ಮತಾಂತರ ಕಾಯ್ದೆ ಅಲ್ಪಸಂಖ್ಯಾತರು ಸಂಭ್ರಮಿಸಬೇಕಿತ್ತು!

Column f
Published on
ಆರಂಭದಲ್ಲಿ ಕ್ರಿಶ್ಚಿಯನ್ನರು ಮತಾಂತರ ಮಾಡಲು ಅಕ್ಕಿ, ಬೇಳೆಯನ್ನೋ, ಒಂದಷ್ಟು ಹಣವನ್ನೋ ಕೊಡುತ್ತಾರಾದರೂ ಒಮ್ಮೆ ಮತಾಂತರಗೊಂಡರೆ ರ್ಚಚಿಗೆ ಬರುವ ಈ ಮಂದಿಯೇ ವಾರಕ್ಕಿಷ್ಟು ಹಣ ಹಾಕಬೇಕೆಂಬ ನಿಯಮ ಮಾಡಿಬಿಡುತ್ತಾರೆ. ಈ ವ್ಯವಸ್ಥೆಯೇ ಚೆನ್ನಾಗಿ ಆಲೋಚಿಸಿ ರೂಪಿಸಿರುವಂಥದ್ದು.

ಮತಾಂತರ ನಿಷೇಧದ ಕುರಿತಂತೆ ಕಳೆದೊಂದು ವಾರ ವ್ಯಾಪಕವಾಗಿ ಚರ್ಚೆ ನಡೆದಿದೆ. ಯಾವ ವಿಚಾರಕ್ಕೂ ಇಷ್ಟೆಲ್ಲ ಅರಚಾಡದ ಕಾಂಗ್ರೆಸ್ಸು ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸದನದಲ್ಲಿ ಕೂಗಾಡಿಬಿಟ್ಟಿದೆ. ಹಿಂದೂಗಳಿಗೆ ಒಳಿತಾಗುವ ಯಾವ ಕಾನೂನನ್ನು ಕಂಡರೂ ಇವರಿಗೆ ಇಷ್ಟೇಕೆ ದ್ವೇಷವೋ ಅರ್ಥವಾಗುವುದಿಲ್ಲ. ಅಲ್ಪಸಂಖ್ಯಾತರ ತುಷ್ಟೀಕರಣದ ಹಳೆಯ ರಾಜಕಾರಣದ ಕಲ್ಪನೆಯಿಂದ ಇಂದಿಗೂ ಕಾಂಗ್ರೆಸ್ಸು ಹೊರಗೆ ಬರಲೇ ಇಲ್ಲ. ಈ ಹಿನ್ನೆಲೆಯಲ್ಲೇ ಕಳೆದವಾರ ಖಾಸಗಿ ಚಾನೆಲ್ ಒಂದರಲ್ಲಿ ಚರ್ಚೆ ನಡೆದಿತ್ತು. ಕಾಂಗ್ರೆಸ್ಸಿನ ಪರವಾಗಿ ಮಾತನಾಡುತ್ತಿದ್ದ ಹೆಣ್ಣುಮಗಳೊಬ್ಬಳು ಅಂಬೇಡ್ಕರರು ಹಿಂದೂಧರ್ಮವನ್ನು ತ್ಯಜಿಸಿ ಬೌದ್ಧಮತ ಸ್ವೀಕಾರ ಮಾಡಿದುದರ ಕುರಿತಂತೆ ಹೇಳುವಾಗ ಆರ್ಕಿಮಿಡೀಸ್​ನ ಯುರೇಕಾ ಭಾವನೆ ಅವಳಲ್ಲಿತ್ತು. ತಾನು ಹೊಸತೇನೋ ಕಂಡುಹಿಡಿದುಬಿಟ್ಟಿದ್ದೇನೆ ಎಂಬಂತಹ ಆನಂದದ ಭಾವ ಅದು. ‘ನಾನು ಹುಟ್ಟುವಾಗ ಹಿಂದೂವಾಗಿ ಹುಟ್ಟಿದೆ. ಆದರೆ ಸಾಯುವಾಗ ಹಿಂದೂವಾಗಿ ಸಾಯಲಾರೆ’ ಎಂದು ಅಂಬೇಡ್ಕರರು ಹೇಳಿದ ಮಾತನ್ನು ನಾವೆಲ್ಲ ಕೇಳಿದ್ದೇವೆ, ಅರಿತಿದ್ದೇವೆ ಮತ್ತು ಹಾಗೇಕೆ ಹೇಳಿದರು ಎಂಬುದನ್ನು ತಿಳಿದು ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದೇವೆ. ಆದರೆ ಕಾಂಗ್ರೆಸ್ಸಿನ ಈ ಮಂದಿಗೆ ಕಿರಿಕಿರಿಯಾಗುವುದು ಯಾವಾಗಲೆಂದರೆ ಅಂಬೇಡ್ಕರರು ಬೌದ್ಧಮತವನ್ನೇ ಏಕೆ ಸ್ವೀಕರಿಸಿದರು ಎಂಬ ಪ್ರಶ್ನೆ ಕೇಳಿದಾಗ.

