‘ಭಾರತಭಾವನೆ’ಯನ್ನು ತೀವ್ರವಾಗಿ ಅನುಭವಿಸುವ ಈ ಹೊತ್ತಿನಲ್ಲಿ ದೃಢಸಂಕಲ್ಪದ ನಾಯಕತ್ವದ ಮಹತ್ವ

bird aprila
Published on

ಭಾರತ ಕರೊನಾ ವಿರುದ್ಧ ನಡೆಸಿರುವ ಹೋರಾಟ ವಿಶ್ವದೆದುರು ಮಾದರಿಯಾಗಿ ಹೊಮ್ಮಿದೆ. ಸೀಮಿತ ಸಂಪನ್ಮೂಲ/ಸೌಲಭ್ಯಗಳ ಹೊರತಾಗಿಯೂ ಭಾರತ ವಿವೇಕ ಮತ್ತು ಸೂಕ್ತ ವಿವೇಚನೆಯೊಂದಿಗೆ ಕರೊನಾ ಸಂಕಷ್ಟದ ವಿರುದ್ಧ ಹೋರಾಡುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಅದರ ಸಹ ಸಂಸ್ಥೆಗಳ ವ್ಯೂಹರಚನೆ ಪ್ರಶಂಸನೀಯವಾಗಿದೆ.

ಇದೆಲ್ಲದಕ್ಕಿಂತಲೂ ಮಿಗಿಲಾಗಿರುವುದು ಈ ದೇಶದ ಜನರ ಅಭೂತಪೂರ್ವ ಸಹಕಾರ ಮತ್ತು ಸಮರ್ಪಣೆ. ಈ ಬಗೆಯ ಸಹಕಾರ, ಸಮರ್ಪಣೆ ವಿಶ್ವದ ಬೇರೆಲ್ಲೂ ಕಾಣಸಿಗದು. ಏಕೆಂದರೆ ಭಾರತದ ಈ ಕರ್ತೃತ್ವದ ಹಿಂದಿದೆ ಶ್ರದ್ಧೆ ಮತ್ತು ಆಧ್ಯಾತ್ಮಿಕ ಬಲ. ಈ ದೇಶದಲ್ಲಿ ಯಾವಾಗೆಲ್ಲ ನಾವು ಆತ್ಮಶಕ್ತಿಯನ್ನು ಜಾಗೃತಗೊಳಿಸುತ್ತೇವೆಯೋ ಆವಾಗೆಲ್ಲ ವಿಜಯಿಯಾಗುತ್ತೇವೆ. ಭಾರಿ ವಿಪತ್ತಿನ ಈ ಹೊತ್ತಿನಲ್ಲಿ ಸುಪ್ತಬಲವನ್ನು (ಆತ್ಮಶಕ್ತಿ) ಜಾಗೃತಗೊಳಿಸಿದ ಶ್ರೇಯಸ್ಸು ನಿಸ್ಸಂಶಯವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಒಂದೆಡೆ, ಅವರು ಆತ್ಮವಿಶ್ವಾಸಭರಿತವಾದ ಕಠಿಣ ನಿರ್ಣಯಗಳನ್ನು ತಳೆದಿದ್ದಾರೆ. ಮತ್ತೊಂದೆಡೆ, ಜನಮಾನಸದಲ್ಲಿ ‘ನಾವು ಮಾಡಬಲ್ಲೆವು’ ಎಂಬ ಭಾವನೆಯನ್ನು ಪ್ರಜ್ವಲಿತಗೊಳಿಸಿದ್ದಾರೆ.

