

ಹಾಗಿದ್ದ ಮೇಲೆ ತನ್ನ ಧರ್ಮವನ್ನು ಪ್ರಚಾರ ಮಾಡುವ ಹಕ್ಕು ಧಾರ್ವಿುಕ ಸ್ವಾತಂತ್ರ್ಯದ ಒಂದು ಭಾಗವೇ ಅಲ್ಲವೇ? ಮತಪ್ರಚಾರಕನೊಬ್ಬ, ತನ್ನ ಮತಪ್ರಚಾರದ ಭಾಗವಾಗಿ ಇನ್ನೊಬ್ಬರನ್ನು ತನ್ನ ಮತಕ್ಕೆ (ರಿಲಿಜನ್ ಸೂಕ್ತವಾದ ಪದವಾದರೂ ವ್ಯಾವಹಾರಿಕ ಬಳಕೆ ದೃಷ್ಟಿಯಿಂದ ಬಳಸುತ್ತಿಲ್ಲ) ಮತಾಂತರಿಸುವ ಹಕ್ಕು ಸಹ ಮೂಲಭೂತವಾದದ್ದೇ? ಮತಾಂತರ ಮಾಡುವುದು ಮೂಲಭೂತ ಹಕ್ಕೇ? 1977ರಲ್ಲಿ ಇದೇ ಪ್ರಶ್ನೆ ಸುಪ್ರೀಂ ಕೋರ್ಟ್ ಮುಂದೆ ಎದುರಾಗಿತ್ತು. ರೆವರೆಂಡ್ ಸ್ಟಾನಿಸ್ಲಾಸ್ ಎಂಬ ಪಾದ್ರಿ ಅಂದಿನ ಮಧ್ಯಪ್ರದೇಶ ಮತ್ತು ಒಡಿಶಾದ ಕಾಂಗ್ರೆಸ್ ಸರ್ಕಾರಗಳು ಜಾರಿ ಮಾಡಿದ ‘ಧಾರ್ವಿುಕ ಸ್ವಾತಂತ್ರ್ಯ ಕಾಯಿದೆ’ಗಳನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದಾಗ, ಸುಪ್ರೀಂ ಕೋರ್ಟ್ ಮಹತ್ತರ ತೀರ್ಮಾನ ನೀಡಿತು. ಇದರ ಪ್ರಕಾರ ಮತಾಂತರ ಮಾಡುವುದು ಮೂಲಭೂತ ಹಕ್ಕಲ್ಲ. ಅಷ್ಟೇ ಅಲ್ಲ, ‘ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ಒತ್ತಾಯದಿಂದ ಅಥವಾ ಆಮಿಷವೊಡ್ಡಿ ಅಥವಾ ಮೋಸದಿಂದ ಮತಾಂತರ ಮಾಡುವುದು ಶಿಕ್ಷಾರ್ಹ ಅಪರಾಧ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
1973ರಲ್ಲಿ ಸುಪ್ರೀಂ ಕೋರ್ಟ್ನ ಮೂವರು ಹಿರಿಯ ನ್ಯಾಯಾಧೀಶರ ಸೇವಾಜೇಷ್ಠತೆ ಕಡೆಗಣಿಸಿ ಇಂದಿರಾ ಗಾಂಧಿ ಅಜಿತ್ ನಾಥ್ ರೇ ಅವರನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿದರು. ಅದೇ ಅಜಿತ್ ನಾಥ್ ರೇ ಪಾದ್ರಿ ಸ್ಟಾನಿಸ್ಲಾಸ್ ಪ್ರಕರಣದಲ್ಲಿ ತೀರ್ಪನ್ನಿತ್ತರು. ಹಾಗೆಯೇ, ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತಂದು ಅದನ್ನು ಸುಪ್ರೀಂಕೋರ್ಟ್ನಲ್ಲಿ ಸಮರ್ಥಿಸಿ ಗೆದ್ದದ್ದು ಕಾಂಗ್ರೆಸ್ ರಾಜ್ಯ ಸರ್ಕಾರಗಳು.