ಹೈದರಾಬಾದಿನ ನವಾಬ ದೊಡ್ಡಮೊತ್ತದ ಆಮಿಷವನ್ನೊಡ್ಡಿದಾಗ, ಕ್ರಿಶ್ಚಿಯನ್ನರು ಬಲುದೊಡ್ಡ ಅಧಿಕಾರದ ಹರಿವಾಣವನ್ನೇ ಎದುರಲ್ಲಿಟ್ಟಾಗಲೂ ಅವೆಲ್ಲವನ್ನೂ ಧಿಕ್ಕರಿಸಿ ಅಂಬೇಡ್ಕರರು ಬೌದ್ಧಮತವನ್ನೇ ಅಪ್ಪಿಕೊಂಡರಲ್ಲ, ಅದರ ಕುರಿತಂತೆ ಈ ಮಂದಿ ಚರ್ಚೆ ನಡೆಯಲು ಬಿಡುವುದೇ ಇಲ್ಲ. ಖಾಸಗಿ ವಾಹಿನಿಯ ಆ ಚರ್ಚೆಯಲ್ಲಿ ಈ ಪ್ರಶ್ನೆಯನ್ನು ಕಾಂಗ್ರೆಸ್ಸಿನ ಹೆಣ್ಣುಮಗಳಿಗೆ ಕೇಳಿದೊಡನೆ ಆಕೆಯ ಯುರೇಕಾ ಭಾವ ಇಳಿದುಹೋಯ್ತು. ಇತಿಹಾಸವನ್ನು ಬಿಡಿ, ಪ್ರಸ್ತುತ ಪರಿಸ್ಥಿತಿ ಬಗ್ಗೆ ಮಾತನಾಡಿ ಎಂದು ವರಸೆಯನ್ನೇ ಬದಲಾಯಿಸಿಬಿಟ್ಟಳು. ಇತಿಹಾಸವನ್ನೇ ಅರಿಯದ ಮಂದಿ ಪ್ರಸ್ತುತ ಪರಿಸ್ಥಿತಿಗೆ ಯಾವ ರೀತಿ ಪ್ರತಿಸ್ಪಂದಿಸಬಲ್ಲರು ಹೇಳಿ! ವಾಸ್ತವವಾಗಿ ಅಂಬೇಡ್ಕರರು ಇಸ್ಲಾಂ ಮತ್ತು ಕ್ರೖೆಸ್ತಮತವನ್ನು ಧಿಕ್ಕರಿಸಿ ಭಾರತಜನ್ಯ ಬೌದ್ಧಮತವನ್ನು ಆಲೋಚನೆ ಮಾಡಿಯೇ ಒಪ್ಪಿಕೊಂಡಿದ್ದರು. ಎಲ್ಲ ಮತಗಳನ್ನು ಅಧ್ಯಯನ ಮಾಡಿ, ಆ ಮತಗಳ ಅನುಯಾಯಿಗಳ ಮನೋಗತವನ್ನು ಅರಿತು ಆನಂತರವೇ ಆ ನಿರ್ಧಾರ ಕೈಗೊಂಡಿದ್ದರು. ಇಸ್ಲಾಂ ಮತ್ತು ಕ್ರೖೆಸ್ತಮತಕ್ಕೆ ಮತಾಂತರವಾಗುವುದರಿಂದ ರಾಷ್ಟ್ರಾಂತರವಾಗುತ್ತದೆ ಎಂಬ ಅರಿವಿದ್ದದ್ದು ಅವರಿಗೇ. ಆದರೆ ಅಚ್ಚರಿಯೇನು ಗೊತ್ತೇ? ಅಂಬೇಡ್ಕರ್​ವಾದಿಗಳು ಎಂದು ಕರೆಯಲ್ಪಡುವ ಮಂದಿಯೂ ಈ ವಿಚಾರವನ್ನು ಅವಗಣನೆ ಮಾಡಿ, ಅಂಬೇಡ್ಕರರು ಮತಾಂತರವಾಗಿದ್ದರಿಂದಲೇ ದಲಿತರೂ ಮತಾಂತರವಾಗಬಹುದು ಎಂದು ವಾದಿಸುತ್ತಾರೆ. ಬಹುಶಃ ಕಾಂಗ್ರೆಸ್ಸಿನ ನಾಯಕರು ಮತ್ತೊಮ್ಮೆ ಅಂಬೇಡ್ಕರರ ಚಿಂತನೆಗೆ ತಮ್ಮನ್ನು ತಾವು ತೆರೆದುಕೊಂಡರೆ ಅವರ ವಿಶಾಲ ರಾಷ್ಟ್ರೀಯತೆಯ ಆಲೋಚನೆ ವೇದ್ಯವಾದೀತು.

ಇಷ್ಟಕ್ಕೂ ಮತಾಂತರ ನಡೆಯೋದು ಯಾಕೆ? ಸೆಮೆಟಿಕ್ ಮತಗಳಲ್ಲಿ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವುದಕ್ಕೆ ಮಹತ್ವವಿದೆ. ಸಂಖ್ಯೆ ಬೆಳೆದಷ್ಟೂ ರಾಷ್ಟ್ರಗಳನ್ನೇ ಆಪೋಶನ ತೆಗೆದುಕೊಳ್ಳುವುದು ಸಾಧ್ಯವೆಂಬುದು ಅವರಿಗೆ ಗೊತ್ತಿದೆ. ಜಗತ್ತಿನಲ್ಲಿ ಇವರು ಕಾಲಿಟ್ಟೆಡೆಯೆಲ್ಲ ಸ್ಥಳೀಯರನ್ನು ಒತ್ತಾಯಪೂರ್ವಕವಾಗಿಯೇ ಮತಾಂತರಿಸಿಕೊಂಡು ಬಂದಿದ್ದಾರೆ. ಹಾಗೆ ನೋಡಿದರೆ ಅಧ್ಯಯನದಿಂದ ಇಸ್ಲಾಂ ಮತ್ತು ಕ್ರೖೆಸ್ತಮತವನ್ನು ಒಪ್ಪಿಕೊಳ್ಳುವುದು ಅಸಾಧ್ಯ. ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಅಧ್ಯಯನ ಮಾಡುವುದರಿಂದ ಜನ ಈ ಮತಗಳ ಗೋಡೆ ಕಳಚಿ ಆಚೆ ಬರುತ್ತಾರೆ. ಸೆಮೆಟಿಕ್ ಮತದ ಚಿಂತನೆಗಳೇ ಹಾಗಿವೆ. ಅಲ್ಲಿ ಮುಕ್ತವಾದ ಆಲೋಚನೆಗಳಿಗೆ ಅವಕಾಶವೇ ಇಲ್ಲ. ಒಬ್ಬರು ಮೀಸೆ ತೆಗೆದರೆ ಎಲ್ಲರೂ ತೆಗೆಯಬೇಕು. ಒಬ್ಬರು ಪೂಜಾಗೃಹದಲ್ಲಿ ಪ್ರಾರ್ಥನೆ ಮಾಡುವ ರೀತಿಯನ್ನು ಪ್ರತಿಯೊಬ್ಬರೂ ಅನುಕರಿಸಬೇಕು. ಒಂದೇ ಪುಸ್ತಕವನ್ನು, ಒಂದೇ ದೇವರನ್ನು ಎಲ್ಲರೂ ಪ್ರಶ್ನೆ ಕೇಳದೇ ಹಿಂಬಾಲಿಸಬೇಕು. ಪ್ರಶ್ನೆ ಕೇಳುವುದನ್ನು, ಅನುಮಾನ ವ್ಯಕ್ತಪಡಿಸುವುದನ್ನು ಅಲ್ಲಿ ದೇವದೂಷಣೆ ಎಂದು ಕರೆದು ಅಂಥವರಿಗೆ ಎಷ್ಟು ಕಠಿಣವಾದ ಶಿಕ್ಷೆ ನೀಡಲಾಗುವುದೆಂದರೆ ಇನ್ನೆಂದೂ ಮತ್ತೊಬ್ಬರು ಪ್ರಶ್ನೆ ಕೇಳುವ ಧೈರ್ಯ ಮಾಡುವಂತಿಲ್ಲ. ವೈಚಾರಿಕವಾಗಿ ಪ್ರಖರವಾಗಿದ್ದ ಯಾವ ವ್ಯಕ್ತಿಯೂ ಇಂಥದ್ದೊಂದು ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅದು ಹೇಗೆ ಭಾರತೀಯ ಬುದ್ಧಿಜೀವಿಗಳು ಇದನ್ನು ಸಮರ್ಥಿಸಿಕೊಳ್ಳುತ್ತಾರೋ ದೇವರೇ ಬಲ್ಲ. ಅವರಿಗಿರೋದು ಒಂದೇ ಕಾರಣ. ಹಿಂದೂಧರ್ಮವನ್ನು ವಿರೋಧಿಸುವಲ್ಲಿ ಅವರು ಅಪ್ಪಿಕೊಳ್ಳಬಹುದಾದ್ದು ಈ ಸೆಮೆಟಿಕ್ ಮತಗಳನ್ನು ಮಾತ್ರ. ಈ ಮತಗಳು ತಮ್ಮ ವಿಸ್ತಾರಕ್ಕಾಗಿ ಯಾವ ಹಂತಕ್ಕೆ ಹೋಗಲೂ ಹೇಸುವುದಿಲ್ಲ. ಕುತ್ತಿಗೆಯ ಮೇಲೆ ಕತ್ತಿಯನ್ನಿಟ್ಟು ಬೆದರಿಸಿಯಾದರೂ ತಮ್ಮ ದೇವರನ್ನು ಅನುಸರಿಸುವಂತೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಎಲ್ಲ ಮೃದುವಾದ ಮತ್ತು ಉಗ್ರಮಾರ್ಗಗಳನ್ನು ಮುಲಾಜಿಲ್ಲದೇ ಬಳಸುತ್ತಾರೆ. ಆರಂಭದಲ್ಲಿ ಕ್ರಿಶ್ಚಿಯನ್ನರು ಮತಾಂತರ ಮಾಡಲು ಅಕ್ಕಿ, ಬೇಳೆಯನ್ನೋ, ಒಂದಷ್ಟು ಹಣವನ್ನೋ ಕೊಡುತ್ತಾರಾದರೂ ಒಮ್ಮೆ ಮತಾಂತರಗೊಂಡರೆ ರ್ಚಚಿಗೆ ಬರುವ ಈ ಮಂದಿಯೇ ವಾರಕ್ಕಿಷ್ಟು ಹಣ ಹಾಕಬೇಕೆಂಬ ನಿಯಮ ಮಾಡಿಬಿಡುತ್ತಾರೆ. ಈ ವ್ಯವಸ್ಥೆಯೇ ಚೆನ್ನಾಗಿ ಆಲೋಚಿಸಿ ರೂಪಿಸಿರುವಂಥದ್ದು. ಯಾವುದೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಬಳಿಗೆ ಹೋಗಿ ಶಿಲುಬೆ ಹಿಡಿದು ಪ್ರಾರ್ಥನೆ ನಡೆಸುತ್ತಾರೆ. ಅನಾರೋಗ್ಯದಿಂದ ಆತಂಕದಲ್ಲಿರುವ ವ್ಯಕ್ತಿ ಯಾವ ಪ್ರಾರ್ಥನೆಯಿಂದಾದರೂ ತನ್ನ ಸ್ಥಿತಿ ಸುಧಾರಿಸುತ್ತದೆ ಎಂದಾದರೆ ಸಂತಸಪಡದಿರಲು ಸಾಧ್ಯವೇನು? ಆತನ ಈ ಅಸಹಾಯಕತೆಯ ಲಾಭ ಪಡೆಯುವ ಪಾದ್ರಿಗಳು ಆತ ಹುಷಾರಾದ ನಂತರ ರ್ಚಚಿಗೊಯ್ಯುತ್ತಾರೆ. ಮೂರ್ನಾಲ್ಕು ಬಾರಿ ಆತ ರ್ಚಚಿನ ಮುಲಾಜಿಗೆ ಬಿದ್ದು ಬರಲಾರಂಭಿಸಿದ ನಂತರ ಪವಿತ್ರಸ್ನಾನ ಮಾಡಿಸಿ ಅವನನ್ನು ಮತಾಂತರಿಸಿಬಿಡುತ್ತಾರೆ. ಹೀಗೆ ಪವಿತ್ರಸ್ನಾನ ಮಾಡಿಸುವಾಗ ದೇವರೊಂದಿಗಿನ ಹಿಂದಿನ ಎಲ್ಲ ಸಂಬಂಧಗಳನ್ನೂ ಕಳಚಿಕೊಳ್ಳುವಂತೆ ಹೇಳುತ್ತಾರಲ್ಲದೆ ‘ಇನ್ನುಮುಂದೆ ಯಾವ ಹರಕೆ ತೀರಿಸುವ ಅವಶ್ಯಕತೆಯೂ ಇಲ್ಲ, ಏಕೆಂದರೆ ನೀವೀಗ ಏಸುವಿನ ಮಕ್ಕಳು’ ಎಂದುಬಿಡುತ್ತಾರೆ. ಆರಂಭದಲ್ಲಿ ಹೆದರಿಕೆಯಿಂದಲೇ ಈ ಮತ ಸ್ವೀಕಾರ ಮಾಡಿದವರು ಮನೆಯ ದೇವರಕೋಣೆಯಲ್ಲಿ ಉಳಿದೆಲ್ಲ ದೇವರುಗಳೊಂದಿಗೆ ಏಸುವಿನ ಪಟ ಜೋಡಿಸುತ್ತಾರೆ. ಎಷ್ಟಾದರೂ ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದ ಸಂಕುಲವಲ್ಲವೇ? ಹೀಗಾಗಿ ಮನೆಯವರೂ ಈ ಪುಟ್ಟ ಬದಲಾವಣೆಯನ್ನು ವಿರೋಧಿಸುವುದಿಲ್ಲ. ನಿಧಾನವಾಗಿ ರ್ಚಚಿನ ವಿಚಾರಗಳು ತಲೆಹೊಕ್ಕುತ್ತಿದ್ದಂತೆ ದೇವರಕೋಣೆಯ ಒಂದೊಂದೇ ದೇವರಪಟಗಳು ಕಾಣೆಯಾಗುತ್ತ ನಡೆಯುತ್ತವೆ. ಮನೆಮಂದಿಯೆಲ್ಲ ಆಗಾಗ ರ್ಚಚಿಗೆ ಹೋಗಲಾರಂಭಿಸುತ್ತಾರೆ. ಅಷ್ಟರ ವೇಳೆಗೆ ಊರಿನವರೆಲ್ಲ ಆ ಮನೆಯವರನ್ನು ಧಿಕ್ಕರಿಸಿದ ಕಾರಣ ಇವರಿಗೆ ಚರ್ಚು ಅನಿವಾರ್ಯವಾಗಿಬಿಡುತ್ತದೆ. ಆಮೇಲೆ ಮರಳಿ ಬರುವ ಮಾರ್ಗವೇ ಇಲ್ಲ. ಏಕೆಂದರೆ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳಿಗೆ ಒಳಗೆ ಹೋಗೋದು ಸುಲಭ, ಹೊರಗೆ ಬರುವುದು ಹೆಚ್ಚು-ಕಡಿಮೆ ಅಸಾಧ್ಯ. ಇದಕ್ಕೆ ವಿಪರೀತವಾಗಿ ಹಿಂದೂಧರ್ಮದಿಂದ ಹೊರಗೆ ಹೋಗುವುದು ಸುಲಭ, ಒಳಗೆ ಬರುವುದು ಹೆಚ್ಚು-ಕಡಿಮೆ ಅಸಾಧ್ಯ. ಹೀಗೆ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಕ್ರಿಶ್ಚಿಯನ್ನರು ರ್ಚಚಿಗೆ ಬರುವಂಥ ಈ ಮತಾಂತರಿತ ತಳಿಗಳನ್ನು ಮೂಲಮತದ ಗುರುತು ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತಾರೆ. ಅದರ ಪರಿಣಾಮವಾಗಿಯೇ ಅವರು ಹಿಂದೂಧರ್ಮವನ್ನು ತ್ಯಜಿಸಿ ಕ್ರಿಸ್ತನನ್ನು ಅಪ್ಪಿಕೊಂಡಿದ್ದರೂ ಸರ್ಕಾರದಿಂದ ಸಿಗುವ ಮೀಸಲಾತಿ ಮೊದಲಾದ ಎಲ್ಲ ಸೌಲಭ್ಯಗಳನ್ನು ಮುಲಾಜಿಲ್ಲದೆ ಪಡೆದುಕೊಳ್ಳುತ್ತಿರುತ್ತಾರೆ. ಆದ್ದರಿಂದಲೇ ಜನಗಣತಿಯಲ್ಲಿ ಕ್ರಿಸ್ತಾನುಯಾಯಿಗಳ ಸಂಖ್ಯೆ ಕಡಿಮೆ ಎಂದು ಕಾಣುವುದಾದರೂ ವಾಸ್ತವದಲ್ಲಿ ಅದು ಅದಕ್ಕಿಂತಲೂ ಎಷ್ಟೋ ಪಾಲು ಹೆಚ್ಚಿದೆ. ಸದನದಲ್ಲಿ ಸಿದ್ಧರಾಮಯ್ಯನವರು ಜೋರು-ಜೋರಾಗಿ ಈ ಪ್ರಶ್ನೆ ಕೇಳಿದರಲ್ಲ, ಅದಕ್ಕುತ್ತರ ಇದೇ. ಸುಮ್ಮನೆ ಸಿದ್ಧರಾಮಯ್ಯನವರು ಹಿಂದೊಮ್ಮೆ ಬಳ್ಳಾರಿಗೆ ಮಾಡಿದಂತೆ ಬೀದರ್​ನಿಂದ ಚಾಮರಾಜನಗರದವರೆಗೂ ಒಂದು ಪಾದಯಾತ್ರೆ ಮಾಡಲಿ. ದಾರಿಯುದ್ದಕ್ಕೂ ತಲೆಯೆತ್ತಿ ನಿಂತಿರುವ ಚರ್ಚುಗಳನ್ನು ಕಣ್ಣಾರೆ ಕಂಡುಬರಲಿ. ಇರುವ ಮೂರು ಪ್ರತಿಶತಕ್ಕಿಂತಲೂ ಕಡಿಮೆ ಕ್ರಿಶ್ಚಿಯನ್ನರಿಗೆ ಇಷ್ಟೆಲ್ಲ ಚರ್ಚುಗಳೇಕೆ ಎಂಬ ಪ್ರಶ್ನೆಯನ್ನು ಅವರೇ ಆನಂತರ ಕೇಳಿಕೊಂಡು ಉತ್ತರಿಸಿದರೆ ಸಾಕು. ಕ್ರಿಶ್ಚಿಯನ್ನರು ಅದಾಗಲೇ ಹಳ್ಳಿ-ಹಳ್ಳಿಗಳನ್ನು ಆಪೋಶನ ತೆಗೆದುಕೊಂಡುಬಿಟ್ಟಿದ್ದಾರೆ. ಚಿತ್ರದುರ್ಗ, ಯಾದಗಿರಿಯಂಥ ಜಿಲ್ಲೆಗಳ ಬಗ್ಗೆ ನಾವು ಮಾತನಾಡುತ್ತಿದ್ದೆವು. ಅವರು ಇಡಿಯ ಬೀದರ್​ಗೇ ಬಾಯಿ ಹಾಕಿಬಿಟ್ಟಿದ್ದಾರೆ!

