ದೇಶದ್ರೋಹಿಗಳೇ ಇನ್ನಾದರೂ ಮೊದಲು ಮಾನವರಾಗಿ!

Column F
Published on
ಮೋದಿ ಅಧಿಕಾರಕ್ಕೆ ಬಂದಮೇಲೆ ಅವರ ಮೊದಲ ನಿರ್ಣಯವೇ ಭಾರತೀಯ ಸೇನೆಯನ್ನು ಬಲಗೊಳಿಸುವುದಾಗಿತ್ತು. ಅವರಿಗೆ ಸೂಕ್ತ ಹೆಗಲಾಗಿ ದೊರೆತದ್ದು ಜನರಲ್ ಬಿಪಿನ್ ರಾವತ್. ಅವರು ಕಾಶ್ಮೀರ ಮತ್ತು ಚೀನಾ ಗಡಿಭಾಗದ ತಜ್ಞರೂ ಆಗಿದ್ದರಿಂದ ಎರಡೂ ದಿಕ್ಕಿನ ಆಕ್ರಮಣವನ್ನು ಸಹಜವಾಗಿಯೇ ಎದುರಿಸಬಲ್ಲವರಾಗಿದ್ದರು.

ನಿವೃತ್ತ ಲೆಫ್ಟಿನೆಂಟ್ ಜನರಲ್ ಎಚ್.ಎಸ್ ಪನಾಗ್ ಅವರು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್​ರ ಸಾವಿನ ಸುದ್ದಿ ಅಧಿಕೃತವಾಗಿ ಘೊಷಣೆಯಾಗುವುದಕ್ಕೂ ಎರಡು ಗಂಟೆ ಮುನ್ನವೇ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದ್ದರು. ನಿವೃತ್ತ ಕರ್ನಲ್ ಬಲ್ಜಿತ್ ಬಕ್ಷಿ ಹೆಲಿಕಾಪ್ಟರ್ ಅಪಘಾತದ ಸುದ್ದಿ ತಿಳಿದೊಡನೆ ‘ಕರ್ಮ ತನ್ನದ್ದೇ ಆದ ಮಾರ್ಗದಲ್ಲಿ ಪಾಠ ಕಲಿಸುತ್ತದೆ’ ಎಂದು ಹೇಳಿದ್ದರು. ಕಾಂಗ್ರೆಸ್ಸಿನ ಮುಖವಾಣಿ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯ ಲೇಖಕಿ ಅಶ್ಲೀನ್ ಮ್ಯಾಥ್ಯೂ ಈ ಸಾವಿನ ಸುದ್ದಿ ಸಿಕ್ಕೊಡನೆ ‘ಭಗವಂತನೇ ಮಧ್ಯಪ್ರವೇಶಿಸಿದ್ದಾನೆ’ ಎಂದಿದ್ದರು. ಮಾಧೇಪುರ ಯೂಥ್ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್​ನಿಂದ ‘ರಫೇಲ್ ಯುದ್ಧವಿಮಾನ ಖರೀದಿಯಲ್ಲಿ ಭಾಗಿಯಾಗಿದ್ದ ಪರಿಕ್ಕರ್​ರ ಸಾವಿನ ನಂತರ, ಅದೇ ಖರೀದಿಯಲ್ಲಿ ಭಾಗಿಯಾಗಿದ್ದ ಬಿಪಿನ್ ರಾವತ್​ರೂ ಸತ್ತಿರುವಂತೆ ಕಾಣುತ್ತದೆ’ ಎಂದಿತ್ತು. ಕೆಲವು ಹಿರಿಯ ಪತ್ರಕರ್ತರು