2000ರ ಏಪ್ರಿಲ್ನಲ್ಲಿ ತೀರ್ವನವಾದ ಲಿಲಿ ಥಾಮಸ್ ಪ್ರಕರಣದಲ್ಲಿ ಸಗೀರ್ ಅಹ್ಮದ್ ಮತ್ತು ಆರ್.ಪಿ.ಸೇಠಿಯವರಿದ್ದ ಸುಪ್ರೀಂ ಕೋರ್ಟಿನ ಪೀಠ, ‘ಕೇವಲ ಮದುವೆಯಾಗಲೆಂದು ವ್ಯಕ್ತಿಯೋರ್ವ ಮತಾಂತರವಾದರೆ ಅಂಥ ಮದುವೆ ಅನೂರ್ಜಿತ’ ಎಂದು ಸ್ಪಷ್ಟವಾಗಿ ಹೇಳಿದೆ. ಈ ಲಿಲಿ ಥಾಮಸ್ ಪ್ರಕರಣವನ್ನಾಧರಿಸಿ ಇದೇ ವರ್ಷದ ಸೆಪ್ಟೆಂಬರ್ನಲ್ಲಿ ಪ್ರಿಯಾಂಶಿ ಅಲಿಯಾಸ್ ಶಮೀಮ್ ಪ್ರಕರಣದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಹಿಂದೂ ವ್ಯಕ್ತಿಯನ್ನು ಮದುವೆಯಾದ ಕಾರಣದಿಂದಲೇ ಹಿಂದೂಧರ್ಮವನ್ನು ಸೇರಿದ ವಿವಾಹ ಊರ್ಜಿತವಲ್ಲವೆಂದು ಅಲಹಾಬಾದ್ ಹೈಕೋರ್ಟ್ ಪುನರುಚ್ಚರಿಸಿದೆ. ಈ ತೀರ್ಪು ಉತ್ತರಪ್ರದೇಶ, ಹರಿಯಾಣ, ಕರ್ನಾಟಕದಲ್ಲೂ ಚರ್ಚೆಗೆ ಗ್ರಾಸವಾಗಿದೆ.
‘ಮದುವೆಗೋಸ್ಕರವೇ ಮತಾಂತರ ಆಗುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ಮತ್ತು ಅನೇಕ ಹೈಕೋರ್ಟುಗಳು ಹೇಳಿವೆ. ಆದರೆ, ಮುಸ್ಲಿಂ ಹುಡುಗನನ್ನು ಮದುವೆಯಾಗುವ ಹಿಂದೂ ಮಹಿಳೆಗೆ ವಿಶೇಷ ಸಮಸ್ಯೆ ಎದುರಾಗುತ್ತದೆ. ವಿವಾಹದ ನಂತರ ಇಸ್ಲಾಂಗೆ ಮತಾಂತರವಾದರೆ ಅದು ಮದುವೆಗೋಸ್ಕರವೇ ಆದ ಮತಾಂತರವೆಂಬ ಕಾರಣಕ್ಕೆ ವಿವಾಹ ಅನೂರ್ಜಿತಗೊಳ್ಳುವ ಭೀತಿ ಒಂದು ಕಡೆಯಾದರೆ, ಇನ್ನೊಂದು ಕಡೆ ಹಿಂದೂಧರ್ಮದಲ್ಲೇ ಉಳಿದರೆ ಅದು ಕ್ರಮಬದ್ಧವಲ್ಲದ- ಫಸೀದ್-ವಿವಾಹವೆಂದು ಪರಿಗಣಿಸಲಾಗುತ್ತದೆ. ಇಸ್ಲಾಮಿಕ್ ವೈಯಕ್ತಿಕ ಕಾನೂನು ಪ್ರಕಾರ ಹುಡುಗಿ ಇಸ್ಲಾಂ ಸ್ವೀಕರಿಸಿದರೆ ಮಾತ್ರವೇ ಅದು ಊರ್ಜಿತ ವಿವಾಹ. ಊರ್ಜಿತ ವಿವಾಹವಾಗದಿದ್ದರೆ ಮುಸ್ಲಿಂ ಗಂಡ ಹಿಂದೂ ಹೆಂಡತಿಗೆ ತಲಾಕ್ ನೀಡುವ ಪ್ರಮೇಯವೂ ಇಲ್ಲ. ಹಾಗಾದರೆ, ಹಿಂದೂ ಮಹಿಳೆಯ ಪಾಡೇನು?