ಚಮತ್ಕಾರಗಳು ಸಂಭವಿಸುತ್ತವೆ ನಿಜ. ಆದರೆ, ಅದಕ್ಕೆ ನಿರಂತರವಾಗಿ ಒಂದು ಸಕಾರಾತ್ಮಕ ಯೋಚನೆಯನ್ನು ಜೀವಂತವಾಗಿ ಇರಿಸಬೇಕಾಗುತ್ತದೆ. ಆಸ್ಥೆಯನ್ನು ಪ್ರಶ್ನೆಗಳ ಕಟಕಟೆಯಲ್ಲಿ ಅಲ್ಲ, ಬದಲಾಗಿ ವಿಶ್ವಾಸದ ಅಂಗಳಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ. ದೇಶದ ಕೆಲವರಲ್ಲಿ ಮಾತ್ರ ‘ಇದು ನಮ್ಮಿಂದ ಆಗುವುದಿಲ್ಲ. ವಿಶ್ವದ ಅನ್ಯ ರಾಷ್ಟ್ರಗಳ ಬಳಿ ಇರುವ ಶಕ್ತಿ, ಸಾಮರ್ಥ್ಯ ನಮ್ಮಲ್ಲಿ ಎಲ್ಲಿದೆ?’ ಎಂಬ ಭಾವ ಆವರಿಸಿದೆ. ಆದರೆ, ಇದು ಸೂಕ್ತವಾದದ್ದಲ್ಲ. ಏಕೆಂದರೆ, ನಾವು ಒಂದು ಶಕ್ತಿಯನ್ನು ಮರೆತು ಬಿಟ್ಟಿದ್ದೇವೆ. ಅದು ‘ಅನಂತ’ದಿಂದ ದೊರೆಯುತ್ತದೆ ಮತ್ತು ಅದರ ಸಾಧ್ಯತೆಗಳು ಕೂಡ ಅನಂತವಾಗಿವೆ ಎಂಬುದನ್ನು ಗಮನಿಸಬೇಕು.

ಒಂದು ಪ್ರೇರಣಾದಾಯಿ ಕಥೆ ಕೇಳಿ. ರಸ್ತೆಯ ಅಂಚಿನಲ್ಲಿ ಆನೆಯೊಂದು ನಿಂತುಕೊಂಡಿದ್ದನ್ನು ಒಬ್ಬ ವ್ಯಕ್ತಿ ಗಮನಿಸಿದ. ಆನೆಯ ಒಂದು ಕಾಲಿಗೆ ಹಗ್ಗ ಕಟ್ಟಲಾಗಿತ್ತು. ಇಷ್ಟು ದೊಡ್ಡ ಆನೆಯನ್ನು ಸಣ್ಣ ಹಗ್ಗದಿಂದ ಕಟ್ಟಿರುವುದನ್ನು ನೋಡಿ ಆತನಿಗೆ ಆಶ್ಚರ್ಯವಾಯಿತು. ಆನೆ ಮನಸ್ಸು ಮಾಡಿದಲ್ಲಿ ಒಂದೇ ಪ್ರಯತ್ನದಲ್ಲಿ ಆ ಹಗ್ಗವನ್ನು ಬಿಡಿಸಿಕೊಂಡು, ಸ್ವತಂತ್ರಗೊಳ್ಳಬಹುದು. ಆದರೆ, ಅದು ಕಾಲಿಗೆ ಕಟ್ಟಿರುವ ಹಗ್ಗವನ್ನು ದೊಡ್ಡ ಬಂಧನವೆಂದು ಭಾವಿಸಿ ಸುಮ್ಮನೆ ನಿಂತುಕೊಂಡಿತ್ತು. ಆ ವ್ಯಕ್ತಿ ಮಾವುತನನ್ನು ಪ್ರಶ್ನಿಸಿದ-‘ನಿನ್ನ ಈ ಆನೆ ಹಗ್ಗ ಕಡಿದುಕೊಂಡು, ಸ್ವತಂತ್ರವಾಗಿ ಸಾಗಬಲ್ಲದು ಎಂದು ನಿನಗನಿಸದೇ?’ ಮಾವುತ ‘ನನ್ನೊಂದಿಗೆ ಬನ್ನಿ’ ಎಂದು ಆತನನ್ನು ಕರೆದುಕೊಂಡು ಹೋದ. ಅಲ್ಲಿ ಇನ್ನೂ ಹಲವಾರು ಆನೆಗಳನ್ನು ಸಣ್ಣ ಸಣ್ಣ ಹಗ್ಗಗಳಿಂದ ಕಟ್ಟಿಹಾಕಲಾಗಿತ್ತು. ಆಗ ರಹಸ್ಯವನ್ನು ಬಿಡಿಸಿ ಹೇಳಿದ ಮಾವುತ, ‘ವಾಸ್ತವದಲ್ಲಿ ಇವು ಮರಿಗಳಾಗಿದ್ದಾಗಿಂದಲೇ ಇವುಗಳನ್ನು ಇದೇ ಬಗೆಯ ಹಗ್ಗದಿಂದ ಕಟ್ಟಲಾಗುತ್ತಿತ್ತು. ಯಾರಿಗಾದರೂ ಗುಲಾಮರನ್ನಾಗಿ ಮಾಡಬೇಕಾದರೆ ಮೊದಲು ಅವರ ಆತ್ಮವಿಶ್ವಾಸವನ್ನು ಕೊನೆಗೊಳಿಸಬೇಕು. ಮೊದಲೆಲ್ಲ, ಈ ಆನೆಮರಿಗಳು ಹಗ್ಗ ಕಡಿದುಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದವು. ಆಗ ಅವುಗಳಿಗೆ ಹಗ್ಗ ಕಡಿದುಕೊಂಡು, ಮುಕ್ತಗೊಳ್ಳುವಷ್ಟು ಶಕ್ತಿ ಇರಲಿಲ್ಲ. ಪೂರ್ತಿ ಪ್ರಯತ್ನ ಹಾಕಿದ ಬಳಿಕವೂ ಹಗ್ಗದಿಂದ ಬಿಡಿಸಿಕೊಳ್ಳಲು ಆಗದಿದ್ದಾಗ, ‘ನಮಗೆ ಈ ಹಗ್ಗ ಕಡಿದುಕೊಳ್ಳಲು ಸಾಧ್ಯವೇ ಇಲ್ಲ’ ಎಂಬ ಭಾವ ಗಟ್ಟಿ ಮಾಡಿಕೊಂಡವು. ಮರಿಗಳು ದೊಡ್ಡವಾದ ಬಳಿಕವೂ ಅವರ ಮನಸ್ಸಿನಲ್ಲಿನ ಅವಿಶ್ವಾಸ ಮುಂದುವರಿಯುತ್ತದೆ ಮತ್ತು ಅವು ಹಗ್ಗದಿಂದ ಬಿಡಿಸಿಕೊಳ್ಳುವ ಪ್ರಯತ್ನವನ್ನೇ ಬಿಟ್ಟುಬಿಡುತ್ತವೆ’.