ಈ ಅಪಘಾತದ ಸುದ್ದಿ ಸಿಕ್ಕೊಡನೆ ಸಿಹಿತಿಂಡಿಯ ಚಿತ್ರ ಹಾಕಿಕೊಂಡು ರುಚಿಕಟ್ಟಾಗಿದೆ ಎಂದು ಸಂಭ್ರಮಿಸಿದರು. ಹಿರಿಯ ಪತ್ರಕರ್ತ ರಾಜ್​ದೀಪ್ ಸರ್​ದೇಸಾಯಿ ಕೇರಳದ ಮೀನಿನ ತಿನಿಸಿನ ಚಿತ್ರವನ್ನು ಹಂಚಿಕೊಂಡು ಸಂಭ್ರಮಿಸಿದ್ದೂ ಕಂಡುಬಂತು. ಕರ್ನಾಟಕದಲ್ಲಂತೂ ಸ್ವಘೊಷಿತ ಪತ್ರಕರ್ತರನೇಕರು ಮನಸೋ ಇಚ್ಛೆ ವಿಚಾರಗಳನ್ನು ಹಂಚಿಕೊಂಡು ದೇಶದ ಸೇನಾನಾಯಕನೊಬ್ಬನ ಸಾವನ್ನು ಆನಂದಿಸಿದರು. ಇಡಿಯ ದೇಶ ಈ ಹೊತ್ತಿನಲ್ಲಿ ರಾವತ್​ರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿತ್ತು. ಅವರನ್ನು ವೆಲ್ಲಿಂಗ್ಟನ್​ನ ಆಸ್ಪತ್ರೆಗೊಯ್ಯಲಾಗಿದೆ ಎಂಬುದೇ ಎಲ್ಲರಿಗೂ ಸಮಾಧಾನದ ಸಂಗತಿಯಾಗಿತ್ತು. ಆದರೇನು? ವಿಧಿಯ ಲೀಲೆ ಬೇರೆಯೇ ಆಗಿತ್ತು. ಸೇನಾ ಮುಖ್ಯಸ್ಥ ರಾವತ್​ರ ಸಾವು ಆಘಾತವಾಗಿಯೇ ಎರಗಿತು. ಸದಾಕಾಲ ಮುಖ್ಯವಾಹಿನಿಯಿಂದ ದೂರವೇ ಇರುತ್ತಾರೆಂದು ಭಾವಿಸಲಾಗುವ ತಮಿಳುನಾಡಿನ ಜನತೆ ಜನರಲ್ ಸಾಹೇಬರ ದೇಹವನ್ನು ಹೊತ್ತ ವಾಹನಕ್ಕೆ ಕೊಟ್ಟ ಗೌರವ ಅಭೂತಪೂರ್ವ. ‘ವೀರನಮನ’ ಎಂದು ಅವರು ಕೂಗುತ್ತಿದ್ದ ಘೊಷಣೆ ಎಲ್ಲಾ ದೇಶವಿರೋಧಿ ಶಕ್ತಿಗಳ ಕಿವಿಗೆ ಕಾದ ಸೀಸ ಸುರುವಿದಂತಾಗಿರಬೇಕು. ಇಡಿಯ ದೇಶ ರಾವತ್​ರ ಸಾವಿಗೆ ದುಃಖಿಸುತ್ತಿರುವಾಗಲೂ ತಮಿಳುನಾಡಿನ ಮಂದಿಯ ಏಕತೆಯನ್ನು ಕಂಡು ಬೆಕ್ಕಸಬೆರಗಾಯ್ತು!

ಇಷ್ಟಕ್ಕೂ ಜನರಲ್ ರಾವತ್​ರ ಮೇಲೆ ದೇಶಕ್ಕೆ ಇಷ್ಟೊಂದು ಗೌರವ ಯಾಕೆ? ಮತ್ತು ದ್ರೋಹಿಗಳಿಗೆ ಇಷ್ಟೊಂದು ವಿರೋಧವೇಕೆ? ಅದಕ್ಕೊಂದು ಇತಿಹಾಸವಿದೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಸೇನೆ ಎಂಬುದು ಕಾಂಗ್ರೆಸ್ ಕಚೇರಿಯೊಳಗಿನ ಕೋಣೆಯಂತಿತ್ತು. ನಿರಂತರ ಭ್ರಷ್ಟಾಚಾರದಿಂದಾಗಿ ಸೇನೆಯ ಆಧುನಿಕೀಕರಣ ನಿಂತೇಹೋಗಿತ್ತು. ರಫೇಲ್ ಕುರಿತಂತೆ ಇಷ್ಟೆಲ್ಲಾ ಮಾತನಾಡುವ ರಾಹುಲ್ ಯುಪಿಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಸಚಿವರು ಸಂಸತ್ತಿನಲ್ಲಿ ಮಾಡಿದ ಭಾಷಣವೊಂದನ್ನು ಕೇಳಬೇಕು. ಯುದ್ಧವಿಮಾನಗಳನ್ನು ಕೊಂಡುಕೊಳ್ಳಲು ಬೊಕ್ಕಸದಲ್ಲಿ ಹಣವಿಲ್ಲವೆಂದೂ ಮುಂದೆ ಬರಲಿರುವ ಸರ್ಕಾರ ಅದನ್ನು ಕೊಳ್ಳಲಿದೆ ಎಂದೂ ಅವರು ಹೇಳಿಕೊಂಡಿದ್ದರು. ಒಂದೆಡೆ ಚೀನಾ, ಮತ್ತೊಂದೆಡೆ ಪಾಕಿಸ್ತಾನ ನಮ್ಮ ಮೇಲೆ ಮುಗಿಬೀಳಲು ಕಾಯುತ್ತಿರುವಾಗ ರಕ್ಷಣಾ ಸಚಿವರೇ ಇಂಥದ್ದೊಂದು ಹೇಳಿಕೆ ಕೊಟ್ಟು ಭಾರತ ಆಕ್ರಮಣಕ್ಕೆ ಎಷ್ಟು ಸಜ್ಜಾಗಿದೆ ಎಂಬುದನ್ನು ನಿರ್ಲಜ್ಜವಾಗಿ ಬಿಚ್ಚಿಟ್ಟಿದ್ದರು. ಮೋದಿ ಅಧಿಕಾರಕ್ಕೆ ಬಂದಮೇಲೆ ಅವರ ಮೊದಲ ನಿರ್ಣಯವೇ ಭಾರತೀಯ ಸೇನೆಯನ್ನು ಬಲಗೊಳಿಸುವುದಾಗಿತ್ತು. ಅವರಿಗೆ ಸೂಕ್ತ ಹೆಗಲಾಗಿ ದೊರೆತದ್ದು ಜನರಲ್ ಬಿಪಿನ್ ರಾವತ್. ಇಬ್ಬಿಬ್ಬರು ಹಿರಿಯ ಅಧಿಕಾರಿಗಳನ್ನು ಪಕ್ಕಕ್ಕೆ ತಳ್ಳಿ ರಾವತ್​ರನ್ನೇ ಭೂಸೇನಾ ಮುಖ್ಯಸ್ಥರನ್ನಾಗಿ ಮಾಡುವುದರ ಹಿಂದೆ ಇದ್ದ ಕಾರಣ ಅವರ ನೇರವಂತಿಕೆ ಮತ್ತು ಪ್ರತ್ಯಕ್ಷ ಕದನಭೂಮಿಯಲ್ಲಿ ಯೋಜನೆಗಳನ್ನು ರೂಪಿಸಬಲ್ಲ ಚಾಕಚಕ್ಯತೆ. ಜನರಲ್ ರಾವತ್​ರು ಕಾಶ್ಮೀರ ಮತ್ತು ಚೀನಾ ಗಡಿಭಾಗದ ತಜ್ಞರೂ ಆಗಿದ್ದರಿಂದ ಎರಡೂ ದಿಕ್ಕಿನ ಆಕ್ರಮಣವನ್ನು ಸಹಜವಾಗಿಯೇ ಎದುರಿಸಬಲ್ಲವರಾಗಿದ್ದರು. 