ಓರ್ವ ಮಹಿಳೆಗೆ ತನಗಿಷ್ಟವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಎಷ್ಟು ಮುಖ್ಯವೋ ತನ್ನ ಮಾತೃಧರ್ಮದಲ್ಲೇ ನೆಲೆನಿಲ್ಲುವ ಹಕ್ಕು ಅಷ್ಟೇ ಮುಖ್ಯ. ಈಗಿನ ಪರಿಸ್ಥಿತಿಯಲ್ಲಿ ಇವೆರಡೂ ಹಕ್ಕುಗಳನ್ನು ಒಟ್ಟಿಗೆ ಚಲಾಯಿಸಲು ಸಾಧ್ಯವಾಗದ ಸಂಕೀರ್ಣ ಪರಿಸ್ಥಿತಿಯಿದೆ.
ರಾಜಕೀಯ ಪಕ್ಷಗಳು ಮತ್ತು ನಮ್ಮ ಕಾನೂನು ವ್ಯವಸ್ಥೆ ತ್ರಿವಳಿ ತಲಾಕ್ ಮತ್ತಿತರ ವಿಚಾರಗಳಲ್ಲಿ ಮುಸ್ಲಿಂ ವಿವಾಹಿತ ಮಹಿಳೆಯರ ಹಿತರಕ್ಷಣೆಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಮತಾಂತರವಾಗಿ ಕ್ರಮಬದ್ಧವಲ್ಲದ ಮದುವೆಗಳಲ್ಲಿ ಜೀವಿಸುವ ಅನಿವಾರ್ಯತೆ ಎದುರಿಸುತ್ತಿರುವ ಹಿಂದೂ ಮಹಿಳೆಯರ ಬಗ್ಗೆ ಒಂದಿಷ್ಟೂ ಕಾಳಜಿ ತೋರದಿರುವುದು ವಿಷಾದನೀಯ.
ಹಿಂದೂಗಳನ್ನು ಮದುವೆಯಾದ ಹಿಂದೂ ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಪಾಲಿದೆ. ಹಾಗೆಯೇ, ಮುಸ್ಲಿಂರನ್ನು ಮದುವೆಯಾಗುವ ಹಿಂದೂ ಹೆಣ್ಣುಮಕ್ಕಳಿಗೂ ತಂದೆಯ ಅಸ್ತಿ ಸಮವಾಗಿ ಸೇರುತ್ತದೆ. ಆದರೆ, ಗಂಡನ ಆಸ್ತಿ? ಅದು ಹೋಗಲಿ, ವಿವಾಹದ ಊರ್ಜಿತತೆಯೇ ಪ್ರಶ್ನೆಯಾಗಿ ನಿಂತಿದೆ. ಈ ಬಗ್ಗೆ ಸರ್ಕಾರ ಮತ್ತು ಕಾನೂನು ವ್ಯವಸ್ಥೆ ಕಾಳಜಿ ವಹಿಸಬೇಕಿದೆ. ರಾಜಕೀಯ ಪಕ್ಷಗಳು ಈ ವಿಚಾರವನ್ನು ಲವ್ ಜಿಹಾದ್ ಇತ್ಯಾದಿ ಹಿನ್ನೆಲೆಯಲ್ಲಿ ನೋಡದೆ, ರಾಜಕೀಯ ಅಥವಾ ಕೋಮುವಿವಾದಕ್ಕೆ ಸಿಲುಕಿಸದೆ, ಚುನಾವಣಾ ಲೆಕ್ಕಾಚಾರದ ರಾಜಕೀಯವನ್ನು ಬದಿಗಿಟ್ಟು ಒಮ್ಮತದಿಂದ, ನಿಷ್ಕಲ್ಮಶವಾಗಿ ಯೋಚಿಸಬೇಕಿದೆ.
