

ಜನಸಾಮಾನ್ಯರಲ್ಲಿ ನ್ಯಾಯಾಂಗದ ಬಗ್ಗೆ ನಕಾರಾತ್ಮಕ ಕಲ್ಪನೆ ಮೂಡಿಸಬಹುದಾದ ಯಾವುದೇ ಹೇಳಿಕೆ ನ್ಯಾಯಾಂಗದ ನಿಂದನೆಯಾಗುತ್ತದೆ. ನ್ಯಾಯಾಲಯಗಳು ಹಾಗೂ ನ್ಯಾಯಾಧೀಶರುಗಳ ಬಗ್ಗೆ ಬೇಜವಾಬ್ದಾರಿಯಿಂದ ವಾಗ್ದಾಳಿ ನಡೆಸುವುದರಿಂದ ನ್ಯಾಯಾಧೀಶರುಗಳ ಮನಃಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಆಗುವುದು ಸಹಜ.
ಸಂಕ್ಷಿಪ್ತವಾಗಿ ಹೇಳಬೇಕಾದರೆ, ಕುನಾಲ್ ಟ್ವಿಟ್ಟರ್ನಲ್ಲಿ, ‘ಸುಪ್ರೀಂ ಕೋರ್ಟನ್ನು ‘ಗೌರವಾನ್ವಿತ’ ಎಂದು ಸಂಬೋಧಿಸುವ ಕಾಲ ಹೋಗಿದೆ, ಯಾಕೆಂದರೆ ಆ ಸಂಸ್ಥೆಯಿಂದ ಗೌರವ ಬಹಳ ಹಿಂದೆಯೇ ಹೊರಹೋಗಿದೆ’ ಎಂದು ಬರೆದುಕೊಂಡಿದ್ದಾರೆ. ಅಂತೆಯೇ ನಮ್ಮ ದೇಶದ ಸುಪ್ರೀಂಕೋರ್ಟ್ ಒಂದು ಸುಪ್ರೀಂ ಜೋಕ್ ಎಂದೂ ಸಹ ಹೇಳಿದ್ದಾರೆ. ಸಾಲದೇನೋ ಎಂಬಂತೆ ಸುಪ್ರೀಂಕೋರ್ಟನ್ನು ಕೇಸರಿ ಮತ್ತು ಹಸಿರು ಬಣ್ಣಗಳಲ್ಲಿ ಚಿತ್ರಿಸಿ ಆಡಳಿತಾರೂಢ ಬಿಜೆಪಿ ಪಕ್ಷದ ಧ್ವಜವನ್ನು ಕೋರ್ಟಿನ ಮೇಲೆ ಹಾರುತ್ತಿರುವಂತೆ ತೋರ್ಪಡಿಸಿದ್ದಾರೆ. ಅರ್ನಬ್ ಗೋಸ್ವಾಮಿ ಅವರಿಗೆ ಜಾಮೀನು ಕೊಟ್ಟು ಆದೇಶ ಹೊರಡಿಸಿದ ನ್ಯಾಯಮೂರ್ತಿ ಧನಂಜಯ್ ಚಂದ್ರಚೂಡ್ ಅವರನ್ನು ವಿಮಾನದಲ್ಲಿನ ಪರಿಚಾರಕರಿಗೆ ಹೋಲಿಸಿ ಅವರು ಫಸ್ಟ್ ಕ್ಲಾಸ್ ಪ್ರಯಾಣಿಕರಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಪರಿಶೀಲನೆಯ ನಂತರ ಅಟಾರ್ನಿ ಜನರಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಸಮ್ಮತಿ ಸೂಚಿಸಿದ್ದಾರೆ. ಈ ಲೇಖನ ಬರೆಯುತ್ತಿರುವಾಗಲೇ ಕುನಾಲ್ ಕಮ್ರಾ ಅಟಾರ್ನಿ ಜನರಲ್ ಪತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಟ್ವೀಟ್ಗಳನ್ನು ಸಮರ್ಥಿಸಿಕೊಂಡು, ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ ಎಂದಿದ್ದಾರೆ ಎಂದು ವರದಿ ಮಾಡಲಾಗಿದೆ.