2015ರಲ್ಲಿ ಭಯೋತ್ಪಾದಕರು ಮ್ಯಾನ್ಮಾರ್​ನಿಂದ ಭಾರತದ ಗಡಿಯೊಳಕ್ಕೆ ಬಂದು ಸೈನಿಕರನ್ನು ಕೊಂದು ಮತ್ತೆ ಮ್ಯಾನ್ಮಾರ್ ಪ್ರವೇಶಿಸಿದ್ದು ನೆನಪಿರಬೇಕು. ಆಗ ಜನರಲ್ ರಾವತ್​ರು ಅಜಿತ್ ದೋವಲ್ ಮತ್ತು ನರೇಂದ್ರ ಮೋದಿ ಇಬ್ಬರನ್ನೂ ಒಪ್ಪಿಸಿ ವಿಶೇಷ ರಕ್ಷಣಾ ಪಡೆಯನ್ನು ಮ್ಯಾನ್ಮಾರ್​ನೊಳಕ್ಕೆ ನುಗ್ಗಿಸಿ ಭಯೋತ್ಪಾದಕರನ್ನು ಬಡಿದು, ಭಾರತದ ಸಾರ್ವಭೌಮತೆಯನ್ನು ಪುನರ್​ಸ್ಥಾಪಿಸುವ ಯೋಜನೆ ರೂಪಿಸಿದರು. ಯೋಜನೆ ರೂಪುಗೊಂಡಷ್ಟೇ ವೇಗವಾಗಿ ಕಾರ್ಯರೂಪಕ್ಕೂ ಬಂತು. ಒಬ್ಬೇ ಒಬ್ಬ ಸೈನಿಕನನ್ನು ಕಳೆದುಕೊಳ್ಳದೇ, ಮ್ಯಾನ್ಮಾರ್​ನ ಗಡಿಯೊಳಗೆ ಅಡಗಿಕುಳಿತಿದ್ದ ಭಯೋತ್ಪಾದಕರನ್ನು ಸಮಾಧಿ ಮಾಡಲಾಯ್ತು. ಸೈನಿಕರು ಮರಳಿ ಬಂದ ನಂತರ ಈ ಸುದ್ದಿ ದೇಶಕ್ಕೆ ತಿಳಿದಾಗ ಬಲು ಸಂಭ್ರಮ. ಹೀಗಾಗಿಯೇ ಉರಿಯಲ್ಲಿ ದಾಳಿಯಾದಾಗ ಭಾರತ ಇಂಥದ್ದೊಂದು ಪ್ರಯತ್ನ ಮಾಡಿಯೇ ತೀರುವುದೆಂದು ಪಾಕಿಸ್ತಾನಕ್ಕೆ ವಿಶ್ವಾಸವಿತ್ತು. ಆದರೆ ಗಡಿದಾಟಿ ಪಾಕಿಸ್ತಾನಕ್ಕೇ ನುಗ್ಗಿಬಿಡಬಹುದೆಂಬ ಅಂದಾಜಿರಲಿಲ್ಲ ಅಷ್ಟೆ. ಹದಿಮೂರು ದಿನ ಕಳೆಯುವ ಮುನ್ನವೇ ಈ ದೇಶ ಸರ್ಜಿಕಲ್ ಸ್ಟ್ರೈಕ್ ನಡೆಸಿ ಭಾರತೀಯ ಸೈನಿಕರು ಪಾಕಿಸ್ತಾನದ ಲಾಂಚ್​ಪ್ಯಾಡ್​ಗಳನ್ನು ಧ್ವಂಸಗೊಳಿಸಿ ಮರಳಿ ಬಂದು ಪತ್ರಿಕಾಗೋಷ್ಠಿಯನ್ನೂ ನಡೆಸಿಬಿಟ್ಟಿದ್ದರಲ್ಲ, ಅದರ ಹಿಂದೆ ಇದ್ದ ಶಕ್ತಿ ಜನರಲ್ ರಾವತ್​ರದ್ದೇ. ಪುಲ್ವಾಮಾ ದಾಳಿಯ ನಂತರ ಮತ್ತೊಂದು ಸರ್ಜಿಕಲ್ ಸ್ಟ್ರೈಕನ್ನೇ ನಿರೀಕ್ಷಿಸಿತ್ತು ಪಾಕಿಸ್ತಾನ. ಹೆಚ್ಚೆಂದರೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಲಾಂಚ್​ಪ್ಯಾಡ್​ಗಳನ್ನು ನಾಶ ಮಾಡಬಹುದೆಂಬ ಕಲ್ಪನೆ ಅವರದ್ದು. ಆದರೆ ಭಾರತ ಅಚಾನಕ್ಕು