ಮದುವೆಗೋಸ್ಕರ ನೀಡುವ ಹಣ ವರದಕ್ಷಿಣೆ ಎನಿಸಿಕೊಂಡು ಶಿಕ್ಷಾರ್ಹ ಅಪರಾಧ ಎನಿಸಿಕೊಳ್ಳುತ್ತದೆ. ಹಾಗಾದರೆ ಮದುವೆಗಾಗಿ ನಡೆಯುವ ಮತಾಂತರ ಊರ್ಜಿತವೇ? ಇದು ಮೂಲಭೂತ ಪ್ರಶ್ನೆ. ಮದುವೆಯಾಗುವ ಭರವಸೆ ಕೊಟ್ಟು ಲೈಂಗಿಕ ಸಂಪರ್ಕ ಮಾಡಿದರೆ ಅದು ಬಲಾತ್ಕಾರ ಎನಿಸಿಕೊಳ್ಳುತ್ತದೆ ಎಂದಾದರೆ, ಮತಾಂತರವಾದರೆ ಮಾತ್ರವೇ ಮದುವೆ ಎಂದು ಹೇಳಿದರೆ ಏನು ಹೇಳಬಹುದು? ಪ್ರೀತಿಸಿ ಒಂದು ಹಂತಕ್ಕೆ ತಲುಪಿದ ಸಂಬಂಧಗಳಲ್ಲಿ ಮಹಿಳೆಗೆ ಮತಾಂತರವಾಗದಿರಲು ಎಷ್ಟು ಮಟ್ಟಿನ ಸ್ವಾತಂತ್ರವಿದೆ? ಇದು ವಿಚಾರಾರ್ಹ.
ಹೆಚ್ಚಿನ ಹೆಣ್ಣುಮಕ್ಕಳು, ಸ್ವಂತ ಇಚ್ಛೆಯಿಂದಲೇ ಮತಾಂತರವಾಗಿರುವುದಾಗಿ ಹೇಳಿಕೆ ನೀಡುತ್ತಾರೆ. ಹಾಗಾದರೆ, ಇಷ್ಟ ಪಟ್ಟು ವರದಕ್ಷಿಣೆ ನೀಡಿದರೆ, ಹೆಂಡತಿಯ ಒಪ್ಪಿಗೆ ಪಡೆದೇ ಅವಳನ್ನು ಹೊಡೆದರೆ, ಇನ್ನೊಂದು ವಿವಾಹವಾದರೆ ಅದು ಸರಿಯೆಂದು ಹೇಳಬಹುದೇ? ಒಬ್ಬ ಹೆಣ್ಣನ್ನು ಪ್ರೀತಿಸಿ ನಂತರದಲ್ಲಿ ಮತಾಂತರದ ಷರತ್ತು ಒಡ್ಡಿದರೆ, ಅದು ಸರಿಯೇ? ತರ್ಕಬದ್ಧವಾಗಿ ನೋಡಿದರೆ, ಆಕೆ ಆ ಸಂಬಂಧದಿಂದ ಹೊರಬರಬಹುದು. ಆದರೆ, ಅಂಥ ಮಹಿಳೆಗೆ ಇನ್ನೊಂದು ವಿವಾಹದ ಸಾಧ್ಯತೆಗಳು ಕ್ಷೀಣಿಸುವುದಿಲ್ಲವೇ? ಮನಸ್ಸನ್ನು ಒಬ್ಬನಿಗೆ ಅರ್ಪಿಸಿ ಇನ್ನೊಬ್ಬನನ್ನು ವಿವಾಹವಾಗುವುದು ನೈತಿಕವಾಗಿ ಆಕೆಗೆ ಒಪ್ಪಿಗೆಯಾಗಬಹುದೇ? ಈ ಹಂತದಲ್ಲಿ ಆಯ್ಕೆಯ ಸ್ವಾತಂತ್ರ್ಯ ಇಲ್ಲದಿರುವ ಕಾರಣದಿಂದಲೇ ಮದುವೆಗಾಗಿ ಮತಾಂತರವಾಗುವ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕಾನೂನುಬಾಹಿರವೆಂದು ಹೇಳಿದೆ. ಹೀಗಿದ್ದ ಮೇಲೆ, ಈ ಬಗ್ಗೆ ಸರ್ಕಾರಗಳು ಕಾನೂನು ರೂಪಿಸಿದರೆ ಏನು ತಪ್ಪಿದೆ? ಮುಸ್ಲಿಂ ಮಹಿಳೆಯರ ಹಿತರಕ್ಷಣೆಗಾಗಿ ತ್ರಿವಳಿ ತಲಾಕ್ ವಿಚಾರದಲ್ಲಿ ರಾಜಕೀಯ ಒಮ್ಮತ ಸಾಧ್ಯವಾಗಬಹುದಾದರೆ, ಹಿಂದೂ ಮಹಿಳೆಯರ ವಿಚಾರದಲ್ಲಿ ಏಕೆ ಸಾಧ್ಯವಿಲ್ಲ?