ನಮ್ಮ ದೇಶದಲ್ಲಿ ಕೂಡ ಬಹಳಷ್ಟು ಜನ ಈಗ ಪ್ರಯತ್ನ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಈ ಹಗ್ಗ ಎಂಬ ಬಂಧನವನ್ನು ಒಂದೇ ಪ್ರಯತ್ನದಲ್ಲಿ ಮುರಿಯಬಹುದು ಎಂಬುದನ್ನೇ ಮರೆತು ಬಿಟ್ಟಿದ್ದಾರೆ. ಹಾಗಾಗಿ, ಈಗ ಅವಶ್ಯಕತೆ ಇರುವುದು ನಿಜವಾದ ಆತ್ಮವಿಶ್ವಾಸವನ್ನು ಜಾಗೃತ ಮಾಡುವುದು. ದೇಶದಲ್ಲಿ ಈ ಆತ್ಮವಿಶ್ವಾಸದ ಜಾಗೃತಿಯನ್ನು ನಾವೆಲ್ಲ ಕರೊನಾ ಸಂಕಷ್ಟ ಕಾಲದಲ್ಲಿ ನೋಡಿದ್ದೇವೆ. ಪ್ರಧಾನಮಂತ್ರಿಗಳ ಒಂದು ಕರೆಯ ಬಳಿಕ ನಾವು ದೇಶದಲ್ಲಿ ಕಂಡ ಆತ್ಮಸಂಯಮ ಮತ್ತು ಕರ್ತವ್ಯಪ್ರಜ್ಞೆ ಒಂದು ಸಾಧಾರಣ ಘಟನೆಯೇನಲ್ಲ. ಜನಸಾಮಾನ್ಯರು ಮನೆಯಲ್ಲಿ ಉಳಿದುಕೊಂಡಿರುವುದು, ಅವಶ್ಯಕ ಸೇವೆಗಳನ್ನು ಒದಗಿಸುತ್ತಿರುವವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸ್ವಾರ್ಥರಹಿತವಾಗಿ ಇನ್ನೊಬ್ಬರಿಗಾಗಿ ದುಡಿಯುತ್ತಿರುವುದು ಮತ್ತು ಎಲ್ಲರೂ ಸೇರಿ ಅವರಿಗೆ ಚಪ್ಪಾಳೆ ತಟ್ಟಿ, ದೀಪ ಬೆಳಗಿಸಿ ಕೃತಜ್ಞತೆ ಸಲ್ಲಿಸಿದ್ದು, ಊಹಾತೀತ ಮಾತ್ರವಲ್ಲ ಪ್ರಶಂಸನೀಯವೂ ಹೌದು.