ವಾಯು ಆಕ್ರಮಣ ನಡೆಸಿತಲ್ಲ ಅದೂ ಕೂಡ ಮೋದಿ, ದೋವಲ್, ರಾವತ್ ಇವರುಗಳ ಆಲೋಚನೆಯೇ. ಬಹುಶಃ ಇಷ್ಟರ ವೇಳೆಗೆ ಜನರಲ್ ರಾವತ್​ರ ಮಹತ್ವವೇನೆಂದು ಅರಿವಾಗಿದ್ದಿರಬಹುದು. ಹೀಗಾಗಿಯೇ ಮೂರೂ ಸೇನಾಪಡೆಗಳ ಮುಖ್ಯಸ್ಥರಾಗಿ ಮೊದಲ ಬಾರಿಗೆ ಯಾರಾದರೂ ನೇಮಕವಾಗಬೇಕು ಎಂಬ ಆಲೋಚನೆ ಬಂದಾಗ ನಿಸ್ಸಂಶಯವಾಗಿ ಕಣ್ಣೆದುರಿಗಿದ್ದ ವ್ಯಕ್ತಿ ರಾವತ್​ರೇ ಆಗಿದ್ದರು. ಈಗ ಅವರಿಗಿದ್ದದ್ದು ಪಾಕ್ ಮತ್ತು ಚೀನಾ ಆಕ್ರಮಣವನ್ನು ಎದುರಿಸುವ ಕೆಲಸವಷ್ಟೇ ಅಲ್ಲ. ಬದಲಿಗೆ, ಸೇನಾ ವ್ಯವಸ್ಥೆಯಲ್ಲಿ ಆಮೂಲಾಗ್ರವಾದ ಬದಲಾವಣೆ ತರುವುದಾಗಿತ್ತು. ಮೂರೂ ಸೇನೆಗಳನ್ನು ಒಂದಕ್ಕೊಂದು ಪೂರಕವಾಗಿ ಬೆಸೆಯುವ ಪ್ರಯತ್ನವಾಗಬೇಕಿತ್ತು. ಯಾವ ಯಾವ ಶಸ್ತ್ರಾಸ್ತ್ರಗಳನ್ನು ಎಷ್ಟೆಷ್ಟು ಕೊಳ್ಳಬೇಕೆಂಬ ಯೋಜನೆ ರೂಪುಗೊಳ್ಳಬೇಕಿತ್ತು. ಎಲ್ಲಕ್ಕೂ ಮಿಗಿಲಾಗಿ ಸೈನ್ಯದ ಆತ್ಮಸ್ಥೈರ್ಯವನ್ನು ವೃದ್ಧಿಸಬೇಕಿತ್ತು. ಅವರ ಅವಧಿಯಲ್ಲಿ ಡೋಕ್ಲಾಂನ ಪ್ರಕರಣವೂ ಜರುಗಿ ಭಾರತೀಯ ಸೇನೆ ಅದನ್ನು ನಿರ್ವಹಿಸಿದ ರೀತಿ ಬೆರಗುಗೊಳಿಸುವಂತಿತ್ತು.

ಗಾಲ್ವಾನ್​ನಲ್ಲಿ ಚೀನೀ ಸೈನಿಕರನ್ನು ಭಾರತೀಯ ಸೈನಿಕರು ತದುಕಿದರಲ್ಲ, ಆಗಲೂ ರಾವತ್​ರ ಅಧಿಕಾರ ದೊಡ್ಡದ್ದೇ. ನಮಗಿರುವ ಬಲುದೊಡ್ಡ ಆತಂಕ ಚೀನಾದ್ದೇ ಎಂದು ಹೇಳಲು ಹಿಂಜರಿಯದ ಸೈನಿಕ ಪ್ರಮುಖರು ಅವರಾಗಿದ್ದರು. ಚೀನಾ ಟರ್ಕಿಯೊಂದಿಗೆ ಗೆಳೆತನವನ್ನು ವೃದ್ಧಿಸಿಕೊಳ್ಳುತ್ತಿರುವಾಗ ಅದನ್ನು ಸೂಕ್ಷ್ಮವಾಗಿ ಕೆದಕಿದ ರಾವತ್​ರು ‘ನಾಗರಿಕತೆಗಳ ಕದನ’ ಎಂಬ ಪದಪುಂಜ ಪ್ರಯೋಗ ಮಾಡಿದ್ದು ಚೀನಾದ ಕಿರಿಕಿರಿಗೆ ಕಾರಣವಾಗಿತ್ತು. ವಿದೇಶಾಂಗ ಸಚಿವ ಜೈಶಂಕರ್ ಈ ಹೇಳಿಕೆಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಕೈತೊಳೆದುಕೊಳ್ಳಬೇಕಾಗಿ ಬಂತು. ರಾವತ್​ರು ಇಲ್ಲಿಗೇ ನಿಲ್ಲಲಿಲ್ಲ, ‘ಭಾರತ ಎದುರಿಸಬೇಕಾದ್ದು ಎರಡು ದಿಕ್ಕಿನ ದಾಳಿಯನ್ನಲ್ಲ, ಬದಲಿಗೆ ಎರಡೂವರೆ ದಿಕ್ಕಿನ ಆಕ್ರಮಣ’ ಎಂದಿದ್ದರು. ಪಾಕಿಸ್ತಾನ, ಚೀನಾ ಎಂಬ ಎರಡು ದಿಕ್ಕುಗಳಂತೂ ಅರ್ಥವಾಗುತ್ತದೆ. ಇನ್ನು ಉಳಿದ ಅರ್ಧ ಭಾರತದೊಳಗೇ ಇರುವ ದೇಶದ್ರೋಹಿಗಳ ಕುರಿತಂತೆ ಮಾತನಾಡಿದ್ದು. ಬಹುಶಃ ಈಗ ಅರ್ಥವಾಗಿರಬೇಕು ಅವರ ಸಾವಿನ ಸುದ್ದಿಯನ್ನು ಕೆಲವು ಮಂದಿ ಸಂಭ್ರಮಿಸಿದ್ದು ಏಕೆ ಅಂತ!

ಬದುಕಿದ್ದಾಗ ದೇಶಕ್ಕಾಗಿ ಅಪಾರ ಕೆಲಸ ಮಾಡಿದ ಜನರಲ್ ರಾವತ್​ರು ತೀರಿಕೊಂಡ ಮೇಲೂ ತಮ್ಮ ಕೆಲಸ ಬಿಡಲಿಲ್ಲ. ತಮಿಳುನಾಡನ್ನು ರಾಷ್ಟ್ರೀಯತೆಯೊಂದಿಗೆ ಏಕರಸಗೊಳಿಸಿದರು ಮತ್ತು ಈ ರಾಷ್ಟ್ರದಲ್ಲಿಯೇ ಅಡಗಿ ಕುಳಿತಿದ್ದ ದ್ರೋಹಿಗಳ ಬಣ್ಣ ಬಯಲುಗೊಳಿಸಿದರು. ಒಂದಾದ ಮೇಲೊಂದು ರಾಜ್ಯಗಳು ಇಂತಹ ದ್ರೋಹಿಗಳನ್ನು ಗುರುತಿಸಿ ಅವರ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿರುವುದು ಸಂತಸದ ಸಂಗತಿ. ಅದಾಗಲೇ ಜಮ್ಮು-ಕಾಶ್ಮೀರ ಬ್ಯಾಂಕ್ ಜನರಲ್ ಸಾಹೇಬರ ಸಾವನ್ನು ಸಂಭ್ರಮಿಸಿದ್ದ ತನ್ನ ಉದ್ಯೋಗಿ ಅಫ್ರೀನ್ ಹಸನ್​ರನ್ನು ಕೆಲಸದಿಂದ ಕಿತ್ತೊಗೆದಿದೆ. ಕರ್ನಾಟಕದ ಮುಖ್ಯಮಂತ್ರಿಗಳು ಈ ಜನರ ಮೇಲೆ ಕಾರ್ಯಾಚರಣೆ ಮಾಡುವುದಾಗಿ ಹೇಳಿದ ಕೂಡಲೇ ಈ ಸಾವನ್ನು ಸಂಭ್ರಮಿಸಿದ ಸ್ವಘೊಷಿತ ಪತ್ರಕರ್ತರು ಪೊ›ಫೈಲ್ ಲಾಕ್ ಮಾಡಿಕೊಂಡಿದ್ದಾರೆ, ತಮ್ಮ ಫೇಸ್​ಬುಕ್ ಪೋಸ್ಟ್​ಗಳನ್ನು ಅಳಿಸಿ ಹಾಕಿಬಿಟ್ಟಿದ್ದಾರೆ. ಆದರೆ ಇವರೆಲ್ಲ ಯಾರು ಎಂಬುದು ಸಮಾಜಕ್ಕೆ ಅದಾಗಲೇ ತಿಳಿದುಹೋಗಿದೆ. ಇಂಥವರನ್ನು ಸರ್ಕಾರ ಸೂಕ್ತವಾಗಿ ವಿಚಾರಿಸಿಕೊಳ್ಳಲೇಬೇಕು. ಇಲ್ಲವಾದರೆ ಭಾರತ ತುಂಡರಿಸುವ ಶಕ್ತಿಯಾಗಿ ಇವರೆಲ್ಲರೂ ಮೆರೆದುಬಿಡುತ್ತಾರೆ. ಇದು ಇಡಿಯ ಭಾರತ ಒಟ್ಟಾಗಿ ನಿಲ್ಲಬೇಕಾದ ಸಮಯ. ಜನರಲ್ ರಾವತ್​ರು ನರೇಂದ್ರ ಮೋದಿಯ ಆಪ್ತ ಕಾರ್ಯದರ್ಶಿಯಲ್ಲ, ಅವರು ಈ ದೇಶದ ಸೇನಾ ಮುಖ್ಯಸ್ಥರು. ಇಂದು ಅವರ ಸಾವನ್ನು ಸಂಭ್ರಮಿಸುವ ಮಂದಿ ನಾಳೆ ಪ್ರತ್ಯಕ್ಷ ಯುದ್ಧದಲ್ಲಿ ಭಾರತದ ಸೈನಿಕರಿಗಾಗುವ ನಷ್ಟವನ್ನು ಸಂಭ್ರಮಿಸಲು ಹಿಂಜರಿಯಲಾರರು. ಅತ್ಯಂತ ಕೆಳಮಟ್ಟದ ಮಂದಿ ಭಾರತದ ವಿರುದ್ಧ ಪಾಕಿಸ್ತಾನದ ಗೆಲುವನ್ನು ಪಟಾಕಿ ಹೊಡೆದು ಆನಂದಿಸುತ್ತಾರೆ. ಅವರಿಗೆ ಕವರಿಂಗ್ ಫೈರ್ ಕೊಡುವ ಈ ಜನ ಸೈನ್ಯದ ಮುಖ್ಯಸ್ಥರು ತೀರಿಕೊಂಡಾಗ ಸಂತೋಷವೂ ಆಗುವುದಿಲ್ಲ, ದುಃಖವೂ ಆಗುವುದಿಲ್ಲ ಎಂದು ಆನಂದವನ್ನು ತೋಡಿಕೊಳ್ಳುತ್ತಾರೆ.

ನೆನಪಿಡಿ, ಇವರೆಲ್ಲರೂ ರಣಹದ್ದುಗಳಂತೆ ಭಾರತದ ಮೇಲೆ ಎರಗಲು ಕಾಯುತ್ತಿರುವ ಮಂದಿ. ಅಖ್ಲಾಕ್​ನ ಸಾವು ವೈಯಕ್ತಿಕ ದ್ವೇಷಕ್ಕೆ ಎಂಬುದು ಗೊತ್ತಾದಾಗಲೂ ಅದನ್ನು ದನದ ಮಾಂಸದೊಂದಿಗೆ ಇಂದಿಗೂ ತಳುಕುಹಾಕುತ್ತಾರೆ. ಸಿಎಎ ಕಾನೂನು ಮುಸಲ್ಮಾನರಿಗೆ ತೊಂದರೆಯನ್ನುಂಟು ಮಾಡುವಂಥದ್ದಲ್ಲ ಎಂಬುದು ಗೊತ್ತಿರುವಾಗಲೂ ಅವರನ್ನು ಭಡಕಾಯಿಸುತ್ತಾರೆ. ಕೋರೆಗಾಂವ್ ಪ್ರಕರಣಗಳು ಮರೆಯಲು ಸಾಧ್ಯವಾಗದಂಥದ್ದು. ಭಯೋತ್ಪಾದಕರ ಸಾವಿಗೆ ಮಾನವ ಹಕ್ಕುಗಳ ಕವರಿಂಗ್ ಫೈರ್ ಕೊಡುವುದು ಇದೇ ಮಂದಿ. ಇಶ್ರತ್ ಜಹಾನ್ ಎನ್​ಕೌಂಟರ್​ನಲ್ಲಿ ತೀರಿಕೊಂಡಳಲ್ಲ, ಇಂದಿಗೂ ಆಕೆಯ ಕುರಿತಂತೆ ಕಣ್ಣೀರಿಡುತ್ತಾ ಸಮಾಜದ ದಾರಿ ತಪ್ಪಿಸುತ್ತಿರುವವರೂ ಇವರೇ. ರೈತರ ಪ್ರತಿಭಟನೆಯಲ್ಲಿ ಅತ್ಯಾಚಾರವಾದದ್ದನ್ನು, ಕೊಲೆಗಳಾಗಿದ್ದನ್ನು ಮುಚ್ಚಿಟ್ಟು ಕುಣಿದಾಡಿದ ಈ ಮಂದಿ ಅವಕಾಶ ಸಿಕ್ಕಾಗಲೆಲ್ಲ ಭಾರತದ ಕುರಿತು ಕೆಟ್ಟ ಸಂಗತಿಗಳನ್ನು ಜಾಗತಿಕ ಮಟ್ಟದಲ್ಲಿ ಹಂಚಿಕೊಳ್ಳುತ್ತಾರೆ. ಆಗೆಲ್ಲ ಅದನ್ನು ಪತ್ರಕರ್ತ ಧರ್ಮವೆಂದೋ ವೈಯಕ್ತಿಕ ಸ್ವಾತಂತ್ರ್ಯವೆಂದೋ ಸುಮ್ಮನಾಗಿಬಿಡಬೇಕಾದ ಅನಿವಾರ್ಯತೆ ನಮಗೂ ಕೂಡ. ಆದರೆ ಈ ಬಾರಿ ಮಾತ್ರ ಅವರು ಸರಿಯಾಗಿಯೇ ಸಿಕ್ಕುಹಾಕಿಕೊಂಡಿದ್ದಾರೆ. ಅಂತರಂಗವನ್ನು ಬಚ್ಚಿಡಲಾಗದೇ ಬೆತ್ತಲಾಗಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳು ತರುಣರನ್ನು ಕೆಡಿಸುತ್ತವೆ ಎಂಬ ಆರೋಪಗಳ ನಡುವೆಯೂ ಇವರ ಮನಃಸ್ಥಿತಿಯನ್ನು ಬಯಲಿಗೆಳೆಯುತ್ತವೆ ಎಂಬುದೂ ಕೂಡ ಅಷ್ಟೇ ಸತ್ಯ. ಹೀಗಾಗಿ ಅಂಥವರನ್ನು ಗುರುತಿಟ್ಟುಕೊಳ್ಳಿ. ಅವರು ದೇಶಕ್ಕೆ, ಸೇನೆಗೆ ಮಾಡಿದ ಈ ಅವಮಾನವನ್ನು ಮರೆಯದೇ ನೆನಪಿಟ್ಟುಕೊಳ್ಳಿ. ಅವರ ಪ್ರತಿಯೊಂದು ನಡೆಯನ್ನೂ ಎಚ್ಚರದಿಂದ ಗಮನಿಸೋಣ. ಈ ದೇಶವನ್ನು ನಾಶಗೈಯ್ಯಬೇಕೆಂಬ ಅವರ ತುಡಿತಕ್ಕೆ ಮೂರ್ತರೂಪ ದೊರೆಯಲು ನಾವು ಬಿಡದಿರೋಣ.

ಅಂದಹಾಗೆ, ‘ಮೊದಲು ಮಾನವನಾಗು’ ಎಂದೆಲ್ಲ ಹೇಳಿಕೊಂಡು ತಿರುಗಾಡುತ್ತಿದ್ದ ಸಿನಿಮಾ ನಟರುಗಳೆಲ್ಲ ಎಲ್ಲಿ ಕಾಣೆಯಾದರು ಎಂದು ಭೂತಕನ್ನಡಿ ಹಿಡಿದುಕೊಂಡು ಹುಡುಕುತ್ತಿದ್ದೇವೆ. ನಿಮಗೇನಾದರೂ ಸಿಕ್ಕರೆ ದಯವಿಟ್ಟು ಹುಡುಕಿಕೊಡಿ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net