ಇಲ್ಲಿ ಪ್ರಶ್ನೆ ಇರುವುದು ಸಾಮಾಜಿಕ ನ್ಯಾಯದ್ದು. ಶತ-ಶತಮಾನಗಳ ಕಾಲ ಶೋಷಣೆಯನ್ನು ಅನುಭವಿಸಿದ ದಲಿತರಿಗೆ ಮೀಸಲಾತಿ ಕೊಟ್ಟು ಸಮಾನ ವೇದಿಕೆಯನ್ನು ರೂಪಿಸುವ ಆಲೋಚನೆಯನ್ನು ಅಂಬೇಡ್ಕರ್ ಮಾಡಿದ್ದರು. ಕ್ರಿಶ್ಚಿಯನ್ನರು ದಲಿತರನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದೇ ತಮ್ಮಲ್ಲಿ ಸಮಾನತೆಯಿದೆ ಎಂಬ ಸುಳ್ಳು ಹೇಳುವ ಮೂಲಕ. ಚರ್ಚುಗಳಲ್ಲೂ ಕೂಡ ಅಸಮಾನತೆಯಿದೆ ಅಲ್ಲದೆ, ಒಂದು ರ್ಚಚಿನ ಅನುಯಾಯಿಗಳು ಮತ್ತೊಂದು ರ್ಚಚಿಗೆ ಹೋಗುವಂತಿಲ್ಲ ಎಂಬ ನಿಯಮವೂ ಇದೆ. ಕೆಲವು ಕಡೆಗಳಲ್ಲಂತೂ ಮತಾಂತರ ಹೊಂದಿದ ದಲಿತರು ಮತಾಂತರ ಹೊಂದಿದ ಮೇಲ್ವರ್ಗದವರೊಂದಿಗೆ ಸಮಾನವಾಗಿ ಪ್ರಾರ್ಥನೆ ನಡೆಸುವಂತೆಯೂ ಇಲ್ಲ. ಹೀಗಿದ್ದರೂ ಹಿಂದೂಧರ್ಮವನ್ನು ದೂಷಿಸಿ ಇಲ್ಲಿರುವ ಜನರನ್ನು ತನ್ನತ್ತ ಸೆಳೆಯುವ ಪ್ರಯಾಸವನ್ನು ಅವರಿನ್ನೂ ಬಿಟ್ಟೇ ಇಲ್ಲ. ಆದರೆ ಸಮಾನತೆಗಾಗಿ ಮತಾಂತರದ ಮಾರ್ಗವನ್ನು ಅಪ್ಪಿಕೊಂಡ ದಲಿತರು ಹಿಂದೂಧರ್ಮದಲ್ಲೇ ಉಳಿದ ದಲಿತರ ಅವಕಾಶಗಳನ್ನು ಕಸಿಯುತ್ತಾರೆ. ಅವರಿಗೆ ಸಿಗಬೇಕಾಗಿದ್ದ ಸೌಲಭ್ಯಗಳನ್ನು ತಾವು ತಿಂದು ತೇಗುತ್ತಾರೆ. ಕ್ರೖೆಸ್ತಮತಕ್ಕೆ ಪರಿವರ್ತನೆಗೊಂಡ ಈ ‘ಉಂಡ’ ದಲಿತರು ಹಿಂದೂಧರ್ಮದಲ್ಲೇ ಉಳಿದ ‘ಉಣದ’ ದಲಿತರಿಗೆ ತಟ್ಟೆಯನ್ನು ಬಿಟ್ಟು ಕೊಡುವುದೇ ಇಲ್ಲ. ಮತ್ತೆ ಸಮಾಜ ಸರಿಹೋಗುವುದು ಹೇಗೆ ಹೇಳಿ? ದಲಿತರ ಕುರಿತಂತೆ ಮೊಸಳೆಕಣ್ಣೀರು ಸುರಿಸುವ ಕಾಂಗ್ರೆಸ್ಸಿಗರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಮೀಸಲು ಕ್ಷೇತ್ರದಿಂದ ಆಯ್ಕೆಯಾಗುವ ಮಲ್ಲಿಕಾರ್ಜುನ ಖರ್ಗೆ ಮಂತ್ರಿಯಾದರು, ಸಿಎಂ ಪಟ್ಟಕ್ಕೆ ಸ್ಪರ್ಧಿಯಾದರು, ವಿಪಕ್ಷದ ನಾಯಕರಾದರು, ಎಲ್ಲ ಸೌಲಭ್ಯಗಳನ್ನೂ ಮುಲಾಜಿಲ್ಲದೆ ಅನುಭವಿಸಿದರು. ಈಗ ಮೀಸಲು ಕ್ಷೇತ್ರದಲ್ಲಿ ಮುಂದಿನ ಸ್ಪರ್ಧೆಗೆ ತಮ್ಮ ಮನೆಯವರನ್ನೇ ಆಯ್ಕೆ ಮಾಡುತ್ತಾರೆ ಎಂದರೆ ಇವರು ಅನ್ಯಾಯ ಮಾಡುತ್ತಿದ್ದಾರೆ ಎಂದೇ ಅರ್ಥವಲ್ಲವೇನು? ಇತರ ದಲಿತರು ಆಡಳಿತದ ಹತ್ತಿರಕ್ಕೆ ಬರುವುದು ಯಾವಾಗ? ಹೀಗಿರುವಾಗಲೂ ಸಿದ್ಧ ರಾಮಯ್ಯನವರು ಸದನದಲ್ಲಿ ನಿಂತುಕೊಂಡು ಸಾಮಾಜಿಕ ನ್ಯಾಯದ ಬಗ್ಗೆ ಕೂಗಾಟ ನಡೆಸುತ್ತಿರುವುದನ್ನು ನೋಡಿದಾಗ ನಗುವುದನ್ನು ಬಿಟ್ಟು ಬೇರೆ ಮಾರ್ಗವೇ ಇರಲಿಲ್ಲ.

