದೋ ಒಂದು ಸಂದರ್ಭದಲ್ಲಿ ನಿಮ್ಮ ಕೆಲಸದ ಮೇಲೆ ನಿಮಗೆ ಜಿಗುಪ್ಸೆ ಬರಬಹುದು, ನಾನ್ಯಾಕೆ ಇಂಥ ಕೆಲಸದಲ್ಲಿ ಇದ್ದೇನೆ ಎಂದು ಬೇಸರ ಮೂಡಬಹುದು. ಅಂಥ ಸಂದರ್ಭಗಳಲ್ಲೆಲ್ಲಾ ಈ ಕಾರ್ಡನ್ನು ನೋಡಿ. ನೀವು ಎಷ್ಟು ಜನರಿಗೆ ಸಹಾಯ ಮಾಡುತ್ತಿದ್ದೀರಿ, ನಿಮ್ಮಿಂದ ಎಷ್ಟು ಮಂದಿ ನೆಮ್ಮದಿಯಿಂದ ಜೀವಿಸುತ್ತಿದ್ದಾರೆ ಎಂಬ ಬಗ್ಗೆ ತಿಳಿದು ನಿಮ್ಮ ಮೇಲೆ ನೀವೇ ಹೆಮ್ಮೆ ಪಟ್ಟುಕೊಳ್ಳುವಂತಾಗುತ್ತದೆ’ ಎಂದೂ ಬರೆಯಲಾಗುತ್ತದೆ.
ಈ ಕಾರ್ಡ್ಗಳನ್ನು ಸೆಕ್ಯುರಿಟಿ ಗಾರ್ಡ್ಸ್, ಆಟೋರಿಕ್ಷಾ ಚಾಲಕರು, ಟ್ರಾಫಿಕ್ ಪೊಲೀಸರು, ಕಸ ಗುಡಿಸುವವರು ಇಂಥವರಿಗೆ ನೀಡಲಾಗುತ್ತದೆ. ‘ನಮ್ಮ ಗುಂಪು ಇಂಥ ಹಲವಾರು ವರ್ಣರಂಜಿತ ಕಾರ್ಡ್ಗಳನ್ನು ತಯಾರಿಸುತ್ತಿದೆ. ಈ ಕಾರ್ಡ್ಗಳನ್ನು ಹಿಡಿದು ನಮ್ಮ ಗುಂಪು ಬೀದಿ ಬೀದಿಗಳಲ್ಲಿ ಸಂಚರಿಸುತ್ತದೆ. ಈಗಾಗಲೇ ಹಲವಾರು ಮಂದಿಗೆ ಕಾರ್ಡ್ ನೀಡಿ ಅದರ ಉದ್ದೇಶ ತಿಳಿಸಿದ್ದೇವೆ. ಅದನ್ನು ನೋಡಿದಾಗ ಅವರ ಕಣ್ಣಲ್ಲಿ ಹೊಳಪು ಕಂಡಿದ್ದೇವೆ. ಕೆಲವು ಗದ್ಗಿತರಾಗಿದ್ದಾರೆ, ಹಲವರು ಮಂದಿಯು ಆನಂದಬಾಷ್ಟ ಹರಿಸಿದ್ದೂ ಇದೆ’ ಎನ್ನುತ್ತಾರೆ ಅಭಿನವ್.
‘ಇಂಥದ್ದೊಂದು ಉದ್ದೇಶ ಇಟ್ಟುಕೊಂಡು ನಾನು ಶುರು ಮಾಡಿದ ತಂಡ ಇಂದು ಈ ಪರಿಯಲ್ಲಿ ಬೆಳೆಯುತ್ತದೆ ಎಂದು ನಂಬಿಯೇ ಇರಲಿಲ್ಲ. ಇಂಥ ಒಂದು ಒಳ್ಳೆಯ ಕಾರ್ಯಕ್ಕೆ ತಾವೂ ಕೈಜೋಡಿಸುವುದಾಗಿ ಯುವಕ- ಯುವತಿಯರು ಬಂದರು’ ಎನ್ನುವ ಅಭಿನವ್, ‘ಈಗ 25 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರನ್ನು ರಬ್ ಶುಕ್ರಾನ್ ಹೊಂದಿದೆ’ ಎಂದು ಅಭಿನವ್ ಹೆಮ್ಮೆ ಪಡುತ್ತಾರೆ.
ಅನೇಕ ನಗರಗಳಲ್ಲಿ ವಿಸ್ತರಣೆ
ಕೃತಜ್ಞತಾ ಕಾರ್ಡ್ ಹಿಡಿದು ದೆಹಲಿಯ ಬೀದಿಬೀದಿ ಗಳಲ್ಲಿ ಸಂಚರಿಸುತ್ತಿದ್ದ ಈ ತಂಡಕ್ಕೆ ಬೇರೆ ಬೇರೆ ನಗರಗಳ ಜನರೂ ಕೈಜೋಡಿಸಿದ್ದಾರೆ. ಬೆಂಗಳೂರು ಸೇರಿದಂತೆ ಗಾಜಿಯಾಬಾದ್, ಗುರುಗ್ರಾಮ, ಗುವಾ ಹಟಿ ಮುಂತಾದ ಕಡೆಗಳಲ್ಲಿ ರಬ್ ಶುಕ್ರಾನ್ ಸಂಸ್ಥೆಯ ಸ್ವಯಂಸೇವಕರು ಈ ಕಾರ್ಡ್ಗಳನ್ನು ನೀಡುತ್ತಿದ್ದಾರೆ. ಶುಭಾಶಯ ಪತ್ರಗಳ ಜತೆಯಲ್ಲಿ ಕೃತಜ್ಞತೆಯ ಸಂಕೇತವಾಗಿ ಹೂವುಗಳನ್ನೂ ನೀಡುತ್ತಿದ್ದಾರೆ. ಶುಭಾಶಯ ಕಾರ್ಡ್ ಗಳನ್ನು ನೀಡುವ ಎಲ್ಲ ಜನರ ಮೊಬೈಲ್ ನಂಬರ್ಗಳನ್ನು ಪಡೆದುಕೊಳ್ಳುವ ಯುವಕರ ತಂಡ, ಅವರ ಜನ್ಮದಿನದಂದು ಕರೆ ಮಾಡಿ ವಿಷ್ ಕೂಡ ಮಾಡುತ್ತಾರೆ.