ಕರೊನಾ ಸಂಕಟದ ಸಮಯದಲ್ಲಿ ಭಾರತ ತೆಗೆದುಕೊಂಡ ಕಠೋರ ನಿರ್ಣಯಗಳನ್ನು ವಿಶ್ವದ ಹಲವು ವೇದಿಕೆಗಳಲ್ಲಿ ಪ್ರಶಂಸಿಸಲಾಗಿದೆ. ನಮ್ಮ ದೇಶ ಹಲವು ರೂಪಗಳಲ್ಲಿ ವಿಶ್ವದಿಂದ ಭಿನ್ನವಾಗಿದೆ. ಇಂದು ಮಾನವಸಂಕುಲ ಪ್ರಕೃತಿಯ ಆಕ್ರೋಶ ಎದುರಿಸುತ್ತಿದೆ ಮತ್ತು ಹಲವು ಮೂಲಭೂತ ಪ್ರಶ್ನೆಗಳು ಮಾನವೀಯತೆ ಸಮ್ಮುಖದಲ್ಲಿ ಉದ್ಭವವಾಗಿವೆ. ಹೀಗಿರುವಾಗ, ಜಾಗತಿಕ ವಲಯ ಪ್ರಾಮಾಣಿಕತೆಯಿಂದ ಭಾರತದತ್ತ ನೋಡಿದರೆ ಅದಕ್ಕೆ ಪರಿಹಾರ ಅಥವಾ ಉತ್ತರ ಗೋಚರಿಸಬಲ್ಲದು. ನಮ್ಮ ಭಾರತೀಯ ಸಂಸ್ಕೃತಿಯು ಪ್ರಕೃತಿಯನ್ನು ಎಂದಿಗೂ ಶೋಷಿಸಲು, ಅದರೊಂದಿಗೆ ತಿಕ್ಕಾಟಕ್ಕೆ ಇಳಿಯಲು ಕಲಿಸುವುದಿಲ್ಲ. ಮತ್ತು ಪ್ರಕೃತಿ ಮೇಲೆ ವಿಜಯ ಸಾಧಿಸಲು ಹಪಹಪಿಸುವುದಿಲ್ಲ. ಅಂಥ ಚಿಂತನೆಯೂ ಅಹಿತಕರ ಎಂಬುದು ಚೆನ್ನಾಗಿ ಅರಿವಿದೆ. ನಾವು ನಿಸರ್ಗವನ್ನು, ಸೃಷ್ಟಿಯನ್ನು ಪೂಜಿಸುತ್ತೇವೆ, ಆರಾಧಿಸುತ್ತೇವೆ, ನಮಿಸುತ್ತೇವೆ, ಪ್ರೀತಿಸುತ್ತೇವೆ ಮತ್ತು ಅದರ ಆದೇಶಗಳನ್ನು ಅಂಗೀಕರಿಸುತ್ತೇವೆ. ಇಂದಿನ ಸ್ಥಿತಿಯಲ್ಲಿ ಇಡೀ ವಿಶ್ವಕ್ಕೆ ಬೇಕಾಗಿರುವ ದಾರಿಯೂ ಇದುವೇ. ಆಕ್ರೋಶಿತ ಪ್ರಕೃತಿಯಲ್ಲ; ಕಾಳಜಿ ತೋರುವ, ಉಪಕಾರ ಮಾಡುವ ಪ್ರಕೃತಿ ಮತ್ತು ತನ್ನ ಆಶೀರ್ವಾದದ ಬಲದಿಂದಲೇ ನಮ್ಮನೆಲ್ಲ ಉದ್ಧರಿಸುವ ಪ್ರಕೃತಿ.