ಪ್ರೀತಿಸಿದ ನೆಪದಲ್ಲಿ ಮಹಿಳೆಯನ್ನು ಮತಾಂತರವಾಗುವಂತೆ ಒತ್ತಾಯಿಸಿದರೆ ನಮ್ಮ ರಾಜ್ಯದ ಕಾನೂನಿನಲ್ಲಿ ಈಗ ಏನೂ ಶಿಕ್ಷೆಯಿಲ್ಲ. ಆದರೆ, ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯದ ಕಾನೂನುಗಳಲ್ಲಿ ಅದು ಶಿಕ್ಷಾರ್ಹ ಅಪರಾಧ. ನಮ್ಮದು ಒಕ್ಕೂಟ ವ್ಯವಸ್ಥೆ ಎಂಬುದು ಹೌದು. ಆದರೆ, ಒಂದೇ ವಿಚಾರವಾಗಿ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಕಾನೂನುಗಳಿದ್ದರೆ ಅದು ಸರಿಯೇ? ಆಮಿಷವೊಡ್ಡಿ, ಬಲವಂತವಾಗಿ ಅಥವಾ ಮೋಸದಿಂದ ಮತಾಂತರ ಮಾಡಿದರೆ ಅಥವಾ ಮದುವೆಗೋಸ್ಕರ ಮತಾಂತರವಾಗುವಂತೆ ಮಾಡಿದರೆ ಅದು ಒಡಿಶಾ, ಮಧ್ಯಪ್ರದೇಶದಲ್ಲಿ ತಪು್ಪ. ಆದರೆ, ಕರ್ನಾಟಕದಲ್ಲಿ ಸರಿ? ಇದು ಹೇಗಿದೆ? ಬಂಡವಾಳ ಆಕರ್ಷಣೆ, ಆರ್ಥಿಕ ಸುಧಾರಣೆ ಹೆಸರಿನಲ್ಲಿ ಜಿಎಸ್ಟಿ, ಕೃಷಿ, ಎಪಿಎಂಸಿ ಮುಂತಾದ ವಿಚಾರಗಳಲ್ಲಿ ‘ಒಂದು ದೇಶ-ಒಂದೇ ಕಾನೂನು’ ಮಾಡಲು ಹೊರಡುವ ಸರ್ಕಾರಗಳು ಮಹಿಳೆಯರ ವಿಚಾರದಲ್ಲಿ ಮಾತ್ರ ಏಕೆ ತಾರತಮ್ಯ ತೋರುತ್ತಿವೆ?
‘ಲವ್ ಜಿಹಾದ್ ಕಾನೂನು’ ಇತ್ಯಾದಿ ಹೇಳಿಕೆ ಕೊಟ್ಟು, ವಿವಾದಗಳು ಹುಟ್ಟುಹಾಕಿ ವಿಷಯವನ್ನು ನನೆಗುದಿಗೆ ಸೇರಿಸುವ ಬದಲು, ಕರ್ನಾಟಕ ಸರ್ಕಾರ ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳ ಕಾನೂನುಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ಸುಪ್ರೀಂ ಕೋರ್ಟಿನ ತೀರ್ಪಗಳ ಆಧಾರದ ಮೇಲೆ ಸಮಗ್ರ ಕಾನೂನನ್ನು ರೂಪಿಸುವುದು ವರ್ತಮಾನದ ತುರ್ತು.
(ಲೇಖಕರು ಹಿರಿಯ ವಕೀಲರು)