ವಾಕ್ಸ್ವಾತಂತ್ರ್ಯ ನಮ್ಮ ಸಂವಿಧಾನದಲ್ಲಿ ಎಲ್ಲ ಪ್ರಜೆಗಳಿಗೂ ಲಭ್ಯ. ಆದರೆ ಅತಿಮುಖ್ಯವಾಗಿ ಗಮನಿಸಲೇಬೇಕಾದ ಅಂಶವೇನೆಂದರೆ ಅಂಥ ವಾಕ್ಸ್ವಾತಂತ್ರ್ಯ ನ್ಯಾಯಾಂಗ ನಿಂದನೆಯ ಕಾನೂನಿಗೆ ಒಳಪಟ್ಟಿದೆ. ಅರ್ಥಾತ್ ವಾಕ್ಸ್ವಾತಂತ್ರ್ಯದ ಬಳಕೆಯ ನೆಪದಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿ ನ್ಯಾಯಾಂಗದ ನಿಂದನೆಗೆ ಅವಕಾಶವಿಲ್ಲವೆಂದು ಸಂವಿಧಾನದ ಪರಿಚ್ಛೇದ 19(2) ದಲ್ಲಿ ಸ್ಪಷ್ಟಪಡಿಸಲಾಗಿದೆ. ನಮ್ಮ ಈ ಸಾಂವಿಧಾನಿಕ ನಿಯಮ ಅಮೆರಿಕದ ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿ ಕಂಡುಬರಬಹುದು. ಅಮೆರಿಕದ ಸಂವಿಧಾನದಲ್ಲಿ ವಾಕ್ಸ್ವಾತಂತ್ರ್ಯಕ್ಕೆ ಚ್ಯುತಿ ಬರುವಂಥ ಯಾವುದೇ ಕಾನೂನನ್ನು ಶಾಸಕಾಂಗ ಮಾಡುವಂತಿಲ್ಲ ಎಂಬ ಲಕ್ಷ್ಮಣರೇಖೆಯನ್ನು ಹಾಕಲಾಗಿದೆ. ಎಲ್ಲೆಯೇ ಇಲ್ಲದ ವಾಕ್ಸ್ವಾತಂತ್ರ್ಯ ಅಮೆರಿಕದ ಸಂವಿಧಾನದಡಿ ಲಭ್ಯ ಎಂಬುದು ಪ್ರಚಲಿತ ಅಭಿಪ್ರಾಯ. ಸಂವಿಧಾನದಲ್ಲಿಯೇ ಶಾಸಕಾಂಗಕ್ಕೆ ಕಡಿವಾಣ ಹಾಕಿರುವಂತಹ ಅಮೆರಿಕದಲ್ಲೂ ನ್ಯಾಯಾಂಗದ ನಿಂದನೆಯಾಗಬಹುದಂಥ ವಾಗ್ದಾಳಿಗೆ ಕಡಿವಾಣ ಹಾಕಬೇಕು ಎಂಬ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ನ್ಯಾಯಮೂರ್ತಿ ಫೀಲಿಕ್ಸ್ ಫ್ರಾಂರ್ಕ#ರ್ 1941ರಲ್ಲಿ ಬ್ರಿಡ್ಜಸ್ ವಿರುದ್ಧ ಕ್ಯಾಲಿಫೋರ್ನಿಯಾ ಪ್ರಕರಣದಲ್ಲಿನ ತಮ್ಮ ಅಸಮ್ಮತ ಅಭಿಪ್ರಾಯದಲ್ಲಿ ನ್ಯಾಯಾಂಗ ನಿಂದನೆಗೆ ಶಿಕ್ಷೆ ವಿಧಿಸುವುದು ಸೆನ್ಸಾರ್ಷಿಪ್ ಆಗುವುದಿಲ್ಲ, ಹಿಂದೆಯೇ ನಡೆದಂಥ ಅಪರಾಧಕ್ಕೆ ಶಿಕ್ಷೆಯಷ್ಟೇ ಎಂದು ವ್ಯಾಖ್ಯಾನಿಸಿದ್ದಾರೆ. ಇಂಥ ನೀತಿಯಿಂದ ವಾಕ್ಸ್ವಾತಂತ್ರ್ಯಕ್ಕೆ ಯಾವುದೇ ಚ್ಯುತಿ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಅಭಿಪ್ರಾಯ ಪಟ್ಟಿದ್ದಾರೆ. ಆವರ ಈ ಅಭಿಪ್ರಾಯ ನಂತರದ ದಿನಗಳಲ್ಲಿ ಸಾಕಷ್ಟು ಮನ್ನಣೆ ಪಡೆದಿದೆ. ಹೀಗಿರುವಾಗ ಸಂವಿಧಾನದಲ್ಲಿಯೇ ಹಾಕಿರುವ ಚೌಕಟ್ಟಿಗೆ ವ್ಯತಿರಿಕ್ತವಾಗಿ ನಮ್ಮ ದೇಶದಲ್ಲಿ ವಾಕ್ಸ್ವಾತಂತ್ರ್ಯದ ಬಳಕೆಯ ನೆಪದಲ್ಲಿ ನ್ಯಾಯಾಂಗವನ್ನು ಹೀಯಾಳಿಸುವುದು ಅಕ್ಷಮ್ಯ.
ನಮ್ಮ ನ್ಯಾಯಾಲಯಗಳ ಮೇಲೆ ಟೀಕಾಪ್ರಹಾರಕ್ಕೆ ಟೊಂಕ ಕಟ್ಟಿ ನಿಂತಿರುವ ಬುದ್ಧಿಜೀವಿಗಳ ವಾದವೇನೆಂದರೆ ನ್ಯಾಯಾಂಗ ನಿಂದನೆ ಎಂಬ ವಿಚಾರವೇ ಇಂದಿನ ಸಮಾಜಕ್ಕೆ ಪ್ರಸಕ್ತವಲ್ಲ, ಹಾಗಾಗಿ ಕಾನೂನಿನ ಆ ಶಾಖೆಯನ್ನು ಕೈಬಿಡುವ ಕಾಲ ಬಂದಿದೆ ಎಂದು. ಇಂಥ ವಾದಕ್ಕೆ ಪುಷ್ಟಿ ಸಿಗುವುದು 1899ರಲ್ಲಿ ಪ್ರಿವಿ ಕೌನ್ಸಿಲ್ ಇತ್ಯರ್ಥಿಸಿದ ಮೆಕ್ಲೋಡ್ ವಿರುದ್ಧ ಸೇಂಟ್ ಆಬಿನ್ ಎಂಬ ಪ್ರಕರಣದಲ್ಲಿನ ಅಭಿಪ್ರಾಯ. ನ್ಯಾಯಾಂಗ ನಿಂದನೆ ಎಂಬುದು ಸಮಕಾಲೀನ ವಿಚಾರಧಾರೆಗೆ ವಿರುದ್ಧವಾದರೂ ವರ್ಣೀಯ ಜನಸಂಖ್ಯೆ ಇರುವ ಕೆಲವು ಸಣ್ಣ ದ್ವೀಪಗಳಲ್ಲಿ ನ್ಯಾಯಾಂಗದ ಗೌರವ ಕಾಪಾಡಲು ಅವಶ್ಯ ಎಂಬ ಶೋಚನೀಯ ಹೇಳಿಕೆ ಆ ತೀರ್ಪಿನಲ್ಲಿದೆ. ನಮ್ಮ ಸುಪ್ರೀಂ ಕೋರ್ಟ್ ಅಂಥ ವಾದವನ್ನು ಖಡಾಖಂಡಿತವಾಗಿ ತಿರಸ್ಕರಿಸಿ, 1969ರಲ್ಲಿ ಇತ್ಯರ್ಥವಾದ ಪರ್ಸ್ಪೆಕ್ಟಿವ್ ಪಬ್ಲಿಕೇಷನ್ಸ್ ಪ್ರಕರಣದಲ್ಲಿ, ನ್ಯಾಯಾಂಗ ನಿಂದನೆಗೆ ಶಿಕ್ಷೆ ವಿಧಿಸುವುದು ನಮ್ಮ ದೇಶದಲ್ಲಿ ಪ್ರಸಕ್ತ ಎಂದು ವಿಶ್ಲೇಷಿಸಿದೆ. 2002ರ ಅರುಂಧತಿ ರಾಯ್ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ಕಾಯ್ದೆ ಇತರ ದೇಶಗಳಲ್ಲಿನ ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಂಡು, ನಮ್ಮ ದೇಶದ ಸಾಮಾಜಿಕ-ಆರ್ಥಿಕ ಹಿನ್ನೆಲೆಗೆ ತಕ್ಕಂತೆ ರೂಪಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ. 1978ರಲ್ಲಿ ಇತ್ಯರ್ಥವಾದ ರಾಮ್ ದಯಾಳ್ ಮರ್ಕರ್ಹಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಗ್ರಾಮೀಣ ಪ್ರದೇಶಗಳ ಜನತೆಯ ಚಿಂತನೆ ಹಾಗೂ ಅಭಿಪ್ರಾಯಗಳ ಮೇಲೆ ಪರಿಣಾಮ ಬೀರಿ, ಅವರಲ್ಲಿ ನ್ಯಾಯಾಂಗದ ಬಗ್ಗೆ ತಪು್ಪ ಭಾವನೆ ಮೂಡಿಸುವಂಥ ಹೇಳಿಕೆಗಳು ನ್ಯಾಯಾಂಗ ನಿಂದನೆಯಾಗುತ್ತವೆ ಎಂದು ತೀರ್ಪಿತ್ತಿದೆ. ಬಡತನ, ಅನಕ್ಷರತೆ ಆದಿಯಾಗಿ ಹಲವು ಪಿಡುಗುಗಳಿಂದ ಬಳಲುತ್ತಿರುವ ನಮ್ಮ ಸಮಾಜದಲ್ಲಿ ಸೋಷಿಯಲ್ ಮೀಡಿಯಾದ ಮೂಲಕ ನ್ಯಾಯಾಂಗದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಹರಿಬಿಟ್ಟು ಜನರನ್ನು ಪ್ರಭಾವಿಸುವ ಕೃತ್ಯ ಅಪರಾಧವೇ ಸರಿ. ಇದರ ಸಾರಾಂಶವೇನೆಂದರೆ ನಮ್ಮ ದೇಶದ ಜನಸಾಮಾನ್ಯರಲ್ಲಿ ನ್ಯಾಯಾಂಗದ ಬಗ್ಗೆ ನಕಾರಾತ್ಮಕ ಕಲ್ಪನೆ ಮೂಡಿಸಬಹುದಾದ ಯಾವುದೇ ಹೇಳಿಕೆ ನ್ಯಾಯಾಂಗದ ನಿಂದನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ವೀಕ್ಷಿಸಿದಾಗ ಅಪರಿಮಿತ ವಾಕ್ಸ್ವಾತಂತ್ರ್ಯದ ಪ್ರತಿಪಾದಕರ ವಾದವು ವಿತಂಡವಾದ ಎಂಬುದರಲ್ಲಿ ಯಾವುದೇ ಸಂಶಯ ಇರುವುದಿಲ್ಲ.
ನ್ಯಾಯಾಲಯಗಳು ಹಾಗೂ ನ್ಯಾಯಾಧೀಶರುಗಳ ಬಗ್ಗೆ ಬೇಜವಾಬ್ದಾರಿಯಿಂದ ವಾಗ್ದಾಳಿ ನಡೆಸುವುದರಿಂದ ನ್ಯಾಯಾಧೀಶರುಗಳ ಮನಃಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಆಗುವುದೂ ಸಹಜ. ಹಿಂದೊಂದು ಕಾಲದಲ್ಲಿ ಇಂಗ್ಲೆಂಡ್ ದೇಶದಲ್ಲಿ ಲಾರ್ಡ್ ಡೆನ್ನಿಂಗ್ ಒಂದು ನಿಲುವು ತೆಗೆದುಕೊಂಡಿದ್ದರು-ಟೀಕಾಟಿಪ್ಪಣಿಗಳು ಸಾಮಾನ್ಯಜನರ ಮೇಲೆ ಪರಿಣಾಮ ಬೀರಬಹುದೇ ಹೊರತು, ನ್ಯಾಯಾಧೀಶರುಗಳ ಮೇಲೆ ಅಲ್ಲ ಎಂದು. ಆ ಅಭಿಪ್ರಾಯವನ್ನು ಒಪ್ಪದ ಅಲ್ಲಿನ ಸರ್ವೇಚ್ಚ ನ್ಯಾಯಪೀಠವಾಗಿದ್ದ ‘ಹೌಸ್ ಆಫ್ ಲಾರ್ಡ್ಸ್’ನಲ್ಲಿ ಲಾರ್ಡ್ ಡಿಲ್ಹಾರ್ನ್ ‘ನ್ಯಾಯಾಧೀಶರೂ ಮನುಷ್ಯಮಾತ್ರದವರೇ ಆದ್ದರಿಂದ ಟೀಕಾಟಿಪ್ಪಣಿಗಳು ಅವರ ಮೇಲೆ ಪ್ರಭಾವ ಬೀರುವುದು ಸಹಜ’ ಎಂಬ ಮಹತ್ತರವಾದ ಅಭಿಪ್ರಾಯ ಮಂಡಿಸಿದ್ದಾರೆ. ಹೀಗಿರುವಾಗ ನ್ಯಾಯಾಧೀಶರನ್ನು ಅನಗತ್ಯ ಟೀಕಾಪ್ರಹಾರಕ್ಕೆ ಗುರಿಪಡಿಸುವುದು ಸಲ್ಲ.