ಕಾಂಗ್ರೆಸ್ಸು ಸ್ವಾತಂತ್ರ್ಯ ಬಂದಾಗಿನಿಂದಲೂ ಬಡವರು, ದಲಿತರು, ಶೋಷಿತರು, ರೈತರ ಹೆಸರಿನಲ್ಲಿ ವೋಟು ಪಡೆಯುತ್ತಿದೆಯೇ ಹೊರತು ಅವರನ್ನು ಉದ್ಧಾರ ಮಾಡುವ ಮಾರ್ಗವನ್ನು ಎಂದಿಗೂ ಅರಸಲಿಲ್ಲ. ತನ್ನನ್ನು ತಾನು ಪರಿವರ್ತನೆಗೊಳಿಸಿಕೊಳ್ಳುತ್ತಿರುವ ಹಿಂದೂಧರ್ಮದಲ್ಲೇ ಉಳಿಯುವುದರಿಂದ ದಲಿತರಿಗೆ ಭವಿಷ್ಯದಲ್ಲಿ ಅಪಾರ ಲಾಭವಿದೆ. ಅವರನ್ನು ಇದರ ವಿರುದ್ಧ ದಿಕ್ಕಿನಲ್ಲಿ ಪ್ರಚೋದಿಸಿ ಎಂದಿಗೂ ಬೆಳವಣಿಗೆ ಹಾದಿಯಲ್ಲಿ ಮುನ್ನಡೆಯದಂತೆ ತಡೆಯುವ ಈ ರಾಜಕಾರಣಿಗಳ ವರಸೆ ಅರ್ಥಮಾಡಿಕೊಳ್ಳುವುದರೊಳಗೆ ಕಾಲ ಮಿಂಚಿ ಹೋಗಿರುತ್ತದೆ. ಜಾಗೃತರಾಗಬೇಕಾದ ಹೊತ್ತು ನಿಶ್ಚಯವಾಗಿ ಈಗ ಬಂದಿದೆ.

ಹಾಗೆ ಸುಮ್ಮನೆ ಆಲೋಚಿಸಿ, ಜಗತ್ತಿನ ಯಾವ ರಾಷ್ಟ್ರದಲ್ಲಾದರೂ ಮತಾಂತರ ನಿಷೇಧ ಕಾಯ್ದೆ ಬಂದರೆ ಪಟಾಕಿ ಹೊಡೆದು ಸಂಭ್ರಮಿಸಬೇಕಾದ್ದು ಅಲ್ಪಸಂಖ್ಯಾತರೇ. ಪಾಕಿಸ್ತಾನದಲ್ಲಿ ಈ ಕಾಯ್ದೆ ಬಂದರೆ ಅಲ್ಲಿನ ಬಹುಸಂಖ್ಯಾತರು ತಮ್ಮ ಹೆಣ್ಣುಮಕ್ಕಳನ್ನು ಅಪಹರಿಸಲಾರರು, ತರುಣರನ್ನು ಬಲವಂತದಿಂದ ಮತಾಂತರಿಸಲಾರರು ಎಂದು ಅಲ್ಪಸಂಖ್ಯಾತರು ಸಂಭ್ರಮ ಪಡುತ್ತಾರೆ. ಭಾರತದಲ್ಲಿ ಉಲ್ಟಾ. ಈ ಕಾಯ್ದೆಯನ್ನು ಸಂಭ್ರಮಿಸುತ್ತಿರುವುದು ಬಹುಸಂಖ್ಯಾತ ಹಿಂದೂಗಳು ಮತ್ತು ಈ ಕಾಯ್ದೆಯಿಂದ ನಷ್ಟವಾಗುತ್ತಿದೆ ಎಂದು ರೋದಿಸುತ್ತಿರುವುದು ಅಲ್ಪಸಂಖ್ಯಾತರು! ಹಿಂದೂ ಅದೆಷ್ಟು ಸಹಿಷ್ಣು ಮತ್ತು ಮುಗ್ಧ ಎಂಬುದಕ್ಕೆ ಇದೊಂದೇ ಉದಾಹರಣೆ ಸಾಕು.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net