ಆಧುನಿಕ ವಿಜ್ಞಾನ, ಪರಂಪರೆ, ಅನುಭವ, ಆಧ್ಯಾತ್ಮಿಕ ಬಲ ಇದನ್ನೆಲ್ಲ ಒಟ್ಟಿಗೆ ತೆಗೆದುಕೊಂಡು ಮುನ್ನಡೆಯುವ ಏಕಮಾತ್ರ ದೇಶ ಭಾರತ. ಇಂದು ಭಾರತ ತನ್ನ ಈ ‘ಭಾರತಭಾವನೆ’ಯನ್ನು ತೀವ್ರವಾಗಿ ಅನುಭವಿಸುತ್ತಿದೆ. ಮತ್ತು ಇದರಲ್ಲೇ ನನಗೆ ದೇಶದ ಉಜ್ವಲ ಭವಿಷ್ಯ ಗೋಚರಿಸುತ್ತಿದೆ. ದೃಢಸಂಕಲ್ಪ ಮತ್ತು ಆತ್ಮವಿಶ್ವಾಸದ ಎದುರು ಯಾವುದೇ ಸಂಕಷ್ಟಗಳು ತುಂಬ ಸಮಯದವರೆಗೆ ನಿಲ್ಲುವುದಿಲ್ಲ. ಆನೆಗೆ ಕಟ್ಟಿದಂಥ ಯಾವುದೇ ಹಗ್ಗ ನಮ್ಮನ್ನು ತಡೆಯಬಾರದು. ಪದೇಪದೆ ನಮ್ಮನ್ನು ಹಾಗೆ ತಡೆಯುವಂಥ ‘ಹಗ್ಗ’ (ಅಡೆತಡೆಗಳನ್ನು)ವನ್ನು ಗುರುತಿಸಿ, ಪತ್ತೆ ಹಚ್ಚುವುದು ತುಂಬ ಅಗತ್ಯವಾಗಿದೆ. ಈ ಹಗ್ಗಗಳು ನಮ್ಮ ಆಂತರಿಕ ಚೇತನದವರೆಗೆ ತಲುಪಿವೆ. ಅವನ್ನು ತುಂಡರಿಸಲೇ ಬೇಕಿದೆ. ಇದರ ಆರಂಭವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಐತಿಹಾಸಿಕ ನಿರ್ಣಯಗಳ ಮೂಲಕ ಮಾಡಿದ್ದಾರೆ. ಈ ನಿರ್ಣಯಗಳು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ನಾವೆಲ್ಲರೂ ನೋಡಿಕೊಂಡರೆ ಕರೊನಾ ಸಂಕಷ್ಟಕಾಲದಿಂದ ಆದಷ್ಟು ಬೇಗ ದೇಶ ಹೊರಬರಬಹುದು. ಈ ನಿಟ್ಟಿನಲ್ಲಿ ಎಚ್ಚೆತ್ತಿರುವ ಆತ್ಮವಿಶ್ವಾಸ ಕುಸಿಯದಂತೆ ಜಾಗ್ರತೆ ವಹಿಸೋಣ. ಅಂತಿಮ ಗೆಲುವು ಸಿಗುವವರೆಗೂ ವಿಶ್ರಮಿಸದಿರೋಣ.

(ಲೇಖಕರು ಕವಿ, ಚಿಂತಕ ಮತ್ತು ಗೀತ ರಚನೆಕಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net