ನಮ್ಮ ಕಾನೂನು ವ್ಯವಸ್ಥೆಯಲ್ಲಿ ಇತ್ಯರ್ಥವಾಗಿ ಮುಕ್ತಾಯಗೊಂಡಿರುವ ಪ್ರಕರಣಗಳಲ್ಲಿನ ತೀರ್ಪಗಳ ಹಾಗೂ ಆದೇಶಗಳ ಬಗ್ಗೆ ನ್ಯಾಯೋಚಿತವಾದ ಟೀಕೆ-ಟಿಪ್ಪಣಿಗಳಿಗೆ ಅವಕಾಶವಿದೆ. ಹೀಗೆ ಉಚಿತವಾದ ಹಾಗೂ ರಚನಾತ್ಮಕವಾದ ಟೀಕೆ-ಟಿಪ್ಪಣಿಗಳನ್ನು ಸಮಂಜಸವಾದ ಶಬ್ದಗಳನ್ನು ಉಪಯೋಗಿಸಿ ಮಾಡಿರುವ ನಿದರ್ಶನಗಳು ನಮ್ಮಲ್ಲಿ ಸಾಕಷ್ಟಿವೆ. ಸೈದ್ಧಾಂತಿಕ ಮಟ್ಟದಲ್ಲಿ ನ್ಯಾಯಾಲಯದ ಯಾವುದೇ ಆದೇಶವನ್ನು ಖಂಡಿಸಿ, ವಿಮಶಿಸುವುದು ಪ್ರಜಾಪ್ರಭುತ್ವದ ಅಡಿಪಾಯಗಳಲ್ಲೊಂದು. ಈ ಹಕ್ಕನ್ನು ಗೌರವಪೂರ್ಣವಾಗಿ ಉಪಯೋಗಿಸಿಕೊಂಡು ರಚನಾತ್ಮಕ ಟೀಕೆ-ಟಿಪ್ಪಣಿಗಳಲ್ಲಿ ತೊಡಗಿಸಿಕೊಳ್ಳುವುದು ಜವಾಬ್ದಾರಿಯುತ ನಾಗರಿಕರ ಲಕ್ಷಣವಾಗಿರುತ್ತದೆ. ಸಕಾರಾತ್ಮಕ, ಹಾಸ್ಯಪ್ರಜ್ಞಾಯುಕ್ತ ವಿಡಂಬನೆಗೂ ಸಾಕಷ್ಟು ಅವಕಾಶವಿದೆ.
ನಮ್ಮ ದೇಶದ ಅಟಾರ್ನಿ ಜನರಲ್ ಆಗಿದ್ದ ಸಿ.ಕೆ.ದಫ್ತರಿಯವರ ಹಾಸ್ಯಪ್ರಜ್ಞೆ ಪ್ರಖ್ಯಾತವಾದದ್ದು. ಒಮ್ಮೆ ಅವರು ನ್ಯಾಯಾಲಯದಲ್ಲಿ ವಾದ ಮಾಡುತ್ತಿರುವಾಗ ಆ ಕೋಣೆಯಲ್ಲಿನ ದೀಪಗಳೆಲ್ಲವೂ ಆರಿಹೋಗಿ ಕತ್ತಲೆಯಾಯಿತಂತೆ. ಕೆಲವು ಕ್ಷಣಗಳ ನಂತರ ನ್ಯಾಯಾಧೀಶರುಗಳ ಮೇಜಿನ ಮೇಲಿದ್ದ ಒಂದು ಸಣ್ಣ ದೀಪ ಹತ್ತಿಕೊಂಡಾಗ ದಫ್ತರಿಯವರು ಹೇಳಿದರಂತೆ: ‘ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಬೆಳಕು ಬಂದಿದೆ’ ಎಂದು! ಇಂತಹ ಉತ್ತಮ ಅಭಿರುಚಿಯ ವಿಡಂಬನೆ ಮಾಡುವ ಬದಲು ಹಾಸ್ಯಕ್ಕೂ ಅಪಹಾಸ್ಯಕ್ಕೂ ಇರುವ ವ್ಯತ್ಯಾಸ ಮರೆತು ಎಡವಿದ್ದಾರೆ ಕುನಾಲ್. ಅಟಾರ್ನಿ ಜನರಲ್ ಪತ್ರ ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆ ಮೊಳಗಿಸಿದೆ. ನಮ್ಮ ಹಕ್ಕುಬಾಧ್ಯತೆಗಳನ್ನು ಅರಿತು ಮಾಡುವ ಧನಾತ್ಮಕ ಟೀಕೆ ‘ಠೀಕ್ ಹೈ’ ಎಂಬ ಪ್ರಬುದ್ಧತೆ ಮೆರೆಯೋಣ.
(ಲೇಖಕರು ಸುಪ್ರೀಂ ಕೋರ್ಟ್ ವಕೀಲರು)